Skip to main content

ಅಮ್ಮ

ಬರೆದಿದ್ದುDecember 27, 2015
noಅನಿಸಿಕೆ
ಮನಸ್ಸು ಹಳೆ ನೆನಪುಗಳ ತೆಕ್ಕೆಗೆ ಜಾರಿತ್ತು.  ಏನೇನಿರಲಿಲ್ಲ ತನ್ನ ಜೀವನದಲ್ಲಿ, ಪ್ರೀತಿಸುವ ಕುಟುಂಬ, ಗೆಳೆಯ ಗೆಳತಿಯರು, ಬೇಕೆಂದದ್ದು ತಡವಾಗಿಯಾದರೂ ತನ್ನ ಮಡಿಲಿಗೆ ಬಂದು ಸೇರಿರುತ್ತಿತ್ತು. ಆದರೂ ಮನಸ್ಯಾಕೆ ಇಲ್ಲದ್ದನ್ನ ನೆನೆದು  ಕೊರಗುತ್ತೋ ದೇವರೇ ಬಲ್ಲ. ಆಲೋಚನೆಗಳ ಸರಪಳಿಯಲ್ಲಿ ಬಂದಿಯಾಗಿದ್ದವಳಿಗೆ ಅಮ್ಮನ ಕರೆ ಕೊಂಚ ತಡವಾಗಿಯೇ ಕೇಳಿತು. ಥೋ..
ಏನಮ್ಮಾ ನಿಂದು ರಗಳೆ.. ಅಂತ ಎದ್ದು ಬಂದವಳಿಗೆ ಕಂಡದ್ದು ಅಮ್ಮನ ಪೆಚ್ಚಾದ ಮುಖ. ತಕ್ಷಣ ಭೂಮಿಗಿಳಿದು ಹೋದಂತಾಯಿತು. ಏನಾದ್ರೂ ಆಫೀಸ್ ಕೆಲ್ಸದಲ್ಲಿದ್ಯೇನೇ..ತೊಂದ್ರೆಯಾಯ್ತಾ ನಾನು ಕರೆದಿದ್ದು ಅಂದ ಅಮ್ಮನ ಮುಖದಲ್ಲಿದ್ದಿದ್ದು ಒಂದು ಪ್ರಾಮಾಣಿಕ ತಪ್ಪಿತಸ್ಥ ಭಾವ. ಅಯ್ಯೋ ಇಲ್ಲಮ್ಮ ಹೇಳು ಎಂತಾಯ್ತು ಅಂದವಳೇ ಅಮ್ಮನ ಹೆಗಲಿಗೆ ಜೋತು ಬಿದ್ದೆ. ಏನಿಲ್ವೇ ಹೇಗಿದ್ರೂ ಲಾಪ್ ಟಾಪ್ ಉಂಟಲ್ವ ನಾನು ಆವತ್ತು ಕೇಳಿದ ಹಳೇ ಹಾಡುಗಳ್ನ ಇಂಟರ್ನೆಟ್ ಹುಡುಕಿಕೊಡ್ತದಾ ನೋಡೆ ಎಂದ ಅಮ್ಮನ ಮುಗ್ಧತೆಗೆ ನಗು ಬಂತು. ನಿನ್ಗೆ ಬೇಕಿದ್ರೆ ನಿನ್ನ ಕಾಲದ ಎಲ್ಲಾ ಹಾಡುಗಳ್ನೂ ಕೇಳಬಹುದು ನೋಡಬಹುದು ತಡಿ, ಎಂದವಳೇ ಹಾರು ನಡಿಗೆಯಲ್ಲೇ ಓಡಿ ಲಾಪ್ ಟಾಪ್ ನ ಅಡುಗೆ ಮನೆಗೆ ತಂದು
ಪ್ರತಿಷ್ಟಾಪಿಸಿ ಗೂಗಲ್ ನಲ್ಲಿ ಹುಡುಕಾಡತೊಡಗಿದೆ.
