Skip to main content

ಜೀವನ ಪ್ರೀತಿಯ ಮಳೆ ಸುರಿವ ಬೆಟ್ಟದ ಜೀವ

ಬರೆದಿದ್ದುSeptember 15, 2009
5ಅನಿಸಿಕೆಗಳು

"ಬಾನಿನಲ್ಲಿ ಸೂರ್ಯನು ತುಸುವಾಗಿ ಮೇಲಕ್ಕೇರುತ್ತಾನೆ- ಎಂದಂತೆ ಒಮ್ಮೆಗೇ ಅವನ ರಶ್ಮಿಗಳು ಬೆಟ್ಟದ ತೆಂಕು ಮಗ್ಗಲಿನ ಹಸುರನ್ನೆಲ್ಲ ಬೆಳಕಿಂದ ತೊಯ್ಯಿಸಿಬಿಟ್ಟವು! ಆ ಅಪೂರ್ವದ ನೋಟವು ಎಂದೂ ಮರೆಯುವಂಥದಲ್ಲ. ಆ ತನಕ- ಕಠಿಣವೂ ನಿರ್ದಾಕ್ಷಿಣ್ಯವೂ ಆಗಿ ನಿಂತ ಬೆಟ್ಟಕ್ಕೆ ಒಂದು ಬದಿಯಲ್ಲಿ ಮೃದುವಾದ ಹೃದಯವಿದ್ದಂತೆ ಕಂಡಿತು. ನೋಡುತ್ತಾ ನಿಂತಂತೆ, ಕೆಂಪಡರಿದ ಬಾನಿನ ಕಣ್ಣು ಕ್ರೂರವಾಗುತ್ತ ಬೆಂದ ಕಬ್ಬಿಣವನ್ನು ಕರಗಿಸಲು ಬಂದಂತೆ ಕಾಣಿಸಿತು. ಆ ಬಾನಿನ ಮುಂದೆ, ಬೆಟ್ಟವು ಗಂಡುಗಲಿಯಂತೆ ಈ ತನಕ ಕಂಡುದು, ನಮ್ರತೆಯ ಮುದ್ದೆಯಾದ ಹೆಣ್ಣಾಯಿತು. ಹಸುರು ಕವಚದ ಮೇಲೆ ನೀರ ಸೀರೆ ತೊಟ್ಟು ಬೇಟಕ್ಕೆ ನಿಂತ ಅಂಗನೆಯಾಯಿತು, ಆದರೆ ದಿಗಂಗನೆಯ ಧಿಮಾಕಿನ ಮುಂದೆ ಬೆಟ್ಟದಂಗನೆ, ಅತ್ತೆಯ ಮುಂದೆ ನಾಚಿಕೊಂಡು ನಿಂತ ಸೊಸೆಯಾದಳು."

-ಶಿವರಾಮ ಕಾರಂತರ "ಬೆಟ್ಟದ ಜೀವ" ಕಾದಂಬರಿಯಲ್ಲಿ ಒಂದು ಕಡೆ ಬರುವ ಈ ಮೇಲಿನ ಪಕೃತಿ ವರ್ಣನೆಯನ್ನೋದುತ್ತಾ ಮನಸ್ಸು ಮನೋವೇಗದಲ್ಲಿ ಆ ಬೆಟ್ಟದ ತುದಿಯನ್ನೇರಿದ್ದಂತೂ ಸುಳ್ಳಲ್ಲ. ಆದರೆ ಎಷ್ಟು ಪ್ರಯತ್ನಿಸಿದರೂ ಅವರು ಕಂಡ ಆ ಅಪೂರ್ವ ಚೆಲುವನ್ನು ಕಲ್ಪಿಸಿಕೊಳ್ಳಲೂ ಆಗಲಿಲ್ಲ. ಕಾರಣ ನಿರ್ಜೀವ ಯಂತ್ರಗಳು ಕಪ್ಪು ಹೊಗೆ ಚೆಲ್ಲಿ ತಿಳಿ ನೀಲ ಬಾನ ತುಂಬೆಲ್ಲಾ ತುಂಬಿರುವ ಮಲಿನ ಮುಸುಕೊಳಗೆ ಗುದ್ದಾಡುವ ನಾವು ಅಂತಹ ಒಂದು ನಿಶ್ಕಲ್ಮಶ, ಅಲೌಕಿಕ ಅನುಭೂತಿಯನ್ನು ಕಲ್ಪಿಸುವುದಾದರೂ ಹೇಗೆ?!!

