Skip to main content

ಅಣ್ಣಾ ಹಜಾರೆ ಅವರ ಉಪವಾಸ ಸತ್ಯಾಗ್ರಹ ಹನ್ನೊಂದನೇ ದಿನಕ್ಕೆ ಕಾಲಿಟ್ಟಿದೆ. ಅಣ್ಣಾ ಅವರ ಸತ್ಯಾಗ್ರಹದ ಪರ ಅಕ್ಷರಶಃ ಅಬಾಲ ವೃದ್ಧರಾದಿಯಾಗಿ ನಮ್ಮ ದೇಶದ ಪ್ರಜಾಸತ್ತೆಯ ಇಡೀ ಜನಸ್ತೋಮವೇ ಒಕ್ಕೊರಲಿನಿಂದ ದನಿ ಎತ್ತಿದೆ. ಆದರೆ, ಪ್ರಸ್ತುತ ಆಳುವ ಪಕ್ಷ (ಕಾಂಗ್ರೇಸ್ ಮಾತ್ರವೇ) ಅಲ್ಪ ಸಂಖ್ಯಾತ ಮುಸ್ಲಿಂಮರ ಹಿತಾಸಕ್ತಿ ಕಾಯುವ ಪಕ್ಷವೆಂಬ ಪೂರ್ವಾಗ್ರಹ ಪೀಡಿತ ಮೌಲ್ವಿ ಸಾಹೇಬರೊಬ್ಬರು ಅಣ್ಣಾ ಜೊತೆ ಇಡೀ ದೇಶದ "ವಂದೇ ಮಾತರಂ" ಘೋಷಣೆಯ  ಅರ್ಥವೇನೆಂದು ತಿಳಿಯದೆ ಅದು ಇಸ್ಲಾಂ ವಿರುದ್ಧ ಎಂದಿದ್ದಾರೆ.ಇನ್ನು ನಮ್ಮ ಕರ್ನಾಟಕದಲ್ಲಿ ನಮ್ಮ ಜನರ ಮೆಚ್ಚುಗೆಗೆ ಪಾತ್ರರಾಗಿ ಪ್ರಶಸ್ತಿ ಪುರಸ್ಕಾರಗಳನ್ನು ಪಡಕೊಂಡಿರುವ ದೇವನೂರು ಮಹಾದೇವ, ಡಾ.ಮರುಳ ಸಿದ್ಧಪ್ಪ, ಕಮಲಾ ಹಂಪನಾ ಮುಂತಾದ
ವಿದ್ವಜ್ಜನರೂ ಅಣ್ಣಾ ಹಜಾರೆ ಅವರ ಆತ್ಮಪೂರ್ವಕ ಹೋರಾಟದ ವಿರುದ್ಧ ಅಪಸ್ವರವೆತ್ತಿದ್ದಾರೆ ಎಂದರೆ, ಈ ನೆಲದ ಋಣ ತೀರಿಸುವ ಅವರ ಪ್ರಗತಿಪರ ಪರಿ ಇದೇನೇ...ಎನಿಸುತ್ತದೆ. ಅವರ ವಾದಗಳಲ್ಲಿ ಸ್ವತಂತ್ರ ಭಾರತದ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಹಿತಕ್ಕಿಂತ ಕಾಂಗ್ರೇಸ್ ನ ವಕ್ತಾರರಂತೇ ಅದರ ಹಿತಾಸಕ್ತಿಯೇ ಆ ಪಕ್ಷವನ್ನು ಓಲೈಸುವಿಕೆಯಲ್ಲಿರುವ ಸ್ವಹಿತ ಇವುಗಳೇ ಇರುವುದು
