ನನ್ನವಳು
ಒಂದೇ ಹುಡುಗಿಯನ್ನು ಜೀವನಪೂರ್ತಿ ಹೇಗಪ್ಪಾ ಪ್ರೀತಿಸ್ತಾರೆ ಈ ಹುಡುಗರು? ಬೇಜಾರು ಬರೊಲ್ಲವೇ? ಎಂದು ತಲೆಕೆಡಿಸಿಕೊಳ್ಳುತ್ತಿದ್ದ ನಾನು, ಒಂದೇ ಹುಡುಗಿಯ ಬಗ್ಗೆ ಯಾವತ್ತೂ ತಲೆಕೆಡಿಸಿಕೊಂಡವನಲ್ಲ. ವಯಸ್ಸಿನಲ್ಲಿ ಕತ್ತೆ ಕೂಡ ಸುಂದರವಾಗಿ ಕಾಣುತ್ತದೆಯಂತೆ. ಅಂತಹದರಲ್ಲಿ ಹುಡುಗಿಯರು ಸುಂದರವಾಗಿ ಕಾಣಿಸದೆ ಇರುತ್ತಾರೆಯೇ? (ಅದು ಕೂಡ ಇಂತಹ ಕಾಸ್ಮೆಟಿಕ್ ಯುಗದಲ್ಲಿ) ಇಂತಹ ಸಾವಿರಾರು ಸುಂದರಿಯರಲ್ಲಿ ಒಬ್ಬಳನ್ನು ಆರಿಸಿ, ಅವಳೊಬ್ಬಳನ್ನೇ ಇಷ್ಟಪಡುವುದು ಹೇಗಪ್ಪಾ ಸಾಧ್ಯ ಎಂದು, ಸುಂದರವಾದ ಹುಡುಗಿಯರನ್ನೆಲ್ಲ ಇಷ್ಟಪಡುತ್ತಿದ್ದೆ. ಅದು ನನ್ನ ಕಣ್ಣುಗಳಿಂದ ದಾಟಿ ಹೃದಯದವರೆಗೆ ಹೋಗಲು ಎಂದಿಗೂ ಬಿಟ್ಟವನಲ್ಲ. ಕಣ್ಣು ಮತ್ತು ಹೃದಯದ ನಡುವೆ ಕನ್ನಂಬಾಡಿ ಅಣೆಕಟ್ಟನ್ನೇ ಕಟ್ಟಿಟ್ಟಿದ್ದೆ. ಯಾವತ್ತೂ ಒಂದು ಹುಡುಗಿಯನ್ನು ಇವಳೇ ನನ್ನ ಮನದರಸಿ ಎಂದು ಆರಿಸಿಕೊಳ್ಳುವ ಗೋಜಿಗೆ ಹೋಗಿರಲಿಲ್ಲ. ‘ಲವ್ವು ಬರಿ ನೋವು’ ಎಂಬ ಅನುಭವಸ್ಥರ ಮಾತಿಗೆ ಅಪ್ಪನ ಎಚ್ಚರಿಕೆಯ ಮಾತಿಗಿಂತಲೂ ಹೆಚ್ಚಿನ ಬೆಲೆ ಕೊಟ್ಟಿದ್ದೆ ಅನಿಸುತ್ತೆ.
ಹೀಗಿರುವಾಗ ಹೃದಯ ನಯನಗಳ ನಡುವಣ ಬಲಿಷ್ಟ ಅಣೆಕಟ್ಟಿನಲಿ ತೂತು ಕೊರೆದು ಹೃದಯದ ಒಳಹೊಕ್ಕಿದೆಯಲ್ಲ ಎಂತಹ ಕಿಲಾಡಿ ಹೆಣ್ಣಿರಬೇಕು ನೀನು. ನಯನದಲಿ ಸೆರೆಯಾದ ನಿನ್ನ ಸರಳ ಸೌಂದರ್ಯ, ಆ ತೂತಿನಿಂದ ಒಳನುಸುಳಿ ಹೃದಯದಲ್ಲಿ ಆವರಿಸಿಕೊಂಡು ನನ್ನ ಅಷ್ಟು ದಿನದ ನಿಯತ್ತನ್ನು ನೀರಿನಲ್ಲಿ ಹೋಮ ಮಾಡಿದಂತಾಗಿಸಿದೆ. ಆದರೆ ನಾನು ಕೂಡ ಇತರ ಹುಡುಗರಂತೆ ಒಂದೇ ಹುಡುಗಿಯ ಬಗ್ಗೆ ತಲೆ ಕೆಡಿಸಿಕೊಂಡಿರುವೆನೆಂಬ ಬಗ್ಗೆ ಕಿಂಚಿತ್ತೂ ಬೇಸರವಾಗುತ್ತಿಲ್ಲ. ಏಕಾಂತವನ್ನು ದ್ವೇಷಿಸುತ್ತಿದ್ದ ನಾನು ಈಗ ಏಕಾಂತವನ್ನು ಅರಸಿ ಹೋಗುತ್ತಿದ್ದೇನೆ. ಮಾತಿನ ಮಲ್ಲ(ಳ್ಳ)ನಾಗಿದ್ದ ನಾನು ಮೌನದ ಸಿಹಿಯನ್ನು ಸವಿಯುತ್ತಿದ್ದೇನೆ. ಇಂದು ಮತ್ತು ಎಂದೆಂದೂ ನನ್ನೆದೆ ಸಾಮ್ರಾಜ್ಯಕ್ಕೆ ನೀನೇ ಒಡತಿ ಎಂಬ ಶಾಸನ ಬರೆಸಿಬಿಡಬೇಕೆನಿಸುತ್ತಿದೆ. ನಿನಗಾರು ಸವತಿಯರು ಬರಲಾರರು ಎಂದು ಎದೆಯುಬ್ಬಿಸಿ ಹೇಳಬೇಕೆನಿಸುತ್ತಿದೆ.
-ಸ.Kha.
ಸಾಲುಗಳು
- Add new comment
- 706 views
ಅನಿಸಿಕೆಗಳು
ಭಾವನೆಗಳ ಸಾಮ್ರಾಜ್ಯದಲ್ಲಿ ನೀವೇ
ಭಾವನೆಗಳ ಸಾಮ್ರಾಜ್ಯದಲ್ಲಿ ನೀವೇ ಸಾಮ್ರಾಟರು ಸಂತೋಷ್!
Thank you Friend...
Thank you Friend...