Skip to main content

’ಸಂತೋಷ’ದ ಆ ದಿನಗಳು

ಬರೆದಿದ್ದುAugust 9, 2011
19ಅನಿಸಿಕೆಗಳು

"ಮೇ ಐ ಕಂ ಇನ್ ಸರ್?" ಎಂಬ ನನ್ನ ವಿನಮ್ರ ಧ್ವನಿ ಕೇಳಿ, ನಿಶ್ಯಭ್ಧವಾಗಿ ಪಾಠ ಕೇಳುತ್ತಿದ್ದ ಮಂಡ್ಯದ ಕಾಳೇಗೌಡ ಪ್ರೌಢಶಾಲೆಯ ೯ನೇ ತರಗತಿ ಹುಡುಗರಲ್ಲಾ ಬಾಗಿಲ ಬಳಿ ಸರಕ್ಕನೆ ತಿರುಗಿದ್ದರು.
"ಯಾರಪ್ಪ ನೀನು? ಏನಾಗ್ಬೇಕಿತ್ತು?" ಗುರುಗಳ ಕಂಚಿನ ಕಂಠದ ಖಢಕ್ಕಾದ ಧನಿ ಪ್ರಶ್ನೆಯ ರೂಪದಲ್ಲಿ ಬಂತು.
"ಸರ್! ಹೊಸ ಅಡ್ಮೀಶನ್" ಎನ್ನುತ್ತಾ ಕೈಲಿದ್ದ ರೆಸಿಪ್ಟನ್ನು ಮುಂದೆ ಹಿಡಿದೆ.
"ಓ! ಹೌದಾ! ವೆರಿಗುಡ್! ಬಾ ಒಳ್ಗೆ" ಎನ್ನುತ್ತಾ ಬಳಿ ಕರೆದು ರೆಸಿಪ್ಟನ್ನು ಪರಿಶೀಲಿಸಿ ಅಟೆಂಡೆನ್ಸ್ ನಲ್ಲಿ ನನ್ನ ಹೆಸರು ನಮೂದಿಸಿ
" ಏಯ್! ಸಂತೋಷ ಸ್ವಲ್ಪ ಸರ್ಕೊಳೊ" ಎಂದು ದಡೂತಿ ದೇಹದ ಮಾಂಸ ಪರ್ವತದಂದಿದ್ದವನಿಗೆ ಆದೇಶಿಸಿದರು, ನನ್ನನ್ನು ಅಲ್ಲಿ ಕೂರುವಂತೆ ಸನ್ನೆಮಾಡಿದರು. ತರಗತಿಯಲ್ಲಿದ್ದ ಹುಡುಗರು ನನ್ನನ್ನು ಅನ್ಯಗ್ರಹದ ಜೀವಿಯೊಂದು ತಪ್ಪಿಸಿಕೊಂಡು ಬಂದಾಗ ನೋಡುವಂತೆ, ಬಿಟ್ಟ ಬಾಯಿ ಬಿಟ್ಟ ಕಣ್ಣು ಬಿಟ್ಟಹಾಗೆ, ಅವರವರ ಕತ್ತನ್ನು ನನ್ನ ಚಲನೆಗನುಗುಣವಾಗಿ ಸಮೀಕರಿಸಿದಂತೆ ತಿರುಗಿಸುತ್ತಿದ್ದರು.
"ಆಹಾ! ಅವ್ನೇನು ಯಾವಗ್ರಹದಿಂದ ತಪ್ಪಿಸ್ಕಂಡು ಬಂದೋನೇನಲ್ಲ, ಎಲ್ರೂ ನಿಮ್ಮನಿಮ್ಬಾಯಿ ಮುಚ್ಕಂಡು ಪಾಠ ಕೇಳ್ರಿ!" ಮತ್ತದೇ ಗುಂಡು ಹೊಡೆದಂತಾ ಸ್ವರಕ್ಕೆ ಎಲ್ಲರ ದೃಷ್ಠಿ ಕಪ್ಪು ಹಲಗೆಯ ಕಡೆ ನೆಡುವಷ್ಟರಲ್ಲಿ ಸಂತೋಷನಪಕ್ಕದಲ್ಲಿದ್ದ ಸ್ವಲ್ಪವೇ ಸ್ವಲ್ಪ ಜಾಗದಲ್ಲಿ ಕುಳಿತಿದ್ದೆ.
"ನಾನೊಸಿ ದಪ್ಪ! ಬೈಯ್ಕಬ್ಯಾಡ ಗುರು!" ಎಂದು ಪಿಸುಗುಟ್ಟಿದ್ದ ಪಕ್ಕದಲ್ಲಿದ್ದ ಸಂತೋಷ ಆ ಕ್ಷಣಕ್ಕೇ ಹತ್ತಿರವಾಗಿಬಿಟ್ಟ. ಈ ರೀತಿ ನನಗೆ ಸಂತೋಷನ ಪರಿಚಯವಾಗಿತ್ತು. ಬೆಳಗಿನ ತರಗತಿಗಳೆಲ್ಲಾ ಮುಗಿದು, ಊಟದ ಸಮಯದ ಬೆಲ್ ಹೊಡೆದಾಗ ಕೆಲವರು ಮನೆಗೆ ಹೊರಟರೆ, ಮತ್ತೆ ಕೆಲವರು ತಂತಮ್ಮ ಊಟದ ಡಬ್ಬಿಗಳೊಡನೆ ಹೊರ ಹೊರಟರೆ, ಸಂತೋಷ ಸೇರೆದಂತೆ ಮತ್ತೂ ಹಲವರು ತರಗತಿಯೊಳಗೇ ಡಬ್ಬಿ ಬಿಚ್ಚಿ ಊಟಕ್ಕೆ ಕುಳಿತರು. ಅಂದು ಮೊದಲ ದಿನವಾದ್ದರಿಂದ ಸ್ಕೂಲಿಗೆ ದಾಖಲಿಸಿದ ಅಪ್ಪ "ಇವತ್ತು ಹೋಟ್ಲಲ್ಲಿ ತಿನ್ಕೋ" ಎಂದೇಳಿ ೨೦ ರೂ ಕೊಟ್ಟಿದ್ದರು. ಅದಕ್ಕೆಂದೇ ಹೊರಗೆ ಹೋಟಲಿನ ಭೇಟೆಗೆ ಹೊರಡಲನುವಾದೆ.
"ಎಲ್ಲೊಯ್ತಿಯಾ ಗುರು? ಬಾ ಊಟ ಮಾಡಾಣ" ಎಂದ ಅದೇ ಸಂತೋಷ.
"ಇಲ್ಲಾ ಇವತ್ತು ನಾನೇನು ತಂದಿಲ್ಲಾ! ಅದ್ಕೆ ಹೊರ್ಗಡೆ ಹೋಟ್ಲುಗೆ ಹೋಗೋಣಾಂತಿದೀನಿ, ಇಲ್ಲಿ ಹೋಟ್ಲು ಎಲ್ಲಿದೆ?" ಡವಗುಟ್ಟುವ ಎದೆಯ ಸಂಕೋಚದ ಸದ್ದಿನೊಡನೆ ಅವನನ್ನೇ ಕೇಳಿದ್ದೆ.
"ಇರ್ಲಿ ಬಾ! ಇಲ್ಲೇ ತಿನ್ನೋಣ" ಎನ್ನುತ್ತಾ ತನ್ನ ಡಬ್ಬಿಯ ಮುಚ್ಚಳಕ್ಕೆ ತಾನು ತಂದಿದ್ದ ಉಪ್ಪಿಟ್ಟನ್ನು ಹಾಕಿ ಪಕ್ಕದವನಿಗೆ ಕೊಡುತಾ "ಏನ್ ನಿನ್ನೆಸ್ರು?" ಎನ್ನುವ ಪ್ರಶ್ನೆಯನ್ನು ನನ್ನೆಡೆಗೆ ತಳ್ಳಿದ.
"ಉಮಾಶಂಕ್ರ" ಎಂದೆ
