ಮಿತ್ತೊಟ್ಟು ಪ್ರೌಢಶಾಲೆ
॥ಮಿತ್ತೊಟ್ಟು ಪ್ರೌಢಶಾಲೆ॥
"ಏನೂ!? ಲವ್ವಾ? ಛೀ ಛೀ ಏನ್ರೀ ಇದೆಲ್ಲಾ?!" ಗುಲಾಬಿ ಮುಖ ಸಿಂಡರಿಸುತ್ತಾ ನುಡಿದಾಗ ತನ್ನ ಕೋಣೆಯೊಳಗಡೆ ಇವರ ಮಾತನ್ನು ಕದ್ದಾಲಿಸುತ್ತಿದ್ದ ಅಮಿತ್ ಪರಮಾಶ್ಚರ್ಯಭರಿತನಾಗಿ ಅತ್ತಿಗೆಯ ಆಗಿನ ಸೊಟ್ಟ ಮೋರೆಯ ಅಂದ ಕಾಣಲೆಂದು ಬಾಗಿಲು ಕೊಂಚ ತೆರೆದು ಇಣುಕಿದ..
"ನೋಡ್ರೀ, ಇದು ನಿಮ್ಮ ಅಮ್ಮ ಅಪ್ಪನಂಥಾ ಸಾತ್ವಿಕರು ಬಾಳಿ ಬದುಕಿದ ಮನೆ. ನಿತ್ಯ ಅರ್ಚಣೆ ಪೂಜೆ ಅಂತ ನಡೆಯುತ್ತಿರುವ ಜಾಗವಿದು. ಇನ್ನೊಂದು ಸಲ ಅಂತಾ ಅಪಶಬ್ಧ ಇಲ್ಲಿ ಉಚ್ಚರಿಸಬೇಡಿ" ಹಾಗೆಂದ ಗುಲಾಬಿ ತಕ್ಷಣವೇ ದನದ ಕೊಟ್ಟಿಗೆಗೆ ನುಗ್ಗಿದಳು. ಸತಿಯ ಈ ಪರಿಯ ಒರಟಿಗೆ ಕೊಂಚ ಬೇಜಾರಾದರೂ ಮನದಲ್ಲೇ ಅರೆಕ್ಷಣ ಬೀಗಿದ ಮನೋಹರ. ಇನ್ನವಳು ದನದ ಸೆಗಣಿ ಕಲಸಿ ಪ್ರೋಕ್ಷಿಸಿಕೊಂಡು ಮಿಂದೇ ಒಳಬರುವುದು.
ಅದೇಕೋ ಗೊತ್ತಿಲ್ಲ. ಪ್ರೀತಿ ಪ್ರೇಮ ಕಾಮ ಎಂಬ ಶಬ್ಧ ಕಿವಿಗೆ ಬಿದ್ದರೇನೇ ವಿಪರೀತ ವರ್ತಿಸುತ್ತಾಳೆ ಗುಲಾಬಿ. ಮಾವ ಅತ್ತೆಗೆ ತಕ್ಕ ಸೊಸೆಯಾಗಿ ಗಂಡನ ಪಾಲಿನ ಭಾಗ್ಯದೊಡವೆಯಾಗಿ ಈ ಮಹಾ ಮನೆಯ ಅತಿಶ್ರೇಷ್ಠ ಹೆಣ್ಣೆಂಬ ಗೌರವಕ್ಕೆ ಪಾತ್ರಳಾಗಿದ್ದಾಳೆ ಗುಲಾಬಿ.
..............................
"ಅತ್ತಿಗೇ" ಅಮಿತ್ನ ಧ್ವನಿ ಕೇಳಿ 'ಏನು' ಎಂಬಂತೆ ತಿರುಗಿ ನೋಡಿದಳು ಗುಲಾಬಿ. ಅವಳು ಹೂವಿನ ಗಿಡಗಳ ಆರೈಕೆಯ ಮೇಲ್ವಿಚಾರಣೆಯಲ್ಲಿ ನಿರತಳಾಗಿದ್ದಳು.
