Skip to main content

ಹದ್ದು ಮತ್ತು ಹಾವು!

ಬರೆದಿದ್ದುAugust 19, 2011
10ಅನಿಸಿಕೆಗಳು

 ಟಿವಿ ನೋಡುತ್ತಾ ಕುಳಿತಿರುವಾಗ.ಹದಿನಾರನೇ ಸತಿ ಫೋನ್ ರಿಂಗಾಯ್ತು. ಮತ್ತೆ ಸೈಲೆಂಟ್ ಮೋಡಿಗೆ ಹಾಕಿ ಕುಳಿತಿಕೊಂಡಳು ಹಿರಣ್ಮಯೀ. ಕ್ಷಣ ಕ್ಷಣಕ್ಕೂ ಎಲ್ಲಿ ನಾನು ಈ ಕರೆಗೆ ಉತ್ತರಿಸಿ ಬಿಡುವೆನೋ ಎಂಬ ಭಯ ಕಾಡುತ್ತಿತ್ತು. ಆದರೆ ಚಿನ್ಮಯ್ ಒಳ್ಳೇ ಸಾಡೇಸಾತಿಯಂಥಾ ಹುಡುಗ. ಬಿಟ್ಟೂ ಬಿಡದೇ ಪ್ರಯತ್ನಿಸುತ್ತಲೇ ಇದ್ದ. ಈ ಸಾರಿ ನಾನು ಕಾಲ್ ಅಟೆಂಡ್ ಮಾಡದಿದ್ದರೆ, ಮತ್ತೆ ಅವನು ಫೋನ್ ಮಾಡದೇ ಇರಬಹುದು ಎಂಬ ಯೋಚನೆ ಬಂತೋ ಇಲ್ಲವೋ ತಕ್ಷಣ ಫೋನ್ ತೆಗೆದು ಕಿವಿಗಿಟ್ಟುಕೊಂಡಳು. ಹೊರಗೆ ಸುಯ್ಯನೆ ಮಳೆ ಶುರುವಾಯಿತು. ಜೊತೆಗೆ ಕುಳಿರ್ಗಾಳಿ ಬೇರೆ. ಕುಳಿತಿದ್ದ ಸೋಫಾದಲ್ಲೇ ಮತ್ತಷ್ಟು ಮುದುರಿ ಕುಳಿತಳು.ಟಿವಿಯಲ್ಲಿ ಟಾಮ್ ಅಂಡ್ ಜೆರ್ರಿ ಬರುತ್ತಿತ್ತು. ಅವುಗಳು ಕಚ್ಚಾಡುತ್ತಿದ್ದವು. ರಾಜಿ ಮಾಡಿಕೊಳ್ಳುತ್ತಿದ್ದವು. ಪ್ರೀತಿ ಮಾಡುತ್ತಿದ್ದವು. ಪಕ್ಕಾ ಮನುಷ್ಯರ ಹಾಗೇ ಆಡುತ್ತಿದ್ದವು. "ಹಲೋ, ಹಲೋ" ಅತ್ತಲಿಂದ ಚಿನ್ಮಯ್ ಅರಚಿಕೊಳ್ಳುತ್ತಿದ್ದ. " ಹಲೋ"  ಆದಷ್ಟೂ ಬೇಸರದ ದ್ವನಿಯಲ್ಲಿರುವಂತೆ ಮಾತನಾಡಿದಳು. ನಿನ್ನ ಫೋನ್ ಅಟೆಂಡ್ ಮಾಡಿದ್ದೇ ದೊಡ್ಡ ವಿಷಯ ಅನ್ನುವ ಹಾಗೆ. ಆದರೆ ಚಿನ್ಮಯ್ ಅದೆನ್ನೆಲ್ಲಾ ಗಮನಿಸುವ ಮೂಡಿನಲ್ಲಿರಲಿಲ್ಲ. ಡೈರೆಕ್ಟಾಗಿ ಮ್ಯಾಟರಿಗೇ ಬಂದ. " ಜಾನ್ ( ಅವನು ಹಿರಣ್ಮಯಿಯನ್ನು  ಕರೆಯುತ್ತಿದ್ದುದ್ದೇ ಹಾಗೆ ) ಸ್ವಲ್ಪ ಹೊತ್ತು ಫ್ರೀ ಇದ್ಯಾ? ನಂಗೆ ಮಾತನಾಡೋದಿತ್ತು. " ಅರ್ಜೆಂಟಾಗಿ ಎಲ್ಲೋ ಹೋಗೋದಕ್ಕಿದೆ, ಆದಷ್ಟು ಬೇಗ ಮುಗಿಸಿದರೆ ಒಳ್ಳೆಯದು" ದ್ವನಿಯಲ್ಲಿನ ನಿಷ್ಟೂರತೆ ಸ್ವತಃ ಅವಳಿಗೇ ಆಶ್ಚರ್ಯ ತರಿಸುವಂತಿತ್ತು. "ಖಂಡಿತಾ ಜಾನ್, ನನಗೂ ಕೂಡ  ಹೋಗುವುದಕ್ಕಿದೆ. ಆದರೆ ನಿನ್ನ ಜೊತೆ ಮಾತನಾಡುವುದು, ನನಗೆ ಅದಕ್ಕಿಂತಾ ಅನಿವಾರ್ಯ. ಎಷ್ಟು ಅನಿವಾರ್ಯ ಅಂದರೆ  ಬದುಕಿನಷ್ಟು"  ಚಿನ್ಮಯ್ ಉಸುರಿದ. ಆಯಾಸಗೊಂಡವನಂತಿದ್ದ. ಟಿವಿಯಲ್ಲಿ ಜೆರ್ರಿ, ಟಾಮ್ ನ ತಲೆಯನ್ನು ಕೈಪಾತ್ರೆಯಿಂದ ಬಡಿಯುತ್ತಿತ್ತು. ಟಾಮ್ ತಲೆಯ ಮೇಲೆ ಬುಗುಟೆ ಏಳುತ್ತಿತ್ತು.ಅಸಹನೆಯಿಂದ  ಛಾನಲ್ ಬದಲಾಯಿಸಿದಳು "ಜಾನ್, ಕೇಳಿಸ್ತಿದಿಯಾ ಜಾನ್," ಚಿನ್ಮಯ್ ಅರಚಿದ. " ಹ್ಹೂಂ, ಅದೇನ್ ಹೇಳೋಕ್ಕಿದೆಯೋ ಬೇಗ ಹೇಳು" ಎಂದಳು "ಜಾನ್, ಪ್ಲೀಸ್ ಸ್ವಲ್ಪ ಸಹನೆಯಿಂದ ಹೇಳೋದು ಕೇಳು, ಜಸ್ಟ್ ಇಪ್ಪತ್ತು ನಿಮಿಷ ಅಷ್ಟೇ, ಅದಕ್ಕಿಂತ ಒಂದೇ ಒಂದು ನಿಮಿಷ ಜಾಸ್ತಿ ಮಾತಾಡಿದ್ರೆ ಫೋನ್ ಕಟ್ ಮಾಡಿ ಸ್ವಿಚ್ ಆಫ್ ಮಾಡ್ಬಿಡು" ಹಿರಣ್ಮಯೀ ನಿಜಕ್ಕೂ ಅಚ್ಚರಿಗೊಂಡಳು. ಎಲಾ ಇವನಾ, ಇವನನ್ನು ಅವಾಯ್ಡ್ ಮಾಡೋದಕ್ಕೆ ಸ್ವತಃ ಇವನೇ ಪ್ಲಾನ್ ಕೊಡ್ತಾ ಇದ್ದಾನಲ್ಲ.  ಟಿವಿಯಲ್ಲಿ "ದುನಿಯಾಮೇ ಪ್ಯಾರ್ ಜಬ್ ಬರಸೇ, ನಾ ಜಾನೇ ದಿಲ್ ಯೇ ಕ್ಯೋ ತರಸೇ" ಹಾಡು ಬರುತ್ತಿತ್ತು. ರಿಮೋಟಿನಿಂದ ಟಿವಿಯನ್ನು ಒಡೆದು ಹಾಕುವಷ್ಟು ಸಿಟ್ಟು ಬಂತು. ಹಿರಣ್ಮಯೀ ನಿಧಾನಕ್ಕೆ ಉಸುರಿದಳು. "ಈಗಾಗಲೇ ಸುಮಾರು ಎರಡು ನಿಮಿಷ ಆಗಿರಬಹುದು" " ಸರಿ,ಸರಿ ಜಾನ್, ಆದ್ರೆ ಪ್ಲೀಸ್ ಫೋನ್ ಕಟ್ ಮಾಡಬೇಡ.  ನಿನ್ನ ಹತ್ರ ಕರೆಕ್ಟಾಗಿ ಮೂರು ವಿಷಯ ಮಾತಾಡೊದಕ್ಕಿದೆ. ಮಧ್ಯೆ ಮಾತನಾಡ್ಬೇಡ, ನೀನು ಏನಾದ್ರೂ ಹೇಳಬೇಕಾಗಿದ್ರೆ ಕೊನೇಲಿ ಹೇಳು ಪ್ಲೀಸ್ ಜಾನ್" ಗೋಗರೆದ ಚಿನ್ಮಯ್  ಒಂದು ಕ್ಷಣಕ್ಕೆ ಹಿರಣ್ಮಯಿಗೆ ನಿಜಕ್ಕೂ ಆತಂಕವಾಯಿತು. ಚಿನ್ಮಯ್ ನನ್ನು ಅವಳು ಯಾವತ್ತೂ ಇಷ್ಟು ದಯನೀಯ ಸ್ಥಿತಿಯಲ್ಲಿ ನೋಡಿರಲಿಲ್ಲ. "ಏನಾಯ್ತು  ಚಿನ್ಮಯ್ " ಅವಳಿಗೇ ಗೊತ್ತಿಲ್ಲದಂತೆ ದ್ವನಿ ಮೆತ್ತಗಾಗಿತ್ತು.ಟಿವಿಯಲ್ಲಿ ನ್ಯಾಷನಲ್ ಜಿಯಾಗ್ರಫಿ ಗರ್ಜಿಸುತ್ತಿತ್ತು. ಸತ್ತ ಜಿಂಕೆಗೆ ಚಿರತೆ ಬಾಯಿಹಾಕಿ ಬುಗ್ಗೆಯುಕ್ಕುತ್ತಿದ್ದ ಬಿಸಿ ರಕ್ತವನ್ನು ಚಪ್ಪರಿಸುತ್ತಿತ್ತು. "ಜಾನ್, ನಿನ್ನ ಹತ್ತಿರ ಮೂರು ವಿಷಯ ಮಾತನಾಡೋದಕ್ಕಿದೆ. ಯಾವುದೂ ಒಂದಕ್ಕೊಂದು ಸಂಭಂಧವಿಲ್ಲ. ನೀನು ಹುಚ್ಹ ಅಂತ ಅಂದು ಕೊಂಡ್ರೂ ಪರವಾಗಿಲ್ಲ. ನಿನ್ನ ಹತ್ತಿರ ಇವೆಲ್ಲವನ್ನೂ ಹೇಳಲೇಬೇಕು. ನೋ, ಮಧ್ಯೆ ಮಾತನಾಡ್ಬೇಡ ಪ್ಲೀಸ್ , ಮೊದಲನೇದು ಏನು ಗೊತ್ತಾ ನಾನು ಮೊದಲಿನಿಂದಲೂ ಒಂಟಿ ಬಡುಕ ಪಿಶಾಚಿ, ನನಗಿರೋದೇ ನಾಲ್ಕೈದು ಜನ ಫ್ರೆಂಡ್ಸ್. ಏಕಾಂಗಿಯಾಗಿದ್ದರಿಂದ ಹಗಲು ಕನಸು ಕಾಣೋದು ಜಾಸ್ತಿ. ಆದರೆ ರಾತ್ರಿ ಕೂಡ ಕನಸು ಬೀಳಕ್ಕೆ ಶುರುವಾದಾಗ ನಂಗೆಷ್ಟು ಭಯವಾಯ್ತು ಗೊತ್ತಾ ಜಾನ್? "ಭಯ ಯಾಕೆ?" ಟಿವಿಯಲ್ಲಿ  ಈ ಬಾರಿ ರಿಯಾಲಿಟಿ ಷೋ. ಮನುಷ್ಯರು ಕ್ಷುಲ್ಲಕ ಬಹುಮಾನಕ್ಕಾಗಿ ಮಾಡಬಾರದ ಕಸರತ್ತೆಲ್ಲಾ ಮಾಡುತ್ತಿದ್ದರು. ಅವರಿಗೆ ಜಡ್ಜ್ ಗಳು ಕ್ಯಾಕರಿಸಿ ಉಗಿಯುತ್ತಿದ್ದರು. " ಯಾಕೆ ಗೊತ್ತಾ ಜಾನ್, ನನ್ನ ಜೀವನದಲ್ಲಿ  ನಡೆಯೋದೆಲ್ಲಾ, ಘಟಿಸೋದಕ್ಕೆ ಮುಂಚೆನೇ ನನ್ನ ಕನಸಿನಲ್ಲಿ ಬರುವುದಕ್ಕೆ ಶುರುವಾದವು" "ಅಂದ್ರೆ, ಏನು ಹೇಳ್ತಾ ಇದ್ದಿಯಾ ನೀನು" ಹಿರಣ್ಮಯಿ ಪ್ರಶ್ನಿಸಿದಳು. ಹೊರಗೆ ಸುರಿಯುತ್ತಿದ್ದ ಜಡಿ ಮಳೆ ಒಮ್ಮೆಗೆ ಎದೆಯೊಳಗೆ ನುಗ್ಗಿದಂತಾಗಿ ಮೈಯೆಲ್ಲಾ ಥಣ್ಣಗಾದ ಹಾಗೆ ಅನಿಸಿತು. "ಹೌದು ಜಾನ್, ನೀನು ನಂಬೋದಿಲ್ಲ ಅಲ್ವಾ? ಹೇಳ್ತೀನಿ ಕೇಳು. ನನ್ನ ಜೀವನದಲ್ಲಿ ನೀನು ಬರೋದು ನಂಗೆ ಮುಂಚೇನೆ ಗೊತ್ತಿತ್ತು. ಒಂದಿನಾ ಕನಸಿನಲ್ಲಿ  ನಾನು ನೀರಿಲ್ಲದೆ ನರಳ್ತಾ ಇರೋವಾಗ ನಿನ್ನಂತೇ ಮುಖ ಚಹರೆ ಹೊಂದಿದ ಹುಡುಗಿ ಒಬ್ಬಳು ಬಂದು ಪ್ರೀತಿಯಿಂದ ನೀರು ಕುಡಿಸಿದ ಹಾಗೆ ಕನಸು ಬಿದ್ದಿತ್ತು. ಅದಕ್ಕೆ ಮಾರನೇ ದಿನಾನೇ ಪ್ರಸನ್ನ ಬಾರ್ ಎದುರುಗಡೆ ನಿನ್ನನ್ನು ನಾನು ನನ್ನ ಫ್ರೆಂಡ್ ಸ್ನೇಹಾ ಜೊತೆ ಅಚಾನಕ್ಕಾಗಿ ಮೀಟ್ ಮಾಡಿದ್ದು. ನೀನು ನಮ್ಮೂರಿಗೆ ಹತ್ತಿರದೋಳೇ ಅಂತ ಗೊತ್ತಾಗಿದ್ದು. ಆಮೇಲೆ ಇಬ್ರೂ ಕ್ಲೋಸಾಗಿ........ "ಸ್ಟಾಪಿಟ್'" ಹಿರಣ್ಮಯೀ ಕಿರುಚಿದಳು," ಕುಡಿದಿದ್ಯಾ ನೀನು?" ಪ್ರಶ್ನಿಸಿದಳು. "ಜಾನ್, ಪ್ಲೀಸ್, ನಾನು ಖಂಡಿತಾ ಕುಡಿದಿಲ್ಲಾ. ನಂಬು ನನ್ನ. ಒಂದ್ವೇಳೆ ನಾನು ಕುಡಿದಿದ್ದೀನಿ ಅಂತಾನೇ ಇಟ್ಕೋ, ಆದ್ರೆ ನೀನು ಇಪ್ಪತ್ತು ನಿಮಿಷ ನನ್ನ ಮಾತು ಕೇಳ್ತೀನಿ ಅಂತ ಪ್ರಾಮಿಸ್ ಮಾಡಿದ್ದಿಯಾ" ಚಿನ್ಮಯ್ ಗುಡುಗಿದ " ಸರಿ, ಬೇಗ ಬೊಗಳಿ ಸಾಯಿ" ಹಿರಣ್ಮಯಿ  ಮಾತು ಮಿಂಚಿತು. "ಸರೀ ಜಾನ್, ಇವತ್ತಾದ್ಮೇಲೆ ನೀನು ಬೊಗಳು ಅಂದ್ರೂ ನಾನು ಬೊಗಳೊಲ್ಲ." ಚಿನ್ಮಯ್ ನಸುನಕ್ಕ. ಆ ನಗೆ ಯಾಕೋ ವಿಷಾದದಲ್ಲಿ ಇದ್ದಂತೆ ಅನ್ನಿಸಿತು.   ಟಿವಿಯಲ್ಲಿ ಭವಿಷ್ಯದ ಪ್ರೋಗ್ರಾಂ ಬರುತ್ತಿತ್ತು. ಭಯಾನಕ ಆಕೃತಿ ಹೊಂದಿದ್ದ ಗುರೂಜಿಯೊಬ್ಬರು, " ಮುಂಡೇವಾ- ಕೇಳೋ ಹಾಗಿದ್ರೆ ಕೇಳಿ, ಇಲ್ಲಾಂದ್ರೆ ಹಾಳಾಗಿ ಹೋಗಿ" ಎಂದು ಆಶೀರ್ವಚನ ನೀಡುತ್ತಿದ್ದರು. ಇಂಟರೆಸ್ಟಿಂಗ್ ಏನೂ ಆಗಿರಲಿಲ್ಲ. ಚಿನ್ಮಯ್ ಮತ್ತೆ ಶುರು ಮಾಡಿದ " ಆಮೇಲೇನಾಯ್ತು ಗೊತ್ತ ಜಾನ್, ನಾನು ಮಾರನೇ ದಿನ ಹೋಗೋದಿಕ್ಕೆ ಪ್ಲಾನೇ ಮಾಡ್ದೆ ಇರೋವಂತಹ ಜಾಗ, ಕನಸಿನಲ್ಲಿ ಬರ್ತಾ ಇದ್ವು. ನಾನು ಅಲ್ಲಿಗೆ ಹೋದಾಗ ನೆನಪಾಗೋದು , ಇದನ್ನ ಹಿಂದಿನ ದಿನನೇ ನಾನು ಕನಸಿನಲ್ಲಿ ಕಂಡಿದ್ದೆ ಅಂತ.ಯಾವ್ಯಾವ್ದೋ ಜನಗಳು, ಯಾವ್ಯಾವ್ದೋ ಜಾಗಗಳು. ಚಿತ್ರ ವಿಚಿತ್ರವಾದ ಸನ್ನಿವೇಶಗಳು. ಎಲ್ಲವೂ ಕನಸಿನಲ್ಲಿ ಬರ್ತಾ ಇತ್ತು. ನಾಲ್ಕೈದು ದಿನಗಳಲ್ಲಿ ಅದು ನಿಜ ಕೂಡ ಆಗಿ ಹೋಗೋದು. ಇದರಿಂದ ನನಗೆ ಎಷ್ಟು ಭಯ ಆಯ್ತು ಗೊತ್ತಾ ಜಾನ್? ನನಗೆ ಕಾಣಬಾರದ ಕನಸು ಎಲ್ಲಾದ್ರೂ ಕಂಡು ಬಿಟ್ರೆ ಅಂತ ಅನ್ನಿಸೋಕೆ ಶುರು ಆಯ್ತು. ಎಲ್ಲಿ ಕನಸು ಬಂದು ಬಿಡುತ್ತೋ? ಅಂತ ಹೆದರಿ, ನಿದ್ರೆ ಮಾಡೋದಕ್ಕೆ ಕೂಡ ಭಯವಾಗಲು ಶುರುವಾಯ್ತು. "ಹ್ಹೂಂ. ಆಮೇಲೆ?" ವ್ಯಂಗ್ಯ ತುಳುಕುವ ದ್ವನಿಯಲ್ಲಿ ಹಿರಣ್ಮಯಿ ಕೇಳಿದಳು. "ಒಂದಿನಾ ಅಂಥ ಕನಸು ಬಿದ್ದೇ ಬಿಡ್ತು ಜಾನ್. ಕನಸಿನಲ್ಲಿ ನಾನು ನಿಂಜೊತೆ ಕ್ಷುಲ್ಲಕ ವಿಷಯಕ್ಕೋಸ್ಕರ ಜಗಳ ಆಡ್ತಾ ಇದ್ದೆ. ಮಧ್ಯೆ ಪಲ್ಲವಿ ಅನ್ನೋ ಹುಡುಗಿ ಇದ್ದಳು, ಜಾನ್, ದೇವರಾಣೆ ನಿಜ ಜಾನ್" ಚಿನ್ಮಯ್ ಬಿಕ್ಕಲು ಶುರು ಮಾಡಿದ.  ಹಿರಣ್ಮಯಿ ಮತ್ತೆ ನ್ಯಾಷನಲ್ ಜಿಯಾಗ್ರಫಿಗೇ ಬಂದಳು.ಕಾಡಿನಲ್ಲಿ ಆನೆಯೊಂದು ಘೀಳಿಡುತ್ತಿತ್ತು. ಅದನ್ನು ಪಳಗಿದ ಆನೆಗಳು ಪಳಗಿಸಲು ಪ್ರಯತ್ನಿಸುತ್ತಿದ್ದವು. "ಹಮ್, ಸುಮಾರು ಎಷ್ಟು ಪೆಗ್ ಕುಡಿದಿದ್ಯಾ ಚಿನ್ಮಯ್? ಇಷ್ಟೊಳ್ಳೇ ಸುಳ್ಳನ್ನ ಹಣಿಯೋಕೆ"  ನಿಧಾನವಾಗಿ ಪ್ರಶ್ನಿಸಿದಳು. ಹೊರಗೆ ಮಳೆ ಹೆಚ್ಚಾಯಿತು. ಗುಡುಗು ಮಿಂಚಿನ ಆರ್ಭಟ ಕೂಡ ಅದಕ್ಕೆ ತಾಳ ಹಾಕುತ್ತಿತ್ತು. " ಇಲ್ಲ ಹಿರಣ್ಮಯಿ, ನಿನ್ನಾಣೆಗೂ ಕುಡಿದಿಲ್ಲ" ಚಿನ್ಮಯ್ ಹಲುಬಿದ. "ಮುಚ್ಚು ಬಾಯಿ ಇಡಿಯಟ್, ನನ್ನ ಆತ್ಮಬಂಧು ನೀನು, ನನ್ನ ಜೀವದ ಗೆಳತಿ ನೀನು ಅಂತೆಲ್ಲಾ ನಂಬಿಸಿ, ಆ ಪಲ್ಲವಿ ಬಂದ ತಕ್ಷಣ, ನಿನ್ಯಾವತ್ತೂ ನಾನು ಆ ದೃಷ್ಟಿಯಿಂದ ನೋಡೇ ಇಲ್ಲ. ಈಗಲೂ ನೀನು ನನ್ನ ಬೆಸ್ಟ್ ಫ್ರೆಂಡ್ ಅಂತ ಸೋಗಲಾಡಿ ಮಾತನಾಡಿ ಹೊರಟು ಹೋದ್ಯಲ್ಲಾ? ನಾನೇನು ಪಾಪ ಮಾಡಿದ್ದೆ ನಿಂಗೆ" ಈ ಬಾರಿ ಹಿರಣ್ಮಯಿ ಬಿಕ್ಕಳಿಸುತ್ತಿದ್ದಳು. " ಜಾನ್ ಪ್ಲೀಸ್, ಅಳ್ಬೇಡಾ" ಮತ್ತೆ ಚಿನ್ಮಯ್ ಬಿಕ್ಕುವಿಕೆ "ರಾಸ್ಕಲ್, ನೀನು ಹೇಳಿರೋ ಟೈಂ ನಲ್ಲಿ ಇನ್ನೂ ಐದು ನಿಮಿಷ ಉಳಿದೆದೆ. ಬೇಗ ಹೇಳಿ ಸಾಯಿ" ಹಿರಣ್ಮಯಿ ಸುಧಾರಿಸಿಕೊಂಡು ಬಿಟ್ಟಿದ್ದಳು.ಎಷ್ಟೇ ಆದರೂ ಹೆಣ್ಣು ಜೀವ. ಟಿವಿಯಲ್ಲಿ ಆನೆ ಘೀಳಿಡುವಿಕೆ ತಾಳಲಾಗದೇ ಟಿವಿ ಆಫ್ ಮಾಡೋಣ ಅನ್ನಿಸಿತು.   ಮುಂದುವರಿಸಿದ " ಹೋದವಾರ  ಪಲ್ಲವಿ ನಂಜೊತೆ ಜಗಳ ಮಾಡಿಕೊಂಡು ಹೋದಳು" "ಅದಕ್ಕೇ ನೀನಿವಾಗ ನಂಗೆ ಫೋನ್ ಮಾಡ್ದೆ ಅಲ್ವಾ"  ದ್ವನಿಯಲ್ಲಿ  ಕತ್ತಿಯ ಅಲಗು. ಚಿನ್ಮಯ್ ಅದನ್ನು ಉಪೇಕ್ಷಿಸಿ ಮುಂದುವರೆಸಿದ " ಅವತ್ತೇ ರಾತ್ರಿ ನನಗೆ ಒಂದು ಕನಸು ಬಿತ್ತು. ಅದರಲ್ಲಿ ಹದ್ದುಗಳು ಮತ್ತು ಹಾವುಗಳಿದ್ದ ಹಾಗೆ, ಅರೆ ಜೀವವಾದ ಹಾವೊಂದು ನನ್ನ ಮೈಮೇಲೆ ಬಿದ್ದ ಹಾಗೆ ಮತ್ತು ನೀನು ಅದನ್ನು ಟಿವಿಯಲ್ಲಿ ನೋಡುತ್ತಾ ಕುಳಿತಿರುವ ಹಾಗೆ" " ಹ್ ಹ, ಆಮೇಲೆ" ಹಿರಣ್ಮಯಿ ವ್ಯಂಗ್ಯವಾಡಿ ನಕ್ಕರೂ ಟಿ ವಿ ಹಾಕುವುದನ್ನು ಮರೆಯಲಿಲ್ಲ. ಆಗ ಟಿವಿಯಲ್ಲಿ, ಹದ್ದೊಂದು ಆಕಾಶದಲ್ಲಿ ವಿಶಾಲವಾಗಿ ವೃತ್ತಾಕಾರವಾಗಿ ಸುತ್ತುತ್ತಾ , ಹೊಂಚು ಹಾಕುತ್ತಾ ನೆಲದ ಮೇಲೆ ಹರಿದು ಕೊಂಡು ಹೋಗುತ್ತಿದ್ದ ಸಣ್ಣ ಹಾವೊಂದನ್ನು ಕಚ್ಚಿಕೊಂಡು ಹೋಯಿತು.  