Skip to main content

ಕೊನೆಯಿಲ್ಲದ ಕತೆ!

ಬರೆದಿದ್ದುJune 16, 2008
noಅನಿಸಿಕೆ

[b] ವಿಜಯ ಕರ್ನಾಟಕ ಪೇಪರ್ ನಲ್ಲಿ ಓದಿದ್ದು..

ಸಭಾಂಗಣದಲ್ಲಿ ಜನರು ಜಮಾಯಿಸಿದ್ದರು. ಶ್ರೀನಿವಾಸರಾಯರ ಗೆಲ್ಲುವಿಕೆ ಅವರ ಸುಪ್ತ ಮನಸ್ಸಿನ ಆಸೆಗಳನ್ನು ವಾಸ್ತವದಲ್ಲಿ ಕಾಣಿಸಿತ್ತು. ರಾಯರು ಗತ್ತಿನಿಂದ ವೇದಿಕೆ ಮೇಲೆ ವಿರಾಜಮಾನರಾಗಿದ್ದರು. ಹಾರ-ತುರಾಯಿಗಳು ಆಳೆತ್ತರಕ್ಕೆ ಇದ್ದವು. ಹೂವಿನ ಸುಗಂಧ ಸಭಾಂಗಣದ ತುಂಬೆಲ್ಲ ಪಸರಿಸಿತ್ತು. ಪ್ರತಿಯೊಬ್ಬರು ರಾಯರನ್ನು ನೋಡಲು ಇಣುಕಿ ನೆಗೆದು ಶತಪ್ರಯತ್ನ ಮಾಡುತ್ತಿದ್ದರು. ಶ್ರೀನಿವಾಸರಾಯರು ರಾಜ ಗಾಂಭೀರ್ಯದಿಂದ ಎದ್ದು ನಿಂತಾಗ ಕೈ ಚಪ್ಪಾಳೆ ಮುಗಿಲು ಮುಟ್ಟಿತು. ರಾಯರ ಮಾತಿನಲ್ಲಿ ಎಂತಹ ಹೃದಯವನ್ನು ತನ್ನ ಪ್ರಭವಲಯದಲ್ಲಿ ಇರಿಸಿಕೊಳ್ಳುವ ತಾಕತ್ತು ಇತ್ತು.

ರಾಯರು ಭಾಷಣ ಶುರು ಮಾಡಿದಾಗ ಜನರೆಲ್ಲ ಗಪ್-ಚುಪ್ ಆದರು. ಸೂಜಿ ಎತ್ತಿ ಹಾಕಿದರೂ ಕೇಳಿಸುವಷ್ಟು ಮೌನ. "ನನ್ನ ಆತ್ಮೀಯ ಬಂಧುಗಳೇ, ಈ ಗೆಲುವು ನನ್ನದಲ್ಲ, ನಿಮ್ಮದು. ನಾನು ನಿಮಿತ್ತ. ನಿಮ್ಮ ಸಮಸ್ಯೆಗಳನ್ನು ಇಂಚು ಇಂಚಾಗಿ ನಾನು ಬಲ್ಲೆ. ನಿಮ್ಮೆಲ್ಲರ ಪ್ರತಿ ನಿಧಿಯಾಗಿ ಅವುಗಳ ನಿವಾರಣೆಗಾಗಿ ಹಗಲಿರುಳು ನಾನು ಶ್ರಮಿಸುತ್ತೇನೆ. ನಾನು ಬೇರೆಯಲ್ಲ ನಿಮ್ಮ ಕುಟುಂಬದ ಒಬ್ಬ ಸದಸ್ಯ" ಇಷ್ಟು ಹೇಳಿದ ಕೂಡಲೆ ಜನರು ಹುಚ್ಚೆದ್ದು ಕುಣಿದರು. "ಶ್ರೀನಿವಾಸ ರಾಯರಿಗೆ ಜೈ" ಎಂದು ಘೋಷಣೆ ಕೂಗಿದರು. ’ಎಂಥಾ ಕಾಳಜಿಯಪ್ಪ ನಮ್ಮ ಧಣಿಗೆ’ ಎಂದು ಪಟಾಕಿ ಸಿಡಿಸಿ ಸಂಭ್ರಮ ಪಟ್ಟರು.

