ನೀನಾರ ಅರಿವಿಗೆ ನಿಲುಕಿಹೆ ಹೇಳು?
ಆತ ನಿನಗೊಲಿದಿಲ್ಲ, ನೀನವನ ಒಲವಲ್ಲ,
ನಿನ್ನ ಪ್ರೀತಿ ಏಕ ಮುಖ, ಆತ ಸಕಲ ವಲ್ಲಭ
ನಿನ್ನೆದೆಯ ತುಂಬ ಅವನದೇ ನಿನಾದ,
ಗಾರುಡಿಗನ ನೃತ್ಯಕೆ ವಿಶ್ವವೆಲ್ಲಾ ಸ್ತಬ್ಧ
ನಿನ್ನ ಉಸಿರೊಳಗೋ ಅವನದೇ ಹೆಸರು
ಇರುವರವಗೆ ಸಾಸಿರ ನಾರಿಮಣಿಯರು
ಪ್ರೇಮ ವಂಚಿತ ಅಭಾಗಿನಿ, ಸದಾ ವಿರಹಣಿ ನೀ-
ಎಂದು ಗೀಚಿದನೊಬ್ಬ ಕವಿ,
ದೈವ ಲಿಖಿತ ತಪಸ್ವಿನಿ, ಅನನ್ಯ ಪ್ರೇಮ ಸಂಜೀವಿನಿ-
ಹೊಗಳಿ ಹಾಡಿದ ಮಗದೊಬ್ಬ.....
ಒಮ್ಮೆ ಕನಿಕರಿಸಿ, ಮಗದೊಮ್ಮೆ ಮೇಲಿರಿಸಿ
ಚುಚ್ಚಿ, ಕೆಣಕಿ, ಹೊಗಳಿ, ನರಳಿ - ನಿನ್ನ ಮೇಲೆ
ಬರೆದರೆಷ್ಟೋ ಕಥೆ, ಕವನ - ಮೇಲಿಂದ ಮೇಲೆ
ಕೇಳಲಿಲ್ಲ, ನೋಡಲಿಲ್ಲ, ಇವರಾರೂ ನಿನ್ನ ಬದುಕ ವ್ಯಥೆ
ಅದೆಷ್ಟು ಕಾಲ ನೀ ಹೀಗೆ ಕುಣಿಯಬೇಕೋ ಇವರ ಜೊತೆ!
ನೋಟದಾಚೆಯ ಭಾವ ಕಂಡಷ್ಟೂ ಕಾಣದು,
ಶೂನ್ಯದೊಳೂ ಬಹು ದೊಡ್ಡ ಸಂಪತ್ತಿಹುದು
ಅಸ್ತಿತ್ವರಹಿತ ಪ್ರೀತಿಯಾನುಭೂತಿ
ಸಾವಿನಾನಂತರದ ಬದುಕಿಗೂ ಹಾದಿ
ಇದನರಿಯದ ಮೂಢರ ನೋಡಿ....
ಆಗೊಮ್ಮೆ ಈಗೊಮ್ಮೆ ನಗುತಿಹಳು ಆಕೆ
- ತೇಜಸ್ವಿನಿ ಹೆಗಡೆ
[ಚಿತ್ರ ಕೃಪೆ : http://harekrishnabooks.com.au/index.php?main_page=index&cPath=10]
ಸಾಲುಗಳು
- Add new comment
- 1126 views
ಅನಿಸಿಕೆಗಳು
Re: ನೀನಾರ ಅರಿವಿಗೆ ನಿಲುಕಿಹೆ ಹೇಳು?
ಕವನ ಬಹಳ ಸೊಗಸಾಗಿದೆ. ಕವನಕ್ಕೆ ಅಯ್ಕೆ ಮಾಡಿರುವ ಚಿತ್ರವೂ ತು೦ಬಾ ಚೆನ್ನಾಗಿದೆ.
Re: ನೀನಾರ ಅರಿವಿಗೆ ನಿಲುಕಿಹೆ ಹೇಳು?
ತೇಜಸ್ವಿನಿಯವರೇ...................ಒ೦ದು ಕಡೆಯಿ೦ದ ಸ್ತ್ರೀ ಸಹಜ ಕರುಣೆ ಹಾಗು ಇನ್ನೊ೦ದು ಕಡೆಯಿ೦ದ ಭಾವನತೀತತೆ ನಿಮ್ಮ ಕವನದಲ್ಲಿ ಎದ್ದು ಕಾಣುತ್ತಿದೆ...........ಭಾವನೆಗಳ ಬೆನ್ನೇರಿ ಸಾಗುವ ಈ ಪರಿ ನಿಮ್ಮಿ೦ದಲೆ ಸಾದ್ಯ............ನಿಮ್ಮ ಅಭಿಮಾನಿಯಾಗಿಬಿಟ್ಟೆ,ವ೦ದನೆಗಳು.
