Skip to main content

ಮೊದಲ ಮಳೆ

ಬರೆದಿದ್ದುMay 17, 2010
12ಅನಿಸಿಕೆಗಳು

ರಾತ್ರಿ ಆಫೀಸಿನಿಂದ ವಾಪಸ್ಸು ಬರುತ್ತ, ಆಗ ತಾನೇ ಶುರುವಾಗಿದ್ದ ಜಿಟಿ ಜಿಟಿ ಮಳೆ ಧಾರಾಕಾರವಾಗುವ ಮೊದಲು ರೂಮ್ ತಲುಪಬೇಕೆಂದು ಬೈಕಿನ ಆಕ್ಸಿಲರೇಟರ್ ತಿರುವಿ ನಾಗಾಲೋಟಕ್ಕೆ ಅಣಿಯಾದವನು, ಥಟ್ಟನೆ ಕಣ್ಣು ಕೆಂಪು ಮಾಡಿಕೊಂಡ ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಲ್ಲಿಸ ಹೋಗಿ ನೆನೆದ ರೋಡಿನ ಮೇಲೆ ಅರಗಿನಂತೆ ಒರೆದುಕೊಂಡಿದ್ದ ಗುಲ್ಮೊಹರ್ ಮರಗಳ ಅರೆದ ಬೀಜಗಳ ಅಂಟಿನ ಮೇಲೆ ಜಾರಿ ಬಿದ್ದು, ಆಚೀಚಿನವರು ಬಂದು, ಬೈಕು ಎತ್ತಿ, ಇವನನ್ನೂ ಎತ್ತಿ “ಏನೋ ಪೆಟ್ಟಾಗಿಲ್ಲ ತಾನೇ? ಸ್ವಲ್ಪ ನೋಡಿಕೊಂಡು ರೈಡ್ ಮಾಡಿ ಸರ್, ಮಳೆಗೆ ರೋಡುಗಳೆಲ್ಲ ಜಾರ್ತವೆ” ಅಂದು, ಇವನ ಬೈಕಿನ ನಾಗಾಲೋಟ ಎದೆಗೂಡಿಗೆ ರವಾನೆಯಾಗಿ, ಕೈಗಳು ಅದುರುತಿದ್ದರೂ, ತೊಡೆಗಳು ನಡುಗುತಿದ್ದರೂ, ನಿಲ್ಲದೇ ಮನೆಗೆ ಬಂದವನು ಮೊದಲು ‘ಡ್ಯಾಮೇಜ್ ಅಸ್ಸೆಸ್‌ಮೆಂಟ್’ ಮಾಡಿಕೊಂಡು ‘ಏನೂ ಆಗಿಲ್ಲ’  ಅಂದು ಸಮಾಧಾನದಿಂದ ಕೋಟಿನ ಜೇಬಿನೊಳಗಿದ್ದ ಮೊಬೈಲಿನ ಪರದೆ ನೋಡಿದರೆ ಆಗಲೇ ಆಗಲೇ ಒಂಬತ್ತು ಮಿಸ್ಡ್ ಕಾಲ್ಸ್, ಮೂರು ಸಂದೇಶಗಳು, ‘ಎಲ್ಲಿದೀಯಾ? ಆಫೀಸ್ ಬಿಟ್ಯಾ?’, ‘ಯಾಕೆ ಫೋನ್ ಎತ್ಕೋತಾ ಇಲ್ಲ’, ‘ಮೆಸೇಜ್ ಕಂಡ ತಕ್ಷಣ ಕಾಲ್ ಮಾಡು’...
[img_assist|nid=6583|title=|desc=|link=node|align=left|width=200|height=150]
‘ಹಲೋ’
‘ಮ್.. ರೂಮ್ ತಲುಪಿದ್ಯಾ?’
‘ಹೂಂ, ಈಗ ತಾನೇ ತಲುಪಿದೆ, ದಾರಿಯಲ್ಲಿ ಬಿದ್ದುಬಂದೆ’
‘ಏನೂ?’
‘ಆಕ್ಸಿಡೆಂಟ್ ಆಯ್ತು, ಬೈಕು ಜಾರಿ, ದಾರೀಲಿ ಬಿದ್ದು ಬಂದೆ ಅಂತಂದೆ’
‘ಎಲ್ಲಿ, ಹೇಗೆ, ಏನಾದ್ರೂ ಪೆಟ್ಟಾಗಿದೆಯಾ?’
‘ಹೇ ಏನೂ ಆಗಿಲ್ಲ. ಬೈಕಿನ ಗಾರ್ಡ್ ನೆಗ್ಗಿಹೋಗಿದೆ, ನಂಗೇನೂ ಆಗಿಲ್ಲ’
‘ನಿಜವಾಗ್ಯೂ ನಿಂಗೇನೂ ಆಗಿಲ್ವಾ? ಹೇಗಾಯ್ತು ಆಕ್ಸಿಡೆಂಟ್?’