ರಾಮಣ್ಣ ಇವೆಲ್ಲ ನೋಡುತ್ತ ಹೊರಗೆ ಮೂಕನಾಗಿ ನಿಂತಿದ್ದ. ಇಷ್ಟು ಜನರ ಮುಂದೆ ತಾನು ಹೋಗಿ ಹೇಗೆ ಅವರನ್ನು ಮಾತನಾಡಿಸುವುದೆಂದು ಅಂಜುತ್ತ ಸಭಾಂಗಣದ ವೇದಿಕೆ ಬಳಿ ಬಂದ. ಕಾರ್ಯಕ್ರಮ ಮುಗಿಯಿತು.

ಶ್ರೀನಿವಾಸರಾಯರು ತಮ್ಮ ಬೆಂಬಲಿಗರೊಂದಿಗೆ ಹೊರಡುತ್ತಿರುವಾಗ ರಾಮಣ್ಣನನ್ನು ನೋಡಿ ನಿಂತರು. ’ಏನು ರಾಮಣ್ಣ ಹೊರಗೆ ನಿಂತಿದ್ದಿಯ. ನಿನ್ನಂಥ ನಿಷ್ಟಾವಂತ, ಪ್ರಾಮಾಣಿಕ ಕಾರ್ಯಕರ್ತ ಹೀಗೆ ಹೊರಗೆ ನಿಂತು ಬಿಟ್ಟರೆ ಹೇಗಪ್ಪ? " ಎಂದು ಹೆಗಲ ಮೇಲೆ ಕೈ ಹಾಕಿದರು.

ರಾಮಣ್ಣ ಕರಗಿ ಹೋದ. ಹೇಳಲಿಕ್ಕೆ ಮಾತೇ ಹೊರಗೆ ಬರಲಿಲ್ಲ. ಕಣ್ಣುಗಳಲ್ಲಿ ಆನಂದದ ನೀರು ತುಂಬಿಕೊಂಡಿತ್ತು. ಸಾವಿರಾರು ಜನರ ಮುಂದೆ ತನ್ನ ಸಾಹೇಬರು ಇಷ್ಟೋಂದು ಆತ್ಮೀಯವಾಗಿ ಮಾತನಡುತ್ತಿದ್ದಾರೆಂದರೆ..... ಬದುಕು ಸಾರ್ಥಕವೆನ್ನಿಸಿತ್ತು. ಅವನ ನಾಲಿಗೆ ಒಣಗಿ ಹೋಯಿತು. ಆದರೂ ತೊದಲುತ್ತಾ ’ಸಾರ್ ಹೋದ್ಲಾರಿ ಬೋರ್ವೆಲ್ ಮಾಡಿಸಿಕೊಡ್ತೀನಿ ಅಂದಿದ್ದೀರಿ. ಈ ಸಾರಿಯಾದರೂ......’ "ಓ ಕ್ಷಮಿಸು ರಾಮಣ್ಣ. ಈ ಕಚಡ ರಾಜಕಾರಣದಲ್ಲಿ ಒಳ್ಳೆ ಕೆಲಸ ಮಾಡಲಿಕ್ಕೂ ಜನ ಬಿಡೋಲ್ಲ. ಈ ಸಾರಿ ನಿನ್ನ ಕೆಲಸ ಆಯಿತು ಬಿಡು. ನಾನು ಮಾಡುವ ಮೊದಲ ಕೆಲಸ ನಿನ್ನದೆ" ಎಂದು ಮನವಿಪತ್ರ ತೆಗೆದುಕೊಂಡು ಫೈಲ್ ಗೆ ತುರುಕಿದರು. ರಾಮಣ್ಣನಿಗೆ ನೀರು ಹಳ್ಳಿಗೆ ಬಂದಷ್ಟು ಖುಷಿಯೋ ಖುಷಿ.

ಕಾರಿನಲ್ಲಿ ರಾಯರು ಟಾಟ ಮಾಡಿ ಹೋದರು.

ರಾಮಣ್ಣನ ಅಂತರಾಳ ತುಂಬಿ ಬಂತು. ಎಂಥ ಮನುಷ್ಯನಪ್ಪ ನೀನು, ದೇವರು ಅಂತ ಮನಸ್ಸಿನಲ್ಲಿ ಲೊಚಗುಟ್ಟಿಕೊಂಡ.

ತಿಂಗಳಾಯಿತು.
ವರ್ಷವಯಿತು.
ಎಂ.ಎಲ್.ಎ.ಸಾಹೇಬರ ಭರವಸೆ ಹಾಗೆ ಉಳಿಯಿತು.

