Skip to main content

ಸೇವಕನ ಪರೀಕ್ಷೆ - ಒಂದು ಸನ್ನೀವೇಶ

ಬರೆದಿದ್ದುOctober 21, 2008
noಅನಿಸಿಕೆ

( ಕಲ್ಪಿಸಿಕೊಂಡು ಬರೆದ ಈ ಒಂದು ಸನ್ನಿವೇಶ ರಾಜರ ಕಾಲದಲ್ಲಿ ಒಬ್ಬ ನಿಷ್ಟಾವಂತ ಸೇವಕ ರಾಜರ ಬಳಿ ಇರುವಾಗ ರಾಜರು ಆತನನ್ನು ಪರೀಕ್ಷೆಗೆ ಒಳಪಡಿಸುತ್ತಾರೆ. ನೀವು ಇದನ್ನು ಓದಬೇಕಾದರೆ ಸೇವಕನು ಆಡುವ ಮಾತುಗಳನ್ನು ನೀವು ಕೂಡ ರೋಷವಾಗಿ ಓದಿ ನೋಡಿ ನಿಮಗೂ ರೋಮಾಂಚನವಾಗುವುದರಲ್ಲಿ ಎರಡು ಮಾತಿಲ್ಲ.)

ರಾಜ ಗಾಂಭೀರ್ಯದಿಂದ ಮಹಾರಾಜನ ಒಬ್ಬ ಸೇವಕ ಅತ್ತಿಂದಿತ್ತ ತಿರುಗಾಡುತ್ತಲಿರುತ್ತಾನೆ. ತೇಜಸ್ಸು ತುಂಬಿದ ಕಂಗಳು, ಅದೇನು ಶಿಸ್ತು, ಅದೇನು ನಡವಳಿಕೆ, ಆತನ ಅಂಗಾಂಗದಲ್ಲೂ ತುಂಬಿದ, ಸ್ಥೈರ್ಯ, ಧೈರ್ಯ, ಸತ್ಯ, ನ್ಯಾಯ, ನೀತಿ, ಧರ್ಮ, ಸಾವಿಗೆ ಅಂಜದವ, ಸುಳ್ಳಿಗೆ ತಲೆ ಬಾಗದವ, ತಪ್ಪಿನಡೆದರೆ ತನ್ನನ್ನೆ ತಾನು, ಶಿಕ್ಷಿಸಿಕೊಳ್ಳುವವ.. ಒಮ್ಮೆ ಆತನನ್ನು ಪರೀಕ್ಷಿಸಲು ಮಹಾರಾಜರೇ.. ಅವರ ಒಡನಾಟದವರನ್ನು ಕಳುಹಿಸಿದರು..

ರಾಜ ಭಟರಲ್ಲಿ ಕೆಲವರು ಮಪ್ತಿನಲ್ಲಿ ಬಂದು "ಸೇವಕ...sss" ಎಂದು ಕರೆಯುತ್ತಾರೆ.

(ಆತ ಒಮ್ಮೆ ಇವರ ಬಳಿ ತಿರುಗಿ ನೋಡಿ, ತಲೆ ಬಾಗಿಸಿ ವಂದಿಸಿ ಬಂದ ವಿಚಾರವನ್ನು ಕೇಳುತ್ತಾನೆ.)

