ಗಂಗಾವತರಣ
ನಾನು ಈ ಮೊದಲು "ಮಳೆ ಬಂದಾಗ ನಿನ್ನ ನೆನಪು ಬರುವುದ್ಯಾಕೆ" ಎಂಬ ಪಿಸುಮಾತನ್ನು ಬರೆದಿದ್ದಾಗ ಅದರಲ್ಲಿ ದ ರಾ ಬೇಂದ್ರೆಯವರ ಗಂಗಾವತರಣ ಪದ್ಯದ ಕೆಲವು ಸಾಲುಗಳನ್ನು ಉದ್ದರಿಸಿದ್ದೆ .ಆಗ ಅದಕ್ಕೆ ಪ್ರತಿಕ್ರಿಯಿಸಿದ ಪೂನಾವಾಲ ಎಂಬ ಸಹೃದಯ ಓದುಗರೊಬ್ಬರು ಸಾದ್ಯವಾದರೆ ಪೂರ್ತಿ ಕವಿತೆಯನ್ನು ಪ್ರಕಟಿಸಿ, ಅದನ್ನು ಓದಿ ಪುಳಕಗೊಳ್ಳುವ ಆಸೆ ಎಂದು ಹೇಳಿದ್ದರು. ನನ್ನ ಖಾಸಗಿ ಲೈಬ್ರರಿ ಕಸದ ತೊಟ್ಟಿಯಂತಾಗಿರುವುದರಿಂದ ಆಗ ಬೇಂದ್ರೆಯವರ ಕವಿತೆ ಸಿಕ್ಕಿರಲಿಲ್ಲ ಜೊತೆಗೆ ಬಿಡುವೂ ಇರಲಿಲ್ಲ. ಈಗ ಎರಡೂ ಇರುವುದರಿಂದ ಇಲ್ಲಿ ಅದನ್ನು ಪ್ರಕಟಿಸುತ್ತಿದ್ದೇನೆ.
ಮಳೆಗಾಲ ಈಗತಾನೇ ಪ್ರಾರಂಭವಾಗಿದೆ. ಇಂತಹ ಸಮಯದಲ್ಲಿ ಇದನ್ನು ಓದುವುದೇ ಒಂದು ಆಹ್ಲಾದಕರ ಅನುಭವ. ಓದಿ ಆನಂದಿಸುವ ಭಾಗ್ಯ ನಿಮ್ಮದಾಗಲಿ
ನಿಮ್ಮವ
ಬಾಲ ಚಂದ್ರ
ಇಳಿದು ಬಾ ತಾಯಿ ಇಳಿದು ಬಾ - ದ. ರಾ. ಬೇಂದ್ರೆ
ಇಳಿದು ಬಾ ತಾಯಿ ಇಳಿದು ಬಾ
ಹರನ ಜಡೆಯಿಂದ ಹರಿಯ ಅಡಿಯಿಂದ ಋಶಿಯ ತೊಡೆಯಿಂದ ನುಸುಳಿ ಬಾ
ದೇವದೇವರನು ತಣಿಸಿ ಬಾ | ದಿಗ್ದಿಗಂತದಲಿ ಹನಿಸಿ ಬಾ | ಚರಾಚರಗಳಿಗೆ ಉಣಿಸಿ ಬಾ
ಇಳಿದು ಬಾ ತಾಯಿ ಇಳಿದು ಬಾ
ನಿನಗೆ ಪೊಡಮಡುವೆ ನಿನ್ನನುಡುಕೊಡುವೆ ಏಕೆ ಎಡೆತಡೆವೆ ಸುರಿದು ಬಾ
ಸ್ವರ್ಗ ತೊರೆದು ಬಾ | ಬಯಲ ಜರೆದು ಬಾ | ನೆಲದಿ ಹರಿದು ಬಾ
ಬಾರೆ ಬಾ ತಾಯಿ ಇಳಿದು ಬಾ | ಇಳಿದು ಬಾ ತಾಯಿ ಇಳಿದು ಬಾ
ನನ್ನ ತಲೆಯೊಳಗೆ ನನ್ನ ಬೆಂಬಳಿಗೆ ನನ್ನ ಒಳಕೆಳಗೆ ನುಗ್ಗಿ ಬಾ
ಕಣ್ಣ ಕಣ್ತೊಳಿಸಿ ಉಸಿರ ಎಳೆ ಎಳಸಿ ನುಡಿಯ ಸೊಸಿ ಮೊಳೆಸಿ ಹಿಗ್ಗಿ ಬಾ
ಎದೆಯ ನೆಲೆಯಲ್ಲಿ ನಿಲಿಸಿ ಬಾ | ಜೀವ ಜಲದಲ್ಲಿ ಚಲಿಸಿ ಬಾ | ಮೂಲ ಹೊಲದಲ್ಲಿ ನೆಲೆಸಿ ಬಾ
ಕಮ್ಚು ಮಿಂಚಾಗಿ ತೆರಳಿ ಬಾ | ನೀರು ನೀರಾಗಿ ಉರುಳಿ ಬಾ | ಮಾತೆ ಹೊಡಮರಳಿ ಬಾ
ಇಳಿದು ಬಾ ತಾಯಿ ಇಳಿದು ಬಾ