ಒಂದಾದ ಮೇಲೊಂದರಂತೆ ಹಾಡುಗಳನ್ನ ಕೇಳುತ್ತಿದ್ದಂತೇ ಅಮ್ಮನ ಮುಖದಲ್ಲಿ ಅದೆಂತದೋ ಹೇಳಲಾರದ ಸಂತೋಷ ಎದ್ದು ಕುಣೀತಿತ್ತು. ನಮ್ಮ ಕಾಲದ ಹಾಡುಗಳೇ ಸೈ ಎಷ್ಟು ಅರ್ಥಪೂರ್ಣವಾಗಿರ್ತಿದ್ವು..ಈಗಿನವೂ ಇವೆ ಕೇಳು ಜೀವ ಬಾಯಿಗೆ ಬರ್ತದೆ ಅಂತ ಕೊಂಚ ಈಗಿನ ಕಾಲದ ಹಾಡುಗಳನ್ನ ಬೈದುಕೊಂಡೇ ಅಡುಗೆಗಾರಂಭಿಸಿದ್ದಳು.
ಮನವದ್ಯಾಕೋ ನಮ್ಮ ಪೀಳಿಗೆಯವರೊಂದಿಗೆ ಅಮ್ಮನನ್ನು ಹೋಲಿಸಿನೋಡತೊಡಗಿತು. ಸಣ್ಣ ಸಣ್ಣ ಖುಷಿಗಳನ್ನ ಅಮ್ಮ ಯಾವಾಗಲೂ ಪರಿಪೂರ್ಣವಾಗೇ ಅನುಭವಿಸ್ತಾಳೆ. ದೊಡ್ಡ ದೊಡ್ಡ ಗುರಿಗಳು, ಆಸೆಗಳು ಅಮ್ಮನನ್ನು ಯಾವತ್ತೂ ಕಾಡಿಲ್ಲ. ಅದಕ್ಕೇ ಏನೋ ಅಮ್ಮ ಯಾವತ್ತೂ ತೃಪ್ತೆ, ಅದೆಂಥದ್ದೇ ಸಮಸ್ಯೆಯಾಗಲೀ ಅಮ್ಮನನ್ನ ಕಂಗೆಡಿಸಿಲ್ಲ. ಅಪ್ಪನ ಮರಣ ಕೂಡ!!! ಅಮ್ಮ ಧೈರ್ಯವಾಗೇ ಅದನ್ನೂ ಎದುರಿಸಿದ್ದಳು. ಒಂಟಿಯಾಗೇ ಜೀವನದೊಡನೆ ಗುದ್ದಾಡಲು ನಿರ್ಧರಿಸಿದ್ದಳು, ತನ್ನನ್ನೂ ಅದಕ್ಕೆ ಅಣಿಗೊಳಿಸಿದ್ದಳು. ಅದೇ ತಾನು, ತನ್ನದೇ ಪೀಳಿಗೆಯ ಮಂದಿಗೆ ಇಂಥಾ ಮನೋಬಲ ಇಲ್ವೇ ಇಲ್ಲ. ಸಣ್ಣ ಕಿರಿಕಿರಿಗಳಿಗೇ, ಸಮಸ್ಯೆಗಳಿಗೇ ಜೀವನ ಸಾಕಾಗಿಬಿಡುತ್ತದೆ. ಆಟೋ ಸಿಗಲಿಲ್ಲ ಅನ್ನೋದರಿಂದ ಹಿಡಿದು
ವರ್ಷದ ಕೊನೆಯಲ್ಲಿ ಅಪ್ರೈಸಲ್ ನಾವೆಣಿಸಿದಂತೆ ಆಗಿಲ್ಲ ಅನ್ನೋತನಕವೂ ಜೀವನದ ಕುರಿತಾದ ದೂರುಗಳೇ. ಸುಮ್ಮನೆ ಹೀಗೇ ಅಮ್ಮನ್ನ ಕೇಳಿದಳು, "ಅಮ್ಮಾ ಈ ಜೀವನ ನಿನ್ನ ಚೆನ್ನಾಗಿ ನಡೆಸಿಕೊಂಡಿದೆ ಅಂತ ನಿನ್ಗೆ ಅನಿಸ್ತದಾ? ನಿನ್ಗೆ ಬೇಕಾದ್ದನ್ನಜೀವನ ಕೊಟ್ಟಿದ್ಯಾ? ನಿನ್ಗೆ ಯಾವತ್ತೂ ನಿರಾಸೆನೇ ಆಗಿಲ್ವಾ?"
