ಮಿಷ್ಟಿ ಭಾಗ ೨
ಆದರೆ ಅದೇಕೋ ಎಂತೋ ಇತ್ತೀಚಿಗೆ ಆಕೆ ತೀರಾ ಇಳಿದು ಹೋದಂತೆ ಕಾಣಿಸುತ್ತಿದ್ದಳು. "ನೀನು ಈಗ ಮಿಷ್ಟಿ ತಿನ್ನೋದನ್ನೇ ಬಿಟ್ಟಿದ್ಯಾ ಹೇಗೆ? ಅಥವಾ ಬೆಂಗ್ಳೂರಲ್ಲಿ ನಿನ್ನ ಇಷ್ಟದ ರೊಸೊಗೊಲ್ಲ ಸಿಕ್ತಾ ಇಲ್ವಾ? ತುಂಬಾ ಸಣ್ಣಗಾಗ್ತಿದ್ದೀಯಾ... ಕಣ್ಣೂ ಆಳಕ್ಕೆ ಬಿದ್ದಂತಿದೆ.."ಎಂದ ನನ್ನ ಕಳಕಳಿಗೂ ಅದೇ ದೊಡ್ಡ ನಗು. "ದೀದಿಮೋನಿ.. ನೀವೂ ನನ್ನಮ್ಮನಂತೇ... ಅತೀ ಕಾಳಜಿ ಮಾಡ್ತೀರ... ಹೌದು.. ನಿಮ್ಮ ಕಣ್ಣು ಬಿತ್ತು ನೋಡಿ... ಅದ್ಕೇ ಸಿಹಿ ತಿಂತಾ ಇಲ್ಲಾ ಈಗ... ನೀವೊಂದು.." ಎಂದು ಹಾರಿಸಿ ತನ್ನ ರೂಮಿಗೆ ಹಾರಿದವಳು ವಾರವಾದರೂ ಪತ್ತೆಯಾಗದಿರಲು ದಿಗಿಲಾಯಿತು. ಇನ್ನು ಕಾಯಲು ಅರ್ಥವಿಲ್ಲವೆಂದೆಣಿಸಿದವಳೇ ಈ ಮೊದಲು ಕೆಲವು ಬಾರಿ ಭೇಟಿ ಕೊಟ್ಟಿದ್ದ ಅವಳ ರೂಮಿಗೇ ಹೊರಟೆ. ಕೇವಲ ಹದಿನೈದು ನಿಮಿಷದ ಹಾದಿ.....ತುಸು ದೂರ ಕ್ರಮಿಸಿದ ಕೂಡಲೇ ದೂರದಲ್ಲೆಲ್ಲೋ ಗುಡುಗಿದ ಸದ್ದಾಗಲು, ಮೇಲೆ ನೋಡಿದರೆ ಆಗಸದ ತುಂಬಾ ಕರಿಮೋಡಗಳ ಮೆರವಣಿಗೆ. ಕೊಡೆ ತರದ ನನ್ನ ಮರೆವಿಗೆ ಮನದಲ್ಲೇ ಬೈದುಕೊಳ್ಳುತ್ತಾ ಆಕೆಯ ರೂಮೊಳಗೆ ಹೊಕ್ಕೆ. ನೋಡಿದರೆ ಈಕೆ ಮಿಷ್ಟಿಯೇ ಹೌದೇ ಎನ್ನುವಷ್ಟು ಸಣ್ಣಗಾಗಿದ್ದಳು! ಮೊದಲಬಾರಿ ಆಕೆಯನ್ನು ನೋಡಿದಾಗ ತೊಟ್ಟಿದ್ದ ಅದೇ ಹಳದಿ ಖಾದಿ ಸೆಲ್ವಾರ್ ಹಾಕಿದ್ದಳು. ಕೈಯಲ್ಲೊಂದು ಪುಸ್ತಕವಿತ್ತು. ದೃಷ್ಟಿ ಮಾತ್ರ ಎಲ್ಲೋ ನೆಟ್ಟಿತ್ತು. ಕೆನ್ನೆಯೊಳಗಿನ ಗುಳಿ ದೊಡ್ಡದಾಗಿತ್ತೋ ಇಲ್ಲಾ ತುಂಬಿದ ಗಲ್ಲಗಳೇ ಗುಳಿ ಬಿದ್ದಿದ್ದವೋ ತಿಳಿಯದಂತಾಯಿತು. ಸದಾ ಹರಡಿರುತ್ತಿದ್ದ ಕೂದಲೂ ಇಂದು ಕಟ್ಟಿತ್ತು. ಸಣ್ಣಗೆ ನಡುಕವೊಂದು ಬೆನ್ನ ಹುರಿಯಲ್ಲಿ ಹುಟ್ಟಿ ಒಡಲಾಳದೊಳಗೆ ಹಬ್ಬಿದಂತಹ ಅನುಭವ. ಸದ್ದಿಲ್ಲದೇ ಒಳಹೋದವಳೇ ಅವಳ ಪಕ್ಕದಲ್ಲಿದ್ದ ಸ್ಟೂಲಿನ ಮೇಲೆ ಕುಳಿತು ಆಕೆಯ ತೊಡೆಯ ಮೇಲಿದ್ದ ಅವಳ ಎಡೆಗೈಯನ್ನು ಮೃದುವಾಗಿ ಮುಟ್ಟಿದೆ. ಬೆಚ್ಚಿದ ಆಕೆ ನನ್ನ ನೋಡಿದವಳೇ ಅದೇ ಮಾಸದ ದೊಡ್ಡ ನಗುವನ್ನು ಕಾಣಿಸಲು ತುಸು ತಂಪಾಯಿತು. "ಏನ್ ಹುಡ್ಗೀನೇ... ಇಷ್ಟು ದಿನಾ ಆದ್ರೂ ಬಂದಿಲ್ಲ.. ಹೆಸ್ರಿಗೆ ಮಾತ್ರ ದೀದಿಮೋನಿ... ನೋಡೋಕೆ ಬರೋಕೆ ಆಗೊಲ್ಲ ಅಲ್ವಾ? ಕಾದು ಕಾದು ಸಾಕಾಗಿ ನಾನೇ ಬಂದೆ ನೋಡು... ಈ ವಯಸ್ಸಲ್ಲಿ ನನ್ನೇ ಓಡಾಡಿಸ್ತೀಯಾ ನೀನು.. ಹೌದು ಏನಾಯ್ತು ಅಂತಾ ಹಿಗಿದ್ದೀಯಾ? ಹುಶಾರಿಲ್ವಾ?" ಎಂದು ಅವಳಂತೇ ಪಟಪಟನೆ ಮಾತಾಡಲು ಅವಳು ಕೊಟಿದ್ದು ಅದೇ ನಗು... ಗುಳಿಗಳು ಮಾತ್ರ ಮೊದಲಿಗಿಂತಲೂ ಆಳವಾದಂತೆನಿಸಿದವು.