ಮೇಲ್ನೋಟಕ್ಕೇ ವ್ಯಕ್ತವಾಗುತ್ತದೆ. ದೇವನೂರು ಮಹಾದೇವ ಹೇಳುತ್ತಾರೆ-"ಈ ಮಸೂದೆ ಜಾರಿಯಾದರೆ ನಾವು ಗುಲಾಮರಾಗಬೇಕಾಗುತ್ತದೆ..". ಅವರು ಕಾಂಗ್ರೆಸ್ ಗೆ ನಿಷ್ಠರಾಗಿರುವುದಾದರೂ ಏಕೆಂಬ ಪ್ರಶ್ನೆ ಎಳುತ್ತದೆಯಲ್ಲವೇ...? ಕಾನೂನು ಪಂಡಿತರಾದ ರವಿಕುಮಾರ್ ಅವರು ಹೇಳುವ "ಬಹುಜನ ಲೋಕಪಾಲ ಮಸೂದೆ" ಅವರದೇ (ಕಾಂಗ್ರೇಸಿಗರ) ಕಾನೂನಿನ ವಿಧೇಯಕವಾದೀತಷ್ಟೇ... ಕಮಲಾ ಹಂಪನಾ ಅವರು ಅಣ್ಣಾ ಅವರ ಹುಟ್ಟೂರು ರಾಲೆಗಾಂವ್ ನಲ್ಲಿ ಕಳೆದ 25 ವರ್ಷಗಳಿಂದ ಪಂಚಾಯತ್ ಚುನಾವಣೆಗಳೇ ನಡೆದಿಲ್ಲ... ಎಂದೇನೋ ದೊಡ್ಡ ಲೋಪವನ್ನೇ ಹುಡುಕಿದವರಂತೆ ಹೇಳಿಕೊಂಡಿದ್ದಾರೆ. ಅಣ್ಣಾ ಅವರ ರಾಲೆಗಾಂವ್ ಗೆ ಹೋಲಿಸಿದರೆ ಈಗಾಗಲೇ ಪಂಚಾಯತ್ ಚುನಾವಣೆಗಳು ನಡೆದಿರುವ ಗ್ರಾಮಗಳು ಅದೆಷ್ಟು ಕಡೆ ಹೊಲಸು ರಾಜಕೀಯದಲ್ಲಿ ಮುಳುಗಿಹೋಗಿವೆ? ಅಲ್ಲಿ ಗ್ರಾಮಸ್ತರು ಎಷ್ಟರಮಟ್ಟಿಗೆ ನೆಮ್ಮದಿಯಾಗಿದ್ದಾರೆ..? ಎಂಬುದನ್ನು ಕಮಲಾ ಹಂಪನಾ ಅವರೊಬ್ಬರೇ ಕೊಂಡಾಡಬೇಕಷ್ಟೇ....ದೇಶವೇ ಬಿಕ್ಕಟ್ಟಿನ ಪರಿಸ್ಥಿತಿ ಎದುರಿಸುತ್ತಿರುವ ಇಂತಹ ದುರ್ಭರ ಸಂದರ್ಭದಲ್ಲಿ ತಮ್ಮಕಿಂಚಿತ್ ಸಾಧನೆಯಿಂದಲೇ ದೊಡ್ಡವರೆನಿಸಿಕೊಂಡಿರುವ ಇಂಥವರ ಹೇಳಿಕೆಗಳು ನಿಜಕ್ಕೂ ಅಚ್ಚರಿ ಹುಟ್ಟಿಸುತ್ತದೆ; ಅವರ ಒಳ ಹೊರಗೇನು ಎಂಬದನ್ನು ಜನತೆಗೆ ಪ್ರಕಟಗೊಳಿಸುತ್ತವೆ.ಇನ್ನು ಹಿರಿಯ ಪತ್ರಕರ್ತ ಜಿ.ಪಿ.ಬಸವರಾಜು ಅವರೂ ಸಹ ತಮ್ಮ "ಸೆರಗಿನಲ್ಲಿ ಕೆಂಡ ಕಟ್ಟಿಕೊಂಡು...." ಎಂಬ ಚರ್ಚೆಯನ್ನು ಇಂದಿನ ವಿ.ಕ. ಪತ್ರಿಕೆಯಲ್ಲಿ (26-08-2011)ಮುಂದಿಟ್ಟಿದ್ದಾರೆ. ಅವರ ದೃಷ್ಟಿಯಲ್ಲಿ ಅಣ್ಣಾ ಸೆರಗಿನಲ್ಲಿ ಕೆಂಡ ಕಟ್ಟಿಕೊಂಡಿದ್ದಾರೆ...? ಅವರ ಹೋರಾಟ ಸರ್ವಾಧಿಕಾರಿ ಧೋರಣೆಯಾಗಿದೆ! ಅಣ್ಣಾ ಗೆ ಸಿಗುತ್ತಿರುವ ಬೆಂಬಲ, ವಿಶೇಷವಾಗಿ ಯುವ ಜನತೆಯ ಬೆಂಬಲ "ಟೀಂ ಇಂಡಿಯಾವನ್ನು ಸರ್ವಾಧಿಕಾರದತ್ತ ತಳ್ಳುತ್ತಿದೆ" ಎನ್ನುವ ಬಸವರಾಜು. ಅವರ ಚರ್ಚೆಯ ಪ್ರಸ್ತಾವನೆಯಲ್ಲೇ -."