ಮೊದಲಿನಿಂದಲೂ ನನಗೆ ಕಾರಂತರ ಕಾದಂಬರಿಗಳೆಂದರೆ ಬಲು ಅಚ್ಚುಮೆಚ್ಚು. ಕಾರಣ ಇವರ ಹೆಚ್ಚಿನ ಕೃತಿಗಳಲ್ಲೆಲ್ಲೂ ಕ್ಲಿಷ್ಟಕರ ಹಾಗೂ ಸಂಕೀರ್ಣ ಭಾಷಾ ಪ್ರಯೋಗಗಳು ತೀರ್‍ಆ ಕಡಿಮೆಯಾಗಿರುವುದು. ಅಂತೆಯೇ ಸರಳ, ಹೃದ್ಯ ಹಾಗೂ ಬಹು ಬೇಗನೆ ಮನಮುಟ್ಟುವ, ಅರ್ಥೈಸಿಕೊಳ್ಳಲು ಸುಲಭವಾಗಿರುವಂತಹ ಚಿತ್ರಣ ಹಾಗೂ ಭಾಷಾ ನಿರೂಪಣೆಯನ್ನು ಇವರ ಕೃತಿಯುದ್ದಕ್ಕೂ ಕಾಣಬಹುದು. ಇವರ "ಮೂಕಜ್ಜಿಯ ಕನಸು" ಕಾದಂಬರಿಯಂತೂ ಎಷ್ಟು ಸಲ ಓದಿದರೂ ಸಾಲದೆನಿಸುವಂತಹ ಮೇರು ಕೃತಿ. ಅದರ ಬಗ್ಗೆ ಬರೆಯುವುದೂ ಬಹು ಕಷ್ಟವೇ ಸರಿ. ಹಾಗಾಗಿ ಆ ಪ್ರಯತ್ನಕ್ಕೆ ಮೊದಲು ಅವರ ಇನ್ನೊಂದು ಮೇರು ಕೃತಿಯಾದ ಬೆಟ್ಟದ ಜೀವದೊಳಗಿನ ಜೀವನ ಪ್ರೀತಿಯನ್ನೂ, ಅದರೊಳಗೆ ಹದವಾಗಿ ಮಿಳಿತವಾಗಿರುವ ಮಾನವ ಸಂಬಂಧದ ಪರಿಶುದ್ಧತೆಯನ್ನೂ ನಿಮ್ಮ ಮುಂದಿರಿಸುವ ಅಲ್ಪ ಯತ್ನಕ್ಕೆ ಕೈಹಾಕಿದ್ದೇನೆ. ಈ ಮೊದಲೇ ನೀವೂ ಈ ಕೃತಿಯನ್ನೋದಿದವರಾಗಿದ್ದರೆ ದಯಮಾಡಿ ನನ್ನೊಂದಿಗೆ ನಿಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಹಂಚಿಕೊಳ್ಳಬೇಕಾಗಿ ವಿನಂತಿ. ಪುಸ್ತಕ ಪ್ರೀತಿ ಹಂಚುವುದು, ಅದರೊಡನೆ ಜೀವನ ಪ್ರೀತಿಯನ್ನು ಬೆಸೆಯುವುದು "ಒಳಗೊಂದು ಕಿರುನೋಟದ" ಮುಖ್ಯೋದ್ದೇಶವಾಗಿದೆ.

"ಬೆಟ್ಟದ ಜೀವ" ಮೊದಲು ಮುದ್ರಿತಗೊಂಡಿದ್ದು ೧೯೪೩ರಲ್ಲಿ. ಧಾರವಾಡದ ಮನೋಹರ ಗ್ರಂಥಮಾಲೆ ಪ್ರಥಮ ಬಾರಿಗೆ ಈ ಕಾದಂಬರಿಯನ್ನು ಮುದ್ರಿಸಿದ್ದು, ತದನಂತರ ಬಹುಶಃ ೩ ಬಾರಿ ಮರು ಮುದ್ರಣಗೊಂಡಿದೆ. ಈ ಕಾದಂಬರಿಯಲ್ಲಿ ಬರುವ ಪಾತ್ರಗಳು ಬಲು ಕಡಿಮೆ. ಹಾಗಾಗಿ ನೆನಪಲ್ಲಿ ಉಳಿಯುವುದೂ ಸುಲಭ. ಕಥಾ ನಾಯಕ ಗೋಪಾಲಯ್ಯ, ಅವರ ಧರ್ಮ ಪತ್ನಿಯಾದ ಶಂಕರಮ್ಮ, ಸಾಕು ಮಗ ನಾರಾಯಣ, ಆತನ ಪತ್ನಿ ಲಕ್ಷ್ಮಿ, ಇವರಿಬ್ಬರ ಮಕ್ಕಳಾದ ಸುಬ್ಬರಾಯ ಹಾಗೂ ಸಾವಿತ್ರಿ, ಬಾಲ್ಯದಲ್ಲೇ ತೀರಿಹೋದ ಗೋಪಾಲಯ್ಯ ದಂಪತಿಗಳ ಮಗಳು ವಾಗ್ದೇವಿ, ಆಳುಗಳಾದ ಬಟ್ಯ, ಮಾನ ಗೌಡ, ಕೆಂಚ ಹಾಗೂ ಕಥೆಯುದ್ದಕ್ಕೂ ಹರಿವ ಕಥಾ ನಿರೂಪಕನಾದ ಕಾರಂತರು ಹಾಗೂ ಕಥಾ ವಸ್ತುವಿಗೆ ಪ್ರಮುಖ ಕಾರಣಕರ್ತನಾದ ಓಡಿಹೋದ ಗೋಪಾಲಯ್ಯನವರ ಕುಲಪುತ್ರ ಶಂಭು. ಈ ಎಲ್ಲಾ ಪಾತ್ರಗಳನ್ನೂ ಕೇವಲ ೧೫೦ ಪುಟಗಳೊಳಗೇ ಹಿಡಿದಿಟ್ಟಿದ್ದಾರೆ ಕಾರಂತರು.

