*ಮುಂಗಾರು ಮಳೆ (2) ಯ ಹಾಡುಗಳು*
ಮುಂಗಾರು ಮಳೆ ಮತ್ತೊಮ್ಮೆ ಬಂದಿದೆ ನಮ್ಮನ್ನೆಲ್ಲ ಹಾಡಿನ ಹನಿಗಳಲ್ಲಿ ನೆನೆಯುವಂತೆ ಮಾಡಲು. ಯೋಗರಾಜ ಭಟ್ಟರ ಸಾರಥ್ಯದಲ್ಲಿ ದಶಕದ ಹಿಂದೆ ತೆರೆಕಂಡ ಮುಂಗಾರುಮಳೆ ಸಿನೆಮಾ ನಿನ್ನೆ ಮೊನ್ನೆ ಬಂದ ಹಾಗೆ ಅನಿಸುತ್ತಿರುವುದು ಅವುಗಳ ಹಾಡುಗಳ ಲವಲವಿಕೆಯಿಂದಲೇ. ಆ ಸಾಂಗುಗಳ ಗುಂಗು ಇನ್ನು ಕಿವಿಯಲ್ಲಿ ಗುಂಯ್-ಗುಡುತ್ತಿರುವಾಗಲೇ ಮುಂಗಾರು ಮಳೆ - 2 ಚಿತ್ರದ ಹಾಡುಗಳು ಬಿಡುಗಡೆಯಾಗಿವೆ. ಈ ಬಾರಿ ನಿರ್ದೇಶನದ ಜವಾಬ್ದಾರಿಯನ್ನು ಶಶಾಂಕ್ ಅವರು ವಹಿಸಿಕೊಂಡಿದ್ದಾರೆ. ‘ಮ್ಯಾಜಿಕಲ್ ಕಂಪೋಸರ್’ ಅರ್ಜುನ್ ಜನ್ಯ ರವರ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಹಾಡುಗಳು ಕೇಳಲು ಇಂಪಾಗಿವೆ ತಂಪಾಗಿವೆ. ಆ ಹಾಡುಗಳ ಬಗ್ಗೆ ಒಂದಿಷ್ಟು.
ಅರ್ಮಾನ್ ಮಲಿಕ್ ಅವರ ಕಂಠದಲ್ಲಿ ಜಯಂತ್ ಕಾಯ್ಕಿಣಿ ಅವರ ಕಾವ್ಯ ಕುಸುರಿ “ಸರಿಯಾಗಿ ನೆನಪಿದೆ ನನಗೆ, ಇದಕ್ಕೆಲ್ಲ ಕಾರಣ ಕಿರುನಗೆ” ಹಾಡು ಕೇಳುಗರಿಗೆ ಬಹಳವೇ ಅಪ್ತವೆನಿಸುತ್ತದೆ. ಪ್ರೀತಿಯಲ್ಲಿ ಬಿದ್ದ ಯುವಕರ ಕನಸು-ಕನವರಿಕೆಯು ಈ ಹಾಡಿನಲ್ಲಿ ಧ್ವನಿಸುತ್ತದೆ. ತಮ್ಮದೇ ವಿಶಿಷ್ಟ ಉಪಮೆಗಳ ಮೂಲಕ ಸಿನೆಮಾ ಸಾಹಿತ್ಯದಲ್ಲಿ ಹೊಸ ಛಾಪನ್ನು ಮೂಡಿಸಿರುವ ಕಾಯ್ಕಿಣಿಯವರು ಈ ಹಾಡಿನಲ್ಲಿಯೂ ಇಷ್ಟವಾಗುತ್ತಾರೆ. ‘ಸೆರೆ ಸಿಕ್ಕಾಗ ಬೇಕಿಲ್ಲ ಜಾಮೀನು, ಸರಸಕ್ಕೀಗ ನಿಂದೇನೇ ಕಾನೂನು’ ಈ ಸಾಲುಗಳು ಅದಕ್ಕೊಂದು ಉದಾಹರಣೆ.