‘ಅದೇ ಸೇಂಟ್ ಜಾನ್ಸ್ ಸರ್ಕಲ್ಲಿನಲ್ಲಿ, ಮಳೆ ಬೇರೆ ಶುರುವಾಗಿತ್ತಲ್ಲಾ... ...’
‘ನಾನೀಗ್ಲೇ ಹೊರಟು ಬರ್ತೀನಿ’ ‘ಹೇ, ಬೇಡ, ನಂಗೇನೂ ಆಗಿಲ್ಲಅಂತಾ ಹೇಳಿದೆನಲ್ಲ?’
‘ಅದೆಲ್ಲ ಗೊತ್ತಿಲ್ಲ, ನಾನು ಆಟೊ ತಗೊಂಡು ಬರ್ತೀನಿ’
‘ಬೇಡಾ, ಈಗಾಗ್ಲೇ ಒಂಬತ್ತು ಗಂಟೆ, ಮತ್ತೆ ನೀನು ಬಂದರೆ ನಿನ್ನನ್ನು ವಾಪಸ್ಸು ಪೀಜಿಗೆ ಬಿಟ್ಟು ಬರೋಕೆ ನನಗಾಗೋಲ್ಲ’ ‘ಅದೆಲ್ಲ ಆಮೇಲೆ ತಲೆ ಕೆಡಿಸಿಕೊಳ್ಳೋಣ’ ಅಂತಾ ಅವಳು ಕರೆ ತುಂಡರಿಸಿದಳು...
ಇವನು ಮತ್ತೊಮ್ಮೆ ತನ್ನ ಮೈಯನ್ನೆಲ್ಲ ನೋಡಿಕೊಂಡ, ಎಡಗಾಲಿನ ಮೀನಖಂಡದುದ್ದಕ್ಕೆ ಮೂರಿಂಚಿನ ತರಚು ಗೆರೆ ಬಿಟ್ಟರೆ ಮತ್ತಿನ್ನೇನೂ ಆಗಿರಲಿಲ್ಲ. ಅವಳು ಬರುತ್ತಿರುವುದಕ್ಕಾದರೂ ಇನ್ನೂ ಸ್ವಲ್ಪ ಜಾಸ್ತಿ ಪೆಟ್ಟಾಗಿರಬೇಕಾಗಿತ್ತು ಅನಿಸಿತು. ಬಟ್ಟೆ ಬದಲಿಸಿ, ಮುಖ ತೊಳೆದುಕೊಂಡು, ರೂಮನೆಲ್ಲ ನೀಟು ಮಾಡುವ ಹೊತ್ತಿಗೆ ಅವಳು ಒಳಬಂದಳು, ‘ಬೈಕಿನ ಗಾರ್ಡ್ ನಿಜವಾಗ್ಯೂ ಬೆಂಡ್ ಆಗಿದೆ? ಎಲ್ಲಿ ತೋರಿಸು, ಏನಾದ್ರೂ ಏಟಾಗಿದೆಯಾ?’ ಮುಂದಿನ ಹತ್ತು ನಿಮಿಷಗಳಲ್ಲಿ ಅವಳ ಸೂಕ್ಷ್ಮ ಪರೀಕ್ಷೆಗೆ ಒಳಗಾಗಿ, ‘ಪರವಾಗಿಲ್ಲ, ಏನೂ ಆಗಿಲ್ಲ, ಗಾಡಿ ಮೆಲ್ಲ ಓಡಿಸು ಅಂದ್ರೆ ನನ್ನ ಮಾತನೆಲ್ಲಿ ಕೇಳ್ತೀಯಾ' ಅಂದೆನಿಸಿಕೊಂಡು, ಮಂಚದ ಮೇಲೆ ಟೀವಿಯ ರಿಮೋಟ್ ಹಿಡಿದುಕೊಂಡು ಇವನು ಅಡ್ಡಾದ. ಅವಳು ಅಡುಗೆ ಮನೆ ಹೊಕ್ಕಳು,
‘ಏನಿದೆ ಕಿಚನ್ನಿನಲ್ಲಿ? ಏನು ತಿಂತೀಯಾ?’ ಅಡುಗೆ ಮನೆಯಲ್ಲಿ ಎಲ್ಲವನ್ನು ತಡಕಾಡುತ್ತಲೇ ಪ್ರಶ್ನೆಗಳ ಸರಪಳಿ ಹರಿಯಬಿಟ್ಟಳು. 
‘ಮ್ಯಾಗಿ ಇದೆ’
‘ಸರಿ ಬಿಡೂ, ಅದನ್ನೇ ಮಾಡ್ತೀನಿ, ಹಾಲಿದೆಯಾ? ಈಗ ನೀರು ಕುಡಿತೀಯಾ?’
‘ಹೂಂ, ನಿನ್ನ ಊಟ ಆಯ್ತಾ?’
‘ಎಲ್ಲಿಂದ ಆಗುತ್ತೆ, ಈಗ ತಾನೇ ಸ್ನಾನ ಮುಗಿಸಿ ಊಟಕ್ಕೆ ರೆಡಿಯಾಗ್ತಾ ಇದ್ವು, ನಾನೂ ನನ್ನ ಫ್ರೆಂಡ್ಸು...’
