Skip to main content

ತಿರುವಳ್ಳುವರ್ ಮೂರ್ತಿ ಸ್ಥಾಪಿಸಿ ಕನ್ನಡ-ತಮಿಳರ ನಡುವೆ ಶಾಂತಿ, ಪ್ರೀತಿ ತುಂಬಿ, ಸಣ್ಣ ಮನಸ್ಸಿನ ಕನ್ನಡಿಗರನ್ನು ದೊಡ್ಡ ಮನಸ್ಸಿನ ತಮಿಳರನ್ನು ಬೆಸೆದು, ಕನ್ನಡಿಗರ ಮನಸ್ಸಲ್ಲಿದ್ದ ಸಣ್ಣತನವೆಂಬ ಮೂರ್ತಿಯನ್ನು ಕಿತ್ತೆಸೆದು, ಹೊಗೆನಕಲ್ ಕಿರಿಕಿರಿ, ಶಾಸ್ತ್ರೀಯ ಭಾಷೆಗೆ ಅಡ್ಡಗಾಲು, ಕಾವೇರಿ ನೀರಿಗೆ ತಗಾದೆ, ಹೀಗೆ ತಮಿಳರು ನಮಗೆ ನೀಡಿರುವ, ನೀಡುತ್ತಿರುವ ಹಲವು ತೊಂದರೆಗಳನ್ನೆಲ್ಲ ವಿಷ ಕಂಠನಂತೆ ನುಂಗಿಕೊಂಡು, ಇತಿಹಾಸದಲ್ಲೇ ಮೊದಲ ಬಾರಿಗೆ ತಮಿಳರ ಮನಸ್ಸು ಗೆದ್ದು, ನೋಬೆಲ್ ಶಾಂತಿ ಪ್ರಶಸ್ತಿ ಪಡೆಯುವತ್ತ ಹೆಜ್ಜೆ ಇಟ್ಟಿರುವ ಕರ್ನಾಟಕದ ಮುಖ್ಯಮಂತ್ರಿಗಳನ್ನು ಅಭಿನಂದಿಸುತ್ತಲೇ ನನ್ನ ಮನಸ್ಸಿನಲ್ಲಿ ಕೊರೆಯುತ್ತಿದ್ದ ಒಂದಿಷ್ಟು ಪ್ರಶ್ನೆಗಳನ್ನು ಕನ್ನಡದ ಅಣ್ಣ-ತಮ್ಮ-ಅಕ್ಕ-ತಂಗಿಯರ ಮುಂದೆ ಇಡಬೇಕು ಅನ್ನಿಸುತ್ತಿದೆ.

* ಆರೋಗ್ಯ ಕ್ಷೇತ್ರದಲ್ಲಿ ಒಳ್ಳೆಯ ಅನುಕೂಲ ಇರುವ ಜಗತ್ತಿನ ಕೆಲವೇ ಕೆಲವು ಮುಂಚೂಣಿಯ ನಗರಗಳಲ್ಲಿ ಬೆಂಗಳೂರು ಕೂಡಾ ಒಂದು. Medical Tourism ಅನ್ನೋದು ಜಗತ್ತಿನೆಲ್ಲೆಡೆಯಿಂದ ಭಾರತಕ್ಕೆ ಅದರಲ್ಲೂ ಬೆಂಗಳೂರಿಗೆ ದೊಡ್ಡ ಸಂಖ್ಯೆಯಲ್ಲಿ ಆರೋಗ್ಯ ತಪಾಸಣೆ, ಚಿಕಿತ್ಸೆಗಾಗಿ ಜನರನ್ನು ಸೆಳೆಯುತ್ತಿದೆ, ಆದ್ರೆ ನಮ್ಮ ಮುಖ್ಯಮಂತ್ರಿಯವರಿಗೆ ಉಂಟಾದ ಅಲ್ಪ ಅನಾರೋಗ್ಯಕ್ಕೆ ಬೆಂಗಳೂರಿನಲ್ಲಿ ಒಬ್ಬೇ ಒಬ್ಬ ವೈದ್ಯ ಇರಲಿಲ್ಲವಾ? ಆರೋಗ್ಯ ತಪಾಸಣೆಗೆ ಚೆನ್ನೈನ ಅಪೊಲೊಗೆ ಹೋದರೋ ಇಲ್ಲ ತಮಿಳರ ಮತಕ್ಕಾಗಿ ಮೂರ್ತಿ ವಿಷ್ಯ ಫಿಕ್ಸ್ ಮಾಡಿಕೊಂಡು ಬಂದರೋ ಅನ್ನೊದನ್ನ ನೀವೇ ನಿರ್ಧಾರ ಮಾಡಬೇಕು.