Re: ನೀನಾರ ಅರಿವಿಗೆ ನಿಲುಕಿಹೆ ಹೇಳು?
@ರಾಕೇಶ್ ಅವರೆ,
ತುಂಬಾ ಆಭಾರಿ ನಿಮ್ಮ ಈ ಸುಂದರ ಪ್ರತಿಕ್ರಿಯೆಗೆ ಹಾಗೂ ಮೆಚ್ಚುಗೆಗಳಿಗೆ.
ಧನ್ಯವಾದಗಳು.
@ನಟರಾಜ್ ಅವರೆ,
ತುಂಬಾ ಧನ್ಯವಾದಗಳು ಕವನವನ್ನು ಮೆಚ್ಚಿ ಸ್ಪಂದಿಸಿದ್ದಕ್ಕೆ. ಚಿತ್ರ ಕೃಪೆ ಬೇರೊಬ್ಬರದ್ದು. (ಲಿಂಕ್ ಕೊಟ್ಟಿರುವೆ) :)
Re: ನೀನಾರ ಅರಿವಿಗೆ ನಿಲುಕಿಹೆ ಹೇಳು?
ತೇಜಸ್ವಿನಿಯವರೇ......... ನಿಮ್ಮ ಕಲ್ಪನಾಭಾವವನ್ನು ಹೊಗಳಲು ನಮ್ಮ೦ಥ ಸಾಮಾನ್ಯರಿಗೆ ಸಾಧ್ಯವಿಲ್ಲ. ನಿಮ್ಮ ಕವನ ಹೆಣ್ಣು ಹಗುರ ಭಾವನೆಯವಳಲ್ಲ ಎ೦ದು ಸಾರಿ ಸಾರಿ ಹೇಳುತ್ತಿದೆ. ಕವನ ಕಾಲ್ಪನಿಕ ಸಾಗರದಲ್ಲಿ ಈಜಿದರೂ ಕೊನೆಗೆ ನೈಜತೆಯ ದಡವನ್ನು ಸೇರಿದೆ. ದಡ ಸೇರಿಸಿದ ನಾವಿಕರೂ ನೀವೇ ಆಗಿರುವುದರಿ೦ದ ನಿಮಗಿದೋ ಹೃತ್ಪೂರ್ವಕ ಅಭಿನ೦ದನೆಗಳು. ನನಗ೦ತೂ ಓದಿ ತು೦ಬಾ ಇಷ್ಟವಾಯ್ತು. ಹೀಗೆ ನಿಮ್ಮ ಬರಹ ಮು೦ದುವರೆಸಿ. ಶುಭ ಹಾರೈಕೆಗಳೊ೦ದಿಗೆ ನಾಗರಾಜ್.ಪಿ.ಎಮ್
Re: ನೀನಾರ ಅರಿವಿಗೆ ನಿಲುಕಿಹೆ ಹೇಳು?
ನಾಗರಾಜ್ ಅವರೆ,
ನಿಜವಾಗಿಯೂ ನನ್ನ ಈ ಕವನ ಇಷ್ಟೊಂದು ಹೊಗಳಿಕೆಗೆ ಅರ್ಹವಾಗಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ನಿಮ್ಮ ಈ ಹೊಗಳಿಕೆಯಿಂದ ನನ್ನ ಕವಿತೆಗೆ ಹೊಸ ಮೆರುಗು ಬಂದಿದ್ದಂತೂ ನಿಜ. ತುಂಬಾ ಧನ್ಯವಾದಗಳು.
Re: ನೀನಾರ ಅರಿವಿಗೆ ನಿಲುಕಿಹೆ ಹೇಳು?
ಕವನ ತುಂಬಾ ಚೆನ್ನಾಗಿದೆ, ಮನ ಮುಟ್ಟುವಂತಿದೆ.
Re: ನೀನಾರ ಅರಿವಿಗೆ ನಿಲುಕಿಹೆ ಹೇಳು?
ತುಂಬಾ ಧನ್ಯವಾದಗಳು ಶಾಲಿನಿ ಅವರೆ.