ಮೂಢ ನಂಬಿಕೆ
ಬೆಕ್ಕು ಅಡ್ಡ ಹೋದರೆ ಏಕೆ
ನಿಲ್ಲುವೆ ನೀನು ತಮ್ಮಣ್ಣ|
ನರಿಯ ಮುಖವ ನೋಡಿದರೆ
ಒಳ್ಳೆಯದಾಯ್ತೆ ಕಣಣ್ಣ||೧||
ಮಾತಿನ ವೇಳೆ ಹಲ್ಲಿ ಲೊಚಗುಟ್ಟಲು
ತಾಳೆ ಹಾಕುವ ಜನರಲ್ಲಿ|
ಒಂದು ಸೀನಿಗೆ ಅಪಶಕುನವೆಂದರೆ
ಎರಡು ಸೀತರೆ ಶುಭವಲ್ಲಿ||೨||
ಬಾಲಗೆ ಬಲಗಣ್ಣು ಹಾರಿದರೆ
ಒಳ್ಳೆಯದೆನ್ನುವ ಈ ಜನರು|
ನಾರಿಗೆ ಬಲಕಣ್ಣು ಹಾರಲು
ಕೆಟ್ಟದ್ದಾಗುವದೆನ್ನುವರು||೩||
ಒಳ್ಳೆಯ ಕೆಲಸಕೆ ಹೋಗುವ ವೇಳೆ
ವಿಧವೆ ಎದುರಿಗೆ ಬರಬಾರದು|
ನೀರು ಹೊತ್ತವರು ಎದುರಲಿ ಬಂದರೆ
ಕಾರ್ಯಕೈಗೂಡುತೆಂಬರು||೪||
ಪಾಡ್ಯದ ದಿನದಲಿ ಒಳ್ಳೆಯದಾಗಲು
ರತ್ನಪಕ್ಷಿಯ ಹುಡುಕುವರು|
ಮುಂಗಲಿ ನೋಡಲು ಸಾಕು
ದಿನವಿಡಿ ಶುಭವೆನ್ನುವರು||೫||
ಕಾಗೆ ಹೊಕ್ಕಮನೆ ಹಾಳೆನ್ನುವರು
ಕಾಗೆಗೆ ಪಿಂಡವ ಕೊಡುವವರು ಇವರು|
ಗೂಗೆಯ ಕೂಗಿಗೆ ಸಾವನು ಎಣಿಸುವ
ಮೂರ್ಖರು ನಾವು ಮನುಜರು||೬||
ಹೊಟ್ಟೆಪಾಡಿಗೆ ಜ್ಯೋತಿಷ್ಯ ಹೇಳುವ
ಗಿಳಿಯ ಭವಿಷ್ಯ ನಂಬಬೇಕೆ?|
ಆಯವ್ಯಯಗಳ ಲೆಖ್ಖಗಳಲ್ಲೆ
ವಾಸ್ತುಶಾಸ್ತ್ರದ ಭಯವೇಕೆ?||೭||
ಮಾಟಮಂತ್ರ ತಂತ್ರಗಳೆಲ್ಲ
ದೆವ್ವಭೂತಗಳ ಬಿಟ್ಟು ಬಾ|
ಪವಾಡಗಳಾ ಹೆಸರಲಿ ನಡೆಯುವ
ಡೊಂಗಿಗಳ ಬಯಲಿಗೆ ತಾ||೮||
ಮೌಢ್ಯವ ಬಿಟ್ಟು ವಿಜ್ಞಾನವ
ಅರಿಯೋ ನೀನು ಅಣ್ಣಯ್ಯ |
ಮಂಗಳ ಲೋಕಕೆ ಕಾಲಿಟ್ಟರೂ
ಬುದ್ದಿಗೆ ಏನು ಮಂಕಯ್ಯ||೯||
*ರಚನೆ:ಡಾ.ಪ್ರಭು ಅ ಗಂಜಿಹಾಳ
ಮೊ:೯೪೪೮೭೭೫೩೪೬
ಸಾಲುಗಳು
- 19 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