"ದೀದಿಮೋನಿ... ನೀವು ಎಷ್ಟು ಟೆನ್ಷನ್ ಮಾಡ್ಕೋತೀರಪ್ಪಾ.. ಒಳ್ಳೇದಲ್ಲಾ ನೋಡಿ... ಹ್ಮ್ಂ.... ನಿಮ್ಗೊಂದು ಶಾಕಿಂಗ್ ನ್ಯೂಸ್... ನನ್ನ ಮದ್ವೆ ಆಯ್ತು..."ಎಂದು ನಗಲು ಬೆಸ್ತು ಬಿದ್ದೆ. ಆದರೆ ನೇರವಾಗಿ ನೋಡಲು, ಅವಳ ನಗುವಿನೊಳಗೆ ತುಂಟತನಕ್ಕಿಂತಲೂ ಬೇರೇನೋ ಭಾವ ಗೋಚರಿಸಿದಂತಾಯಿತು. "ನೋಡು.. ತಮಾಷೆ ಸಾಕು.. ನನ್ನ ಪ್ರಶ್ನೆಗಳಿಗೆ ಉತ್ತರ ಬೇಕು... ಮದ್ವೆ ಅಂತೆ... ಆಗೋಯ್ತಂತೆ.. ಯಾವಾಗ? ಯಾರು ಹುಡ್ಗ ಅದ್ನೂ ಹೇಳು.."ಎಂದು ಗದರಿದೆ. "ದೀದಿಮೋನಿ... ಹುಡ್ಗ ನಿಮ್ಗೆ ಚೆನ್ನಾಗಿ ಗೊತ್ತು... ಇನ್‌ಫಾಕ್ಟ್ ಅವ್ನ ಹೆಸ್ರನ್ನ ನೀವೇ ಮೊದ್ಲು ಹೇಳಿದ್ದು.."ಎನ್ನಲು ತುಂಬಾ ಗೊಂದಲ ನನ್ನಲ್ಲಿ. "ಯಾರೇ ಅದು? ಸುಮ್ನೆ ತಮಾಷೆ ಬೇಡ..."ಎಂದಿದ್ದೇ ತಡ ಎದ್ದು ನಾಲ್ಕು ಹೆಜ್ಜೆ ಹೋಗಿ ನನಗೆ ಬೆನ್ನಾಗಿಸಿದವಳೇ "ದೀದಿಮೋನಿ ಆ ಹುಡ್ಗನ ಹೆಸ್ರೂ ‘ತೆತೋ’... ಹೌದು...ಈ ಹೆಸ್ರಿನ ಜೊತೆನೇ ಇನ್ನು ನನ್ನ ವಾಸ.... ಇದ್ರೊಳ್ಗೆ ಮಿಷ್ಟಿ ಕಳ್ದೇ ಹೋದ್ಲು... ಇನ್ನು ಮಿಷ್ಟಿಗೆ ಅಸ್ತಿತ್ವನೇ ಇಲ್ಲಾ ಗೊತ್ತಾ... ಈ ಹುಡ್ಗನ ಜೊತೆಗೇ ನನ್ನ ಮದ್ವೆ ಮೊದ್ಲೇ ಆಗೋಗಿತ್ತು. ಎಷ್ಟು ದಿನದ ಹಿಂದೆ ಅಂತಾನೇ ಗೊತ್ತಿಲ್ಲಾ...ನಂಗೆ ಗೊತ್ತಾಗಿದ್ದು ವಾರದ ಹಿಂದೆ.... ತುಂಬಾ ಸುಸ್ತು ಅಂತಾ ಟೆಸ್ಟಿಗೆ ಹೋಗಿದ್ದೆ ನನ್ನ ಪರಿಚಯ ಡಾಕ್ಟರ್ ಹತ್ರ... ಕೆಲವೊಂದು ಟೆಸ್ಟ್ ನಂತ್ರ ಗೊತ್ತಾಯ್ತು ನೊಡಿ.... ನಂಗೆ ಸಿವಿಯರ್ ಡಯಾಬಿಟಿಸ್ ಇದೆ ಅಂತ... ಸೋ.. ಇನ್ಮುಂದೆ ಕಂಪ್ಲೀಟ್ಲೀ ನೋ ಟು ಮಿಷ್ಟಿ... ಯೆಸ್ ಟು ಓನ್ಲೀ ತೆತೋ.....ಅಂದ್ರೆ ಏನು ಹೇಳಿ ನೋಡೋಣ......" ಎಂದು ತಿರುಗಿದವಳೇ ಪಕಪಕನೆ ನಗಲು, ಹೊರಗೆ ಸೋನೆ ಮಳೆ ಶುರುವಾಯಿತು.....ಒಳಗೆಲ್ಲಾ ಮುಸಲಧಾರೆ!
***@ಕರ್ಮವೀರದಲ್ಲಿ ಪ್ರಕಟಿತ***
-ತೇಜಸ್ವಿನಿ ಹೆಗಡೆ.
ಸಾಲುಗಳು
- 513 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