ಪ್ರಜಾಪ್ರಭುತ್ವ ಎಂದರೆ ನೂರು ಕೋಟಿ ದಾಟಿರುವ ಭಾರತದ ಪ್ರತಿಯೊಬ್ಬನ ಪ್ರಭುತ್ವ ವೆಂದೂ ತಾವೇ ಹೇಳಿರುವುದನ್ನು ಮತ್ತೊಮ್ಮೆ ಮನನ ಮಾಡಿಕೊಳ್ಳಬೇಕು;ಅವರು.. "ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೆ ಪ್ರಭುಗಳು" ಎಂಬ ಓ ನಾಮವನ್ನೇ ಪಠಿಸುತ್ತಾ ಅವರು ಇನ್ನೊಮ್ಮೆ ಆತ್ಮ ವಿಮರ್ಶೆಮಾಡಿಕೊಳ್ಳಬೇಕು. ಅಣ್ಣಾ ಅವರ ಟೀಂ ಇಂಡಿಯಾ ತಮ್ಮದೇ ಟೀಂನ ಸರ್ವಾಧಿಕಾರವನ್ನೇನೂ ಎತ್ತಿಹಿಡಿಯುತ್ತಿಲ್ಲವಲ್ಲ..ಭಾರತದ ನೂರು ಕೋಟಿಗೂ ಹೆಚ್ಚಿನ ಸಂಖ್ಯೆಯಲ್ಲಿರುವ ಸರ್ವಜನಸ್ತೋಮದ ಆತ್ಮಸಾಕ್ಷಿಗೆ ಸರ್ವಸಮ್ಮತವಾದ ಭ್ರಷ್ಟಾಚಾರವನ್ನು ಬುಡಸಮೇತ ಕಿತ್ತೊಗೆಯುವಂತಹ ಸಮರ್ಥ ಮಸೂದೆಯೊಂದು ಜಾರಿಯಾಗಲೇಬೇಕು, ಅಂತಹ ಸಶಕ್ತ ಜನಲೋಕಪಾಲ ಮಸೂದೆಯೇ ಜಾರಿಯಾಗಬೇಕು; ರಾಜಕಾರಣಿಗಳು ಅಪರಾಧಿಗಳಾಗಿಯೂ ಜಾರಿಕೊಳ್ಳುವಂತಾಗ ಬಾರದೆಂಬದುದೇ ಬಲವಾದ ಆಶಯವಾಗಿರುವಾಗ, ಅದು ಸರ್ವಾಧಿಕಾರಿ ಧೋರಣೆಯೇ....? ಇದು ಅಣ್ಣಾ ಅವರ ಹಠಮಾರಿತನವೇ ...? ಈಗ ಇಡೀ ದೇಶದ ಜನತೆ ಕಣ್ತೆರೆದಿದೆ. ಯುವಜನತೆಯ ಸಂಪೂರ್ಣ ಬೆಂಬಲವಿರುವ ಸಂದರ್ಭದಲ್ಲೇ ಅಂತಹ ಸರ್ವಜನಸಮ್ಮತ ಮಸೂದೆ ಸರ್ವಥಾ ಸರ್ವತ್ರ ಸಕ್ರಮವಾಗಿ ಜಾರಿಯಾಗಲೇಬೇಕೆಂದು ಪಟ್ಟು ಹಿಡಿಯುವುದು ದೇಶದ ಸರ್ವತೋಮುಖ ಏಳ್ಗೆಗೆ ನಾಂದಿಯಾಗುತ್ತದೆಯಲ್ಲವೇ?