ಇವನಿಗೆ ನೀರಿನ ಬಾಟಲಿ ತಂದುಕೊಟ್ಟು, ತನ್ನ ಕೈಬ್ಯಾಗಿನಿಂದ ‘ಹಾಸ್ಟೇಲಿನಲ್ಲಿ ಫ್ರೆಂಡ್ ಹತ್ರ ಇಸ್ಕೊಂಡು’ ಬಂದಿದ್ದ ಕ್ರೀಮ್ ಅವನ ಮೀನಖಂಡದ ಗೀರಿಗೆ ಸವರಿ, ಎದ್ದು ಹೊರಟವಳನ್ನು ಇವನು ಎಳೆದು ತನ್ನೊಟ್ಟಿಗೆ ಕೂರಿಸಿಕೊಂಡ, ‘ಈಗ್ಲೇ ಮ್ಯಾಗಿ ಬೇಡಾ’. ‘ಸರೀ, ಸ್ವಲ್ಪ ತಡೀ’ ಅಂತೆದ್ದು ಅವಳು ಟೀವಿಯ ಮೇಲಿದ್ದ ಹಾರ್ಡ್ ಕ್ಯಾಂಡಿಗಳ ಡಬ್ಬ ತಂದುಕೊಂಡಳು. ಇವನ ಎದೆಗೆ ಒರಗಿದಂತೆ ಕುಳಿತು, ಅವನ ಕೈಯಿಂದ ರಿಮೋಟ್ ಕಸಿದುಕೊಂಡು ಕಾರ್ಟೂನ್ ನೆಟ್ವರ್ಕ್ ಹಾಕಿಕೊಂಡಳು. ತನ್ನ ಕಾರ್ಯಕ್ರಮಗಳ ಜೋಳಿಗೆಯೆಲ್ಲ ಖಾಲಿಯಾದಂತೆ ಕಾರ್ಟೂನ್ ನೆಟ್ವರ್ಕ್ ಮತ್ತೆ ‘ಟಾಮ್ ಅಂಡ್ ಜೆರ್ರಿ’ ಪ್ರಸಾರ ಮಾಡುತ್ತಿತ್ತು. ಅವಳು ಅದನ್ನೇ ತದೇಕಚಿತ್ತದಿಂದ ನೋಡುತ್ತ, ಕ್ಯಾಂಡಿ ಡಬ್ಬದಿಂದ ಒಂದೊಂದೇ ಕ್ಯಾಂಡಿಯ ಸಿಪ್ಪೆ ತೆಗೆದು ತಿನ್ನಲಾರಂಭಿಸಿದಳು, ಇವನು ನಕ್ಕ, ‘ಬರೀ ಲೆಮನ್ ಕ್ಯಾಂಡಿಗಳನ್ನಷ್ಟೇ ಆರ್ಸಿ ಆರ್ಸಿ ತಿನ್ನು, ಆಯ್ತಾ?’, ‘ಸರಿ ಬರೀ ಲೆಮನ್ ಅಷ್ಟೇ ತಿಂತೀನಿ, ಇಗೋ ಈ ಸ್ಟ್ರಾಬೆರಿ ನನಗೆ ಬೇಡ’ ಎಂದು ಇವನ ಬಾಯಿಗಿಷ್ಟು ಸ್ಟ್ರಾಬೆರಿ ಕ್ಯಾಂಡಿಗಳನ್ನ ತುರುಕಿದಳು. ‘ವಿಚಿತ್ರ ಹುಡುಗಿ ನೀನು, ಸ್ಟ್ರಾಬೆರಿ ಇಷ್ಟ ಆಗೋಲ್ಲ ಅಂತಿಯಾ’ ಅವನು ತುಂಬಿದ ಬಾಯಿಯಲ್ಲೇ ನುಡಿದ...
ಅವಳ ತೊಳೆದ ಒದ್ದೆ ತಲೆಗೂದಲು ಅವನ ಎದೆಗೆ ಒತ್ತಿ, ಬಿಸುಪು ತಂಪನ್ನೆರಡನ್ನೂ ಇವನೆದೆಗೆ ರವಾನೆ ಮಾಡುತಿತ್ತು. ಅವಳ ಕೂದಲಿನ ಘಮ, ತೊಳೆದ ಮೈ, ಅಷ್ಟು ಹತ್ತಿರದಲ್ಲಿದ್ದೂ ದಕ್ಕದ ಅವಳ ಚಾಕೋಲೇಟ್ ಲೇಪದ ಸಿಹಿ ತುಟಿಗಳು ಮತ್ತು ಅವಳು ತನ್ನ ಮೇಲಕ್ಕೊರಗಿಕೊಂಡಿದ್ದ ಭಂಗಿ ಎಲ್ಲವೂ ಇವನಿಗೆ ಸುಖವಾದ ಹಿಂಸೆಯನ್ನುಂಟುಮಾಡುತ್ತಿದ್ದವು. ಆದರೆ ಈ ಕ್ಷಣಕ್ಕೆ ದಕ್ಕದ್ದಕ್ಕೆ ಚಿಂತಿಸಿ ಫಲವಿಲ್ಲವೆಂದುಕೊಂಡು ಸಮಾಧಾನ ಮಾಡಿಕೊಳ್ಳುತಿದ್ದವನಿಗೆ ಯಾವುದೋ ಮಾಯೆಯಲ್ಲಿ ಜೊಂಪು ಹತ್ತಿತ್ತು. ಎಷ್ಟೋ ಹೊತ್ತಾದ ಮೇಲೆ ಬಹಳಷ್ಟು ಲೆಮನ್ ಕ್ಯಾಂಡಿಗಳನ್ನು ತಿಂದು ಹೊಟ್ಟೆಯೆಲ್ಲ ಹುಳಿಹುಳಿಯೆನಿಸಿ, ಅವಳು ಇವನ ತೆಕ್ಕೆಯಿಂದೆದ್ದು ಬಚ್ಚಲಿಗೆ ನಡೆದಳು. ಇವನು ಮೆಲ್ಲನೆದ್ದು ತನ್ನ ಹಿಡಿತಕ್ಕೆ ಸಿಕ್ಕಿದ ರಿಮೋಟಿನಿಂದ, ಟೀವಿಯಲ್ಲಿ ಜೆರ್ರಿಯ ಕಾಲಿಗೆ ಬಿದ್ದು ಬೇಡಿಕೊಳ್ಳುತ್ತಿದ್ದ ಟಾಮ್-ನನ್ನು ನೋಡಿಯೂ ಕರುಣೆಯಿಲ್ಲದೇ ಚಾನೆಲ್ ಬದಲಾಯಿಸಿದ...
