ಸೋಲಿಗೆ ಅಂಜದಿರಿ..!
ಸೋಲು ಸೋಲು ಸೋಲು.....ಸತತ ಸೋಲು.. ಗೆಲುವಿನ ಚಡಪಡಿಕೆಯಲ್ಲಿ ಭಯಾನಕ ಸೋಲುಗಳು..! ಊಹು.. ಇನ್ನು ಸಾಧ್ಯವೇ ಇಲ್ಲ ಬದುಕು...! ಸತ್ತು ಹೋಗೊದೊಂದೆ ದಾರಿ..! ಗೆಲುವಿಗೆ ದಕ್ಕುವ ನೆಂಟರಿಷ್ಟರೆಲ್ಲಾ... ಸೋಲಿಗೆ ಮಾತ್ರ ಯಾರೂ ವಾರಾಸ್ದಾರರಿಲ್ಲ..! ಅದು ಕೇವಲ ನಮ್ಮ ಅಪ್ಪಟ ನೆರಳು..! ಸೋಲು ಪರಮ ಏಕಾಂಗಿ... ಹಾಗೆಯೆ ಕೂಡ ವೇದಾಂತಿ..! ಗೆಲುವಿನಲ್ಲಿ ಎದೆ ಉಬ್ಬಿಸಿ ನಡೆಯುವ ವೀರಾಧಿವೀರರೆಲ್ಲಾ ಸೋಲುಗಳಲ್ಲಿ ಮಾತ್ರ ಊದಿ ಗಾಳಿ ಬಿಟ್ಟ ಬಲೂನು..! ತಂದೆ ತಾಯಿಗಳು ಕೂಡ ಮಕ್ಕಳನ್ನು ಸೋಲನ್ನು ಎದುರಿಸಲು ಬೆಳೆಸುವುದಿಲ್ಲ....ಬದಲಾಗಿ ಗೆಲ್ಲಲೆ ಬೇಕೆಂಬ ಒತ್ತಡದಲ್ಲಿ ಬೆಳೆಸುತ್ತಾರೆ..! ಸಮಾಜ ಮಾನ್ಯತೆ ಕೊಡುವುದು ಗೆಲುವಿನ ಕುದುರೆಗೆ ಮಾತ್ರ..! ಸೋತವರ ಸಹವಾಸ ಯಾರಿಗೂ ಬೇಡವೇ ಬೇಡ..! ಹಾಗಿದ್ದರೆ ಸೋತವನು ಬದುಕಲೆ ಬಾರದೆ...?
ಬೇಕಾದಷ್ಟು ಆಸ್ತಿ,ಕಾರು, ಬಂಗ್ಲೆ..ದೊಡ್ಡ ಕೆಲಸ, ಒಳ್ಳೆ ಸಂಬಳ ಇದ್ದರೆ ಮಾತ್ರ ಗೆಲುವಾ..? ಸಮಾಜ ನಿರ್ಮಿಸಿಕೊಂಡಿರುವ ಗೆಲುವಿನ ಮಾನದಂಡವಾದ್ರೂ ಏನು...? ಯಾರೊ ಒಬ್ಬಾತ ರಣಬಿಸಿಲಿನಲ್ಲಿ ದಾಹಗೊಂಡ ಪ್ರಾಣಿ ಪಕ್ಷಿಗಳಿಗೆ ನೀರುಣಿಸಿ ಸಂಬ್ರಮಪಡುತ್ತಾನೆ.. ಅದು ಗೆಲುವಾ..ಸೋಲಾ...? ಇನ್ನೊಬ್ಬಾತ ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ ತೃಪ್ತಿಪಡುತ್ತಾನೆ..ಅದು ಗೆಲುವಾ..ಸೋಲಾ...? ಮತ್ತೊಬ್ಬಾತ ಕಷ್ಟಗಳಲ್ಲಿಯೆ ಪ್ರಾಮಾಣಿಕವಾಗಿ ಜೀವನ ಸವೆಸುತ್ತಾನೆ ಅದು ಗೆಲುವಾ...ಸೋಲಾ...? ಅಷ್ಟಕ್ಕೂ ಸೋಲು ಗೆಲುವಿನ ಮಾನದಂಡವಾದ್ರು ಏನು..? ಅತೀ ಭಯಂಕರ ಶ್ರೀಮಂತನು ಸಮಾಜದ ದೃಷ್ಟಿಕೋನದಲ್ಲಿ ಗೆಲುವಿನ ಸರದಾರನೇ...? ಅಥವಾ ದಟ್ಟ ದರಿದ್ರ ಬೀದಿ ಭಿಕಾರಿಯು ಸಮಾಜದಲ್ಲಿ ಸೋಲಿನ ಚಿನ್ಹೆಯೇ...? ಸೋಲನ್ನು ಪ್ರೀತಿಸುವುದಕ್ಕೂ ಗಟ್ಟಿ ಗುಂಡಿಗೆ ಬೇಕು..! ಅಂತಹ ಗಟ್ಟಿ ಗುಂಡಿಗೆ ಇರುವುದು ಸತತ ಸೋಲಿನ ಸರದಾರರಲ್ಲಿ ಮಾತ್ರ..!