* ಕರುಣಾನಿಧಿಯವರ ಆರೋಗ್ಯ ವಿಚಾರಿಸಲು ಅವರ ಮನೆಗೆ ಹೋದ ಮುಖ್ಯಮಂತ್ರಿಗಳಿಗೆ ಇದ್ದಕ್ಕಿಂದ್ದಂತೆ ತಿರುವಳ್ಳುವರ್ ಮೂರ್ತಿ ಸ್ಥಾಪನೆ ವಿಷಯ ನೆನಪಿಗೆ ಬಂತಾ? (ನೆನಪಿರಲಿ, ತಿರುವಳ್ಳುವರ್ ಮೂರ್ತಿ ವಿಷಯ ರಾಜಕುಮಾರ್ ಅಪಹರಣ ಸಂದರ್ಭದ ನಂತರ ಚರ್ಚೆಯಲ್ಲೇ ಇರಲಿಲ್ಲ). ಇಲ್ಲಾ, ಕರುಣಾನಿಧಿಯವರು ಮೂರ್ತಿ ವಿಷಯ ಹೇಳಿಕೊಂಡು ಕಣ್ಣೀರು ಏನಾದ್ರೂ ಹಾಕಿದ್ರಾ? ಅದನ್ನ ನೋಡಿ ನಮ್ಮ ಮುಖ್ಯಮಂತ್ರಿಯವರ ಬೆಣ್ಣೆ ಮನಸ್ಸು ಕರಗಿ ಹೀಗೊಂದು ನಿರ್ಧಾರಕ್ಕೆ ಬಂದ್ರಾ?
* ತಿರುವಳ್ಳುವರ್ ಮೂರ್ತಿ ಸ್ಥಾಪನೆಯ ಬೇಡಿಕೆ ನೆಡುಮಾರನ್ ನಂತಹ ಪ್ರತ್ಯೇಕತಾವಾದಿಗಳ ಬೇಡಿಕೆ, ಇಂತಹ ಬೆದರಿಕೆ ತಂತ್ರಕ್ಕೆ ಸರ್ಕಾರ ಜಗ್ಗಬಾರದು ಎಂದು ರಾಜಕುಮಾರ್ ಅಪಹರಣದ ಸಂದರ್ಭದಲ್ಲಿ ಪುಟಗಟ್ಟಲೇ ಬರೆದಿದ್ದ ಕನ್ನಡ ಪತ್ರಿಕೆಗಳು, ಒಮ್ಮಿಂದೊಮ್ಮೆಲೆ, ಕನ್ನಡಿಗರಿಗೆ ಸಣ್ಣತನ ಬಿಡಿ, ಮಾನವೀಯತೆ ಮೆರೆಯಿರಿ ಅನ್ನುವ ಸರ್ಕಾರಿ ಪ್ರಾಯೋಜಿತ ಗಿಳಿ ಪಾಠ ಶುರು ಮಾಡಿಕೊಂಡಿದ್ದು ನೋಡಿದರೆ ಇದೆಲ್ಲ ಮೊದಲೇ ಫಿಕ್ಸ್ ಆಗಿದ್ದಾ ಅನ್ನೋ ಸಂದೇಹ ಬರಲ್ವಾ?
