
ವಿಶ್ವನಾಥ
ಈ ಬ್ರಹ್ಮಾಂಡಕ್ಕೆ ಒಬ್ಬ ನಾಯಕ. ಆತ ಮಹಾನ್ ಶಕ್ತಿಶಾಲಿ. ಪ್ರಚಂಡ ಬುದ್ಧಿಶಾಲಿ. ಅಮರ, ಅದ್ವಿತೀಯ!
ಆತನ (ಅಥವಾ ಆ ಶಕ್ತಿಯ) ಸ್ವರೂಪವೇನು? ರೂಪ? ಗುಣ? ಆಕಾರ?.... ಪರಮಾತ್ಮನ ಕುರಿತು ಈ ರೀತಿ ತರ್ಕಿಸುವುದೇ ಅರ್ಥರಹಿತ ಕಾರ್ಯ.
ಎಂದೂ ನಶಿಸದ ಶಕ್ತಿ ಸಾಮರ್ಥ್ಯ ವಿದ್ವತ್ ಇತ್ಯಾದಿ ಇತ್ಯಾದಿಗಳನ್ನು ಯಾವನು ಪಡೆದಿರುವನೋ ಆತನೇ ದೇವರು.
ಚಾರ್ಲ್ಸ್ ಡಾರ್ವಿನ್ ಎಂಬ ವಿಜ್ಞಾನಿಯು ತನ್ನ ವಿಕಾಸವಾದದಲ್ಲಿ ಹೇಳುತ್ತಾರೆ
"ಈ ಭೂಮಿಯಲ್ಲಿ ಜಲಚರಗಳು ಮೊದಲು ಜನ್ಮಿಸಿದವು. ಆ ಬಳಿಕ ಉಭಯವಾಸಿಗಳು..."
ನಮ್ಮ ಹಿಂದೂ ಧರ್ಮವೂ ಈ ವಾದವನ್ನೇ ಸಮರ್ಥಿಸುತ್ತದೆ. ಮಹಾವಿಷ್ಣುವಿನ ಮೊದಲ ಅವತಾರ ಮತ್ಸ್ಯಾವತಾರ(ಜಲಚರ) ಎಠಡನೆಯದು ಕೂರ್ಮ(ಉಭಯವಾಸಿ) ಮೂರನೇ ಅವತಾರ ವರಾಹ(ಭೂಚರ) ನಾಲ್ಕನೆಯದೇ ವಿಶೇಷವಾದ ನರಸಿಂಹಾವತಾರ(ಅರೆಪ್ರಾಣಿ ಅರೆ ಮಾನವ)
ಆ ನಂತರದ್ದೆಲ್ಲ ಮಾನವನ ಅವತಾರ...
ಹಾಗಿದ್ದರೆ! ಈ ಭೂಮಿಯಲ್ಲಿ ಮಾನವನ ಉಗಮಕ್ಕೆ ಮೊದಲೇ ದೇವರು ಅವತರಿಸಿದ್ದರೇ? ಆ ದೇವರನ್ನು ಯಾರು ಪೂಜಿಸಿದರು? ಆ ಮಹಾಮಾಯೆಗೆ ಇಷ್ಟೊಂದು ಅಗಾಧ ಪ್ರಮಾಣದ ಶಕ್ತಿ ಸಾಮರ್ಥ್ಯಗಳು ಬಂದದ್ದಾದರೂ ಹೇಗೆ?
ಪರಮಾತ್ಮನಿಗೆ ಶಕ್ತಿ ಬರುವುದು ನಾವು ನೀಡುವ ಹವಿಸ್ಸಿನಿಂದಲ್ಲ. ನಾವು ಸಮರ್ಪಿಸುವ ಸಮಿದೆಯಿಂದಲ್ಲ. ಸುರಿವ ಹಾಲಿನಿಂದಲೂ ಅಲ್ಲ. ಹಾಗಾದರೆ ಪೂಜೆ ಏಕೆ? ಜಪತಪಗಳೇಕೆ? ಹೋಮ ಹವನಗಳೇಕೆ? ಮಳೆಗೆ ನೆನೆಯದವನಿಗೆ, ಚಳಿಗೆ ನಡುಗದವನಿಗೆ ಆಲಯಬೇಕೇ? ಅತೀತನಿಗೆ ಅಲಂಕಾರಬೇಕೇ?
