
ಮೇಘಮಲ್ಹಾರ
ನಾನು ಬಹಳ ಹಿಂದೆ ಮಲೆನಾಡ ನಡುವಿನ ವಸತಿ-ಶಾಲೆಯಲ್ಲಿ ಓದುತ್ತಿರುವಾಗ ಮೊದಲ ಮಳೆಯೆಂದರೆ...
ಏಪ್ರಿಲ್-ನ ದಿನಗಳಲ್ಲಿ ಅಂಥಾ ಮಲೆನಾಡಿನಲ್ಲೂ ಸಳ ಸಳ ಬೆವರು, ಮರಗಿಡಗಳೆಲ್ಲ ಬೋಳು ಬೋಳು. ಮಳೆಯಗರ್ಭ ಕಟ್ಟುವ ದಿನ ಬೆಳಿಗ್ಗೆಯಂತೂ ಸುಡು ಸುಡು ಬಿಸಿಲು, ಎಲ್ಲರ ಬಾಯಲ್ಲಿ 'ಇವತ್ತು ಮಳೆ ಹೊಡೆಯುತ್ತೆ!' ಎಂಬ ಭವಿಷ್ಯವಾಣಿ, ಮಧ್ಯಾಹ್ನದ ಹೊತ್ತಿಗೆ ಮೋಡಗಳೇ ಇರದಿದ್ದ ಸುಡುನೀಲಿ ಆಗಸದಲ್ಲಿ ಮೋಡಗಳ ಸಂಚಲನ; ಮೊದಮೊದಲು ಸಣ್ಣ ಸಣ್ಣ ಮೋಡಗಳು, ನಂತರ ಬೃಹದಾಕಾರದ ಕಪ್ಪು ಮೋಡಗಳು, ಚಳುವಳಿಗೆ ಆಗಮಿಸುತ್ತಿರುವ ಜನರಂತೆ ಮೆಲ್ಲನೇ ಒಗ್ಗೂಡುತ್ತವೆ. ಮದ್ಯಾಹ್ನದ ಊಟದಲ್ಲಿ ಎಲ್ಲರ ಹಣೆಯಲ್ಲಿ ಬೆವರು, ಸೆಖೆಯಿಂದಾಗಿ ಮಾತೇ ಹೊರಡದ ಮೌನ ಕೂಟ...
ಆಮೇಲೆ ಶುರುವಾಗುತ್ತವೆ ಸುಳಿಗಾಳಿಗಳು, ಭರ್ರನೇ ಎಲ್ಲಿಂದಲೋ ಹುಟ್ಟಿಕೊಂಡು ಒಣಹಾಕಿದ್ದ ಬಟ್ಟೆಬರೆಗಳು, ತರಗೆಲೆಗಳು, ಧೂಳನ್ನೆಲ್ಲ ಕಸಿದುಕೊಂಡು ಸುತ್ತಿ-ಸುತ್ತಿಸಿ ತಟ್ಟನೆ ಬಯಲ ಮಧ್ಯಕ್ಕೊಯ್ದು ಎಸೆದು ತಟಸ್ಥವಾಗುತ್ತವೆ; ಮತ್ತೆಲ್ಲೋ ಶುರುವಾಗುತ್ತವೆ. ಬೆಳಕು ಮಂದವಾಗುತ್ತದೆ, ಆಕಾಶದಲ್ಲೀಗ ಒಂದಿನಿತೂ ನೀಲಿಯಿಲ್ಲ; ಕಾರ್ಖಾನೆಯ ಕಪ್ಪು ಹೊಗೆ ವ್ಯಾಪಿಸಿದಂತೆ ಎಲ್ಲ ಕಪ್ಪಗಾಗಿದೆ. ಹುಡುಗರೆಲ್ಲ ಹೊರಹಾಕಿದ್ದ ಬಟ್ಟೆಗಳನ್ನು ಆರಿಸಿಕೊಳ್ಳುತ್ತಿದ್ದಾರೆ; ಮಳೆಗೆ ಮುನ್ನ ಸ್ಕೂಲು-ರೂಮು ತಲುಪಲು ಓಡುತ್ತಿದ್ದಾರೆ; ರೂಮಿನಲ್ಲಿ ಮಡಿಸಿಟ್ಟಿದ್ದ ಚತ್ರಿ, ರೈನ್-ಕೋಟ್-ಗಳ ಹೊರತೆಗೆದು ಧೂಳು ಕೊಡವುತ್ತಿದ್ದಾರೆ. ಯುದ್ಧದ ಮುಂಚಿನ ಉಧ್ಘೋಷದಂತೆ ಶುರುವಾಗಿದ್ದ ಸುಂಟರಗಾಳಿಗಳೂ ಶಕ್ತಿ ಕಳೆದುಕೊಂಡು ಸಣ್ಣಗಾಗುತ್ತವೆ; ಕ್ಷಣದಲ್ಲಿ ಹುಟ್ಟಿ, ಅಲ್ಲೇ ಬಯಲಲ್ಲಿ ಕ್ಷಣಾರ್ಧದಲ್ಲಿ ಸತ್ತೂ ಬಿಡುತ್ತವೆ. ದೂರದಾಗಸದಲ್ಲಿ ಹಕ್ಕಿಗಳ ಹಿಂಡೊಂದು ತ್ವರೆಯಿಂದ ಹಾರುತ್ತಿದೆ...
