Skip to main content

ಏನೆಂದು ಕರೆಯಲೇ ನಾ ನಿನ್ನ?

ಬರೆದಿದ್ದುJuly 16, 2010
7ಅನಿಸಿಕೆಗಳು

ಕರಿಮೋರೆಯ ತುಂಬ ಬಿಳಿ ನಗುವಿನಾ ತೆರೆಗಳು
ಮುಟ್ಟಹೋದರೆ ಸಾಕು ಹಿಂದೋಟ,
ಮರುಗಳಿಗೆ ಮುನ್ನುಗ್ಗಿ ಸೆರೆಹಿಡಿವ ಮರುಳಾಟ
ತೆಕ್ಕೆಯೊಳಗಗೆಳೆದು ಒಡಲೊಡಳಗಡಗಿಸದೇ
ಎಲ್ಲವನೆಸೆದು ನಿರುಮ್ಮಳಳಾಗುವ
ಕಡುನೀಲ ಸುಂದರಿ, ಸುವಿಶಾಲ ಸಾಗರಿ...
ಸ್ವಲ್ಪ ಒಗರು, ಅತಿಯಾದ ಚೊಗರು, ರುಚಿಗೆ
ಬೇಕಾಗಿರುವ ಉಪ್ಪುತುಂಬಿದಾ ನಿನ್ನೊಡಲು....
ಕೊರಳನಲಂಕರಿಸಿದ ಕೆಂಪಿನಲ್ಲೂ,
ಕಿವಿಯೊಳಗೆ ಝಗಮಗಿಸುವ ಓಲೆಯಲ್ಲೂ,
ಮೂಗುತಿಯ ಮಿನುಗಿನಲ್ಲೂ, ನಿನ್ನ ಚೆಲುವು
ಆ ಚೆಲುವಿನೊಳಗೆಲ್ಲಾ ನಿನ್ನದೇ ಹೆಸರು
ಕಾವೇರಿ, ತುಂಗೆ, ನೇತ್ರಾವತಿ, ಗಂಗೆ...
ಎಣಿಸಲಸದಳ ಸಖಿಯರು ನಿನಗಾಗಿ ಕಾಯುವರು
ನೀ ಮಾತ್ರ ಇಂದು ಮುಖಿ, ವಿರಹಿಣಿ ಆ ಶಶಿಯ
ಆಗೊಮೆ ಈಗೊಮ್ಮೆ ಏರಿಳಿವ ನಿನ್ನ ಎದೆಬಡಿತವ
ಸೆರೆ ಹಿಡಿ ಹಿಡಿದು ಆಗುವನಾತನೂ
ಅರ್ಧ ಹಿಡಿ, ಒಮ್ಮೊಮ್ಮೆ ಪೂರ್ಣ ಹುಡಿ....
ಮುಗಿಯದ ಅಚ್ಚರಿ, ಅರಿಯದ ಸೆಳೆತ,
ಸೋರುವ ಮರಳ ತುಂಬೆಲ್ಲಾ ನಿನ್ನಡಿಯ ಪುಟಿತ
ನೆನಪಿನ ಕಂಪು ಬಂದಾಗಲೆಲ್ಲಾ
ಹರಿದು ಹೋಗುವ ಹುಚ್ಚು ಹಂಬಲ ನಿನ್ನೆಡೆಗೆ...
ಸದಾ ವಿಸ್ಮಯಿ ನೀ, ಮಾನಸ ಸಮ್ಮೋಹಿನಿ,
ಹುಟ್ಟಿದ-ಹುಟ್ಟದ ನನ್ನೊಳಗಿನ ಕವಿತೆಯೂ ನೀ...
- ತೇಜಸ್ವಿನಿ ಹೆಗಡೆ