ಎಷ್ಟೋ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಈ ಮಸೂದೆ ಇಂದು ಸಶಕ್ತ ಮಸೂದೆಯಾಗಿ ಜಾರಿಯಾಗದಿದ್ದರೆ ಇನ್ನೆಂದಿಗಾದರೂ ಆಗುವ ಭರವಸೆ ಇದೆಯೇನು? ಈಗ ನಡೆದಿರುವ ಅಣ್ಣಾ ಹಜಾರೆಯವರ ಹೋರಾಟದ ಪುನರಾವರ್ತನೆಯಾಗಲು ಇದೇನು ವರ್ಷಗಟ್ಟಲೇ ನಡೆಯಬಹುದಾದ ಬ್ರಿಟಿಷರ ವಿರುದ್ದದ ಹೋರಾಟವೇನು?"ಗಾಂಧೀ ವಾದಿ ಅಣ್ಣಾಗೆ ವ್ಯಕ್ತವಾಗುತ್ತಿರುವುದು ತನಗೆ ತಾನೆ ವ್ಯಕ್ತವಾಗುತ್ತಿರುವ ಬೆಂಬಲವೇ? ಇಲ್ಲವೇ ವ್ಯವಸ್ಥಿತ ಗುಂಪೊಂದು ಭ್ರಷ್ಟಾಚಾರ ವಿರೋಧಿ ಆಂದೋಲನದ ಹೆಸರಿನಲ್ಲಿ ಬೆಂಬಲವನ್ನು ರೂಪಿಸುತ್ತಿದೆಯೇ...? ಎಂಬ ಸಂಶಯಬೇರೆ... ಇದಕ್ಕೆದೆಹಲಿಯ ಮಂತ್ರಿ ಶೀಲಾ ದೀಕ್ಷಿತ್ ನಿವಾಸದ ಮುಂದೊಂದು ಗುಂಪು, ಬೆಂಗಳೂರಿನಲ್ಲಿ ಸಂಸದ ಅನಂತಕುಮಾರ್ ಅವರ ಮನೆಯ ಮುಂದೊಂದು ಗುಂಪು ಎಂಬುದನ್ನೇ ದೊಡ್ಡದಾಗಿ ಉದಾಹರಿಸುತ್ತಾರೆ!"ಪತ್ರಕರ್ತರಾಗಿ ಅನುಭವಿಗಳಾದ ಬಸವರಾಜು ಅವರು. ಅಣ್ಣಾ ಹಜಾರೆ ಅವರನ್ನು ಇಡೀ ದೇಶದ ಜನಸ್ತೋಮವೇ ಗಾಂದೀಜಿಗೆ ಹೋಲಿಸುತ್ತಿರುವಾಗ (ಗಾಂಧೀಜಿಯವರ ಅಂದಿನ ಸ್ವಾತಂತ್ರ್ಯ ಹೊರಾಟಕ್ಕೂ ಇಂದಿನ ಅಣ್ಣಾ ಹಜಾರೆ ಅವರ ಭ್ರಷ್ಟಾಚಾರಿ ವಿರೋಧಿ ಆಂದೋಲನದ ಹೋರಾಟಕ್ಕೂ ವ್ಯತ್ಯಸವಿರಬಹುದಾದರೂ), ಅಣ್ಣಾ ಅವರು ಮುಗ್ಧರು, ಗಾಂಧೀಜಿಗೆ ಈ ಬಗೆಯ ಮುಗ್ಧತೆಯಿರಲಿಲ್ಲ. ಎಂದು ತಮ್ಮ ಮೂಗಿನ ನೇರಕ್ಕೇ ಹೇಳುವ ಜಿ.ಪಿ.ಬಸವಾರಾಜು ಗಾಂಧೀಜಿವರ ಹೋರಾಟ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧವಾಗಿತ್ತು. ಭಾರತದ ಪ್ರತಿಯೊಬ್ಬ ಪ್ರಜೆಯ ಸ್ವಾತ್ರಂತ್ರ್ಯದ ಹಕ್ಕಿನ ಪ್ರಶ್ನೆ ಅದಾಗಿತ್ತು.