ಮ್ಯಾಗಿ ತಿನ್ನುವಾಗ ಅವಳನ್ನು ಕೇಳಿದ, ‘ವಾಪಸ್ಸು ಪೀಜಿಗೆ ಹೇಗೆ ಹೋಗ್ತೀಯಾ?’
‘ಇಲ್ಲ, ಇವತ್ತು ಇಲ್ಲೇ ಇರ್ತೀನಿ’ ತಲೆ ತಗ್ಗಿಸಿ ತಿನ್ನುತಿದ್ದವನು ಖುಷಿ ತಡೆದುಕೊಳ್ಳಲಾರದೇ ನಸುನಕ್ಕ, ಮ್ಯಾಗಿಯ ರಸ ನೆತ್ತಿಗೇರಿತು. ಅವಳು ಅವನ ತಲೆ ಮೊಟಕಿದಳು,
‘ಇಷ್ಟು ದಿನ ಬೇಡಿಕೊಂಡರೂ ಹೆದರಿ ರಾತ್ರಿ ಉಳಿದುಕೊಳ್ಳದವಳು, ಇವತ್ತು ತಾನಾಗೇ ಬಂದು ರೂಮಿನಲ್ಲಿ ಉಳಿದುಕೊಳ್ತಿದಾಳೆ, ಅಂತಾ ಖುಷಿಯಾಗ್ತಿದೆ ಅಲ್ವಾ?’ ಅವನು ಹಲ್ಲು ಕಿರಿದು, ಹೂಂ ಎನ್ನುವಂತೆ ತಲೆಯಲ್ಲಾಡಿಸಿದ.
‘ಜಾಸ್ತಿಯೆಲ್ಲ ಆಸೆ ಇಟ್ಕೋಬೇಡ, ಹೊರಗಡೆ ಮೊದಲನೆ ಮಳೆ ಕೂಡಾ ಬೀಳದೇ ನಿಂತು ಹೋಗಿದೆ, ಗೊತ್ತಲ್ಲಾ?’ ನಿಜ, ಅವಳು ಹೇಳುವ ಹಾಗೆಯೇ ಆಗ ಶುರುವಾಗಿದ್ದ ಮೊದಲ ಮಳೆ ಈಗ ಹೇಳಹೆಸರಿಲ್ಲದಂತೆ ನಿಂತು ಹೋಗಿತ್ತು. ಬೇಸಿಗೆಯ ರಾತ್ರಿಗಳ ಬಹುಪರಿಚಿತ ಪರಿಚಿತ ಸೆಖೆ ಮೆಲ್ಲನೆ ಮತ್ತೆ ಆವರಿಸಿಕೊಳ್ಳುತಿತ್ತು...
* * * *
[img_assist|nid=6584|title=|desc=|link=node|align=left|width=200|height=150]ಬೆಳಗಿನ ಜಾವ ಐದಕ್ಕೆಲ್ಲ ಇವನಿಗೆ ಎಚ್ಚರವಾಯಿತು. ರಾತ್ರಿಯೆಲ್ಲ, ಒಂಟಿಯಾಗಿ ನಿದ್ದೆ ಬರದೇ ಹೊರಳಾಡಿದ್ದಕ್ಕೆ ಸಾಕ್ಷಿಯಾಗಿ ಒರಟು ನೆಲದ ಮೇಲೆ ಹಾಸಿಕೊಂಡಿದ್ದ ಬೆಡ್-ಶೀಟು ಚೆಲ್ಲಾಪಿಲ್ಲಿಯಾಗಿತ್ತು. ಬೆಡ್-ಲ್ಯಾಂಪಿನ ಮಂಕು ಬೆಳಕಿನಲ್ಲಿ, ಪಕ್ಕದಲ್ಲೇ ತನ್ನನ್ನು ತನ್ನ ಹಾಸಿಗೆಯಿಂದಲೇ ಹೊರಗೆ ದೂಡಿ ಹಾಯಾಗಿ ನಿದ್ರಿಸುತಿದ್ದವಳನ್ನು ನೋಡಿದ. ತನ್ನದೇ ಟೀ ಶರ್ಟು, ಬರ್ಮುಡಾದಲ್ಲಿ ಮುದ್ದಾಗಿ ಕಾಣುತಿದ್ದಾಳೆ ಅಂದುಕೊಂಡ. ಆ ಕ್ಷಣದಲ್ಲಿ ಹೊರಗೆ ಸುಳಿವೇ ಕೊಡದಂತೆ ರಾತ್ರಿಯೆಲ್ಲ ‘ಹುಯ್ಯಲೋ ಬೇಡವೋ’ ಎಂದು ತಡೆದು ನಿಂತಿದ್ದ ಮೊದಲ ಮಳೆ ಮುಸಲಧಾರೆಯಾಗಿ ಶುರುವಾಯ್ತು. ತೆರೆದೇ ಇಟ್ಟಿದ್ದ ಕಿಟಕಿಯಿಂದ ನುಗ್ಗಿದ ಬಲವಾದ ಸುಳಿಗಾಳಿಯಿಂದಾಗಿ ಕೋಣೆಯ ಒಳಗೆ ಹೆಪ್ಪುಗಟ್ಟಿ ನಿಂತಿದ್ದ ಸೆಖೆಯೆಲ್ಲ ಥಟ್ಟನೆ ಗುಡಿಸಿಹೋಯ್ತು. ತಣ್ಣಗಿನ ಸುಳಿಗಾಳಿಯೊಂದಿಗೆ ಒಳಬಂದ ಮೊದಲ ಮಳೆಯ ತುಂತುರು ಇವನಲ್ಲಿ ಛಳಿ ಹುಟ್ಟಿಸಿತು. ಇವನು ಮೆಲ್ಲನೆ ಅವಳನ್ನು ಒತ್ತರಿಸಿಕೊಂಡು ಹಾಸಿಗೆಯೆ ಮೇಲಕ್ಕೆ ಸರಿದುಕೊಂಡ...
ಇವನೆಡೆಗೆ ಹೊರಳಿಕೊಂಡ ಅವಳ ಹಣೆಯ ಮೇಲೆ ಸೆಕೆಯ ಬಿಸುಪು ಬೆವರಿನ ಹನಿಗಳ ಚಿತ್ತಾರ ಹೆಣೆದಿತ್ತು. ಹೊಟ್ಟೆಯಾಳದಲೆಲ್ಲೋ ಮೊಳಕೆಯೊಡೆದ ಬಯಕೆಯ ಭಾರದಿಂದ ಎದೆಬಡಿತ ಹೆಚ್ಚಾಗಿ, ಢವಢವಿಸುವ ಹೃದಯದೊಂದಿಗೆ ಇವನು ತನ್ನ ಅದುರುವ ತುಟಿಗಳನ್ನು ಅವಳ ಹಣೆಗೆ ಒತ್ತಿದ. ಅವಳಿಗೆ ಎಚ್ಚರಾಯಿತು. ಮ್.. ಎನ್ನುತ್ತ ಅವನ ಅಪ್ಪುಗೆಯೊಳಕ್ಕೆ ಸರಿದುಕೊಂಡ ಅವಳು ಥಟ್ಟನೆ ‘ಹೇ! ನೀನು ಹಾಸಿಗೆ ಮೇಲಕ್ಕೆ ಯಾಕೆ ಬಂದೆ?’ ಎಂದು ತಳ್ಳಲು ಯತ್ನಿಸಿದಳು, ಇವನು ಅಪ್ಪುಗೆ ಸಡಿಲಿಸದೇ ‘ಆದರೆ ಹೊರಗಡೆ ಮೊದಲನೆ ಮಳೆ ಬರ್ತಿದೆ’ ಅಂದ. ‘ಹಾಂ, ಹೌದಾ?’ ಅವಳು ಕಣ್ಬಿಟ್ಟು, ಕಿವಿಗೊಟ್ಟು ಮಳೆಯ ಸಪ್ಪಳವನ್ನು ಆಲಿಸಿದಳು. ಮ್! ಅನ್ನುತ್ತ ಅವನ ತೆಕ್ಕೆಯೊಳಕ್ಕೆ ಸರಿದುಕೊಂಡು, ಅವನ ಎದೆಗೆ ಹೂ ಮುತ್ತನಿಟ್ಟು ಉಸುರಿದಳು, ‘ಕ್ಯಾಂಡಲ್ಸ್!’ ಇವನು ಏನೂ ಅರ್ಥವಾಗದೇ ಚಕಿತನಾಗಿ ಕೇಳಿದ, ‘ಏನೂ?’ ಅವಳು ಇನ್ನೂ ಮೆಲ್ಲನೆ ನುಡಿದಳು, ‘ನಾವು ನಮ್ಮ ಕ್ಯಾಂಡಲ್ ಲೈಟ್ ಡಿನ್ನರ್ ಗೆ ಅಂತಾ ತಂದಿದ್ದೆವಲ್ಲ, ‘ಸೆಂಟೆಂಡ್ ಕ್ಯಾಂಡಲ್’ ಎಲ್ಲಿವೆ ಅವು?’ 'ಕೊಡ್ತೀನಿ ತಡಿ’ ಎಂದು ಎದ್ದವನೇ ಇವನು ಕಬೋರ್ಡ್ ತೆಗೆದು ಅಲ್ಲಿ ಇಲ್ಲಿ ತಡಕಾಡಿ ಮೊಂಬತ್ತಿಗಳನ್ನು ತೆಗೆದುಕೊಂಡ. ಅವಳು ಇವನ ಕೈಯಿಂದ ಮೊಂಬತ್ತಿಗಳನ್ನು ಕಸಿದುಕೊಂಡು ‘ಸರಿ, ಸ್ವಲ್ಪ ಹೊತ್ತು ಹೊರಗಿರು’ ಎಂದು ಅವನನ್ನು ಹೊರಕ್ಕೆ ತಳ್ಳಿ ಬೆಡ್-ರೂಮಿನ ಬಾಗಿಲು ಹಾಕಿಕೊಂಡಳು...