"ಬೆಟ್ಟದ ಜೀವ" ಉಸಿರಾಡುವುದು ಸುಬ್ರಹ್ಮಣ್ಯ ಹಾಗೂ ಅದರ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ....ಅಲ್ಲಿನ ದಟ್ಟಡವಿ, ಗುಡ್ಡ, ಬೆಟ್ಟ, ಕುಮಾರ ಪರ್ವತದ ತಪ್ಪಲಿನ ಪ್ರದೇಶಗಳಲ್ಲಿ. ಗುತ್ತಿಗಾರು, ಬೆಳ್ಳಾರೆ, ಮುಂಡಾಜೆ, ಪಾಂಜ, ವಿಟ್ಲ ಮುಂತಾದ ತಾವುಗಳ ಕಿರು ಪರಿಚಯ ಕಥೆಯ ಒಳಗೇ ನಮಗಾಗುತ್ತದೆ. ಅಂದಿನ ಕಾಲದ ಅಲ್ಲಿಯ ಹಳ್ಳಿ ಜನರ ಮನೋಭಾವ, ಉದಾರತೆ, ನಿಃಸ್ವಾರ್ಥತೆ, ಮುಗ್ಧತೆ, ಮಾನವೀಯ ಸಂಬಂಧಗಳಿಗೆ ಅವರು ಕೊಡುತ್ತಿದ್ದ ಬೆಲೆ ಎಲ್ಲವುದರ ದರ್ಶನವೂ ಈ ಕೃತಿಯನ್ನೋದುವಾಗ ನಮಗಾಗುತ್ತದೆ. ಜೀವನ ಪ್ರೀತಿ ಎಂದರೇನು? ಬದುಕುವುದು ಎಂದರೆ ಹೇಗೆ? ನಾವು ನಮ್ಮ ಬದುಕನ್ನು ಹೇಗೆ ಸಾರ್ಥಕ್ಯಗೊಳಿಸಬಹುದು ಎಂಬುದನ್ನು ಕಾರಂತರು ತಮ್ಮ ಈ ಪುಟ್ಟ ಕೃತಿಯಲ್ಲಿ ಸವಿವರವಾಗಿ, ಬಲು ಸುಂದರವಾಗಿ ತಿಳಿಸಿದ್ದಾರೆ.

ಸಂಕ್ಷಿಪ್ತವಾಗಿ ಕಥಾ ಸಾರವನ್ನು ಹೇಳಬೇಕೆಂದರೆ - ತಮ್ಮ ಕಳೆದು ಹೋದ ದನವೊಂದನ್ನರಸುತ್ತಾ, ಯಾರ ಯಾರನ್ನೋ ಕೇಳುತ್ತಾ ಪುತ್ತೂರಿನಿಂದ ಹೊರಟ ಕಥಾ ನಿರೂಪಕ(ಕಾರಂತರು) ದಾರಿ ತಪ್ಪಿ ಸುಬ್ರಹ್ಮಣ್ಯಕ್ಕೆ ಬಂದು, ಅಲ್ಲಿಂದ ಪಂಜಕ್ಕೆ ಹೋಗುವ ಬದಲು ದಾರಿತಪ್ಪಿ ಗುತ್ತಿಗಾರಿನ ಕಡೆ ನಡೆಯುತ್ತಾರೆ. ಸುತ್ತಲೂ ದಟ್ಟಡವಿ, ಕಾಣದ ಊರು, ಗುರಿಯಿಲ್ಲ ದಾರಿಯಿಂದ ಭಯಗೊಂಡು ಕೆಂಗೆಡುತ್ತಾರೆ. ಆದರೆ ಆಗ ಅದೇ ದಾರಿಯಲ್ಲಿ ತನ್ನೂರಾದ ಗುತ್ತಿಗಾರಿಗೆ ಹೋಗುತ್ತಿದ್ದ ದೇರಣ್ಣ ಗೌಡನ ಸಹಾಯದಿಂದ ಆತನ ಧಣಿಯಾದ ಗೋಪಾಲಯ್ಯನ ಮನೆಗೆ ಆಶ್ರಯಕೋರಿ ಬರುತ್ತಾರೆ. ಆಗಿನ ಕಾಲದಲ್ಲಿ ಈಗಿನಂತೆ ನಿಮಿಷಕ್ಕೋಂದು ಬಸ್ಸಾಗಲೀ, ಕಾರು, ಜೀಪುಗಳ ವ್ಯವಸ್ಥೆಯಾಗಲೀ ಇರಲಿಲ್ಲ. ಹಾಗಾಗಿ ಕಲ್ನಡಿಗೆಯಲ್ಲೇ ಹುಡುಕುತ್ತಾ ಹೊರಟಿದ್ದರು. ನಡುವೆ ದಾರಿ ತಪ್ಪಿ ದಿಕ್ಕು ಗಾಣದೆ ಅಲೆದಲೆದು ಬಳಲಿ ಬೆಂಡಾಗಿ, ವಿಶ್ರಮಿಸಿ ಕೊಂಡು ಮುಂದೆ ಪಯಣಿಸಲು ಅವರಿಗೊಂದು ತಾವು ಬೇಕಿತ್ತು. ರಾತ್ರಿಯ ನೀರವತೆಗೆ ಹೆದರಿದ್ದ ಅವರನ್ನು ಬಲು ಪ್ರೀತ್ಯಾದಾರಗಳೊಂದಿಗೆ ಬರ ಮಾಡಿಕೊಂಡರು ಗೋಪಾಲಯ್ಯ ದಂಪತಿಗಳು.
