ಎಲ್ಲಿ ಹೋದ ನಮ್ಮ ರಾಮಾಚಾರಿ
ರಾಮಾಚಾರಿ ವಿಷ್ಣುವರ್ಧನ್ ಇನ್ನಿಲ್ಲ. ಕನ್ನಡಿಗರಿಗೆ ಇದು ದರಿದ್ರದ ವಾರ. ಎರಡೇ ದಿನಗಳಲ್ಲಿ ಇಬ್ಬರು ಮೇರು ಕಲಾವಿದರನ್ನು ಕಳೆದು ಕೊಂಡಿದ್ದು ನಮ್ಮ ದೌರ್ಭಾಗ್ಯ.
ಕನ್ನಡ ಚಿತ್ರರಂಗ ಒಂದು ಜಿಮ್ಮಿಗಲ್ಲು ಮಾಯವಾಗಿದೆ.ರಾಯರು ಬಂದರು ಮಾವನ ಮನೆಗೆ ಎಂದವರು ಅಲ್ಲಿದೆ ನಮ್ಮನೆ ಎನ್ನುತ್ತಾ ಹೊರಟು ಹೋಗಿದ್ದಾರೆ. ಅಭಿನವ ಭಾರ್ಗವ ಅವರಿಗಿದ್ದ ಬಿರುದು. ಅವರು ನಮ್ಮ ಕನ್ನಡ ಚಿತ್ರರಂಗದ ಪಾಲಿಗೆ ಮಹಾ ಕ್ಷತ್ರಿಯ. ಪ್ರತಿಯೊಬ್ಬ ಕನ್ನಡಿಗರಿಗೂ ಆಪ್ತ ಮಿತ್ರ.
ಅವರ ಮನೆ ಕನ್ನಡಿಗರ ಪಾಲಿಗೆ ದೇವರ ಗುಡಿ, ಕನ್ನಡಿಗರೆಲ್ಲರಿಗೂ ಕೂಡಿ ಬಾಳೋಣ ಎಂದು ಸಂದೇಶ ಸಾರಿದ ಭಾಗ್ಯ ಜ್ಯೋತಿ. ಅವರ ನಟನಾಗಿ, ಗಾಯಕನಾಗಿ ಅವರದು ಒಂದೇ ರೂಪ, ಎರಡು ಗುಣ.ಕನ್ನಡಿಗರ ಪಾಲಿಗೆ ಅವರು ದೇವರು ಕೊಟ್ಟ ವರ
ಅವರಿದ್ದ ಕನ್ನಡ ನೆಲವೆಲ್ಲಾ ಬಂಗಾರದ ಗುಡಿ. ಹೊಂಬಿಸಿಲು ಹೊಳೆಯುವಂತಹ ರೂಪ ಹೊಂದಿದ್ದ ಅವರು ಎಂತಹ ಸಂದರ್ಭದಲ್ಲೂ ವಿವಾದಕ್ಕೊಳಗಾಗದ ಕಿಲಾಡಿ ಕಿಟ್ಟು .
ಅವರದು ಹಾಗು ದ್ವಾರಕೀಶ ಅವರದು ಕಿಲಾಡಿ ಜೋಡಿ. ಗಂಧದ ಗುಡಿಯಲ್ಲಿ ಅವರು ಹಾಗೂ ರಾಜ್ ಕುಮಾರ್ ಅವರದು ಮಧುರ ಸಂಗಮ
ಪುಟ್ಟಣ್ಣ ಕಣಗಾಲ್ ಅವರೊಡನೆ ಗುರು ಶಿಷ್ಯರು ಸಂಬಂಧ. ಕನ್ನಡದ ಏಕೈಕ ಸಾಹಸ ಸಿಂಹ. ತೊಂಬತ್ತರ ದಶಕದಲ್ಲಿ ಅವರ ಚಿತ್ರಗಳು ಮನೆ ಮನೆ ಕಥೆಯಾಗುತ್ತಿತ್ತು.
ಕಾರ್ಮಿಕ ಕಳ್ಳನಲ್ಲ ಎಂದು ಸಾರಿದ ಗಂಡುಗಲಿ ರಾಮ ಎಲ್ಲಿ ಹೋದರು?
ಇನ್ನು ಮುಂದೆ ನಮಗೆ ಸಿಂಹ ಘರ್ಜನೆ ಕೇಳಿಸುವುದಿಲ್ಲ. ಇನ್ನು ಮುಂದೆ ಹುಲಿ ಹೆಜ್ಜೆ ಕಾಣಿಸುವುದಿಲ್ಲ. ಇನ್ನು ಮುಂದೆ ಬೆಂಕಿ ಬಿರುಗಾಳಿ ಬೀಸುವುದಿಲ್ಲ.