ಹಿರಣ್ಮಯಿ ಕಿರುಚಿಕೊಂಡ ಸದ್ದು ಕೋಣೆಯಲ್ಲಿ ಪ್ರತಿಧ್ವನಿಸಿತು. " ಚಿನ್ನು ( ಮೊದಲು ಹೀಗೆ ಕರೆಯುತ್ತಿದ್ದೆ ಅಲ್ಲವೇ? ) ಈಗ ಎಲ್ಲಿದ್ಯಾ ನೀನು?" ಅವಳಿಗರಿವಿಲ್ಲದಂತೆ ದ್ವನಿ ಕಂಪಿಸುತ್ತಿತ್ತು. "ಇನ್ನು ಎಷ್ಟು ನಿಮಿಷ ಇದೆ ಜಾನ್?" ಚಿನ್ಮಯನ ಪ್ರಶ್ನೆ , ಬಹುಶಃ ಕೊನೇ ಪ್ರಶ್ನೆ! " ಪಾಪಿ, ಕೊಂಧ್ಹಾಕ್ತೀನಿ ನಿನ್ನ. ಎಲ್ಲಿದ್ಯ ಏನು ಮಾಡ್ತಾ ಇದ್ಯಾ ಹೇಳು" ಹಿರಣ್ಮಯಿ ಭಯದಿಂದ ನಡುಗುತ್ತಿದ್ದಾಳೆ. ಟಿವಿಯಲ್ಲಿ ಹದ್ದಿನ ಬಾಯಿಂದ ಹಾವು ಜಾರಿ ಬಿದ್ದಾಗಿತ್ತು. " ನೈಸ್ ರೋಡಿನಲ್ಲಿ ಜಾನ್," ಚಿನ್ಮಯನ ಉತ್ತರ ಯಾಕೋ ಬರುಬರುತ್ತಾ ಚಿನ್ಮಯನ ಕಂಠ ಕ್ಷೀಣವಾಗುತ್ತಿದೆಯಾ?, ಅಥವಾ ಅದು ತನ್ನ ಭ್ರಮೆಯಾ? ಪ್ರಶ್ನಿಸಿಕೊಂಡಳು ಹಿರಣ್ಮಯೀ. "ಅಲ್ಲಿ ಏನು ಮಾಡ್ತಾ ಇದ್ಯಾ? " "....................." "ಚಿನ್ನೂ" " ಫಸ್ಟ್ ಲೆಟ್ ಮಿ ಕಂಪ್ಲೀಟ್ ಜಾನ್. ಮಾಗಡಿ ರೋಡ್ ನಿಂದ ಹೊರಟಿದ್ದೀನಿ , ತುಮಕೂರು ರೋಡಿಗೆ ಇನ್ನು ಸುಮಾರು ಎಂಟು ಕಿಲೋಮೀಟರ್ ಇರಬಹುದು.ಬೈಕಲ್ಲಿ ಬರ್ತಾ ಇದ್ದೆ. ತಲೆ ಮೇಲೆ ಹದ್ದೊಂದು ಹಾರಾಡ್ತಾ ಇತ್ತು. ಅದರ ಬಾಯಲ್ಲಿ ಹಾವೊಂದು ಒದ್ದಾಡ್ತಾ ಇತ್ತು. ಅದು ಕೊಸರಾಡಿಕೊಂಡು ನನ್ನ ಮೇಲೆ ಬಿತ್ತು. ಅದರ ಜೀವವಿನ್ನು ಹೋಗಿರಲಿಲ್ಲ. ನನ್ನ ಕಾಲಿಗೆ ಸರಿಯಾಗಿ ಹಲ್ಲೂರಿ ಕಡಿಯಿತು.ತಕ್ಷಣವೇ ಹದ್ದು ಬಂದು ಪುನಃ ಅದನ್ನು ಎತ್ತಿಕೊಂಡು ಹೊರಟು ಹೋಯಿತು.ತಕ್ಷಣ ನನಗೆ ಗೊತ್ತಿರೋ ಫಸ್ಟ್ ಏಯ್ಡ್ ಮಾಡಿಕೊಂಡೆ. ಕೀಚೈನ್ ನಲ್ಲಿರೋ ನೈಫ್ನಿಂದ ಬಲವಾಗಿ ಗಾಯ ಮಾಡಿಕೊಂಡು ರಕ್ತ ಹರಿಯೊ ಹಾಗೆ ಮಾಡಿದ್ದೀನಿ. ವಿಷ ಏರದ ಹಾಗೆ ಕರ್ಚಿಫ್ ನ ಗಟ್ಟಿಯಾಗಿ ಕಟ್ಟಿಕೊಂಡಿದ್ದೀನಿ. ಮತ್ತೆ ಪ್ರಜ್ನೆ ತಪ್ಪದ ಹಾಗೆ ನಿನ್ನ ಜೊತೆ ಮಾತಾಡ್ತಾ ಇದ್ದೀನಿ. ಅದಕ್ಕೆ ಹೇಳಿದ್ದು, ನಿನ್ನ ಜೊತೆ ಮಾತನಾಡೋದು ನನಗೆ ಜೀವನ್ಮರಣದ ಪ್ರಶ್ನೆ ಅಂತ" ಚಿನ್ಮಯ್ ನರಳಿದ  " ಚಿನ್ನೂ ನೀನಲ್ಲೇ ಇರು, ಐದು ನಿಮಿಷದಲ್ಲಿ ನಾನು ಬಂದೆ" "ನಿಜವಾಗ್ಲೂ" "ಹೂಂ"  ಹಿರಣ್ಮಯಿ ಫೋನ್ ಕಟ್ ಮಾಡಿ ದಿಗ್ಗನೆದ್ದಳು. ಆದರೆ ಅವಳ ಕಾಲುಗಳು ಅವಳಿಗೆ ಸಹಕರಿಸದೆ ದಿಮ್ಮನೆ ತಲೆ ಸುತ್ತಿ ಬವಳಿ ಬಂದ ಹಾಗಾಯಿತು. ಕಣ್ಣೆಲ್ಲಾ ಕತ್ತಲೆಯಿಟ್ಟಂತಾಯ್ತು.  ಸಾವರಿಸಿಕೊಳ್ಳಲು ಸುಮಾರು ನಿಮಿಷಗಳೇ ಬೇಕಾದವು.         ೦೦೦೦೦೦೦೦೦೦೦೦೦೦೦-------------------೦೦೦೦೦೦೦೦೦೦೦೦೦೦೦೦೦೦೦೦೦---------------೦೦೦೦೦೦೦೦೦೦೦೦- (ತುಮಕೂರು ರಸ್ತೆಯ ಲೈಫ್ ಲೈನ್ ಆಸ್ಪತ್ರೆ. ಐಸಿಯು ವಾರ್ಡಿನ ಬಾಗಿಲು ಹಾಕಿದೆ. ಹೊರಗೆ ಮಳೆ ಬಂದು ನಿಂತಿದ್ದರಿಂದ ರಸ್ತೆಯೆಲ್ಲಾ ಕೊಚ್ಚೆ ಕೊಚ್ಚೆ. ಅದರಲ್ಲೆ ಅವಳ ಹೋಂಡಾ ಆಕ್ಟಿವಾ ಅನಾಥವಾಗಿ ಬಿದ್ದಿದೆ. ಅಲ್ಲೇ ಹಿರಣ್ಮಯಿ ಚೂಡಿದಾರದ ತುದಿಯಲ್ಲಿ ಕಣ್ಣೊರೆಸಿಕೊಂಡು ನಿಂತಿದ್ದಾಗಲೇ, ಕಪ್ಪನೆಯ ಕೋಲು ಮುಖದ ಡಾಕ್ಟರು ಅವಳನ್ನು ಕರೆದಿದ್ದು. ಒಳಗೆ ಎಲ್ಲಾ ಬೆಳ್ಳಗಿತ್ತು. ಹಾಸಿಗೆ, ಹೊದಿಕೆ,ದಿಂಬು, ಕರ್ಟನ್ಗಳು, ನರ್ಸ್ ಮತ್ತು ಡಾಕ್ಟರ್ ಸಮವಸ್ತ್ರ. ಸಾವಿನ ಹಾಗೆ. ಕಪ್ಪಗಿದ್ದ್ದು ಅಂದರೆ ಡಾಕ್ಟರ್ ಮುಖ ಒಂದೇ ಯಮಧರ್ಮನ ಹಾಗೆ) " ಚಿನ್ನು"  ಕಂಪಿತ ಸ್ವರದಲ್ಲಿ ಕರೆದಳು "ಹ್ಹೂಂ" ಬಾವಿಯಾಳದಿಂದ ಬಂದಂತೆ ಚಿನ್ಮಯ ಸ್ವರ ಹೊರಟಿತು. ಹಿರಣ್ಮಯಿ ನಿರಾಳವಾದಳು  " ಐ ಆಂ ಸಾರಿ ಚಿನ್ನು, ಇದೆಲ್ಲಾ ಏನು? ನನಗಂತೂ ಒಂದೂ ನಂಬೋಕಾಗ್ತಿಲ್ಲ. ಎಲ್ಲ ವಿಚಿತ್ರ ಅನ್ನಿಸ್ತಾ ಇದೆ" " ಯಾವುದು ನಾನು ಬದುಕಿರೋದಾ?" " ಮುಚ್ಚು ಬಾಯಿ ಇಡಿಯಟ್" " ಕೇಳು ಜಾನ್, ಇನ್ನೆರಡೇ ಎರಡು ಮಾತು ಹೇಳದಕ್ಕಿದೆ. ಇವತ್ತು ಪಲ್ಲವಿ ಹತ್ರ ಹೋಗಿದ್ದೆ. ಅವಳಿಗೆ ಎಲ್ಲ ಗೊತ್ತಾಗಿದೆಯಂತೆ, ನಾನು ಮತ್ತು ಜಾನ್ ಬರೀ ಫ್ರೆಂಡ್ಸು ಅಂತ ಎಷ್ಟು ಹೇಳಿದರು ನಂಬಲಿಲ್ಲ.  ನಿನ್ನ ಅವಶ್ಯಕತೆ ನನಗಿಲ್ಲ ಅಂತ ಅಂದು ಹೊರಟು ಹೋದಳು" "ಅಬ್ಬಾ! ಆಮೇಲೆ" ಚಿನ್ಮಯ್ ಕಣ್ಣಿಂದ ಕಣ್ಣೀರು ಧಾರೆಯಾಯಿತು. ನೋಟ ಶೂನ್ಯವನ್ನು ದಿಟ್ಟಿಸುತ್ತಿತ್ತು. ವಿಷ ಇಳಿದಾಗಿತ್ತು, ಆದರೆ ಪ್ರೀತಿಯ ಅವಶ್ಯಕತೆ ನೇರ ನೆತ್ತಿಗೇರಿತ್ತು "ಆಮೇಲೆ ಇನ್ನೇನಿದೆ. ಜಾನ್, ಈ ಪ್ರಪಂಚದಲ್ಲಿ ನನ್ನ ಅವಶ್ಯಕತೆ ಯಾರಿಗಿದೆ ಹೇಳು? "  ಹಿರಣ್ಮಯಿ ನಿರ್ಧಾರ ಒಂದೇ ಪದದಲ್ಲಿ ಹೊರಬಿತ್ತು.   " ನನಗಿದೆ " "ಅಂದರೆ" ಚಿನ್ಮಯ್ ಇನ್ನೂ ಗೊಂದಲದಲ್ಲಿದ್ದ, ನನ್ನ ದೌರ್ಭಾಗ್ಯಕ್ಕೆ ಕಾರಣ ಹಾವಾ ಅಥವಾ ಹದ್ದಾ? "ನಿನ್ನ ಅವಶ್ಯಕತೆ ನನಗಿದೆ ಮತ್ತು ನನಗೆ ಮಾತ್ರ ಇದೆ" ಅವನು ಪ್ರಶ್ನಾರ್ಥಕವಾಗಿ ಅವಳೆಡೆ ನೋಡುವಷ್ಟರಲ್ಲಿ,ಅವಳ ತುಟಿ ಬಲವಾಗಿ ಅವನ ಕೆನ್ನೆಯ ಮೇಲೆ ಮುದ್ರೆ ಯೊತ್ತಿತು. ಏನಕ್ಕೋ ಒಳ ಬಂದ ನರ್ಸು ಈ ಸೀನು ನೋಡಿ ಘಲ್ಲು ಘಲ್ಲನೆ ಗೆಜ್ಜೆ ಕುಣಿಸುತ್ತಾ ಓಡಿ ಹೋದಳು.        ೦೦೦೦೦೦೦೦೦೦೦೦----------------------೦೦೦೦೦೦೦೦೦೦೦೦೦೦----------------------೦೦೦೦೦೦೦೦೦೦೦ ಅಂದಿನಿಂದ ಚಿನ್ಮಯ್ ಗೆ ಕನಸು ಬೀಳುವುದು ಕಡಿಮೆಯಾಯಿತು.