ಸುತ್ತಲೂ ಹಬ್ಬಿರುವ ಕಾಡು ಹಾಗೂ ಕುಮಾರ ಪರ್ವತ, ಅಕ್ಕಿ ರಾಶಿ ಪರ್ವತಗಳ ತಪ್ಪಲಿನಲ್ಲಿ ಅಡಿಕೆ, ಕಬ್ಬು, ತೆಂಗಿನ ತೋಟಗಳನ್ನು ಮಾಡಿಕೊಂಡು, ಅನ್ಯೋನ್ಯತೆಯಿಂದ ಬಾಳ್ವೆ ಮಾಡುತ್ತಿರುವ ಆ ಶ್ರಮ ಜೀವಿಗಳನ್ನು ನೋಡಿ ನಿರೂಪಕನಿಗೆ ಆನಂದ ಆಶ್ಚರ್ಯವಾಯಿತು. ಕಾರಣಾಂತರಗಳಿಂದಾಗಿ ೪-೫ ದಿನಗಳ ಕಾಲ ನಿರೂಪಕ ಅವರ ಮನೆಯಲ್ಲೇ ಉಳಿಯಬೇಕಾಯಿತು. ಅದೂ ಆ ದಂಪತಿಗಳ ನಿಃಸ್ವಾರ್ಥ ಪ್ರೀತಿಯಿಂದ ಕೂಡಿದ ಒತ್ತಾಯದ ಮೇರೆಗೆ. ಆ ನಡುವೆ ಆತನಿಗೆ ಅವರ ಬದುಕೊಳಗೆ ಹಾಸು ಹೊಕ್ಕಾಗಿರುವ ಅಪಾರ ನೋವು, ಯಾತನೆ, ಚಿಂತೆಗಳ ಪರಿಚಯವಾಗಿ ಅಲ್ಪ ಕಾಲದಲ್ಲಿಯೇ ಆತನೂ ಅವರ ಮನೆಯಲ್ಲೋರ್ವನಂತಾಗುವನು.
ಚಿಕ್ಕ ವಯಸ್ಸಿನ ಮಗಳನ್ನು ಕಳೆದು ಕೊಂಡ ಶಂಕರಮ್ಮ ಹಾಗೂ ಗೋಪಾಲಯ್ಯನವರ ದುಃಖ ಅಲ್ಲೇ ಮುಗಿಯದು. ೧೮ರ ಹರಯದಲ್ಲೇ ಮನೆಯನ್ನು ಬಿಟ್ಟು ಓಡಿಹೋದ ಮಗ ಶಂಭು ಹತ್ತು ವರುಷಗಳ ಕಾಲವಾದರೂ ಇನ್ನೂ ಇವರನ್ನು ವಿಚಾರಿಸಿಕೊಳ್ಳಲು ಬರದಿರುವುದೇ ಅವರನ್ನು ಪ್ರತಿದಿನ ಕಾಸರ್ಕದ ಮುಳ್ಳಂತೇ ಕಾಡುತ್ತಿದೆ. ಪತಿ-ಪತ್ನಿಯರಿಬ್ಬರೂ ತಮ್ಮ ತಮ್ಮ ನೋವನ್ನು ಅಪರಿಚಿತರೊಡನೆ ವಾತ್ಸಲ್ಯ ತೊರುವುದರ ಮೂಲಕ, ಅವರನ್ನು ಆದರಿಸುವುದರ ಮೂಲಕ, ಎಲ್ಲಿಂದಲೋ ಬಂದು ಅವರ ತೋಟದಲ್ಲೇ ಗೇಣಿದಾರನಾಗಿ ನೆಲೆಸಿ ಮನೆಮಗನಂತಾದ ನಾರಾಯಣ ಹಾಗೂ ಆತನ ಮಕ್ಕಳನ್ನಾಡಿಸುವುದರ ಮೂಲಕ ಮರೆಯಲೆತ್ನಿಸುತ್ತಾರೆ. ಆದರೂ ಅದೆಲ್ಲಿಂದಲೋ ಏನೋ ಬದುಕೊಳಗಿನ ಏಕಾಂಗಿತನ ಅವರನ್ನು ಮತ್ತೆ ಹಳೆ ನೋವುಗಳತ್ತ ಎಳೆಯುತ್ತಿರುತ್ತದೆ ಆಗಾಗ. ಇದನ್ನು ಕಂಡ ನಿರೂಪಕನೂ ಮರುಗುತ್ತಾನೆ. ಮನದೊಳಗೆ ಮನೆ ಮಾಡುವ ಸಣ್ಣ ಪುಟ್ಟ ಘಟನಾವಳಿಗಳು, ನಾಟುವ ಸಂಭಾಷಣೆಗಳ ಮೂಲಕ ಪ್ರವಹಿಸುವ ಕಥೆಯ ಅಂತ್ಯ ಮಾತ್ರ ಒಂದು ಅಪೂರ್ವ, ಅನೂಹ್ಯ ಅನೂಭೂತಿಯನ್ನು ಮನಸೊಳಗೆ ಭಿತ್ತುವುದು.

