Skip to main content
ಹೊಡೆದಾಟ

ನಾ ಮಾಡಿದ್ದು ತಪ್ಪಾ...?

ಸತ್ಯ ಘಟನೆ ಸ್ವಲ್ಪ ಸಮಯ ಕೊಟ್ಟು ಓದಿ ಪ್ಲೀಸ್
ಬರೆದಿದ್ದುNovember 13, 2016
1ಅನಿಸಿಕೆ

ತ್ಯ ಘಟನೆ ಸ್ವಲ್ಪ ಸಮಯ ಕೊಟ್ಟು ಓದಿ ಪ್ಲೀಸ್.2015 ರ ನವೆಂಬರ್ ತಿಂಗಳಿನಲ್ಲಿ ನಾನು ಶಿವಮೊಗ್ಗದ ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. ಆ ಕಂಪನಿಯ ಪಕ್ಕದಲ್ಲೇ ಒಂದು ಚಿಕ್ಕ ಹೋಟೆಲ್ ಇತ್ತು, ಮಧ್ಯಾಹ್ನದ ಊಟಕ್ಕೆ ಅಲ್ಲಿಗೆ ಹೋಗುತ್ತಿದ್ದೆ, ಅಲ್ಲಿನ ಸಪ್ಲೇಯರ್ ಬಾಬಣ್ಣ(ಮೂಲ ಹೆಸರು ಬದಲಾಗಿದೆ) ನನ್ನೊಂದಿಗೆ ತುಂಬಾ ಹತ್ತಿರವಾದ.ಪಾಪ ಬಾಬಣ್ಣ ಸ್ವಲ್ಪ ಅಂಗವಿಕಲ ಕೈಗಳಲ್ಲಿ ಸ್ವಲ್ಪ ಮಟ್ಟಿನ ವೈಫಲ್ಯತೆ ಇತ್ತಷ್ಟೆ. ಆದರೆ ಕೆಲಸದಲ್ಲಿ ತುಂಬಾ ಜೋರಾಗಿದ್ದ.ಆ ಅಣ್ಣ ನನ್ನನ್ನು ವಿನಿ ಅಂತ ಕರೀತಾ ಇದ್ದ.ತುಂಬಾ ಖುಷಿಯಿಂದ ಅದಿಷ್ಟು ಕಾಲ ಕಳೀತಾ ಇದ್ದೆ.

ನಾನು. ಅದೊಂದು ದಿನ ಒಬ್ಬ ದೊಡ್ಡ ವ್ಯಕ್ತಿ ಊಟಕ್ಕೆ ಬಂದಿದ್ದ. ಅವರಿಗೆ ಊಟ ಸಪ್ಲೆ ಮಾಡಿ ಬಂದು ನನ್ನ ಕಡೆ ತಿರುಗಿ ಏನೊ ವಿನಿ ಏನ್ ತರ್ಲಿ ಅಂದ. ನಾನು ಒಂದ್ ಊಟ ಅಂದೆ. ಅಷ್ಟರಲ್ಲಿ ಆ ದೊಡ್ಡ ವ್ಯಕ್ತಿಯ ಮುಂದಿನ ಸೀಟಿನಲ್ಲಿ ಅದಾಗಲೇ ಕುಳಿತಿದ್ದ ವ್ಯಕ್ತಿಯು ಜಾಗ ಖಾಲಿಮಾಡಿ ಹೊರತಾದ ಎಂಜಲು ಟೇಬಲನ್ನು ಕ್ಲೀನ್ ಮಾಡುವಂತೆ ಮ್ಯಾನೇಜರ್ ಆದೇಶಿಸಿದ.ಬಾಬಣ್ಣ ಕೂಡಲೇ ಅಲ್ಲಿಗೆ ಹೋಗಿ ಕ್ಲೀನ್ ಮಾಡುವಾಗ ಸ್ವಲ್ಪ ಯಾಮಾರಿ ಕೈ ಜಾರಿ ಆ ಧುರೀಣನ ಶರ್ಟ್ ಗೆ ಎಂಜಲು ತಾಗಿತು.ತುಂಬಾ ಕುಪಿತಗೊಂಡ ಆತ ಇವನೊಬ್ಬ ಕೈಲಾಗದವ ಎಂದೂ ಯೋಚಿಸದೆ ಅಂಗವಿಕಲ ಎಂಬ ಕರುಣೆಯೂ ಇಲ್ಲದೆ ಬೂಟುಗಾಲಿನಿಂದ ಒದ್ದು ಹೊಡೆಯತೊಡಗಿದ.

