Skip to main content

ಪ್ರೀತಿಯ ಮೂಲ ಹೆಸರೇ ಮೋಹ!

ಬರೆದಿದ್ದುMarch 14, 2009
2ಅನಿಸಿಕೆಗಳು

ಮುಗ್ದತೆಯ ಮೊಗದಲ್ಲಿ, ಮೊಗೆ-ಮೊಗೆದು ಸೌಂದರ್ಯದ ಖನಿಯ; ಕುಡಿದು ಅವಳಂತೆ ಕಂಗೊಳಿಸುವಾಸೆ!. ತಿದ್ದಿ-ತೀಡಿ ಮಾಡಿದ ಹುಬ್ಬುಗಳ ನಡುವಣ ಸಿಂಧೂರ, ಹೊಳೆವ ನಕ್ಷತ್ರದ ಎರಡು ಕಂಗಳ ಮಧ್ಯ ನನ್ನನ್ನೇ... ಹುಡುಕುತ್ತಿರುವಂತೆ ಕಪ್ಪರಳು!, ಕವಚವಾಗಿ ಕಂಗಳ ಸಂರಕ್ಷಣೆಯಾಗಿರುವ ರೆಪ್ಪೆಗಳು ಕ್ಷಣ-ಕ್ಷಣಕ್ಕೂ ಹಕ್ಕಿಗಳ ಹಾಗೆ ಬಡಿಯುತ್ತಿದ್ದರೆ, ಆ ಪ್ರತಿ ಬಡಿತಕ್ಕೂ.. ನನ್ನೆದೆಯ ಸದ್ದು-ತಾಳ ಹಾಕಿದಂತಿರುತ್ತಿತ್ತು. ನೀಳನೆಯ ಸಂಪಿಗೆಯ ಮೂಗು, ಮೂಗಿನ ಎಡೊತ್ತಿಗೆ ಸಿಗಿಸಿದ ಮೂಗುತ್ತಿಯು ಇವಳ ಸೌಂದರ್ಯಕ್ಕೊಂದು ಮೆರುಗು, ತುಟಿಯರಳಿಸಿ ನಗುವಾಗ, ನೆರಿಗೆಯೇ ಇಲ್ಲದ ಆ ತುಟಿಗಳ ಮೇಲೆ ನಗುವಿನ ನರ್ತನ!, ಹಲ್ಲುಗಳೆಲ್ಲ ಜೋಡಿಸಿಟ್ಟಂತೆ, ಒಂದಕ್ಕೊಂದು ಸಮಾನತೆಯಲ್ಲಿರುವಂತೆ ತುಟಿಬಿಚ್ಚಿ ಮಾತುಗಳಾಡುವಾಗ ಅವುಗಳ ಹೊಳಪಿನ ಲಗು-ಬಗೆ. ಮಾತಿನ ದನಿಯಲ್ಲಿರುವ ಮಾಧೂರ್ಯ, ಆ ಮಾಧೂರ್ಯದಲ್ಲಿರುವ ಮೃದುತ್ವತೆ, ಆ ಮೃದುತ್ವತೆಯಲ್ಲಿರುವ ಮಾತಿನ ತೂಕ, ಆ ಮಾತಿನ ತೂಕವನ್ನು ಯಾವ ತಕ್ಕಡಿಯಲ್ಲೂ ತೂಗಿ, ಅಳೆಯಲಾರದಷ್ಟು ಹಗುರ!.. ಕೆನ್ನೆ, ಹಣೆ, ಗಲ್ಲ-ಎಲ್ಲಾ ಬೆಣ್ಣೆಗಿಂತಲೂ ನುಣುಪಾಗಿ ಚಿನ್ನದಂತೆ ಹೊಳೆವ ಅವಳ ಮುಖ-ಭಾವ. ಎಳೆ-ಎಳೆಯಾಗಿ ರಾಶಿಯಾಗಿ ಹರಡಿರುವ ಅವಳ ಮುಡಿಯ ಕೇಶ-ರಾಶಿ. ಸದ್ದಿಲ್ಲದೇ ಎದೆಯ ನೋವ ಉಲ್ಬಣಿಸಿದ ಅವಳ ಸೌಂದರ್ಯದ ಅಂಗ ವೈಚಿತ್ರ್ಯದ ಹಾವಾ-ಭಾವಕ್ಕೆ ನಾ ಸಿಲುಕಿ, ನನಗಾಗಿರುವ ಒಲವ ಗಾಯಕ್ಕೆ ನನಗವಳೇ.. ಔಷದಿ.