ಮಪ್ತಿನಲ್ಲಿರುವ ರಾಜ ಭಟರು: ನಿನ್ನನ್ನು ದಿನವು ನೋಡುತ್ತಿದ್ದೇವೆ.. ನೀನೇಕೆ ಹೀಗೆ ಅತ್ತಿಂದಿತ್ತ, ಇತ್ತಿಂದತ್ತ, ಸುಮ್ಮನೆ ಕಾಲಾಹರಣ ಮಾಡುತ್ತಿರುವೆ? ನಿನ್ನಲ್ಲಿ ಎಲ್ಲಾ ಶಕ್ತಿ, ಮತ್ತು ಯುಕ್ತಿಯು ತುಂಬಿದೆ.ರಾಜ ಯಾವಾಗ ಏನು ಹೇಳುತ್ತಾನೆ ಅದನ್ನು ಮಾತ್ರ ಮಾಡುವೆಯಷ್ಟೇ? ನೀನು ಮಾತ್ರ ಅವರು ಹೇಳಿದಂತೆ ಕೇಳಿಕೊಂಡು ಇರುವೆಯಲ್ಲ? ಅದರಿಂದ ನಿನಗೇನು ಸಿಕ್ಕಿದೆ? ನಾವು ಹೇಳಿದಂತೆ ಕೇಳುವೆಯಾದರೆ.. ನೀನು ತುಂಬ ಹಣವಂತನಾಗುತ್ತೀಯಾ !!

(ಅವರು ರಾಜಭಟರು ಎಂದು ಸೇವಕನಿಗೆ ತಿಳಿಯಲಿಲ್ಲ...)

ಸೇವಕ: ಏನು ನಿಮ್ಮ ಮಾತಿನ ಅರ್ಥ..???

ಮಪ್ತಿನಲ್ಲಿರುವ ರಾಜ ಭಟರು: ಹ್ಹ.. ಹ್ಹ.. ಹ್ಹ.. ಏನಿಲ್ಲ. ನಾವು ಇಲ್ಲಿ ಮಹಾರಾಜರು ಹೇಳಿದಂತೆ ಕೇಳಿಕೊಂಡು ಎಷ್ಟುದಿನ ಅಂತ ಕಾಲ ಸವೆಯೋದು.. ನೀನು ಮನಸ್ಸು ಮಾಡಿದರೆ...

ಸೇವಕ: ನನಗೆ ಒಂದೂ ತಿಳಿಯುತ್ತಿಲ್ಲ?! ಇಂದೇನಾಗಿದೆ ನಿಮಗೆ.. ಏನೋ.. ವಿಚಿತ್ರ ರಹಸ್ಯ ನಿಮ್ಮಲ್ಲಿ ತುಂಬಿದಂತಿದೆ?

ಮಪ್ತಿನಲ್ಲಿರುವ ರಾಜ ಭಟರು: ಅದೂ... ಅದೂ... ಮನಸ್ಸು ಮಾಡಿದರೆ... ನೀನೇ ಏಕೆ ರಾಜನಾಗಬಾರದು?! ನಾವುಗಳು ನಿನ್ನ ಸೇವಕರಾಗಿ ರಾಜ್ಯವನ್ನು ನೋಡಿಕೊಳ್ಳುತ್ತೇವೆ.. ನೀನು ಅರಾಮವಾಗಿ ಇರಬಹುದಲ್ಲವೇ..?? ಅಷ್ಟಕ್ಕೂ.. ರಾಜನಿಗೆ ವಯಸ್ಸಾಯಿತು. ಅರಳೊ.. ಮರುಳೊ.. ನೀನು ರಾಜರನ್ನು ಮುಗಿಸಿಬಿಟ್ಟರೆ.....!?! ನಂತರ ನಾವೆ ಮುಂದೆ ನಿಂತು ನಿನ್ನನ್ನೆ ರಾಜನನ್ನಾಗಿ ಮಾಡುತ್ತೇವೆ.. ಏನು ನಿನ್ನ ಅಭಿಪ್ರಾಯ?

(ಕಾಡಿನ ಕಾಳಿಂಗ ಸರ್ಪವು ಬುಸುಗುಡುವಂತೆ, ಸೂರ್ಯನನ್ನೇ ನುಂಗಿ ಹಾಕಿಬಿಟ್ಟವನಂತೆ, ಕಣ್ಣುಗಳಲ್ಲಿ ಜ್ವಾಲೆಯು ಧಗಿಸುವಂತೆ ನೋಡುತ್ತ, ಹಲ್ಲನ್ನು ಮಸೆಯುತ್ತ ಅವರ ಬಳಿ ಬಂದು ಸೇವಕ ನಿಂತು..)