"ಅತ್ತಿಗೇ ನಾನೊಂದು ಹೆಣ್ಣನ್ನು ಪ್ರೀತಿಸುತ್ತಿದ್ದೇನೆ"
"ಥೂ! ಅಸಹ್ಯ! ಅದೇನೂಂತ ಮಾತಾಡ್ತಿಯಾ?"
"ಅತ್ತಿಗೇ, ಅಪ್ಪ ಅಮ್ಮ ಇದಕ್ಕೆ ಒಪ್ಪಲ್ಲಾಂತ ಗೊತ್ತು. ಅವರನ್ನು ಒಪ್ಪಿಸುವ ಭಾರ ನಿಮ್ಮದು"
"ಸೂರ್ಯ ಚಂದ್ರರು ತಮ್ಮ ಪಥವನ್ನೇ ಬದಲಿಸಿದರೂ ನಾನು ಇದಕ್ಕೆ ಒಪ್ಪಲಾರೆ"
"ಇಷ್ಟು ಸಣ್ಣ ಕೆಲಸಕ್ಕೆ ಸೂರ್ಯ ಚಂದ್ರರು ಯಾಕೆ ಬರುತ್ತಾರತ್ತಿಗೆ? ಅತ್ತಿಗೆ! ಅದೇಕೆ ಲವ್ ಎಂದ ಒಡನೆಯೇ ಮುಖ ಸಿಂಡರಿಸುತ್ತೀರಿ? ಭಾಸ್ಕರನ ಕೊನೆಯ ತಮ್ಮ ರಘು ನನ್ನ ಕ್ಲಾಸ್ಮೇಟ್"
"ಯಾವ ಭಾಸ್ಕರ!!" ಗುಲಾಬಿ ಸರ್ರನೆ ತಲೆಯೆತ್ತಿ ಕೇಳಿದಳು.
"ಇದೇನತ್ತಿಗೆ ಹಿಂಗಂತೀರೀ? ನಿಮ್ಮ ಹಿರಿಯಕ್ಕನ ಊರವನೇ ಭಾಸ್ಕರ, ಅದೇ ಅತ್ತಿಗೆ 'ಮಿತ್ತೊಟ್ಟು ಪ್ರೌಢಶಾಲೆ'ಯ ಹತ್ತನೇ ತರಗತಿಯ ಭಾಸ್ಕರ.. ಅವನ ತಮ್ಮ ನನ್ನ ಕ್ಲಾಸ್ಮೇಟ್ ಮಾತ್ರವಲ್ಲ ಕ್ಲೋಸ್ ಫ್ರೆಂಡ್ ಕೂಡಾ, ಅವನು ನನಗೆ ಸುಮಾರು ಇಪ್ಪತ್ತು ಪತ್ರಗಳನ್ನು ಕೊಟ್ಟಿದ್ದಾನೆ. ಇದೆಲ್ಲಾ ನಿಮ್ಮ ಮದುವೆಗೆ ಮುಂಚೆಯೇ ನಂಗೆ ಗೊತ್ತಿತ್ತು. ಆದರೂ ನಿಮ್ಮ ಲಗ್ನಕ್ಕೆ ಅಡ್ಡ ಬಂದೆನಾ ನಾನು? ಪ್ರೀತಿ ಎಂಬ ಶಬ್ಧ ಕಿವಿಗೆ ಬಿದ್ದೊಡನೆ ಆಕಳ ಸೆಗಣಿ ಸಿಂಪಡಿಸಿಕೊಳ್ಳುತ್ತೀರಲ್ಲಾ? ಯಾರಿಗಾಗಿ ಈ ಡ್ರಾಮಾ? ನಾನಾಕೆಗೆ ಮಾತು ಕೊಟ್ಟಾಗಿದೆ. ಈಗ ಅಪ್ಪ ಅಮ್ಮನನ್ನು ಒಪ್ಪಿಸುವ ಜವಾಬ್ದಾರಿ ನಿಮ್ಮದು" ಅಷ್ಟಂದ ಅಮಿತ್ ತಿರುಗಿಯೂ ನೋಡದೆ ಮನೆ ಒಳಗೆ ನಡೆದುಬಿಟ್ಟ...
ಸಾಲುಗಳು
- 24 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