ಆ ಹೋಟೆಲ್ ನ ಮ್ಯಾನೇಜರ್ ಇರಲಿ,ಅವನೊಟ್ಟಿಗೆ ಕೆಲಸ ಮಾಡುವ ಯಾರೊಬ್ಬರೂ ಅವನ ಸಹಾಯಕ್ಕೆ ಹೋಗಲಿಲ್ಲ.ಆದರೆ ನನ್ನ ಮನಸ್ಸು ತಡೆಯಲಿಲ್ಲ. ಹೋಗಿ ತಡೆದೆ,ಬಿಡ್ರಿ ಅವನನ್ನ ಏನೋ ತಪ್ಪಾಗಿದೆ.ಅವನೊಬ್ಬ ಅಂಗವಿಕಲ ಅಂತ ಗೊತ್ತಿದ್ದು ಅವನಿಗೆ ಆ ತರ ಹೊಡಿತೀರಲ್ಲ, ಎಂದಿದ್ದೇ ತಡ, ಶುರುವಾಯಿತು ಅವನಿಗೂ ನನಗೂ ಮಾತಿನ ಪೈಪೋಟಿ. ಅಲ್ಲಪಾ ನಾನು ಅವನಿಗೆ ಹೊಡೆದ್ರೆ ನಿಂಗೇನ್ ಕಷ್ಟ ಮುಚ್ಕೊಂಡ್ ಹೋಗು ಎಂದ.ನಾನು ತಾಳ್ಮೆಯಿಂದಲೇ ಹೇಳಿದೆ. ಸರ್ ನೀವು ತಿಳಿದೋರು ನೀವೆ ಹೀಗ್ ಮಾಡಿದ್ರೆ ಹೆಂಗೆ ಎಂದೆ.ಅದಕ್ಕೆ ಅವನು ಅಲ್ಲಪಾ ಅಷ್ಟಿದ್ರೆ ಈ ಕೆಲ್ಸಕ್ಕೆ ಯಾಕೆ ಬರ್ಬೇಕು ಎಲ್ಲಾದ್ರೂ ಬಿಕ್ಷೆ ಬೇಡಿದ್ರೆ ಆಗಲ್ವೇನು,ಸಾಯ್ಲಿ ಬಿಡಿ ನನ್ ಮಗಾ ಅಂತ ಹೇಳಿದ.

ಆಗ ನಾನು ಸರ್ ಅವನು ಕಷ್ಟಪಟ್ಟು ದುಡಿದು ಸಂಪಾದನೆ ಮಾಡ್ತಾ ಇದಾನೆ,ಅವನ ಹೊಟ್ಟೆಮೇಲೆ ಹೊಡಿಯೋ ಪ್ರಯತ್ನ ಮಾಡ್ಬೇಡಿ ಸರ್,ಆತನ ಪರವಾಗಿ ನಾನು ನಿಮ್ಗೆ ಕ್ಷಮೆ ಕೇಳ್ತೀನಿ, ಅಂಗವಿಕಲ ಅಂದ ಮಾತ್ರಕ್ಕೆ ಬಿಕ್ಷೆ ಬೇಡ್ಬೇಕಾ ಸರ್ ಎಂದು ತಿಳಿಹೇಳಲು ಪ್ರಯತ್ನಿಸಿದೆ.ಆಗ ಆತ ನಿನ್ ಹೆಸರೇನು-ವಿನಾಯಕ ಸರ್,ನಿನ್ ಊರು-ಸೊರಬ ತಾಲೂಕಿನ ಒಂದು ಹಳ್ಳಿ ಹೊರಬೈಲು ಅಂತ,ಯಾಕೆ ಸರ್ ಅಂತ ಹೇಳಿದೆ. ಆಗ ಆತ ಲೇ ಮಗನೆ ನಿನ್ನು ಬಿಡಲ್ಲ ಇವನ್ನೂ ಬಿಡಲ್ಲ.ನಾನು ಯಾರು ಅಂತ ನಿಮಗಿನ್ನೂ ಗೊತ್ತಿಲ್ಲ ಅನ್ಸತ್ತೆ.ಅದಿಕ್ಕೆ ಈ ಹೋಟೆಲ್ ಮ್ಯಾನೇಜರ್, ಓನರ್,ಅಷ್ಟೇ ಯಾಕೆ ಇಲ್ಲಿರೋ ಯಾರೊಬ್ಬರೂ ಸಹ ನನ್ನ ತಡಿಯೋ ಪ್ರಯತ್ನ ಮಾಡಿಲ್ಲ. ನಾನು ಒಬ್ಬ ಮಿನಿಸ್ಟರ್ ಹೆಸರು ಹೇಳಿ ಅವರ ಅಸಿಸ್ಟೆಂಟ್, ಜೊತೆಗೆ ಲಾಯರ್ಕೂಡ ಹೌದು ಎಂದು ಹೊರಟು ಕಾರಿನ ಬಳಿ ಹೊರಟ.