* ಎತ್ತು ಏರಿಗೆಳೆದರೆ, ಕೋಣ ನೀರಿಗೆಳೆಯಿತು ಅನ್ನುವಂತೆ ಯಾವತ್ತು ಎಡ-ಬಲ ಎಂದು ಕಿತ್ತಾಡುತ್ತಿದ್ದ ಬುದ್ಧಿ ಜೀವಿ (??) ಗಳಾದ ಅನಂತಮೂರ್ತಿ, ಚಿದಾನಂದ ಮೂರ್ತಿಗಳೆಲ್ಲ ಒಕ್ಕೊರಿಲಿನಿಂದ ಮೂರ್ತಿ ಸ್ಥಾಪನೆಯನ್ನು ಬೆಂಬಲಿಸಿ ಹೇಳಿಕೆ ಕೊಡುತ್ತಿರುವುದನ್ನು ಗಮನಿಸಿದಾಗ ಇವರ ನಿಯತ್ತು ನಾಡು-ನುಡಿಗೋ, ಇಲ್ಲ ಸರ್ಕಾರದ ಕೃಪೆಗೋ ಅನ್ನೋ ಪ್ರಶ್ನೆ ನಿಮ್ಮ ಮನಸ್ಸಲ್ಲೂ ಬಂದಿಲ್ವಾ?
* ಸದನದಲ್ಲಿ ವೀರಾವೇಷ ಮೆರೆಯುತ್ತಿದ್ದ, ಮಾತಿಗೊಮ್ಮೆ ಬಿ.ಜೆ.ಪಿಗೆ ತಕ್ಕ ಪಾಠ ಕಲಿಸುವುದಾಗಿ ಗುಡುಗುತ್ತಿದ್ದ ಜೆ.ಡಿ(ಎಸ್), ಕಾಂಗ್ರೆಸ್ ಪಕ್ಷಗಳಿಗೆ ಸರ್ವಜ್ಞನ ಮೂರ್ತಿ ಚೆನ್ನೈನ ಮುಖ್ಯ ಬೀದಿಯೊಂದರಲ್ಲಿ ಕೂರಿಸಿ ಎಂದು ಕೇಳುವಷ್ಟು ಕೂಡ ಧ್ವನಿ ಬರಲಿಲ್ಲ ಅಂದರೆ, ತಮಿಳರ ಪುಡಿ ಮತದ ಆಸೆಗೆ, ಮತ ಬ್ಯಾಂಕ್ ನ ರಾಜಕೀಯದ ಮುಂದೆ ಕನ್ನಡ-ಕರ್ನಾಟಕದ ಸ್ವಾಭಿಮಾನ ಇವರಿಗೆಲ್ಲ ಎಷ್ಟು ನಗಣ್ಯ ಎನ್ನುವ ಭಾವನೆ ನಿಮಗೂ ಬಂದಿಲ್ವಾ?
* ಎಲ್ಲಕ್ಕೂ ಮೀಗಿಲಾಗಿ, ಮಾತಿಗೊಮ್ಮೆ ಅಲ್ಪ ಸಂಖ್ಯಾತರ ತುಷ್ಟೀಕರಣ ಮಾಡಬಾರದು, ತನ್ನ ದೃಷ್ಟಿಯಲ್ಲಿ ಎಲ್ಲರೂ ಸಮಾನ ಅನ್ನುತ್ತಿದ್ದ ಬಿ.ಜೆ.ಪಿ ಇವತ್ತು ಮಾಡುತ್ತಿರುವುದು ಏನು? ದಶಕಗಳಿಂದ ಇಲ್ಲಿ ನೆಲೆಸಿ ಕನ್ನಡಿಗರೇ ಆಗಿರುವ ತಮಿಳರನ್ನು, ಕನ್ನಡದ ಮುಖ್ಯವಾಹಿನಿಯಿಂದ ಬೇರ್ಪಡಿಸಿ, ಅವರಿಗಾಗಿ ಮೂರ್ತಿ ಸ್ಥಾಪಿಸಿ ಅವರಲ್ಲಿ ಪ್ರತ್ಯೇಕತೆಯ ಭಾವನೆ ತುಂಬುತ್ತಾ ಇದ್ದಾರೆ ಅನ್ನಿಸಲ್ವಾ? ತಮ್ಮ ಮತ ರಾಜಕೀಯಕ್ಕಾಗಿ ಭಾಷಾ ಅಲ್ಪಸಂಖ್ಯಾತರ ತುಷ್ಟೀಕರಣದ ಮೂಲಕ ತಮಿಳರು ಕನ್ನಡ ಮುಖ್ಯವಾಹಿನಿ ಬೆರೆಯದಂತೆ ಮಾಡೋ ಪ್ರಯತ್ನ ಇದು ಅನ್ನಿಸಲ್ವಾ?

