Skip to main content
love

ಇಂಥವರಿದ್ದಾರೆ ನಮ್ಮ ಮಧ್ಯೆ..ಜೋಪಾನ!

ಬರೆದಿದ್ದುAugust 27, 2015
2ಅನಿಸಿಕೆಗಳು

ನಿಮ್ಗೆಲ್ಲಾ ಒಂದು ಕಥೆ ಹೇಳುವ ಅನಿಸಿದೆ ಬಹಳ ದಿನಗಳ ಬಳಿಕ. ಈ ಕಥೆ ಯಾರಿಗಾದರೂ, ಯಾರ ಜೀವನಕ್ಕಾದರೂ, ಯಾವ ರೀತಿಯಲ್ಲೇ ಆದರೂ ಹೋಲಿಕೆಯಿದೆ ಅನಿಸಿದಲ್ಲಿ ಅದು ಸಹಜ. ನಮ್ಮ ನಿಮ್ಮ ನಡುವೆ ಇಂಥಹ ಜನಗಳೂ ಇರ್ತಾರೆ ಬಿಡಿ. ಕಥೇ ಶುರು ಮಾಡ್ಲಾ??

ಒಂದೂರಲ್ಲಿ ಒಬ್ಬ ಚೆಂದದ ಹುಡುಗ ಇದ್ದ. ವಿದ್ಯಾಭ್ಯಾಸ ಒಂದು ಹಂತದ ತನಕ ಮಾಡಿಕೊಂಡಿದ್ದ. ಓದಿಗಿಂತ ಹೆಚ್ಚು ವ್ಯವಹಾರ ಮಾಡುವ ಹುಚ್ಚು ಇತ್ತು ಈ ಹುಡ್ಗನ್ಗೆ. ಅಪ್ಪ, ಅಮ್ಮ, ತಂಗಿ ಅಕ್ಕ ಎಲ್ಲಾ ಇದ್ದಾಗ್ಯೂ ಒಂಥರಾ ಸನ್ಯಾಸಿ ಜೀವನ ಇವನದ್ದು. ಯಾರನ್ನೂ ಅತಿಯಾಗಿ ಹಚ್ಚಿಕೊಂಡವ್ನಲ್ಲ.. ಹಚ್ಚಿಕೊಂಡಂತೆ ತೋರಿಸ್ಕೊಂಡ್ರೂ ಅದು ಸತ್ಯಕ್ಕೆ ದೂರವಾದದ್ದು ಅಂತ ಆತನಿಗೇ ಗೊತ್ತಿರ್ತಿತ್ತು. ಅದೇನೇ ಆದ್ರೂ ತನ್ನನ್ನ ತಾನು ಪ್ರೀತಿಸಿದಷ್ಟು ಆತ ಯಾರನ್ನೂ ಪ್ರೀತಿಸಿರಲಿಲ್ಲ್ವೇನೋ.. ಸ್ವಾರ್ಥಿ ಅನ್ನೋದಕ್ಕೆ ಆಗದಿದ್ರೂ ಕೊಂಚ ಮಟ್ಟಿಗಿನ ಸ್ವಾರ್ಥತೆ ಇದ್ದೇ ಇತ್ತು.

