ಸಾವಿನಾಚೆಯ ಬದುಕು...
ಗೋಲಿಯಾಡುತಿದ್ದ ಪುಟ್ಟನ ಕೈಯಿಂದಗೋಲಿಯೊಂದುರುಳಿ ಮಾಯವಾಗಲು,
ಅಳುತ್ತಳುತ್ತಾ ಅಮ್ಮನ ಬಳಿ ಓಡಿದ.
‘ಅಳದಿರು ಕಂದಾ, ಕೊಡುವೆ ಹೊಸ ಗೋಲಿಯನ್ನೊಂದ’
ಎಂದು ತಬ್ಬಿ ಮುತ್ತನಿತ್ತ ಅಮ್ಮನ ಕಣ್ಗಳೊಳಗೆ
ಪುಟ್ಟನಿಗೇನೂ ಕಾಣಿಸಲೇ ಇಲ್ಲ!
ನಗುನಗುತ್ತಾ ಆಡ ಹೊರಟ ಪುಟ್ಟನ
ತಲೆಯೊಳಗೆಲ್ಲಾ ಹೊಸ ಗೋಲಿಯದೇ ಯೋಚನೆ....
ಆಕೆಯ ಮುಚ್ಚಿದ ಕಣ್‌ರೆಪ್ಪೆಗಳಂಚಿಂದ
ಅವ್ಯಾಹತ ನೀರ ಧಾರೆಯ ಕೋಡಿ....
ಆಕೆಯೂ ಬೇಡುತಿಹಳು ಎರಡೇ ಎರಡು ಗೋಲಿಗಳ
ಎರಡಿಲ್ಲದಿರೆ ಬೇಡ, ಒಂದಾದರೂ ಬೇಕಾಗಿದೆ,
ಗೋಲಿಯಾಡುವ ಪುಟ್ಟನ ಮುದ್ದು ಮೊಗವ ಸೆರೆ ಹಿಡಿಯಲು
ಪುಟ್ಟನ ಆಟದ ಗೋಲಿಗಳೋ
ತಟ್ಟೆಂದು ತರಬಲ್ಲಂಥವುಗಳೇ.
ಆದರೆ ಅವಳ ನಿರ್ಜೀವ ಖಾಲಿ ಕಣ್ಗಳಿಗೆ,
ಉಸಿರಿಲ್ಲದ ದೇಹದ ಗೋಲಿಗಳೇ ಜೀವ ತುಂಬ ಬಲ್ಲವು!
ತಡವರಿಸುವ ಕೈಗಳಿಗೆ, ಎಡವುವ ಕಾಲ್ಗಳಿಗೆ
ದಾರಿದೀವಿಗೆಯಾಗಬಲ್ಲ ಗೋಲಿಗಳ ದಾನವನ್ನಿತ್ತರೆ,
‘ಆತನ’ ಸನ್ನಿಧಿಯಲ್ಲೊಂದು ಸ್ಥಾನ ಖಾಯಂ ಆಗುವುದಂತೆ.
- ತೇಜಸ್ವಿನಿ ಹೆಗಡೆ
ಸಾಲುಗಳು
- Add new comment
- 797 views
ಅನಿಸಿಕೆಗಳು
Re: ಸಾವಿನಾಚೆಯ ಬದುಕು...
ನಿಮ್ಮ ಕವನಗಳು ಯಾವಾಗಲು ಕನ್ನಡದ ಸಿರಿತನವನ್ನು ತುಂಬಿವೆ.. ನಿಮ್ಮನ್ನು ಮೆಚ್ಚಬೇಕು..
tumba amogha vagide nimma
tumba amogha vagide nimma kavana