"ಓಹೋ!! ಲೋ ಕೋಳಿ, ಸೀ ನಿಮ್ಮಿಬ್ರು ಜೊತೆಗೆ ಇನ್ನೊಬ್ಬ ಉಮಾಶಂಕ್ರ ಬಂದ ನೋಡ್ರುಲಾ!! ಎನ್ನುತ್ತಾ ಗಹಗಹಿಸಿದ ಮಿಕ್ಕವರೂ ಧನಿಗೂಡಿಸಿದರು. ಎಲ್ಲರೂ ತಂತಮ್ಮ ಹೆಸರು ಹೇಳಿ ಪರಿಚಯ ಮಾಡಿಕೊಳ್ಳುತ್ತಾ ಎದುರಿಗಿದ್ದ ಮುಚ್ಚಳಕ್ಕೆ ತಾವು ತಂದಿದ್ದ ತಿಂಡಿಯನ್ನು ಊಟವನ್ನು ಒಂದೊಂದು ಸ್ಪೂನು ಹಾಕುತ್ತಾ ಪಕ್ಕದವನಿಗೆ ಕೊಡುತ್ತಿದ್ದರು. ಎಲ್ಲರ ಪರಿಚಯವೂ ಮುಗಿದ ನಂತರ ಮದುವೆ ಮನೆಯ ಊಟದೆಲೆಯಂತೆ ಬಗೆಬಗೆಯ ತಿಂಡಿಗಳುಳ್ಳ ಮುಚ್ಚಳ ನನ್ನ ಬಳಿಗೆ ಬಂದಾಗ ಏನೂ ತಿಳಿಯದೆ ಎಲ್ಲರ ಮುಖವನ್ನು ನೋಡುತ್ತಿದ್ದಾಗ
"ಹಂಚಿ ತಿಂದೋನು ಮಿಂಚಿ ಬಾಳ್ತಾನಂತೆ!! ಮಖ ಏನೋಡ್ತಿಯಾ? ಜಮಾಯ್ಸು" ಎಂದು ಮತ್ತೆ ಕಿಚಾಯಿಸಿದ್ದರೂ ಅವನು ಸೇರಿದಂತೆ ಅಲ್ಲಿದ್ದ ಎಲ್ಲರೂ ಸೀದ ನನ್ನ ಹೃದಯದೊಳಗೆ ಬಂದು ಕುಳಿತು ಬಿಟ್ಟಿದ್ದರು. ಮೊದಲದಿನದ ಆ ಸ್ಕೂಲಿನ ಅನುಭವ ಅಚ್ಚಳಿಯದೇ ಹಾಗೇ ೨೨ ವರ್ಷಗಳನಂತರವೂ ’ಇಂದು ನಡೆದಿದ್ದೇನೋ’ ಎನ್ನುವಂತೆ ಹಸಿರಾಗಿಯೇ ಇದೆ.
ನಾನಾಗ ಬಹಳ ಕುಳ್ಳಗಿದ್ದದ್ದರಿಂದ ಮರುದಿನದಿಂದ ಮುಂದಿನ ಡೆಸ್ಕ್ ಖಾಯಂ ಆದರೂ ಸಂತೋಷನ ಗೆಳೆತನಕ್ಕೇನು ಕುಂದು ಬಂದಿರಲಿಲ್ಲ. ಅಂದ ಮಾತ್ರಕ್ಕೆ ಉಳಿದವರೇನು ನನ್ನ ಸ್ನೇಹಿರಲ್ಲವೆಂದಲ್ಲ, ಅವನಿಗಿಂತಲೂ ಆತ್ಮೀಯ ಸ್ನೇಹಿತರು ಅನೇಕರಿದ್ದರೂ ಸಹ ಸಂತೋಷನ ವ್ಯಕ್ತಿತ್ವವೂ ಎಂದೂ ಮರೆಯಲಾಗದಂತಹದ್ದು. ಆ ವಯಸ್ಸಿಗಾಗಲೇ ಅವನು ೬೫ ರಿಂದ ೭೦ ಕೆ.ಜಿ ವರೆಗೆ ತೂಗುತ್ತಿದ್ದ!! ಅವನು ಹೆಸರಿಗೆ ತಕ್ಕಂತೆ ಸಂತೋಷವಾಗಿಯೇ ಇರುತ್ತಿದ್ದ. ಎಲ್ಲರನ್ನೂ ರೇಗಿಸುವುದು, ತರಗತಿಯ ಮೇಷ್ಟ್ರು, ಮೇಡಂಗಳನ್ನು ಅವರಿಲ್ಲದಿದ್ದಾಗ ಅಣಕಿಸುತ್ತಿದ್ದದ್ದು, ತೀರಾ ಗಂಭೀರವಾದ ವಿಚಾರಗಳನ್ನು ತನ್ನ ಹಾಸ್ಯ ಸಮಯಪ್ರಜ್ನೆಯಿಂದಾಗಿ ತಿಳಿಗೊಳಿಸುತ್ತಿದ್ದ ರೀತಿ ಎಲ್ಲರಿಗೂ ಅಚ್ಚುಮೆಚ್ಚಿನದ್ದಾಗಿತ್ತು. ಇಂತಿಪ್ಪ ಸಂತೋಷ ಸಂಜೆ ತರಗತಿಗಳು ಮುಗಿದು ಮನೆಗೆ ಹೋಗುವಾಗ ಮಾತ್ರ ಬಹಳ ಮ್ಲಾನವನನಾಗೆರುತ್ತಿದ್ದ. ಹೈಸ್ಕೂಲಿನಲ್ಲಿದ್ದ ಎಲ್ಲಾ ಸಹಪಾಠಿಗಳ ಮನೆಗೆ ಅವನೂ ಬರುತ್ತಿದ್ದ ನಾನೂ ಹೋಗುತ್ತಿದ್ದೆ, ಎಲ್ಲರೂ ನಮ್ಮ ಊರಾದ ಬಿದರಕೋಟೆಗೂ ಬಂದಿದ್ದರು. ಆದರೆ ಯಾರೂ ಸಂತೋಷನ ಮನೆಯನ್ನು ನೋಡಿರಲಿಲ್ಲ. ಒಂದು ವೇಳೆ ನೋಡಿದವರ್ಯಾರೂ ಮನೆಯೊಳಗೆ ಹೋಗಿರಲಿಲ್ಲ, ಸಂತೋಷನೂ ಸಹ ಯಾರನ್ನೂ ಕರೆಯುತ್ತಿರಲಿಲ್ಲ. ಒಂದು ದಿನ ಅದೇ ವಿಚಾರವನ್ನು ಇತರ ಸ್ನೇಹಿತರಬಳಿ ಹೇಳಿದಾಗ ’ಅವನ ತಂದೆ, ಒಬ್ಬ ಇಂಜಿನಿಯರ್ ಎಂದು ಅವರು ಬಹಳ ’ಸ್ಟಿಕ್ಟ್’ ಎಂದೂ, ಅವರ ಮಗ ಇತರರೊಡನೆ ವೃಥಾ ಕಾಲಹರಣ ಮಾಡುವುದನ್ನು ತಿಳಿದರೆ ಸಂತೋಷನಿಗೆ ’ಒದೆ’ ಬೀಳುತ್ತವೆಂದು’ ವಿನಯ್ ಹೇಳಿದ್ದ. ಯಾವಾಗಲೂ ಜಾಲಿಯಾಗಿ ಕಳೆಯುತ್ತಿದ್ದರೂ ಓದಿನಲ್ಲಿ ಸದಾ ಮುಂದೆಯೇ ಇರುತ್ತಿದ್ದ.
