Skip to main content
ಪಕ್ಷಿ

ಹಾಡು ಹಕ್ಕಿಯ ಕಾಡು ಭೇಟೆ

ಬರೆದಿದ್ದುJune 13, 2016
noಅನಿಸಿಕೆ

ಪ್ರಕೃತಿ ಎಂಬುದು ಮಾನವನ ನಿಲುಕಿಗೆ ಸಿಗದ ಒಂದು ಅಧ್ಬುತವೇ ಸರಿ, ಮನುಷ್ಯ ಎಷ್ಟೇ ವೈಜ್ಞಾನಿಕವಾಗಿ ಬೆಳೆದರು ಅವನಿನ್ನೂ ತಿಳಿಯಬೇಕಾದ್ದಷ್ಟು ಬಹಳಷ್ಟಿದೆ ಎಂಬುದನ್ನು ಪ್ರಕೃತಿ ಆಗಾಗ ನೆನಪಿಸುತ್ತಲೇ ಸಾಗುತ್ತದೆ. ನಮ್ಮ ದೈನಂದಿನ ಚಟುವಟಿಕೆಗಳ ಆಳದಲ್ಲಿ ನಮ್ಮ ಸುತ್ತಲಿನ ಎಷ್ಟೋ ವಿಚಾರಗಳು ನಮ್ಮ ಗಮನಕ್ಕೆ ಬಂದಿರುವುದಿಲ್ಲ. ಎಷ್ಟೋ ಪ್ರಾಣಿ ಪಕ್ಷಿಗಳ ಜೀವನಶೈಲಿಯಾಗಲಿ, ಆಹಾರ ಪದ್ಧತಿಯಾಗಲಿ ನಮಗೆ ತಿಳಿದಿರುವುದಿಲ್ಲ, ನಾವೂ ಗಮನಕ್ಕೆ ಕೊಡದ ಸಣ್ಣ ಸಣ್ಣ ವಿಷಯಗಳಲ್ಲೂ ಅಧ್ಬುತಗಳು ಅಡಗಿವೆ ಎಂಬುದಕ್ಕೆ ಉದಾಹರಣೆಯಾಗಿ ಇಲ್ಲೊಂದು ಸಣ್ಣ ಸಂಶೋಧನೆ ಇದೆ.

ಇತ್ತೀಚೆಗೆ ಪೂರ್ವ ಯೂರೋಪಿನ ಕೆಲವು ವಿಜ್ಞಾನಿಗಳು ಬಾವಲಿಯ ಗುಹೆಯ ಮುಂದೆ ಹೊಂಚು ಹಾಕಿ ಕುಳಿತಿದ್ದರು, ಬಾವಲಿಯ ಬಗ್ಗೆ ಇನ್ನಷ್ಟು ಆಳವಾಗಿ ಸಂಶೋಧಿಸುವುದು ಅವರ ವಿಚಾರವಾಗಿತ್ತು.  ಅದೇ ಸಮಯಕ್ಕೆ ಗುಹೆಯ ಒಳಗಿಂದ ಚೇಕಡಿ ಹಕ್ಕಿಯೊಂದು ಸತ್ತ ಬಾವಲಿಯನ್ನು ಕಚ್ಚಿ ಹೊರಹಾದುಹೋಯಿತು, ಇದರ ಜಾಡನ್ನು ಹಿಡಿದು ಹೊರಟ ವಿಜ್ಞಾನಿಗಳಿಗೆ ತಿಳಿದು ಬಂದ ವಿಷಯ ಆಶ್ಚರ್ಯಕರವಾಗಿತ್ತು. ಗುಬ್ಬಚ್ಚಿಗಿಂತಲೂ ಸಣ್ಣದಾದ ಕೇವಲ ೬ ರಿಂದ ೧೦ ಸೆಂಟಿಮೀಟರ್ ಒಳಗಿನ ಪರಿಧಿಯಲ್ಲಿರುವ,  ಸದಾ ಮನುಷ್ಯರ ಸುತ್ತಲೂ ಓಡಾಡುತ್ತಾ ಹಾಡುತ್ತಾ ಶುದ್ಧ ಸಸ್ಯಹಾರಿಯಂತೆ ತೋರುವ ಪುಟ್ಟ ಪಕ್ಷಿಯೊಂದು ತನ್ನ ಅಗತ್ಯಕ್ಕೆ ಬಾವಲಿಯಂತ ಸಸ್ತನಿಗಳನ್ನು ಭೇಟೆಯಾಡಿ ಕೊಲ್ಲುತ್ತದೆ ಎಂಬುದು ವಿಸ್ಮಯಕಾರಿ ವಿಷಯವೇ ಅಲ್ಲವೇ? ಹೌದು, ಈ ಪಕ್ಷಿಯ ಹೆಸರು "ಚೇಕಡಿ ಹಕ್ಕಿ".

