the solution for nicker hole!
The solution for nicker hole!
ರಾತ್ರಿ ಉಂಡು ಮಲಗಿದ್ದೆ. ಸುಮಾರು 1 ಗಂಟೆ ರಾತ್ರಿ... ಇದ್ದಕ್ಕಿದ್ದಂತೆ ಕೆಮ್ಮು ಬಂತು!
ಇಡೀ ಮೈ ಸೆಳೆಯುತ್ತಿದೆ! ತಡೆಯಲಾಗದ ವೇದನೆ!! ಏನಪ್ಪಾ ಇದು? ಹೀಗ್ಯಾಕಾಗುತ್ತಿದೆ!?
ಕೆಮ್ಮು ನಿಂತು ದಮ್ಮು ಬರತೊಡಗಿತು. ಅಬ್ಬಾ ಜೊತೆಗೆ ಬಿಕ್ಕಳಿಕೆ.
ನಿಯಂತ್ರಣವಿಲ್ಲದ ಮೇಲುಸಿರು! ಕೆಲವೇ ಕ್ಷಣಗಳ ಹೊಯ್ದಾಟ ಅಷ್ಟೇ! ಎಲ್ಲ ನಿರಾಳವಾಯಿತು. ಹತ್ತಿಯಷ್ಟು ಹಗುರ. ಮೈತುಂಬಿದ್ದ ಜಡವೆಲ್ಲ ಕ್ಷಣ ಮಾತ್ರದಲ್ಲಿ ಮಾಯವಾದ ಫೀಲಿಂಗ್.
ಎದ್ದು ಕುಳಿತು ಆಚೀಚೆ ನೋಡಿದೆ.
ನನಗೇ ಅಚ್ಚರಿಯಾಗಿತ್ತು! ನನ್ನ ಚಾಪೆಯಲ್ಲಿ ನನ್ನೆಂತೆಯೇ ಇರುವ ಇನ್ನೋರ್ವ ಮಲಗಿದ್ದಾನೆ! ಯಾರಿವನು? ಎಲ್ಲಿಂದ ಬಂದ! ನನಗೆ ಗೊತ್ತಿರುವ ಪ್ರಕಾರ ನನ್ನಪ್ಪನಿಗೆ ನಾನು ಮೂರನೇ ಮಗ(single born) ಅಣ್ಣಂದಿರು ಇರುವರಾದರೂ ಅವರ್ಯಾರೂ ತದ್ರೂಪಿಗಳಲ್ಲ. ಮತ್ತಿವನ್ಯಾರು?
ಅದೂ ಅಲ್ಲದೆ ನನ್ನ ಹೆಂಡತಿ ಮಗ ಎಲ್ಲರೂ ಆತನ ಮೈಮೇಲೆ ಬಿದ್ದು ರೋಧಿಸುತ್ತಿದ್ದಾರೆ!
''ಲೇ ಲೇ! ಏನ್ ಮಾಡ್ತಾ ಇದೀಯಾ? ನಾನು ಇಲ್ಲಿದ್ದೇನೆ! ನೀನು ಅದ್ಯಾವನೋ ಅನ್ಯ ಪುರುಷನ ಪಕ್ಕ ಕೂತು ಅಳುವೆಯಾ?!''
but ನನ್ನತ್ತ ಯಾರೂ ನೋಡುತ್ತಿಲ್ಲ.
ಆಗ ತೆರೆಯಲ್ಪಟ್ಟಿತು ನನ್ನ ಮನೆ ಬಾಗಿಲು! ಅರೇರೇ! ತನ್ನಿಂತಾನೇ ಓಪನಾಗುತ್ತಿದೆ ಬಾಗಿಲು!
ಒಬ್ಬ ದಡೂತಿ ದೇಹದ ಆಳು ಒಳಬಂದ. ಇವನ್ಯಾರು? ಹೇಗೆ ಬಂದ?
''ಯಾರು ಸರ್ ನೀವು? ಡಕಾಯಿತರೋ? ಐಸಿಸ್ ಉಗ್ರರೋ? ಅನ್ಯಗ್ರಹ ವಾಸಿಗಳೋ..?''