ಅವನ ನಮ್ಮ ಹುಡುಗಾಟವೆಲ್ಲ ಮೇಷ್ಟ್ರು ಇಲ್ಲದಿದ್ದಾಗಲಷ್ಟೇ ನಡೆಯುತ್ತಿದ್ದರಿಂದ ಹೈಸ್ಕೂಲಿನಲ್ಲಿ ಹೆಚ್ಚು ಬಾಲ ಬಿಚ್ಚಲು ಅವನಿಗೇನು ಮತ್ಯಾರಿಗೂ ಸಾಧ್ಯವಾಗಿರಲಿಲ್ಲ. ನಾವೆಲ್ಲರೂ ನಮ್ಮನಮ್ಮ ಬಾಲಗಳನ್ನು ಬಿಚ್ಚಿ ’ನಾವೂ ಸಹ ವಾನರ ಸಂತಂತಿಯವರು’ ಎಂದು ಜಗತ್ತಿಗೆ ನಿರೂಪಿಸಿ, ’ಡಾರ್ವಿನ್ ನ ವಿಕಾಸವಾದಕ್ಕೆ’ ಇಂಬುಕೊಟ್ಟಿದ್ದು, ಕೊಡುವ ಅವಕಾಶ ಸಿಕ್ಕಿದ್ದು, ’ಬಾಲಕರ ಸರ್ಕಾರಿ ಕಾಲಿಜಿನ’ ಮೆಟ್ಟಿಲು ಹತ್ತಿದಾಗಲೆ!! ಕೇವಲ ಅಟೆಂಡೆನ್ಸ್ ಗಾಗಿ ಕ್ಲಾಸಿಗೆ ಹೋಗುವವರು ಇನ್ನೇನು ಮಾಡಲು ತಾನೆ ಸಾಧ್ಯ!! ಅಲ್ಲವೇ?
ಅದರಲ್ಲೂ ಸಂತೋಷನ ಆಟಗಳಂತೂ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತಿದ್ದವು. ಆಗ ನಮಗೆ ಅಂಕಗಣಿತ ಮತ್ತು ರೇಖಾಗಣಿತಗಳನ್ನು ಹೇಳಿಕೊಡಲು ಕೆಂಪೇಗೌಡ ಎಂಬ ಲೆಕ್ಚರರ್ ಬರುತ್ತಿದ್ದರು, ಅವರ ಧರ್ಮಪತ್ನಿ, ವಿಜಯಲಕ್ಷ್ಮಿಯವರು ಸಸ್ಯ ಶಾಸ್ತ್ರದ ಲೆಕ್ಚರರ್. ಶುಕ್ರವಾರ ಸಂಜೆ ಕೊನೆಯ ಪೀರಿಯಡ್ ಮತ್ತು ಶನಿವಾರ ಬೆಳಿಗ್ಗೆಯ ಮೊದಲನೆ ಪೀರಿಯಡ್ ಕೆಂಪೇಗೌಡರದ್ದು. ನಂತರದ ಪೀರಿಯಡ್ ವಿಜಯಲಕ್ಷ್ಮಿಯವರದ್ದು. ಈ ಕೆಂಪೇಗೌಡರು ಸ್ವಲ್ಪ ಮೃದು ಆಸಾಮಿ. ಗಣಿತದಲ್ಲಷೇ ಅಲ್ಲ ಎಡಗೈ ಮತ್ತು ಬಲಗೈ ಎರದರಲ್ಲೂ ಸಮಾನಂತರವಾಗಿ ಕೈ ಬರಹ ವ್ಯತ್ಯಾಸ ತಿಳಿಯದಂತೆ ಬರೆಯುವುದರಲ್ಲಿ (ತ್ರೀ ಈಡಿಯಟ್ಸ್ ಚಿತ್ರದಲ್ಲಿ ಬರುವ ’ವೈರಸ್’ನಂತೆ) ನಿಸ್ಸೀಮರು. ಅದೊಂದು ಶುಕ್ರವಾರ ಸಂಜೆಯ ಕ್ಲಾಸಿನಲ್ಲಿ ಎಲ್ಲರೂ ತೂಕಡಿಸುತ್ತಾ ಕುಳಿದ್ದಾಗ ತಮ್ಮ ಎರಡೂ ಕೈಯಿಂದ ಬೋರ್ಡ್ ಮೇಲೆ ಬರೆಯುತ್ತಾ ಪಾಠದಲ್ಲಿ ಕುತೂಹಲ ಕೆರಳಿಸಲು ವಿಫಲ ಪ್ರಯತ್ನ ನಡೆಸುತ್ತಿರುವಾಗ ಹಿಂದಿನ ಬೆಂಚಿನಲ್ಲಿದ್ದ ಸಂತೋಷನ ಕೈಲಿದ್ದ ಕಾಗದದ ರಾಕೆಟ್ ಸೀದಾ ಹೋಗಿ ಕೆಂಪೇಗೌಡರ ಕಪ್ಪು ಗುಂಗುರು ಕೂದಲಿನೊಳಗೆ ನಾಟಿ ಅವರ ಕೋಪದ ಜೊತೆಗೆ ದುಃಖದ ಕಟ್ಟೆಯೂ ಸ್ಪೋಟಗೊಂಡಿತ್ತು!! "ಹೋಓಓಹೋ!!!" ಎನ್ನುತ್ತಾ ಕಿರುಚುತ್ತಿದ್ದ ನಮ್ಮ ಬಾಯಿಗೆ ಬೀಗ ಹಾಕಿದ್ದು
"ಯಾವನಯ್ಯ ಅವ್ನು?!?!?!" ಎನ್ನುವ ಅವರ ಅದೇ ದುಃಖಭರಿತ ನಡುಕದ ಏರು ಧನಿ!!
"ನಂಗೊತ್ತು ನೀವೆಲ್ಲಾ ಟ್ಯೂಷನ್ಗೋಗ್ತೀರಾ, ಬರೀ ಅಟೆಂಡೆನ್ಸ್ ಗೆ ಮಾತ್ರ ಕಾಲೇಜಿಗ್ಬರ್ತೀರಾಂತ!! ಟ್ಯೂಷನ್ ಫೀಜ್ ಕೊಡಕಾಗ್ದಿರೋ ಬಡವ್ರೂ ಇರ್ತಾರೆ, ಅವ್ರಿಗ್ಯಾಕೆ ತೊಂದ್ರೆ ಕೊಡ್ತೀರಾ? ಇಷ್ಟ ಇಲ್ದಿದ್ರೆ ಎದ್ದೋಗಿ, ಇಲ್ಲಾಂದ್ರೆ ನನ್ತಲೆಮೇಲೆ ದಪ್ಪ ದಿಂಡ್ಗಲ್ಲೆತ್ತಾಕಿ ಸಾಯ್ಸಿಬಿಡಿ!!" ಎನ್ನುತ್ತಾ ನೀರು ತುಂಬಿದ ಕಣ್ಣಾಲೆಗಳಿಂದ ಡೆಸ್ಟರ್ ರಿಜಿಸ್ಟರ್ ಗಳನ್ನೆತ್ತಿಕೊಂಡು ಪಾಠವನ್ನು ಅರ್ಧಕ್ಕೆ ಬಿಟ್ಟು ಹೊರಟು ಹೋದರು.
ಮರುದಿನ ಎಲ್ಲವನ್ನೂ ಮರೆತ ಗೌಡರು ನಗುಮೊಗದೊಂದಿಗೆ ಕಾಲೇಜಿಗೆ ಬಂದರು, ಅಷ್ಟೇ ಖುಷಿಯಿಂದ ನಮ್ಮ ತರಗತಿಯೊಳಗೆ ಬಂದು ತಮ್ಮ ಎಂದಿನ ಅಭ್ಯಾಸಬಲದಂತೆ ಬಾಗಿಲು ಮುಚ್ಚಿ ಟೇಬಲ್ ಬಳಿ ಬಂದು ರಿಜಿಸ್ಟರ್ ಮತ್ತು ಡೆಸ್ಟರ್ ಇಡಲು ನೋಡುತ್ತಾರೆ!! ಜಾಗವೆಲ್ಲಿದೆ? ಟೇಬಲ್ ತುಂಬಾ ’ಒಂದು ದಪ್ಪ ದಿಂಡುಗಲ್ಲು!!!!!!’ಗೌಡರನ್ನು ಅಣಕಿಸುತ್ತಾ ಕುಳಿತಿತ್ತು!!!
ಕೆಂಪೇಗೌಡರ ಮುಖ ಕೆಂಪೆಡರುವುದರ ಜೊತೆಗೆ ಜಂಘಾಬಲವೇ ಉಡುಗಿಹೋಗಿತ್ತು!! ಕಂಪಿಸುವ ಸ್ವರದಿಂದ
"ಯಾರ್ರಿ ಇದ್ನ ಇಲ್ತಂದಿದ್ದು?" ಎಂದರು, ನಿಶಬ್ಧವಾಗಿದ್ದ ಕ್ಲಾಸಿನೊಳಗೆ 
"ನಿನ್ನೆ ನೀವೇ ಹೇಳಿದ್ರಲ್ಲ ಸರ್ ದಿಂಡ್ಗಲ್ಲೆತ್ತಾಕಿ ಸಾಯ್ಸಿಬಿಡಿ!! ಅಂತ!" ಎನ್ನುವ ಉತ್ತರಮಾತ್ರ ಹಿಂದಿನ ಬೆಂಚಿಂದ ಸಂತೋಷನ ಬಾಯಿಂದ ಮೊಳಗಿತ್ತು. ಕೆಂಪೇಗೌಡರು ಕೋಪದಿಂದ ನಮಗೆ ಬೇಕಿದ್ದ ಅಟೆಂಡೆನ್ಸ್ ಸಹ ಹಾಕದೆ ಹೊರಟು ಹೋಗಿದ್ದು  ಸೂರು ಎಗರಿ ಹೋಗುವ ಹಾಗೆ "ಓಹೋ!"" ಎಂದು ಅರಚುತ್ತಿರುವ ನಮ್ಮ ಗಮನಕ್ಕೆ ಬಾರಲೇ ಇಲ್ಲ. ಹಿರಿಕರು ಹೇಳುವಂತೆ ನಗುವಿನೊಡನೆ ಅಳುವೂ ಬರುತ್ತದೆನ್ನುವ ಸತ್ಯ ಮುಂದಿನ ಪೀರಿಯಡ್ ನಲ್ಲೇ ನಮಗೆಲ್ಲಾ ತಿಳಿದು ಹೋಗಿತ್ತು! ಏಕೆಂದರೆ ಮುಂದಿನ ತರಗತಿ ಮಿಸೆಸ್ ಕೆಂಪೇಗೌಡ ಅರ್ಥಾತ್ ಶ್ರೀಮತಿ ವಿಜಯಲಕ್ಷ್ಮೀ ಯವರದ್ದು. ಅವರದ್ದು ಕೆಂಪೇಗೌಡರ ತದ್ವಿರುದ್ದ ಗುಣ.
"ಯಾವನನ್ಮಗನೋ ಅವ್ನು ಕ್ಲಾಸೊಳ್ಗೆ  ಕಲ್ಲು ತಂದಿಡೋನು?? ಧೈರ್ಯ ಇದ್ರೆ ಮುಂದೆ ಬನ್ರೋ!! ಅದೇ ಕಲ್ಲೆತ್ತಾಕಿ ಸಿಗ್ದು ತೋರ್ಣ ಕಟ್ಬಿಡ್ತೀನಿ!!" ಎಂದು ಸಾಕ್ಷಾತ್ ದುರ್ಗಾದೇವಿಯ ಗೆಟಪ್ ನಲ್ಲಿ ನಿಂತಾಗ, ನಮ್ಮೆಲ್ಲರ ಎದೆಯೊಳಗೆ ತಂಬಿಟ್ಟಿಗೆ ಅಕ್ಕಿ ಕುಟ್ಟುವ ಸದ್ದು!!! ಓಡಿ ಹೋಗೋಣ ಅಂದ್ರೆ ಬಾಗಿಲು ಮುಚ್ಚಿದೆ, ಅದಕ್ಕಿಂತ ಹೆಚ್ಚಾಗಿ ಸೊಂಟಕ್ಕೆ ಸೆರಗು ಸಿಕ್ಕಿಸಿ ಕೈಯಲ್ಲಿ ಡೆಸ್ಟರ್ ಅನ್ನು ಲಾಂಗ್ ನಂತೆ ಹಿಡಿದು ನಿಂತಿರುವ ವಿಜಯಲಕ್ಷ್ಮಿ!!
"ಎಷ್ಟೋ ಧೈರ್ಯ ನಿಮ್ಗೆ? ಒಬ್ಬ ಲೆಕ್ಚರ್ನ ಈ ರೀತಿ Humiliate ಮಾಡೋಕೆ?.... ಅದ್ಯಾರು ಅಂತೇಳಿದ್ರೆ ಸರಿ ಇಲ್ಲಾಂದ್ರೆ ಪ್ರಿನ್ಸಿಪಾಲ್ಗೇಳಿ ಪೋಲೀಸ್ನೋರನ್ನ ಕರ್ಸ್ತೀನಿ" ಎಂಬ ಅವಾಜಿಗೆ ಉದಯ ಟೀವಿಯಲ್ಲಿ ಬರುವ ದರಿದ್ರವಾಹಿಗಳ ಕ್ಲೋಸ್-ಅಪ್ ಷಾಟ್ ಗಳು ನಮ್ಮ ನಮ್ಮಲ್ಲಿ ವಿನಿಮಯಗೊಂಡವು!! ಆದರೂ ’ಒಗ್ಗಟ್ಟಿನಲ್ಲಿ ಬಲವಿದೆ’ ಎನ್ನುವುದನ್ನು ತೋರಿಸಲೆಂದೇ ಆ ವಿಚಾರದಲ್ಲಿ ಯಾರೊಬ್ಬರ ತುಟಿಯೂ ಎರಡಾಗಲಿಲ್ಲ, ಕೇವಲ ಸಂತೋಷನನ್ನು ಬಿಟ್ಟು.
"ಹೋಗ್ಲಿ ಬಿಡಿ ಮೇಡಂ!! ಗೌಡ್ರ ಮರ್ಯಾದೆ ಪ್ರಶ್ನೆ!!!" ಎಂಬ ಅವನ ಉತ್ತರ ವಿಜಯಲಕ್ಷ್ಮಿಯವರನ್ನು ’ಗಲಿಬಿಲಿ’ಲಕ್ಷ್ಮಿಯನ್ನಾಗಿ ಮಾಡಿತ್ತು!! ಆ ಕ್ಷಣಕ್ಕೆ ಅವರಿಗೆ ಏನು ಹೇಳಬೇಕೆಂದು ತೋಚದೆ ಹಾಗೆ ಹೇಳಿದ್ದು ಯಾರು ಎಂದು ಹುಡುಕುವ ವಿಫಲ ಪ್ರಯತ್ನದಲ್ಲಿ ಒತ್ತರಿಸಿ ಬರುತ್ತಿದ್ದ ನಗುವನ್ನು ತಡೆಹಿಡಿದ ನಮ್ಮಗಳ ಮುಖ ನೋಡಿ ಮೊದಲೇ ಕೆಂಪಾಗಿದ್ದ ಅವರ ಮತ್ತಷ್ಟು ರಂಗೇರಿ ಅವರ ಸಣ್ಣ ಮೂಗಿನ ಹೊಳ್ಳೆಗಳು ಆಚಾರಿಯ ಕುಲುಮೆಯಂತೆ ಮೇಲೆ ಕೆಳಗೆ ಆಡುತ್ತಾ ಬುಸುಗುಡತೊಡಗಿದ್ದವು!! ಏನು ಹೇಳಬೇಕೆಂದು ತೋಚದೆ
"Belive me I'll never take your class!!" ಎನ್ನುತ್ತಾ ಬಿರುಗಾಳಿಯಂತೆ ಕ್ಲಾಸಿನಿಂದ ಹೊರನಡೆದರು. ಮುಂದುನ ಬೆಂಚಿನ ’ಗಾಂಧೀವಾದಿ’ಗಳಿಗೆ ’ತಾವು ತಪ್ಪು ಮಾಡಿಲ್ಲ’ ಎಂದು ಮೇಡಂಗೆ ಅರುಹುವ ಚಡಪಡಿಕೆಯಿತ್ತು. ಮಧ್ಯದ ಬೆಂಚಿನಲ್ಲಿ ಕುಳಿತ ನಮ್ಮನ್ನೂ ಸೇರಿದಂತೆ ಇತರರೆಲ್ಲರನ್ನು ದುರುಗುಟ್ಟಿ ನೋಡಿ ಮೇಡಂರವರನ್ನು ಓಡೋಡಿ ಹಿಂಬಾಲಿಸಿದರು. ಇದನ್ನರಿತ ಸಂತೋಷನಿಗೆ ಏನೋ ಹೊಳೆದಂತಾಗಿ
