ವಾರ ಬಂತಮ್ಮಾ.... ರವಿವಾರ ಬಂತಮ್ಮಾ....
ಶಾಲಾ ದಿನಗಳ ಚೇತೋಹಾರಿ ನೆನಪುಗಳಿನ್ನೂ ನನ್ನ ಮನದಲ್ಲಿ ಹಸಿರಾಗಿವೆ. ಅದರಲ್ಲೂ ವಿಶೇಷವಾಗಿ ಮುದಕೊಡುತ್ತಿದ್ದುದು ಆದಿತ್ಯವಾರದ ರಜೆಯ ಮಜ. ಶನಿವಾರದ ಮಧ್ಯಾಹ್ನದಿಂದ ಶುರುವಾಗುತ್ತಿದ್ದ ಖುಶಿ ಆದಿತ್ಯವಾರ ಸಂಜೆಯಾಗುತ್ತಿದ್ದಂತೇ ಮಂದವಾಗತೊಡಗುತ್ತಿತ್ತು. ಮತ್ತೆ ಹೊಸ ಅಸೈನ್‌ಮೆಂಟ್‌ಗಳು, ಕ್ಲಾಸ್ ಟೆಸ್ಟ್‌ಗಳು, ಹೋಂವರ್ಕ್‌ಗಳು - ಇವೆಲ್ಲವನ್ನೂ ನೆನೆಯುತ್ತಾ ಆದಿತ್ಯವಾರ ರಾತ್ರಿ ಶಾಲೆಯ ಚೀಲವನ್ನು ತುಂಬುವಾಗ ಮನಸೂ ಭಾರವಾಗುತ್ತಿತ್ತು. ಅಂದಿಗೂ ಇಂದಿಗೂ ಈ ವಾರಾಂತ್ಯದ ವಿಶ್ರಾಂತಿಯ ಸೆಳೆತ ಸಾಮಾನ್ಯ ಒಂದೇ ರೀತಿಯಾಗಿದೆ. ಸೋಮವಾರ ವಾರದರಾಂಭ, ಆ ವಾರದ ಇಡೀ ಕಾರ್ಯಕ್ರಮಗಳ, ಯೋಜನೆಗಳ, ಸಂಕಲ್ಪಗಳ ಸಾಕಾರಕ್ಕೆ ನಾಂದಿ ಇಡುವ ವಾರ. ತಲೆಯ ತುಂಬಾ ಬಾಕಿ ಇರುವ ಕೆಲಸಕಾರ್ಯಗಳು, ಒಪ್ಪಂದಗಳ ಯೋಚನೆಯೇ ತುಂಬಿರುವುದರಿಂದ ಈ ಸೋಮವಾರ ಇರುವುದಾದರೂ ಯಾಕಪ್ಪಾ ಎಂದು ಅನಿಸುವುದು. ಹಾಯಾಗಿ ಮಲಗಿ, ಸುಖ ನಿದ್ರೆಯಲ್ಲಿದ್ದವನನ್ನು ಬೆಳಗಾಯಿತು, ಗಂಟೆ ಆರಾಯಿತೆಂದು ಗಡಿಬಿಡಿಕೊಳಿಸಿ ಎಬ್ಬಿಸಿದರೆ ಯಾವ ರೀತಿ ಕಿರಿ ಕಿರಿಯಾಗುವುದೋ ಅದೇ ಭಾವ ಮೂಡುವುದು ಈ ಸೋಮವಾರವನ್ನು ಸ್ವಾಗತಿಸುವಾಗ. ಕಳೆದ ವಾರಾಂತ್ಯದ ನೆಮ್ಮದಿಯ ಸುಖವನ್ನು ನುಂಗಲು ಬರುವಂತೇ, ಬಹು ಬೇಗ ವಕ್ಕರಿಸಿದಂತಾಗುತ್ತದೆ ವಾರದರಾಂಭ. ಇದಕ್ಕೆಲ್ಲಾ ಕಾರಣ ಈ ವೇಗದ ಕಾಲದಲ್ಲಿ ತುಸು ವಿಶ್ರಾಂತಿಗಾಗಿ ನಾವು ಬಯಸುವ ವಾರಾಂತ್ಯದ ಸುಖವೆಂದೇ ಹೇಳಬಹುದು. ಕೆಲಸಗಳ ಒತ್ತಡಗಳಲ್ಲೇ ವಾರಗಳನ್ನು ಕಳೆಯುವ ಪುರುಷರ ವಾರಾಂತ್ಯಕ್ಕೂ ಮಹಿಳೆಯರ ವಾರಾಂತ್ಯಕ್ಕೂ ಸೋಮವಾರ, ಶನಿವಾರದಷ್ಟೇ ಅಂತರವಿದೆ ಎಂದರೆ ತಪ್ಪಾಗದು. ಅವಿವಾಹಿತ ಉದ್ಯೋಗಸ್ಥ ಮಹಿಳೆ, ಗೃಹಿಣಿ, ವಿವಾಹಿತ ಉದ್ಯೋಗಸ್ಥ ಮಹಿಳೆ, ಗ್ರಾಮೀಣ ಮಹಿಳೆ - ಹೀಗೆ ಇವರೊಳಗಿನ ವಾರಾಂತ್ಯದಲ್ಲಿ ವಿಭಿನ್ನತೆ ಇರುತ್ತದೆ.