ಇದು ಸಾಮಾನ್ಯವಾಗಿ ಸಸ್ಯ ಸಮೃದ್ಧಿ ಹೇರಳವಾಗಿರುವ ಪ್ರದೇಶಗಳಲ್ಲೆಲ್ಲ ಕಂಡು ಬರುತ್ತವೆ. ಮೊದಲೇ ಹೇಳಿದಂತೆ ಇವುಗಳ ಗಾತ್ರ ಗುಬ್ಬಚ್ಚಿಗಿಂತಲೂ ಚಿಕ್ಕ, ಹಾಗೂ ತಲೆ ಮತ್ತು ಗಂಟಲಿನ ಭಾಗದಲ್ಲಿ ಗಾಢ ಕಪ್ಪುಬಣ್ಣವಿದ್ದು, ದೇಹಗಿಂತಲೂ ತಲೆ ಕೊಂಚ ದಪ್ಪನಾಗಿರುವುದರಿಂದ ಈ ಪಕ್ಷಿಯನ್ನು ಗುರುತಿಸುವುದು ಸುಲಭ. ಈ ಪಕ್ಷಿಗಳಿಗೆ ತರಬೇತಿ ನೀಡುವುದರ ವ್ಯವಸಾಯ ಸಂದರ್ಭದಲ್ಲಿ ಸೂರ್ಯಕಾಂತಿಯ ಬೀಜಗಳನ್ನು ಶೇಕರಿಸಲು ಸಹಾಯ ಪಡಯಬಹುದಾಗಿದೆ. ಇದರಿಂದ ಇವು ಮನುಷ್ಯನಿಗೆ ಒಡನಾಡಿಗಳೆಂದು ಗುರುತಿಸಬಹುದು. ಚಿಕ್ ಚಿಕ್ ಚಿಕ್ಕಡಿ ಎಂದು ಸದಾ ಸದ್ದು ಮಾಡುತ್ತ ಹಾಡುವ ಈ ಪಕ್ಷಿಗಳ ಧ್ವನಿಯೂ ಆಹ್ಲಾದಕರವಾದದ್ದು. ಮೇಲ್ನೋಟಕ್ಕೆ ಇವುಗಳು ಸಹ ಸಾಮಾನ್ಯ ಹಕ್ಕಿಗಳಂತೆ ತಮ್ಮ ಆಹಾರಕ್ಕಾಗಿ ಹಣ್ಣು ,ಕಾಳು,ಕಡ್ಡಿ, ಹುಳ ಹುಪ್ಪಟೆಗಳನ್ನು ಅವಲಿಂಬಿಸಿರುವಂತಿದ್ದರೂ,  ತಮ್ಮ ಆಹಾರ ಅಭಾವ ಕಂಡುಬಂದಲ್ಲಿ ಇವು ದಂಡೆತ್ತಿ ಬರುವುದು ಬಾವಲಿಗಳ ಮೇಲೆ!