ಈಗ ಗಾಳಿಯಿಲ್ಲದ, ಸಂಚಲನೆಯಿಲ್ಲದ, ಉಸಿರುಕಟ್ಟಿಸುವಂತಹ ಧ್ಯಾನ ಮೌನ, ಪ್ರಪಂಚವೇ ಸ್ತಬ್ಧವಾದಂತೆ, ಪ್ರಳಯಕಾಲದ, ಮಹಾ ಉತ್ಪಾತದ ಮುಂಚಿನ ಸಮಯದಂತೆ ಅನಿಸುತ್ತದೆ, ನಂತರ ಕವಿದುಕೊಂಡಿರುವ ಮೇಘಮಾಲೆ ದೂರದಂಚಿನಲ್ಲಿ ಹರಿದುಕೊಂಡಿದ್ದು ಕಾಣುತ್ತದೆ; ಕಡುಬೂದಿ ತೆರೆಯೊಂದು ಮೋಡದಂಚಿನಿಂದ ಶುರುವಾಗಿ ನಮಗೆ ಕಾಣದ ದೂರದ ನೆಲಮುಟ್ಟಿದೆ; ಅಲ್ಲಿ ಆಗಲೇ ಆಕ್ರಮಣ ಶುರುವಾಗಿದೆ, ನೋಡ ನೋಡುತ್ತಿದ್ದಂತೆಯೇ ಇಲ್ಲಿಯೂ ಶುರುವಾಗುತ್ತದೆ!
ತಟ್ಟನೇ ಮದ್ದುಗುಂಡುಗಳ ಆಕ್ರಮಣವಾದಂತೆ ಚಟಚಟನೆ ಶುರುವಾಗುವ ಮಳೆಹನಿಗಳು ನಿಮಿಷಾರ್ಧದಲ್ಲಿ ಭೋರ್ಗರೆಯುವ ಜಡಿಮಳೆಯಾಗುತ್ತವೆ. ಹನಿಗಳ ರಭಸ ನಿಜವಾಗಿಯೂ ನೆಲವ ಸೀಳಿ, ಅಡಗಿದ್ದ ಬೇಸಿಗೆಯ ಬಿಸಿಯನ್ನೆಲ್ಲ ಬಗೆದುಹಾಕುವಂತಿದೆ, ಕಿಟಕಿಯಿಂದ ಕೈ ಹೊರಹಾಕಿದರೆ ಕೈಯನ್ನೇ ಕೆಳಕ್ಕದುಮುವಂತಹ ಭರ್ಜರಿ ಮಳೆ, ಕಿಟಕಿಯಿಂದೊಳಗೆ ಹೆಚ್ಚಾಗುವ ಸಳ-ಸಳ ಬೆವರು...