ಸೇವಕ: (ರೋಷವಾಗಿ) ಎಲೈ ಪಾಪಿಷ್ಟಗಳ.... ತಿಂದುಂಡು ಕೊಬ್ಬಿದ ಖದೀಮಗಳ.... ನನ್ನ ಒಡೆಯನು ನಿಮ್ಮ ಮೇಲಿಟ್ಟಿರುವ ಅಪಾರ ನಂಬಿಕೆಗಳ ಗೋಡೆಗಳನ್ನು ಕೆಡವಿ, ಈಗ ನನ್ನನ್ನು ವಿಶ್ವಾಸಗೇಡಿಯನ್ನಾಗಿ ಮಾಡಲು ಹೊರಟಿರುವ ನಿಮನ್ನು, ಕುದಿಯುವ ಎಣ್ಣೆಯಲ್ಲಿ ಮುಳುಗಿಸುವ ಮಹದಾಸೆ ನನಗೆ ಬಂದಿದೆ. ಹಸಿದ ಹೆಬ್ಬುಲಿಯ ಹಾಗೆ ನಿಮ್ಮ ಮೇಲೆರಗಿ ಎದೆಯನ್ನು ಸೀಳಿ ಬಿಸಿ ರಕ್ತವನ್ನು ರುಚಿನೋಡಬೇಕೆನಿಸಿದೆ. ಮದವೇರಿದ ಆನೆಯಂತೆ ನಿಮ್ಮನ್ನು ತುಳಿದು ಬಿಡುವ ಆಕ್ರೋಶವು ನನ್ನಲ್ಲಿ ಉಕ್ಕುತ್ತಿದೆ, ಕಾದ ಕಬ್ಬಿಣದಲ್ಲಿ ನಿಮ್ಮನ್ನು ಚುಚ್ಚಿ, ಊರ ಬಾಗಿಲಿಗೆ ತೋರಣವಾಗಿಸಿ ರಣ ಹದ್ದುಗಳಿಗೆ ಆಹಾರವನ್ನಾಗಿ ಕೊಡ ಬೇಕೆನಿಸಿದೆ. ಪವಿತ್ರವಾದ ಮಂದಿರದಲ್ಲಿ ಪಾಪಿಗಳು ಕಾಲಿಟ್ಟು ಅಪವಿತ್ರಗೊಳಿಸಿದ ಸ್ಥಾನವನ್ನು; ನನ್ನ ಒಡೆಯ ಕಾಲಿಡುವ ಮೊದಲು ಪವಿತ್ರತೆ ಮಾಡಬೇಕಾಗಿದೆ.
ಅಯ್ಯೋ..... ವಿಧಿಯೇ.... ಮೃಷ್ಟಾನ್ನ ಭೋಜನಗಳನ್ನು ಬಡಿಸಿ ಸಾಕಿದ್ದಕ್ಕೆ, ನಾಯಿಗಳು ಸಿಂಹಾಸನವನ್ನೇ ಆಕ್ರಮಿಸಲು ಪರದಾಡುತ್ತಿರುವ ಪರಿಸ್ಥಿತಿಯನ್ನು ನೋಡುವ ಹಾಗೆ ಬಂತೆ!!

ತಿಂದುಂಡ ಮನೆಗೆ ಎರಡು ಬಗೆಯುವ ನಿಮಗೆ, ಇಲ್ಲಿರುವ ಇನ್ನೆಷ್ಟು ಅಮಾಯಕರನ್ನು ವಿಷ ಜಂತುಗಳನ್ನಾಗಿ ಮಾಡಿರುವ ಅಧಮರೋ ತಿಳಿಯದಾಗಿದೆ..