ಇಂದು ಸೆರಗಿನಲ್ಲಿ ಭ್ರಷ್ಟಾಚಾರದಂಥ ಕೆಂಡಕಟ್ಟಿಕೊಂಡು ಭಂಡತನದಿಂದ ತಮ್ಮ ಅಧಿಕಾರ ಉಳಿಸಿಕೊಳ್ಳಲು ಗಳಿಸಿಕೊಳ್ಳಲು ಒಬ್ಬರಮೇಲೊಬ್ಬರು ಹರಿಹಾಯುತ್ತಾ ಆರೋಪ ಪ್ರತ್ಯಾರೋ ಮಾಡುತ್ತಿರುವವರು ಭ್ರಷ್ಟಾಚಾರಿ ಸಚಿವರು, ರಾಜಕಾರಣಿಗಳೇ ಎಂಬುದನ್ನು ಎಂಬುದನ್ನು ಹಿರಿಯ ಪತ್ರಕರ್ತ ಜಿ.ಪಿ.ಬಸವರಾಜು ಮತ್ತಿತರರು ಗಂಭೀರವಾಗಿ ಯೋಚಿಸಬೇಕು...ಇಂದಿನ ಸ್ವತಂತ್ರಭಾರತದಲ್ಲಿ ಭ್ರಷ್ಟಾಚಾರ ವಿರುದ್ಧದ ಅಣ್ಣಾ ಅವರ ಹೋರಾಟ ಯಾವುದೇ ಒಂದು ಸಮ್ರಾಜ್ಯದ ವಿರುದ್ಧವಾಗಿಲ್ಲ. ಅದು ಭ್ರಷ್ಟರಾಜಕಾರಣಿಗಳ ಭ್ರಷ್ಟವ್ಯವಸ್ಥೆಯ ವಿರುದ್ಧವಾಗಿದೆ. ಹಾಗೆಯೆ ಪ್ರತಿಯೊಬ್ಬ ಪ್ರಜೆಯೂ ಆತ್ಮವಿಮರ್ಶೆಯಿಂದ ಸಿಡಿದೇಳುವಂತಾಗಿದೆ. ನಮ್ಮನ್ನುಆಳುವವರು ತಾವೆಂದುಕೊಂಡು ಯಾರಿಂದ ಓಟು ಪಡೆದು ಅಧಿಕಾರ ಪಡೆದರೋ ಆ ನಮ್ಮವರನ್ನೇ ಗುಲಾಮರೆಂದು ಕೊಂಡು, ಆ ಜನದನಿಗೆ ಕವಡೆ ಕಿಮ್ಮತ್ತಿಲ್ಲವೆಂದು ತಾವು ಬೇಕಾಬಿಟ್ಟಿ ವರ್ತಿಸುತ್ತಾ, ಸ್ವಜನ ಪಕ್ಷಪಾತ ಮಾಡುವ, ಭ್ರಷ್ಟಾಚಾರದಿಂದ ಅಕ್ರಮ ಅಸ್ತಿಪಾಸ್ತಿ ತಮ್ಮ ಆದಾಯಕ್ಕಿಂತಲೂ ವಿಪರೀತ ಪಟ್ಟು ಹಣಗಳಿಕೆ ಮಾಡಿಕೊಂಡಿರುವವರಿಗೆ ಕಬಂಧ ಬಾಹುವಿನಂತಹ ಬಲಿಷ್ಠ ಮಸೂದೆಯೊಂದರಿಂದ ಕಡಿವಾಣ ಹಾಕಲೆಂದೇ ನಡೆಯುತ್ತಿರುವ ಇಡೀ ಭಾರತ ಜನತೆಯ ಹೋರಾಟವಿದಾಗಿದ;ಅಣ್ಣಾ ಹಜಾರೆ ಅವರ ಹೋರಾಟ. ಗಾಂಧೀವಾದಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರ ಹೋರಾಟದ ಮೂಲ ಆಶಯ ಸ್ವತಂತ್ರ ಭಾರತದ ಪ್ರತಿಯೊಬ್ಬ ಪ್ರಜೆಯ ಮಹತ್ತರ ಆಶಯವೇ ಆಗಿದೆ ಯಲ್ಲವೇ..? ಯಾರೆಲ್ಲರೂ ಆತ್ಮವಿಮರ್ಶೆಮಾಡಿಕೊಳ್ಳುಂತಹದಾಗಿದೆ ಎಂಬುದನ್ನು ಎಂದಿಗಾದರೂ ಅಲ್ಲಗೆಳೆಯಲುಂಟೇ...?"

ಈವರೆಗೆ ಈ ನಮ್ಮ ವ್ಯವಸ್ಥೆಯು "ಯಥಾರಾಜ ತಥಾಪ್ರಜಾ'' ಎಂಬಂತೇ ಜನಸಾಮಾನ್ಯರಲ್ಲೂ ಅನ್ಯಾಯ ಅಕ್ರಮಗಳಿಕೆಗೆ ಮುಂದಾಗುತ್ತಿರುವವರನ್ನೇ ಕಾಣುತ್ತಿರುವಾಗ ಈ ಸಮಸ್ಯೆಗೆ ಕೊನೆಯಿಲ್ಲವೇ ಎಂಬ ಜಟಿಲ ಪ್ರಶ್ನೆಯೆ ನಮ್ಮ ಸುತ್ತಮುತ್ತ ಕಾಡುತ್ತಿರುವಂತಹ ಈ ದುರ್ಭರ ಸನ್ನಿವೇಶದಲ್ಲಿ, ಅಣ್ಣಾ ಅವರ ಹೋರಾಟದಿಂದ ಇಂದಿಗಾದರೂ ಇಡೀ ದೇಶವೇ ಎಚ್ಚೆತ್ತು ಕಣ್ತೆರೆಯುವಂತಾಗಿದೆಯಲ್ಲ ಎಂದು ನಿಟ್ಟುಸಿರು ಬಿಡುವಂತಾಗಿದೆಯಲ್ಲವೇ? ಅಣ್ಣಾ ಹಜಾರೆ ಅವರ ಹೋರಾಟದಿಂದ ನಮ್ಮೆಲ್ಲರ ಹೋರಾಟವಾಗಿದೆ. ಮುಂದಿನ ಯುವ ಪೀಳಿಗೆ ಸ್ವಾಭಿಮಾನದಿಂದ ತಲೆ ಎತ್ತಿ ನಿಲ್ಲಲು, ತಮ್ಮ ಭವಿಷ್ಯೋತ್ತರದಲ್ಲಿ ಬಿಡಿಸಲಾಗದ ಜಟಿಲ ಸಮಸ್ಯೆಯೊಂದಕ್ಕೆ ಸ್ಪಷ್ಟ ಪರಿಹಾರ ಗೋಚರಿಸುವಂತಾಗಿರುವುದು ಖಂಡಿತ ಶ್ಲಾಘನೀಯವೇ ಆಗಿದೆ.ಅಂತೆಯೆ ಸಂವಿಧಾನಿಕ ಕಾನೂನು ತೊಡಕುಗಳೇನೆ ಇದ್ದರೂ ಅವುಗಳ ಬಗ್ಗೆ ಎಲ್ಲ ಪಕ್ಷಗಳೂ ಎಲ್ಲರೂ ಒಂದು ಗೂಡಿ ಮುಕ್ತವಾದ ಚರ್ಚೆನಡೆಯಲಿ. ಬಲಿಷ್ಟವಾದ