ಮಾಡ್ತಾ ಇದ್ದ ವ್ಯಾಪಾರದಲ್ಲಿ ಕೈ ಸುಟ್ಟುಕೊಂಡ ಹುಡುಗ ಕಡೆಗೆ ಯವುದೋ ರಾಜ್ಯದ ಒಂದೂರಲ್ಲಿ ತನ್ನ ಹೊಸ ಜೀವನ ಶುರು ಮಾಡಿದ್ದ. ಸರ್ಕಾರಿ ನೌಕರಿ ಹಿಡಿದಿದ್ದ. ಅದರೊಂದಿಗೆ ತನ್ನ ಕಥೆ, ಕವನ, ಲೇಖನ ಬರೆಯೋ ಹವ್ಯಾಸವನ್ನೂ ಮುಂದುವರಿಸಿದ್ದ. ಜೊತೆಜೊತೆಗೆ ಫೊಟೋಗ್ರಫಿ ಹುಚ್ಚು ತಗುಲಿಕೊಂಡಿತ್ತು. ತನ್ನಲ್ಲಿದ್ದ ಚಿನ್ನದ ಸರವನ್ನೂ ಮಾರಿ ಕ್ಯಾಮೆರ ಕೊಂಡಿದ್ದ. ಮುದ್ದಾದ ಫೊಟೋಗಳನ್ನೂ ಸೆರೆ ಹಿಡಿತಿದ್ದ. ಇದೆಲ್ಲದರ ಮಧ್ಯೆ ಒಬ್ಬಳನ್ನ ಪ್ರೀತಿಸಲೂ ಶುರು ಮಾಡಿದ್ದ. ಆಕೆ ಜೀವನ, ಮದುವೆ, ಕಮಿಟ್ಮೆಂಟ್ ಅಂತ ತಲೆ ತಿಂತಿದ್ರೆ ಈತನ ಹ್ಮ್ಮ್ಮ್ಮ್ ಅನ್ನೋದೇ ಎಲ್ಲದಕ್ಕೂ ಉತ್ತರವಾರ್ತಿತ್ತು. ಯಾವತ್ತೋ ಒಂದು ದಿನ ಸುಮುಹೂರ್ತದಲ್ಲಿ ಆಕೆಗೆ ನಿನ್ನ ಕೈ ಬಿಡೋದಿಲ್ವೆ, ಮದುವೆ ಆಗೇ ಆಗ್ತೀನಿ ಅಂತ ಆಕೆಗೆ ಆಣೆ ಅನ್ನೋ ನಂಬಿಕೆ ಹುಟ್ಟಿಸುವಂಥ ಪ್ರಮಾಣವನ್ನೂ ಮಾಡಿದ್ದ. ಆಕೆಗೋ ಆತ ತನ್ನನ್ನ ಮದುವೆ ಆದಷ್ಟೇ ಖುಷಿ. ಅವನಿಗೋ ಅವಳ ಕನಸುಗಳಿಂದ ತಪ್ಪಿಸಿಕೊಂಡೆ ಸಧ್ಯ ಅನ್ನೋ ನಿರಾಳತೆ.

ಅದೇನೋ ಎಡವಟ್ಟಾಗಿ, ಕೈಹಿಡಿದಿದ್ದ ಸರ್ಕಾರೀ ನೌಕರಿಯನ್ನೂ ಬಿಟ್ಟು ನಿಂತ ಈ ಹುಡುಗ ಅದೊಂದು ದಿನ. ಸಿನೆಮಾಗಳಿಗೆ ಕೆಲ್ಸ ಮಾಡೋ ಹುಚ್ಚು ಹಿಡಿದುಕೊಂಡಿತ್ತು. ಹಾಗೇ ಆಕೆಗೆ ಆಣೆ ಮಾಡಿದ್ದೂ ಮರೆತಾಗಿತ್ತು. ತನಗೆ ಬೇಕಾಗಿದ್ದನ್ನ ಪಡೆದಾಗಿತ್ತಲ್ಲ ಹೇಗಿದ್ರೂ ಅವಳಿಂದ! ಪ್ರತೀ ಕ್ಷಣಕ್ಕೂ ಜೀವನದಿಂದ ಹೊಸತನ್ನ ಬಯಸ್ತಾ ಇದ್ದವ, ಜೀವನದೊಂದಿಗೆ ಗುದ್ದಾಡುತ್ತಾ ಇದ್ದವ, ಹಳೇ ಗೆಳತಿ/ಪ್ರಿಯತಮೆಯನ್ನ ಇನ್ನೆಷ್ಟು ಸಮಯ ಬಯಸಿಯಾನು?? ಅದ್ಯಾರೋ ತೆಲಗು ಹುಡುಗಿಯೊಡನಾಟ, ಸಖ್ಯ ಆತನಿಗೆ ಹಿತವೆನಿಸಲಾರಂಭಿಸಿತ್ತು. ಬಹುಷಃ ಆಕೆ ಆತನಿಂದ ಯಾವುದೇ ಕಮಿಟ್ಮೆಂಟ್ ಬಯಸಿರಲಿಲ್ವೇನೋ ಅಥವಾ ಶ್ರೀಮಂತ ಹುಡುಗಿಯಾಗಿದ್ದಳೋ ಏನೋ. ಆತ ತನ್ನವಳು ಅಂತ ಅಂದುಕೊಳ್ತಿದ್ದಾಕೆಯ ಅನುಪಸ್ಥಿತಿಯಲ್ಲೂ ಆತ ಖುಷಿ ಖುಷಿಯಾಗೇ ಇದ್ದ. ಜೀವನವನ್ನ ಇಂಚುಇಂಚಾಗೇ ಅನುಭವಿಸ್ಥಿದ್ದ. ಒಟ್ಟಾರೆ ಪ್ರೀತಿಸಿದವಳಿಂದ ಬೇರ್ಪಟ್ಟ, ಕುಡಿತ, ವ್ಯಥೆ ಹಚ್ಚಿಕೊಂಡು ನರಳಾಡುವ ಹುಡುಗರಿಗೆ ಒಂದು ಪಾಠದಂತಿದ್ದ. ತಾನಾಗಿಯೇ ಕೈಕೊಟ್ರೂ, ಮಾತು ಬಿಟ್ರೂ, ಪಶ್ಚಾತ್ತಾಪ ಅನ್ನೋದು ಆತನ ಹತ್ತಿರ ಕೂಡ ಸುಳಿದಿರಲಿಲ್ಲ. ಅವಳನ್ನೊಮ್ಮೆ ಕಂಡು, ಮಾತಾಡಿ, ತನಗೆ ಅವಳ ಅಗತ್ಯ ಇನ್ನಿಲ್ಲ, ಬೇರೆ ಸಾಂಗತ್ಯಕ್ಕೆ ಮನಸು ಚಡಪಡಿಸ್ತಿದೆ ಅಂತ ನೇರಾನೇರವಾಗಿ ಹೇಳಿದ್ದರೂ, ಬಹುಷಃ ಆ ಪೆದ್ದು ಹುಡುಗಿ ಒಪ್ಪಿ ದೂರಾಗ್ತಿದ್ದಳೋ ಏನೋ. ಕಾರಣವೇ ಹೇಳದೆ ದೂರಾಗಿದ್ದ ಆತ. ಅದೂ ಸಾಲದ್ದಕ್ಕೆ, ಆಕೆ ಬರೆದ ಕವನ, ಕಥೆಗಳನ್ನ ತನ್ನದೇ ಎಂಬಂತೆ ತೋರಿಸ್ಕೊಂಡು ಹೊಗಳಿಕೆಗಳನ್ನೂ ಗಿಟ್ಟಿಸ್ತಾ ಇದ್ದ. ತನ್ನ ಬರಹಗಳನ್ನೂ ಇತರರಿಗೆ ಮಾರಿಕೊಳ್ತಿದ್ದ. ಬಹುಷಃ ಅದರಿಂದಾಗಿಯೇ ಆತನಿಗೆ ಗಿಲ್ಟ್ ಅನ್ನೋದು ಕಾಡಿರಲಿಲ್ಲ್ವೇನೋ...

