Skip to main content

ಭೂತಚೇಷ್ಟೆ

ಬರೆದಿದ್ದುAugust 6, 2009
11ಅನಿಸಿಕೆಗಳು

ಹೊಸ ಬೈಕು ಖರೀದಿಸಿದ ಮೇಲೆ ಸುಕುಮಾರನಿಗೆ ಭೂತ-ಪ್ರೇತಗಳ ಇರುವಿಕೆಯ ಬಗ್ಗೆ ನಂಬಿಕೆ ಬಂತು! ಅಂದರೆ ಇದೂವರೆಗೂ ಈ ವಿಷಯದಲ್ಲಿ ಇವನಿಗೆ ಆಸಕ್ತಿಯಿರಲಿಲ್ಲವೆಂದಾಗಲೀ ಅಥವಾ ಇವೆಲ್ಲವನ್ನೂ ನಂಬದ ಧೈರ್ಯವಿತ್ತೆಂದಾಗಲೀ ಇದರರ್ಥವಲ್ಲ. ಇವನ ಸ್ನೇಹಿತರಿಗೆ ಹೋಲಿಸಿದರೆ ಇವನೇ ಅಳ್ಳೆದೆಯವನು, ಪುಕ್ಕಲ. ಹೇಗೋ ಮೆತ್ತ ಮೆತ್ತಗೆ ಕಾಲೇಜು ಮುಗಿಸಿ ಕೊಂಡು ಬೆಂಗಳೂರಿನಲ್ಲಿ ಕೆಲಸ ಹಿಡಿದ. ಕೆಲಸ ಹಿಡಿದು ನಾಲ್ಕೈದು ವರ್ಷಗಳಾದ ಮೇಲೆ ಅವರಿವರ ಮತ್ತು ಸ್ನೇಹಿತರನೇಕರ ಸಲಹೆ, ಸೂಚನೆಗಳೆಲ್ಲ ಖಾಲಿಯಾಗಿ, ನಾಲ್ಕು ವರ್ಷಗಳಾದರೂ ಕೆಲಸಕ್ಕೆ ಹೋಗಲು ಇನ್ನೂ 'ನಗರ ಸಾರಿಗೆ' ಬಸ್ಸುಗಳನ್ನೇ ಅವಲಂಬಿಸಿಕೊಂಡಿದ್ದ ಇವನ ಪುಕ್ಕಲತನದ ಬಗ್ಗೆ ಬೈಗುಳಗಳು, ಬೆದರಿಕೆಗಳು ಶುರುವಾದ ಮೇಲೆ 'ಅದ್ಯಾವ ಬ್ರಹ್ಮವಿದ್ಯೆಯೋ ನೋಡಿಬಿಡೋಣ' ಎಂದುಕೊಂಡು ಬೈಕು ಖರೀದಿಸಿಯೇ ಬಿಟ್ಟ. ಮತ್ತೆ ಅವರಿವರ ಸಲಹೆ ಸೂಚನೆ, ಬೆದರಿಕೆಗಳನೆಲ್ಲ ಗಾಳಿಗೆ ತೂರಿ, 'ಹೇಗಿದ್ದರೂ ಬೈಕೂಂತ ತಗೋತಾ ಇದೀನಿ' ಎಂದುಕೊಂಡು ಬಲವಾಗಿಯೇ ಇದ್ದ ದೊಡ್ಡ ಬೈಕನ್ನೇ ತೆಗೆದುಕೊಂಡ.

ಮೊದಲೆರಡು ತಿಂಗಳು ಇವನ ಬೈಕು ನಾಲ್ವತ್ತು ಕಿಲೋಮೀಟರ್ ಕೂಡಾ ಓಡಲಿಲ್ಲ! ಬೈಕನ್ನು ಓಡಿಸುವುದಿರಲಿ, ಅದನ್ನು ಅತ್ತಿತ್ತ ತಳ್ಳಾಡುವುದಕ್ಕೂ ಇವನಿಗೆ ಧೈರ್ಯು ಸಾಲದೇ, ಕೆಲವೊಮ್ಮೆ ತಳ್ಳಾಡುತ್ತಲೇ ಬೈಕು ಬೀಳಿಸಿಕೊಂಡು ಏನೆಲ್ಲ ಪಜೀತಿಯಾಗಿ ನಾಲ್ಕೈದು ಜನ (ಬೈಕು ಕೊಳ್ಳಲು ಸಲಹೆಕೊಟ್ಟ) ಸ್ನೇಹಿತರೆಲ್ಲ ಸರದಿಯಂತೆ ಬೈಕು ಓಡಿಸುವ ಪ್ರಥಮ ಪಾಠಗಳನ್ನೆಲ್ಲ ಹೇಳಿಕೊಟ್ಟಾದ ಮೇಲೆ ಮೂರನೇ ತಿಂಗಳಿನಿಂದ ಹಾಗೂ ಹೀಗೂ ಮೆಲ್ಲನೇ ಬರೀ ಮೂರನೇ ಗೇರಿನಲ್ಲೇ ರಸ್ತೆಯ ಎಡಬದಿಯಲ್ಲೇ ಬೈಕು ಓಡಿಸಲು ಶುರುಮಾಡಿದ ಹಾಗೂ ಕೆಲಸಕ್ಕೂ ಮನೆಗೂ ಬೈಕಿನಲ್ಲೇ ಹೋಗಿಬರಲಾರಂಭಿಸಿದ. ಹಾಗೇ ಮೆಲ್ಲ ಮೆಲ್ಲನೇ ಬೈಕು ಓಡಿಸುತ್ತಲೇ ದಾರಿಯಲ್ಲಿ ಸಿಗುವ ಕ್ರೈಸ್ಟ್ ಕಾಲೇಜು ಮತ್ತು ಫೋರಂ ವಾಣಿಜ್ಯ ಸಂಕೀರ್ಣದ ಮುಂದೆಲ್ಲ ಓಡಿಯಾಡುತ್ತಿದ್ದ ಹುಡುಗಿಯರನ್ನು ಹೆಲ್ಮೆಟ್ಟಿನೊಳಗಿನ-ಕಣ್ಣುಗಳಂಚಿನಲ್ಲೇ ನೋಡಿಕೊಂಡು ಖುಷಿಪಡುವುದನ್ನು ಕಲಿತ.