ದಯೆಯಿರದ ದೀನ ಹರೆಯಳಿದ ಹೀನ ನೀರಿರದ ಮೀನ ಕರೆಕರೆವ ಬಾ
ಕರು ಕಂಡ ಕರುಳೆ ಮನ ಉಂಡ ಮರುಳೆ ಉದ್ದಂಡ ಅರುಳೆ ಸುಳಿ ಸುಳಿದು ಬಾ
ಶಿವ ಶುಭ್ರ ಕರುಣೆ ಅತಿ ಕಿಂಚದರುಣೆ ವಾತ್ಸಲ್ಯ ವರಣೆ ಇಳಿ ಇಳಿದು ಬಾ
ಇಳಿದು ಬಾ ತಾಯಿ ಇಳಿದು ಬಾ
ಕೊಳೆಯ ತೊಳೆವವರು ಇಲ್ಲ ಬಾ | ಬೇರೆ ಶಕ್ತಿಗಳು ಹೊಲ್ಲ ಬಾ | ಹೇಗೆ ಮಾಡಿದರು ಅಲ್ಲ ಬಾ
ನಾಡಿ ನಾಡಿಯನು ತುತ್ತ ಬಾ | ನಮ್ಮ ನಾಡನ್ನೆ ಸುತ್ತ ಬಾ | ಸತ್ತ ಜನರನ್ನು ಎತ್ತ ಬಾ
ಇಳಿದು ಬಾ ತಾಯಿ ಇಳಿದು ಬಾ
ಸುರ ಸ್ವಪ್ನವಿದ್ದ ಪ್ರತಿಬಿಂಬ ಬಿದ್ದ ಉದ್ಬುಧ ಶುದ್ದ ನೀರೆ
ಎಚ್ಚೆತ್ತು ಎದ್ದ ಆಕಾಶದುದ್ದ ದರೆಗಿಳಿಯಲಿದ್ದ ದೀರೆ
ಸಿರಿವಾರಿಜಾತ ವರಪಾರಿಜಾತ ತಾರಾ ಕುಸುಮದಿಂದೆ
ವೃಂದಾರ ವಂದ್ಯೆ ಮಂದಾರ ಗಂಧೆ ನೀನೇ ತಾಯಿ ತಂದೆ
ರಸಪೂರಜನ್ಯೆ ನೀನಲ್ಲ ಅನ್ಯೆ ಸಚ್ಚಿದಾನಂದ ಕನ್ಯೆ
ಬಂದಾರೆ ಬಾರೆ ಒಂದಾರೆ ಸಾರೆ ಕಂಡಾರೆ ತಡೆವರೇನೆ
ಅವತಾರವೆಂದೆ ಎಂದಾರೆ ತಾಯೆ ಈ ಅಧಹ್ಪಾತವನ್ನೆ
ಹರಕೆ ಸಂದಂತೆ ಮಮತೆ ಮಿಂದಂತೆ ತುಂಬಿ ಬಂದಂತೆ
ದಮ್ ದಮ್ ಎಂದಂತೆ ದುಡುಕಿ ಬಾ | ನಿನ್ನ ಕಂದನ್ನ ಹುಡುಕಿ ಬಾ | ಹುಡುಕಿ ಬಾ ತಾಯೆ ದುಡುಕಿ ಬಾ
ಹರನ ಹೊಸತಾಗಿ ಹೊಳೆದು ಬಾ | ಬಾಳು ಬೆಳಕಾಗಿ ಬೆಳೆದು ಬಾ | ಕೈ ತೊಳೆದು ಬಾ ಮೈ ತೊಳೆದು ಬಾ
ಇಳಿದು ಬಾ ತಾಯಿ ಇಳಿದು ಬಾ | ಇಳೆಗಿಳಿದು ಬಾ ತಾಯಿ ಇಳಿದು ಬಾ
ಶಂಭು ಶಿವಹರನ ಚಿತ್ತೆ ಬಾ | ದತ್ತ ನರಹರಿಯ ಮುತ್ತೆ ಬಾ | ಅಂಬಿಕಾತನಯನತ್ತೆ ಬಾ
ಇಳಿದು ಬಾ ತಾಯಿ ಇಳಿದು ಬಾ
ಸಾಲುಗಳು
- Add new comment
- 1011 views
ಅನಿಸಿಕೆಗಳು
ಹಾಯ್ ಬಾಲ ಚಂದ್ರ ಅವರೇ, ಜೂನ್
ಹಾಯ್ ಬಾಲ ಚಂದ್ರ ಅವರೇ,
ಜೂನ್ ತಿಂಗಳು ಮುಗಿದರೂ ಮಳೆಯ ಪತ್ತೆಯೇ ಇಲ್ಲ. ರೈತರ ಹೊಟ್ಟೆಯ ಮೇಲೆ ಹೊಡೆತ ಬೀಳದಿರಲಿ ಎನ್ನುವ ಕಾರಣಕ್ಕಾದರೂ ಈ ಹಾಡನ್ನು ಮಳೆ ಬೇಗ ಬರಲಿ ಎಂದು ಆಶಿಸುತ್ತಾ ಈ ಪದ್ಯ ಓದಬೇಕಿದೆ.