"ಲೋ!! ಎಡವಟ್ಟಾಯ್ತು ಬನ್ರಲೇ" ಎನ್ನುತ್ತಾ ಓಡೋಡಿ ಅವರಿಗಿನ್ನ ಮುಂದೆ ಬಂದು ಮೇಡಂ ಎದುರಿಗೆ ಅವನೇ ನಿಂತಿದ್ದ!!! ಈಗ ಅವಾಕ್ಕಾಗುವ ಸರಧಿ ’ಗಾಂಧಿವಾದಿ’ಗಳದ್ದು!!!!
"ಮೇಡಂ ಯಾವನೋ ಬುದ್ದಿಯಿಲ್ದೋನು ಮಾಡಿರೋ ಕೆಲ್ಸುಕ್ಕೆ ನಮ್ಗೆಲ್ಲಾ ಯಾಕೆ ಶಿಕ್ಷೆ ಮೇಡಂ!! ನೀವು ಪಾಠ ಮಾಡ್ಲಿಲ್ಲಾಂದ್ರೆ ಟ್ಯೂಷನ್ ಗೆ ಹೋಗ್ದಿರೋ ನಮ್ಮಂತೋರ್ಗತಿ ಏನು ಮೇಡಂ?" ಎನ್ನುವ ಅವನ ವರಸೆ ನೋಡಿದಾಗ ’ಮಗು ಜಿಗುಟಿ ತೊಟ್ಟಲು ತೂಗುವುದು’ ಎಂದರೇನು ಎಂದು ನಮಗೆಲ್ಲಾ ಅರ್ಥವಾಗಿತ್ತು!
ಅದೇ ರೀತಿ ರಿಟೈರ್ಡ್ ಅಂಚಿನಲ್ಲಿದ್ದ ಜಯಭಾರತಿ ಎನ್ನುವ ’ಪರಮ ಪುರುಷದ್ವೇಶಿ’ಮಹಿಳೆಯೊಬ್ಬರು ಇಂಗ್ಲೀಷ್ ಬೋಧಿಸಲು ಬರುತ್ತಿದ್ದರು. ’ಮಂತ್ರಕ್ಕಿಂತ ಉಗುಳೇ ಹೆಚ್ಚು’ ಅನ್ನುವ ಹಾಗೆ ಅವರು ಪಾಠಮಾಡುತ್ತಿದ್ದಕ್ಕಿಂತ ಗಂಡು ಸಂತತಿಯನ್ನು ಬೈಯ್ಯುವುದರಲ್ಲೇ ಕಾಲಹರಣ ಮಾಡುತ್ತಿದ್ದರು. ಒಂದು ಗಂಟೆಯ ಒಟ್ಟಾರೆ ಸಮಯದಲ್ಲಿ ೧೦ ನಿಮಿಷ ಪಾಠಮಾಡಿದರೆ ಉಳಿದ ೫೦ ನಿಮಿಷ ’ಗಂಡುಸ್ರು ಹಾಗೆ, ಹೀಗೆ’ ಎನ್ನುವುರಲ್ಲೇ ಕಾಲ ಕಳೆಯುತ್ತಿದ್ದರು!! ಒಮ್ಮೆ ಹೀಗೆ ಮಾತನಾಡುತ್ತಾ"ಈ ಗಂಡುಸ್ರು ಪವರ್ ಏನಿದ್ರೂ ಐದೇ ನಿಮಿಷ ಕಣ್ರಿ!!" ಅಂದ್ಬಿಡೋದೇ!!! ಅದರಲ್ಲೂ ಮೀಸೆ ಚಿಗುರುತ್ತಿರುವ, ಬಿಸಿರಕ್ತದ ಯುವಕರ ಮುಂದೆ!! ನಮ್ಮತರಗತಿಯಲ್ಲಿದ್ದ ಅರವತ್ತೂ ಹುಡುಗರಿಗೆ ನಖಶಿಖಾಂತ ಉರಿದುಹೋಯಿತು!! ’ಬಡವನ ಕೋಪ ದವಡೆಗೆ ಮೂಲ’ಎಂಬ ನಾಣ್ಣುಡಿ ಜ್ನಾಪಕಕ್ಕೆ ಬಂದು, ಮನದೊಳಗೆ ಗೊಣಗಿಕೊಳ್ಳುವುದನ್ನು ಬಿಟ್ಟರೆ ಇನ್ನೇನೂ ಮಾಡಲಾಗಲಿಲ್ಲ!! ಆಗ ನಮ್ಮ ಸಹಾಯಕ್ಕೆ ಬಂದವನು ಅದೇ ಸಂತೋಷ!
"ಹೌದು ಮೇಡಂ!! ಗಂಡಸ್ರ ಐದ್ನಿಮ್ಷ ಪವರ್ಗೆ ೯ ತಿಂಗಳು ಕಷ್ಟಪಡೋರು ಹೆಂಗುಸ್ರಲ್ವೇ?" ಎನ್ನುವ ತುಸು ಅಶ್ಲೀಲ ಉತ್ತರದಿಂದ ಜಯಭಾರತಿಯವರ ಬಾಯಿ ಹೊಲಿಯುವುದರ ಜೊತೆಗೆ ನಿಶಬ್ದವಾಗಿ ನಮ್ಮ ಮನದ ಸಮೇತ ಕಣ್ಣುಗಳೂ ಅರಳಿದ್ದವು!! ಅಂದೇ ಕೊನೆ ಜಯಭಾರತಿಯವರು ಪಠ್ಯಬಿಟ್ಟು ಮತ್ಯಾವ ವಿಷಯವನ್ನು ನಮ್ಮ ಸೆಕ್ಷನ್ ನಲ್ಲಿ ಮಾತನಾಡುತ್ತಿರಲಿಲ್ಲ!
ಮತ್ತೊಮ್ಮೆ ಹೊಸದಾಗಿ ನೇಮಕಗೊಂಡ Physics ಲೆಕ್ಚರರ್ ಒಬ್ಬರು ನಮ್ಮ ತರಗತಿಗೆ ಬಂದರು ಅದು ಅವರ ವೃತ್ತಿ ಜೀವನದ ಪ್ರಪ್ರಥಮ ತರಗತಿಯಾಗಿತ್ತು. ಯಥಾ ಪ್ರಕಾರ ಮೊದಲ ತರಗತಿಯಾದ್ದರಿಂದ ತಮ್ಮನ್ನು ತಾವು ಪರಿಚಯಿಸಿಕೊಳ್ಳಲು ಪ್ರಾರಂಬಿಸುತ್ತಾ
"ನನ್ನ ಹೆಸರು ಮಂಜುನಾಥ ಎಂದು! ನಾ ಮಂಗಳೂರಿನವ" ಎನ್ನುತ್ತಿದ್ದಂತೆ ಸಂತೋಷನಿಗೆ ಹಿಂದಿನ ದಿನ ದೂರದರ್ಶನದಲ್ಲಿ ಬಂದಿದ್ದ ಕಾಶಿನಾಥ್ ರವರ ಚಿತ್ರದ ಡೈಲಾಗ್ ಜ್ನಾಪಕಕ್ಕೆ ಬಂದು
"ಓಹೋ!!! ಮಂಗಳೂರು ಮಂಜುನಾಥ!!!" ಎಂದು ಥೇಟ್ ಕಾಶಿನಾಥ್ ಶೈಲಿಯಲ್ಲೇ ಹೇಳಿದಾಗ ಹೊಟ್ಟೆಹುಣ್ಣಾಗುವಂತೆ ನಗುವುದನ್ನು ಮಂಜುನಾಥನಾಣೆಗೂ ತಡೆಯಲಾಗಲಿಲ್ಲ! ಪೆಚ್ಚಾಗಿ ನಿಂತಿದ್ದ ನಮ್ಮ ಹೊಸ ಲೆಕ್ಚರರ್ ಸಾವರಿಸಿಕೊಂಡು
