Skip to main content

ಹಿಂದಿ ಹೇರಿಕೆಗೆ ಉದ್ಯೋಗವೆಂಬ ಅಸ್ತ್ರ

ಬರೆದಿದ್ದುSeptember 9, 2009
noಅನಿಸಿಕೆ

ರಾಷ್ಟ್ರ ಭಾಷೆಯಲ್ಲದ ಹಿಂದಿಯನ್ನು ಶಿಕ್ಷಣದಲ್ಲಿ ಹೇರುತ್ತಿರುವ ಬಗೆ ಈಗಾಗಲೇ ನೋಡಿದ್ದೇವೆ, ಮಾತನಾಡಿದ್ದೇವೆ.
ಒಂದು ಪ್ರಾದೇಶಿಕ ಭಾಷೆಯಾದ ಹಿಂದಿಯನ್ನು ಇತರ ಪ್ರದೇಶಗಳ ಮೇಲೆ ಏನಾದರೂ ಮಾಡಿ ಹೇರಲೇಬೇಕೆಂಬ ಪಣ ತೊಟ್ಟಂತಿರುವ ಕೇಂದ್ರ ಸರ್ಕಾರ, ಉದ್ಯೋಗವೆಂಬ ಪ್ರಬಲ ಅಸ್ತ್ರವನ್ನೂ ಬಳಸುತ್ತಿದೆ.

"ಕೇಂದ್ರ ಸರ್ಕಾರದ ಹುದ್ದೆಗಳು ದೊರೆಯಬೇಕೆಂದರೆ ಹಿಂದಿ ತಿಳಿದಿರಬೇಕು", ಎಂಬಂತಹ ಕಾನೂನಿನ ಮೂಲಕ ಕೇಂದ್ರ ಸರ್ಕಾರ ಈಗಾಗಲೇ, "ಹಿಂದಿ ಕಲಿತರೇ ಮಾತ್ರ ಈ ಹುದ್ದೆಗಳು, ಇಲ್ಲ ಅಂದರೆ ಈ ಹುದ್ದೆಗಳ ಕನಸು ಕೂಡಾ ಕಾಣಬಾರದು" ಎಂಬಂತಹ ವಾತಾವರಣವನ್ನು ನಿರ್ಮಿಸಿದೆ.

ಹುದ್ದೆಗಳು ಯಾವ ರಾಜ್ಯದಲ್ಲೇ ಇರಲಿ, ಹಿಂದಿ ಭಾಷೆ ಎಂಬ ಅಡ್ಡಗೋಡೆ ನಿರ್ಮಿಸಿದರೆ, ಹಿಂದಿ ಭಾಷಿಕರಿಗೆ ಆ ಹುದ್ದೆಗಳು ಸುಲಭದ ತುತ್ತು ಮತ್ತು ಅದೇ ಸ್ವಂತ ರಾಜ್ಯದ ಜನರಿಗೆ ಕಬ್ಬಿಣದ ಕಡಲೆ ಆಗುತ್ತವೆ. ಕರ್ನಾಟಕದಲ್ಲಿ ಇರುವ HAL, NAL, BHEL, BEML, LIC, ರೈಲ್ವೆ, ಬ್ಯಾಂಕು-ಗಳು ಇನ್ನೂ ಹತ್ತು ಹಲವಾರು ಉದ್ದಿಮೆಗಳಲ್ಲಿ ಹಿಂದಿ ಭಾಷಿಕರಿಗೆ ಪ್ರಾಶಸ್ತ್ಯ ಕೊಡುತ್ತಲೇ ಬಂದು ಕನ್ನಡಿಗರ ಹೊಟ್ಟೆ ಮೇಲೆ ಚಪ್ಪಡಿ ಕಲ್ಲೆಳೆಯುತ್ತ ಬಂದಿದೆ ಕೇಂದ್ರ ಸರ್ಕಾರ. ಇದಕ್ಕೆ ನಿದರ್ಶನ ಬೇಕೆಂದರೆ, ಒಮ್ಮೆ ಬೆಂಗಳುರಿನಲ್ಲಿರುವ ಕೇಂದ್ರ ಸರ್ಕಾರಿ ಸಾಮ್ಯದ ಯಾವುದೇ ಉದ್ದಿಮೆಗಳಿಗೆ ಕಾಲಿಟ್ಟು ನೋಡಿ. ಇದು ಹೀಗೆಯೇ ಮುಂದುವರಿದರೆ ಕನ್ನಡಿಗರಿಗೆಲ್ಲಿ ದುಡಿಮೆ ಹುಟ್ಟಬೇಕು? ಕನ್ನಡಿಗನಿಗೆ ಕರ್ನಾಟಕದಲ್ಲೇ ಕೆಲಸ ಸಿಗುವುದಿಲ್ಲ ಎಂದರೆ, ನಾವೇನ್ ಕೆಲಸ ಹುಡುಕ್ಕೊಂಡು ಚಂದ್ರಲೋಕಕ್ಕೆ ಹೋಗಬೇಕಾ?

