
ಪರನಾರಿಯ ಸುಖ!!
ನಿಸ್ತಂತು ವಾಣಿಯ
ಮುಖ ಮುದ್ರೆಯೊಳ್
ಉದಿಸಿದ
ಕಿರುಸಂದೇಶವಂ
ವಾಚಿಸುತ
ಪುಲಕಂಗೊಳುತ
ಲಗುಬಗೆಯಿಂ ಮೇಲೆದ್ದು
ಪವಡಿಸಿದ ಮೆತ್ತೆಯಂ
ಸುತ್ತಿ ಮೂಲೆಗೆಸೆದೂ
ಗಡಿಬಿಡಿಯಿಂ
ಮುಖಮಾರ್ಜನಕ್ಕೆ
ಅಣಿಯಾಗೆ
ಮತ್ತೊಮ್ಮೆ ಸುಸ್ವರದಿ ನಿಸ್ತಂತು ಮೊಳಗೇ
ಅದಕುತ್ತರವ ಎಡಗೈ
ಹಿರಿವೆರಳೊಳ್ ಟೈಪಿಸುತ
ತಾನೆದ್ದ ಕುರುಹೆಂದು
ರವಾನಿಸಿ
ಒಲೆ ಮಗ್ಗುಲಲ್ಲಿರ್ದ ಚಹ
ವಂ ಗುಟುಕರಿಸುತಿರಲಾಗ
ಮಗುದೊಮ್ಮೆ
"come"
ಎಂಬ ಆಂಗ್ಲ ಪದ ಪುಂಜ
ಮುಖ ಮುದ್ರೆಯೊಳ್
ಉದಿಸೇ
ಸಂದೇಶದೊಡತಿ
ಷೋಡಶಿಗೊಂದು
misscall
ಎಸೆಯುತ
ಕಿರುಗಣ್ಣ ನೋಟದಲಿ
ಸತಿಯ ದಿಟ್ಟಿಸಲು
ಆ ಮಾನಿನಿಯು
ಕಣ್ಣೀರ ಕಡಲಲ್ಲಿ
ಮಿಂದಿರ್ದಳೂ
'ಕೋಲ್ಮಿಂಚು ಎಸೆದಿಲ್ಲ
ಮಳೆ ಸುರಿದ ಸುಳಿವಿಲ್ಲ
ಸತಿಯ ಕಣ್ಗಳಲಿ
ಎನಿತೀ ಪರಿಯ ಸೆಲೆಯೋ!?
ಮೃಷ್ಟಾನ್ನ ದೊರಕುತಿರೆ
ಒಣ ರೊಟ್ಟಿ ಯಾಕಿನ್ನು?
'ನುಡಿ'ಗೊಂದು 'ಪಡಿನುಡಿ'ಯು
ಮಾರ್ನುಡಿದೊಡೆ ಕೊಂಕು,
ಮೂಗ ನಂತಿಪ್ಪುದೇ
ಲೇಸು' ಎನುತ
ಕರಿಬಿಳಿಯ ದಿರಿಸಿಂದ
ಸಿಂಗಾರಗೊಳುತಿರಲು
ನಿಡುಸುಯ್ಯುತಾ
ಸತಿಯು ನೀರ್ಕುಡಿದಳೂ..
ಅನುನಯದಿ ಬಳಿಸಾರಿ
ಅನುರಾಗ ನಟಿಸುತಾ
ಒಂದೆರಡು ಹುಸಿ
ಮುತ್ತು
ಕಪೋಳದ ಇಕ್ಕೆಲಕೆ
ಇಕ್ಕಿ
ಬಲು ಚಾತುರ್ಯದಿಂ
ಮಾಂಗಲ್ಯ ಎಗರಿಸಿ
ಅತಿವೇಗದಲಿ
ಪೊರಮಟ್ಟ ಪತಿರಾಯನೂ!
ಅಪರಿಮಿತ ವೇಗದಲಿ
ರಾಜರಸ್ತೆಯ ತಲುಪಿ
ತುಳುಕುತ್ತ ಬರುತಿಪ್ಪ
ಪುರವಾಹನವ ಏರಿ
ನೇತಾಡಿ ಕುಲುಕಾಡಿ
ಎಗರೆಗರಿ ಪಯಣಿಸುತ
ಪುರಮೂಲೆಯಲಿ
ಇಳಿದು
ಮದಿರಾಲಯದ ಒಳ
ನುಸುಳಿ
ಹತ್ತರದು ಹತ್ತು
ನೋಟುಗಳ ತೆತ್ತು
ಅರೆಬಾಟ್ಲು ಕೆನ್ನೀರು
ತಾ ಪಡೆದನೂ
ಸುಮಚಿತ್ತಾರದಿಂ
ಕಂಗೊಳಿಪ ಗ್ಲಾಸಿನಲಿ
'ಮದನ ನರ ಚೇತನ'ದ
ಗುಳಿಗೆ ಜೊತೆ ಸೇವಿಸುತ
ಅತಿ ಖಾರದಂಬಡೆಯ
ಮೆಲ್ಲುತ್ತ ಹೊರ ಬರಲು
ಮನವ ಕಾಡಿದ ಗೆಳತಿ
ನಿಂತಿದ್ದಳೂ.