ತಮಿಳರ ಮತಕ್ಕಾಗಿ ಮೂರ್ತಿ ಸ್ಥಾಪಿಸೋ ನಿರ್ಧಾರ ಮಾಡಿ, ಕೊನೆಗೆ ಕರ್ನಾಟಕದಲ್ಲಿ ಎದುರಾಗುವ ವಿರೋಧವನ್ನು ನಿಭಾಯಿಸಲು, ಎಲ್ಲ ಪತ್ರಿಕೆಗಳಲ್ಲಿ ತನ್ನ ನಿರ್ಧಾರದ ಪರವಾಗಿ ಪ್ರಾಯೋಜಿತ ವರದಿಗಳನ್ನು ಬರೆಸಿ, ಆನಂತರ ಸಾಹಿತಿ, ಬುದ್ಧಿಜೀವಿಗಳು, ಸರ್ವ ಪಕ್ಷದ ಸಭೆ ಕರೆಯುವ ನಾಟಕ ಮಾಡಿ ತನ್ನ ನಿರ್ಧಾರ, ನಾಡಿನ ಎಲ್ಲರ ನಿರ್ಧಾರ ಅನ್ನುವಂತೆ ತೋರಿಸಿಕೊಂಡು, ಮೂರ್ತಿ ಸ್ಥಾಪನೆ ವಿರೋಧಿಸಿದ ಕನ್ನಡ ಸಂಘಟನೆಗಳು ಸಂಕುಚಿತ ಮನಸ್ಸಿನವರು ಎಂದು ತೋರಿಸಿ, ಮೂರ್ತಿ ಸ್ಥಾಪನೆಗೆ ನಿಂತಿರುವ ರಾಜ್ಯ ಸರ್ಕಾರ ತಮಿಳರ ಮತಕ್ಕಾಗಿ ಇಷ್ಟೆಲ್ಲ ನಾಟಕ ಮಾಡಿತು ಅಂತ ನಿಮಗೆ ಅನ್ನಿಸಲ್ವಾ? ನಾಳೆ ಮತ ಸಿಗೋದಾದ್ರೆ, ತೆಲುಗರಿಗಾಗಿ ಎನ್.ಟಿ.ಆರ್, ಮಲಯಾಳಿಗಾಗಿ ಮುಮ್ಮುಟ್ಟಿ ಮೂರ್ತಿ ಕೂರಿಸೋಕು ಇವರೇನು ಹಿಂಜಯರಿಯಲ್ಲ ಅಂತಾ ಅನ್ನಿಸಲ್ವಾ?

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ದಿಗಂಬರ.. (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 08/06/2009 - 17:15

ಖಂಡಿತ ಅನ್ನಿಸಿದೆ ಸ್ವಾಮಿ.
ಮತಕ್ಕಾಗಿ ಭೂಮಿಯನ್ನು ಅಗೆದು, ಅಗೆದು.. ಖಾಲಿ ಮಾಡಿಯಾಯಿತು. ಈಗ ತಮಿಳರ ಓಲೈಕೆ!! ಶಹಬಾಸ್ ಯಡಿಯೂರಿ...ನಿನ್ನಂತವರು ಕನ್ನಡ ನಾಡಿನಲ್ಲಿ ಮತ್ತೆ ಮತ್ತೆ ಹುಟ್ಟಿ ಬರಲಿ.....ನೀನು ನೂರು ವೀರಪ್ಪನ್ ಗಳಿಗೆ ಸಮ!!
ಈ ಉಸಿರಿರುವವರೆಗೂ ನಿನಗೆ ಓಟು ಹಾಕಲಾರೆ....ಅಷ್ಟೇ!

  • 679 views