ಸೋಲೆ ಕಾಣದೆ ಸತತವಾಗಿ ಗೆಲ್ಲುವ ಗೆಲುವಿನ ಸರದಾರನಿಗೆ ಆತ್ಮವಿಶ್ವಾಸವು ಅಹಂಕಾರವಾಗಿ ಮಾರ್ಪಾಟಾಗಿರುತ್ತದೆ. ಸದಾ ಸಂಶಯ,ಅಂಜಿಕೆ ಅಳುಕು..ಗೆಲ್ಲಲೆ ಬೇಕೆಂಬ ಒತ್ತಡ...ಒಮ್ಮೆ ಸೋತೆನೆಂದರೆ ಬದುಕು ಮುಗಿದುಹೋಗಬಹುದೆಂಬ ಆತಂಕ. ಸ್ನೇಹ,ಪ್ರೀತಿ, ನಂಬಿಕೆಗಳಿಗೆ ಅವನಲ್ಲಿ ಜಾಗವಿರಲಾರದು...ಅವನಲ್ಲಿರೂ ಮಾನದಂಡ ಅಂದ್ರೆ ಅದು ಕೆವಲ ಗೆಲುವಿಗೆ ತಂತ್ರ.. ಆ ತಂತ್ರಗಾರಿಕೆ ಒಳ್ಳೆಯದ್ದೊ... ಕೆಟ್ಟದ್ದೊ...ಊಹೂ..ಅದು ಅವನಿಗೆ ಬೇಕಿಲ್ಲ.. ಸತತ ಗೆಲುವುಗಳು ಮಾತ್ರ ಅವನನ್ನು ಬದುಕಿಸಿಡಲು ಸಾಧ್ಯ..! ಒಂದೇ ಒಂದು ಭಯಂಕರ ಸೋಲು ಅವನ ಜೀವನದ ಅಂತ್ಯಕ್ಕೆ ಕಾರಣವಾಗಬಹುದು...ಅಷ್ಟೊಂದು ದುರ್ಬಲ ವ್ಯಕ್ತಿತ್ವ ಸತತ ಗೆಲುವಿನ ಸರದಾರನದ್ದು..!