ಲೇಖಕರು

ಬಾಲ ಚಂದ್ರ

ಹೊಳೆ ದಂಡೆ

ನನ್ನ ಲೇಖನಗಳನ್ನು ಓದಿ
ನನ್ನ ಬಗ್ಗೆ ನಿಮಗೇ ತಿಳಿಯುತ್ತೆ.

ಅನಿಸಿಕೆಗಳು

ವಿ.ಎಂ.ಶ್ರೀನಿವಾಸ ಶನಿ, 08/20/2011 - 10:32

ನಮಸ್ತೇ ಬಾಲು.ಆ ಕನಸು, ಈ ಟಿವಿ, ಅವ್ಯಾವೋ ಪ್ರೋಗ್ರಾಮ್ಸು, ಇವಳ ಸಿಡುಕುಮಾತು, ಅವನ ಹಪಹಪಿಕೆ,  ಹದ್ದಿನ ಬಾಯಿಂದ ಬೀಳೋ ಹಾವು, ಹಾವಿನ ಬಾಯಿಂದ ಕಚ್ಚಿಸಿಕೊಳ್ಳೋ ಅವನು, ಗುಡ್, ವೆರಿಗುಡ್. ಪಕ್ಕಾ ವೃತ್ತಿಪರತೆ ನಿಮ್ಮ ಬರಹದಲ್ಲಿದೆ ಬಾಲು.  ನಿಜಕ್ಕೂ ಸಂತೋಷವಾಯಿತು ನಿಮ್ಮ ಬರಹ  ಓದಿ.

ವಿ.ಎಂ.ಶ್ರೀನಿವಾಸ ಶನಿ, 08/20/2011 - 10:32

ನಮಸ್ತೇ ಬಾಲು.ಆ ಕನಸು, ಈ ಟಿವಿ, ಅವ್ಯಾವೋ ಪ್ರೋಗ್ರಾಮ್ಸು, ಇವಳ ಸಿಡುಕುಮಾತು, ಅವನ ಹಪಹಪಿಕೆ,  ಹದ್ದಿನ ಬಾಯಿಂದ ಬೀಳೋ ಹಾವು, ಹಾವಿನ ಬಾಯಿಂದ ಕಚ್ಚಿಸಿಕೊಳ್ಳೋ ಅವನು, ಗುಡ್, ವೆರಿಗುಡ್. ಪಕ್ಕಾ ವೃತ್ತಿಪರತೆ ನಿಮ್ಮ ಬರಹದಲ್ಲಿದೆ ಬಾಲು.  ನಿಜಕ್ಕೂ ಸಂತೋಷವಾಯಿತು ನಿಮ್ಮ ಬರಹ  ಓದಿ.

ಉಮಾಶಂಕರ ಬಿ.ಎಸ್ ಶನಿ, 08/20/2011 - 18:38

ಫೋನಿನಲ್ಲೇ ಹಾವು ಏಣೀ ಆಟ ಆಡಿಸಿ, ಹೊಸತನದ ನಿರೂಪಣೆಯೊಂದಿಗೆ ಹೊಸ ಕಥೆ ತುಂಬಾ ಹಿಡಿಸಿತು.  ಅದರಲ್ಲೂ ತಾಂತ್ರಿಕ ದೋಷದಿಂದಾಗಿ ನಿನ್ನೆ ಅರ್ಧ ಓದಿದ್ದ ಕಥೆ ಇಂದು ಪೂರ್ತಿಯಾಗುವವರೆಗು ಮೆದುಳಿಗೆ ಮೇವಾಗಿದ್ದದ್ದು ಸುಳ್ಳಲ್ಲಸೊಗಸಾಗಿದೆ ಬಾಲಣ್ಣ, ಈ ಮಾತಲ್ಲಿ ಖಂಡಿತಾ ಉತ್ಪ್ರೇಕ್ಷೆಯಿಲ್ಲನಿಮ್ಮಉಮಾಶಂಕರ 