ಮೆಲ್ಲನೆ ಮೊದಲಿಗೆ ಬಹಳ ನವಿರಾಗಿ, ನಂತರ ಗಾಧವಾಗಿ, ಬಿಸಿಲಲ್ಲಿ ಸುಟ್ಟು ಮಳೆಯಲ್ಲಿ ಬೆಂದ ಮಣ್ಣಿನ ಸುವಾಸನೆ ಎಲ್ಲರನ್ನೂ ವ್ಯಾಪಿಸಿಕೊಳ್ಳುತ್ತದೆ, ಎಲ್ಲರಲ್ಲೂ ಆಹ್ಲಾದ ಮೂಡಿಸುತ್ತದೆ. ಮಳೆಯಿಂದ ತಪ್ಪಿಸಿಕೊಳ್ಳಲಾಗದೇ ನೆನೆದು ಬಂದವರು ನಗುತ್ತಿದ್ದಾರೆ, 'ಏನು ಫೋರ್ಸು ಮಾರಾಯ! ಮೈಯನ್ನೆಲ್ಲ ಜರಡಿ ಮಾಡಿ ಹಾಕುವಂತಿದೆ!' ಮುಂದಿನರ್ಧ ಗಂಟೆಯಲ್ಲಿ ಹಾಸ್ಟೆಲಿನ ಮುಂದಿರುವ ಬಯಲ ತುಂಬೆಲ್ಲ ಹರಿಯುವ ಸಣ್ಣ ಸಣ್ಣ ನೀರಿನ ಝರಿಗಳ ಸೃಷ್ಟಿಯಾಗುತ್ತದೆ. ಸ್ನೇಹಿತನೊಬ್ಬ ಕಿರುಚುತ್ತಾನೆ, 'ಅಯ್ಯಯ್ಯೋ ನನ್ನ ಶರ್ಟು ನೋಡ್ರೋ, ಒಣ ಹಾಕಿದ್ದು ಮರ್ತೇಬಿಟ್ಟಿದ್ದೆ!' ಅವನ ಶರ್ಟು ನೀರಿನಲ್ಲಿ ಮುಳುಗೇಳುತ್ತಿರುವ ದೋಣಿಯಂತೆ ಕಾಣುತ್ತಿದೆ; ತನ್ನ ಗಮ್ಯದೆಡೆಗೆ ಸಾಗುತ್ತಿದೆ...
ರಾತ್ರಿಯಾದರೂ ಮಳೆ, ಅದರ ರಭಸ ಕಮ್ಮಿಯಾಗಿಲ್ಲ. ಅದು ಸಧ್ಯಕ್ಕೆ ಕಡಿಮೆಯಾಗುವ ಲಕ್ಷಣಗಳನ್ನೂ ತೋರದೇ ತನ್ನ ಸುರಿಯುವಿಕೆಯಲ್ಲೂ ಒಂದು ಹಿತವಾದ ತಾನ ಹಿಡಿದುಕೊಂಡಿದೆ. ಕರೆಂಟು ಮಳೆಮೋಡವಾದಾಗಲೇ ಹೊರಟುಹೋಗಿದೆ, ಹೊರಹೋಗಲು ಹುಡುಗರೆಲ್ಲ ತಂತಮ್ಮ ಚತ್ರಿ -ರೈನ್-ಕೋಟ್-ಗಳ ಆಶ್ರಯಿಸಿದ್ದಾರೆ, ಇಲ್ಲದವರು ಇರುವ ಸ್ನೇಹಿತರ ಜೊತೆ ಹೋಗಲು ಬೇಡುತ್ತಿದ್ದಾರೆ, ಗಾಳಿಯಿಲ್ಲದೇ ಸೆಖೆ ಇನ್ನೂ ಹೆಚ್ಚಾಗಿದೆ...
ಹೀಗೆ ಶುರುವಾದ ಮಳೆ ಎಷ್ಟೋ ದಿನ ಸುರಿದು ಒಂದು ದಿನ ಬೆಳಿಗ್ಗೆ ಥಟ್ಟನೆ ನಿಂತು ಎಲ್ಲ ಫಳ ಫಳ. ಹೊಂಬಿಸಿಲು ನೋಡಿ ಎಲ್ಲರಿಗೂ ಖುಷಿ, ಹಸಿರೊಡೆದ ಭೂಮಿ ಮೊದಲ ಮಳೆಯಲ್ಲಿ ಮಿಂದು ನಳನಳಿಸುತ್ತದೆ!