ಅವಿವಾಹಿತ ಉದ್ಯೋಗಸ್ಥ ಸ್ತ್ರೀಯ ವಾರಾಂತ್ಯ
ಇಲ್ಲಿ ಮಹಿಳೆಗೆ ಸಾಂಸಾರಿಕ ಜವಾಬ್ದಾರಿ ತುಸು ಕಡಿಮೆ ಇರುತ್ತದೆ. ಹಾಗಾಗಿ ಇವಳ ವಾರಾಂತ್ಯದ ಬಹುಪಾಲು ಭವಿಷ್ಯತ್ತಿನ ಬಗ್ಗೆ ಸವಿಗನಸು ಕಾಣುತ್ತಾ, ಮೊಗದ ಸೌಂದರ್ಯವನ್ನು ಹೆಚ್ಚಿಸುವ ಬಗ್ಗೆ ಚಿಂತಿಸುತ್ತಾ, ಅದಕ್ಕಾಗಿ ಹಲವು ಪ್ರಕಾರಗಳ ಶೃಂಗಾರ ಪ್ರಸಾದನಗಳನ್ನು ಖರೀದಿಸುತ್ತಲೋ, ಇಲ್ಲಾ ಅಂತಹ ಪತ್ರಿಕೆಗಳನ್ನು ಕೊಂಡು ಓದುವತ್ತಲೋ ಗಮನ ಕೊಡುವುದರಲ್ಲಿರುತ್ತದೆ. ಅಪ್ಪ ಅಮ್ಮನ ಸೊಂಪಿನ ನೆರಳಿನಲ್ಲಿದ್ದುಕೊಂಡು ಉದ್ಯೋಗ ಮಾಡುತ್ತಿರುವ ಸ್ತ್ರೀಯಾಗಿದ್ದರೆ ವಾರಾಂತ್ಯದಲ್ಲಿ ಅಮ್ಮನ ತಂಪಿನ ಎಣ್ಣೆಸ್ನಾನ ಗ್ಯಾರಂಟಿ. ವಾರವಿಡೀ ಜಗ್ಗಾಡಿಕೊಂಡು ಹೊತ್ತಿನ ಪರಿವಿಯೆಲ್ಲದೇ ದುಡಿದ ದೇಹ ಹರಣ್ಣೆಯ ಸ್ನಾನದಿಂದ, ಗಡದ್ದಾದ ಮಧ್ಯಾಹ್ನದ ನಿದ್ದೆಯಿಂದ ಹೊಸ ತಾಜಾತನವನ್ನು ಪಡೆಯುತ್ತದೆ. ಉಳಿದದಿನಗಳಲ್ಲಿ ಕ್ಯಾಂಟೀನಿನ ಊಟದಿಂದ, ಇಲ್ಲಾ ಬೆಳಗ್ಗೆಯೇ ತುಂಬಿ ತಂದ ಬಿಸಿಯಾರಿದ ತಿಂಡಿಯಿಂದ ಜಡ್ಡುಗಟ್ಟಿದ್ದ ನಾಲಗೆಯು ಶುಚಿ-ರುಚಿಯಾದ ಬಿಸಿ ಬಿಸಿ ತಿಂಡಿ-ಊಟಗಳಿಂದಾಗಿ ಮತ್ತೆ ಚುರುಕಾಗುತ್ತದೆ. ಜೊತೆಗೆ ಮನಸೂ ಆಹ್ಲಾದವಾಗುತ್ತದೆ. ಕೆಲವು ಉದ್ಯೋಗಸ್ಥ ಮಹಿಳೆಯರಿಗೆ ಭಾನುವಾರ ಮಾತ್ರವಲ್ಲದೇ ಶನಿವಾರವೂ ರಜೆಯಿರುತ್ತದೆ (ಸಾಮಾನ್ಯವಾಗಿ ಐ.