ನಮಗೆಂದೂ ಅವರು ಮರೆಯದ ಮಾಣಿಕ್ಯ ಕೃಷ್ಣಾ ನೀ ಬೇಗನೆ ಬಾರೋ ಎಂದು ಕರೆದರೆ ಸಾಕು ,ಮಲಯ ಮಾರುತದಂತೆ ಆಗಮಿಸುತ್ತಿದ್ದ ಕರುಣಾಮಯಿ.
ಏಳು ಬಾರಿ ಶ್ರೇಷ್ಟ ನಟ ಪ್ರಶಸ್ತಿ ಗೆದ್ದ ಜಯ ಸಿಂಹ . ನಮ್ಮೂರ ದಾದ ಈಗ ವಿಧಿಯ ಬಂಧನ ಕ್ಕೆ ಒಳಗಾಗಿದ್ದಾರೆ.
ಅವರು ಹಾಡಿದಾಗ ಮತ್ತೆ ಹಾಡಿತು ಕೋಗಿಲೆ ಎನಿಸುತ್ತಿತ್ತು.ಕಲ್ಲು ವೀಣೆ ನುಡಿಯಿತು ಎನಿಸುತ್ತಿತ್ತು.ಅವರು ನಕ್ಕರೆ ನೀ ನಕ್ಕರೆ ಹಾಲು ಸಕ್ಕರೆ ಎನಿಸುತ್ತಿತ್ತು. ಅವರು ಜೊತೆಗಿದ್ದಾಗ ಪ್ರತಿದಿನವೂ ವೈಶಾಕದ ದಿನಗಳು ಎನಿಸುತ್ತಿತ್ತು.
ಕನ್ನಡಿಗರ ಹೃದಯಕ್ಕೆ ವಿಧಿ ಟೈಂ ಬಾಂಬ್ ಇಟ್ಟ ಹಾಗಾಗಿದೆ. ಯಾರಿಗೆ ಗೊತ್ತು ಜವರಾಯನ ನಿಷ್ಕರ್ಷೆಹೇಗಿತ್ತೋ ಏನೋ?
ಕನ್ನಡ ಕಲಾ ದೇಗುಲದ ಬಂಗಾರದ ಕಲಶ ಕಳಚಿ ಬಿದ್ದಿದೆ. ಕರ್ನಾಟಕದ ಸುಪುತ್ರ ನನ್ನು ಕಳೆದುಕೊಂಡ ದುಃಖವನ್ನು ಭರಿಸುವುದಾದರೂ ಹೇಗೆ?
ಕನ್ನಡಿಗರ ಹೃದಯವೀಗ ನಿಶ್ಯಬ್ದ. ಇದ್ದಕ್ಕಿದ್ದ ಹಾಗೆ ನಮ್ಮ ದಿಗ್ಗಜರು ತಮ್ಮ ಪರ್ವ ಮುಗಿಸಿದ್ದಾರೆ. ಸಿಂಹಾದ್ರಿಯ ಸಿಂಹ ತನ್ನ ಘರ್ಜನೆ ಮುಗಿಸಿದೆ. ಕನ್ನಡದ ಹೃದಯದ ಸಿರಿವಂತ ನೊಬ್ಬ ತಮ್ಮ ಕ್ಷಣ ಕ್ಷಣ ಗಳನ್ನು
ಮುಗಿಸಿ ಈ ಬಂಧನದಿಂದ ಮುಕ್ತರಾಗಿದ್ದಾರೆ.
ಕನ್ನಡ ತಾಯಿಯ ಚಿನ್ನದ ಮಗ ಚಾಣಕ್ಯ ನಷ್ಟೇ ಅಲ್ಲ ಊರಿಗೆ ಉಪಕಾರಿ ಯೂ ಆಗಿದ್ದರು.
ಅವರಿಲ್ಲದೆ ಇನ್ನು
ನಮ್ಮೆಜಮಾನ್ರು ಇನ್ನಿಲ್ಲ. ನಮ್ಮ ಆಪ್ತ ಮಿತ್ರ ಇನ್ನಿಲ್ಲ. ಕನ್ನಡ ನಾಡು, ನುಡಿಯ ಆಪ್ತ ರಕ್ಷಕ ಇನ್ನಿಲ್ಲ. ನಮ್ಮೂರ ರಾಜ. ಇನ್ನಿಲ್ಲ. ನಮ್ಮೆಲ್ಲರ ಧಣಿ ಇನ್ನಿಲ್ಲ. ನಮ್ಮ ಜನ ನಾಯಕ ಇನ್ನಿಲ್ಲ. ನಮ್ಮ ಜಮೀನ್ದಾರ್ರು ಇನ್ನಿಲ್ಲ. ನಮ್ಮ ನಡುವಿನ ಸಾಹುಕಾರ ಇನ್ನಿಲ್ಲ.
ಕನ್ನಡ ನಾಡಿ ನ ಜೀವನದಿಯೊಂದು ಬತ್ತಿ ಹೋಯಿತು.