ಹಾಗೆಂದು ಇವು ಎಲ್ಲಾ ಕಾಲದಲ್ಲಿಯೂ ಹೀಗೆ ಬಾವಲಿಗಳನ್ನು ಕೊಲ್ಲುತ್ತವೆಂದಿಲ್ಲ, ಕೇವಲ ಚಳಿಗಾಲದ ಹಾಗೂ ಮಳೆಗಾಲದ ಸಂದರ್ಭದಲ್ಲಿ ಆಹಾರ ಕೊರತೆಯುಂಟಾದಾಗ ಮಾತ್ರ ಇವು ಭೇಟೆಗಿಳಿಯುತ್ತವೆ, ಅಲ್ಲದೇ ಇವು ಬಾವಲಿಗಳನ್ನು ತಮ್ಮ ಭೇಟೆಯನ್ನಾಗಿಸಿಕೊಳ್ಳಲು ಮುಖ್ಯ ಕಾರಣ ಬಾವಲಿಗಳ ಶೀತನಿದ್ದೆ. ಚಳಿಗಾಲದ ಸಮಯದಲ್ಲಿ ಬಾವಲಿಗಳು ಶೀತನಿದ್ದೆಯಲ್ಲಿರುತ್ತವೆ ಅಂತಹ ಸಂದರ್ಭದಲ್ಲಿ ಅವುಗಳ ಜಾಗಕ್ಕೆ ನುಗ್ಗಿ ಅವುಗಳನ್ನು ಕೊಲ್ಲುತ್ತದೆ ಈ ಪಕ್ಷಿ. ಈ ಸಮಯದಲ್ಲಿ ಬಾವಲಿಗೆ ಎಚ್ಚರವಾದರೂ ಸಹ  ಚೇಕಡಿ ಹಕ್ಕಿ ಅದರ ಮೆದುಳಿನ ಭಾಗವನ್ನು ಗುರುತಿಸಿ ಕುಕ್ಕುವುದರಿಂದ ಮತ್ತೆ ಪ್ರಜ್ಞೆ ತಪ್ಪುತ್ತವೆ ಕೆಲವೊಮ್ಮೆ ಕ್ಷಣದಲ್ಲೇ ಪ್ರಾಣ ಬಿಡುತ್ತವೆ, ನಂತರ ಈ ಹಕ್ಕಿ ಅದನ್ನು ಅದರ ಗುಹೆಯಲ್ಲಿಯೋ ಅಥವಾ ಯಾವುದಾದರೂ ದಟ್ಟವಾದ ಮರದಲ್ಲಿಯೋ ಗೌಪ್ಯವಾಗಿ ತಿಂದು ಬರುತ್ತದೆ.

ಇದರಿಂದಾಗಿಯೇ ಇಲ್ಲಿಯವರೆಗೆ ಯಾರಿಗೂ ಈ ಪಕ್ಷಿಯ ಆಹಾರ ಪದ್ಧತಿಯ ಮೇಲೆ ಅನುಮಾನ ಬಂದಿರಲಿಲ್ಲ. ಇನ್ನೊಂದು ಆಶ್ಚರ್ಯಕರ ಸಂಗತಿ ಎಂದರೆ ಇವುಗಳು ತೀರ ಆಹಾರದ ಕೊರತೆಯಾದಾಗ, ಹಸಿವಿನಿಂದ ಬಳಲಿದಾಗ ಬೇರೆ ಯಾವುದೆ ಆಹಾರ ಮೂಲಗಳು ದೊರೆಯದೇ ಹೋದಾಗ ಮಾತ್ರವೇ ತಮ್ಮ ಆಹಾರ ಸಮತೋಲನಕ್ಕಾಗಿ ಬೇಟೆಗಿಳಿಯುವುದು, ಮಿಕ್ಕ ಸಮಯದಲ್ಲಿ ಅಂದರೆ ತಮಗೆ ಆಹಾರ ಪೂರೈಕೆಯಾದ ಸಮಯದಲ್ಲಿ, ಬಾವಲಿಗಳು ಪಕ್ಕವೇ ಇದ್ದರೂ ಅದನ್ನು ಕೊಲ್ಲುವುದಿಲ್ಲ, ಇದನ್ನು ಬಾವಲಿಯ ಗುಹೆಯೊಳಗೆ ಕಾಳನ್ನಿಟ್ಟಾಗ ಈ ಪಕ್ಷಿ ಬಾವಲಿಯ ಬದಲಿಗೆ ಕೇವಲ ಕಾಳನ್ನಷ್ಟೆ  ತಿಂದು ಬಂದದ್ದರ ಮೂಲಕ ರುಜುಪಡಿಸಿದ್ದಾರೆ ವಿಜ್ಞಾನಿಗಳು .

ಲೇಖನದ ಬಗೆ

ಲೇಖಕರು

Lavanya Siddeshwar

ಕದಡದ ಕನಸು

ಸಣ್ಣ ಪುಟ್ಟ ಖುಷಿಗಳಿಗಾಗಿ ತವಕಿಸುವ ಸಾಮಾನ್ಯೆ, ಪುಸ್ತಕ ಪ್ರೇಮಿ, ತಕ್ಕ ಮಟ್ಟಿಗಿನ ಬರಹಗಾರ್ತಿ...

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.