Skip to main content

ಮುಂಬೈ ಮಾರಣಹೋಮದ ಕಥೆ - ಮೇಜರ್ ಸಂದೀಪ್ ಹತ್ಯೆ..

ಇಂದ shamala
ಬರೆದಿದ್ದುJuly 9, 2009
8ಅನಿಸಿಕೆಗಳು

[img_assist|nid=4750|title=ಕಸಬ್ ಕೊಲೆಗಾರ|desc=|link=none|align=left|width=398|height=640]ಮುಂಬೈ ಮಾರಣಹೋಮದ ಕಥೆ - ಮೇಜರ್ ಸಂದೀಪ್ ಹತ್ಯೆ.......

ಮೂಲ ಕೃತಿ - ೨೬/೧೧ ಮುಂಬಯಿ ಅಟ್ಯಾಕ್ಡ್...

ಪತ್ರಕರ್ತೆ ಹರೀಂದರ್ ಬವೇಜಾ ಸಂಪಾದಿಸಿರುವ ಈ ಕೃತಿಯಲ್ಲಿ ಸಾರ್ವಜನಿಕ ಜೀವನದಲ್ಲಿ ತಮ್ಮದೇ ಸ್ಥಾನ ಹೊಂದಿರುವ ಹಾಗೂ ಹೆಚ್ಚಿನವರು ಮುಂಬಯಿಯ ನರಮೇಧಕ್ಕೆ ಪ್ರತ್ಯಕ್ಷ ಸಾಕ್ಷಿಗಳಾದವರೂ ಆದ ಅಶೀಶ್ ಖೇತಾನ್, ಬಚಿ ಕರ್ಕಾರಿಯಾ, ಕ್ರಿಸ್ ಖೇತಾನ್, ಜಾರ್ಜ್ ಕೋಷಿ, ಹರೀಂದರ್ ಬವೇಜಾ, ಹರ್ಷ್ ಜೋಶಿ, ಜೂಲಿಯೋ ರೆಬೆರೋ ಮತ್ತು ರಾಹುಲ್ ಶಿವಶಂಕರ್ ಬರೆದಿದ್ದಾರೆ. ಈ ಕೃತಿಯನ್ನು ಕನ್ನಡಕ್ಕೆ ಶ್ರೀ ರವಿ ಬೆಳಗೆರೆಯವರು ಅನುವಾದಿಸಿದ್ದಾರೆ.

ಮೊದಲ ಪುಟ ತಿರುಗಿಸಿದ ತಕ್ಷಣವೇ ಈ ನರಮೇಧದಲ್ಲಿ ನಮ್ಮನ್ನಗಲಿದವರನ್ನು ನೆನಪಿಸಿಕೊಂಡಿರುವುದು, ಓದಲು ಶುರು ಮಾಡುವ ಮೊದಲು ಶ್ರದ್ಧಾಂಜಲಿ ಅರ್ಪಿಸುವಂತೆ ನಮ್ಮನ್ನು ಪ್ರೇರೇಪಿಸುತ್ತದೆ. ನಮಗಾಗಿ ಜೀವತೆತ್ತ ಅಮೂಲ್ಯ ಜೀವಗಳನ್ನು ನೆನೆದು ಮನ ಭಾರವಾಗುತ್ತದೆ.

ಸಂಪಾದಕರು ತಮ್ಮ ಮಾತಿನಲ್ಲಿ ದಾಳಿಗೆ ಭಯೋತ್ಪಾದಕರು ಹೇಗೆ ಸುಮಾರು ಒಂದು ವರ್ಷ, ಪೂರ್ವ ಸಿದ್ಧತೆ ಮಾಡಿಕೊಂಡು, ವ್ಯವಸ್ಥಿತವಾಗಿ ಯೋಜನೆ ಹಾಕಿಕೊಂಡಿದ್ದರು ಮತ್ತು ಅದು ಯಾವುದೇ ಕಾರಣಕ್ಕೂ ವಿಫಲವಾಗದಂತೆ ಹೇಗೆ ಸಾಧಿಸಿದರೆಂದು ಹೇಳಿದ್ದಾರೆ. ತರಬೇತುಗೊಂಡ ೩೨ ಜನರಲ್ಲಿ ಕೇವಲ ೧೦ ಜನ ಮಾತ್ರ ಬಂದು ಮಹಾನಗರಿ ಮುಂಬಯಿಯಲ್ಲಿ ೬೦ ಘಂಟೆಗಳ, ನರಕ ಸೃಷ್ಟಿಸಿ, ಅಂತಹ ನರಮೇಧ ಮಾಡಬಹುದಾದರೆ, ಒಟ್ಟು ೩೨ ಜನರೂ ಬಂದಿದ್ದರೆ, ಇನ್ನೆಲ್ಲೆಲ್ಲಿ, ಏನೇನು ಅನಾಹುತಗಳಾಗುತ್ತಿದ್ದವೆಂದು ಭಯ ಹುಟ್ಟಿಸುತ್ತದೆ. "ಮಿಷನ್ ಮುಂಬಯಿ" ನಿಜ ಅರ್ಥದಲ್ಲಿ ನರಮೇಧವೇ.