ಅನಂತವೆನಿಸಲಾರಂಭಿಸಿದ ನಿಮಿಷಗಳ ಕಾಯುವಿಕೆಯನ್ನು ಇವನು ಹಜಾರದ ಗಾಜಿನ ಕಿಟಕಿಯಿಂದ ಹೊರಗಿನ ಮಳೆಯನ್ನು ನೋಡುತ್ತ ಕಳೆದ. ಏರಿಳಿಯುತ್ತಿದ್ದ ಎದೆ ಬಡಿತ, ಹೆಚ್ಚಾದ ಮೈಬಿಸಿ, ಕಿಬ್ಬೊಟ್ಟೆಯೊಳಗೆ ಫಡಫಡಿಸಲಾರಂಭಿಸಿದ ಹೊಸಬಯಕೆಯ ಪಾತರಗಿತ್ತಿಗಳು ಇವನನ್ನು ಹಿಂಸೆಗೀಡುಮಾಡುತ್ತಿರುವಂತೆಯೇ ಅವಳು ಬೆಡ್-ರೂಮಿನ ಬಾಗಿಲು ತೆರೆದಳು...
ಹಾಸಿಗೆಯ ಮೇಲೆ ಹರಡಿದ್ದ ಗುಲಾಬಿ ಹೂವಿನ ದಳಗಳು, ಹಾಸಿಗೆಯ ಪಕ್ಕದ ನೆಲದ ಮೇಲೆ, ಕಿಟಕಿಯ ಮೋಟುಗೋಡೆಯ ಮೇಲೆ, ಟೀಪಾಯಿಯ ಮೇಲೆಲ್ಲ ಚೆಲ್ಲಿದಂತೆ ಹರಡಿದ್ದ ಚಾಕಲೇಟ್ ಬಣ್ಣದ ಗಾಜಿನ ಕಲ್ಲುಗಳು, ಜೊತೆಗೆ ಹೊತ್ತಿಸಿಟ್ಟಿದ್ದ ಮೊಂಬತ್ತಿಗಳ ಬೆಳಕು, ರೂಮಿನ ತುಂಬ ಹರಡಿದ್ದ ಯಾವುದೋ ಸುಗಂಧ, ತಿಳಿಹಳದಿ ಬೆಳಕಿನಲ್ಲಿ ಥಳಥಳಿಸುತ್ತಿದ್ದ ಅವಳು... ಎಲ್ಲವನ್ನು ಅಚ್ಚರಿಯಿಂದ ಗಮನಿಸುತ್ತಿದ್ದ ಇವನನ್ನು ನೋಡಿ ಅವಳು ನಸು ನಕ್ಕಳು. ‘ಇದೆಲ್ಲ ಎಲ್ಲಿಂದ..?’
‘ನನ್ನ ಹಾಸ್ಟೆಲಿನಿಂದ ತಂದಿದ್ದೆ, ನನ್ನ ಬ್ಯಾಗ್-ನಲ್ಲಿ...’ ಅವಳು ಹತ್ತಿರ ಬಂದಳು,
‘ಎಲ್ಲಾ ತಯಾರಾಗೇ ಬಂದಿದ್ದೇ ಅನ್ನು?’ ಇವನಿಗಿನ್ನೂ ನಂಬಿಕೆಯೇ ಬಂದಿರಲಿಲ್ಲ.
‘ಹೂಂ!’ ಅವಳು ಮೆಲ್ಲನೆ ಇವನ ಕೊರಳ ಸುತ್ತ ತನ್ನ ಕೈಗಳ ಮಾಲೆ ಹೆಣೆದು ಮೂಗಿಗೆ ಮೂಗು ತಾಗಿಸಿದಳು.
‘ಮತ್ತೆ... ನಾನು ಕೇಳದೇ ಹೋಗಿದ್ದರೆ? ಈಗ ಮಳೆ ಬಂದು ನನಗೆ ಎಚ್ಚರಾಗದೇ ಹೋಗಿದ್ದರೇ?’ ಮಂತ್ರಮುಗ್ದನಾಗಿ ಇವನು ಅವಳನ್ನು ಬಳಸಿಕೊಂಡು ಇನ್ನೂ ತನ್ನ ಮೈಯಿಗೆ ಒತ್ತಿಕೊಂಡ, ಅವಳೆದೆಯ ಮಿಡಿತ ಇವನೆದೆಗೂ ತಲುಪಿತು, ಜೊತೆಗೆ ಅವಳ ಮೈಯ ಬೆನ್ನ ಹುರಿಯುದ್ದಕ್ಕೂ ಎದ್ದ ಕಂಪನ ಕೂಡಾ ಇವನ ಕೈಯ ಬೆರಳುಗಳಿಗೆ ದಕ್ಕಿತು.
‘ಅದೆಲ್ಲ ಆಗದೇ ಹೋಗಿದ್ದರೆ, ನಿನಗೆ ಇದೂ ಸಿಗ್ತಾ ಇರಲಿಲ್ಲ’ ಅವಳು ಇವನ ತುಟಿಗಳಿಗೆ ತುಟಿ ತಾಗಿಸಿದಳು ಮತ್ತು ಅವನ ಇನ್ನುಳಿದಿದ್ದ ಎಲ್ಲ ಪ್ರಶ್ನೆಗಳನ್ನೂ ತನ್ನ ಮುತ್ತಿನಿಂದ ಪುಡಿಪುಡಿ ಮಾಡಿದಳು. ಮತ್ತೇರಿದ ಮುಂಜಾವಿನ ಕತ್ತಲಿನಲ್ಲಿ ಹೊರಗೆ ಸುರಿಯುತ್ತಿದ್ದ ಮೊದಲ ಮಳೆ ರೂಮಿನ ಒಳಗೂ ಸುರಿಯಲಾರಂಭಿಸಿತು..
 