''ಶ್ಶ್ಶೂss...ನಾನು ದೇವದೂತ''
"ದೇವದೂತರೇ! ಅಂದ್ರೇ? ಏಸು ಸ್ವಾಮಿಯೇ!?"
"ಷಟಪ್ಪ್! ಅಧಿಕ ಪ್ರಸಂಗ ಮಾತಾಡ್ಬೇಡಾ. ನಿನ್ನನ್ನು ಕರಕೊಂಡು ಹೋಗಲು ಬಂದಿದ್ದೇನೆ ನಾನು"
"ಎಲ್ಲಿಗೆ ಸರ್!"
"ಅದು ಆ ಮೇಲೆ ಗೊತ್ತಾಗುತ್ತದೆ ಈಗ ಎದ್ದು ಹೊರಡು"
ನಾನು ನನ್ನ ಪತ್ನಿಯತ್ತ ನೋಡಿದೆ. ಅವಳು ಯಥಾ ಪ್ರಕಾರ ಅಳುತ್ತಾ ಇದ್ದಾಳೆ
"ಸರ್! ಅವಳ್ಯಾಕೆ ಅಳ್ತಿದ್ದಾಳೆ? ಆ ಮಲಗಿರುವಾತ ಯಾರು? ಇದೇನಿದು ಕನ್ಫ್ಯೂಷನ್! ಏನೂ ಅರ್ಥ ಆಗುತ್ತಿಲ್ಲ ಸರ್!"
"ಅಳು ನಗು ಎಲ್ಲ ಕೊಂಚ ಸಮಯ ಕಣೋ ತರ್ಲೆ! ಯಾಕೆ? ನೀನು ಕತೆಗಾರನಲ್ವಾ? ನಿಂಗೆ ಗೊತ್ತಿಲ್ವಾ ಅದೆಲ್ಲಾ? ನಡೆ ನಡೆ ಲೇಟಾಯ್ತು" ಹೀಗೆ ಅವರ ಅಟ್ರಾಕ್ಷನ್ ಗೆ ಒಳಗಾಗಿ ಎದ್ದು ಅವರೊಡನೆ ನಡೆಯತೊಡಗಿದೆ. ಅರ್ಜೆಂಟಿಗೆ ನನ್ನ ಯಾವ ಗೆಳೆಯರಿಗೂ ಹೇಳಲಾಗಲಿಲ್ಲ. ಅಯ್ಯೋ ಚಾರ್ಜಿಗಿಟ್ಟ ಮೊಬಯಿಲ್ ಕೂಡಾ ಮನೆಯಲ್ಲೇ ಇದೆಯಲ್ಲ! ಎಂದೂ ಮರೆಯದ ಸಾಧನವದು! ಇಂದೇಕೆ ಮರೆತೆ?
ಒಂದು ವೇಳೆ ಗೆಳೆಯರಿಗೆ ಮೆಸೆಜ್ ಮಾಡಬೇಕೆಂದರೂ ಮೊಬೈಲಿಲ್ಲ.
"ಎಕ್ಸ್ಕ್ಯೂಸ್ ಮಿ ಸರ್! ಕೊಂಚ ಮೊಬೈಲ್ ಕೊಡ್ತೀರಾ?"
"ಷಟಪ್! ಬಾಯ್ಮೂಚ್ಕೊಂಡು ನಡೆ"
ಹೀಗೆ ನಡೆದೂ ನಡೆದೂ ನಾವು ಒಂದು ಸುಂದರವಾದ ಉದ್ಯಾನ ಪ್ರವೇಶಿಸಿದೆವು.
ದೇವದೂತ ನನ್ನನ್ನಲ್ಲಿ ನಿಲ್ಲಿಸಿ, ಸರಿದು ನಿಂತು ಕೈಮುಗಿದ.
"ಓಹೋ ನೀನೇನಾ ಜಯರಾಮ್ ನವಗ್ರಾಮ? ಕಾಮೆಂಟ್ ಖದೀಮ?"
ನಾನು ಅತ್ತಿತ್ತ ನೋಡಿದೆ ಯಾರೂ ಕಾಣುತ್ತಿಲ್ಲ.
"ಯಾರು ಮಾತಾಡ್ತಿದ್ದಿರಿ? ಮುಂದೆ ಬನ್ನಿ"
"ಮುಂದಿನಲ್ಲೇ ಇದ್ದೇನಪ್ಪಾ"
"ಹೌದಾ? ಮತ್ತೇಕೆ ಕಾಣುತ್ತಿಲ್ಲ ನನಗೆ?"
"ನನ್ ಮಕ್ಳಾ. ಕಾಣದೇ ಇದ್ದಾಗಲೇ ಉಗೀತೀರಾ. ಕಂಡ್ರೆ ಬಿಟ್ಟೀರಾ? ಅದ್ಕೇ ಅಗೋಚರನಾಗಿರೋದು"
"ಓ! ಅಂದ್ರೇ!? ನೀವು ದೇವರಾ?"
"ಹೌದಪ್ಪಾ.. ಅದಿರಲಿ ನೀನು ಬಹಳಷ್ಟು ಜನರ ತಲೆ ಕೆಡಿಸ್ತಾ ಇದ್ದೀಯಂತೆ. ಅದ್ಕೇ ಕರೆದಿರೋದು. ನಿನ್ನ"
"ನಾನೇನು ಮಾಡ್ದೆ ಸರ್?"
"ನಿನ್ನ ಇಂಗ್ಲಿಷ್ ಇಲ್ಲಿ ಬೇಡ. ಇದು ದೇವಲೋಕ"
"ಅಯ್ಯೋ ಬಿಡಿ ಗುರೂ ನಮ್ಮೂರ ಹಳ್ಳಿ ಹೈದರೇ ಇಂಗ್ಲಿಸ್ನಾಗೆ ಮಾತಾಡ್ತಾರೆ. ನೀವು ದೇವಲೋಕ.."
"ಸುಮ್ನಿರೂ! ಅಂದಂಗೆ ನಿನ್ನೂರು?"
"ಭಾರತ ಸರ್. ಶ್ರೀಯುತ ನರೇಂದ್ರ ಮೋಧೀಜಿ ಪ್ರಧಾನಿ ಆಗಿದ್ದಾರಲ್ಲಾ! ಆ ದೇಶ"
"ಹಾಂ! ಹಾಂ, ಹೇಗಿದ್ದಾನೆ ಮೋದಿ?"
"ಏನ್ ಸಾರ್? ಅವರ ಸ್ಥಾನಮಾನ ಅರಿಯದೆ ಏಕವಚನದಲ್ಲಿ.. "
"ಏಯ್! ಏನು ಸ್ಥಾನನೋ? ನನಗಿಂತ ದೊಡ್ಡ ಸ್ಥಾನವೇ?"
"ಹೋಗ್ಲಿ ಬಿಡಿ ಸರ್, ಫಸ್ಟ್ ಕ್ಲಾಸಾಗಿ ಆಡಳಿತ ನಡೆಸ್ತಾವ್ರೇ. ನೋಡ್ತಾ ಇರಿ ಕೆಲವೇ ವರ್ಷದೊಳಗೆ ಭಾರತ ಬೆಳಗಲಿದೆ"
"ಊಂ, ತುಂಬಾ ಹೊಗಳುತ್ತಿದ್ದಿಯನ್ನು. ದೇಶದ ರೈತರ ಬಗ್ಗೆ ತುಟಿ ಪಿಟಿಕ್ಕೆನದ ಮೋದಿ. ಇಡೀ ದೇಶದೊಳಗೆ ಕಂಪೆನಿ ನಿರ್ಮಾಣ ಮಾಡಲು ಹೊರಟಿದ್ದಾನೆ, ಊಟಕ್ಕೇನೊ ಮಾಡ್ತೀರಾ? ನಟ್ ಬೋಲ್ಟ್ ಕಂಪೆನಿ ಪ್ರಾಡಕ್ಟ್ ಬಡವರ ಹೊಟ್ಟೆಗೆ ಆದೀತಾ? ದೇಶದೊಳಗಿನ ಆಂತರಿಕ ಕಲಹದತ್ತ ಕೊಂಚವೂ ಗಮನ ಹರಿಸುತ್ತಿಲ್ಲ. ಆತನ ಗಮನವೆಲ್ಲ ಫಾರಿನ್ನಿಂದ ಡಾಲರ್ ತರುವತ್ತಲೇ ಇದೆ"
"ಸರ್!! ಯಾಕೀಗೆ ಮಾತಾಡ್ತಿದ್ದೀರಾ?"