ಪಿ.ಬಿ. ಶ್ರೀನಿವಾಸ್ ಅವರ ದ್ವನಿಯಲ್ಲಿ ಈ ಹಾಡನ್ನು ಯಾವುದೋ ಹಳೆಯ ಸಿನಿಮಾದಲ್ಲಿ ನೋಡಿದ ನೆನಪು. ನಿಜಕ್ಕೂ ಒಂದು ಉತ್ತಮ ಪದ್ಯ. :) ನನಗೆ ಇಷ್ಟವಾದ ದ. ರಾ. ಬೇಂದ್ರೆಯವರ ಅನೇಕ ಕವಿತೆಗಳಲ್ಲಿ ಇದೂ ಒಂದು.
ರಾಜೇಶ್ ರವರೇ, ಈ ಹಾಡು 1970
ರಾಜೇಶ್ ರವರೇ,
ಈ ಹಾಡು 1970 ರಲ್ಲಿ ಬಿಡುಗಡೆಯಾದ "ಅರಶಿನ ಕುಂಕುಮ" ಚಿತ್ರದ ಹಾಡು. ಸಂಗೀತಃ ವಿಜಯಭಾಸ್ಕರ್ ಅವರದ್ದು.
ಬಾಲು ರವರೆ,
ಈ ಹಾಡು ಕೇಳಿದಾಗಲೆಲ್ಲಾ ನಾ ಕಲ್ಪನಲೋಕಕ್ಕೆ ಹೋಗಿಬಿಡುತ್ತೇನೆ. ಕವಿಯ ಕಲ್ಪನೆ ಅಂತಹದ್ದು ಮತ್ತು ಅದನ್ನು ಹಾಡಿದ ಪಿ.ಬಿ. ಎಸ ಅವರ ಕಂಠ ಅದ್ಭುತವಾಗಿ ಮಿಳತಗೊಂಡ ಹಾಡದು... ಹಾಡು ಬರೆದಿದ್ದಕ್ಕೆ ಧನ್ಯವಾದಗಳು :)
ಹಾಯ್ ರಾಜೇಶ್ &
ಹಾಯ್ ರಾಜೇಶ್ & ವಿನಯ್,
ಇಬ್ಬರಿಗೂ ಧನ್ಯವಾದಗಳು,
ರಾಜೇಶ ಅವರೇ ಜೂನ್ ತಿಂಗಳು ಮುಗಿದರೂ ಮಳೆಯ ಪತ್ತೆಯೇ ಇಲ್ಲ ಎಂದು ಬರೆದಿದ್ದೀರಿ. ಇದನ್ನು ನೆನೆಸಿಕೊಂಡರೆ ಸಂಕಟವಾಗುತ್ತದೆ. ಈ ಸಮಯದಲ್ಲಿ ಹಾಡಲು ಈ ಕವಿತೆಗಿಂತ ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೇ ನಾಲ್ಕು ಹನಿಯ ಚೆಲ್ಲಿ, ದಿನ ದಿನವು ಕಾದು ಬಾಯಾರಿ ಬೆಂದು ಬೆಂಗದಿರಿ ತಾಪದಲ್ಲಿ
ಎಂಬ ಕವಿ ವಾಣಿ ಹೆಚ್ಚು ಸೂಕ್ತವಾಗಿದೆ ಎನ್ನಿಸುತ್ತಿದೆ
ಸಸ್ನೇಹ
ಬಾಲ ಚಂದ್ರ
ಬಾಲಚಂದ್ರ ರವರೇ... ನನ್ನ
ಬಾಲಚಂದ್ರ ರವರೇ...
ನನ್ನ ಬಿನ್ನಹವನ್ನು ಮನ್ನಿಸಿ ಗಂಗಾವತರಣದ ಪೂರ್ಣ ಕವಿತೆಯನ್ನು ಪ್ರಕಟಿಸಿ ನನ್ನಂತಹ ಅನೇಕ ಓದುಗರ ಹೃದಯದಲ್ಲಿ ಪುಳಕಯುಕ್ತ ಗಂಗಾವತರಣವನ್ನು ಮಾಡಿಸಿದ್ದೀರಿ. ಅದಕ್ಕಾಗಿ ನಾನು ನಿಮ ಅತ್ಯಂತ ಆಭಾರಿಯಾಗಿದ್ದೇನೆ. ಧನ್ಯವಾದಗಳು.