Skip to main content

ನಾಗ ನೆರಳು (ಭಾಗ 5)

ಬರೆದಿದ್ದುMay 22, 2015
noಅನಿಸಿಕೆ

ನಾಗ ನೆರಳು ಭಾಗ 5
ಕುಂಟ, ಕೊರಗಣ್ಣನ ಬಹುಪ್ರಿಯ ಸ್ನೇಹಿತನೇ.. ಇಸ್ಪೀಟು ಕೋಳಿ ಅಂಕ ಇಂತಹ ಗ್ರಾಮೀಣ
ಪ್ರದೇಶದ ಜೂಜಾಟದಲ್ಲಿ, ಈರ್ವರೂ ಸಮಾನ ಆಸಕ್ತರು.
ಎಲ್ಲಿಯೇ ಕೋಳಿ ಅಂಕ ಜುಗಾರಿ ಕಂಬಳ ಇದ್ದರೂ ಈ ಇಬ್ಬರೂ ಜತೆಯಲ್ಲೇ ಹೋಗಿ ಬೆಟ್ ಕಟ್ಟುತ್ತಿದ್ದರು.
ಆಗ ಅವರೊಳಗೆ ಒಡಮೂಡಿದ ಸ್ನೇಹ, ಇಂದು ಕುಂಟ ಶ್ರೀಯುತ ಕೊರಗಪ್ಪನವರ ಸಹಾಯಕನಾಗಿ
ಆಯ್ಕೆ ಆಗುವ ತನಕ ಮುಂದುವರಿದಿತ್ತು. ಕೊರಗಪ್ಪನವರ ಅದೃಷ್ಟದ ಬಾಗಿಲು ತೆರೆದು, ಅವರು
ಆರಿಸಿ ಬಂದರು.
ಆದರೆ ಶಾಸಕರಾದ ಕೊರಗಪ್ಪನವರು ಜವಾಬ್ದಾರಿಯುತ ಜನ ಪ್ರತಿನಿಧಿಯಾಗಿ ಅನೇಕ
ಗುಪ್ತತೆಗಳನ್ನು ಕಾಪಾಡಬೇಕಿತ್ತು. ಹಾಗಾಗಿ ಮೊದಲಿನ ಹಾಗೆ ಗಲಸ್ಯ ಕಂಠಸ್ಯ ಇರಲು
ಸಾದ್ಯವೇ? ಅದಕ್ಕಾಗಿಯೇ ತನ್ನ ಚದುರಂಗದಾಟದ ಕೆಲವೊಂದು ನಡೆಗಳನ್ನು ಸ್ವತಃ
ಕೊರಗಪ್ಪನವರೇ ನಿರ್ಧರಿಸುತ್ತಿದ್ದರು.
ಗ್ರಾಮೀಣ ಮಟ್ಟದ ಪಕ್ಷ ಬಲಪಡಿಸುವಿಕೆಯ ಚಟುವಟಿಕೆಗಳಲ್ಲಿ ಕೊರಗಪ್ಪನವರು ಬಿಜಿಯಾದರು.
ನಿಷ್ಟಾವಂತನೆಂದು ತನ್ನ ತಾನೇ ಪರಿಚಯಿಸಿಕೊಂಡು ಮನಮೋಹನನೆಂಬಾತ ಬರೆದಿದ್ದ ಪತ್ರ
ಅವರನ್ನು ಪ್ರತಿ ದಿನವೂ ಕಾಡುತ್ತಿತ್ತು. ತಮ್ಮ ಕೃಪಾಕಟಾಕ್ಷದಿಂದಲೇ ಮುಂದಕ್ಕೆ
ಬಂದಿದ್ದ ಮೋಸಪ್ಪ ಡೋಂಗ್ಯಪ್ಪ ನುಂಗಪ್ಪನವರನ್ನು ಗುಟ್ಟಾಗಿ ಭೇಟಿಯಾದರು
ಕೊರಗಪ್ಪನವರು. ನುಂಗಪ್ಪನವರು ಸಾಕಷ್ಟು ಜನಪ್ರಿಯರಾಗಿದ್ದರು. ಪರೋಪಕಾರಿಯಾಗಿದ್ದರು.