ಒಂದು ದಿನ ಸಂಜೆ ಹೀಗೇ ಕೆಲಸದಿಂದ ವಾಪಸ್ಸು ಬರುತ್ತಿರುವಾಗ ಡೈರಿ ಸರ್ಕಲ್ಲಿನ ಬಳಿ-ಕ್ರೈಸ್ಟ್ ಕಾಲೇಜಿನ ಎದುರು ವಾಹನಗಳ ಓಡಾಟ ಯಾಕೋ ನಿಧಾನವಾಗಿತ್ತು ಮತ್ತು ಜನರ ಗುಂಪು ಕೂಡಿತ್ತು. ಕ್ರೈಸ್ಟ್ ಕಾಲೇಜಿನ ಹುಡುಗಿಯೊಬ್ಬಳು ದ್ವಿಪಥ ರಸ್ತೆ ದಾಟಲು ಹೋಗಿ, ಯಾವುದೋ ವಾಹನಕ್ಕೆ ಸಿಕ್ಕಿ, ಭಯಾನಕವಾದ ಅಪಘಾತವಾಗಿತ್ತಂತೆ. ಒಂದಷ್ಟು ಜನ ಆ ಹುಡುಗಿಯನ್ನು ಆಟೋಗೋ, ಕಾರಿಗೋ ಹತ್ತಿಸಿ, ಆಸ್ಪತ್ರೆಗೆ ಸಾಗಹಾಕುವುದರಲ್ಲಿದ್ದರು. ಉಳಿದ ವಾಹನ ಸವಾರರೆಲ್ಲ ಜನರ ಆ ಗುಂಪಿನೊಳಗೇ ಕತ್ತು ಕೀಲಿಸಿ, ಅಪಘಾತದ ಅಲ್ಪ-ಸ್ವಲ್ಪದ ದರ್ಶನ ಭಾಗ್ಯಕ್ಕೆ ಕಾತರಿಸುತ್ತಿರುವಾಗ ಸುಕುಮಾರನಿಗೆ ಭಯ ಹೆಚ್ಚಾಗಿ ಅತ್ತ ಕಡೆ ನೋಡುವುದೇ ಬೇಡವೆಂದು ಮೊದಲೇ ಮೆಲ್ಲನೆ ಓಡಿಸುತ್ತಿದ್ದ ಬೈಕನ್ನು ಇನ್ನೂ ನಿಧಾನಗತಿಗಿಳಿಸಿಕೊಂಡು ರಸ್ತೆಯ ಎಡಗಡೆ ನಿಂತಿದ್ದ ಮರಳು ತುಂಬಿದ್ದ ಲಾರಿಯ ಇನ್ನಷ್ಟು ಪಕ್ಕಕ್ಕೇ ಹಾಯ್ದ. ಇವನು ನೋಡಿಕೊಳ್ಳುವ ಮೊದಲೇ ಅದೇ ಲಾರಿಯ ಮುಂದು-ಹಿಂದಿನ ಚಕ್ರಗಳ ನಡುವೆ ಹರಿದಿದ್ದ ರಕ್ತದ ಮೇಲೇ ಇವನ ಬೈಕು ಹಾಯಿತು. ರಕ್ತದ ಮಡುವು ನೋಡಿ ಇವನಿಗ್ಯಾಕೋ ಆ ಹುಡುಗಿ ಉಳಿಯಲಾರಳು ಅನ್ನಿಸಿತು. ಮೈನಡುಗಿ ಲಾರಿಯನ್ನು ಹಿಂದೆ ಬಿಟ್ಟು ಇನ್ನಷ್ಟು ಎಡಕ್ಕೆ-ರಸ್ತೆಯಂಚಿಗೆ ಬಂದ. ಈಗ ಆಗಿದ್ದು ಸಾಲದು ಎಂಬಂತೆ, ಇವನ ಹಿಂದೆಯೇ ಅದೇ ರಕ್ತದ ಮೇಲೆ ತನ್ನ ಲಟಾರಿ ಸ್ಕೂಟರ್ ಬಿಟ್ಟುಕೊಂಡು ಬಂದ ನಾಲ್ವತ್ತು ವರ್ಷದ ಅಂಕಲ್ ಇವನನ್ನು ಉದ್ದೇಶಿಸಿ ಇವನು ಮನಸ್ಸಿನಲ್ಲಿ ಅಂದುಕೊಂಡದ್ದನ್ನು ಒಪ್ಪಿಕೊಳ್ಳುವಂತೆ "ಎಷ್ಟೊಂದು ರಕ್ತ ಹೋಗಿದೆ ಛೇ, ಆ ಹುಡುಗಿ ಉಳಿಂiಶಿಲಿಓ ಚಾನ್ಸೇ ಇಲ್ಲ!" ಅಂಥಾ ಆಣಿಮುತ್ತು ಉದುರಿಸಿ ಒಂಥರಾ ನಕ್ಕರು. ಇವನು ತಿರುಗಿ ಮತ್ತೇನೂ ಹೇಳದೇ ಬೆವರು ಬೆವರುತ್ತಲೇ ರಸ್ತೆಯಂಚಿನಲ್ಲೇ ಗಾಡಿ ಓಡಿಸಿಕೊಂಡು ಬಂದು ರೂಂ ತಲುಪಿ ಸಮಾಧಾನದ ನಿಟ್ಟುಸಿರು ಬಿಟ್ಟ.