ಗಿಣಿಯ ಕೊಕ್ಕಿನ ಮೂಗು
ಕಾಕವರ್ಣದ ತ್ವಚೆಯು
ಉಬ್ಬು ತೋರುವ ಉಡುಗೆ
Baata ಕಾಲ್ಗಳ ಅಡಿಗೆ!
ಮೋಟು ಜಡೆಯಾ ಬೆಡಗಿ
ನಗುತ್ತಿದ್ದಳೂ!
ಕದ್ದು ಹಾದರ ಮಾಡೆ
ಕೊಲ್ಲಿ ದೆವ್ವವೆ ಸಾಕು
ಮನೆ ಬೆಳಗುವಾ ಹಣತೆ
ಬೆಳ್ಳಗಿರಬೇಕು
ಬೇರನಿಳಿಸುವ ಮರಕೆ
ಜಲದ ಮೂಲವೆ ಗಮ್ಯ
ಕರಿ ಕೆಂಪು ಜೌಗೆಂಬ
ಬೇಧವಿರದೂ
ಸರವ ಕನ್ಯೆಗೆ ನೀಡಿ
ಕಂಗಳಲೆ ಮಾತಾಡಿ
ಅವಸರಿಸಲಾ ಕನ್ಯೆ
'ತಡೆ' ಎಂದಳೂ
ಕರಿಮಣಿಯ ಸರವನ್ನು
ಗಿಳಿಚೀಲದಲಿ ಇರಿಸಿ
ಅತಿದುಃಖ ನಟಿಸುತ
ಇಂತೆಂದಳೂ
"ಹೊರಗಡೆಗೆ ಕಾಲಿಡಲು
ಸೋದರನ ಹಾರಾಟ.
'ಎಲ್ಲಿ ಸಾಯಲು ಹೊರಟೆ?'
ಎಂಬಾರ್ಭಟ.
ಹೆತ್ತಮ್ಮ ಕಂಗಳಲೆ
ಎತ್ತೆಂದು ಪ್ರಶ್ನಿಸಲು
ದೇವಮಂದಿರಕೆಂದು
ಹುಸಿ ನುಡಿದೆನು.
ಹಸಿವಿಂದ ಬಳಲಿರುವೆ
ತುಸು ತಾಳು ಮಹರಾಯ
ಈ ತನುವು ನಿನದೆಂ"ದು
ಪಿಸು ನುಡಿದಳೂ.
"ಉಪಹಾರ ತಿಂದಿಲ್ಲ
ದೇಹದಲಿ ಕಸುವಿಲ್ಲ
ಉದರದೊಳಗೇನಿಲ್ಲ
ಚುರುಕೆನುತಿದೇ
ಉಪಹಾರ ಮಂದಿರದಿ
ಹೊಕ್ಕಂತೆ ಆ ಬಾಲೆ
ನಡು ತೋರು ಬೆರಳುಗಳ
ಮೇಲೆತ್ತಲೂ
'ಒಳಮನೆಯ ಸಂಧಿಯಲಿ
ಬಲಭಾಗದಲಿ ಉಂಟು,
ನೀರುಂಟು ಹೋಗೆಂ'ದ
ಯಜಮಾನನೂ.
ತಾಸರ್ಧ ಕಳೆದಿರಲು
ಅನುಮಾನ ಅಂಕುರಿಸಿ
'ಎಲ್ಲಣ್ಣ ಅವಳೆ'ನಲು
ವಿಟಪುರುಷನು.
ಹುರಿಮೀಸೆ ನೀವಳಿಸಿ
ಕೆಂಗಣ್ಣು ಅರಳಿಸುತ
ತುಚ್ಛ ನುಡಿಪೋಣಿಸುತ
ಯಜಮಾನನೂ
"ನಾ ತೋರಿದ ದಾರಿ
ಶೌಚ ಮಂದಿರಕಹುದು
ಅದರಾಚೆ ಬೀದಿಯಿದೆ
ಹುಡುಕೆಂ"ದನೂ
"ಆ ಹೆಣ್ಣು ಜೇಡ
ನೀನಿಂದಿನ ನೊಣವು
ನಾಳೆ ಇನ್ಯಾರೋ
ಹೋಗೆಂದನು
ಕುಡಿದ ಮದಿರೆಯ
ಮತ್ತು
ಜರ್ರೆಂದು ಇಳಿದಿತ್ತು
ಕಾಮದಂಡವು ಮುದುರಿ
ಒಳಸರಿಯಿತೂ
ಸತಿಯ ಚಿನ್ನದ ಒಡವೆ
ಕಳಕೊಂಡು ಪತಿರಾಯ
ಅರೆಕ್ಷಣದ ಮಂಪರಲಿ
ಪರಿತಪಿಸುತಾ
ಅತಿಯಾದ ಕ್ರೋಧದಿಂ
ಕರೆ ಮಾಡಲಾ ಲಲನೆ
network
ವ್ಯಾಪ್ತಿಯನುದಾಟಿದ್ದಳೂ!!!
By: JAYARAM NAVAGRAMA 7760360542
ಸಾಲುಗಳು
- 479 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