ಆದರೆ ಅವರು ಭೂಮಿ ನುಂಗುವ ಕೆಟ್ಟ ಸ್ವಭಾವ ಹೊಂದಿದ್ದರು. ಈಗಾಗಲೇ ಸಾಕಷ್ಟು ಎಕರೆ
ಭೂಮಿಯನ್ನು ಅವರು ನುಂಗಿದ್ದರು. ಹಾಗೆ ನುಂಗಿದ ಭೂಮಿಯಲ್ಲಿ ಫಲವತ್ತಾದ ಕಾಂಪ್ಲೆಕ್ಸ್
ಗಳು ಎದ್ದು ನಿಂತು ತೂಗಾಡುತ್ತಿದ್ದವು. 'ಹಳ್ಳಿಯ ಉದ್ಧಾರ ಆಗದೆ ದಿಲ್ಲಿಯ ಉದ್ಧಾರ
ಆಗದು' ಎಂಬ ಮಹಾತ್ಮರ ಮಾತಿನ ಅರ್ಥ ಏನಿತ್ತೋ...
ಆದರೆ ನುಂಗಪ್ಪನವರ ಕೈಚಳಕದಿಂದಾಗಿ ಹಳ್ಳಿಯ ಮಣ್ಣಲ್ಲಿ ಫಲವತ್ತಾದ 'ಬಾಡಿಗೆ' ಎಂಬ
ಬೆಳೆ ಬೆಳೆಯಲಾರಂಭಿಸಿತ್ತು.
ಪರಿಸರ ಪ್ರೇಮಿಯಾದ ಮನಮೋಹನ ಭಯಪಡುವಂತಾ ಭಯಾನಕ ಬದಲಾವಣೆ ಅವನ ಹಳ್ಳಿಯಲ್ಲಿ
ಆಗುತ್ತಿತ್ತು ಪಚ್ಚೆ ಪೈರು ಬೆಳೆವ ಭೂತಾಯ ಮಡಿಲ ಬಗೆದು ಸಿಮೆಂಟು ಉಸುಕು ಜಲ್ಲಿಯಿಂದ
ಮುಚ್ಚಿ ಅದರ ಮೇಲೆ ಪಿಲ್ಲರುಗಳೆಂಬ ರಾಕ್ಷಸಾಕಾರದ ಸಿಮೆಂಟು ಕಂಬಗಳು ಎದ್ದು
ನಿಂತಾಗಲೆಲ್ಲ ಮನಮೋಹನ ನಡುಗುತ್ತಿದ್ದ. ಆದರೆ ಮೂರಂಕೆಯ ಭೂಮಿಗೆ ನಾಲ್ಕಂಕೆಯ
ಕಿಮ್ಭತ್ತು ನೀಡಿ ಖರೀದಿಸುವ ನುಂಗಪ್ಪನವರ ಮುಂದೆ ಮನಮೋಹನನ ರೋದನ ಅರಣ್ಯ
ರೋದನವಾಗಿತ್ತು. ಮನಮೋಹನ ಇದನ್ನೆಲ್ಲ ಎದುರಿಸಿ ಹೋರಾಡಲಾರ. ಏಕೆಂದರೆ ಗ್ರಾಮದ
ಮುಕ್ಕಾಲಂಶ ಜನ ನುಂಗಪ್ಪನವರಿಂದ ಒಂದಲ್ಲ ಒಂದು ರೀತಿಯ ಉಪಕಾರ ಪಡೆದವರೇ. ಬಡ
ವಿದ್ಯಾರ್ಥಿಗಳಿಗೆ ವಿದ್ಯೆಗಾಗಿ ಸಹಾಯ, ಹೆಣ್ಮಕ್ಕಳ ಮದುವೆಗಾಗಿ ಧನ ಸಹಾಯ ದೇವಾಲಯ
ಚರ್ಚು ಮಸೀದಿಗಳಿಗಾಗಿ ಸಹಾಯ ಹಸ್ತ. ಇದೆಲ್ಲ ಶ್ರೀಯುತ ಡೋಂಗ್ಯಪ್ಪನವರ
ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿತ್ತು.