ಈ ಕಾದಂಬರಿಯನ್ನೋದಿದ ಮೇಲೆ ನನ್ನ ಮನದೊಳಗೆ ಅಚ್ಚಳಿಯದೇ ಉಳಿದ ಕೆಲವು ಪ್ರಮುಖ ಅಂಶಗಳು ಇಂತಿವೆ..

(ಅ) ಕಾದಂಬರಿಯುದ್ದಕ್ಕೂ ನಾವು ಕಾಣುವುದು ಜೀವನ ದರ್ಶನ. ಇದನ್ನು ಕಾರಂತರು ಗೋಪಾಲಯ್ಯನವರ ಮೂಲಕ ನಮಗೆ ಕಾಣಿಸುತ್ತಾರೆ. ಇದನ್ನರಿಯಲು ಬೆಟ್ಟದ ಜೀವವನ್ನು ಓದಿಯೇ ತಿಳಿಯಬೇಕಷ್ಟೇ! ಇದನ್ನು ಕೇವಲ ಅಕ್ಷರಗಳ ಜೋಡಣೆಯಿಂದ ತಿಳಿಸಲಾಗದು. ಕಥಾನಿರೂಪಕನೊಂದಿಗೆ ಹೊರಟು, ಪಯಣಿಸಿ, ಪಾತ್ರಗಳೊಳಗೆ ಹೊಕ್ಕಾಗ ಮಾತ್ರ ಬೆಟ್ಟದ ಜೀವದೊಳಗಿನ ಜೀವನ ಸೆಲೆ ಕಾಣಸಿಗುವುದು.ಇದಲ್ಲದೇ ಸತಿ-ಪತಿಯರೊಳಗೆ ಯಾವ ರೀತಿ ಹೊಸತನ, ಅನ್ಯೋನ್ಯತೆ ಸದಾ ಕಾಲ ಮಿಳಿತವಾರುತ್ತದೆ, ಹಾಗಿರಲು ಏನು ಮಾಡಬೇಕು ಎಂಬ ದಾಂಪತ್ಯ ಪಾಠವನ್ನೂ ಕಾರಂತರು ಆ ವೃದ್ಧ ದಂಪತಿಗಳ ಸಂಭಾಷಣೆಗಳ ಮೂಲಕ ಬಲು ಸುಂದರವಾಗಿ ಅಷ್ಟೇ ಸರಳವಾಗಿ ವಿವರಿಸಿದ್ದಾರೆ.ದಾಂಪತ್ಯವೆಂದರೆ ನಾಲ್ಕು ದಿನ ಹೊಸತನವನ್ನು ಕಂಡು ಕ್ರಮೇಣ ಹಳತಾಗಿ ಹಳಸಲಾಗುವುದಲ್ಲ. ಹೇಗೆ ಚಿಕ್ಕ ಮಕ್ಕಳು ಪ್ರತಿಯೊಂದರಲ್ಲೂ, ಪ್ರತಿದಿನವೂ ಹೊಸತನವನ್ನು ಕಾಣುತ್ತಾರೋ, ತಮ್ಮ ತಮ್ಮಲ್ಲಿ ಜಗಳವಾಗಲು ಹೇಗೆ ನಾಳೆ ಮರೆತು ಮತ್ತೆ ಸ್ನೇಹವನ್ನು ಹೊಂದುತ್ತಾರೋ ಅದೇ ರೀತಿ ನಮ್ಮ ದಾಂಪತ್ಯವೂ ಇರಬೇಕು. ಇಬ್ಬರಲ್ಲೂ ಹೊಸತನವನ್ನು ಕಾಣುವ ಮನೋಭಾವ, ಮರೆಯುವ, ಕ್ಷಮಿಸುವ ಗುಣ ಇದ್ದರೆ ದಾಂಪತ್ಯ ನಾಲ್ಕುದಿನದ ಹಸಿರಾಗಿರದು, ನಿತ್ಯ ಹರಿದ್ವರ್ಣವಾಗಿರುವುದೆಂದು ಹಲವಾರು ಉದಾಹರಣೆಗಳ ಮೂಲಕ ಆ ದಂಪತಿಗಳು ನಮಗೆ ಮನಗಾಣಿಸುತ್ತಾರೆ.

(ಆ) ಅಂದಿನ ಕಾಲದಲ್ಲೂ ಅಂದರೆ ಪವನಿಗೆ ಹತ್ತು ರೂಪಾಯಿ ಇದ್ದ ಕಾಲದಲ್ಲೂ ಭ್ರಷ್ಟಾಚಾರ, ಲಂಚ ಹಾಗೂ ಲಂಪಟತನ ಹೇಗೆ ತನ್ನ ಕೈಚಳಕ ತೋರಿಸುತ್ತಿತ್ತೆಂದು ದೇರಣ್ಣ ಗೌಡನ ಒಂದು ಪ್ರಸಂಗದ ಮೂಲಕ ನಮಗೆ ತಿಳಿಯುತ್ತದೆ.

(ಇ) ಆಗಿನ ಕಾಲದಲ್ಲಿ ಈ ಬೆಟ್ಟದ ತಪ್ಪಲಿನ ಜನರನ್ನು ಬಹುವಾಗಿ ಕಾಡುತ್ತಿದ್ದುದು ಪ್ರಮುಖವಾಗಿ ಎರಡು ವಿಷಯ. ಒಂದು ಜ್ವರದ ಗಡ್ಡೆ! ಇದರಿಂದಾಗಿ ಕೊಯಿನು(ಕ್ವಿನೈನ್ ಟ್ಯಾಬ್ಲೆಟ್) ಅಲ್ಲಿನವರ ಮನೆಯೊಳಗೆ ಸದಾ ತುಂಬಿರುತ್ತಿತ್ತೆಂದು ತಿಳಿದುಬರುತ್ತದೆ. ಆದರೆ ಇದೇ ಇಂದು ಎಚ್೧ ಎನ್೧ ರೂಪ ತಾಳಿ ಹಳ್ಳಿ, ಪಟ್ಟಣ ಎಂಬ ಬೇಧವಿಲ್ಲದೇ ನಮ್ಮನ್ನು ಕಾಡುತ್ತಿರುವುದು ವಿಪರ್ಯಾಸವೋ ಇಲ್ಲಾ ಅದರ ರೂಪಾಂತರವೋ ತಿಳಿಯುತ್ತಿಲ್ಲ!ಇನ್ನೊಂದು ಕಾಡು ಪ್ರಾಣಿಗಳ ಕಾಟ. ಆನೆಗಳ ಹಿಂಡು, ಕಡಮೆ, ಹಂದಿ, ಕಾಡೆಮ್ಮೆ ಗಳ ಕಾಲ್ತುಳಿತಕ್ಕೆ ಸಿಲುಕಿ ನಳನಳಿಸುತ್ತಿದ್ದ ತಮ್ಮ ತೋಟಗಳು ಧರೆಗುರುಳಿ ಬಿದ್ದಾಗ ಸಂಕಟ ಪಡುವ ಗೋಪಾಲಯ್ಯ ಹಾಗೂ ನಾರಾಯಣರ ವೇದನೆಯ ಜೊತೆಗೆ ನಾವೂ ಸ್ಪಂದಿಸದೇ ಇರಲಾಗದು. ಜೊತೆಗೇ ಇಂದು ಇಂತಹ ದಟ್ಟಡವಿಯಾಗಲೀ, ಅಂತಹ ಪ್ರಾಣಿಗಳ ಹಿಂಡಾಗಲೀ ನಾವು ಕಾಣುವುದು ಕನಸೇ ಸರಿ ಎಂದೂ ಎಣಿಸಿ ವಿಷಾದವೂ ಆಗದಿರದು. ಹಾಗೆಯೇ ಕಾದಂಬರಿಯೊಳಗೆ ಒಂದು ಕಡೆ ಬರುವ "ಪಾಂಜ"ಅಂದರೆ ಪಾರಂಬೆಕ್ಕಿನ(ಹಾರಾಡುವ ಅಳಿಲು) ವಿಶ್ಲೇಷಣೆಯನ್ನೋದುವಾಗ ತೇಜಸ್ವಿಯವರ ಕರ್ವಾಲೋ ಕ್ಷಣ ನೆನಪಾಗದೇ ಇರದು.

