ನಿರೀಕ್ಷೆ
ಕತ್ತಲೆಯ ಹೊದ್ದ ರಾಹು, ಪೂರ್ಣ ಚಂದಿರನ ನುಂಗಿ
ಇಂಚಿಂಚಾಗಿ ತಿಂದು ತೇಗಿ ಉಗುಳಿಹೋದ,
ಅರ್ಧ ಚಂದ್ರನಂತೆ, ನೀನಿಲ್ಲದ ಹೊತ್ತು.....
ಮಿನುಗುವ ತಾರೆಗಳಿಗೆ ಮಂಕುಬೂದಿಯನೆರಚಿ
ತನ್ನೊಳಗೆ ಮರೆಮಾಚಿ ಬೀಗಿ ನಗುವ,
ಕರಿಮೋಡದಂತೆ, ನೀನಿಲ್ಲದ ಹೊತ್ತು....
ಅದೆಲ್ಲೋ ಇಹುದಂತೆ ಸತ್ತ ಸಾಗರವೊಂದು
ಆ ಕಡಲನ್ನೇ ಕಣ್ಗಳೊಳಗೆ ತುಂಬಿ,
ಜೀವರಸ ಹೀರಿದಂತೆ, ನೀನಿಲ್ಲದ ಹೊತ್ತು....
ಕೊರೆವ ಚಳಿಗೆ ಮರಗಟ್ಟಿದ್ದ ಕೈಗಳಿಗೆ
ಮಂಜುಗಡ್ಡೆಯನುಜ್ಜಿ, ತೀಡಿ
ಬಿಸಿಯನೆಬ್ಬಿಸಲೆತ್ನಿಸಿದಂತೆ, ನೀನಿಲ್ಲದ ಹೊತ್ತು....
ಹೊತ್ತಲ್ಲದ ಹೊತ್ತಿನಲಿ, ಧುತ್ತೆಂದು ನುಗ್ಗುವ
ಒಲ್ಲದ ಯೋಚನೆಗಳಿಗೆ, ಸಲ್ಲದ ಸ್ಥಾನವ ಕೊಟ್ಟು
ಹಗಲಿರುಳೂ ಕೊರಗುತಿಹೆ, ನೀನಿಲ್ಲದ ಹೊತ್ತು....
ಆ ಸೂರ್ಯ, ಚಂದ್ರರರನೇ ಕೈಗಿತ್ತರೂ
ಮಿನುಗು ತಾರೆಗಳನೇ ಮುಡಿಗಿಟ್ಟರೂ
ಬೆಳಕಿಲ್ಲ ಮನದೊಳಗೆ, ನೀನಿಲ್ಲದ ಹೊತ್ತು....
ಚಿತ್ರಕೃಪೆ : [www.tabathayeatts.com/artthursday.htm]
- ತೇಜಸ್ವಿನಿ ಹೆಗಡೆ
ಸಾಲುಗಳು
- Add new comment
- 935 views
ಅನಿಸಿಕೆಗಳು
Re: ನಿರೀಕ್ಷೆ
ತುಂಬಾ ಚೆನ್ನಾಗಿದೆ ತೇಜಸ್ವಿನಿ ಅವರೆ.ತಮ್ಮ ಕೊನೆಯ ಸಾಲುಗಳು ನನಗೆ ತುಂಬಾ ಇಷ್ಟವಾಯಿತು..ಆ ಸೂರ್ಯ, ಚಂದ್ರರರನೇ ಕೈಗಿತ್ತರೂ
ಮಿನುಗು ತಾರೆಗಳನೇ ಮುಡಿಗಿಟ್ಟರೂ
ಬೆಳಕಿಲ್ಲ ಮನದೊಳಗೆ, ನೀನಿಲ್ಲದ ಹೊತ್ತು....
Re: ನಿರೀಕ್ಷೆ
ತೇಜಸ್ವಿನಿಯವರೇ.... ನಿಜವಾಗಿಯೂ ನಿಮ್ಮ 'ನಿರೀಕ್ಷೆ' ನಿರೀಕ್ಷೆಗೂ ಮೀರಿ ಅದ್ಭುತವಾಗಿ ಮೂಡಿ ಬ೦ದಿದೆ. ನಿಮ್ಮ ಕವನದಲ್ಲಿರುವ ಪ್ರತಿಯೊ೦ದು 'ಕನಕಪದ'ಗಳನ್ನು ಓದಿದರೆ ಸದ್ಭಾವನೆಯ ಶಬ್ಧಭ೦ಡಾರವೇ ನಿಮ್ಮಲ್ಲಿರಬೇಕು ಎ೦ದು ನನಗೆ ಭಾಸವಾಗುತ್ತಿದೆ. ನೀವು ಯೋಚಿಸುವ ರೀತಿ, ಕಲ್ಪಿಸುವ ಭಾವ, ಹೊ೦ದಿಸುವ ಪದಗಳು ಸೂಪರ್. ನಿಮಗೆ ನೀವೆ ಮಾತ್ರ ಸಾಟಿ. ನಮ್ಮೆಲ್ಲರಿಗೋಸ್ಕರ ಇನ್ನೊ೦ದು ಸು೦ದರ ಕವನ ಸೃಷ್ಟಿಸಿದ ನಿಮಗೆ ಅನ೦ತಾನ೦ತ ವ೦ದನೆಗಳು. ತೇಜಸ್ವಿನಿಯವರು ಸದಾ ಯಶಸ್ವಿನಿಯಾಗಿರಲಿ ಎ೦ದು ಹಾರೈಸುವ..........!
Re: ನಿರೀಕ್ಷೆ
@ನಾಗು ಅವರೆ,
ನಿಮ್ಮ ವಿಶ್ವಾಸಕ್ಕೆ, ಸ್ಪೂರ್ತಿಭರಿತ ಪ್ರತಿಕ್ರಿಯೆಗೆ ತುಂಬಾ ಆಭಾರಿ. ನಿಮ್ಮಂತವರ ಪ್ರೋತ್ಸಾಹವೇ ನನ್ನ ಬರಹಗಳಿಗೆ ಪ್ರೇರಣೆ. ಧನ್ಯವಾದಗಳು.
@ಪ್ರಸನ್ನ ಅವರೆ,
ನನಗೂ ಈ ಸಾಲುಗಳೇ ಹೆಚ್ಚು ಇಷ್ಟವಾದವು :) ತುಂಬಾ ಧನ್ಯವಾದಗಳು.
Re: ನಿರೀಕ್ಷೆ
ತುಂಬಾ ಉತ್ತಮವಾದ ಕಲ್ಪನೆ ತೇಜಸ್ವಿನಿ ಹೆಗಡೆರವರೆ. ಜೀವನದಲ್ಲಿ ನಿರೀಕ್ಷೆಗಳು ಇರಲೇ ಬೇಕು. ಇಲ್ಲದಿದ್ದಲ್ಲಿ ನಮ್ಮ ಜೀವನಕ್ಕೆ ಪರಿಪೂರ್ಣತೆ ಲಭಿಸುವುದಿಲ್ಲವೆಂದು ನನ್ನ ಅನಿಸಿಕೆ. ತುಂಬಾ ಉತ್ತಮವಾದ ಕಲ್ಪನೆ ಧನ್ಯವಾದಗಳು.ವಸಂತ್
Re: ನಿರೀಕ್ಷೆ
ತುಂಬಾ ಧನ್ಯವಾದಗಳು :)