ಲೇಖಕರು

ತೇಜಸ್ವಿನಿ ಹೆಗಡೆ

ಮೂಲ ಶಿರಸಿ. ಬೆಳೆದದ್ದು, ಓದಿದ್ದು ಎಲ್ಲಾ ಮಂಗಳೂರಿನಲ್ಲಿ. ಈಗಿರುವುದು ಬೆಂಗಳೂರಿನಲ್ಲಿ. ವಾಸ್ತವಿಕ ನೆಲೆಯಲ್ಲಿ ಕಲ್ಪನೆಯನ್ನು ಕಾಣುವವಳು.. ಕಲ್ಪನೆಗೆ ವಾಸ್ತವಿಕತೆಯ ಚೌಕಟ್ಟನ್ನು ಹಾಕಿ ಬರೆಯುವುದೇ ನಿಜ ಬರಹ ಎನ್ನುವುದು ನನ್ನ ಅಭಿಮತ. "ಕಾಣ್ಕೆ" (ಜಯಶ್ರೀ ಪ್ರಕಾಶನ, ೨೦೦೮)ನನ್ನ ಕಥಾಸಂಕಲನವಾಗಿದೆ. "ಚಿಗುರು" (ಸುಮುಖ ಪ್ರಕಾಶನ, ೧೯೯೫) ಹಾಗೂ "ಪ್ರತಿಬಿಂಬ" (ಜಯಶ್ರೀ ಪ್ರಕಾಶನ, ೨೦೦೮) ನನ್ನ ಕವನಸಂಕಲನಗಳು.

http://manasa-hegde.blogspot.com (ನನ್ನ ಕನ್ನಡ ಬ್ಲಾಗ್)

ಅನಿಸಿಕೆಗಳು

ವಸಂತ್ ಭಾನು, 07/18/2010 - 22:12

ತುಂಬಾ ಅದ್ಭುತವಾದ ಸಾಲುಗಳು ತೇಜಸ್ಪಿನಿಯವರೆ ತುಂಬಾ ಚೆನ್ನಾಗಿದೆ ಧನ್ಯವಾದಗಳು. 

ತೇಜಸ್ವಿನಿ ಹೆಗಡೆ ಮಂಗಳ, 07/20/2010 - 16:02

ತುಂಬಾ ಧನ್ಯವಾದಗಳು ವಸಂತ್ ಅವರೆ.

NAGU ಗುರು, 07/22/2010 - 12:45

ಸಿಸ್ಟರ್.....     ಓದಲು ತು೦ಬಾ ಕಷ್ಟವಾದರೂ ಬರೆದ ಸಾಲುಗಳೆಲ್ಲಾ ತು೦ಬಾ ತು೦ಬಾನೇ ಇಷ್ಟವಾದವು.

ತೇಜಸ್ವಿನಿ ಹೆಗಡೆ ಗುರು, 07/22/2010 - 15:52

ಓದಲು ಕಷ್ಟವಾಯಿತೇ?! ಆದರೂ ಸಾಲುಗಳು ನಿಮಗೆ ಇಷ್ಟವಾದವಲ್ಲಾ... :) ತುಂಬಾ ಧನ್ಯವಾದಗಳು.

ಉಮಾಶಂಕರ ಬಿ.ಎಸ್ ಗುರು, 07/22/2010 - 20:13

ತೆಕ್ಕೆಯೊಳಗಗೆಳೆದು ಒಡಲೊಡಳಗಡಗಿಸದೇ
ಎಲ್ಲವನೆಸೆದು ನಿರುಮ್ಮಳಳಾಗುವ
ಕಡುನೀಲ ಸುಂದರಿ, ಸುವಿಶಾಲ ಸಾಗರಿ...
ಹೌದು ಅದು
ಮುಗಿಯದ ಅಚ್ಚರಿ, ಅರಿಯದ ಸೆಳೆತವೇ
ಸೊಗಸಾಗಿದೆ!! ಮೇಡಂ

ತೇಜಸ್ವಿನಿ ಹೆಗಡೆ ಮಂಗಳ, 07/27/2010 - 15:52

ತುಂಬಾ ಧನ್ಯವಾದಗಳು

prabi ಸೋಮ, 10/24/2011 - 17:14

ಎನೆಂದು ಕರೆಯಲೇ ನಾ ನಿನ್ನ ಕವಿತೆ ತುಂಬಾ ಉತ್ತಮವಾಗಿದೆ. ಪ್ರಬಿ.ಜಾಲಹಳ್ಳಿ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.