ಮಾರನೇ ದಿನದಿಂದ ಆಫೀಸಿಗೆ ಹೋಗಿ ಬರುವಾಗಲೆಲ್ಲ ಕ್ರೈಸ್ಟ್ ಕಾಲೇಜಿನ ಮುಂದೆ ಸಾಗುವಾಗ ಸುಕುಮಾರನಿಗೆ ಮೈಯೆಲ್ಲ ಬಿಸಿಯೇರಲಾರಂಭಿಸಿತು. ಗಂಟಲೆಲ್ಲ ಒಣಗಿ, ಎದೆಬಡಿತ ಹೆಚ್ಚಾದಂತೆ... ಮೊದಲಿನ ಒಂದಷ್ಟು ದಿನಗಳಲ್ಲಿ ಇವನಿಗೆ ಅಂದು ಅಪಘಾತಕ್ಕೀಡಾಗಿದ್ದ ಹುಡುಗಿ ಬದುಕಿದಳೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬೇಕು ಅನ್ನಿಸುತಿತ್ತು. ಆ ಹುಡುಗಿ ಹೇಗಿದ್ದಳೋ, ಈಗ ಹೇಗಿದ್ದಾಳೋ, ಹಿಂದೆ ತಾನು ನೋಡುತ್ತಿದ್ದ ಕ್ರೈಸ್ಟ್ ಕಾಲೇಜಿನ ಹುಡುಗಿಯರ ಗುಂಪುಗಳೊಳಗೆ ಅವಳೂ ಇರುತ್ತಿದ್ದಳೋ... ಹೀಗೇ ಹತ್ತು ಹಲವು ಹುಚ್ಚು ಯೋಚನೆಗಳು...

ಇದೆಲ್ಲ ಕಳೆದು ಒಂದು ವಾರವೂ ಆಗಿರಲಿಲ್ಲ, ಹೀಗೇ ಒಂದು ದಿನ ಸಂಜೆ ಕೆಲಸದಿಂದ ವಾಪಸ್ಸು ಬರುತ್ತಿದ್ದಾಗ ಕ್ರೈಸ್ಟ್ ಕಾಲೇಜಿನ ಮುಂದೆ ಸುಕುಮಾರನ ಬೈಕಿನ ಹಿಂದೆ ದೊಡ್ಡದೊಂದು ಮರಳು ತುಂಬಿದ ಲಾರಿಯೊಂದು ವೇಗವಾಗಿ ಸಾಗಿಬಂತು. ಜೋರಾಗಿ ಹಾರ್ನ್ ಮಾಡಿಕೊಂಡು ಬಂದ ಲಾರಿಯ ರಭಸಕ್ಕೆ ಹೆದರಿದ ಸುಕುಮಾರ ಮೊದಲೇ ರಸ್ತೆಯ ಎಡಕ್ಕೇ ಸಾಗುತ್ತಿದ್ದ ತನ್ನ ಬೈಕನ್ನು ಇನ್ನಷ್ಟು ಅಂಚಿಗೆ ತಂದ. ಲಾರಿ ಮುಂದೆ ಸಾಗಿ, ಇವನು ಕ್ರೈಸ್ಟ್ ಕಾಲೇಜಿನ ಮುಂದಕ್ಕೆ ಬಂದಾಗ ಬೈಕಿನ ಹಿಂದಿನ ಸೀಟಿಗೆ ಯಾರೋ ನೆಗೆದು ಕುಳಿತಂತಾಯಿತು. ತಡಬಡಾಯಿಸಿ, ಆಯ ತಪ್ಪಿದ ಬೈಕನ್ನು ಹತೋಟಿಗೆ ತರಲೆತ್ನಿಸುತ್ತ ರಿಯರ್-ವ್ಯೂ ಕನ್ನಡಿಯಲ್ಲಿ ತನ್ನ ಬೆನ್ನ ಹಿಂದೆ ಯಾರೂ ಇಲ್ಲದುದನ್ನು ಖಾತ್ರಿ ಮಾಡಿಕೊಂಡು ಇವನು ಸಮಾಧಾನದ ನಿಟ್ಟುಸಿರು ಬಿಡುವಷ್ಟರಲ್ಲಿ ಹಿಂದಿನ ಸೀಟಿನಲ್ಲಿ ನಿಜವಾಗಿಯೂ ಯಾರೋ ಕುಳಿತಿರುವಂತೆ ಮತ್ತೆ ಬೈಕು ತೊನೆದಾಡಿತು, ಮತ್ತು ಕ್ರೈಸ್ಟ್ ಕಾಲೇಜಿನ ಕಾಂಪೌಂಡ್ ಮುಗಿದು ಎಡಕ್ಕೆ ತಿರುಗಿಕೊಳ್ಳುವವರೆಗೂ ಹಾಗೆ ಹೀಗೆ ಹೊಯ್ದಾಡುತ್ತಲೇ ಇತ್ತು...