ಬೇಹು ಪಡೆಗಳ ವೈಫಲ್ಯಗಳು, ಹಳೆಯ ಕಾಲದ ಶಸ್ತ್ರಗಳ ಕಾರ್ಯ ನಿರ್ವಹಣೆ, ಸಾವಿನಂಚಿಗೆ ಹೋಗಿ ಮರಳಿ ಬಂದ ಒತ್ತೆಯಾಳುಗಳ ಕಥೆ, ಧೀರ ಮರಣವನ್ನಪ್ಪಿದ ಪೋಲೀಸರ ಕುಟುಂಬದವರ ಜೊತೆಗಿನ ಮಾತು, ಪೋಲೀಸರು ಮಾಡಿದ ತನಿಖೆ, ಎಲ್ಲವನ್ನೂ ಎಳೆ ಎಳೆಯಾಗಿ ಬಿಚ್ಚಿ ನಮ್ಮ ಮುಂದಿಡುತ್ತದೆ, ಈ ಪುಸ್ತಕ.

ಮುಂದಿನ ಪುಟದಲ್ಲಿ ಈ ಪುಸ್ತಕ ಕನ್ನಡಕ್ಕೆ ಹೇಗೆ ಬಂತೆಂಬುದನ್ನು "ಕನ್ನಡಕ್ಕೆ ತಂದ ಕಥೆ"ಯಲ್ಲಿ ಲೇಖಕರು ವಿವರಿಸುತ್ತಾರೆ. ಜೊತೆಗೆ ನಮ್ಮ ದೇಶದ ಅತ್ಯಂತ ಧೀರ ಪಡೆಯಾದ ಎನ್ ಎಸ್ ಜಿ ಯ ಯಶಸ್ವೀ ಕಾರ್ಯ ವಿರ್ವಹಣೆ ಬಗ್ಗೆ ಕೂಡ ಹೇಳುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಈ ನರಮೇಧದಲ್ಲಿ ನಾವು ಕಳೆದುಕೊಂಡಿದ್ದು ನಮ್ಮ ಕನ್ನಡದ ಹೆಮ್ಮೆಯ ಕುವರ ಧೀರ, ತಂದೆ ತಾಯಿಯ ಒಬ್ಬನೇ ಮಗ, ಮುದ್ದಾದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ರನ್ನು. ಅವರ ತಂದೆಯವರು ಹೇಳಿದ "ವಜ್ರದಂತಹ ನನ್ನ ಮಗನನ್ನು ಪಾಕಿಸ್ತಾನದ ಒಬ್ಬ ಯಕಶ್ಚಿತ್ ಕಳ್ಳ ಕೊಂದುಬಿಟ್ಟ" ಎಂಬ ಮಾತು ಓದುವಾಗ, ನಮ್ಮ ಕಣ್ಣು ನಮಗರಿವಿಲ್ಲದೆಯೇ ಅಶ್ರು ತರ್ಪಣ ಮಾಡಿರುತ್ತದೆ.