ಲೇಖಕರು

ಶಿವಕುಮಾರ ಕೆ. ಎಸ್.

ನನ್ನ ತಲೆ'ಹರಟೆ'ಗಳು

ನಾನೊಬ್ಬ ಏಕಾಂಗಿ(ಇದೂವರೆಗೂ) ಸಂಚಾರಿ. ಸಮಯ, ಸಂದರ್ಭ, ವ್ಯಕ್ತಿಗಳೆಡೆಯಿಂದ ಪಯಣಿಸುತ್ತ, ಎಲ್ಲವನ್ನೂ ಅರ್ಥೈಸಿಕೊಳ್ಳುತ್ತ, ಕಲಿತುಕೊಳ್ಳುತ್ತ, ಯಾರನ್ನೂ ದೂರದೇ, ಪ್ರಜ್ಞಾಪೂರ್ವಕವಾಗಿ ಯಾವುದರ ಬಗೆಗೂ ಪೂರ್ವ-ನಿರ್ಧಾರಿತ ಆಲೋಚನೆಗಳನ್ನಿಟ್ಟುಕೊಳ್ಳದೇ ಸಾಗುತ್ತಿರುವೆ.

ಅನಿಸಿಕೆಗಳು

ಬಾಲ ಚಂದ್ರ ಮಂಗಳ, 05/18/2010 - 11:31

ಶಿವಣ್ಣಾ,
ಅಲಲಲಲೇ!!!!
ಬುದ್ದನ ಮುಂದೆ ಧ್ಯಾನ ಮಾಂಡ್ಕೊಂಡು ಕೂತಿರೋದು ನೋಡಿ, ನಿಮ್ಮನ್ನ ಸಾಧು ಅಂದ್ಕೊಂಡಿದ್ದೆ!
 
ಸಸ್ನೇಹ
ಬಾಲ ಚಂದ್ರ

ಗುಮ್ಮ (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 05/18/2010 - 15:00

ಅಯ್ಯೋ....ಸಾಧುಗಳೇ ಅಲ್ವೇ ಸುದ್ದಿ ಮಾಡ್ತಿರೋದು? ಇನ್ನು ತಲೆಹರಟೆ ಸ್ವಾಮಿಗಳು ಬಿಟ್ಟಾರೇ?

ಕೆಎಲ್ಕೆ ಮಂಗಳ, 05/18/2010 - 20:24

ತುಂಬಾ ಚೆನ್ನಾಗಿದೆ. ಬಹಳ ದಿನಗಳ ನಂತರ ವಿಸ್ಮಯದಲ್ಲೂ ಮಳೆ ಸುರಿದಹಾಗೆ ಆಯ್ತು !!!
ಲೇಖನದ ಭರ್ಜರಿ ಓಪನಿಂಗ ಇಶ್ಟ ಆಯ್ತು. ಹಾಗೆ "ಅವಳು ಬರುತ್ತಿರುವುದಕ್ಕಾದರೂ ಇನ್ನೂ ಸ್ವಲ್ಪ ಜಾಸ್ತಿ ಪೆಟ್ಟಾಗಿರಬೇಕಾಗಿತ್ತು ಅನಿಸಿತು" ಎನ್ನೋ ಹುಡುಗನ ಅನುಭಾವ ಕೂಡ. ಯಾಕೋ ರಾಯರು ಸಿಕ್ಕಾಪಟ್ಟೆ ರೋಮ್ಯಾಂಟಿಕ್ ಆಗ್ತಾ ಆಗ್ತಾ ಇದೀರಾ...ನಿಮ್ಮ ಪ್ರೊಫೈಲ್ ನ "ಇದುವರೆಗೂ" ಎನ್ನೊ ಬ್ರಾಕೆಟ್ ಗೆ ಮುಕ್ತಿ ಯಾವಾಗ??

@ಬಾಲ ಚಂದ್ರ "ನನಗೆ ಆ ನಿಮ್ಮ 'ಮೇಡಮ್ಮು' ಗೊತ್ತು!" ಅಂದಿದುಕ್ಕೆ ಸುಮ್ನಿರ್ದೇ ಹಿಂಗೆಲ್ಲ ಸೇಡು ತೀರುಸ್ಕಂಬಾರ್ದು. ಬುದ್ಧನೂ ಎಲ್ಲ ಕಂಡಾದ ಮೇಲೆ ವಿರಕ್ತನಾಗಿದ್ದು, ಗೊತ್ತಲ್ವಾ? ಅಲ್ಲದೇ ಒಂದೇ ಫೋಟೋ ನೋಡಿ ಸಾಧು ಅನ್ಕಂಬಿಟ್ರೆ ಇನ್ನುಳಿದವುನ್ನ ನೋಡಿದ್ರೆ ಏನನ್ತೀಯೋ!? Laughing@ಗುಮ್ಮ ಸರಿಯಾಗಿ ಹೇಳುದ್ರಿ. ತಲೆಹರಟೆಗಳದ್ದೇ ಈಗ ಸಾಮ್ರಾಜ್ಯ! ಅವ್ರೆಲ್ಲ ಅಷ್ಟೊಂದು ಸಾದ್ನೆ ಮಾಡ್ತಿರ್ಬೇಕಾದ್ರೆ ನಾನು ಇಷ್ಟಾದ್ರೂ ಮಾಡ್ಬಾರ್ದ್ವೇ? Laughing@ಕೆಎಲ್ಕೆ ಈಗ ರೋಮ್ಯಾಂಟಿಕ್ ಆಗ್ತಾ ಇಲ್ಲ, ಯಾವಾಗ್ಲೋ ಆಗ್ಬುಟ್ಟಿದೀನಿ. Tongue out ಪ್ರೊಫೈಲ್ ನ "ಇದುವರೆಗೂ" ಎನ್ನೊ ಬ್ರಾಕೆಟ್ಗೂ ನನ್ನ ರೋಮಾಂಚನಕ್ಕೂ ಸಂಬಂಧವೇ ಇಲ್ಲ! ಅಲ್ಲದೇ ಏಕಾಂಗಿಯಾಗಿರುವಾಗ್ಲೇ ಜಾಸ್ತಿ ರೋಮಾಂಚನ ಅನುಭವಿಸೋಕೆ ಸಾಧ್ಯ! ಹಹ್ಹಹಾ!