ಹುಡುಗಿಯರು ಸಾಮಾನ್ಯವಾಗಿ ಬೈಕಿನಲ್ಲಿ ಕುಳಿತಾಗ ಹೀಗೆ ಬೈಕು ತೊನೆದಾಡುವಂತೆ ಕೂರುತ್ತಾರೆ, ಯಾವುದೇ ಬ್ಯಾಲೆನ್ಸ್ ಇಲ್ಲದೇ ಕುಳಿತು ಪ್ರಾಣ ತಿನ್ನುತ್ತಾರೆ ಅಂತೆಲ್ಲ ತನ್ನದೇ ಅಲ್ಪಜ್ಞಾನದ ಕಾರಣಗಳನ್ನೆಲ್ಲ ಕೊಟ್ಟುಕೊಂಡು, ಆವತ್ತು ಅಪಘಾತಕ್ಕೀಡಾದ ಹುಡುಗಿ ನಿಜವಾಗಿಯೂ ಸತ್ತೇ ಹೋಗಿರಬಹುದು ಅಂತೆಲ್ಲ ನೆನೆಸಿ ನಿದ್ದೆ ಕಳೆದುಕೊಂಡ ಸುಕುಮಾರ ಯಾವುದಕ್ಕೂ ಇರಲೀ ಅಂತಾ ಒಂದೆರಡು ದಿನ ಕ್ರೈಸ್ಟ್ ಕಾಲೇಜಿನ ಮುಂದೆ ಓಡಿಯಾಡಿದ, ಮತ್ತು ಪ್ರತಿಸಲವೂ ಹಿಂದಿನದಕ್ಕಿಂತ ಭಯಂಕರವಾಗಿ ತನ್ನ ಬೈಕಿನ ಹಿಂದಿನ ಸೀಟಿನಲ್ಲಿ ಯಾರೋ ಕುಳಿತಂತಾಗುವುದನ್ನು ಅನುಭವಿಸಿದ, ಬೆಚ್ಚಿ ಬೆವರಿ ಬೆರಗಾದ.

ಒಂದು ವಾರ ಹೀಗೇ ಸಾವಿನ ಜೊತೆ ಸರಸವಾಡಿ ಸುಕುಮಾರ ಇನ್ನು ಹೆಚ್ಚು ಅಪಾಯವನ್ನೆದುರಿಸುವುದು ಬೇಡವೆಂದು ತನ್ನ ಆಫೀಸಿನಿಂದ ಬರುವುದಕ್ಕೆ ಮಡಿವಾಳ ಸರ್ಕಲ್ಲಿನಿಂದ ಮುಖ್ಯರಸ್ತೆ ಬಿಟ್ಟು, ನೇರವಾಗಿ ತನ್ನ ರೂಂ ಇರುವ ಬನ್ನೇರುಘಟ್ಟದ ರಸ್ತೆ ತಲುಪುವ ಒಂದು ಅಡ್ಡದ ಗಲ್ಲಿ ರಸ್ತೆಯನ್ನು ಹುಡುಕಿಕೊಂಡ. ಇದರಿಂದ ಇವನ ಪ್ರತಿನಿತ್ಯದ ಕ್ರೈಸ್ಟ್ ಕಾಲೇಜು-ಫೋರಂ ಮಾಲಿನ ಹುಡುಗಿಯರ ದರ್ಶನಭಾಗ್ಯ ತಪ್ಪಿತಾದರೂ ಜೀವವೊಂದುಳಿದರೆ ವಾರಾಂತ್ಯದಲ್ಲಿ ಫೋರಂ ಹೊಕ್ಕೋ, ಎಂಜಿ ರೋಡು ಬ್ರಿಗೇಡು ಅಂತೆಲ್ಲ ಅಲೆದು, ಹುಡುಗಿಯರ ಮೆರವಣಿಗೆ ನೋಡಿ ನಷ್ಟ ಪರಿಹಾರ ಮಾಡಿಕೊಳ್ಳಬಹುದೆಂದು ಮನದಲ್ಲಿ ಹಲುಬಿಕೊಂಡೇ ಸಮಾಧಾನ ಮಾಡಿಕೊಂಡ.