ವಿನಯ್_ಜಿ ಸೋಮ, 08/22/2011 - 19:27

ಬಾಲಚಂದ್ರ ರವರೆ,
ಎಂದಿನಂತೆ ಅದೇ ಉತ್ತಮ ಕಥೆ, ಅದೇ ಸೊಗಸಾದ ನಿರೂಪಣೆ... :) ಭಾರಿ ಸಸ್ಪೆನ್ಸ್ ಸ್ಟೋರಿ ಬರೆದಿದ್ದೀರಿ... :)
 "ಚಿನ್ಮಯ್ ಗೆ ಕನಸು ಬೀಳುವುದು ಕಡಿಮೆಯಾಯಿತು" -- ಕನಸ್ಸು ಕದಿಯುವ ಕನ್ನಿಕೆ ಬಂದಾಗ ಇನ್ನೇನು ಕನಸು ಕಾಣುತ್ತಾನೆ ಆ ಹುಡುಗ...!!
-- ವಿನಯ್

Somesh N ಮಂಗಳ, 08/23/2011 - 18:38

{#emotions_dlg.cool} Super

ನಾನ್ಯಾರು ಊಹಿಸಿ? (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 08/25/2011 - 13:21

ಚಂದ್ರು ಅವರಿಗೆ  " ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು"          ಇಂತಿ           .......................

ಕೆಎಲ್ಕೆ ಗುರು, 08/25/2011 - 14:33

ವಿಶಿಷ್ಟ ನಿರೂಪಣೆಯ ಒಳ್ಳೆಯ ಕಥೆ. ಸಂಭಾಷಣೆಯ ನಡುವೆ ಬರುವ ಟಿವಿ ಕಾರ್ಯಕ್ರಮದ ವಿವರಣೆ ಹಾಗೂ ಅದು ಕಥೆಯಲ್ಲಿ 'ರೂಪಕ'ವಾಗಿ ಬಳಕೆಗೊಂಡ ಬಗೆ ಅಧ್ಭುತ.  
"ಈ ಸಾರಿ ನಾನು ಕಾಲ್ ಅಟೆಂಡ್ ಮಾಡದಿದ್ದರೆ, ಮತ್ತೆ ಅವನು ಫೋನ್ ಮಾಡದೇ ಇರಬಹುದು ಎಂಬ ಯೋಚನೆ....." ನಿಮ್ಮ ಸೂಕ್ಷ್ಮತೆಗೆ ಕನ್ನಡಿ.  
 ".....ಪಕ್ಕಾ ಮನುಷ್ಯರ ಹಾಗೇ ಆಡುತ್ತಿದ್ದವು", "....ಎಷ್ಟು ಅನಿವಾರ್ಯ ಅಂದರೆ  ಬದುಕಿನಷ್ಟು" ಇಂಥಾ ಸಾಲುಗಳು 'ವಾಹ್' ಅನ್ನಿಸಿಕೊಳ್ಳುತ್ತವೆ.  
ಕಥೆ ಪ್ರಾರಂಭವಾಗಿ "ಕುಡಿದಿದ್ಯಾ ನೀನು?" ಎಂಬ ಪ್ರಶ್ನೆ ಬರುತ್ತಿರುವಂತೆ, ಈ ಹುಡುಗ ವಿಷ ಕುಡಿದು ಆಕೆಗೆ ಫೋನ್ ಮಾಡುತ್ತಿರಬಹುದು ಎಂಬ ಸಂಶಯ ಬಂದಿತ್ತು , ಆದರೆ ಅದಕ್ಕಿಂತ ವಿಬಿನ್ನವಾಗಿ 'ಹಾವು ಹದ್ದುಗಳ' ಪ್ರಮೇಯ ನಿಮ್ಮ ಕಥೆ ಹಣೆಯುವ ಕಲೆಗೆ ಸಾಕ್ಷಿ.
ಬರೆಯುತ್ತಿರಿ...ಬರ ನೀಗುತ್ತಿರಿ.

ವೆಂಕಟೇಶ venkatb83 (ಪ್ರಮಾಣಿಸಲ್ಪಟ್ಟಿಲ್ಲ.) ಭಾನು, 08/28/2011 - 12:12

ಬಾಲಚಂದ್ರ ಅವ್ರೆನಿಮ್ಮ ಕಥೆ ಸೂಪರ್.ನ ಮೊದಲ್ಗೆ ನಾಯಕ ವಿಷ ತೊಗೊಂಡಿರ್ಬಹುದು ಅನ್ಕಂಡೆ. ಆದ್ರೆ  ಆಮೇಲ್ ಗೊತ್ತಯ್ತ್ ಅಸಲು ವಿಸ್ಯ ಬೇರೆ ಅಂತ!....ನಿಮ ನಿರೂಪಣ ಶೈಲಿ ಬೇರೆಯದೇ ರೀತಿ ಇದೆ..ನಿಮ್ಮಿಂದ ಇನ್ನಸ್ಟು ಲೇಖನ ನಿರೀಕ್ಷೆಯಲ್ಲಿ.

robin ಭಾನು, 09/04/2011 - 13:24

ನಿಮ್ಮ ನಿರೂಪಣಾ ಶೈಲಿ ವಿಶಿಷ್ಟವಾಗಿ , ವಿಭಿನ್ನವಾಗಿ ಸುಂದರವಾಗಿ ಮೂಡಿಬಂದಿದೆ. ಟಿವಿ ಚಾನೆಲುಗಳ ಬದಲಾವಣೆ, ಕಥೆಗೆ ಹೊಸ ರೂಪ ನೀಡುತ್ತದೆ.  ಕಥೆ ಕೊನೆಯವರೆಗೂ ಕುತೂಹಲ ಮೂಡಿಸುತ್ತೆ, ವಾಸ್ತವತೆಗೆ  ತುಂಬಾ ಹತ್ತಿರವಾದಂತಿದೆ.  ಕಥೆಯ ಸಂದರ್ಭಗಳು ನಮ್ಮ ಪಕ್ಕದಲ್ಲಿ ಎಲ್ಲೋ ನಡೆಯುತ್ತಿರುವ ಹಾಗೆ ಭಾಸವಾಗುತ್ತದೆ.ಯಾವಾಗಲೂ ಹೀಗೆ ಬರೆಯುತ್ತಿರಿ...

ಕಥೆ ಬಹಳ ಚೆನ್ನಾಗಿ ಮೂಡಿ ಬಂದಿದೆ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.