ನನ್ನ ಒಡೆಯನು, ತಾನು ಭೋಜನ ಮಾಡುವ ಮೊದಲು, ನಮ್ಮೆಲ್ಲರನ್ನು ಸಮಾನವಾಗಿ ಕೂರಿಸಿ.. ಕೈ ತುತ್ತು ನೀಡಿ, ಅಪಾರ ನಂಬಿಕೆಯಿಂದ, ಅಪಾರ ವಿಶ್ವಾಸದಿಂದ, ಅಪಾರ ಪ್ರೀತಿಯಿಂದ ತಂದೆ ಸ್ಥಾನದಲ್ಲಿ ನಿಂತು ನಮ್ಮನ್ನು ಸಾಕಿ, ಬೆಳಸಿದ್ದಕ್ಕೆ, ನಾನು ಹೇಗೆ ನನ್ನ ದಣಿಗೆ ಮೋಸಮಾಡಲು ಸಾಧ್ಯ?!. ನನ್ನ ಕನಸು, ಮನಸ್ಸಿನಲ್ಲೂ.. ನಿಮ್ಮ ಹಾಗೆ ಕೆಟ್ಟದಾಗಿ ಯೋಚಿಸಿರದ ನಾನು, ನಿಮ್ಮಿಂದ
ನನ್ನ ಮನಸ್ಸಿನಲ್ಲಿ ಅಲ್ಲೋಲ, ಕಲ್ಲೋಲ ಉಂಟಾಗಿದೆ. ಹೃದಯ ಶ್ರೀಮಂತಿಕೆಯಲ್ಲಿ ನನ್ನ ಒಡೆಯ ದೊಡ್ಡ ಶಿಖರ. ನನ್ನ ಹಾಗೆ ಲಕ್ಷಾಂತರ ಜೀವಿಗಳು ಒಡೆಯನ ನೆರಳಲ್ಲಿ ಬದುಕುತ್ತಿದ್ದೇವೆ.

ಹುಲಿಯು ಹೇಗೆ ಮಾಂಸವನ್ನಲ್ಲದೆ, ಹುಲ್ಲನ್ನು ಎಂದಿಗೂ.. ತಿನ್ನಲಾರದೋ. ಹಾಗೆ ನನ್ನ ಒಡೆಯನಿಗೆ ಭದ್ರ ಕೋಟೆಯಾಗುವೆನೇ ಹೊರತು.. ಎಂದಿಗೂ.. ಬಿರುಕಾಗಿ ಉಳಿಯಲಾರೆನು.

ಪ್ರಭುಗಳು ದೀವಿಗೆಯಲ್ಲಿರುವ ಬೆಳಕು.. ನಾನು ದೀವಿಗೆಯಲ್ಲಿರುವ ಎಣ್ಣೆಯಷ್ಟೆ. ನಾನೆಂದಿಗೂ.. ಅವರನ್ನು ಮುಳುಗಿಸಿ ನಾನು ಕತ್ತಲೆಯಲ್ಲಿರಲಾರೆ.

ಅವರ ಕಾಲಿನ ಧೂಳಿಗೆ ಸಮನಾದ ನಾನು, ಇಂದು ಅವರ ಜೊತೆ ಒಡನಾಟವಿದೆಯಲ್ಲ ಅದು ನನ್ನ ಭಾಗ್ಯ!.

ಎಲ್ಲಾ ಯುದ್ದಗಳನ್ನು ಗೆದ್ದು, ಎದುರಾಳಿಗಳನ್ನು ಸಮಾಧಿ ಗೊಳಿಸಿದ ನನ್ನ ದೊರೆಗೆ, ನಾನಿಂದು ಕಾವಲು ರಕ್ಷಕನೆಂಬ ಹೆಮ್ಮೆ ನನಗಿದೆ.

ಅನ್ನ - ನೀರು - ನೆರಳನ್ನು ಕೊಟ್ಟು ಕಾಪಾಡುತ್ತಿರುವ ನನ್ನ ದೊರೆಯನ್ನು ದೇವರೆಂದು ಪೂಜಿಸುತ್ತಿರುವೆನು.