ಹೀಗೇ ತಿಂಗಳುಗಳುರುಳಿದಂತೆ ಸುಕುಮಾರ ಲೀಲಾಜಾಲವಾಗಿ ಬೈಕು ಓಡಿಸುವುದನ್ನು ಕಲಿತು, ಬರೀ ರಸ್ತೆಯಂಚಿನಲ್ಲೇ ಹೋಗುವುದನ್ನು ಬಿಟ್ಟು, ಗುರುಗಳನ್ನೇ ಮೀರಿಸುವ ಶಿಷ್ಯನಾಗಿ ಬೆಳೆದುಬಿಟ್ಟ. ವಾರಾಂತ್ಯದಲ್ಲಿ ಒಂದೆರಡು ಬಾರಿ ಬೆಂಗಳೂರಿನ ಹೊರಕ್ಕೆ ತನ್ನ ಸ್ನೇಹಿತರೊಡನೆ ಲಾಂಗ್-ಡ್ರೈವ್ ಅಂತೆಲ್ಲ ಮಾಡಿಕೊಂಡೂ, ಒಮ್ಮೆ ದೂರದ ತನ್ನೂರು ಬೇಲೂರಿಗೂ ಅಪ್ಪ ಅಮ್ಮನನ್ನು ನೋಡಲು ಬೈಕಿನಲ್ಲೇ ಹೋಗಿಬಂದು ಹೀರೋ ಆಗಿಬಿಟ್ಟ. ಇಷ್ಟೆಲ್ಲ ಆದರೂ ಆಫೀಸಿನಿಂದ ವಾಪಸ್ಸು ಬರಲು ಕ್ರೈಸ್ಟ್ ಕಾಲೇಜಿನ ಮುಂದಿನ ಮುಖ್ಯರಸ್ತೆಯನ್ನುಪಯೋಗಿಸದೇ ಇನ್ನೂ ಅದೇ ಗಲ್ಲಿ ರಸ್ತೆಯನ್ನೇ ಉಪಯೋಗಿಸುತ್ತಿದ್ದ. ಈಗ ಅಂಥಾ ಹೆದರಿಕೆಯಿಲ್ಲದಿದ್ದರೂ, ಬೆಂಗಳೂರಿನ ಉಳಿದೆಲ್ಲ ಲಕ್ಷಗಟ್ಟಲೆ ದ್ವಿಚಕ್ರ ವಾಹನ ಚಾಲಕರಂತೆ ಮುಖ್ಯರಸ್ತೆಯಲ್ಲಿ ಸಿಗುವ ವಾಹನ ಸಂದಣಿ, ಮತ್ತು ಟ್ರಾಫಿಕ್ ಸಿಗ್ನಲ್ಲುಗಳನ್ನು ತಪ್ಪಿಸಲು ಈ ಗಲ್ಲಿ-ಪ್ರಯಾಣ ಅಂತಾ ತನಗೆ ತಾನೇ ಸಮಾಧಾನ ಮಾಡಿಕೊಂಡು ಸುಖವಾಗಿದ್ದ...

ಅವತ್ತೊಂದು ದಿನ ಸಂಜೆ ಆಫೀಸಿನಲ್ಲಿ ಕೆಲಸ ತಡವಾಗಿ ಇವನು ಹೊರಬರುವಾಗ ಸಂಜೆ-ರಾತ್ರಿಯಾಗುತ್ತಿತ್ತು. ಮಡಿವಾಳ ಸರ್ಕಲ್ಲಿಗೆ ಬರುವಷ್ಟರಲ್ಲಿ ಸಕ್ಕತ್ತು ಟ್ರಾಫಿಕ್ಕು, ಜೊತೆಗೆ ಇವನು ಯಾವಾಗಲೂ ಉಪಯೋಗಿಸುತ್ತಿದ್ದ ಗಲ್ಲಿ ರಸ್ತೆಯ ಅಡ್ಡಡ್ಡಲಾಗಿ ಮಣ್ಣಿನ ಗುಡ್ಡೆ! ಮೋರಿಯನ್ನು ಬಗೆದು ರಿಪೇರಿ ಮಾಡುತ್ತಿದ್ದರೋ ಏನೋ ಅರ್ಧ ಹರದಾರಿ ದೂರಕ್ಕೆಲ್ಲ ಬೆಂಗಳೂರಿನ ಕೊಳಕುಹೊಟ್ಟೆ ಬಗೆದ ನಾತ! ಸರಿ ಎಂದು ಇವನು ಧೈರ್ಯವಾಗಿಯೇ ಮುಖ್ಯರಸ್ತೆಯಲ್ಲೇ ಸಾಗಿಬಂದ. ಫೋರಂ ದಾಟಿ, ಕ್ರೈಸ್ಟ್ ಕಾಲೇಜಿನ ಮುಂದಕ್ಕೆ ಬರುವಷ್ಟರಲ್ಲಿ ಇವನ ಹಿಂದೆ ಯಾವುದೋ ಕ್ವಾಲಿಸ್ ಅಬ್ಬರಿಸಿಕೊಂಡು ಬಂತು. ಬೇಡ-ಬೇಡವೆಂದರೂ ಇವನ ಬೈಕಿನ ಎಡಗಡೆಯ ಹ್ಯಾಂಡಲ್ ಸವರಿಕೊಂಡೇ ಹೋದ ಕ್ವಾಲಿಸ್‌ಗೆ ಮುಂದೆ ಸಾಗಲು ದಾರಿಕೊಟ್ಟು ಕ್ರೈಸ್ಟ್ ಕಾಲೇಜಿನ ರಸ್ತೆಯ ಎಡ ಅಂಚಿಗೆ ಬಂದ. ಸಂಜೆಯ ಬೇಗೆಯಲ್ಲಿ ಎಲ್ಲಿಂದಲೋ ಸುಳಿಗಾಳಿ ಬೀಸಿದಂತಾಯಿತು. ಮತ್ತು ಥಟ್ಟನೆ ಯಾರೋ ಇವನ ಹಿಂದೆ ಬೈಕಿನ ಮೇಲೆ ಕುಳಿತು, ಜೋಲಿ ಹೊಡೆದಂತಾಯಿತು!