ಕಾಯ್ಕಿಣಿ ಹಾಗೂ ಸೋನು ನಿಗಮ್ ಅವರ ಕಾಂಬಿನೇಶನ್ ನಲ್ಲಿ ಬಂದಿದ್ದ ‘ಅನಿಸುತಿದೆ ಯಾಕೋ ಇಂದು’ ಹಾಡಿನ ಮೋಡಿಯನ್ನು ಮರುಸ್ಥಾಪಿಸಲೆಂಬಂತೆ “ಗಮನಿಸು ಒಮ್ಮೆ ನೀನು, ಬಯಸಿಹೆ ನಿನ್ನೇ ನಾನು” ಹಾಡನ್ನು ರಚಿಸಲಾಗಿದೆ. ಸೋನು ಅವರ ಹಿಪ್ನಟಿಕ್ ವಾಯ್ಸ್ ಗೆ ಇನ್ನೂ ಹೆಚ್ಚಿನ ಕಾಂತೀಯತೆ ನೀಡುವಂತೆ ಅರ್ಜುನ್ ಜನ್ಯ ಈ ಹಾಡಿನ ರಾಗ ಸಂಯೋಜನೆ ಮಾಡಿದ್ದಾರೆ. ಆಗ ಚರಣದ ಕೊನೆಯಲ್ಲಿ ‘ಹಾಗೆ ಸುಮ್ಮನೆ’ ಎಂಬ ಪದಪುಂಜವನ್ನು ಹಾಕಿ ಕೇಳುಗರಿಗೆ ರೋಮಾಂಚನವನ್ನುಂಟು ಮಾಡಿದ್ದ ಕಾಯ್ಕಿಣಿಯವರು ಈ ಬಾರಿ ‘ನೀನು ಇರದೇ’ ಎಂಬ ಪದಪುಂಜವನ್ನು ಚರಣದ ಕೊನೆಯಲ್ಲಿ ಪುನರಾವರ್ತಿಸಿದ್ದಾರೆ. ಮೆಲೋಡಿಯಸ್ ಪ್ರೇಮಗೀತೆಯಾಗಿ ಎಲ್ಲರ ನಾಲಿಗೆಯಲ್ಲಿ ನಲಿಯುವ ಲಕ್ಷಣಗಳು ಈ ಹಾಡಿನಲ್ಲಿ ಹೇರಳವಾಗಿದೆ.
ಇದೇ ಟ್ಯೂನ್ ನಲ್ಲಿ ಮೂಡಿ ಬಂದಿರುವ ಫೀಮೇಲ್ ವರ್ಷನ್ ಹಾಡನ್ನು ಶ್ರೇಯಾ ಘೋಷಾಲ್ ಹಾಡಿದ್ದಾರೆ. ಸಾಹಿತ್ಯವನ್ನು ನಿರ್ದೇಶಕ ಶಶಾಂಕ್ ರವರು ಬರೆದಿದ್ದಾರೆ. “ಕನಸಲೂ ನೂರು ಬಾರಿ ಕರೆಯುವೆ ನಿನ್ನೇ ನಾನು” ಎನ್ನುವ ಈ ಹಾಡು ಇನಿಯನ ನೆನಪಿನಲ್ಲಿ ನಲ್ಲೆ ಹಾಡುವ ಹಾಡಾಗಿದೆ. ಸಾಹಿತ್ಯಕ್ಕೆ ತಕ್ಕಂತೆ ಏರಿಳಿಯುವ ಘೋಷಾಲ್ ರವರ ಧ್ವನಿ ಈ ಹಾಡಿಗೊಂದು ಸೊಬಗು.
ಕವಿರಾಜ್ ರವರ ಸಾಹಿತ್ಯವಿರುವ ಯುಗಳಗೀತೆ “ನೀನು ಇರದೆ” ಅರ್ಮಾನ್ ಮಲಿಕ್ ಹಾಗೂ ಅನುರಾಧಾ ಭಟ್ ರವರ ಜುಗಲ್ ಬಂದಿಯಲ್ಲಿ ಮುದ ನೀಡುತ್ತದೆ.