ಇಷ್ಟೆಲ್ಲಾ ಓದಿ ಒದ್ದೆಯಾದ ಮನದಿಂದಲೂ, ಆತುರದಿಂದಲೂ, ನರಮೇಧದ ಕಥೆ ಓದಲು ಶುರು ಮಾಡಿದರೆ, ಮನಸ್ಸು ಕುದ್ದು ಕುದ್ದು ಇಂಗುತ್ತದೆ. ಪ್ರತಿಯೊಂದು ವಿವರಣೆ, ನಿರೂಪಣೆ ನಮ್ಮನ್ನು ಅಕ್ಷರಶ: ಮುಂಬಯಿ ಮಿಷನ್ ನರಮೇಧ ನಡೆದ ಸ್ಥಳದಲ್ಲಿ ಸ್ಥಾಪಿಸಿಬಿಡುತ್ತದೆ. ಇಡೀ ಪುಸ್ತಕದ ವಿವರಣೆ ಓದಿ ಮುಗಿಸುವವರೆಗೂ, ಮುಗಿದ ಮೇಲೂ ಕಂಬನಿಯ ಸೆಲೆ ಬತ್ತುವುದಿಲ್ಲ.

ನಮ್ಮನ್ನಗಲಿದ ಪೋಲೀಸ್ ಕುಟುಂಬದವರ ಮಾತುಗಳನ್ನು ಓದುವಾಗ ನಮ್ಮೆದೆ ಹೆಮ್ಮೆಯಿಂದ, ಗೌರವದಿಂದ ಬೀಗದೇ ಇರುವುದಿಲ್ಲ.

ಪುಸ್ತಕ ಓದಿ ಮುಗಿಸಿ ಮುಚ್ಚಿಟ್ಟ ಮೇಲೂ ನಮ್ಮನ್ನು, ನಮ್ಮ ದೇಶದ ವ್ಯವಸ್ಥೆ, ಪದೇ ಪದೇ ದಾಳಿಗೆ ತುತ್ತಾಗುವ ನಮ್ಮ ಮುಗ್ಧ ಜನರು ರಾತ್ರಿ ಹಗಲೂ ಕಾಡುತ್ತಲೇ ಇರುತ್ತಾರೆ. ಇದೊಂದು ಕಥೆಯಲ್ಲ, ನೈಜ ಘಟನೆ ಎಂಬ ಸತ್ಯ, ಜೀರ್ಣಿಸಿಕೊಳ್ಳಲಾಗದೆ ಒದ್ದಾಡುವಂತೆ ಮಾಡುತ್ತದೆ.

ಪುಸ್ತಕ ಅನುವಾದವಾದರೂ, ನಿರೂಪಣಾ ಶೈಲಿ ರವಿಯವರ ಸ್ವಂತ ಶೈಲಿಯಾಗಿದ್ದು, ಅವರ ಎಂದಿನ ಎಲ್ಲಾ ಬರಹಗಳಂತೇ ಮನಸ್ಸನ್ನು ತಟ್ಟಿ ಎಬ್ಬಿಸುತ್ತದೆ. ವಿಫಲ ವ್ಯವಸ್ಥೆಯ ಬಗ್ಗೆ ಸಾವಿರಾರು ಪ್ರಶ್ನೆ ಕೇಳಲು ಮನ ತುಡಿಯುತ್ತದೆ. ಪ್ರತಿಯೊಂದು ವಿವರನ್ನೂ ಅಚ್ಚುಕಟ್ಟಾಗಿ ಜೋಡಿಸಿರುವುದರಿಂದ, ಈ ಪುಸ್ತಕವನ್ನು ಎಲ್ಲರೂ ಓದಲೇಬೇಕಾದ ಪುಸ್ತಕವನ್ನಾಗಿ ಮಾಡಿದೆ.

ಕೊನೆಯದಾಗಿ, ಇಷ್ಟೆಲ್ಲಾ ಹೇಳಿದ ನಂತರ ನನ್ನೊಳಗುಳಿದ ಒಂದು ಅಸಮಧಾನವೆಂದರೆ, ಪುಸ್ತಕದ ರಕ್ಷಾ ಕವಚ. ಆ ಯಕಶ್ಚಿತ್ ಉಗ್ರ ಅಜ್ಮಲ್ ಕಸಬ್ ನ ಚಿತ್ರದ ಬದಲಾಗಿ, ನಮ್ಮ ಹೆಮ್ಮೆಯ ಕನ್ನಡಿಗ ಮೇಜರ್ ಸಂದೀಪ್ ರ ಚಿತ್ರ ಹಾಕಬಹುದಾಗಿತ್ತೆಂದು.

ಲೇಖಕರು

shamala

ನಾನೊಬ್ಬ ಕನ್ನಡತಿ, ಭಾಷೆಯ ಬಗ್ಗೆ ಅತಿಯಾದ ಅಭಿಮಾನ ಉಳ್ಳವಳು. ನನ್ನ ಪರಿಚಯಕ್ಕೆ ಇಷ್ಟೇ ಸಾಕು.
http://antharangadamaathugalu.blogspot.com/

ಅನಿಸಿಕೆಗಳು

ಕಾವ್ಯ(ಅಭಿಮಾನಿ) (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 07/13/2009 - 13:51

ನಿಮ್ಮ ಬತ್ತದ ಕಂಬನಿಯ ಸೆಲೆಯ ಬಗ್ಗೆ ಕೇಳಿ ನನ್ನ ಕಣ್ಣುಗಳಲ್ಲೂ ನೀರು ಧುಮುಕಿದವು. ಕಡೆಗೆ ಹೇಗೋ ತಡೆದುಕೊಂಡೆ. ನಿಮಗೆ ಶ್ರೀ ರವಿ ಬೆಳಗೆರೆ ಪುಸ್ತಕ ಓದಿ
ತಡೆಯದಾರದಷ್ಟು ಅಳು ಬಂದರೆ ಶ್ರೀ ರವಿ ಬೆಳಗೆರೆಗೊಂದು ಫೋನು ಮಾಡಿದರೆ ಆತ ಅಲ್ಲಿಂದಲೇ ಆ ಅಳುವಿಗೆ ಮದ್ದು ಕಳಿಸುತ್ತಾನೆ. ಎಷ್ಟೆಶ್ಟು ಯುವ ಲೇಖಕಿಯರಿಗೆ ಹೀಗೆ ಜೀವನವಿಡೀ ಅಳದ ಹಾಗೆ ಮಾಡಿದ್ದಾನೆ ಗೊತ್ತೋ? ಹಾಸ್ಯರತ್ನ ಉಬ್ಬಲ್ಲು ನರಸಿಂಹರಾಜುವಿನ ತರ.

"ಇಷ್ಟೆಲ್ಲಾ ಓದಿ ಒದ್ದೆಯಾದ ಮನದಿಂದಲೂ, ಆತುರದಿಂದಲೂ, ನರಮೇಧದ ಕಥೆ ಓದಲು ಶುರು ಮಾಡಿದರೆ, ಮನಸ್ಸು ಕುದ್ದು ಕುದ್ದು ಇಂಗುತ್ತದೆ."

ಮನಸನ್ನು ಕುದಿಸಲು ಬೆಂಕಿ ಯಾವದು? ಶ್ರೀ ರವಿ ಬೆಳಗೆರೆ ಪುಸ್ತಕವೇ?

"ಪುಸ್ತಕ ಅನುವಾದವಾದರೂ, ನಿರೂಪಣಾ ಶೈಲಿ ರವಿಯವರ ಸ್ವಂತ ಶೈಲಿಯಾಗಿದ್ದು, ಅವರ ಎಂದಿನ ಎಲ್ಲಾ ಬರಹಗಳಂತೇ ಮನಸ್ಸನ್ನು ತಟ್ಟಿ ಎಬ್ಬಿಸುತ್ತದೆ. "

ಮಲಗಿರುವ ಮನಸ್ಸುಗಳನ್ನು ಹೀಗೆ ತಟ್ಟಿ ಎಬ್ಬಿಸಲು ಶ್ರೀ ರವಿಯ ಮುಂದೆ ಯಾರೂ ಇಲ್ಲ ಅಲ್ಲವಾ? ಮತ್ತೆ ನೀವು ಹೇಳಿದಂತೆ ಅನುವಾದ ಮಾಡುವಾಗಲಂತೂ ಅವನ ನಿರೂಪಣಾ ಶೈಲಿ ಎದ್ದೆದ್ದು ನಿಂತಿರುತ್ತದೆ. ಅನುಭವಿಸುವವರು ಬೇಕಷ್ಟೇ.

shamala ಮಂಗಳ, 07/14/2009 - 14:33

ನಿಮ್ಮ ಪ್ರತಿಕ್ರಿಯೆ ಕೀಳು ಅಭಿರುಚಿಯನ್ನು ಬಿಂಬಿಸುವಂತಿದೆ, ಆದ್ದರಿಂದ ಉತ್ತರಿಸುವ ಅವಶ್ಯಕತೆಯಿದೆಯೆಂದೆನಿಸಲಿಲ್ಲ.