ವಸಂತ್ ಸೋಮ, 05/24/2010 - 20:28

  ಆಹಾ ಅದ್ಭುತಾ ವೆನ್ನಲೇಬೇಕು. ನಿಮ್ಮ ಕಥೆ ಓದುತಿದ್ದರೆ ಮನಸ್ಸು ಮಳೆಯಲ್ಲಿ ನೆನೆದು ಬಂದಂತಾಯ್ತು. ನಿಮ್ಮ ಕಲೆ ಕಲ್ಪನಾಚಾತುರ್ಯ. ಕಣ್ಣಿಗೆ ಕಟ್ಟಿದಂತ ಅನುಭವ. ಬಾವ ಪೂರ್ಣ ಸ್ವಷ್ಟಣೆ. ಎಲ್ಲವು ಅದ್ಭುತವಾಗಿವೆ. ನಿಮಗೆ ಅನಂತಕೋಟಿ ಧನ್ಯವಾದಗಳೊಂದಿಗೆ                                                                                                                                         ವಸಂತ್

ಉಮಾಶಂಕರ ಬಿ.ಎಸ್ ಗುರು, 05/20/2010 - 21:04

ಬಿರು ಬೇಸಿಗೆಯ ಬಿಸಿಲಲ್ಲಿ
ತಂಪೆರೆದ ರೋಮಾಂಚನ ತುಂತುರು ಮಳೆ
ಸುಂದರವಾಗಿದೆ ಸರ್!!!

ರಾಜೇಶ ಹೆಗಡೆ ಗುರು, 05/20/2010 - 22:38

ಹಾಯ್ ಶಿವಕುಮಾರ್ ಅವರೇ,ನಿಮ್ಮ ಎಂದಿನ ಅಮೋಘ ಶೈಲಿ ಇಲ್ಲಿ ವಿಜ್ರಂಭಿಸಿದೆ. :) ಧನ್ಯವಾದಗಳು  

Manjunatha HT ಶನಿ, 05/22/2010 - 14:33

ಏನ್ರೀ ಶಿವಕುಮಾರ್, ಪ್ರೇಮದ ಮತ್ತಿನ ಅಲೆಯ ಮೇಲೆ ನಮ್ಮನ್ನೆಲ್ಲ ಹಾಗೇ ತೇಲಿಸಿ ಬಿಟ್ರಲ್ರೀ, ಓದ್ತಾ ಓದ್ತಾ ಇಪ್ಪತ್ತು ವರ್ಷ ವಯಸ್ಸು ಕಡಿಮೆಯಾದಂಥ ಅನುಭವ.  ನಿಮ್ಮ ರೊಮ್ಯಾಂಟಿಕ್ ಶೈಲಿ ಬಹಳ ಚೆನ್ನಾಗಿದೆ.

nanda hp ಶನಿ, 05/22/2010 - 19:40

ಅದ್ಭುತಾ ಕಲ್ಪನಾ  ಲೋಕಕ್ಕೆ ಕರೆದೋಯೋದು ರೋಮಾಂಚನಮಾಡಿ ಬಿಟ್ರಲ್ರೀ.........ಧನ್ಯವಾದಗಳು

ಶಿವಕುಮಾರ ಕೆ. ಎಸ್. ಸೋಮ, 05/24/2010 - 19:31

ಧನ್ಯವಾದಗಳು ವಸಂತ್, ಉಮಾಶಂಕರ, ರಾಜೇಶ್, ಮಂಜುನಾಥ ಮತ್ತು ಉಮಾ! @ವಸಂತ್ -
ಬಾವ ಪೂರ್ಣ ಉಚ್ಚಾರಣೆ - ಉಚ್ಚಾರಣೆ (pronunciation) ಅಂದ್ರೆ ಮಾತನಾಡುವಾಗ
ನಾವೆಷ್ಟು ಸ್ಪಷ್ಟವಾಗಿ ಮಾತಾಡ್ತೀವಿ ಅಂತಾ ಅರ್ಥ, ನನ್ನ ಬರವಣಿಗೆಯಲ್ಲಿ ಉಚ್ಚಾರಣೆ
ಹೇಗೆ ಬಂತೂಂತ ಗೊತ್ತಾಗಲಿಲ್ಲ. ನಿಮ್ಮ ಮಾತು ತಪ್ಪಾದರೂ ಭಾವಕ್ಕೆ ಧನ್ಯವಾದಗಳು. (ಈ
ತಿದ್ದುಪಡಿ - ಹೀಗೇ ಸುಮ್ಮನೆ. ತಪ್ಪು ತಿಳ್ಕೋಬೇಡಿ) @ಮಂಜುನಾಥ ಪ್ರೀತಿ-ಪ್ರೇಮ ಅಂದ್ರೆ ಎಂಥವರ ವಯಸ್ಸೂ ಹರೆಯವಾಗಿಬಿಡುತ್ತೆ ನೋಡಿ.

ವಸಂತ್ ಸೋಮ, 05/24/2010 - 20:27

 Sorry ಶಿವಕುಮಾರ್ ಸ್ವಷ್ಟಣೆ ಎನ್ನುವ ಬದಲಾಗಿ ಉಚ್ಚಾರಣೆಯಾಗಿದೆ. 

ಶಿವಕುಮಾರ ಕೆ. ಎಸ್. ಮಂಗಳ, 05/25/2010 - 16:45

"ಸ್ವಷ್ಟಣೆ" ಅನ್ನೋದೂ ಕೂಡಾ ತಪ್ಪು ಅನ್ನೋದು ನನ್ನ ಅನಿಸಿಕೆ, ಅಥವಾ ಇದು ನಾನು ಕೇಳಿಯೇ ಇರದಿದ್ದ ಹೊಸ ಪದವಿದ್ದರೂ ಇರಬಹುದು. Smile

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.