ಅದೆ ಸತತ ಸೊಲಿನ ಸರದಾರ ಮಾನಸಿಕವಾಗಿ ಗಟ್ಟಿಯಾಗಿರುತ್ತಾನೆ..! ತನ್ನ ಸತತ ಪ್ರಯತ್ನಗಳ ಬಗ್ಗೆ ನಂಬಿಕೆ ಇಡುತ್ತಾನೆ..ಒಳ್ಳೆಯವರ್ಯಾರು, ಕೆಟ್ಟವರ್ಯಾರು, ಸ್ನೇಹಿತರ್ಯಾರು, ಶತ್ರುಗಳ್ಯಾರು,ಅಪ್ಪತ್ತಿಗಾಗುವ ನೆಂಟರ್ಯಾರು ಅನ್ನೊದನ್ನು ಸ್ಪಷ್ಟವಾಗಿ ಗುರುತಿಸಿರುತ್ತಾನೆ...ಸತತ ಸೋಲುಗಳು ಅವನ ಗುಂಡಿಗೆಯನ್ನು ಗಟ್ಟಿಗೊಳಿಸಿರುತ್ತವೆ ಹಾಗಾಗಿ ಆತನೆಂದೂ ಸೋಲು ಗೆಲುವಿಗೆ ಆತಂಕಪಡಲಾರ.. ಸತತ ಸೋಲುಗಳಿಂದಾನೆ ಆತ ಬದುಕಿನ ಪಾಠ ಕಲಿತಿರುತ್ತಾನೆ.ಅವನಲ್ಲಿ ಅನುಭವ ಹೆಪ್ಪುಗಟ್ಟಿರುತ್ತದೆ. ಆತ ತನ್ನ ಪ್ರಾಮಾಣಿಕ ಪ್ರಯತ್ನಗಳ ಬಗ್ಗೆ ವಿಶ್ವಾಸವಿಡುತ್ತಾನೆ..! ಅವನು ಸಮಾಜದ ಒರೆ ಕೊರೆಗಳನ್ನು ಅನುಭವಿಸಿರುತ್ತಾನೆ. ಆತನೆಂದೂ ಸೋಲಿಗೆ ಬೆನ್ನು ಕೊಡಲಾರ..! ಸೋಲನ್ನು ನೇರವಾಗಿ ಎದುರಿಸಿ ನಿಲ್ಲುವಷ್ಟು ಚಾತಿ ಹೊಂದಿರುತ್ತಾನೆ..! ಸ್ನೇಹ,ಪ್ರೀತಿ,ವಿಶ್ವಾಸಕ್ಕೆ ಅವನಲ್ಲಿ ಕೊರತೆ ಇರಲಾರದು..! ಇಂತಹ ಸತತ ಸೋಲಿನ ಸರದಾರನಿಗೆ ದಕ್ಕುವ ಒಂದೇ ಒಂದು ಗೆಲುವು ಶ್ರೇಷ್ಟ ಗೆಲುವಾಗಿರುತ್ತದೆ.ಆ ಗೆಲುವು ಅವನ ಜೀವನದ ದಿಕ್ಕನ್ನಷ್ಟೆ ಅಲ್ಲ ಸಮಾಜದ ದೃಷ್ಟಿಕೋನವನ್ನು ಬದಲಾಯಿಸಿಬಿಡಬಲ್ಲದು..!
ಸೋಲು ಗೆಲುವಿನ ಸಮ್ಮಿಶ್ರಣವೇ ನಮ್ಮೆಲ್ಲರ ಬದುಕಿಗೊಂದು ಅರ್ಥ ತಂದುಕೊಡುವುದು...! ಹಾಗಾಗಿ ಸೋಲೆಂಬ ಸೋಲು ಕನಿಷ್ಟವಲ್ಲ ಗೆಲುವಿಗೊಂದು ವ್ಯಾಖ್ಯಾನ ತಂದು ಕೊಡುವುದೆ ಸೋಲಿನ ಶ್ರೇಷ್ಟತೆಯಾಗಿದೆ..! ಸೋಲನ್ನು ಎದುರಿಸಿ...ಸೋಲನ್ನು ಸ್ವೀಕರಿಸಿ...ಸೋಲನ್ನು ಗೌರವಿಸಿ.. ಹಾಗೆಯೆ ಸೋಲನ್ನು ಕೂಡ ಆನಂದಿಸಿ.... ಆಗ ಮಾತ್ರ ಅದೇ ಸೋಲು ನಿಮ್ಮ ಶ್ರೇಷ್ಟ ಗೆಲುವಿಗೊಂದು ಮೆಟ್ಟಿಲಾಗುತ್ತದೆ..! ಅಂತೆಯೆ ಹಲವಾರು ಸೋಲುಗಳು ಒಂದು ಶ್ರೇಷ್ಟ ಗೆಲುವಿಗೆ ಮುನ್ನುಡಿಯಾಗುತ್ತವೆ..!
ಸಾಲುಗಳು
- 842 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