(ಈ) ಬಯಲು ಸೀಮೆಯವರಾದ ಕಾರಂತರು ತಮ್ಮ ಊರಲ್ಲಿ ಕಟ್ಟಿಗೆಗಳು ಸಿಗುವುದು ಕಷ್ಟವೆಂದು ಹೇಳಿದಾಗ ಬೆಟ್ಟದ ಜೀವಿಯಾದ ಗೋಪಾಲಯ್ಯ ಹೀಗೆನ್ನುತ್ತಾರೆ..."ನಿಮ್ಮ ಊರಲ್ಲಿ ಹೆಣ ಸುಡುವುದಾದರೂ ಕಷ್ಟವೇ! ನಮ್ಮಲ್ಲಿ ಸಾಯುವುದಂತೂ ತೀರ ಸುಲಭ; ಹೆಣ ಸುಡುವುದು ಮತ್ತೂ ಸುಲಭ. ಇಲ್ಲಿ ಬದುಕುವುದೇ ಕಷ್ಟ ನೋಡಿ" ಆದರೆ ಈ ಮಾತು ಅಂದಿನ ಕಾಲಕ್ಕೆ ಮಾತ್ರವಲ್ಲದೇ ಇಂದೂ ಅಷ್ಟೇ ಪ್ರಸ್ತುತವಾಗಿದೆ ಎನ್ನಲು ಯಾವುದೇ ಸಂಶಯವಿಲ್ಲ!! ಹಾಗೆಯೇ ಕಾರಂತರು ಗೋಪಾಲಯ್ಯನವರ ಮೂಲಕ ಹೇಳಿಸಿದ ಒಂದು ವಾಕ್ಯ ಮನದೊಳಗೆ ಮನೆಮಾಡಿದೆ. ಅದೇನೆಂದರೆ "ಮನುಷ್ಯನಿಗೆ ತಾನು ಬದುಕಿದ ಮೇಲಲ್ಲವೇ ವೇದಾಂತದ ಪಾಠ, ಬದುಕುವುದಕ್ಕೇನೆ ಮೊದಲು ವೇದಾಂತವನ್ನು ಹೇಳಿ ಫಲವಿಲ್ಲ..."

(ಉ) ಕಥೆಯ ಅಂತ್ಯದವೇಳೆ ಬರುವ ಹುಲಿಬೇಟೆಯ ಪ್ರಸಂಗವಂತೂ ಮನಸೂರೆಗೊಳ್ಳುವಂತಿದೆ. ಅದರೊಳಗೆ ಬೆರೆತಿರುವ ವಿನೋದ, ಆಹ್ಲಾದ ನಮ್ಮನೂ ಆ ಬೇಟೆಯೊಳಗೆ ಸೇರುವಂತೆ ಮಾಡುತ್ತದೆ. ಅದೇ ರೀತಿ ಕಥೆಯ ಅಂತ್ಯವೂ ಹಲವು ಭಾವನೆಗಳನ್ನು ಮನದೊಳಗೆ ಹುಟ್ಟುಹಾಕಿ ಓದುಗನ ಕಲ್ಪನೆಯ ಓಟಕ್ಕೇ ಬಿಟ್ಟುಕೊಡುವಂತಿದೆ.

(ಊ) ೧೫೦ ಪುಟಗಳ ಕಿರು ಕಾದಂಬರಿಯಾದರೂ ಜೀವನ ಪ್ರೀತಿಯನ್ನೂ, ಬದುಕನ್ನು ಜೀವಿಸುವ ಬಗೆಯನ್ನೂ ನಮಗೆ ಕಲಿಸಿಕೊಡುತ್ತದೆ. ಕಥಾ ನಾಯಕರಾದ ಗೋಪಾಲಯ್ಯನವರ ವ್ಯಕ್ತಿತ್ವ, ಕಥೆಯ ಹರಿವು ಒಳ ಹರಿದಂತೆಲ್ಲಾ ಕುಮಾರ ಪರ್ವತದಷ್ಟೇ ಎತ್ತರವನ್ನು, ವಿಶಾಲತೆಯನ್ನು, ವೈವಿಧ್ಯತೆಯನ್ನು, ಅಚಲತೆಯನ್ನೂ ಹೊಂದಿರುವುದು ಸ್ಪಷ್ಟವಾಗುತ್ತಾ ಹೋಗುತ್ತದೆ. "ಯಾರು ಸಾವಿಗೆ ಅಂಜುವುದಿಲ್ಲವೋ ಅಂಥವ ಬದುಕಿಗೆ ಹೆದರಬೇಕಿಲ್ಲ, ಅಂಥವನು ಬದುಕ ಬಲ್ಲ..."-ಗೋಪಾಲಯ್ಯನವರು ಒಂದು ಕಡೆ ಹೇಳುವ ಈ ಮಾತು ಸಾರ್ವಕಾಲಿಕ ಸತ್ಯವೆಂದೆನಿಸುತ್ತದೆ.