ರೈಲ್ವೆ ಡಿ ಗುಂಪಿನ ಹುದ್ದೆಗಳಿಗೆ ಅರ್ಜಿ ಹಿಂದಿಯಲ್ಲೇ ಬರೆದುಕೊಡಿ ಎಂದು ತಾಕೀತು ಮಾಡಿದ ಸುದ್ದಿ, ಪ್ರಮಾಣ ಪತ್ರಗಳು ಹಿಂದಿಯಲ್ಲಿಲ್ಲದಿದ್ದರೆ ಭೂಸೇನಾ ನೇಮಕಕ್ಕೆ ಅವಕಾಶವೇ ನೀಡಲ್ಲ ಎಂಬ ಸುದ್ದಿ ಕೇಳುತ್ತಿದ್ದರೆ, ಇದೇನೋ ದೊಡ್ಡ ಹುನ್ನಾರವೇ ಎಂದನಿಸುವುದು ನಿಜ. ಎಂಟನೆ ತರಗತಿ-ವರೆಗೆ ಶಿಕ್ಷಣ ಪಡೆದಿರುವ ಕನ್ನಡಿಗರಿಗೆ, ಕರ್ನಾಟಕದ್ದೇ ಊರು ಹುಬ್ಬಳ್ಳಿ-ಯಲ್ಲಿ ರೈಲ್ವೆ ಕೆಲಸ ದೊರಕಬೇಕೆಂದರೆ ಹಿಂದಿ ಗೊತ್ತಿರಬೇಕು ಅನ್ನೋಕ್ಕಿಂತ ಕ್ರೂರವಾದ ತಮಾಷೆ ಇನ್ನೊಂದಿದೆಯಾ? ಇಂತಹದೊಂದು ಕಟ್ಟಳೆ ನಮ್ಮ ಒಕ್ಕೂಟಕ್ಕೆ ಒಂದು ಕಳಂಕವಲ್ಲವೇ?

ಇಷ್ಟೇ ಅಲ್ಲದೇ, ಈಗಾಗಲೇ ನೇಮಕಗೊಂಡಿರುವ ಕೆಲಸಗಾರರಿಗೆ ಹಿಂದಿ ಕಲಿಸುವ ಸಲುವಾಗಿ ಪ್ರತೀ ವರ್ಷ ಕೋಟ್ಯಾನುಗಟ್ಟಲೆ ಹಣ ಖರ್ಚು ಮಾಡಿ, ಹಿಂದಿ ಸಪ್ತಾಹ ನಡೆಸುತ್ತಿದೆ.
ಈ ವರ್ಷವೂ ಸೆಪ್ಟೆಂಬರ್ ೭ ರಿಂದ ಸೆಪ್ಟೆಂಬರ್ ೧೪ ರವರೆಗೆ ಹಿಂದಿ ಸಪ್ತಾಹ ನಡೆಯುತ್ತಿದೆ.
ಹಿಂದಿ ಕಲಿತವರಿಗೆ ಸನ್ಮಾನ, ಕೆಲಸದಲ್ಲಿ ಹಿಂದಿ ಬಳಸುವವರಿಗೆ ಪ್ರಮೋಷನ್ನು, ಇತ್ಯಾದಿ ಇತ್ಯಾದಿ ಕಾರ್ಯಕ್ರಮ ಮಾಡುವುದೇ ಹಿಂದಿ ಸಪ್ತಾಹದ ಗುರಿ.
ಇದಕ್ಕೆ ಖರ್ಚಾಗುವುದು ಎಲ್ಲಾ ರಾಜ್ಯಗಳ ಜನರು ತೆತ್ತ ತೆರಿಗೆ ಹಣವೇ.
ಇದೇ ಹಣವನ್ನು, ಕರ್ನಾಟಕವೂ ಸೇರಿದಂತೆ ದೇಶದ ಅದೆಷ್ಟೋ ಕಡೆ ಜನರು ಬರದಿಂದ ಬಳಲುತ್ತಿರುವಾಗ, ಆ ಬರಪೀಡಿತ ಪ್ರದೇಶಗಳ ಪರಿಹಾರಕ್ಕೆ ಇದೇ ಹಣ ನೀಡಿದ್ದರೆ ತೆರಿಗೆ ಹಣ ತೆತ್ತ ಜನರಿಗೆ ಸ್ವಲ್ಪ ಪುಣ್ಯವಾದರೂ ದಕ್ಕುತ್ತಿತ್ತೋ ಏನೋ !

ಹೀಗೆ ವ್ಯವಸ್ಥಿತ ರೀತಿಯಲ್ಲಿ ಹಿಂದಿ ಹೇರಿಕೆ ನಡೆಸುವುದು ಒಕ್ಕೂಟ ವ್ಯವಸ್ಥೆಗೆ ಉತ್ತಮ ಮಾದರಿಯಾಗದು. ವೈವಿಧ್ಯತೆಯನ್ನು ಒಡೆಯುವ ಇಂತಹ ಕೆಲಸಗಳನ್ನು ಎಲ್ಲರೂ ಒಕ್ಕೊರಲಿನಿಂದ ವಿರೋಧಿಸಬೇಕು. ಹಿಂದಿ ಭಾಷಿಕರು ಕೂಡ, ತಮ್ಮ ದೇಶದ ಇತರೆ ಭಾಷೆಗಳ ಮೇಲಿನ ಈ ಹಲ್ಲೆ ನಿಲ್ಲಬೇಕೆಂದು ಒತ್ತಾಯ ಮಾಡಬೇಕು.
ಆ ಮೂಲಕ ತಾವು ಸಂಕುಚಿತ ಮನೋಭಾವದವರಲ್ಲ ಎಂದು ನಿರೂಪಿಸಬೇಕು. ಅಲ್ವಾ ಗೆಳೆಯರೇ?

ಲೇಖಕರು

ಪ್ರಿಯಾಂಕ್

ಸಮಯ ಸಿಕ್ಕಾಗ ತಿಳಿಸುತ್ತೇನೆ.
ಸದ್ಯಕ್ಕೆ ಕ್ಷಮೆ ಇರಲಿ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.