ಟಿ. ಕೆಲಸದಲ್ಲಿರುವವರಿಗೆ). ಅಂತಹವರು, ಶನಿವಾರವಿಡೀ ಶಾಪಿಂಗ್ ಮಾಡುತ್ತಾ, ಮುಂದಿನ ವಾರಕ್ಕೆ ಬೇಕಾಗುವ ಆವಶ್ಯಕ ವಸ್ತುಗಳನ್ನು, ತಮ್ಮ ನೆಚ್ಚಿನ ಲೇಖಕರ ಪುಸ್ತಕಗಳನ್ನು ಖರೀದಿಸುತ್ತಾ, ಮಾರ್ಕೆಟ್‌ಗೆ ಬಂದಿರುವ ನವೀನ ಮಾದರಿಯ ಬಟ್ಟೆಗಳನ್ನು ಆರಿಸಿಕೊಳ್ಳುತ್ತಾ ಕಳೆದರೆ, ಆದಿತ್ಯವಾರವನ್ನು ಎಣ್ಣೆ ಸ್ನಾನ, ಇಷ್ಟದ ತಿಂಡಿ ತೀರ್ಥ, ಮಧ್ಯಾಹ್ನ ನಿದ್ದೆಯ ಮೂಲಕ ಮುಂದಿನ ವಾರಕ್ಕೆ ಸನ್ನದ್ಧರಾಗುತ್ತಾರೆ.
ವಿವಾಹಿತ ಉದ್ಯೋಗಸ್ಥ ಮಹಿಳೆಯ ವಾರಾಂತ್ಯ
"ಛೇ...ನನ್ನ ಕರ್ಮವೇ.... ಇವ್ಳು ಇವತ್ತೇ ಕೈಕೊಡ್ಬೇಕೇ? ವಾರದಲ್ಲಿ ಒಂದು ದಿನವಾದರೂ ಆರಮಾವಾಗಿ ಕಳೆಯೋಣವೆಂದರೆ ಅದಕ್ಕೂ ಇವ್ಳು ಕಲ್ಲುಹಾಕ್ತಾಳೆ....ಹಾಳಾದವ್ಳು ಇವತ್ತೇ ಕೈಕೊಡ್ಬೇಕಾ? ನಿಜ ಹೇಳೋದು ಎಲ್ಲಾ....ಈ ಕಾಲ್ದಲ್ಲಿ ಹುಡ್ಕಿದ್ರೆ ದೇವ್ರಾದ್ರೂ ಸಿಗ್ತಾನೆ.... ಆದ್ರೆ ಸರಿಯಾದ ಕೆಲ್ಸದವ್ಳು ಸಿಗೋದೇ ಇಲ್ಲ ಈಗ....ಇಷ್ಟು ಹೊತ್ತಾದ್ರೂ ಕೆಲ್ಸದವ್ಳ ಪತ್ತೇಯೇ ಇಲ್ಲಾ...ಎಲ್ಲಾ ನಾನೇ ಮಾಡಿ ಸಾಯ್ಬೇಕು ಇನ್ನು..." ಎಂದು ಗೊಣಗುತ್ತಾ, ಬಾರದ ಕೆಲಸದವಳನ್ನು ಶಪಿಸುತ್ತಾ(ಅವಳಿಗೂ ವಾರಾಂತ್ಯವಿರುತ್ತದೆಯೆಂದು ಎಣಿಸದೇ...) ಹೆಚ್ಚಿನ ಮಹಿಳೆಯ ವಾರಾಂತ್ಯ ಪ್ರಾರಂಭವಾಗುತ್ತದೆ. ಅದೂ ಮಕ್ಕಳಿರುವ ಮಧ್ಯಮವರ್ಗದ ಮಹಿಳೆಯ ಗೋಳೆಲ್ಲಾ ಹೆಚ್ಚಾಗಿ ಇದೇ ಆಗಿರುತ್ತದೆ. ಆ ವಾರದ ಬಟ್ಟೆಗಳನ್ನು, ಮನೆಗೆಲಸಗಳನ್ನು, ಶುಚಿತ್ವವನ್ನು -ಎಲ್ಲವನ್ನೂ ಒಂದೇ ದಿನ ಮಾಡಿಕೊಳ್ಳುವ ಮನೆಗೆಲಸದ ಭಾರದ ಮುಂದೆ ಆಫೀಸಿನ ಕೆಲಸವೇ ಉತ್ತಮ ಎಂದು ಭಾವಿಸುತ್ತಾರೆ. ಪತ್ನಿಯ ಕಷ್ಟಕ್ಕೆ ಸಹಕರಿಸುವ ಪತಿ, ಅಮ್ಮನ ಪರದಾಟಕ್ಕೆ ಸ್ಪಂದಿಸುವ ಬೆಳೆದ ಮಕ್ಕಳು ಜೊತೆಗಿದ್ದರೆ ಎಲ್ಲವೂ ಸರಳ ಸುಲಭ ಎನ್ನುವುದು ಬೇರೆ ಮಾತು. ಇನ್ನು ಉಳ್ಳವರ ಮನೆಯಲ್ಲಿ ವಾಷಿಂಗ್ ಮೆಷಿನ್, ಡಿಶ್ ವಾಷರ್, ವೆಕ್ಯೂಮ್ ಕ್ಲೀನರ್, ಹೋಟೆಲ್ ತಿಂಡಿ, ಊಟ ಎಲ್ಲವೂ ಸಿದ್ಧವಿರುವುದರಿಂದ ಕಷ್ಟದ ಹೊರೆ ತಾಗದು.
ಆದರೆ ಮಧ್ಯಮವರ್ಗದ ಉದ್ಯೋಗಸ್ಥ ಮಹಿಳೆಯ ವಾರಾಂತ್ಯ ತುಸು ತ್ರಾಸದಾಯಕವೆಂದೇ ಹೇಳಬೇಕು. "ಏನೇ ನಿಂದು ಗೋಳು? ವಾರದಲ್ಲಿ ಒಂದು ದಿನವಾದ್ರೂ ಆರಾಮಾಗಿ ಇರೋಕೆ ಬಿಡು... ನಾನೂ ದುಡ್ದು ಸುಸ್ತಾಗಿರ್ತೀನಿ.. ನೀ ಹೇಳಿದ ಕೆಲ್ಸಾನೆಲ್ಲಾ ಮಾಡೋಕೆ ನನ್ನಿಂದಾಗೊಲ್ಲಾ....ಸುಮ್ನೇ ಕಿರಿಕ್ ಮಾಡಿ ನನ್ನ ವೀಕೆಂಡೂ ಹಾಳ್ಮಾಡ್ಬೇಡ..." ಎಂದು ಕೈಕೊಡವಿ ಹೋಗುವ ಪತಿ, "ಅಮ್ಮಾ ಯಾಕಮ್ಮಾ ಕಿರಿ ಕಿರಿ ಮಾಡ್ತೀಯಾ... ಒಳ್ಳೇ ಟಿ.ವಿ. ಪ್ರೋಗ್ರಾಂ ಬರ್ತಾ ಇರೋವಾಗ್ಲೇ ಅದು ತಾ, ಇದ್ನ ಕೊಡು ಅಂತ ಡಿಸ್ಟ್‌ರ್ಬ್ ಮಾಡ್ತೀಯಾ... ಹೋಗಮ್ಮಾ ನೀನು..." ಎಂದು ದೂರುವ ಮಕ್ಕಳು- ಹೀಗೆ ಅಸಹಕಾರ ಚಳುವಳಿ ತೋರುವ ಮನೆಯವರ ಜೊತೆ ಅವರ ತಿಂಡಿ ತೀರ್ಥಗಳನ್ನು, ಬೇಕು ಬೇಡಗಳನ್ನು ಪೂರೈಸುತ್ತಾ, ತನಗಾಗಿ ಒಂದು ತಾಸನ್ನೂ ಹೊಂದಿಸಲು ಪರದಾಡಬೇಕಾಗುತ್ತದೆ ಅವಳಿಗೆ. ಇವೆಲ್ಲವುಗಳ ನಡುವೆ ಭೇಟಿ ನೀಡುವ ಸ್ನೇಹಿತರು, ನೆಂಟರಿಷ್ಟರು, ಇದೆಲ್ಲವುದರ ನಡುವೆ ವಾರಾಂತ್ಯ ಕಳೆದುದರ ಪರಿವೆಯೇ ಇರದಂತಾಗುತ್ತದೆ. ಸಾಮಾನ್ಯವಾಗಿ ಮಹಿಳೆ ತನ್ನ ಪತಿ, ಮಕ್ಕಳೊಡನೆ ಬೆರೆತು ತುಸು ಹೊತ್ತಾದರೂ ಹೊರಗೆ ಕೆಳೆಯುವ, ಆ ಸಮಯದ ನೆನಪಲ್ಲೇ ಮುಂದಿನ ವಾರವಿಡೀ ಕಳೆಯುವ ಆಶಯವನ್ನು ಹೊತ್ತಿರುತ್ತಾಳೆ. ಅದನ್ನರಿತು ನಡೆಯುವ ಮನಃಸ್ಥಿತಿ ಮನೆಯವರಿಗಿರಬೇಕಷ್ಟೆ.
ಸಂಪೂರ್ಣ ಗೃಹಿಣಿಯ ವಾರಾಂತ್ಯ
"ಗೃಹಿಣೀ ಗೃಹಮುಚ್ಯತೇ" ಎಂದಿದ್ದಾರೆ ಸುಭಾಷಿತಕಾರರು. ಮನೆಯ ಶೋಭೆಯೇ ಗೃಹಿಣಿ ಎಂದರ್ಥ. ಆಕೆ ಉದ್ಯೋಗಸ್ಥಳಾಗಿರಲಿ, ಇಲ್ಲದಿರಲಿ, ಮನೆಯ ದೀಪ ಹಾಗೂ ಒಲೆ ಎರಡನ್ನೂ ಹೊತ್ತಿಸುವುದು ಆಕೆಯೇ. ಹೊರಗೂ ಒಳಗೂ ದುಡಿಯುವ ಅವಳ ವಾರಾಂತ್ಯ ಅವಳಿಗಾಗಿ ಏನನ್ನೂ ಬೇಡದು. ಎಲ್ಲವುದನ್ನೂ ಮನೆಗಾಗಿ ಮಕ್ಕಳಿಗಾಗಿ ಮೀಸಲಿಡುತ್ತಾಳೆ. ಸಂಪೂರ್ಣ ಗೃಹಿಣಿಗೆ ವಾರಾಂತ್ಯದ ಸಿಹಿ ಅನುಭವವಾಗುವುದು ಗಂಟೆ ಒಂಬತ್ತಾದರೂ, ಟೀಗಾಗಿ, ತಿಂಡಿಗಾಗಿ ಅವಸರಿಸದೇ ಹಾಸಿಗಯಲ್ಲೇ ಬಿದ್ದು ಸಿಹಿ ನಿದ್ರೆಯನ್ನು ಸವಿಯುವ ಪತಿಯಿಂದಾಗಿ, ತರಾತುರಿಯಲ್ಲಿ ಶಾಲೆಗೆ ಓಡದೇ ಕಿಲ ಕಿಲ ನಗುವ ಮಕ್ಕಳಿಂದಾಗಿ. ಬಾಕಿದಿನಗಳ ಅವಸರ, ಗಡಿಬಿಡಿಗಳಿಂದ ಒಂದು ದಿನವಾದರೂ ಮುಕ್ತಿ ಸಿಕ್ಕ ಅನುಭವ. ಕಾಲದ ಹಂಗಿಲ್ಲದೇ ಊಟ ತಿಂಡಿಗಳ ಕಡೆ ಗಮನ ನೀಡಲು ತುಸು ಸ್ವಾತಂತ್ರ್ಯ. ಒಂದು ವೇಳೆ ಆಕೆಯ ಪತಿ ಅವಳ ಆಸಕ್ತಿಗೆ, ಅಭಿರುಚಿಗೆ ಸ್ಪಂದಿಸುವವನಾಗಿದ್ದರೆ ಮಕ್ಕಳನ್ನು ಪತಿಯ ಬಳಿ ಬಿಟ್ಟು ತುಸು ಕಾಲವಾದರೂ ತನ್ನ ಅಭಿರುಚಿಯ ಕಡೆ ಗಮನ ನೀಡಬಹುದು. ಮನೆಯವರ ಜೊತೆ ಹೊರಗೆ ಹೋಗಿ ಹೊಸ ಚೈತನ್ಯವನ್ನು ತುಂಬಿಕೊಳ್ಳಬಹುದು. ಉತ್ತಮ ಪುಸ್ತಕಗಳನ್ನು ಓದಲು, ಒಳ್ಳೆಯ ಚಲನಚಿತ್ರವನ್ನು ನೋಡಲು, ಹೊಸ ರುಚಿಗಳನ್ನು ಮಾಡಿ ಎಲ್ಲರಿಗೂ ಉಣಬಡಿಸಲು - ಈ ರೀತಿ ಗೃಹಿಣಿಯಾದವಳೂ ತನಗಾಗಿ, ತನ್ನವರಿಗಾಗಿ ವಾರಾಂತ್ಯಕ್ಕಾಗಿ ಕಾತುರಳಾಗಿರುತ್ತಾಳೆ. ಕೆಲಸದವರ ಪರದಾಟ, ಕೈಕೊಡುವಿಕೆ ಈಕೆಯನ್ನು ಅಷ್ಟು ಬಾಧಿಸದು. ವಾರಾಂತ್ಯದಲ್ಲಿ ಬರದಿದ್ದರೂ, ಬೇರೆ ದಿನಗಳಲ್ಲಿ ಮಾಡಿಕೊಳ್ಳುವ, ಇಲ್ಲಾ ಮೊದಲೇ ಮುನ್ಸೂಚನೆ ದೊರಕಿದ್ದರೆ, ವಾರಾಂತ್ಯದ ಮೊದಲೇ ಮುಗಿಸಿಕೊಳ್ಳುವ ಅವಕಾಶ ಆಕೆಗಿರುತ್ತದೆ.
ಗ್ರಾಮೀಣ ಮಹಿಳೆಯ ವಾರಾಂತ್ಯ
ಗ್ರಾಮೀಣ ಮಹಿಳೆಯರಲ್ಲಿ ಈ ವಾರಾಂತ್ಯದ ಬಗ್ಗೆ ಆಲೋಚನೆ ಬರುವುದು ತೀರಾ ಕಡಿಮೆ ಎನ್ನಬಹುದು. ಅವರಿಗೆ ಎಲ್ಲಾ ವಾರವೂ ಏಕತಾನೆಯಿಂದ ಕೂಡಿರುವುದೇ ಹೆಚ್ಚು. ಇನ್ನು ದೂರದೂರಿನಲ್ಲಿ ಕಲಿಯುತ್ತಿರುವ ಮಕ್ಕಳ ಗ್ರಾಮೀಣ ತಾಯಂದಿರು, ವಾರಾಂತ್ಯದಲ್ಲಿ ಬರುವ ಮಕ್ಕಳನ್ನು ನೆನೆದು ಹಿಟ್ಟು-ಹುಡಿ, ಹಪ್ಪಳ-ಸಂಡಿಗೆ ಎಲ್ಲವನ್ನೂ ಮೊದಲೇ ಮಾಡಿಕೊಂಡು, ಅವರಾಗಮನಕ್ಕೇ ಕಾಯುತ್ತಿರುತ್ತಾರೆ. ತಮ್ಮ ಮಕ್ಕಳಿಗಿಷ್ಟವಾದ ಕುರುಕಲು ತಿಂಡಿಗಳನ್ನೋ, ವಿಶೇಷ ಸಿಹಿ ಭಕ್ಷ್ಯಗಳನ್ನೋ ಮಾಡುತ್ತಾ, ಅವನ್ನೆಲ್ಲಾ ಮಕ್ಕಳು ಮೆಲ್ಲುವುದನ್ನು ನೋಡಿ ತೃಪ್ತಿಪಡುತ್ತಾ ಸಂತೃಪ್ತರಾಗುತ್ತಾರೆ. ಆದಿತ್ಯವಾರ ಸಂಜೆಯೇ ಹೊರಡುವ ಅವರಿಗಾಗಿ ಮಾಡಿದ ತಿಂಡಿಯನ್ನು ಕಟ್ಟುತ್ತಾ ಆ ವಾರಾಂತ್ಯದ ಸಿಹಿ ನೆನಪನ್ನೂ ಮನದೊಳಗೆ ಮೆಲ್ಲುತ್ತಿರುತ್ತಾರೆ. ಅದೇ ಅವರನ್ನು ಮುಂದಿನ ವಾರಾಂತ್ಯಕ್ಕಾಗಿ ಕಾತುರದಿಂದ ಕಾಯುವಂತೆ ಮಾಡುತ್ತದೆ.
ಅಕ್ಕ ಪಕ್ಕದವರಿಂದ, ನೆಂಟರಿಷ್ಟರಿಂದ ಹೊಸ ರುಚಿಗಳನ್ನು ತಯಾರಿಸುವ ವಿಧಾನವನ್ನು ವಿನಿಮಯ ಮಾಡಿಕೊಳ್ಳುತ್ತಾ, ಅವುಗಳನ್ನು ಬರುವ ಮಕ್ಕಳಿಗೆ ಮಾಡಿ ಉಣಬಡಿಸುವ ತವಕದಲ್ಲೇ ವಾರಾಂತ್ಯವನ್ನು ಸ್ವಾಗತಿಸುತ್ತಾರೆ. ಇದು ಕೇವಲ ಗ್ರಾಮೀಣ ಪ್ರದೇಶಗಳ ಮಹಿಳಿಯರು ಮಾತ್ರವಲ್ಲ, ನಗರವಾಸಿಯಾದ ಮಹಿಳೆಯರ ಕಥೆಯೂ ಹೌದು. ಪರವೂರಿನಲ್ಲಿ ಕೆಲಸಮಾಡುತ್ತಿರುವ, ಓದುತ್ತಿರುವ ಗಂಡ-ಮಕ್ಕಳ ಆಗಮನಕ್ಕಾಗಿ ಕಾಯುತ್ತಾ, ಎಲ್ಲರನ್ನೂ ಸೇರಿಕೊಂಡು ಸಂಭ್ರಮಿಸುವ ಅವಕಾಶ ಅವರಿಗೆ ಲಭ್ಯವಾಗುವುದು ವಾರಾಂತ್ಯದಲ್ಲೇ.