ಕೊನೆಯಲ್ಲಿ : ಇಂತಹ ಒಂದು ಮೇರು ಕೃತಿಯನ್ನು ಹೀಗೇ ಎಂದು ವಿಮರ್ಶಿಸಲು ಖಂಡಿತ ಸಾಧ್ಯವಿಲ್ಲ. ಅದನ್ನು ಓದಿಯೇ ಅನುಭವಿಸಬೇಕು. ಬೆಟ್ಟದ ಜೀವವನ್ನು ಕಂಡುಕೊಳ್ಳಲು ಕಥೆಯೊಳಗೆ ಹೊಕ್ಕಿ, ಕಥಾಗಾರನ ನಿರೂಪಣೆಯೊಳಗೇ ಕೊಚ್ಚಿಹೋಗಿ, ಆ ಪಾತ್ರಗಳಲ್ಲೊಂದಾಗಿ ಅಲ್ಲೇ ನಾವು ಸ್ಥಿರವಾಗಬೇಕೆಂದು ಮನ ಬಯಸಿದರೆ ನಿಮಗೆ ನಿಜವಾದ ಅನುಭೂತಿಯಾಗಿದೆ ಎನ್ನಬಹುದೇನೋ!! ಅಗಾಧ ಜೀವನ ಪ್ರೀತಿಯನ್ನು ಕಾಣಿಸುವ, ಕಲಿಸುವ ಬೆಟ್ಟದ ಜೀವವನ್ನು ಓದಿ ಮುಗಿಸಿದಾಗ ತಕ್ಷಣ ನನಗೆ ನೆನಪಾದದ್ದು ಬಿ.ಆರ್. ಲಕ್ಷ್ಮಣ ರಾವ್ ಅವರ ಈ ಕವನ.

ಮಳೆ

ಸುರಿಯಲಿ ತಂಪೆರೆಯಲಿ
ಜೀವನ ಪ್ರೀತಿಯ ಮಳೆ ;
ಹರಿಯಲಿ ಭೋರ್ಗರೆಯಲಿ
ಬತ್ತಿದೆದೆಗಳಲಿ ಹೊಳೆ ;
ಕೊಚ್ಚಿ ಹೋಗಲಿ ಸ್ವಾರ್ಥ , ದುರಾಸೆ ;
ಸ್ವಚ್ಛವಾಗಲೀ ಇಳೆ.

ಚಿಮ್ಮಲಿ ಹಚ್ಚನೆ ಹಸಿರು,
ನಿರ್ಮಲವಾಗಲಿ ಉಸಿರು,
ಮತ್ತೆ ಆಗಲೀ ವಸುಂಧರೆ
ಸಕಲ ಜೀವಿಗಳಿಗಾಸರೆ.

ಧುಮ್ಮಿಕ್ಕಿ ಧುಮುಕಿ ಜಲಪಾತ
ನೀಡಿ ಜಡತೆಗಾಘಾತ
ಹೊಮ್ಮಿಸಲಿ ಹೊಸ ಚೇತನ,
ಕ್ರಿಯಾಶೀಲತೆಗೆ ಇಂಧನ.

ತೊನೆಯಲಿ ತೆನೆ ಹೊಂದೇರು,
ಅಡಗಲಿ ಹಸಿವಿನ ಚೀರು,
ಅರಳಲಿ ಎಲ್ಲೆಡೆ ಹೂನಗೆ,
ಹಾಯೆನಿಸಲಿ ಭೂತಾಯಿಗೆ.

-----***-----

ಲೇಖಕರು

ತೇಜಸ್ವಿನಿ ಹೆಗಡೆ

ಮೂಲ ಶಿರಸಿ. ಬೆಳೆದದ್ದು, ಓದಿದ್ದು ಎಲ್ಲಾ ಮಂಗಳೂರಿನಲ್ಲಿ. ಈಗಿರುವುದು ಬೆಂಗಳೂರಿನಲ್ಲಿ. ವಾಸ್ತವಿಕ ನೆಲೆಯಲ್ಲಿ ಕಲ್ಪನೆಯನ್ನು ಕಾಣುವವಳು.. ಕಲ್ಪನೆಗೆ ವಾಸ್ತವಿಕತೆಯ ಚೌಕಟ್ಟನ್ನು ಹಾಕಿ ಬರೆಯುವುದೇ ನಿಜ ಬರಹ ಎನ್ನುವುದು ನನ್ನ ಅಭಿಮತ. "ಕಾಣ್ಕೆ" (ಜಯಶ್ರೀ ಪ್ರಕಾಶನ, ೨೦೦೮)ನನ್ನ ಕಥಾಸಂಕಲನವಾಗಿದೆ. "ಚಿಗುರು" (ಸುಮುಖ ಪ್ರಕಾಶನ, ೧೯೯೫) ಹಾಗೂ "ಪ್ರತಿಬಿಂಬ" (ಜಯಶ್ರೀ ಪ್ರಕಾಶನ, ೨೦೦೮) ನನ್ನ ಕವನಸಂಕಲನಗಳು.

http://manasa-hegde.blogspot.com (ನನ್ನ ಕನ್ನಡ ಬ್ಲಾಗ್)

ಅನಿಸಿಕೆಗಳು

ಮ.ನಾ.ಕೃ ಧ, 09/16/2009 - 17:28

ಬಹಳ ಚೆನ್ನಾಗಿದೆ,

ಬಾಲ ಚಂದ್ರ ಮಂಗಳ, 09/22/2009 - 13:00

ಕಾರಂತರ ಕಾದಂಬರಿಗಳಿಗೆ ವಿಮರ್ಶೆ ಬರೆಯುವುದು ಕಷ್ಟ ಎಂಬ ನಿಮ್ಮ ಮಾತು ನೂರಕ್ಕೆ ನೂರು ನಿಜ. ಕಾರಂತರ ಈ ಕೃತಿ ದಕ್ಷಿಣ ಕನ್ನಡದ ಹವ್ಯಕ ಬ್ರಾಹ್ಮಣರ ಜೀವನಕ್ಕೆ ಹಿಡಿದ ಕನ್ನಡಿ. ಹಾಗೆಂದು ಇದರಲ್ಲಿ ಬರೀ ಹವ್ಯಕ ಬ್ರಾಹ್ಮಣರ ಬಗ್ಗೆ ವಿವರಣೆಯಿಲ್ಲ, ಅದರ ಜೊತೆಗೆ ಕಾಡು,ಮಲೆಕುಡಿಯರೆಂಬ ಬುಡಕಟ್ಟು ಜನಾಂಗ, ಬೇಟೆ ,ತಂದೆಯ ದಾರ್ಷ್ಟ್ಯ ಮತ್ತು ಹೃದಯವಂತಿಕೆ, ತಾಯಿಯ ಮಮತೆ ಉಫ್ .................ಇದನ್ನೆಲ್ಲಾ ವಿವರಿಸುತ್ತಾ ಹೋದರೆ ದಿನ ಸಾಲದೇನೋ? ಅಲ್ಲಿ ಪ್ರತ್ಯಕ್ಷದರ್ಶಿ ಕಾರಂತರೋ ಅಥವಾ ನಾವೋ ಎಂಬ ಗೊಂದಲಕ್ಕೆ ಬೀಳುತ್ತೇವೆ.
ಅಂದಹಾಗೆ, ಆ ಕಾಲದಲ್ಲಿ ಘೋರಾರಣ್ಯವನ್ನು ಸವರಿ ತೋಟ ಮಾಡುವ ಕ್ರಿಯೆ ಕಾರಂತರಿಗೆ ಸಾಹಸವಾಗಿ ಕಂಡರೆ ಇಂದು ಆ ಕೆಲಸ ಮಾಡಿದರೆ ಅದು ವನ್ಯ ವಿರೋಧಿ ಧೋರಣೆ ಎನ್ನಿಸಿಕೊಳ್ಳುತ್ತದೆ. ವನ್ಯ ಜೀವಿ ಸಂರಕ್ಷಣಾ ಕಾಯ್ದೆಯಿಂದ ಇಂದು ಬೇಟೆ ಕೂಡ ಅಪರಾಧ. ಇವೆರಡನ್ನೂ ಬಿಟ್ಟರೆ ನಮಗೆ ಇಂದಿನ ಜೀವನದಲ್ಲಿ ಆ ಕಾದಂಬರಿಯಿಂದ ದಕ್ಕುವುದೆಂದರೆ ಗೋವಿಂದಯ್ಯನವರ ಮಾನವೀಯತೆ ಮತ್ತು ಜೀವನ ಮುಖಿ ಪ್ರೀತಿ ಮಾತ್ರ. ಇಂಥ ಕಾದಂಬರಿಗಳು ಕನ್ನಡ ಸಾರಸ್ವತ ಲೋಕದಲ್ಲಿ ಚಿರಾಯು

ನಮಸ್ಕಾರ ತೇಜಸ್ವಿನಿ

ಸಸ್ನೇಹ
ಬಾಲ ಚಂದ್ರ

ತೇಜಸ್ವಿನಿ ಹೆಗಡೆ ಮಂಗಳ, 09/22/2009 - 15:32

ತುಂಬಾ ಧನ್ಯವಾದಗಳು. ನೀವಂದಿದ್ದು ನಿಜ. ಸಾರ್ವಕಾಲಿಕ ಸತ್ಯವಾಗಿರುವ.. ಸದಾ ನಮ್ಮೊಂದಿಗೆ ಇರಬೇಕಾಗಿರುವ ಅಂಶಗಳೆಂದರೆ ಜೀವನ ಪ್ರೀತಿ ಹಾಗೂ ಮಾನವೀಯತೆ. ಇವೆರಡೂ ಬೆಟ್ಟದ ಜೀವಿಯ ತುಂಬೆಲ್ಲಾ ಹರಿದಿರುವುದನ್ನು ನಾವು ಕಾಣಬಹುದು.

praveen sooda ಧ, 09/23/2009 - 10:42

ಇಡೀ ಭಾರತ ದೇಶದ ಸಾರ್ವಕಾಲಿಕ ಅತಿ ಶ್ರೇಷ್ಟ ಸಾಹಿತಿ ನಂ ಕಾರಂತಜ್ಜ. ಸಾಹಿತಿಯಾಗಿ ಅವರು ಮಾಡಿರೊ ಕೆಲಸ ಯಾವ್ಡೇ ಒಂದು ವಿಶ್ವವಿದ್ಯಾಲಯ ಕೂಡ ಮಾಡೊಕೆ ಅಸಾಧ್ಯ ವಾದ ಕೆಲಸ ಅಂದರೆ ಅತಿಶಯೋಕ್ತಿ ಅಲ್ಲ. ಅವರ ಒಂದೊಂದು ಹೇಳಿಕೆ, ಬರವಣಿಗೆ, ಎಲ್ಲ ಕೂಡ ಸಾರ್ವಕಾಲಿಕ ಸತ್ಯ. ವಿಮರ್ಶಕ ವಿಮರ್ಶೆ ಮಾಡೊಕೆ ಆಗದ ಒಬ್ಬ ಪರಿಪೂರ್ಣ ವ್ಯಕ್ತಿ, ಸಾಹಿತಿ ನಂ ಕಾರಂತಜ್ಜ. ಇವರ ನೆನಪು ಮಾಡಿದ್ದಕ್ಕೆ ತೇಜಸ್ವಿನಿ ಹೆಗಡೆ ಅವರಿಗೆ ಧನ್ಯವಾದಗಳು

ನಮಸ್ಕಾರ. ನೀವು ಹೇಳಿದ್ದು ನಿಜ. ನಿಮ್ಮ ಅಭಿಪ್ರಾಯಕ್ಕೆ ನನ್ನದೂ ಒಮ್ಮತವಿದೆ. ಧನ್ಯವಾದಗಳು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.