ಪ್ರತಿಯೊಂದು ಆಚರಣೆಯ ಹಿಂದೆ, ಸಂಪ್ರದಾಯದ ಹಿಂದೆ ಬಹಳಷ್ಟು ವೈಜ್ಜಾನಿಕ ಸತ್ಯ ಅಡಗಿದೆ. ನಮಗಿಂತ ಬಲಿಷ್ಠವಾದ ಆ ಶಕ್ತಿಗೆ ಶಿರಸಾಷ್ಟಾಂಗ ನಮಿಸುವುದರಿಂದ ನಮ್ಮಲ್ಲಿ ಹಿರಿಯರನ್ನು ಗೌರವಿಸುವ ಸದ್ಗುಣ ವೃದ್ದಿಸುತ್ತದೆ. ಹೋಮ ಹವನಗಳ ಧೂಮವು ರೋಗಕಾರಕ ಬ್ಯಾಕ್ಟೀರಿಯಗಳನ್ನು ನಾಶಗೊಳಿಸುತ್ತದೆ. ಸ್ಪಶ್ಟ ಉಚ್ಛಾರದ ಮಂತ್ರಘೋಷ, ತಾಳಬದ್ಧವಾದ ಭಜನೆ-ಕೀರ್ತನೆಗಳಿಂದ ನಮ್ಮ ಶಾರೀರಿಕ ದೋಷಗಳು(ವಾತ ಪಿತ್ತ ಕಫಾದಿ) ನಿವಾರಣೆಯಾಗುವುದೂ ಅಲ್ಲದೆ
ಸನ್ನಡತೆ ಮೈಗೂಡುವುದು. ದೇವಾಲಯದಲ್ಲಿ ಸಮೂಹ ಕೈಕಂರ್ಯ ಕೈಗೊಳ್ಳುವುದರಿಂದ ಅನೇಕ ಲಾಭಗಳಿವೆ. ವಾಸ್ತು ಪ್ರಕಾರ ನಿರ್ಮಾಣವಾದ ದೇಗುಲದಲ್ಲಿ ಶಾಂತಿ, ನೆಮ್ಮದಿ, ಪ್ರಶಾಂತತೆ ಸದಾಕಾಲ ನೆಲೆಸಿರುತ್ತದೆ. ಅಂತಹ ವಾತಾವರಣದಲ್ಲಿ ಶಂಖನಾದ, ಘಂಟಾನಾದ, ಪೂಜೆ, ಅಭಿಷೇಕ ಮೊದಲಾದ ಸೇವೆಗಳನ್ನು ಕೈಗೊಂಡರೆ ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕನ ಸಂಪೂರ್ಣ ಕೃಪಾಕಟಾಕ್ಷ ನಮಗಾಗುವುದು ಖಂಡಿತ.
ಇಲ್ಲಿ ಗಮನಿಸಬೇಕಾದ ಒಂದು ಅಂಶವಿದೆ. ನಾವು ಮಾಡುವ ವ್ರತ ಪೂಜೆ ಜಪ ತಪಾದಿಗಳ ಲಾಭ ನಮಗೇ ಹೊರತು ದೇವರಿಗಲ್ಲ.
ಹಾಗಿದ್ದರೂ ನಾವು ನೂರು ರುಪಾಯಿಯ ಮಲ್ಲಿಗೆ ಅರ್ಪಿಸಿ, ಹತ್ತು ಸಾವಿರ ರುಪಾಯಿಯ ಬೇಡಿಕೆ ದೇವರ ಮುಂದಿಡುತ್ತೇವಲ್ಲ!
ನಾವು ಕೇಳಿದ ಮೇಲೆ ದೇವರು ನಮಗೆ ಕೊಡುವುದಲ್ಲ. ನಮಗೇನು ಬೇಕೋ ಅದನ್ನು ನಮಗೆ ದೇವರು ಯಾವಾಗಲೋ ಕೊಟ್ಟಾಗಿದೆ. ಮತ್ತೇಕೆ ಈ ಅಜ್ಞಾನ?
ಮತ್ತೇಕೆ ನಮಗೆ ದುರಾಸೆ?
ಭಕ್ತಿ ಶುದ್ಧವಿರಬೇಕು. ಪ್ರಾರ್ಥನೆ ಸ್ವಾರ್ಥರಹಿತವಿರಬೇಕು. ಆಗಲೇ ದೇವರು ನಮ್ಮನ್ನು ಮೆಚ್ಚುವುದು.