ಸರ್ವಜನ ಸಮ್ಮತವಾದ ಜನಲೋಕಪಾಲ ಮಸೂದೆ ಜಾರಿಯಾಗಲಿ. ನಮ್ಮ ದೇಶದಲ್ಲಿ ಮಾದರಿ ಪ್ರಜಾಪ್ರಭುತ್ವವಿದೆಯಂದು ನಾವೆಲ್ಲರೂ ಹೆಮ್ಮೆ ಪಡುವಂತಾಗಲಿ. ಆಳುವ ಮಂತ್ರಿವರ್ಯರು, ಜನಪ್ರತಿನಿಧಿಗಳು, ಮೇಲ್ವರ್ಗದಿಂದ ಹಿಡಿದು ಎಲ್ಲ ವರ್ಗದ ಅಧಿಕಾರಿಗಳು ಕೆಳಮಟ್ಟದ ನೌಕರವರ್ಗದವರೆಲ್ಲರೂ ಈ ಸಶಕ್ತ ಮಸೂದೆಗೊಳಪಟ್ಟು ಎಚ್ಚೆತ್ತುಕೊಂಡು ತಮ್ಮ ಕರ್ತವ್ಯನಿಷ್ಠೆ
ತೋರುವಂತಾಗಲೆಂದು ನಾವೆಲ್ಲರೂ ಒಗ್ಗಟ್ಟಿನಿಂದ ಹಾರೈಸುವ ಐತಿಹಾಸಿಕ ದಿನ ಇಂದಿನ ದಿನವಲ್ಲವೇ..?.

ಇಂತಹ ಸದುದ್ದೇಶದ ಸತ್ಯ ನಿಷ್ಠ ಸತ್ಯಾಗ್ರಹದ ಮೂಲಕ ದೇಶಕ್ಕೆಹೊಸ ಬದಲಾವಣೆ ಹೊಸಬೆಳಕನ್ನೇ ನೀಡುವಂಥ ಅಣ್ಣಾ ಹಜಾರೆ ಅವರು ಹೋರಾಟದ ವಿರುದ್ಧ ಅಪಸ್ವರ ಎತ್ತುತ್ತಿರುವವರೂ, ಕೆಲ ಪಟ್ಟ ಭದ್ರರ ಮುಖವಾಣಿಗಳಂತೆ ಹೇಳಿಕೆಗಳನ್ನು ನೀಡುವವರೂ ಸ್ವತಃ ಆತ್ಮವಿಮರ್ಶೆ ಮಾಡಿಕೊಳ್ಳವ ಪರ್ವಕಾಲವಿದಾಗಿದೆ.
http://ritertimes.com

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ಉಮಾಶಂಕರ ಬಿ.ಎಸ್ ಸೋಮ, 09/05/2011 - 17:50

ದಯವಿಟ್ಟು ಈ ಲಿಂಕನ್ನು ನೋಡಿರಿ ಶಿವರಾಂ ಸರ್ http://www.vismayanagari.com/vismaya11/node/9502 ಬಹುಶಃ ನಿಮ್ಮ ಚರ್ಚಾವಿಷಯಕ್ಕೆ ನನ್ನ ಅಭಿಪ್ರಾಯವೂ ಆಗಬಹುದುನಿಮ್ಮಉಮಾಶಂಕರ

  • 582 views