Skip to main content

ಇಂದಿನ ಮೊದಲ ಲೇಖನ-ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳುವುದು?

ಇಂದ kanasugaara
ಬರೆದಿದ್ದುFebruary 1, 2007
4ಅನಿಸಿಕೆಗಳು

೦೧-೦೨-೨೦೦೭
ಬೆಂಗಳೂರು

ಆರೋಗ್ಯಪೂರ್ಣ ಜೀವನ

ಜೀವನದಲ್ಲಿ ಸಾಧನೆ ಮಾಡಲು ಆರೋಗ್ಯ ಮಹತ್ತರ ಪಾತ್ರ ವಹಿಸುತ್ತದೆ. ಯಾವಾಗಲೂ ನಾನಾ ತರಹ ರೋಗಗಳಿಂದ ನರಳಿಕೊಂಡು, ಆಸ್ಪತ್ರೆಗಳಿಗೆ ಅಲೆದಾಡಿಕೊಂಡು, ಔಷಧಿಗಳಿಗೆ ಸುರಿದುಕೊಂಡು ಈ ಜೀವನದಲ್ಲಿ ಏನು ಸಾಧನೆ ಮಾಡುವುದಕ್ಕೆ ಆಗುತ್ತದೆ? ಮನಸ್ಸೆಲ್ಲಾ ರೋಗದ ನರಳಾಟದ ಕಡೆಗೇ ಇರುತ್ತದೆ. ಪ್ರತಿಯೊಬ್ಬರೂ ಆರೋಗ್ಯಪೂರ್ಣ ಜೀವನ ನಡೆಸಲು ೧೦೦ ಕ್ಕೆ ೧೦೦ ರಷ್ಟು ಅವಕಾಶವಿರುತ್ತದೆ.
ಹೇಗೆಂದರೆ ಫೈಬರ್ ಯುಕ್ತ ಆಹಾರಗಳನ್ನು ಸೇವಿಸುತ್ತಿದ್ದರೆ ಯಾವ ರೋಗಗಳೂ ಹತ್ತಿರ ಸುಳಿಯುವುದಿಲ್ಲ. ಈಗ ಇರುವ ರೋಗಗಳೂ ಸಹ ಕೊಚ್ಚಿಕೊಂಡು ಆಚೆಗೆ ಹೋಗಿಬಿಡುತ್ತವೆ. ದಿನಕ್ಕೆ ಪ್ರತಿಯೊಬ್ಬರೂ ೫೦ ಗ್ರಾಂ ನಿಂದ ೧೦೦ ಗ್ರಾಂ ಗಳವರೆಗೆ ಫೈಬರ್ ಯುಕ್ತ ಆಹಾರ ಸೇವಿಸಿದರೆ ಸಾಕು. ಬೆಳಗಿನ ತಿಂಡಿ, ಮಧ್ಯಾಹ್ನದ ಊಟ, ಮತ್ತು ರಾತ್ರಿಯ ಊಟ ಫೈಬರ್ ಯುಕ್ತವಾಗಿರಬೇಕು. ಇದನ್ನು ಪ್ರತಿಯೊಬ್ಬರೂ ಪಾಲಿಸಿದಲ್ಲಿ ಆನಂದವಾದ ಜೀವನವನ್ನು ನಡೆಸಬಹುದು. ಯಾವುದೇ ಆತಂಕ ಇಲ್ಲದೇ ಆನಂದದಿಂದ ದಿನನಿತ್ಯದ ಕೆಲಸಗಳನ್ನು ಪರಿಪೂರ್ಣವಾಗಿ ಮಾಡಲು ದೇಹ ಮತ್ತು ಮನಸ್ಸು ಸರ್ವಶಕ್ತವಾಗಿರುತ್ತದೆ. ಎಷ್ಟು ಹೊತ್ತು ಕೆಲಸ ಮಾಡಿದರೂ ದಣಿವೇ ಆಗುವುದಿಲ್ಲ. ಅಕಸ್ಮಾತ್ ಹೊರಗಡೆ ತಿನ್ನಬೇಕಾದ ಪರಿಸ್ಥಿತಿ ಉಂಟಾದಲ್ಲಿ ಅದಕ್ಕೆ ಯೋಚನೆ ಮಾಡಬೇಕಾದ ಅವಶ್ಯಕತೆಯಿಲ್ಲ. ಹೊರಗಡೆ ತಿಂದಿರತಕ್ಕಂಥ ಆಹಾರಗಳಿಂದ ಏನಾದರೂ ತೊಂದರೆ ಬಂದಲ್ಲಿ ಮನೆಯಲ್ಲಿ ಫೈಬರ್ ಯುಕ್ತ ಆಹಾರವನ್ನು ಸೇವಿಸಿದ ನಂತರ ಒಂದೆರಡು ದಿನದಲ್ಲಿ ಸರಿಹೋಗುತ್ತದೆ. ಅದಕ್ಕಾಗಿ ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ.
ಉತ್ತಮವಾದ ಫೈಬರ್ ಇರುವ ಆಹಾರವೆಂದರೆ ಪಾಲೀಶ್ ಮಾಡಿರದ ಕೆಂಪು ಅಕ್ಕಿ ಅಂದರೆ ಭತ್ತ ಮಾತ್ರ ತೆಗೆದ ಕೆಂಪು ಅಕ್ಕಿ ಮತ್ತು ರಾಗಿ. ಕೆಲವರಿಗೆ ರಾಗಿ ಒಗ್ಗುವುದಿಲ್ಲ. ಅಂದರೆ ಲೂಸ್ ಮೋಶನ್ ಆಗಲು ಶುರುವಾಗುವುದು. ಅಕ್ಕಿಯ ಅಭ್ಯಾಸ ಇರುವವರು ರಾಗಿಯನ್ನು ಉಪಯೋಗಿಸಲು ಇಷ್ಟಪಡುವುದಿಲ್ಲ. ಅಲ್ಲದೆ ತುಂಬಾ ಕಷ್ಟಪಟ್ಟು ಕೆಲಸಮಾಡುವವರಿಗೆ ರಾಗಿ ಸರಿಹೋಗುತ್ತದೆ. ಯಾವಾಗಲೂ ಅಕ್ಕಿಯನ್ನೇ ಉಪಯೋಗಿಸುವವರು ಫೈಬರ್ ಯುಕ್ತ ಅಕ್ಕಿಯನ್ನು