ಯುವಜನಾಂಗ ಇಂದು ಅನೇಕ ರೀತಿಯ ಸಂಕಷ್ಟಗಳಿಂದ ಬಳಲುತ್ತಿದೆ. ಆತ್ಮಹತ್ಯೆಯಂತಹ ಹೇಡಿ ಕೃತ್ಯಕ್ಕೆ ಎಳಸುವವರಲ್ಲಿ ತರುಣ ತರುಣಿಯರ ಸಂಖ್ಯೆಯೇ ಅಧಿಕವಾಗಿದೆ. ತರುಣರು ಸೋಮಾರಿಗಳಾಗುತ್ತಿದ್ದಾರೆ. ಹೊಸ ಹೊಸ ಹೆಸರಿನ ಖಾಯಿಲೆಗಳಿಂದ ಬಳಲುತ್ತಿದ್ದಾರೆ. ಹತ್ತಾರು ದುಶ್ಚಟಗಳಿಗೆ ಬಲಿಯಾಗಿ ಅಮೂಲ್ಯವಾದ ಮಾನವ ಜೀವನವನ್ನು ವ್ಯರ್ಥವಾಗಿ ಕಳೆದುಕೊಳ್ಳುತ್ತಿದ್ದಾರೆ. ತನ್ಮೂಲಕ ಸಮಾಜದಲ್ಲಿ ಸಿಗಬೇಕಾದ ಗೌರವ ಆದರಗಳಿಂದ ವಂಚಿತರಾಗುತ್ತಿದ್ದಾರೆ. ಇದು
ಈ ದೇಶದ ಭವಿಷ್ಯದ ಹಿತದೃಷ್ಟಿಯಿಂದ ಒಳ್ಳೆಯದಲ್ಲ.
ಮನೆಯೆ ಮೊದಲ ಪಾಠಶಾಲೆ. ಆದ್ದರಿಂದ ಮಕ್ಕಳಿಗೆ ಭಕ್ತಿಯ ಪಾಠವನ್ನು ಮನೆಯಿಂದಲೇ ಆರಂಭಿಸಬೇಕು.. ನಿಮ್ಮ ಮಗು ಸ್ಕೂಲ್ ನಲ್ಲಿ ಡ್ಯಾನ್ಸ್ ಮಾಡಿ ಚಪ್ಪಾಳೆ ಗಿಟ್ಟಿಸಬಹುದು. ಅರ್ಥವಿಲ್ಲದ ಲವ್ ಸಾಂಗ್ ಗಳಿಗೆ ಹಾಡಿ ನರ್ತಿಸಿ ನಿಮ್ಮನ್ನು ಮುದಗೊಳಿಸಬಹುದು. ಕ್ರಿಕೆಟ್ ನಲ್ಲಿ ನೂರು ರನ್ ಬಾರಿಸಿ ಚಾಂಪಿಯನ್ ಆಗಬಹುದು.
ಆದರೆ ಇದಾವುದೂ ನಿಮ್ಮ ಮಗುವನ್ನು ಆದ್ಯಾತ್ಮದತ್ತ ಕೊಂಡೊಯ್ಯಲಾರದು.
ಆದ್ಯಾತ್ಮ ಚಿಂತನೆ ಎಂದಾಗ ಮಗು ಸನ್ಯಾಸಿಯಾದಾನೆಂಬ ಭಯಬೇಡ. ಭವಿಷ್ಯದಲ್ಲಿ ಸುಖಿಯಾಗಿ ಬಾಳಲಿ ಎಂಬ ಬಯಕೆ ನಮಗಿದ್ದರೆ ಸಾಕು. ಭಜನೆ, ಪೂಜೆ, ಜಪ ತಪಾದಿಗಳ ಮಹತ್ವವೇನು ಎಂಬುದನ್ನು ನಿಮ್ಮ ಮಗುವಿಗೆ ತಿಳಿಹೇಳಿರಿ. ಆತನೊಬ್ಬ ಉತ್ತಮ ಪ್ರಜೆ ಆಗಿ ಬಾಳಲು ಸಹಕರಿಸಿರಿ. ಧಾರ್ಮಿಕ ಸಭೆ ಸಮಾರಂಭಗಳಿಗೆ ಮಗು ಹಾಜರಾಗುವಂತೆ ಪ್ರಯತ್ನಿಸಿರಿ.
ಯಾರಿಗೆ ಗೊತ್ತು! ನಿಮ್ಮ ಮಗು ಈ ಭರತ ಖಂಡದ ಇನ್ನೋರ್ವ ವಿವೇಕಾನಂದ ಆಗಬಹುದು. ಇನ್ನೋರ್ವ ನಾರಾಯಣ ಗುರು ಆಗಬಹುದು.
ಸದಾಚಾರ ಸಂಪನ್ನನಾದ ಸತ್ಪುತ್ರನ ಮಾತಾಪಿತರಾಗಿ ನೀವು ರಾರಾಜಿಸಿರಿ.
ಎಂದಿನ ತನಕ ಅಕ್ಕಿ, ರಕ್ತ, ನೀರು, ಮತ್ತುಹಾಲನ್ನು ಲ್ಯಾಬೊರೇಟರಿ ಯಲ್ಲಿ ತಯಾರಿಸಲಾರೆವೋ ಅಂದಿನ ತನಕ ಜಗದೊಡೆಯನ ಕರುಣೆ ನಮಗೆ ಅತೀ ಅಗತ್ಯವಾಗಿದೆ.
*ಜಯರಾಮ್ ನವಗ್ರಾಮ//
ಸಾಲುಗಳು
- 409 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