ಪ್ರತಿಜ್ಞೆ
ಕಾಡಿನ ಲೋಕದ ಆಲದ ಮರದಡಿ
ಪ್ರಾಣಿಗಳೆಲ್ಲ ಸೇರಿದವು |
ತಮ್ಮಯ ತೊಂದರೆ ಪಟ್ಟಿಯನೆಲ್ಲ
ಸಿಂಹದ ಮುಂದೆ ಹೇಳಿದವು ||೧||
ಕುಡಿಯಲು ನೀರು ಸಿಗುತಿಲ್ಲ
ಬತ್ತುತಿವೆ ಹಳ್ಳಕೊಳ್ಳಗಳೆಲ್ಲ |
ತಿನ್ನಲು ಹಣ್ಣು ಹಂಪಲವಿಲ್ಲ
ಗೆಡ್ಡೆ ಗೆಣಸುಗಳು ಸಾಲುತಿಲ್ಲ ||೨||
ಮರಗಳ ಕಡಿದು ಕಾಡೆ ಮಾಯ
ಆದರೆ ನಾವು ಬದುಕೋದೆಲ್ಲಿ |
ಬೇಟೆಗಾರರ ಹಾವಳಿಯಿಂದ
ಜೀವಭಯವಿದೆ ನಮಗಿಲ್ಲಿ ||೩||
ಕಾಡಿನ ರಾಜ ಎಲ್ಲವ ಕೇಳಿ
ಎಲ್ಲರ ಜೊತೆಗೆ ಚರ್ಚಿಸಿದ |
ಒಬ್ಬೊಬ್ಬರ ಮಾತು ಎಲ್ಲವ ಸೇರಿಸಿ
ತಕ್ಷಣ (ಪರಿಹಾರಕೆ) ದಾರಿ ಹುಡುಕಿದ ||೪||
ಹೊರಗಿನ ಯಾರೇ ಬಂದರೆ ಕೂಡಲೇ
ಎಲ್ಲರಿಗೆ ಎಚ್ಚರಿಕೆ ಕೊಡೋಣ |
ನಮ್ಮ ನಡುವಿನ ವೈರವ ಬಿಟ್ಟು
ಪ್ರೀತಿ ಸಹನೆಯಲಿ ಬಾಳೋಣ||೫||
ನಮ್ಮಯ ಅಳುವಿನ ಉಳುವಿಗೆ ನಾವು
ಮರಗಿಡಗಳನು ಬೆಳೆಸೋಣ |
ಮುಚ್ಚಿದ ತೊರೆಗಳ ಸ್ವಚ್ಛಮಾಡಿ
ಅಲ್ಲಲ್ಲಿ ಕಟ್ಟೆಯ ಕಟ್ಟೋಣ||೬||
ಕಾಡಿನ ರಾಜನ ಮಾತಿಗೆ ಒಪ್ಪಿ
ಎಲ್ಲವೂ ಪ್ರತಿಜ್ಞೆ ಮಾಡಿದವು |
ಅರಣ್ಯ ಉಳಿಸಿ ಪರಿಸರ ಬೆಳೆಸಿ
ಒಕ್ಕೂರಲಿ ಕೂಗಿ ಹೇಳಿದವು ||೭||
ಗಿಡಗಳಾ ಬೆಳೆಸಿ ನೀರನು ಕಟ್ಟಲು
ಆಗಲೇ ಜೊತೆಗೆ ಹೊರಟವು|
ಒಗ್ಗಟ್ಟಲಿ ಬಲವಿದೆ ಗೆಲುವಿದೆ
ಎಂಬುದ ಸಾರಿ ಹೇಳಿದವು ||೮||
ರಚನೆ: ಡಾ.ಪ್ರಭು ಅ ಗಂಜಿಹಾಳ
ಮೊ:೯೪೪೮೭೭೫೩೪೬
ಸಾಲುಗಳು
- 54 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