ಆಷಾಡದ ಪಿರಿಪಿರಿ ಮಳೆ ಮುಗಿದು ಶ್ರಾವಣ ಹತ್ತುವ ಹೊತ್ತಿಗೆ ಮಳೆಯ ಜೊತೆ ಚಳಿಗಾಳಿಯೂ ಸೇರಿಕೊಂಡಿರುತ್ತದೆ- ಮುಚ್ಚಿಟ್ಟಿದ್ದ ಹೊದಿಕೆ, ಸ್ವೆಟರುಗಳನ್ನೆಲ್ಲ ಹೊರತೆಗೆಸುತ್ತದೆ; ಕ್ಯಾಸೆಟ್-ಟೇಪುಗಳ ಮೇಲೆಲ್ಲ ಆಗಲೇ ಬಿಳೀ ಬಿಳೀ ಪುಡಿ, ಚರ್ಮದ ಬೆಲ್ಟುಗಳು ಮುಗ್ಗಲು ವಾಸನೆ ಹೊಡೆಯಲಾರಂಭಿಸುತ್ತವೆ; ಒಗೆದ ಬಟ್ಟೆಗಳು ವಾರವಾದರೂ ಒಣಗುವುದಿಲ್ಲ; ರೂಮಿನಲ್ಲಿ ಒಬ್ಬನಿಗೆ ಹಿಡಿದ ಶೀತ ಒಬ್ಬನಿಂದೊಬ್ಬನಿಗೆ ವರ್ಗಾವಣೆಗೊಂಡು ಎಲ್ಲರೂ ಬಳಲಿದ ಮೇಲೆಯೇ ಜಾಗ ಖಾಲಿ ಮಾಡುತ್ತದೆ! ಚಪ್ಪಲಿಗಳು, ಬಿಳೀ ಬಟ್ಟೆಗಳ ಮೇಲೆಲ್ಲ ಸಣ್ಣ ಸಣ್ಣ ಕಪ್ಪು ಚುಕ್ಕಿಗಳ ಬೂಸ್ಟು; ನೀರಿನಲ್ಲಿ ನೆನೆನೆನೆದು ಸೆಲೆತುಕೊಳ್ಳುವ ತಿಳಿಗುಲಾಬಿ-ಬಿಳೀ ಬಣ್ಣಕ್ಕೆ ತಿರುಗುವ ಕಾಲ್ಬೆರಳ ಸಂದಿಗಳು- ಅದರ ಉಪಶಮನಕ್ಕೆ ಹಚ್ಚಿಕೊಳ್ಳುವ ಕಡುನೀಲಿ ಬಣ್ಣದ ಔಷಧಿ! ಗೊತ್ತೇ ಆಗದಂತೆ ಕಾಲಿಗೆ ಹತ್ತಿಕೊಂಡು, ರಕ್ತ ಹೀರಿ, ಉದುರಿಹೋದ ಜಿಗಣೆಗಳು- ಅವು ಕಚ್ಚಿದ ಗಾಯಗಳಲ್ಲಿ ಹೆಪ್ಪುಗಟ್ಟದೇ ಸುರಿಯುವ ಧಾರಾಕಾರ ರಕ್ತ, ಕಚ್ಚಿಕೊಂಡ ಜಿಗಣೆಗಳ ಬಿಡಿಸಲು ಶತಪ್ರಯತ್ನ; ಹಲಸಿನ ಹಣ್ಣು; ಹಲಸಿನ ದೋಸೆ; ಹಳ್ಳಿಯಲ್ಲಿರುವ ಒಂದೇ ಒಂದು ಆಸ್ಪತ್ರೆಯಲ್ಲಿ ಶೀತ-ಜ್ವರ ಹಿಡಿದ ಜನರ ಸರತಿ ಸಾಲು...
ಇವೆಲ್ಲದರ ಜೊತೆಗೆ ನಾನೂ ನನ್ನ ಕೆಲವು ಸ್ನೇಹಿತರೂ ಕೈಗೊಳ್ಳುತ್ತಿದ್ದ ಧಾರಾಕಾರ ಮಳೆಯ ವಾಕಿಂಗ್!
ಮತ್ತೆ ಮಳೆ ಹೊಯ್ಯುತಿದೆ, ಎಲ್ಲ ನೆನಪಾಗುತಿದೆ...
ಸಾಲುಗಳು
- Add new comment
- 1557 views
ಅನಿಸಿಕೆಗಳು
Re: ಮೇಘಮಲ್ಹಾರ
ಶಿವು ಅವರೇ, ಮಳೆಯನ್ನು ಅದ್ಭುತವಾಗಿ ವರ್ಣಿಸಿದ್ದೀರಿ. ಓದಿ ನಮ್ಮ ಮಲೆನಾಡ ಮುಂಗಾರು ಮಳೆಯಲ್ಲಿ ತೊಯ್ದಷ್ಟೇ ಸಂತೋಷವಾಯ್ತು. ಖುಷವಂತ್ ಸಿಂಗ್ ರ Train to Pakistan ಪುಸ್ತಕದಲ್ಲಿ Monsoon ಮಳೆಯ ಬಗೆಗೆ ಇದೇ ರೀತಿಯ ವರ್ಣನೆ ಇದೆ .