 ಅಮ್ಮನ ಉತ್ತರ ತುಂಬಾ ಸರಳವಾಗಿತ್ತು.  ಜೀವನ ನಾವು ಕೇಳಿದ್ದನ್ನ ಯಾವಗಲೂ ಕೊಡೋದಿಲ್ಲ ಮಗಳೇ.. ಬದಲಿಗೆ, ಬೇಕಾದ್ದನ್ನ ಬಯಸಿದ್ದನ್ನ ಪಡೆದುಕೋ ಅಂತ ಅವಕಾಶಗಳನ್ನ ಕೊಡುತ್ತೆ. ನಿರಾಸೆಯಿಲ್ಲದ ಜೀವನ ಅದೂ ಒಂದು ಜೀವನವಾ? ನಿನ್ಗೆ ನಿರಾಸೆನೇ ಆಗದಿದ್ರೆ ಸಂತೋಷದ ಬೆಲೆ ಹೇಗೇ ಗೊತ್ತಾಗುತ್ತೆ ಹೇಳು ಅಂದವಳ ಪ್ರಶ್ನೆಗೆ ಉತ್ತರವಿರಲಿಲ್ಲ ನನ್ನ ಬಳಿ. ಜೀವನ ತುಂಬಾ ಸರಳ. ಅದನ್ನ ಕಷ್ಟ ಅಂತ ಅಂದುಕೊಂಡ್ರೆ ಅದು ಕಷ್ಟ. ನಮಗಿಂತ ಕೆಳಗಿರುವ
ಜನರನ್ನ ನೋಡು. ನಿನ್ನ ಕೊರತೆಗಳ ಪಟ್ಟಿಗೆ ಒಂದು ಕಡಿವಾಣ ಬೀಳುತ್ತೆ. ಅದೇ ಉತ್ತಮ ವಿಷಯಗಳ ಕುರಿತಾಗಿ ನಿನಗಿಂತ ಒಂದು ಮೆಟ್ಟಿಲು ಮೇಲಿರುವವರನ್ನ ನೋಡು. ನನಗೂ ಖಂಡಿತಾ ಸಾಧಿಸಲು ಸಾಧ್ಯ ಯಾಕೆಂದ್ರೆ ಜೀವಂತ ಉದಾಹರಣೆಗಳು ನನ್ನ ಮುಂದೇನೇ ಇವೆ ಅನಿಸುತ್ತೆ. ಯಾವುದೇ ಕಷ್ಟ ಬಂದರೂ ಸಮಾಧಾನವಾಗಿ ಅದನ್ನ ಎದುರಿಸು. ಜೀವನ ಇರೋದೇ ಹೋರಾಡೋದಕ್ಕೆ ಅಂತ ಹೇಳಿ ಒಂದು ಮಗುವಿನಂತಹ ಮುಗ್ದ ನಗೆ ನಕ್ಕಳು.
ಹೌದಲ್ವ.. ಅನಿಸಿತು. ಯಾಕೋ ನಿಮ್ಮ ಹತ್ರ ಅಮ್ಮ ಹೇಳಿದ್ನ ಹಂಚಿಕೋಬೇಕನಿಸಿತು. :)

ಲೇಖಕರು

Jyothi Subrahmanya

ನೆನಪಿನ ನವಿಲುಗರಿ

ಭಾವನಾ ಜೀವಿ, ಚಿಕ್ಕ ಪುಟ್ಟ ಕನಸು ಕಾಣೋದು ಅಂದ್ರೆ ಇಷ್ಟ. ಮಳೆ, ಇಬ್ಬನಿ, ಹಸಿರು, ಆಕಾಶ, ನಕ್ಷತ್ರ, ರಾತ್ರಿ, ಇವೆಲ್ಲಾ ತುಂಬಾ ಇಷ್ಟ. ನನ್ನ ಬಗ್ಗೆ ಇನ್ನು ಜಾಸ್ತಿ ತಿಳ್ಕೊಳ್ಳೋಕೆ ನನ್ನ ಸ್ನೇಹಿತರಾಗಿ. ನಿಮಗೇ ತಿಳಿಯುತ್ತೆ. ;)

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.