ಕೊರಗಪ್ಪನವರು ಮನಮೋಹನನ ಪತ್ರವನ್ನು ಮತ್ತೊಮ್ಮೆ ಓದಿದರು.
ಮರುದಿನವೇ ಮನಮೋಹನನ ಬಗ್ಗೆ ಸಾಕಷ್ಟು ವಿಷಯಗಳನ್ನು ಕಲೆ ಹಾಕಿದರು. ಅವರಿಗೆ
ಅಚ್ಚರಿಯಾಗಿತ್ತು. ಏಕೆಂದರೆ ಬಡವರ ಪಾಲಿನ ಕಣ್ಮಣಿಯಾಗಿದ್ದ ಮನಮೋಹನ.
ಆತ ತನ್ನ ಆಕರ್ಷಕ ವ್ಯಕ್ತಿತ್ವದಿಂದ ಬಹು ಗ್ರಾಮಗಳಲ್ಲಿ ಚಿರಪರಿಚಿತನೂ ಜನಾನುರಾಗಿಯೂ
ಆಗಿದ್ದ. ಕೊರಗಪ್ಪನವರು ಎಲ್ಲ ಗ್ರಾಮಗಳಿಗು ಭೇಟಿ ಕೊಡತೊಡಗಿದರು. ಪ್ರತಿ
ಗ್ರಾಮದಲ್ಲಿಯೂ ಆಕರ್ಷಕ ವ್ಯಕ್ತಿತ್ವದ ತರುಣರನ್ನು ಆರಿಸಿ, ಅವರ ಜನಪ್ರಿಯತೆ ವಾಕ್
ಚತುರತೆ ಸಂಘಟನಾ ಸಾಮರ್ಥ್ಯ ಇವನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಅವರುಗಳನ್ನು ತಮ್ಮ
ಪಕ್ಷದ ಯುವ ಮುಂದಾಳುಗಳಾಗಿ ನಿಯಮಿಸಲು ನಿರ್ಧರಿಸಿದರು. ಬಹುಗ್ರಾಮಗಳ ಎಲ್ಲ
ಕಡೆಗಳಲ್ಲಿಯೂ ಸಭೆ ಕರೆದು ಆ ತರುಣರನ್ನು ಗೌರವಿಸಿದರು. ಅವರ ಗುಣಗಾನ ಮಾಡಲೆಂದೇ ಒಬ್ಬ
ಚತುರ ಎಂಸಿ ಕೊರಗಪ್ಪನವರ ಜೊತೆಗೆ ಇರುತ್ತಿದ್ದ.
ಹುಡುಗರಿಗೆ ಹೂ ಕೊಟ್ಟು ಸ್ವಾಗತಿಸಲಾಯಿತು. ಶಾಲು ಹೊದಿಸಿ ಸನ್ಮಾನಿಸಲಾಯಿತು. ಅವರವರ
ಊರಲ್ಲಿ ಅವರೂರ ಹಿರಿಯರ ಮುಂದೆ ಅವರ ಗೆಳೆಯ ಗೆಳತಿಯರ ಸಮ್ಮುಖದಲ್ಲಿ ಈ ಚತುರ
ತರುಣರನ್ನು ಸಿಕ್ಕಾಪಟ್ಟೆ ಹೊಗಳಿ ಉಬ್ಬಿಸಿ ಕೊಬ್ಬಿಸಿ ಪಕ್ಷಕ್ಕೆ ಶರಣಾಗಿಸಿದರು
ಕೊರಗಪ್ಪನವರು.