ಬೆದರಿ ಬೆಚ್ಚಿ ಸುಕುಮಾರ ಜೋಲಿಹೊಡೆಯುತ್ತಿದ್ದ ಬೈಕನ್ನು ಮೆಲ್ಲನೆ ರಸ್ತೆಯ ಎಡ ಅಂಚಿಗೆ ತಂದು ನಿಲ್ಲಿಸಿದ. ಇನ್ನೂ ಮೊದಲನೇ ಗೇರಿನಲ್ಲೇ ಇದ್ದು ಕ್ಲಚ್ ಬಿಟ್ಟಿದುದರಿಂದ ಬೈಕೂ ಮೆಲ್ಲನೆ ಮುಂದಕ್ಕೆ ನುಗ್ಗಿದಂತೆ ಮಾಡಿ, ಎಡವಿತು. ಇವನು ಇನ್ನೂ ಹೆದರಿಕೊಂಡು ಬೈಕನ್ನು ಹತೋಟಿಗೆ ತಂದು ಗೇರನ್ನು ನ್ಯೂಟ್ರಲ್‌ಗೆ ಹಾಕಿ ನಿಲ್ಲಿಸಿದ. ಮರುಕ್ಷಣವೇ, ಅದೂವರೆಗೂ ಬ್ರೇಕ್ ಅದುಮಿಟ್ಟುಕೊಂಡಿದ್ದ ಕಾಲಿನ ಹಿಮ್ಮಡಿಯಿಂದ ಶುರುವಾದ ಕಂಪನ ಮೀನಖಂಡಕ್ಕೇರಿ, ಬಲ ತೊಡೆಯನ್ನು ತಲುಪಿ, ಇವನ ಇಡೀ ಬಲಗಾಲು ಅದುರಲಾರಂಭಿಸಿತು. ಹೆಲ್ಮೆಟ್‌ನೊಳಗಿನ ತಲೆಗೂದಲೊಳಗಿನಿಂದ ನೀರಿಳಿದು, ತೊಟ್ಟುಕೊಂಡಿದ್ದ ಶರ್ಟಿನ ಕತ್ತಿನ ಪಟ್ಟಿಯನ್ನು ನೆನೆಸಿತು. ಎರಡೂ ಕಾಲುಗಳನ್ನೂ ಬಲವಾಗಿ ನೆಲಕ್ಕೂರಿ, ಬೈಕಿನ ಮೇಲೆ ಕುಳಿತು, ಹೆಲ್ಮೆಟ್ ತೆಗೆದು, ಮುಖ ಒರೆಸಿಕೊಂಡ. ಇವನಿಗೆ ತಾಕಿಸಿಕೊಂಡು ಮುಂದೆ ಹೋದ ಕ್ವಾಲಿಸ್ ಮುಂದಿದ್ದ ಮೇಲ್ಸೇತುವೆಯನ್ನೂ ಏರಿ, ಅತ್ತ ಲಾಲ್‌ಬಾಗ್ ಕಡೆಗೆ ಹೋಗಿಯಾಗಿತ್ತು. ಕುಳಿತ ಹಾಗೆಯೇ ಇವನು, ಅತ್ತಿತ್ತ ನೋಡಿದ, ಸುತ್ತ ಗಿಜಿಗುಡುತ್ತಿದ್ದ ಜನಜಂಗುಳಿ, ಹರಿದಾಡುತ್ತಿದ್ದ ವಾಹನಸಂದಣಿ ಯಾವುದೂ ಇವನ ಬೈಕಿಗೆ ಮೆಟ್ಟಿಕೊಂಡಿದ್ದ ಭೂತದ ಬಗ್ಗೆ ತಲೆ ಕೆಡಿಸಿಕೊಂಡಿದ್ದಂತಿರಲಿಲ್ಲ. ತನ್ನ ಎಡಕ್ಕೆ ತಿರುಗಿ, ಎಡಗೈಯನ್ನು ಬೈಕಿನ ಸೀಟಿನ ಉಳಿದ ಭಾಗವನ್ನು ಮುಟ್ಟಿ, ತಡವರಿಸಿ, ಅಲ್ಲ್ಯಾರೂ ಕುಳಿತಿಲ್ಲವೆಂದು ಖಾತ್ರಿ ಪಡಿಸಿಕೊಂಡ. ನಂತರ ಗಾಳಿ ಕಡಿಮೆಯಾಗಿರಬಹುದೇನೋ, ಅಥವಾ ಪಂಚರ್ ಆಗಿರಬಹುದೇನೋ ಎಂದುಕೊಳ್ಳುತ್ತ ಬೈಕಿನೆರಡೂ ಗಾಲಿಗಳನ್ನೂ ಬಗ್ಗಿ ನೋಡಿಕೊಂಡ, ಅಂಥಾದ್ದೇನೂ ಆಗಿರಲಿಲ್ಲ.