"ಇರಲಿ! ಈಗ ನಿಮ್ಮ ಹೆಸರು, ಮುಂದೆ ನೀವೇನು ಆಗ್ಲಿಕ್ಕೆ ಬೇಕಂತೀರಾ ಹೇಳಬೇಕು ಆಯ್ತಾ?" ಎನ್ನುತ್ತಾ ಎಲ್ಲರ ಪರಿಚಯ ಕಾರ್ಯಕ್ರಮ ಮುಗಿಯುತ್ತಿದ್ದಂತೆ"ಸರ್! ನೀವೇನಾಗ್ಬೇಕು ಅನ್ಕಂಡಿದ್ರೀ?" ಎನ್ನುವ ಪ್ರಶ್ನೆ ನಮ್ಮ ಮತ್ತೊಬ್ಬ ಸಹಪಾಠಿ ವಿಕ್ಟರ್ ನಿಂದ ತೂರಿಬಂತು.
"ನಾ ಇಂಜಿನಿಯರ್ ಆಗಬೇಕೆಂದಿದ್ದೆ! ಆದರೆ ಆಗಲಿಲ್ಲ" ಎನ್ನುವ ಮಂಜುನಾಥರ ಪ್ರಾಮಾಣಿಕ ಉತ್ತರಕ್ಕೆ
"ತಿಕ ಬಗ್ಸಿ ಓದಿದ್ರೆ ಆಯ್ತಿದ್ದೆ!!" ಎನ್ನುವ ಮಂಡ್ಯ ಸೊಗಡಿನ ಸಂತೋಷನ ಡೈಲಾಗಿಗೆ ತರಗತಿಯಿಂದ ಹೊರಬಿದ್ದ ನಗು ಕಾಲೇಜಿಗೆಲ್ಲಾ ಕೇಳಿಸಿತ್ತು!!
ಇಂಥಹ ’ಸಂತೋಷ’ದ ದಿನಗಳಿಗೆ ಕೊನೆಗೂ ಪರೀಕ್ಷಾಸಮಯ ಮೊಳೆ ಹೊಡೆದಿತ್ತು. ದ್ವಿತಿಯ ಪಿ.ಯು.ಸಿ ಆದ್ದರಿಂದ ಎಲ್ಲರಿಗೂ ಓದಲೇ ಬೇಕಾದ ಜರೂರತ್ತು! ಒದಿದ್ದೂ ಆಗಿತ್ತು, ಪರೀಕ್ಷೆಯೂ ಮುಗಿಯುತ್ತಾ ಬಂದಿತ್ತು. ಸಂತೋಷ ಎಲ್ಲಾ ಪತ್ರಿಕೆಗಳಿಗೂ ತುಂಬಾ ಚೆನ್ನಾಗಿಯೇ ಉತ್ತರಿಸಿದ್ದರೂ
"ಇಲ್ಲಾ ಮಗ! ಚೆನ್ನಾಗ್ಮಾಡಿಲ್ಲ!" ಎನ್ನುತ್ತಿದ್ದ ಅವನು ಚೆನ್ನಾಗಿಯೇ ಓದುತ್ತಾನೆಂಬುದು ಪ್ರಿಪರೇಟರಿ ಮತ್ತು ಟ್ಯೂಷನ್ ಗಳ್ ಪರೀಕ್ಷೆಗಳಲ್ಲಿ ತಿಳಿದಿದ್ದರಿಂದ ಅವನು ತಮಾಷೆ ಮಾಡುತ್ತಿದ್ದಾನೆಂಬುದು ಎಲ್ಲರಿಗೂ ತಿಳಿದ ಸತ್ಯ ಸಂಗತಿಯಾಗಿತ್ತು. ಕೊನೆಯ ದಿನ ಗಣಿತ ಪರೀಕ್ಷೆ ಇತ್ತು, ಆದಾದ ನಂತರ ಬಳಿಬಂದ ಸಂತೋಷ ಅದೇ ಡೈಲಾಗನ್ನು ರಿಪೀಟ್ ಮಾಡಿದ್ದ. ಅವನ ಮಾತಿಗೆ ಎಂದಿನಂತೆ ಗೇಲಿಮಾಡಿ
"ಇರ್ಲಿ ಬಿಡು ಮಗಾ ಸೆಪ್ಟಂಬರ್ ಇರೋದೇ ಅದ್ಕಲ್ವೇ?" ಎಂದು ರೇಗಿಸುತ್ತಾ ಫಸ್ಟ್ ಶೋ ಫಿಲಂಗೆ ಹೋಗುವುದು, ಎಲ್ಲರೂ ೪ ಗಂಟೆಗೆ ಥಿಯೇಟರ್ ಬಳಿ ಬರುವುದೆಂದು ನಿಷ್ಕರ್ಷಿಸಿ ಮನೆಯೆಡೆಗೆ ಸೈಕಲ್ ತುಳಿದೆವು. ಈಗಿನ ಹಾಗೆ ಆಗೆಲ್ಲಾ ಮೊಬೈಲ್ ಇರಲಿಲ್ಲ ಲ್ಯಾಂಡ್ ಲೈನೇ ಗತಿಯಾಗಿತ್ತು. ಮಧ್ಯಾನ್ಹ ಮೂರುಗಂಟೆಗೆ ಮತ್ತೊಬ್ಬ ಉಮಾಶಂಕರನ ಮನೆಗೆ ಹೋಗುವುದಕ್ಕೂ ಅವರ ಮನೆಯ ಫೋನ್ ರಿಂಗಣಿಸುದಕ್ಕೂ ಒಂದೇ ಆಯ್ತು. ಆದರೆ ಆ ರಿಂಗು ಸಂತೋಷನ ಸಾವಿನ ಸುದ್ದಿಯಾಗುತ್ತದೆಂದು ನಾವ್ಯಾರೂ ಭಾವಿಸಿರಲಿಲ್ಲ!!
ಹೌದು!! ’ಗಣಿತ ಪರೀಕ್ಷೆಯಲ್ಲಿ ಸರಿಯಾಗಿ ಉತ್ತರಿಸಿಲ್ಲ, ಫೇಲಾದರೆ ಅಪ್ಪ ನನ್ನನ್ನು ಕೊಂದುಬಿಡುತ್ತಾರೆ ಅದರ ಬದಲು ನಾನೇ ಸಾಯುವುದು ಮೇಲೆಂದು ’ಬಗೆದು ಸಂತೋಷ ಶತಾಬ್ದಿ ರೈಲಿಗೆ ತಲೆಕೊಟ್ಟಿದ್ದ! ರುಂಡ ಚಿದ್ರಗೊಂಡ ದೇಹದಿಂದ ಮೈಲು ದೂರ ಬಿದ್ದಿತ್ತು!! ಅವನಪ್ಪನ ’ಸ್ಟಿಕ್’ನೆಸ್ ಅವನ ಪ್ರಾಣವನ್ನೇ ಬಲಿಯಾಗಿ ಪಡೆದಿತ್ತು!!
ಆದರೆ ತಿಂಗಳ ನಂತರ ಬಂದ ಫಲಿತಾಂಶದಲ್ಲಿ ಸಂತೋಷ ಎಲ್ಲಾ ಪತ್ರಿಕೆಗಳಲ್ಲೂ ಡಿಸ್ಟಿಂಕ್ಶನ್ ನಲ್ಲಿ ಪಾಸಾಗಿದ್ದದ್ದು ಅವರಪ್ಪನ ಅಹಂಮ್ಮಿಗೆ ಸರಿಯಾದ ಗುದ್ದು ನೀಡಿತ್ತು.
ಆದರೆನು ಪ್ರಯೋಜನ!! ಕಾಲಮಿಂಚಿತ್ತು ಇದ್ದ ಒಬ್ಬ ಮಗ ಬಾರದ ಲೋಕಕ್ಕೆ ಹೋಗಿದ್ದ!!