ಐದು ವರ್ಷಗಳು ಕಳೆದು ಮತ್ತೆ ಚುನಾವಣೆ ಬಂದೇ ಬಿಟ್ಟಿತು. ಬಡವರಿಗೆ ಹಾಳು ರಾಜಕೀಯ ಜನಗಳ ಸಹವಾಸವೇ ಬೇಡ. ಒಪ್ಪತ್ತಿನ ಗಂಜಿ ಕುಡಿದ್ಕೊಂಡು ನೆಮ್ಮದಿಯಾಗಿ ಬಾಳುವೆ ಮಾಡುವೆ ಎಂದು ರಾಮಣ್ಣ ಪಕ್ಷದ ಕಡೆ ತಿರುಗಿಯೂ ನೋಡಲಿಲ್ಲ. ಶ್ರೀನಿವಾಸರಾಯರು ಖುದ್ದು ರಾಮಣ್ಣನ ಮನೆಗೆ ಬಂದರು. ಗುಡಿಸಲಲ್ಲಿ ಚಕ್ಕಲುಬಕ್ಕಲು ಹಾಕಿ ಕೂತು ಗುಟುಕು ಕಾಫಿ ಕುಡಿದರು. ರಾಮಣ್ಣನ ಹೆಗಲ ಮೇಲೆ ಕೈ ಹಾಕಿ ಫೋಟೋ ತೆಗೆಸಿಕೊಂಡರು. ಇಷ್ಟು ಸಾಕಾಯಿತು. ರಾಮಣ್ಣನ ಮನಸ್ಸು ಕೊಳ್ಳೆ ಹೊಡೆಯಲು.

"ಏನಾದರೂ ನಾಲ್ಕು ಒಳ್ಲೆ ಕೆಲಸ ಮಾಡೋಣವೆಂದರೆ ಆ ಹಾಳು ಡೆಲ್ಲಿ ಜನ ಬಿಡುವುದೇ ಇಲ್ಲ. ಏನಾದರೂ ಉಪಟಳ ಕೊಡುತ್ತಲೇ ಇರುತ್ತಾರೆ. ಈ ಸಾರಿ ಅದು ಏನಾಗುತ್ತೋ ಆಗಿ ಬಿಡಲಿ ನಿಮ್ಮೂರಿಗೆ ಬೋರ್ ವೆಲ್ ಕೊರೆಸಿ ಬಿಡೋಣ" ಎಂದು ಮುದ್ದುಮುದ್ದಾಗಿ ಶ್ರೀನಿವಾಸರಾಯರು ತಮ್ಮ ಖಾಸಗಿತನವನ್ನು ಹೇಳಿಕೊಂಡರು.

ರಾಮಣ್ಣ ಪಾಪ ದೊಡ್ಡವರಿಗೂ ಇಷ್ಟೆಲ್ಲಾ ರಗಳೆಗಳು ಇರುತ್ತವೆಯೇ ಎಂದು ಯೋಚಿಸಿದ. ಮತ್ತೆ ಗೆಲುವಿಗಾಗಿ ಟೊಂಕಕಟ್ಟಿನಿಂತ. ಬೆವರು ಹರಿಸಿದ. ರಾಯರ ಪರವಾಗಿ ಅವರಿವರ ಓಟುಗಳನ್ನು ಬೇಡಿದ.

ಫಲಿತಾಂಶ ಬಂತು.
ರಾಯರಿಗೆ ಮತ್ತೆ ಭರ್ಜರಿ ಜಯ.

ರಾಮಣ್ಣ ಹಿರಿ ಹಿರಿ ಹಿಗ್ಗಿದ. ತಾನೇ ಗೆದ್ದಷ್ಟು ಸಂಭ್ರಮವಾಯಿತು. ಅವನು ಸೀದಾ ತಲೂಕು ಆಫೀಸ್ ಬಳಿ ಬಂದ. ತನ್ನೂರಿಗೊಂದು ಬೋರ್ ವೆಲ್ ಬೇಕೆಂದು ಮನವಿ ಪತ್ರ ಟೈಪ್ ಮಾಡಿಸಿ ಕೊಂಡು ಪಕ್ಷದ ಕಚೇರಿಯ ಸಭಾಂಗಣಕ್ಕೆ ಬಂದ.

ಆಗ.......(ಮತ್ತೆ ಮೊದಲಿನಿಂದ ಓದಿ)

ಸಿ.ಎಸ್.ನಿರ್ವಾಣ ಸಿದ್ಧಯ್ಯ.

ಲೇಖಕರು

ಯೋಗೇಶ್

ನಿನಗೇಳದ ಮಾತೊಂದು ಮನದ(ನ)ಲ್ಲೆ ಉಳಿದಿದೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.