ಉಪಯೋಗಿಸಿದರೆ ಕುಳಿತು ಕೆಲಸ ಮಾಡುವವರಿಗೂ ಅನುಕೂಲವಾಗುತ್ತದೆ. ಆದರೆ ಫೈಬರ್ ಯುಕ್ತ ಆಹಾರವನ್ನು ತಿಂದ ನಂತರ ಜಾಸ್ತಿ ನೀರು ಕುಡಿಯಬೇಕು. ನೀವುಗಳು ತಿಂದ ಫೈಬರ್ ಒಳಗಡೆ ಇರುವ ಎಲ್ಲಾ ವಿಷಗಳನ್ನೂ ಮತ್ತು ಆಹಾರದಿಂದ ಉತ್ಪತ್ತಿಯಾದ ಕೆಲವು ವಿಷಕಾರಕ ವಸ್ತುಗಳನ್ನು ಈ ಫೈಬರ್ ಒಂದು ಮುದ್ದೆಯಾಗಿ ಪರಿವರ್ತಿಸಿ ದೊಡ್ಡ ಕರುಳಿನೊಳಗೆ ತಳ್ಳುತ್ತದೆ. ಬೆಳಗ್ಗೆ ಎದ್ದ ತಕ್ಷಣ ಒಂದೇ ಸಲಕ್ಕೇ ನಿಮ್ಮ ದೊಡ್ಡ ಕರುಳಿನಲ್ಲಿ ಸೇರಿರುವ ಮಲಗಳೆಲ್ಲಾ ಎರಡೇ ನಿಮಿಷಗಳಲ್ಲಿ ಖಾಲಿಯಾಗುತ್ತದೆ. ದೇಹದಲ್ಲಿ ಏನೂ ಇಲ್ಲವೇ ಇಲ್ಲವೇನೋ, ಎಲ್ಲಾ ಖಾಲಿಯಾಯ್ತೇನೋ ಎಂಬ ಸಂತೋಷ ಉಂಟಾಗುತ್ತದೆ. ಮೊದಲನೆಯ ದಿನ ಸ್ವಲ್ಪ ಸುಸ್ತಾದಂತೆ ಅನ್ನಿಸಬಹುದು. ಆದರೂ ಏನೂ ತೊಂದರೆಯಿಲ್ಲ. ಆ ಆನಂದವನ್ನು ನೀವುಗಳೇ ಅನುಭವಿಸಿ ಹೇಳಬೇಕು. ಬ್ಲಡ್ ಶುಗರ್ ಅಥವಾ ಡಯಾಬಿಟೀಸ್ ಮೆಲ್ಲಿಟಸ್ ಅಂದರೆ ಸಕ್ಕರೆ ಖಾಯಿಲೆ ಮಾತ್ರ ಇರುವವರು ಅಕ್ಕಿಯನ್ನು ಉಪಯೋಗಿಸಲು ಭಯವಾದಲ್ಲಿ ಕೆಂಪು ಅಕ್ಕಿಯ ಹೊಟ್ಟನ್ನು ಮಾತ್ರ ಗಂಜಿಯ ರೂಪದಲ್ಲಿ ಕುಡಿದರೆ ಯಾವ ತೊಂದರೆಯೂ ಇರುವುದಿಲ್ಲ. ಏಕೆಂದರೆ ಇದು ನಿಮ್ಮ ದೇಹವನ್ನು ಮತ್ತು ಹೊಟ್ಟೆಯನ್ನು ತಂಪಾಗಿ ಇಟ್ಟಿರುತ್ತದೆ.