ಲೇಖಕರು

ಉಮಾಶಂಕರ ಬಿ.ಎಸ್

ಕಾಡುವ ಮನದ ಕನವರಿಕೆಗಳು.....

ಪೂರ್ತಿ ಕಪ್ಪಗೆ, ಸರಾಸರಿ ಎತ್ತರ, ನೋಡಿದ ಕೂಡಲೆ ಕಾಣುವ ಬಿಳಿ ಹಲ್ಲು, ನೀಟಾಗಿ ಬಾಚಿದ ಕೂದಲು, ವಟಗುಟ್ಟುವ ಕಪ್ಪೆ ಹಾಗೆ ಮಾತನಾಡುವವರು ಯಾರಾದರು ಎದುರು ಬಂದರೆ ಅದು ಖಂಡಿತ ನಾನೇ ಆಗಿರುತ್ತೇನೆ

ಅನಿಸಿಕೆಗಳು

ವಿ.ಎಂ.ಶ್ರೀನಿವಾಸ ಮಂಗಳ, 08/09/2011 - 16:18

ನಮಸ್ತೇ ಬಾಸೂ..!ನಿಜಕ್ಕೂ ನಾನು ಇತ್ತೀಚಿಗೆ ಓದಿ ನಕ್ಕದ್ದು  ನಿಮ್ಮ ಮಾತ್ರ ಅದೆಷ್ಟು ಸುಂದರವಾಗಿ ನಿರೂಪಿಸಿದ್ದೀರಿ ಅಂದರೆ, ಎಲ್ಲೂ ಬೋರೆನಿಸುವುದೇ ಇಲ್ಲ. ಪ್ರತಿ ಘಟನೆ, ಬಳಸಿದ ಭಾಷೆ ಎಲ್ಲವೂ ನಮ್ಮ-ನಿಮ್ಮವೇ ಎಂಬಷ್ಟು ಆಪ್ತ ,ಪರಮಾಪ್ತ.  ಸಂತೋಷನ ಸಾವಿನ ಸುದ್ದಿ ತಡೆದುಕೊಳ್ಳಲಾಗಲಿಲ್ಲ. ಮನದ ಮೂಲೆಯಲ್ಲಿ ಬಿಟ್ಟಿ ಬಿಡದಂಗೆ ರಿಂಗಣಿಸುತ್ತಿದೆ. ತುಂಬಾ ದಿನ ಕಾಡುವ ಲೇಖನಕೊಟ್ಟಿದ್ದೀರಿ ಸಾರ್.

ಉಮಾಶಂಕರ ಬಿ.ಎಸ್ ಗುರು, 08/11/2011 - 16:06

ಶ್ರೀನಿವಾಸ್ ಸರ್,ನಿಮ್ಮ ಪ್ರೋತ್ಸಾಹಭರಿತ ನುಡಿಗಳಿಗೆ ಅನಂತಾನಂತ ಧನ್ಯವಾದಗಳುನಿಮ್ಮ ಉಮಾಶಂಕರ

ವಿ.ಎಂ.ಶ್ರೀನಿವಾಸ ಮಂಗಳ, 08/09/2011 - 16:21

ಅದು ಬಿಟ್ಟಿ ಅಲ್ಲ ಸಾರ್ ಬಿಟ್ಟು ಬಿಡದಂಗೆ

ಬಾಲ ಚಂದ್ರ ಧ, 08/10/2011 - 09:47

ಉಮಾ ಶಂಕರಣ್ಣ,ಸಿನಿಮೀಯ ಭಾಷೆಯಲ್ಲಿ ಹೇಳುವುದಾದರೆ ನಿಮ್ಮ ಲೇಖನ ನಗಿಸುತ್ತಲೇ ಕಣ್ಣಂಚನ್ನು ತೇವವಾಗಿಸುತ್ತದೆ. ಸಂತೋಷನ ಎಲ್ಲಾ ತರಲೆ ತುಂಟಾಟಗಳು ನಮ್ಮ ಕಾಲೇಜು ದಿನಗಳನ್ನು ನೆನಪಿಸಿದ್ದು ಸುಳ್ಳಲ್ಲ. ಜೊತೆಗೆ ಕಡು ಶಿಸ್ತನ್ನು ಬೋಧಿಸುವ ಪೋಷಕರಿಗೆ ಇದೊಂದು ಎಚ್ಚರಿಕೆ ಕೂಡತನ್ನ ಸುತ್ತಲಿನ ಸನ್ನಿವೇಶವನ್ನು ಅಷ್ಟೆಲ್ಲಾ ನಗಿಸಿ ತಾನೂ ನಕ್ಕು ಹೆಸರಿಗೆ ಅನ್ವರ್ಥವಾಗಿದ್ದ ಹುಡುಗ ಕ್ಷುಲ್ಲಕ ಕಾರಣಕ್ಕೋಸ್ಕರ ಆತ್ಮಹತ್ಯೆಯ ದಾರಿ ಹಿಡಿದಿದ್ದು ನಿಜಕ್ಕೂ ವಿಷಾದನೀಯ.ಏನೇ ಇರಲಿ,ನೆನಪಿನ ಬುತ್ತಿಯಿಂದ ಚೆಂದವಾದ ನೆನಪುಗಳನ್ನು ಆಯ್ದು ನಮಗೆ ನೀಡಿದ್ದೀರಿ. ಓದುವವರನ್ನು ನಗಿಸಿ ನೋವಿಗೀಡು ಮಾಡಿದ್ದೀರಿ.ಧನ್ಯವಾದಸಸ್ನೇಹಬಾಲ ಚಂದ್ರ 

ಉಮಾಶಂಕರ ಬಿ.ಎಸ್ ಗುರು, 08/11/2011 - 16:11

ಹೌದು ಬಾಲಣ್ಣಅವನಿಗೆ ಬಹಳವೇ ಉಜ್ವಲವಾದ ಭವಿಷ್ಯವಿತ್ತು. ಒಂದೇ ಒಂದು ಕೆಟ್ಟಕ್ಷಣದ ಆತುರದತೀರ್ಮಾನ ಅವನ ಅವನನ್ನು ನಂಬಿದವರನ್ನು ಕತ್ತಲಲ್ಲಿಟ್ಟಿದ್ದು ಸತ್ಯನಿಮ್ಮ ಪ್ರತಿಕ್ರಿಯೆಗಳಿಗೆ ಅನಂತಾನಂತ ಧನ್ಯವಾದಗಳು.ನಿಮ್ಮಉಮಾಶಂಕರ

K.N.Ravi ಧ, 08/10/2011 - 14:34

ಸುಂದರವಾದ ನಿರೂಪಣೆಯೊಂದಿಗಿನ ಹನಿಕಣ್ಣೀರು ನನ್ನ ಮನವ ಕಲಕಿತು ಸರಳವಾದ ನುಡಿ ಓದುಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ

ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 08/11/2011 - 11:08

ಓಹೋ!! ಏನಣ್ಣ ಭ್ರಷ್ಟಾಚಾರದ ಹೋರಾಟ ಸಾಕಾಗೊಯ್ತಾ? ಅದೆಲ್ಲಾ ಬಿಟ್ಟುಸಂತೋಷನ ಕಥೆಯನ್ನ ಚೆನ್ನಾಗಿಯೇ ಬರ್ದಿದ್ದೀ, ಪರ್ವಾಗಿಲ್ಲ ನಿಂಗೂ ಕಥೆ ಹೇಳೋಕೆ ಬರುತ್ತೆ

ಉಮಾಶಂಕರ ಬಿ.ಎಸ್ ಗುರು, 08/11/2011 - 16:19

ರವಿ ಮತ್ತು ಅನಾಮಿಕರೆನಿಮ್ಮ ಅಭಿಮಾನಭರಿತ ನಿಡಿಗಳಿಗೆ ನಾ ಚಿರರುಣಿಅಂತೆಯೇ ಭ್ರಷ್ಟಾಚಾರವೆಂಬ ಮದ್ದೇ ಇಲ್ಲದ ಅರ್ಬುದ ರೋಗದೊಡನೆ ಹೋರಾಟಕೊನೆವರೆಗೂ ನಿಲ್ಲುವುದಿಲ್ಲ. ಊಟದ ಮಧ್ಯೆ ಉಪ್ಪಿನ ಕಾಯಿ ಎನ್ನುವಂತೆ ಮಧ್ಯೆ ನನ್ನ ನೆನಪಿನಲ್ಲಿದ್ದ ಒಂದು ಘಟನೆ ಬರೆಯೋಣವೆನ್ನಿಸಿತು ಅಷ್ಟೆ.ನಿಮ್ಮ ಉಮಾಶಂಕರ