ಶ್ಯಾಮಲ

ಕಾವ್ಯ(ಅಭಿಮಾನಿ) (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 07/14/2009 - 15:19

ಹೌದು. ಉತ್ತರಿಸುವ ಅಗತ್ಯವಿಲ್ಲ. ಆದರೆ ಮತ್ಯಾಕೆ ಮುಟ್ಟಲು ಹೋದಿರಿ? ಎರಡು ಪ್ರತಿಕ್ರಿಯೆ ಜಾಸ್ತಿಯಾದರೆ ನಾಲ್ಕು ಜನ ಜಾಸ್ತಿ ಓದಿಯಾರು ಅಂತಲೇ?

ಬೇರೆಯವರ ಕೀಳು ಅಭಿರುಚಿ ರವಿ ಕಾಣದ್ದನ್ನು ಕವಿ ಕಂಡ ಅಂತ ಹುಡುಕ ಹೊರಡಬೇಡಿ. ಅಲ್ಲದೇ ಕನ್ನಡ ಪತ್ರಿಕಾ ರಂಗದ ಅತ್ಯಂತ ಕೀಳು ಅಭಿರುಚಿಯ ಮನುಷ್ಯನ ಎರವಲು ಪುಸ್ತಕಗಳ ವಕ್ತಾರರಾಗುವ ಮೊದಲು ಯೋಚಿಸಿ.

ಇನ್ನು ಪ್ರತಿಕ್ರಿಯೆ ಕೀಳು ಅಭಿರುಚಿ ಅಂತ ಅನ್ನಿಸಿದರೆ ಮೇಲಾಧಿಕಾರಿಗೆ ದೂರು ಕೊಡಿ.

ಚಂದ್ರಗೌಡ ಕುಲಕರ್ಣಿ ಮಂಗಳ, 07/14/2009 - 11:43

ನಿಮ್ಮ ಲೇಖನ ರವಿ ಬೆಳಗೆರೆ-ಸಂದೀಪ ಹತ್ಯೆ ಓದಲು ಪ್ರೇರೆಪಿಸುತ್ತದೆ.

shamala ಮಂಗಳ, 07/14/2009 - 14:29

ಧನ್ಯವಾದಗಳು.... ಖಂಡಿತಾ ಎಲ್ಲರೂ ಓದಲೇ ಬೇಕಾದ ಪುಸ್ತಕ...

ಶ್ಯಾಮಲ

ಕಿಟ್ಟಿ (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 07/14/2009 - 16:11

ರವಿಬೆಳಗರೆ ಬಗ್ಗೆ ಅಲ್ಲದಿದ್ದರೂ, " ಮೇಜರ್ ಸಂದೀಪ್ ಹತ್ಯೆ" ಕನ್ನಡದಲ್ಲಿ ಒಂದು ಒಳ್ಳೆ ಪ್ರಯತ್ನ ಎನ್ನಬಹುದು... ಒಟ್ಟಿನಲ್ಲಿ ಮೇಜರ ಸಂದೀಪ ಮತ್ತು ಅಂದು ಹೋರಾಡಿದ ಸಮಸ್ತ Black Cats ಗೆ ನನ್ನ ನಮನ.. ಜಯ ಹಿಂದ್.. :)

ರಾಮ ಅಥವಾ ಧೂಮ ಅಂತಿರಲಿ (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 07/14/2009 - 21:01