ಓಂ ಕಾರದಿಂದ ಶಿವನ ಸ್ತುತಿಸುತ್ತ, ಯಾಗ, ಯಜ್ಗ್ನಾದಿಗಳನ್ನು ಮಾಡಿ, ಯುವ ಪೀಳಿಗೆಗೆ ಒಳ್ಳೆಯದಾಗಲೆಂದು, ಹಗಲಿರುಳೆನ್ನದೆ ಕಣ್ಣಲ್ಲಿ ಕಣ್ಣಿಟ್ಟು ಪ್ರಜೆಗಳನ್ನು ಕಾಪಾಡುತ್ತಿರುವ ನನ್ನ ಧಣಿಗೆ

ಕೆಡುಕುಂಟು ಮಾಡುವುದೇ ಛೇ.. ಛೇ..

ಮಹಾರಾಜರಿಗೆ ಅಂತಾ ದುರ್ಗತಿಯೇನಾದರು ಒದಗಿ ಬಂದರೆ, ರಣರಂಗದಲ್ಲಿ ನಿಂತು ಹೋರಾಡಿ ಪ್ರಾಣವನ್ನು ಕೊಡುತ್ತೇನೆಯೇ ಹೊರತು, ಹೇಡಿಯಾಗಿ ಬದುಕುವುದಿಲ್ಲ, ನಿಮ್ಮಂತೆ ಷಂಡನಾಗಿ ಬಾಳುವುದಿಲ್ಲ.

ನನ್ನ ಹೆತ್ತವಳ ಮೇಲಾಣೆ, ಪಂಚ ಭೂತಗಳ ಮೇಲಾಣೆ, ಪರಮೇಶ್ವರನ ಮೇಲಾಣೆ, ಈಗಿನಿಂದಲೇ ನನ್ನ ದೊರೆಗೆ ವಿಷಯಗಳನ್ನೆಲ್ಲ ತಿಳಿಸಿ, ಅಪ್ಪಣೆಯನ್ನು ಪಡೆದು ನಿಮ್ಮಂತ ವಿಷಜಂತುಗಳನ್ನು ಹುಡುಕಿ, ಅವರ ಶಿರಛ್ಛೇದನ ಮಾಡಿಸಿ ನಮ್ಮ ಪ್ರಭುವಿನ ರಾಜ್ಯವನ್ನು ಸುಭದ್ರ ಗೊಳಿಸುವಲ್ಲಿ ಕಾರ್ಯೋನ್ಮುಕನಾಗುತ್ತೇನೆ. ಇದು ನನ್ನ ಪ್ರತಿಜ್ನೆ.

ರಾಜರು ಒಡನೆ ಬಂದು ಆತನ ಆಕ್ರೋಷವನ್ನು ತಣಿಸಿ.. ಆತನನ್ನು ತಮ್ಮ ಬಳಿ ಕುಳ್ಳರಿಸಿ.. ನಡೆದ ಸಂಗತಿಯನ್ನು.. ತಾವು ಪರೀಕ್ಷಿಸಲು ಮಾಡಿದ ಈ ಉಪಾಯವನ್ನೆಲ್ಲ ತಿಳಿಸಿ..ಮೆಚ್ಚುಗೆಯನ್ನು ವ್ಯಕ್ತಪಡಿಸಿ..ಆತನನ್ನು ಆಲಂಗಿಸಿಕೊಳ್ಳುತ್ತಾರೆ.. ರಾಜ ಮರ್ಯಾದೆಯನ್ನು ಕೊಟ್ಟು ಸತ್ಕರಿಸುತ್ತಾರೆ..

ಆ ಸೇವಕ ಹಾಗೂ ಆತನ ವಂಶಸ್ಥರು ರಾಜರಿಗೆ ನಂಬಿಕಸ್ತರಾಗಿದ್ದರು.

ಲೇಖಕರು

ಯೋಗೇಶ್

ನಿನಗೇಳದ ಮಾತೊಂದು ಮನದ(ನ)ಲ್ಲೆ ಉಳಿದಿದೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.