ನನಗೆ ಒಳಗೊಳಗೆ ಭಯ ಶುರುವಾದರೂ ಸಹ ಧೈರ್ಯವಾಗಿಯೇ ಉತ್ತರಿಸಿದೆ.ನೋಡಿ ಸರ್ ನೀವ್ ಲಾಯರ್ ಆದ್ರೆ ಏನು,ಜಡ್ಜ್ ಆದ್ರೆ ಏನು,ಕಾನೂನು ಎಲ್ಲರಿಗೂ ಒಂದೆ.ನನ್ನ-ನಿಮ್ಮ ಮ್ಯಾಟ್ರಲ್ಲಿ ಮನೆಯವರನ್ನ ತರ್ಬೇಡಿ ಅಷ್ಟೆ ಅಂದೆ.ಸತ್ಯ ಏನು ಅಂತ ಇಲ್ಲಿರೊ ಎಲ್ಲರಿಗೂ ಗೊತ್ತು. ಇವರಲ್ಲಿ ಯಾರೇ ನಿಮ್ಗೆ ಸಫೋರ್ಟ್ ಮಾಡಿದ್ರು ಅವ್ರು ನಿಮ್ ಚೇಲಾಗಳೇ ಆಗಿರ್ತಾರೆ ಬಿಡಿ ಸರ್.ಎಂದು ಹೇಳಿ ಬಾಬಣ್ಣನ ಮೂಗಿನಿಂದ ಬರ್ತಾ ಇದ್ದ ರಕ್ತವನ್ನು ನನ್ನ ಕರ್ಚೀಪಿನಿಂದ ಒರೆಸುತ್ತಾ ಏನಣ್ಣಾ ನಿಮ್ ಹೋಟೆಲ್ನಲ್ಲಿ ಯಾರೂ ನಿಮ್ ಪರ ಇಲ್ವಲ್ಲಾ... ಅಂದೆ. ಆಗ ಬಾಬಣ್ಣನ ಕಣ್ಢಲ್ಲಿ ನೀರು ತುಂಬಿ.. ಬಹಳ.ದುಖಃದಲ್ಲಿ ಹೇಳಿದ- ವಿನಿ,,ನನ್ ಅಂಗವಿಕಲತೆನೆ ನಂಗೆ ಶತ್ರು ಆಗೋಯ್ತು ಕಣೊ.ಹತ್ತು ವರ್ಷದಿಂದ ಇದೇ ಹೋಟೆಲಿನಲ್ಲಿ ಕೆಲ್ಸ ಮಾಡ್ತಾ ಇದೀನಿ ಆದ್ರೆ ಈ ತರ ಎಂದೂ ಆಗಿಲ್ವೊ.ಆತ ತುಂಬಾ ದೊಡ್ಡ ಮನುಷ್ಯ..

