(ಅ)ಪೂರ್ಣ
ಬಿದಿಗೆ ಚಂದ್ರಮನಿಂದ ಮುನಿದ ಹುಣ್ಣಿಮೆ
ಇರುಳ (ಆ)ವರಿಸುವಾಗ...
ನಿನ್ನ ನೆನಪು ಹಿಂಡುವುದು ಎದೆಯ,
ನಿನ್ನೆಡೆಗೆ ಹಾರುವುದು ಮನವು...
ನನ್ನ ನೆನಪೇ ನಿನ್ನ ಕಾಡುವಾಗ,
ಆ ನೆನಪಿನ ಕಂಪಿನ ಮತ್ತು
ನಶೆ ತರಿಸಿ ಅಮಲೇರಿಸಿ, ನಿನ್ನ
ಉಸಿರಾಟದ ಪ್ರತಿ ಉಸಿರು ನನ್ನ ನೆನೆವಾಗ,
ನೀ ಬಾ ನನಗಾಗಿ,
ಎಲ್ಲವನೂ ತೊರೆದು, ಎಲ್ಲರನೂ ಮರೆತು
ಮತ್ತೆಂದೂ ಅಗಲದಂತೇ...
ಈ ಹುಣ್ಣಿಮೆ ಕರಿಗತ್ತಲೆಯನಪ್ಪಿದಂತೇ...
ಸಾಗರ ಸದಾ ಪೌರ್ಣಿಮೆಯ ವಿರಹಿ
ಅವಳ ನೆನಪಲೇ ಕರಗಿ ಕೊರಗಿ
ಬಳಲುತಿರುವ ಅಸ್ತಮಾ ರೋಗಿ!
ಅವನುಬ್ಬಸದ ಆರ್ಭಟಕೆ ಹೆದರದೇ,
ಹೊಡೆವ ತೆರೆ ಹೆಡೆಗಳಿಗಂಜದೇ
ಕಪ್ಪಾಗಿ ಕರಟಿರುವ ಕರಿಗತ್ತಲ ಬೆಳದಿಂಗಳು
ಸೇರಲಿಲ್ಲವೇ? ನೀ ನೋಡಲಿಲ್ಲವೇ?
ಅಣಕಿಸುವ ಈ ಹುಣ್ಣಿಮೆಯ ಉರಿಸಲು
ನೀನೊಮ್ಮೆ ಬಾ ನನಗಾಗಿ,
ಎಲ್ಲವನೂ, ಎಲ್ಲರನೂ ತೊರೆದು,
ಜಗದ ಅರಿವ ಮರೆತು, ಮತ್ತೆಂದೂ ಅಗಲದಂತೇ...
ಸಾಲುಗಳು
- Add new comment
- 505 views
ಅನಿಸಿಕೆಗಳು
Re: (ಅ)ಪೂರ್ಣ
ತೇಜಸ್ವಿನಿ ಯವರೇ ನಿಮ್ಮ ಕವನ್ ತುಂಬಾ ಚೆನ್ನಾಗಿದೆ. ವಿರಹಿ ತನ್ನ ಪ್ರೀತಿಗೆ ಕಾಯುತ್ತಾ ಅದಕ್ಕಾಗಿ ಕಾತರಿಸುವ ಪರಿ, ಆ ಕ್ಷಣದ ತೊಳಲಾಟ ಚೆನ್ನಾಗಿ ಚಿತ್ರಿಸಿದ್ದೀರ. ನಿಮ್ಮಿಂದ ಉತ್ತಮ ಕವನಗಳು ಬರಲಿ ಎಂದು ಹಾರೈಸುವ
-ನಾಗೇಂದ್ರ ಕುಮಾರ್ ಕೆ.ಎಸ್-