ವಾರದ ಶುಭಾರಂಭಕ್ಕೆ ಅತ್ಯಗತ್ಯ ಈ ವಾರಾಂತ್ಯ
ಈ ರೀತಿ ವಾರಾಂತ್ಯ ಮಹಿಳೆಯರಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿದೆ. ತಮ್ಮ ಅಭಿರುಚಿಗಳನ್ನು ಬೆಳೆಸಿಕೊಳ್ಳಲು, ತಮ್ಮ ನೈಪುಣ್ಯತೆಯನ್ನು ಮೆರೆಯಲು, ಅಸ್ತಿತ್ವವನ್ನು ಉಳಿಸಿಕೊಳ್ಳಲು, ಮಹಿಳೆ ವಾರಾಂತ್ಯದಲ್ಲಿ ಒಂದೆರಡು ಗಂಟೆಗಳನ್ನಾದರೂ ತನಗಾಗಿ ಮೀಸಲಿಡಲು ಯತ್ನಿಸಿದರೆ ಏನೋ ತೃಪ್ತಿ, ನೆಮ್ಮದಿ ಆಕೆಗೂ ಮೂಡುವುದು. ಆದರೆ ಇಂದಿನ ಯುಗದಲ್ಲಿ ಆ ಸಮಯವನ್ನು ಪಡೆಯುವುದೂ ಬಹು ಕಷ್ಟವೇ ಸರಿ. ಎಲ್ಲಾ ಕಷ್ಟಗಳ ನಡುವೆಯೂ ಒಂದು ಪರಿಹಾರದ ದಾರಿ ಇದ್ದೇ ಇರುತ್ತದೆಯಂತೆ. ಆ ದಾರಿಯನ್ನು ಹುಡುಕುವ ಜಾಣ್ಮೆ ಹಾಗೂ ಕೊಂಚ ಸಹನೆ ನಮ್ಮೊಳಗಿದ್ದರೆ ಸಾಕು. ಕಷ್ಟವೂ ಸುಲಭವಾಗುತ್ತದೆ. ವಾರಾಂತ್ಯವೆಂದರೆ ಸಿಕ್ಕಾಪಟ್ಟೆ ತಿನ್ನುವುದು, ಹುಚ್ಚಾಪಟ್ಟೆ ತಿರುಗುವುದು, ಚಲನಚಿತ್ರಗಳನ್ನು ನೋಡುತ್ತಾ ಸಮಯವನ್ನು ಕೊಲ್ಲುವುದು ಅಲ್ಲವೇ ಅಲ್ಲಾ.
ವಾರವಿಡೀ ಓಡಾಡಿ, ದುಡಿದು ದಣಿದ ದೇಹವನ್ನು, ಒತ್ತಡ ತುಂಬಿದ್ದ ಮನಸ್ಸನ್ನು ಮುಂದಿನ ವಾರಕ್ಕೆ ತಯಾರಿಗೊಳಿಸುವುದಕ್ಕಾಗಿಯೇ ಇರುವ ನಿಲ್ದಾಣ ಈ ವಾರಾಂತ್ಯ. ನಿಲ್ದಾಣದ ತುಂಬಾ ಗಜಿಬಿಜಿ, ಗೊಂದಲ, ಅವಿರತ ಗಲಾಟೆಯೇ ತುಂಬಿದ್ದರೆ ಮನಸೂ ಅಶಾಂತವಾಗುತ್ತದೆ, ದೇಹ ಮತ್ತೂ ಸೋಲುತ್ತದೆ. ಅದೇ ಮುಂದಿನವಾರಕ್ಕೂ ಮುಂದುವರಿದು ನಮ್ಮನ್ನು ಸುಸ್ತಾಗಿಸುತ್ತದೆ. ಉತ್ತಮ ಹಾಗೂ ಆರೋಗ್ಯಕರ ವಾರಾಂತ್ಯವನ್ನು ಯೋಚಿಸಿ, ಯೋಜಿಸಿ ಕಾರ್ಯರೂಪದಲ್ಲಿ ತಂದರೆ, ನಾವು ವಾರದಾರಂಭವನ್ನು ಹೊಸ ಉಲ್ಲಾಸದಿಂದ, ಚೈತನ್ಯದಿಂದ ಸ್ವಾಗತಿಸಬಹುದು.
[ಮೇ ೧೫ರ ಕನ್ನಡಪ್ರಭದ "ಸಖಿ" ಪಾಕ್ಷಿಕದಲ್ಲಿ ಪ್ರಕಟಿತ ಲೇಖನ]
-ತೇಜಸ್ವಿನಿ ಹೆಗಡೆ.
ಸಾಲುಗಳು
- Add new comment
- 1122 views
ಅನಿಸಿಕೆಗಳು
Re: ವಾರ ಬಂತಮ್ಮಾ.... ರವಿವಾರ ಬಂತಮ್ಮಾ....
ಗೃಹಿಣಿ ಇಲ್ಲದಿದ್ದರೆ "ಗೃಹಮುಚ್ಚು"ವುದು ಗ್ಯಾರಂಟಿ