ಒಂದೆರಡು ದಿನ ನೀನು ಯಾವುದಕ್ಕೂ ನಿಮ್ಮೂರಿಗೆ ಹೋಗು. ಆ ಮೇಲೆ ನಾನು ಫೋನ್ ಮಾಡಿದ್ ಮೇಲೆ ಬರುವಂತೆ ಎಂದ.ಅವನ ಮಾತಿನಂತೆ ಮನೆಗೆ ಬಂದು2-3ದಿನ ಕಳೆದ ಮೇಲೆ ಅವನೇ ಕಾಲ್ ಮಾಡಿ ಹೇಳಿದ ಏನೂ ತೊಂದರೆ ಇಲ್ಲ ಬಾ ಎಂದ.ಸರಿ ಅಂತ ಹೋಗಿ ಮತ್ತೆ ಕೆಲಸಕ್ಕೆ ಜಾಯಿನ್ ಆದೆ.ಅದೆಲ್ಲಾ ಸರಿ ಹೋದ ವರ್ಷ ನವೆಂಬರ್ ಲಿ.ನಡೆದ ಘಟನೆನಾ ಈ ವರ್ಷ ನವೆಂಬರ್ ಲಿ ಯಾಕೆ ಹೇಳ್ತಾ ಇದಾನೆ ಅಂತಾನ. ಅಯ್ಯೋ ಮೊನ್ನೆ ಬಾಬಣ್ಣ ಮೊನ್ನೆ ಅಕ್ಟೋಬರ್ 30ಕ್ಕೆ ಫೋನ್ ಮಾಡಿದ್ದ ಕಣ್ರೀ ಅವನಿಗೆ ಹೊಡೆದು ಬೂಟುಗಾಲಿನಿಂದ ಒದ್ದಿದ್ದ ಆ ದೊಡ್ಡ ಮನುಷ್ಯ ಕಾರ್ ಆಕ್ಸಿಡೆಂಟ್ ಆಗಿ ಒಂದು ಕೈ ಒಂದು ಕಾಲು ಮುರಿದು ಹೋಯ್ತಂತೆ ಅಂತ ತುಂಬಾ ಖುಷಿಯಿಂದ ಹೇಳಿದ.ಹೀಗೆ ತಪ್ಪು ಮಾಡಿದ್ರೆ ಮುಂದಿನ ಜನ್ಮ ಅಲ್ಲ ಸ್ವಾಮಿ ಮುಂದಿನ ವರ್ಷವೇ ಶಿಕ್ಷೆ ಅನುಭವಿಸಿರ್ತೀವಿ.

ನನ್ನ ಮನಸ್ಸಿನಲ್ಲಿ ಇನ್ನೊಂದು ಪ್ರಶ್ನೆ ಕಾಡ್ತಾ ಇದೆ.ನಾನು ಅಲ್ಲಿ ಕೆಲಸ ಬಿಟ್ಟು ಬಂದು ತುಂಬಾ ದಿನಗಳೇ ಆದವು ಅಷ್ಟು ದಿನ ನನ್ನ ಜೊತೆ ಯಾವುದೇ ಸಂಪರ್ಕ ಇಲ್ಲದೇ ಅದೊಂದು ದಿನ ಅದೂ ಆಕ್ಸಿಡೆಂಟ್ ಆದ ದಿನ ನನ್ನನ್ನು ನೆನೆಸಿಕೊಂಡು ಕಾಲ್ ಮಾಡಿದಕ್ಕೆ ಅವನಿಗೆ ಧನ್ಯವಾದ ಹೇಳ್ಬೇಕಾ ಅಥವಾ ಇನ್ನೊಬ್ಬರ ನೋವನ್ನು ಕಂಡು ತಾನು ಖುಷಿ ಪಡುತ್ತಿರುವನ ಕಂಡು ಬೈಯ್ಯಬೇಕೊ ತಿಳಿಯಲೇ ಇಲ್ಲ. ಆದ್ರೂ ಬಾಬಣ್ಣ ನಾನು ಸ್ವಲ್ಪ ಬ್ಯುಸಿ ಇಧೀನಿ ಅಂತ ಹೇಳಿ ಕಾಲ್ ಕಟ್ ಮಡ್ಬಿಟ್ಟೆ.
ಈಗ ಹೇಳಿ ನಾನು ಮಾಡಿದ್ದು ತಪ್ಪಾ....?

ಲೇಖನದ ಬಗೆ

ಲೇಖಕರು

ವಿನಾಯಕ ಬಿ.ಟಿ

ವಿನು

ಕನ್ನಡ ಬಾಷೆ,ಸಾಹಿತ್ಯ ಪ್ರೇಮಿ.ಸಧ್ಯ ಸ.ಕಿ.ಪ್ರಾ. ಶಾಲೆ.ಹೊರಬೈಲಿನಲ್ಲಿ ಅತಿಥಿ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.