ಟಪ್ಪಾಂಗುಚ್ಚಿ ಹಾಗೂ ರ್ಯಾಪ್ ಮಾದರಿಯನ್ನು ಮಿಶ್ರಣಗೊಳಿಸಿದಂತಿರುವ “ಡ್ಯಾಡಿ” ಸಾಂಗ್ ಬಹಳವೇ ವಿಶಿಷ್ಟವಾಗಿದೆ. ಯೋ ಯೋ ಹನಿಸಿಂಗ್ ನ ನೆನಪಿಸುವಂತಹ ಕೆಲವು ಸಾಲುಗಳು ಹಾಡಿನಲ್ಲಿದ್ದು ಪಡ್ಡೆ ಹುಡುಗರ ಟಪ್ಪಾಂಗುಚ್ಚಿ ಸ್ಟೆಪ್ಸ್ ಗೆ ಹೇಳಿ ಮಾಡಿಸಿರುವಂತಿದೆ. ಅಪ್ಪ ಮಗನ ಪರಸ್ಪರ ಗುಣಗಾನದ ಈ ಹಾಡು ಕನ್ನಡ ಸಿನೆಮಾದಲ್ಲಿ ಹೊಸದು. ಹೈ ವೋಲ್ಟೇಜ್ ಎನರ್ಜಿಯ ಈ ಹಾಡು ಮೈಂಡ್ ರಿಫ್ರೆಶಿಂಗ್ ಆಗಿದ್ದು ಹೊಸತನದಿಂದ ಕೂಡಿದೆ. ಚಂದನ್ ಶೆಟ್ಟಿ ಹಾಗೂ ಬೆನ್ನಿ ದಯಾಳ್ ಹಾಡಿರುವ ಈ ಹಾಡಿಗೆ ಚಂದನ್ ಶೆಟ್ಟಿಯವರೇ ಸಾಹಿತ್ಯ ಬರೆದಿದ್ದಾರೆ.
ಗೋಪಿ ಅಯ್ಯಂಗಾರ್ ಹಾಗೂ ಡಾ. ಉಮೇಶ ಪಿಲಿಕುಡಲು ರವರ ಸಾಹಿತ್ಯವಿರುವ “ಒಂಟೆ ಸಾಂಗು” ಅರ್ಮಾನ್ ಮಲಿಕ್, ಸ್ವರೂಪ್ ಹಾಗೂ ಶ್ರೇಯಾ ಘೋಷಾಲ್ ರವರ ವಾಯ್ಸ್ ನಲ್ಲಿ ಮೂಡಿ ಬಂದಿದೆ. ‘ಚಾರ್ ದಿನ್ ಕಾ ಜಿಂದಗಿ ಹೈ ಚೂಯಿಂಗ್ ಗಮ್ಮು, ಒಂಟೆಗೂ ಬಿಯರ್ ಕುಡ್ಸಿ ಮಾರೋ ಡ್ರಮ್ಮು’ ಸಾಲುಗಳಲ್ಲಿಯೇ ಈ ಹಾಡಿನ ಭಾವಾರ್ಥವನ್ನು ತಿಳಿಯಬಹುದು.
ಏಕಾಂತದಲ್ಲಿ ಕುಳಿತು ಆಲಿಸುವಂತಹ ಹಾಡುಗಳ ಜೊತೆ ಎನರ್ಜೆಟಿಕ್ ಹಾಡುಗಳನ್ನು ಕಂಪೋಸ್ ಮಾಡಿರುವ ಅರ್ಜುನ್ ಜನ್ಯರವರು ಎಲ್ಲ ಹಾಡುಗಳಲ್ಲಿಯೂ ಇಷ್ಟವಾಗುತ್ತಾರೆ. ಹಾಡುಗಳೆಲ್ಲವೂ ಮತ್ತೆ ಮತ್ತೆ ಕೇಳಬೇಕು ಎಂಬಂತಿವೆ. ಮುಂಗಾರು ಮಳೆಯ ಹಾಡುಗಳು ಮತ್ತೊಮ್ಮೆ ಮನಸ್ಸನ್ನು ತಂಪೆರೆಯುವಲ್ಲಿ ಅನುಮಾನವಿಲ್ಲ.
- ಸ.Kha.
ಸಾಲುಗಳು
- 1229 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