ಸೌಂದರ್ಯವೆಲ್ಲ ಹೆಣ್ಣಲ್ಲೇ.. ಯಾಕೆ ಇಟ್ಟ ಆ ಭಗವಂತ? ಕೊನೆಗೊಮ್ಮೆ ಅನುಭವಿಸುವ ಹೊಣೆಯನ್ನು ಗಂಡಸರ ಮೇಲೆ ಇಟ್ಟನಂತೆ!.. ನಿಟ್ಟುಸಿರು ಬಿಟ್ಟು, ಆದರೂ... ಸಿಗುವವರೆಗೂ ಕಾದ ಕಬ್ಬಿಣದ ಸಲಾಕೆಯಂತೆ, ಮೋಹದ ಬೆಂಕಿಯಲ್ಲಿ ಬೆಂದು, ಬಸವಳಿದು, ಒಲುಮೆಯ ನೀರೊಳಗೆ ಅದ್ದಿದರೆ, ಆ ಮೋಹದ ಹೆಸರೇ.. ಪ್ರೀತಿ ಅನ್ನೊ ನಾಮಕರಣ ಮಾಡಿಕೊಂಡು ಕಾಡುತ್ತಿರುವ ಪಾತರಗಿತ್ತಿ..!!

ಮೋಹದ ಮೊದಲ ಹೆಸರೇ.. ಪ್ರೀತಿ!? ಈ ಪ್ರೀತೀನೆ ಎಲ್ಲವನ್ನು-ಎಲ್ಲರನ್ನು ಸೊಂಕುಗೊಳಿಸೋದು, ಕಂಗಳಿಂದ ನೋಡದ ಹೊರತು ಏನನ್ನೂ ಗುರುತಿಸಲಾಗದ ಬುದ್ದಿಗೆ, ಮನಸ್ಸಿಗೆ, ಚಿತ್ತಕ್ಕೆ, ಹಾಗು ಹೃದಯಕ್ಕೆ, ಹೇಗೆ ತಾನೆ ಪ್ರೀತಿಯೇ ಬೇರೆ, ಮೋಹವೇ ಬೇರೆಯೆಂದು ವಿಂಗಡಿಸಬಲ್ಲದು? ನೋಡಿದರಲ್ಲವೇ ಬುದ್ದಿ ಗುರುತಿಸುವುದು, ಮನಸ್ಸು ಬಯಸುವುದು, ಚಿತ್ತ ಚಂಚಲವಾಗುವುದು, ಹೃದಯ ಒಪ್ಪುವುದು, ಅಲ್ಲಿಗೆ ಮೋಹದ ನಿಜವಾದ ಬಣ್ಣ ಬಯಲಾಗಿ ಆಸೆಯೆಂಬ ಕಿಡಿ ಹೊತ್ತಿಕೊಳ್ಳುವುದು, ದನಿಯಿಂದ ಹೊರಬಂದು ನಾ ನಿನ್ನ ಪ್ರೀತಿಸುತ್ತಿರುವೆ ಎನ್ನುವುದು ಅಥವಾ ಬಯಕೆ ತೀರಿಸಿಕೊಳ್ಳುವುದು!!.

ಎಲ್ಲಾ ಬಯಕೆಗಳನ್ನುತೀರಿಸಿಕೊಳ್ಳಲು, ಎಲ್ಲಾ ರೀತಿಯಿಂದಲೂ ಪರಿಶುದ್ಧವಾಗಿ ತಯಾರಾಗಿರಬೇಕು, ಆಸೆ-ಅತಿಯಾಸೆ ಆಗಬಾರದು, ಪ್ರೀತಿ-ಕಾಮದ ಕೆಂಗಣ್ಣಿಗೆ ಗುರಿಯಾಗಬಾರದು, ಬಲವಂತವಾಗಿ ಕಿತ್ತುಕೊಂಡರೆ, ಅಲ್ಲಿ ಸುಖಕ್ಕಿಂತ ದುಃಖವೇ ಜಾಸ್ತಿಯಾಗಿ, ಅವನತಿಯ ಹಂತಕ್ಕೆ ನಮ್ಮನ್ನು ನಾವೇ.. ದೂಕಿಕೊಂಡಂತೆ.

ಪ್ರೀತಿ-ಪ್ರೇಮ ಅಂತ ಮೋಹದ ಬೆನ್ನತ್ತಿ ಹೊರಡುವ ಕೆಲವರು ಎಲ್ಲರಿಗಿಂತಲೂ ಹೆಚ್ಚಾಗಿ ನಮ್ಮನ್ನು ಪ್ರೀತಿಸುತ್ತಿರುವ ತಾಯಿಯೊಬ್ಬಳು ಇರುತ್ತಾಳೆ ಎನ್ನುವುದನ್ನು ಮರೆತು ಬಿಡುತ್ತಾರೆ. ಜೀವನದಲ್ಲಿ ಜಿಗುಪ್ಸೆಗೊಂಡು ಕೆಲವರು ಕಾಲದಲ್ಲಿ-ಕಾಲವಾಗಿಬಿಡುತ್ತಾರೆ. ಎಲ್ಲಾ ವ್ಯಾಮೋಹಗಳಿಂದ ದೂರ ಬಂದು, ಕೆಲವನ್ನು ಮಾತ್ರ ಆಯ್ದುಕೊಂಡು ಎಷ್ಟು ಬೇಕೊ ಅಷ್ಟು ಅನುಭವಿಸಿ ಇತಿ-ಮಿತಿಯ ಜೀವನ ನಿಜಕ್ಕೂ ಪಾವನ!

ಹೊಟ್ಟೆ ಹಸಿವಾದಾಗ ಅಮ್ಮಾ ಅನ್ನುವ ಕರುಳಿನ ಕೂಗಿಗೆ, ಅಮ್ಮನೊಬ್ಬಳೇ ಹಸಿವನ್ನು ನೀಗಿಸಬಲ್ಲಳು. ಜಗದ ನಿಯಮದಂತೆ ನಡೆದರೆ ನಮಗೆ ಒಳ್ಳೆಯದು. ವಿರುದ್ದವಾದರೆ ನಮಗೇ ಕೆಟ್ಟದು.

ಪ್ರೀತಿಗೆ ಜಯವಿರಲಿ-ಜಾಗರೂಕತೆ ನಮಗಿರಲಿ!

ಸಾರಾಂಶ: ಈ ಪ್ರೀತಿ ಮೋಹವೆಂಬುದು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆದರೆ ಪ್ರೀತಿ ಅನ್ನೊ ನಾಮಕರಣಮಾಡಿಕೊಂಡಿರುವ ಮೋಹಕ್ಕೆ ಹಲವಾರು ತರವಾಗಿ ವಿಂಗಡಿಸಬಹುದು ಉದಾ: ತಾಯಿ ಪ್ರೀತಿ, ಹೆಂಡತಿ ಪ್ರೀತಿ, ಸಂಬಂಧಗಳ ಪ್ರೀತಿ, ಸ್ನೇಹಗಳ ಪ್ರೀತಿ. ಆದರೆ ಅಲ್ಲೊಂದು ಸೆಳೆತವಿರುತ್ತದೆಯಲ್ಲ ಅದೇ ಮೋಹ!

ಲೇಖಕರು

ಯೋಗೇಶ್

ನಿನಗೇಳದ ಮಾತೊಂದು ಮನದ(ನ)ಲ್ಲೆ ಉಳಿದಿದೆ.

ಅನಿಸಿಕೆಗಳು

ಸರಿ ಕಣಪ್ಪ . ನಂಗೆ ಬರೆಯೊಕೆ ಆಗಿಲ್ಲ , ಆದ್ರೆ ನೀ ಬರ್ದು ಬಿಟ್ಟೆ.

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 03/17/2009 - 18:41

Cool maga.. appreciated.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.