ಸ್ವಲ್ಪ ಹೊತ್ತು ಹಾಗೇ ಕುಳಿತಿದ್ದು, ನೋಡಿಯೇ ಬಿಡೋಣವೆಂದುಕೊಂಡು ಸುಕುಮಾರ ತಲೆಗೂದಲ ಬೆವರನ್ನು ಒರೆಸಿಕೊಂಡು, ಹೆಲ್ಮೆಟ್ ಧರಿಸಿಕೊಂಡು, ಬೈಕನ್ನು ಸ್ಟಾರ್ಟ್ ಮಾಡಿದ. ಮೆಲ್ಲನೆ ಕ್ಲಚ್ ಹಿಡಿದು, ಮೊದಲನೇ ಗೇರಿಗೆ ಹಾಕಿ, ಮೆಲ್ಲಗೆ ಕ್ಲಚ್ ಬಿಟ್ಟು, ಕಾಲುಗಳನ್ನು ಮೆಲ್ಲನೆ ಎತ್ತಿಟ್ಟುಕೊಳ್ಳುತ್ತಿದ್ದಂತೆಯೇ ನಿಧಾನಗತಿಯಲ್ಲಿದ್ದ ಬೈಕು ಮೊದಲಿನಂತೆಯೇ ಅತ್ತಿತ್ತ ಅಲುಗಾಡಿತು, ಇವನು ರಿಯರ್ ವ್ಯೂ ಮಿರರ್‌ನಲ್ಲಿ ನೋಡಿಕೊಂಡ, ಅವನ ಬೆನ್ನ ಹಿಂದೆ ಯಾರೂ ಕುಳಿತಿರಲಿಲ್ಲ. ಧೈರ್ಯ ತಾಳಿ, ಓಲಾಡುತ್ತಿದ್ದ ಬೈಕಿಗೆ ಸ್ವಲ್ಪ ವೇಗ ಕೊಟ್ಟು, ಗೇರ್ ಬದಲಾಯಿಸಿದ. ಇದೆಲ್ಲ ಮಾಡುತ್ತಿರುವಾಗ ಅವನಿಗೆ ಕತ್ತಲಾಗುತ್ತಿದ್ದುದು ಅರಿವಾಯಿತು. ಹಾಗೇ ಬೈಕಿನ ಹೆಡ್ ಲೈಟನ್ನು ಆನ್ ಮಾಡಿಕೊಂಡ. ಹೆಡ್ ಲೈಟಿನ ಬೆಳಕಿಗೆ, ನೇರವಾಗಿ ರಸ್ತೆಯನ್ನು ನೋಡುತ್ತಿದ್ದ ಸುಕುಮಾರನಿಗೆ, ರಸ್ತೆಯಲ್ಲಿ ಆಳವಾಗಿ ಎಳೆದಿದ್ದ ಸರಳ ರೇಖೆಯೊಂದು ಕಂಡಿತು! ದೂರ ಸಂಪರ್ಕ ಇಲಾಖೆಯವರು ಸಂಪರ್ಕದ ಕೇಬಲ್ಲುಗಳನ್ನೆಳೆಯುಲು ರಸ್ತೆಯಲ್ಲಿ, ಆಳವಾಗಿ ಮಾಡಿ, ಕೇಬಲ್ಲುಗಳನ್ನು ಎಳೆದಾದ ಮೇಲೆ ಅರಗಿನ ಮೇಣದಂತಹುದರಿಂದ ಮುಚ್ಚಿದ್ದ ಗೆರೆಯ ಮೇಲೆ ಇವನ ಬೈಕು ಓಡುತ್ತಿತ್ತು, ಮತ್ತು ಅದರಿಂದಾಗಿಯೇ ಮೆಲ್ಲಗೆ ಜೋಲಿ ಹೊಡೆಯುತ್ತಿತ್ತು!

ಇವನು ಮತ್ತೊಮ್ಮೆ ಬೈಕಿಗೆ ವೇಗ ಕೊಟ್ಟು, ಗೇರ್ ಬದಲಾಯಿಸಿದ, ಬೈಕು ಆಳವಾದ ಸುಟ್ಟ ಗಾಯದ ಗೆರೆಯ ಮೇಲೆ ಓಡುತ್ತ, ಇನ್ನೂ ಬಲವಾಗಿ ಓಲಾಡಿತು, ಇವನು ಆ ಗೆರೆಯನ್ನು ಬಿಟ್ಟು, ಬಲಕ್ಕೆ ಬಂದ, ಬೈಕಿನ ಭೂತೋಚ್ಛಾಟನೆಯಾಯಿತು! ಇವನು ಹಾಗೆಯೇ ನೋಡೋಣವೆಂದುಕೊಂಡು ಬೈಕನ್ನು ಆ ಗೆರೆಯ ಮೇಲಕ್ಕೆ ತಂದ, ಬೈಕಿಗೆ ಭೂತಾವಾಹನೆಯಾಯಿತು! ಸುಕುಮಾರನಿಗೆ ಹೃದಯ ಹಗುರಾಗಿ, ತಡೆಯಲಾರದಷ್ಟು ನಗು ಬಂತು...