Re: ಮೇಘಮಲ್ಹಾರ
ಹಾಯ್ ವಿನಯ ಉಡುಪ ಅವರೇ,
ನಿಮಗೆ ವಿಸ್ಮಯ ನಗರಿಗೆ ಸ್ವಾಗತ ಸುಸ್ವಾಗತ.
ಅನಾಮಿಕ ಅನ್ನುವದು ವಿಸ್ಮಯ ನಗರಿಯ ಅತಿಥಿಗಳಿಗೆ ಇರುವ ಹೆಸರು. ಆ ಹೆಸರನ್ನು ತಾವು ತಮ್ಮ ನಾಮಧೇಯವನ್ನಾಗಿ ಬಳಸಿಬಿಟ್ಟಿದ್ದೀರ.
ಅದರಿಂದ ನಮಗೇನು ಅಭ್ಯಂತರ ಇಲ್ಲ.
ಆದರೆ ನೀವು ಆ ಅನಾಮಿಕ ಅಲ್ಲ ವಿಸ್ಮಯ ನಗರಿಯ ಪ್ರಜೆ ಎಂದು ಬೇರೆಯವರಿಗೆ ತಿಳಿಯಬೇಕೆಂದರೆ ಎರಡು ದಾರಿ ಇದೆ.
೧. ಒಂದು ಫೋಟೊ ಹಾಕಿ. ಅದು ನಿಮ್ಮದೇ ಆಗಿರಬೇಕಾಗಿಲ್ಲ. ಅವತಾರ್ ಗಳು ನಡೇದೀತು.
ಅಥವಾ
೨. ನಾಮಧೇಯ ಬದಲಾಯಿಸುವದು. ಅದಕ್ಕೆ ನೀವು ನನಗೆ ಈಮೇಲ್ ಕಳುಹಿಸಬೇಕು. ನಿಮ್ಮ ಹೊಸ ನಾಮಧೇಯ ತಿಳಿಸಬೇಕು. ಅದು ಇಂಗ್ಲೀಷ್ ಅಥವಾ ಕನ್ನಡ ಯಾವುದಾದರೂ ಆಗಿರಬಹುದು.
ವಂದನೆಗಳೊಂದಿಗೆ
--ಮೇಲಧಿಕಾರಿ
Re: ಮೇಘಮಲ್ಹಾರ
ಮೇಲಧಿಕಾರಿಗಳಿಗೆ ನಮಸ್ಕಾರ,
ನಾನು ಒಂದು ಉತ್ತಮ ಹೆಸರನ್ನು ಹುಡುಕ್ತ ಇದ್ದೀನಿ . ಅದು ಸಿಗದ ಕಾರಣ ತಾತ್ಕಾಲಿಕವಾಗಿ ಈ ಹೆಸರನ್ನ ಬಳಸಿರುವೆ. ಸಧ್ಯಕ್ಕೆ ನನ್ನ ಭಾವಚಿತ್ರ ಹಾಕಿದ್ಡೀನಿ .
ಧನ್ಯವಾದಗಳು....
ಸಿರಿಗನ್ನಡಂ ಗೆಲ್ಗೆ
Re: ಮೇಘಮಲ್ಹಾರ
ಶಿವಕುಮಾರ ಶೇಷಪ್ಪ ಕುಂದೂರು ಅವರೇ ಮಲೆನಾಡಿನ ಮಳೆಯ ಸೊಗಸನ್ನು ತುಂಬಾ ಚೆನ್ನಾಗಿ ವರ್ಣಿಸಿದ್ದೀರಿ..ನಾನು ನಿಮ್ಮ್ ಲೇಖನ ಓದಿ ನನ್ನ ಕಳೆದ ಮಲೆನಾಡಿನ ದಿನಗಳನ್ನು ನೆನಪಿಸಿಕೊಂಡೆ ...ಥ್ಯಾಂಕ್ಸ್ ..... ಹೀಗೆ ಬರೆಯುತ್ತಾ ಇರಿ