ಇನ್ನೊಂದು ಜೀವದ ಸಮಾಧಿಯ ಮೇಲೆ ಮಹಲನ್ನ ಕಟ್ಟಿ, ತನ್ನ ಹೊಸ ಜೀವನಕ್ಕೆ ಕಾಲಿಟ್ಟ ಆತ. ಆತನಿಗೆ ಒಳಿತಾಗಲಿ ಅಂತ ಹಾರೈಸಿತು ಸಮಾಧಿಯಾದ ಜೀವ.

ಇಂತಹ ಭಾವನೆಗಳನ್ನ ಕೊಲ್ಲುವ, ನಿರ್ಭಾವುಕ ಮನುಷ್ಯರಿಗೆ ಯಾವ ಕಾನೂನಿನಲ್ಲೂ ಶಿಕ್ಷೆಯಿಲ್ಲ. ಆದ್ರೆ, ಮೇಲೊಬ್ಬ ನೋಡ್ತಿರ್ತಾನೆ.. ಆತನ ನ್ಯಾಯಾಲಯದಲ್ಲಿಯಾದರೂ ಆಕೆಗೆ ನ್ಯಾಯ ಸಿಕ್ಕಬಹುದೇನೋ???????

ಲೇಖಕರು

Jyothi Subrahmanya

ನೆನಪಿನ ನವಿಲುಗರಿ

ಭಾವನಾ ಜೀವಿ, ಚಿಕ್ಕ ಪುಟ್ಟ ಕನಸು ಕಾಣೋದು ಅಂದ್ರೆ ಇಷ್ಟ. ಮಳೆ, ಇಬ್ಬನಿ, ಹಸಿರು, ಆಕಾಶ, ನಕ್ಷತ್ರ, ರಾತ್ರಿ, ಇವೆಲ್ಲಾ ತುಂಬಾ ಇಷ್ಟ. ನನ್ನ ಬಗ್ಗೆ ಇನ್ನು ಜಾಸ್ತಿ ತಿಳ್ಕೊಳ್ಳೋಕೆ ನನ್ನ ಸ್ನೇಹಿತರಾಗಿ. ನಿಮಗೇ ತಿಳಿಯುತ್ತೆ. ;)

ಅನಿಸಿಕೆಗಳು

JAYARAM NAVAGRAMA ಗುರು, 03/10/2016 - 15:06

Kole madbeku antha paapi galannu.

chidanand g. wali ಶುಕ್ರ, 07/22/2016 - 16:18

jeevanad bele atanige gottilla ennobbarige kasta kodode avar kelsa

 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.