ಅನಿಸಿಕೆಗಳು

ತ್ರಿನೇತ್ರ ಮಂಗಳ, 01/03/2017 - 17:27

ಮಾನವೀಯತೆ ಇರುವ ಯಾವುದೇ ವ್ಯಕ್ತಿಯೇ ನಿಮ್ಮ ಅಥವಾ ಆ ಬಾಬಣ್ಣನ ಜಾಗದಲ್ಲಿ ಇದ್ದಿದ್ದರೆ ಇದೇ ರೀತಿ ಮಾಡುತ್ತಿದ್ದರು. ಕೇವಲ ಬಿಳಿವಸ್ತ್ರಧಾರಿಗಳಾದ ರಾಜಕಾರಣಿಗಳಾಗಲೀ ಅವರ ಚೇಲಾಗಳಿಗಾಗಲೀ ಈ ಮಾನವೀಯತೆ ಪ್ರತಿಸ್ಪಂಧನ ಎಂಬ ಪದಗಳಿಗೆ ಅರ್ಥವೇ ಗೊತ್ತಿರುವುದಿಲ್ಲ ಬದಲಾಗಿ ನಾವು ಆಡಿದ್ದೇ ಆಟ ಮಾಡಿದ್ದೇ ಮೋಜು ಎನ್ನುವ ರೀತಿಯಲ್ಲೇ ವರ್ತಿಸುವುದನ್ನು ರಕ್ತಗತ ಮಾಡಿಕೊಂಡುಬಿಟ್ಟಿರುತ್ತಾರೆ. ಸಾಮಾನ್ಯ ಜನರ ಅಥವಾ ಬಾಬಣ್ಣನಂತಾ ಕೈಲಾಗದವರ ಬಗ್ಗೆ ಸ್ವಲ್ಪವೂ ಕನಿಕರ ಅಥವಾ ಅವನು ಕೈಲಾದಷ್ಟು ಕೊಟ್ಟ ಕೆಲಸ ಮಾಡಿ ಮರ್ಯಾದೆಯಿಂದ ಬದುಕುತ್ತಿರುವುದನ್ನು ಉತ್ತೇಜಿಸಿ ಸಹಬ್ಬಾಸ್ ಹೇಳಬೇಕಿತ್ತೇ ಹೊರತು ಹೀಗೆ ಹೊಡೆದು ಬಡಿದು ಅದರಲ್ಲೂ ಅವನ ನೆರವಿಗೆ ಬಂದಂತಾ ನಿಮ್ಮಂತಾ ಸಹೃದಯೀ ವಿಧ್ಯಾವಂತರಿಗೇ ಬೆದರಿಕೆ ಹಾಕಿದ್ದು ಆ ತಲೆ ತಿರುಕನ ಮೊಟ್ಟ ಮೊದಲನೆಯ ತಪ್ಪು.  ಆ ತಪ್ಪಿಗೆ ಸರಿಯಾದ ಸಾಸ್ತಿಯಾದದ್ದು ಕಂಡು ಒಟ್ಟಿಗೇ ಆ ಕಹಿ ಘಟನೆ ನಡೆದಿದ್ದ ದಿನ ಅವನು ಅನುಭವಿಸಿದ್ದ ನೋವು ಮತ್ತು ನಿಮಗೆ ಧನ್ಯವಾದ ತಿಳಿಸುವುದಷ್ಟೇ ಅಲ್ಲದೇ ಆ ವ್ಯಕ್ತಿ ಮಾಡಿದ್ದ ಅನ್ಯಾಯಕ್ಕೆ ತಕ್ಕ ಪ್ರತಿಫಲ ಸಿಕ್ಕಿತಲ್ಲಾ ಎಂಬ ಮಾನಸಿಕ ತೃಪ್ತಿ ಯಾಗಿದೆಯೇ ಹೊರತು ಮತ್ತೇನೂ ಅಲ್ಲ ಎಂದು ಭಾವಿಸಿ ನಿಶ್ಚಿಂತೆಯಿಂದಿರಿ ಯಾವುದೇ ಮಾನಸಿಕ ದುಗುಡ ತುಮುಲಗಳು ಬೇಡ ಎನ್ದಷ್ಟೆ ಹೇಳಬಯಸುವೆ.....!   

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.