ರವಿ ಬೆಳಗೆರೆ ತನ್ನ ಪ್ರತಿಭಾವಂತ ಸಿಬಂದಿಗಳಾದ ಅಜ್ಜೀಪುರ, ಶರತ್ ಕಲ್ಕೋಡು ಮುಂತಾದವರಲ್ಲಿ ಪುಸ್ತಕಗಳನ್ನು ಬರೆಸಿ ತನ್ನ ಹೆಸರು ಹಾಕಿಸಿಕೊಂಡು ಪುಸ್ತಕ ಮಾರಾಟ ಮಾಡಿ ಜೇಬು ತುಂಬಿಸುವ ಬಗ್ಗೆ ತೀರಾ ಸಂಕಟವಿದೆ. ಮಾಡುವುದು ಅನುವಾದವಾದರೂ ಅದನ್ನು ಮುಚ್ಚಿಡುವುದು ಮತ್ತೊಂದು ವಂಚನೆ. ಇದುವರೆಗೆ ಆತ ಮಾಡಿಕೊಂಡು ಬಂದಿದ್ದು ಅದನ್ನೇ. ಬೆಳಗೆರೆ ಒಬ್ಬ ಪತ್ರಕರ್ತನಾಗಿ ದುರಾತ್ಮನೇ ಆದರೂ ಸಾವಿರಾರು ಜನರನ್ನು ಕನ್ನಡ ಪುಸ್ತಕಗಳತ್ತ ತನ್ನ ಶೈಲಿಯಿಂದ ಸೆಳೆದವನು ಎಂಬುದರಲ್ಲಿ ಎರಡು ಮಾತಿಲ್ಲ. ಹಾಗಾಗಿ ಈ ಪುಸ್ತಕವೂ ಕನ್ನಡದ ಮಟ್ಟಿಗೆ ಮತ್ತೊಂದು ಸ್ವತ್ತು ಗ್ಯಾರಂಟಿ. ಒಬ್ಬ ಬರವಣಿಗೆಗಾರನಾಗಿ ಅವನನ್ನು ಕನ್ನಡಿಗರು ಒಕ್ಕೊರಲಿನಿಂದ ಒಪ್ಪಿಕೊಳ್ಳಬಹುದು.

hemanth v (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 07/16/2009 - 19:49

ಈ ಪ್ರಪಂಚದಲ್ಲಿ ಯಾರು ಪ್ರಾಮಾಣಿಕರೋ ಯಾರು ಅಪ್ರಾಮಾಣಿಕರೋ ಒಂದು ಗೊತ್ತಾಗೊಲ್ಲ ..ಆದರು ಒಂದು ಒಳ್ಳೆಯ ಪ್ರಯತ್ನ ಅನ್ನಬಹುದು ರವಿ ಬೆಳಗೇರಿ ಯವರು ನಾವು ಮಾಡದ ಕೆಲಸವನ್ನು ಅವರು ಮಾಡುತ್ತಾರಲ್ಲ..ಬರಿ ಮಾತಲ್ಲಿ ಹೇಳಿದರೆ ಆಗಲ್ಲ ..ಮೊನ್ನೆ ಯಾವನೋ ಡಬ್ಬ ಕಾಂಗ್ರೆಸ್ ಸಂಸದ ನೊಬ್ಬ ಕಾರ್ಗಿಲ್ ಯುದ್ದ ಯಾವಾಗ ನಡೆದದ್ದು ಎಂದು ಮಾಧ್ಯಮದವರ ಮುಂದೆ ಹೇಳಿದ್ದಾನೆ ಮತ್ತು ಅದು ಬಿಜೆಪಿ ಯವರಿಗೆ ಮಾತ್ರ ವಿಜಯ ದಿನಾಚರಣೆ ಅಂತಲೂ ಹೇಳಿದ್ದಾನೆ.
ಇಂತ ದೇಶ ದ್ರೋಹಿಗಳು ನಮ್ಮಲ್ಲಿ ತುಂಬಿಕೊಂಡಿರುವಾಗ ಆ ಮತಾಂಧ ದೇಶದ ಕುನ್ನಿಗಳು ಬಂದು ಹಾರಾಡುವುದು ದೊಡ್ಡದೇನಲ್ಲ ..ಆದರು ಪ್ರಾಣತ್ಯಾಗ ಮಾಡಿದವರ ಶ್ರದ್ದಾಂಜಲಿ ನಿಮಿತ್ಯ ಒಂದು ಉತ್ತಮ ಪುಸ್ತಕ ತಂದಿರಬಹುದೆಂದು ನನ್ನ ಅನಿಸಿಕೆ, ನನ್ನ ಅಭಿಪ್ರಾಯ ಯಾವುದೇ ಪಕ್ಷ ಅಥವಾ ವ್ಯಕ್ತಿಗಳಿಗೆ ಒಲೈಸುವಂತಹುದು ಅಲ್ಲ ಕೇವಲ ನಾನೊಬ್ಬ ದೇಶ ಪ್ರೇಮಿ ...
-ಹೇಮಂತ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.