ಈ ಲೇಖನ ಬರೆಯುತ್ತಿರುವವರ ಹೆಸರು ನಿಮಗೆಲ್ಲಾ ಗೊತ್ತಿರಬಹುದು ಅಥವಾ ಗೊತ್ತಿಲ್ಲದೇ ಇರಬಹುದು. ನನ್ನ ಹೆಸರು ಸತ್ಯಪ್ರಕಾಶ್ ಅಂತ. ಹನಸೋಗೆ ಜವರಾಯ ಮೇಷ್ಟ್ರ ಮೊಮ್ಮಗ ಮತ್ತು ಚನ್ನಪಟ್ಟಣದಲ್ಲಿ ಅಡ್ವೋಕೇಟ್ ಆಗಿದ್ದ ಶ್ರೀನಿವಾಸಯ್ಯನವರ ಮೊಮ್ಮಗ. ನಾನು ಸಹಾ ಜೀವನದಲ್ಲಿ ಸುಮಾರು ೬೦ ವರ್ಷಗಳ ಕಾಲ ರೋಗದಿಂದ ನರಳಿ ನರಳಿ ಸಾಕಾಗಿ ಇದಕ್ಕೆ ಉಪಾಯವನ್ನು ಕಡೆಗೂ ಕಂಡು ಹಿಡಿದೆ. ಲಕ್ಷಾಂತರ ರೂಪಾಯಿಗಳನ್ನು ಡಾಕ್ಟರರಿಗೆ ಸುರಿಯುತ್ತಿದ್ದೆ. ೬೫ ನೇ ದಶಕದಲ್ಲಿ ತಪ್ಪು ಡಯಾಗ್ನೋಸಿಸ್ ಮಾಡಿ ಸುಮಾರು ಹತ್ತು ವರ್ಷಗಳ ಕಾಲ ಮಾತ್ರೆಗಳನ್ನು ನುಂಗಿನುಂಗಿ ಸಾಕಾಗಿ ಕಡೆಗೆ ಸಾಯೋ ಪರಿಸ್ಥಿತಿ ಬಂದುಬಿಟ್ಟಿತ್ತು. ಆಗ ನನಗೆ ಆಸಿಡಿಟಿ, ಆತಂಕ ನ್ಯುರೋಸಿಸ್, ಗ್ಯಾಸ್ಟ್ರಿಕ್, ಅಜೀರ್ಣ ಇತ್ಯಾದಿ ರೋಗಗಳಿಂದ ಬಳಲುತ್ತಿದ್ದೆ. ಯಾವ ಡಾಕ್ಟರುಗಳಿಂದಲೂ ವಾಸಿಮಾಡಲು ಸಾಧ್ಯವಾಗಲಿಲ್ಲ. ಅಲೋಪತಿ, ಹೋಮಿಯೋಪತಿ ಎಲ್ಲಾ ಆಗಿ ಕೊನೆಗೆ ಆಯುರ್ವೇದ ಹಿಡಿದ ಮೇಲೆ ಸ್ವಲ್ಪ ಗುಣ ಕಂಡಿತು. ೬೦% ವಾಸಿಯಾಯಿತು. ಆಗ ನಮ್ಮ ಫ್ಯಾಮಿಲಿ ಡಾಕ್ಟರರು ೮೦ ರ ದಶಕದಲ್ಲೇ ಕೆಂಪು ಅಕ್ಕಿಯ ವಿಷಯವನ್ನು ಹೇಳಿದ್ದರು. ಆದರೆ ನನಗೆ ಈ ಬೆಂಗಳೂರಿನಲ್ಲಿ ಅದು ಸಿಕ್ಕುತ್ತಲೇ ಇರಲಿಲ್ಲ. ಹಾಗೂ ಹೀಗೂ ದಿನ ಕಳೆಯುತ್ತಿದ್ದೆ. ಪ್ರಜಾವಾಣಿ ಪೇಪರ್ ನಲ್ಲಿ ಆರೋಗ್ಯ ದರ್ಶನ ವಿಭಾಗದಲ್ಲಿ ಎಲ್ಲ ರೋಗಗಳಿಂದ ಬಿಡುಗಡೆಯಾಗುವುದು ಹೇಗೆಂದು ಬರೆದಿದ್ದರು. ನನಗೂ ಸಹಾ ಆಗಲೇ ಗೊತ್ತಾಗಿದ್ದು ಫೈಬರ್ ಯುಕ್ತ ಆಹಾರ ತಿಂದರೆ ಎಲ್ಲ ರೋಗಗಳು ಓಡಿಹೋಗುತ್ತವೆ ಎಂದು. ತಕ್ಷಣ ಅಲ್ಲಿ ಇಲ್ಲಿ ಓಡಾಡಿ ಕೆಂಪು ಅಕ್ಕಿಯನ್ನು ತಂದೆ. ಒಂದೇ ರಾತ್ರಿಯ ಊಟದಲ್ಲಿ ನನ್ನ ರೋಗಗಳೆಲ್ಲ ಮಾಯವಾದವು. ನನ್ನನ್ನು ನಾನೇ ನಂಬಲಾಗದ ಪರಿಸ್ಥಿತಿಯಲ್ಲಿ ನಾನಿದ್ದೆ. ಇದೆಲ್ಲಾ ನಿಜಾನ ಅನ್ನೋ ಪರಿಸ್ಥಿತಿಯಲ್ಲಿದ್ದೆ. ಅಂದಿನಿಂದ ಇಂದಿನವರೆಗೂ ೫೦ ಪೈಸ ಕೂಡ ಔಷಧಿಗಳಿಗೆ ಖರ್ಚು ಮಾಡಿಲ್ಲ. ೨೦೦೦ ನೇ ಇಸವಿಯಿಂದ ೨೦೦೪ ರವರೆಗೂ ನನಗೆ ಪಾಲೀಶ್ ಮಾಡಿರದ ಅಕ್ಕಿ ಸಿಕ್ಕುತ್ತಿತ್ತು. ಈಗ ಎಲ್ಲೆಲ್ಲೋ ತರಿಸಲು ಓಡಾಡುತ್ತಿದ್ದೇನೆ. ಈಗ ಮಾರ್ಕೆಟ್ ನಲ್ಲಿ ಸಿಕ್ಕುತ್ತಿರುವ ಕೆಂಪು ಅಕ್ಕಿಯನ್ನೇ ಅಂದರೆ ಸ್ವಲ್ಪ ಪಾಲೀಶ್ ಮಾಡಿದ ಅಕ್ಕಿಯನ್ನೇ ಉಪಯೋಗಿಸುತ್ತಿದ್ದೇನೆ. ಈಗ ನನ್ನ ಆರೋಗ್ಯವು ತುಂಬಾನೇ ಚೆನ್ನಾಗಿದೆ.
ನಾನು ಫೈಬರ್ ತಿಂದು ಆರೋಗ್ಯವಾಗಿರುವಾಗ ನಾನಾ ಖಾಯಿಲೆಯಿಂದ ನರಳುತ್ತಿರುವವರಿಗೆ ಯಾಕೆ ದಾರಿ ತೋರಿಸಬಾರದು ಎಂದು ಈ ಲೇಖನವನ್ನು ಬರೆಯುತ್ತಿದ್ದೇನೆ. ಸರಿಯಾದ ಅಕ್ಕಿ ಸಿಗದೇ ಇರುವವರು ದಯವಿಟ್ಟು ಗೋಧಿ ಹೊಟ್ಟು ಅಥವಾ ಕೆಂಪು ಅಕ್ಕಿಯ ಹೊಟ್ಟು ಸಿಕ್ಕಿದರೆ ನಿಮ್ಮ ಊಟದಲ್ಲಿ ಪ್ರತಿದಿನ ಉಪಯೋಗಿಸಿ ನಿಮ್ಮ ಆರೋಗ್ಯವನ್ನು ೧೦೦ ಕ್ಕೆ ೧೦೦ ರಷ್ಟು ಸರಿಪಡಿಸಿಕೊಳ್ಳಿರಿ. (ಗೋಧಿ ಹೊಟ್ಟು (ವೀಟ್ ಬ್ರಾನ್) ಫುಡ್ ವರ್ಲ್ಡ್, ದೊಡ್ಡ ದೊಡ್ಡ ಡಿಪಾರ್ಟ್ ಮೆಂಟಲ್ ಸ್ಟೋರ್ಸ್, ಮತ್ತು ಬಿಗ್ ಬಜ಼ಾರ್ ನಲ್ಲಿ ಸಿಗುತ್ತದೆ)