"ಮಾತಾಡದೆ ಏನ್ ಮಾಡ್ಲಿ ಆಂ? ನಿಮ್ಗೆಲ್ಲ ನಿಮ್ಮ ಉದ್ಧಾರದ್ದೇ ಚಿಂತೆ. ನಿಮ್ಮ ಈ ಕಂಪೆನಿಗೆ ಎಷ್ಟು ನೀರು ಬೇಕು? ಎಷ್ಟು ಭೂಮಿ ಬೇಕು! ಎಷ್ಟು ಮೂಕ ಜೀವಿಗಳು ಸರ್ವನಾಶ ಆಗ್ತಾವೆ ಒಂದಾದರೂ ಚಿಂತೆ ಇದೆಯಾ?"
"ನಿಲ್ಲಿಸಿ! ನಾವು ನಟ್ ಬೋಲ್ಟ್ ಎಕ್ಸ್ ಪೋರ್ಟ್ ಮಾಡ್ತೇವೆ. ರೈಸ್ ಆನಿಯನ್ ಅಮೆರಿಕಾದಿಂದ ಇಂಪೋರ್ಟ್ ಮಾಡ್ತೇವೆ.. ನೀವೂ ಪಕ್ಷಪಾತಿಯೇ ಅಲ್ವಾ? ಜೀವರಾಶಿಗಳಲ್ಲಿ ಮಾನವನಿಗೆ ಮಾತ್ರವೇ ಜ್ಞಾನವನ್ನು ಕೊಟ್ಟು ಉಳಿದ ಜೀವಿಗಳನ್ನು ಅಂಜಾನ್ ಗಳನ್ನಾಗಿಸಿದಿರಿ"
"ಆಂ!?"
"ಹಾಂ! ಈಗ ಒಂದಾ ನಮ್ಮನ್ನೆಲ್ಲ ಅಂಜಾನ್ ಮಾಡಿ ಅಥವಾ ಪ್ರಾಣಿಗಳಿಗು ಬುದ್ಧಿಶಕ್ತಿ ದಯಪಾಲಿಸಿ"
"ಪ್ರಾಣಿಗಳಿಗಾ? ಅದು ಹೇಗೆ" ಪರಮಾತ್ಮ tentionಗೊಳಗಾದರು.
"ನೋಡಿ ಸರ್. ಕನಿಷ್ಟ ತಮ್ಮ ಮಾನ ಮುಚ್ಚಲು ಒಂದು ನಿಕ್ಕರ್ ಹಾಕುವಷ್ಟಾದರೂ ಜ್ಞಾನ ಕೊಡಿ ಅವಕ್ಕೆ. ಇಲ್ಲಾಂದರೆ ಮಾನವರೂ ನಿಕ್ಕರ್ ಹಾಕಬಾರದು. ಅವರನ್ನೂ ಅಂಜಾನ್ ಮಾಡಿಬಿಡಿ. ನಿಮಗೆ ಅಪಕೀರ್ತಿಯೇ ಬಾರದು"
"ಪ್ರಾಣಿಗಳು ನಿಕ್ಕರ್ ಹೇಗೋ ಹಾಕ್ತಾವೆ? ಯಾವ ಟೈಲರ್ ಹೊಲಿಯುತ್ತಾನೆ? ಪ್ರತಿ ನಿಕ್ಕರ್ ಗೂ ಒಂದೊಂದು ತೂತು ಬೇಕಾಗುತ್ತದೆ"
"ಮತ್ತೆ ನಮ್ದಕ್ಕೆ ಇಲ್ಲಾ!"
"ಅಯ್ಯೋ ಮಂಕೇ! ನಿಂಗೆ ಬಾಲ ಇದೆಯೇನೊ? ಪ್ರಾಣಿಗಳಿಗೆ ಬಾಲ ಇದೆ. ಮರೆತೆಯಾ?"
"ಹಹ್ಹಹ್ಹಾ, ಎಂಥೆಂಥಾ ಪ್ರಚಂಡ ಟೈಲರ್ಗಳಿದ್ದಾರೆ ನಮ್ಮ ಭೂಮಂಡಲದಲ್ಲಿ ಗೊತ್ತಾ ನಿಮ್ಗೆ? ಬೇಡದೆಡೆಗೇ ತೂತು ಇಟ್ಟು ಹೊಲಿಯುತ್ತಾರೆ. ಅಗತ್ಯ ಇರುವೆಡೆ ತೂತು ಬಿಡಲಾರರೇ? ನೀವೊಂದು ಕೆಲಸ ಮಾಡಿ. ಎಲ್ಲಾ ಪ್ರಾಣಿಗಳ ಬಾಲ ತೆಗೆದುಬಿಡಿ. ಬಾಲ ಹೇಗಿದ್ದರೂ ವೇಸ್ಟ್ ತಾನೇ?"
"ಸರೀ. ಈಗ ಮನುಷ್ಯರನ್ನು ಅಂಜಾನ್ ಮಾಡೊದಾ? ಅಥವಾ ಪ್ರಾಣಿಗಳ ಬಾಲ ತುಂಡು ಮಾಡಿ ನಿಕ್ಕರ್ ತೊಡಿಸೋದಾ?"
"ಸರ್ ದಯವಿಟ್ಟು ಪ್ರಾಣಿಗಳಿಗೇ ನಿಕ್ಕರ್ ತೊಡಿಸಿ"
"ಅದ್ಯಾಕೊ?"
"ಏಕೆಂದರೆ ಏಕೆಂದರೆ. ನಿಕ್ಕರ್ ಹಾಕಿದ ಮೇಲೆ ಪ್ರಾಣಿಗಳು ಮೊಬೈಲ್ ಖಂಡಿತಾ ತಗೋತಾವೆ. ಆಮೇಲೆ ಫೇಸ್ಬುಕ್ ಅಕೌಂಟ್ ಓಪನ್ ಮಾಡ್ತಾವೆ.."
"ಎಲಾ ಸ್ವಾರ್ಥೀ!!? ನೀನು ನಿನ್ನ ಫೇಸ್ಬುಕ್ ಪೋಸ್ಟಿನ ಬಗ್ಗೆಯೆ ಚಿಂತಿಸುತ್ತೀಯಲ್ಲ ಮಾರಯಾ?"
"ಎಲ್ಲರ ಮನೆ ದೋಸೆನೂ ತೂತೇ ಸರ್!"
"ಏನು ಹಾಗಂದ್ರೇ?"
"ಏನಿಲ್ಲ ಬಿಡಿ. ಅಂತೂ ನನ್ನ ಸಲಹೆಯನ್ನು ಮಾನ್ಯ ಮಾಡಿದ್ದಕ್ಕೆ ಥ್ಯಾಂಕ್ಸ್ ವನ್ಸ್ ಅಗೇನ್"
"ಮಾನ್ಯ ಮಾಡಿಲ್ಲ. ಪರಿಶೀಲನೆಯಲ್ಲಿದೆ" ಹಾಗಂದ ಪರಮಾತ್ಮ ಹೊರಗೆ ನೋಡಿ
"ಯಾರಲ್ಲಿ? ಈ ಮೂರ್ಖನನ್ನು ಎಲ್ಲಿಂದ ತಂದಿದ್ದೀರೋ ಅಲ್ಲೇ ಬಿಟ್ಟು ಬನ್ನಿ ಇಲ್ಲೇ ಇದ್ದರೆ ನನ್ನ ತಲೆಯನ್ನೇ ಕೆಡಿಸಿ ಬಿಡ್ತಾನೆ" ಎಂದು ಅಪ್ಪಣೆ ಕೊಡಿಸಿದರು.
ಸಾಲುಗಳು
- 771 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