ಇಂತಹ ಕಲಾವಿದರು ಕೋಟಿಗೊಬ್ಬರು
ಕನ್ನಡಿಗರ ದೌರ್ಭಾಗ್ಯಕ್ಕೆ ಎಣೆಯೇ ಇಲ್ಲವೇ?
ನಿಮಗೆ ನಮ್ಮ ಕಣ್ಣೀರಿನ ಮುತ್ತಿನ ಹಾರದ ಅರ್ಪಣೆ.
ಕಂಬನಿಗಳೊಂದಿಗೆ
ಬಾಲ ಚಂದ್ರ
ಸಾಲುಗಳು
- Add new comment
- 1512 views
ಅನಿಸಿಕೆಗಳು
ಹೌದು, ಕನ್ನಡಿಗರಿಗಿದು ದರಿದ್ರ
ಹೌದು, ಕನ್ನಡಿಗರಿಗಿದು ದರಿದ್ರ ವಾರ.
ಕನ್ನಡಿಗರ ಮೇಲೆ ಒಂದರಮೇಲೊಂದು
ಕನ್ನಡಿಗರ ಮೇಲೆ ಒಂದರಮೇಲೊಂದು ಬರಸಿಡಿಲು ಬೀಳುತ್ತಿದೆ ... :( ಕನ್ನಡ ನಾಡು ತನ್ನ ಮುದ್ದಿನ ಮಕ್ಕಳನ್ನು ಕಳೆದುಕೊಂಡು ಅನಾಥವಾಗಿದೆ.... :( :( . "ಸಾಹಸ ಸಿಂಹ" ನಿಗೆ ನನ್ನ ನುಡಿ ನಮನ....
ಬಾಲ ಚಂದ್ರ, ಕನ್ನಡ ಮತ್ತಷ್ತು
ಬಾಲ ಚಂದ್ರ,
ಕನ್ನಡ ಮತ್ತಷ್ತು ಬಡವಾಯ್ತು... ಮನಸ್ಸಿಗೆ ನೋವಾಗುವಂತಹ ಸತ್ಯಗಳು...
ನೆನ್ನೆ ಸಿ. ಅಶ್ವಥ್, ಇವತ್ತು, ಸಾಹಸ ಸಿಂಹ...
ನಾವು ಇವರೆಲ್ಲರ ಜತೆ ಕಾಲ ಹಂಚಿಕೊಂಡಿದ್ದೆವು ಅನ್ನೊದೆ ನಮ್ಮ ಪಾಲಿನ ಭಾಗ್ಯ..... ಅಷ್ಟೆ...
ವಿಧಿ ಲೀಲೆ...
-ವಿಕ್ರಮ...
ಹಾಯ್ ಬಾಲಚಂದ್ರ ಅವರೇ, ಸಾಹಸ ಸಿಂಹ
ಹಾಯ್ ಬಾಲಚಂದ್ರ ಅವರೇ,
ಸಾಹಸ ಸಿಂಹ ವಿಷ್ಣುವರ್ಧನ ಅವರಿಗೆ ವಿಭಿನ್ನ ರೀತಿಯಲ್ಲಿ ಅವರಿಗೆ ನುಡಿ ನಮನ ಸಲ್ಲಿಸಿದ್ದೀರಾ. ನಿಜ ನಿನ್ನೆ ಸಿ. ಅಶ್ವತ್ ಹಾಗೂ ಇವತ್ತು ವಿಷ್ಣುವರ್ಧನ ಅವರನ್ನು ಕಳೆದು ಕೊಂಡಿದ್ದೇವೆ. ಇದು ನಿಜಕ್ಕೂ ದುಃಖದ ವಿಷಯ. :(
ಬಾಲು ರವರೆ ನಿಜವಾಗಿಯೂ 2009
ಬಾಲು ರವರೆ ನಿಜವಾಗಿಯೂ 2009 ಕನ್ನಡಿಗರ ಅತ್ಯಂತ ಕೆಟ್ಟ ವರ್ಷ್:( ::(
ಬಾಲು, ಕನ್ನಡ ಚಿತ್ರ ರಂಗದ ಒಂದು
ಬಾಲು, ಕನ್ನಡ ಚಿತ್ರ ರಂಗದ ಒಂದು ತಲೆಮಾರಿನ ಕೊನೆಯ ಕೊಂಡಿ ಕಳಚಿದೆ. ಇನ್ನೇನಿದ್ದರೂ ಹೊಸ ಕೊಂಡಿಗಳ ಬೆಸುಗೆ ಆರಂಭ ಅಷ್ಟೆ. `ಸಮಕಾಲೀನ'ರೆನಿಸಿಕೊಂಡಿದ್ದ ನಾವೆಲ್ಲಾ ಇನ್ನು ಮುಂದಿನ ಚಿತ್ರರಂಗದ `ಪರಿಸ್ಥಿತಿ'ಗೆ ಮಾನಸಿಕವಾಗಿ ಹೊಂದಿಕೊಳ್ಳುವುದು ಅನಿವಾರ್ಯವೇನೋ!?