ಮರುದಿನದಿಂದ ಸುಕುಮಾರ ಆಫೀಸಿನಿಂದ ವಾಪಸ್ಸು ಬರಲು ಎಂದಿನಂತೆ ಒಳರಸ್ತೆಗಳನ್ನು ಉಪಯೋಗಿಸದೇ ಆರು ತಿಂಗಳಿನ ಹಿಂದಿನಂತೆ ಮುಖ್ಯರಸ್ತೆಯಲ್ಲಿಯೇ, ಫೋರಮ್ ಮುಂದಿರುತ್ತಿದ್ದ ಹುಡುಗಿಯರು ಮತ್ತು ಸೇಂಟ್ ಜೋಸೆಫ್ಸ್ ಕಾಲೇಜಿನ ಉಳಿದಿದ್ದ ಹುಡುಗಿಯರನ್ನು ನೋಡಿಕೊಳ್ಳುತ್ತ ಲೀಲಾಜಾಲವಾಗಿ ಬೈಕನ್ನು ಓಡಿಸಲಾರಂಭಿಸಿದ!

ಲೇಖಕರು

ಶಿವಕುಮಾರ ಕೆ. ಎಸ್.

ನನ್ನ ತಲೆ'ಹರಟೆ'ಗಳು

ನಾನೊಬ್ಬ ಏಕಾಂಗಿ(ಇದೂವರೆಗೂ) ಸಂಚಾರಿ. ಸಮಯ, ಸಂದರ್ಭ, ವ್ಯಕ್ತಿಗಳೆಡೆಯಿಂದ ಪಯಣಿಸುತ್ತ, ಎಲ್ಲವನ್ನೂ ಅರ್ಥೈಸಿಕೊಳ್ಳುತ್ತ, ಕಲಿತುಕೊಳ್ಳುತ್ತ, ಯಾರನ್ನೂ ದೂರದೇ, ಪ್ರಜ್ಞಾಪೂರ್ವಕವಾಗಿ ಯಾವುದರ ಬಗೆಗೂ ಪೂರ್ವ-ನಿರ್ಧಾರಿತ ಆಲೋಚನೆಗಳನ್ನಿಟ್ಟುಕೊಳ್ಳದೇ ಸಾಗುತ್ತಿರುವೆ.

ಅನಿಸಿಕೆಗಳು

ಬಾಲ ಚಂದ್ರ ಮಂಗಳ, 08/11/2009 - 12:35

ಛೇ ಛೇ ಎಂಥಾ ನೀರಸವಾದ ಭೂತೋಚ್ಚಾಟನೆ,
ಬಲಿ, ಕುಂಬಳಕಾಯಿ, ನಿಂಬೆಹಣ್ಣು, ರಕ್ತ , ಮಂತ್ರವಾದಿ ಮುಂತಾದವುಗಳ ಹಂಗೇ ಇಲ್ಲ
ಚೆನ್ನಾಗಿತ್ತು ಶಿವಣ್ಣ

ಸಸ್ನೇಹ
ಬಾಲ ಚಂದ್ರ

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 08/13/2009 - 08:25

ಸ್ವಾಮೀ ಶಿವಕುಮಾರ್ ಅವರೇ, ಬೇರೆಯವರ ಬರವಣಿಗೆಗೆ ಕೆಲವೊಮ್ಮೆ ಖಾರವಾಗಿ ಪ್ರತಿಕ್ರಿಯೆ ನೀಡುತ್ತೀರಿ. ಈ ನಿಮ್ಮ ಲೇಖನ ಥೂ ಸ್ವಲ್ಪವೂ ಚೆನ್ನಾಗಿಲ್ಲ.... :sick:

ಕಥೆ ಚೆನ್ನಾಗಿದೆ, ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ.

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 10/29/2009 - 11:44

Stop writing ASAP.

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 11/10/2009 - 15:24

ಸಿನೆಮಾ ನೋಡಿದ ಹಾಗಿತ್ತು... ಕಥೆ ಚೆನ್ನಾಗಿದೆ.

virender ಸೋಮ, 12/21/2009 - 19:10

good keep it up dear geleya.

ಚೆನ್ನಾಗಿತ್ತು  ಮುಗಿದ್ದದ್ದೆ  ಗೊತ್ತಾಗಿಲ್ಲ

deepa (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 12/02/2011 - 14:39

ಕಥೆ ಚೆನ್ನಾಗಿದೆ.

ಪ್ರಭುದೇವ್ (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 12/29/2011 - 12:25

ಸಣ್ಣ ವಿಷಯ ಹೇಳೋದಕ್ಕೆ ಇಷ್ಟು ಶ್ರಮ ಪತ್ತುಕೊಂದ್ರೆ ಓದುವುದಕ್ಕೆ ಇಮ್ಮಡಿ ಶ್ರಮ

ಪ್ರಭುದೇವ್ (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 12/29/2011 - 12:26

ಸಣ್ಣ ವಿಷಯ ಹೇಳೋದಕ್ಕೆ ಇಷ್ಟು ಶ್ರಮ ಪತ್ತುಕೊಂದ್ರೆ ಓದುವುದಕ್ಕೆ ಇಮ್ಮಡಿ ಶ್ರಮ

gÁdÄ (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 03/30/2012 - 13:41

ಚೆನ್ನಾಗಿದೆ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.