ಬರೆದಿರುವವರು : ಹೆಚ್.ಕೆ.ಸತ್ಯಪ್ರಕಾಶ್
೯೮೮೬೩ ೩೪೬೬೭
ಇ-ಮೈಲ್ : sp_1939@yahoo.co.in

ಲೇಖಕರು

kanasugaara

ಆರೋಗ್ಯವೇ ಮಹಾಭಾಗ್ಯ

ನಾನು ಹುಟ್ಟಿದ ಊರು ಚನ್ನಪಟ್ಟಣ-ಬೆಂಗಳೂರು ಡಿಸ್ಟ್ರಿಕ್ಟ್. ನಾನು ಓದಿದ್ದು, ಬೆಳೆದಿದ್ದು ಎಲ್ಲಾ ಚನ್ನಪಟ್ಟಣದಲ್ಲೇ. ನಾನು ೧೯೬೧ ನೇ ಇಸವಿಯಲ್ಲಿ ಬೆಂಗಳೂರಿಗೆ
ಬಂದು ಬಸವನಗುಡಿ ಕೋ-ಆಪರೇಟೀವ್ ಸೊಸೈಟಿಯಲ್ಲಿ ಕೆಲಸಕ್ಕೆ ಸೇರಿದೆ. ನಂತರ ೧೯೬೩ ರ february ಯಲ್ಲಿ ಮೈಕೋ ಗೆ ಸೇರಿದೆ. ಅಲ್ಲಿ ಸುಮಾರು ೨೫ ವರ್ಷಗಳ
ಸರ್ವೀಸ್ ಮಾಡಿದೆ. ೧೯೮೭ ಸೆಪ್ಟೆಂಬರ್ ೩೦ ರಂದು ವಾಲಂಟರಿ ರೆಟೈರ್ಮೆಂಟ್ ತೆಗೆದುಕೊಂಡೆ.
ನಾನು ತುಂಬಾನೇ ಸೋಷಿಯಲ್, ಎಲ್ಲರ ಜೊತೆಗೂ ಹೊಂದಿಕೊಳ್ಳುವವನು, ಅದರಲ್ಲೂ ನನ್ನ ರುಚಿ ಏನಿದೆಯೋ ಅದೇ ರುಚಿ ಉಳ್ಳವರ ಜೊತೆ ಬೇಗ ಹೊಂದಿಕೊಳ್ಳುವವನು.
ನನ್ನನ್ನು ಒಂದು ಸಲ ನೀವು ನೋಡಿದರೆ, ಮಾತಾಡಿಸಿದರೆ ಸಾಕು ನಿಮ್ಮ ಹೃದಯದಲ್ಲಿ ನಾನು ನಿಂತುಬಿಡುತ್ತೇನೆ. ನಾನು ಹೊಸಾ ಥರಹ ಅಸ್ಟ್ರಾಲಜರ್, ಪ್ರಕೃತಿ ಚಿಕಿತ್ಸೆ ಯ ಬಗ್ಗೆ
ಆಸಕ್ತಿ. ನಮ್ಮ ಆಹಾರದಲ್ಲೇ ನಮ್ಮ ರೋಗಗಳನ್ನು ಗುಣಪಡಿಸಿಕೊಳ್ಳಬಹುದು. ಮತ್ತು ನಾನು ಮತ್ತು ನನ್ನ ಸ್ನೇಹಿತರು ಸೇರಿ ಒಂದು ಕನ್ನದ ಮಾಸಿಕ ಪತ್ರಿಕೆಯನ್ನು ನಡೆಸುತ್ತಿದ್ದೇವೆ
ಅದರ ಹೆಸರು "ಸಹಾರ" ಎಂದು.

ಅನಿಸಿಕೆಗಳು

ಜಾಗ್ರತ ಶುಕ್ರ, 02/02/2007 - 10:31

ತುಂಬಾ ಒಳ್ಳೆಯ ಸಲಹೆಗಾಗಿ ಸತ್ಯ ಅವರಿಗೆ ಕ್ರತಜ್ಞತೆಗಳು.

Anonymous (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 11/06/2009 - 23:50

Thank you sir

umesha ಶುಕ್ರ, 12/03/2010 - 11:47

ಫೈಬರ್ ಯುಕ್ತ ಆಹಾರ ದೇಹದಲ್ಲಿರುವ ಕೆಟ್ಟ ಕೊಬ್ಬಿನ ಅಂಶವನ್ನು ತೆಗೆಯುತ್ತದೆ.ಜೊತೆಗೆ ಸ್ಟಾರ್ಚ್ ಅಂಶ ಕಡಿಮೆ ಇದ್ದು
ಮಧುಮೇಹದವರಿಗೂ ಉಪಯುಕ್ತ.ಬರಹ ಚೆನ್ನಾಗಿದೆ.

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 05/14/2012 - 13:16

thank you sir

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.