ಉಮಾಶಂಕರ ಬಿ.ಎಸ್ ಗುರು, 08/11/2011 - 16:19

ರವಿ ಮತ್ತು ಅನಾಮಿಕರೆನಿಮ್ಮ ಅಭಿಮಾನಭರಿತ ನಿಡಿಗಳಿಗೆ ನಾ ಚಿರರುಣಿಅಂತೆಯೇ ಭ್ರಷ್ಟಾಚಾರವೆಂಬ ಮದ್ದೇ ಇಲ್ಲದ ಅರ್ಬುದ ರೋಗದೊಡನೆ ಹೋರಾಟಕೊನೆವರೆಗೂ ನಿಲ್ಲುವುದಿಲ್ಲ. ಊಟದ ಮಧ್ಯೆ ಉಪ್ಪಿನ ಕಾಯಿ ಎನ್ನುವಂತೆ ಮಧ್ಯೆ ನನ್ನ ನೆನಪಿನಲ್ಲಿದ್ದ ಒಂದು ಘಟನೆ ಬರೆಯೋಣವೆನ್ನಿಸಿತು ಅಷ್ಟೆ.ನಿಮ್ಮ ಉಮಾಶಂಕರ

ವಿನಯ್_ಜಿ ಗುರು, 08/11/2011 - 18:23

ಉಮಾಶಂಕರ್ ರವರೆ,
ಸುಂದರ ನಿರೂಪಣೆಯೊಂದಿಗೆ ಮನಸ್ಸನ್ನು ಕಲುಕಿತು ನಿಮ್ಮ ಲೇಖನ. ಸಂತೋಷನ ಒಂದು ಆತುರದ ನಿರ್ಧಾರ ಪಾಪ ಅವನ ಜೀವನವನ್ನೇ ಕೊನೆಗಾಣಿಸಿದ್ದನ್ನ ತಿಳಿದು ನಿಜಕ್ಕೂ ಬೇಸರವಾಯಿತು... :(
-- ವಿನಯ್

ಉಮಾಶಂಕರ ಬಿ.ಎಸ್ ಶನಿ, 08/13/2011 - 15:03

ಶ್ರೀ ವಿನಯ್ ರವರೆ,ಮೊದಲಿಗೆ ನನ್ನ ಲೇಖನ ಓದಿ ಪ್ರೋತ್ಸಾಹಭರಿತ ನುಡಿಗಳನ್ನಾಡಿದ್ದಕ್ಕೆ ನಾ ಚಿರಋಣಿ,ಆದರೂ ಇಲ್ಲಿ ಸಂತೋಷನ ತಂದೆಯದು ತಪ್ಪೆಂದು ಅನ್ನಿಸಿಲ್ಲ.ಆದರೆ ಖಂಡಿತಾ ಸರಿಯೆಂದು ಹೇಳಲು ಬರುವುದಿಲ್ಲ. ಯಾವ ತಂದೆ ತಾಯಿಗಳಿಗೆ ತಾನೆ ತಮ್ಮ ಮಕ್ಕಳು ಚೆನ್ನಾಗಿರಲೆಂದು  ಭಾವಿಸುದಿಲ್ಲ ಅಲ್ಲವೇ? ಆದರೆ ಅದನ್ನು ಹೇಳುವ ರೀತಿ ವ್ಯಕ್ತಿಯಿಂದ ಬದಲಾಗುತ್ತದೆ.ಅಲ್ಲದೆ ವಯಸ್ಸು  ಯಾವುದೇ ಆದರೂ ಅದಕ್ಕನುಗುಣವಾಗಿ ಒದಗಿಬರುವ ಸಂಧರ್ಭಗಳಿಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳುವ     ಹಕ್ಕು ಪ್ರತಿಯೊಬ್ಬರಿಗೂ ಇರುತ್ತದೆ, ಅದನ್ನು ತೆಗೆದುಕೊಳ್ಳುವ ಜವಾಬ್ದಾರಿ, ಮತ್ತು ಅದನ್ನು ತೆಗೆದುಕೊಳ್ಳುವಂತೆ ಬೆಳೆಸುವ ಕರ್ತವ್ಯ ತಂದೆ ತಾಯಿರದ್ದು ಎಂದು  ನನ್ನ ಭಾವನೆ.ಮತ್ತೊಮ್ಮೆ ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳುನಿಮ್ಮ ಉಮಾಶಂಕರ

ರುದ್ರಸ್ವಾಮಿಸುಜ… (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 08/12/2011 - 17:56

       ನಮಸ್ತೆ ಉಮಶಂಕ್ರಣ್ಣೊ......                        ನಾನೂ ಮಂಡ್ಯದವ್ನೆ,,ಮಂಡ್ಯ ಭಾಷೆಯ ಸಂತೋಷ್ನ ಡೈಲಾಗ್ ಪಸಂದಾಗಿ ವಿವರಿಸಿದ್ದೀರ.ಕಡೆಲಿರೊ ಸೆಂಟಿಮೆಂಟ್ ನಂಗಂತ್ತು ಒಂದು ಕ್ಷಣ ಕಣ್ಣಲ್ಲಿ ನೀರ್ ಬಂತು.ಈ ನಿಮ್ಮ ಕಥೆನ ಸಂತೋಷ್ ನಂತ ತಂದೆಯವರು ಮೊದ್ಲು ಓದ್ಬೇಕು.

ಉಮಾಶಂಕರ ಬಿ.ಎಸ್ ಶನಿ, 08/13/2011 - 16:19

ನಮ್ಸ್ಕಾರ ಮಳವಳ್ಳಿ ತ್ಲ್ಲೋಕ್ನ ಸುಜ್ಲೂರು ರುದ್ರ ಸ್ವಾಮ್ಗೊಳ್ಗೆ.ಏನ್ ಬುದ್ದಿ ಗಂಗಾ ತಿಯೇಟ್ರಲಿ ಯಾವ ಪಿಚ್ಚರ್ರು. ಇರ್ಲಿ ಬುಡಿ ಅದೆಲ್ಲನುವೆ ಆಮೇಕೆ ಮಾತಾಡವಾನೀವೂ ಮಂಡಿದೋರು ತಿಳ್ಕಂಡು ಬಲೇ ಕುಶಿಯಾಯ್ತು. ನಿಮ್ ಪ್ರೀತಿ ನಮ್ಯಾಲೆ ಇಂಗೇ ಇರ್ಲಿನಿಮ್ಮೋನೆಯಾಉಮಾಶಂಕರ

Lokesh Kumar (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 08/13/2011 - 02:39

Tumba chennagide.

ಉಮಾಶಂಕರ ಬಿ.ಎಸ್ ಶನಿ, 08/13/2011 - 16:20

ಬಹಳ ಧನ್ಯವಾದಗಳು ಲೋಕೇಶ್ ಸರ್ನಿಮ್ಮ ಉಮಾಶಂಕರ

venkatb83 ಮಂಗಳ, 08/16/2011 - 14:09

ಮನ ಕಲಕುವ ಬರವಣಿಗೆ ,ಮಂಡ್ಯ  ಭಾಷೆಯಲ್ಲಿ ಓದೋದೇ ಖುಷಿ. ನಿಮ್ಮ ಸಾಲು ಸಾಲು ಲೇಖನಗಳು ಹೀಗೆಯೇ ಮುಂದುವರೆಯಲಿ..

ಉಮಾಶಂಕರ ಬಿ.ಎಸ್ ಭಾನು, 08/28/2011 - 12:29

ವೆಂಕಟ್ ಸರ್ನಿಮ್ಮ ಪ್ರತಿಕ್ರಿಯೆಗಳಿಗೆ ಅನಂತಾನಂತ ಧನ್ಯವಾದಗಳುನಿಮ್ಮಉಮಾಶಂಕರ

Bheema (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 10/03/2011 - 14:04

Excellent Narration......Thumba olle kathe. nimma baravanige chennagide.keep writing.

ಸ್ಪಂದನ ಸೋಮ, 10/17/2011 - 10:10

ಉಮಾಶಂಕರ್ ರವರೆ,
ನಿಮ್ಮ ಲೇಖನಗಳನ್ನು ಓದಿದ್ದೇನೆ, ನಿಮ್ಮ ಬರವಣೆಗೆಯ ಶೈಲಿ, ಕಥೆಯನ್ನು ಹೆಣೆಯುವ ರೀತಿ ತುಂಬಾ ಚೆನ್ನಾಗಿದೆ. ನಿಜ ಜೀವನಕ್ಕೆ ಹತ್ತಿರವಾಗಿರುವ ಈ ಲೇಖನ ನಿಮ್ಮ ನಿರೂಪಣಾ ಶೈಲಿಂದ ಮನಸ್ಸಿಗೂ ಹತ್ತಿರವಾಗಿದೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.