ಗೆಳೆಯ ಗೆಳತಿಯರ ಪ್ರಚಂಡ ಕರತಾಡನದಲ್ಲಿ ಈ ತರುಣರು ಗಳು ತಮ್ಮ ಆಲೋಚನಾ ಶಕ್ತಿಯನ್ನು
ಕೊರಗಪ್ಪನವರಿಗೆ ಧಾರೆ ಎರೆದು ಪಕ್ಷಕ್ಕೆ ನಿಷ್ಠರಾದರು. ನುಂಗಪ್ಪನವರು ದೂರದಿಂದಲೇ
ತಮ್ಮ ಮೂಗಿನ ಮೇಲೆ ತಮ್ಮದೇ ಆದ ಒಂದು ಬೆರಳನ್ನಿಟ್ಟು ಮೂಕ ವಿಸ್ಮಿತರಾದರು. ಇದಾದ
ಬಳಿಕ ಆ ಎಲ್ಲ ತರುಣರನ್ನು ತಕ್ಕ ಮಟ್ಟಿಗೆ 'ನೋಡಿ'ಕೊಂಡು ಅವರೆಲ್ಲರೂ ಮನಮೋಹನನನ್ನು
ಅವಿರೋಧವಾಗಿ ಪಕ್ಷದ ತರುಣ ಸಂಘಟನೆಯ ಅಧ್ಯಕ್ಷನನ್ನಾಗಿ ಆರಿಸುವಂತೆ ಮಾಡಿದರು. ಮುಂದಿನ
ಕೆಲವು ತಿಂಗಳುಗಳಲ್ಲಿ ಮನಮೋಹನನಿಂದ ಬಹುಗ್ರಾಮಗಳ ಹೆಚ್ಚಿನ ಜನರು ಉಪಕಾರ ಉದ್ಯೋಗ
ಎಲ್ಲ ಹೊಂದತೊಡಗಿದರು. ಪ್ರತಿ ಗ್ರಾಮಗಳಲ್ಲಿ ಮನಮೋಹನ ಸಂಚರಿಸತೊಡಗಿದ. ಕೊರಗಪ್ಪನವರ
ಉತ್ತರಾಧಿಕಾರಿಯೋ ಎಂಬಂತೆ ಮನಮೋಹನ ಬೆಳೆಯತೊಡಗಿದ. ಎಲ್ಲೇ ಕೇಳಿ ಮನಮೋಹನ.. ಮನಮೋಹನ!!
ಕೊರಗಪ್ಪನವರ ಪ್ರತಿ ಕಾರ್ಯಕ್ರಮದಲ್ಲು ಮನಮೋಹನ ಇರುತ್ತಿದ್ದ. ಪ್ರತಿ ಬ್ಯಾನರ್ ನಲ್ಲು
ಮನಮೋಹನ ಇದ್ದೇ ಇರುತ್ತಿದ್ದ. ಬಹುಗ್ರಾಮಗಳ ತರುಣರಿಂದ ಮುದುಕರ ತನಕ ಎಲ್ಲರಿಗೂ ಈಗ
ಚಿರಪರಿಚಿತನಾಗಿದ್ದ ಮನಮೋಹನ.
ಜನ ಮನ ಕದ್ದ ಸುಂದರ ತರುಣ ಕೊರಗಪ್ಪನವರ ಸ್ವಾಮಿನಿಷ್ಟ ಭಕ್ತ ಮನಮೋಹನ.
ಚುನಾವಣೆ ಸಮೀಪಿಸಿತು. ಕೊರಗಪ್ಪನವರು ನಾಮಿನೇಷನ್ ಹಾಕಿದರು. ಅದೇ ದಿನ ಪಕ್ಷೇತರರಾಗಿ
ನುಂಗಪ್ಪನವರೂ ನಾಮಿನೇಷನ್ ಫೈಲ್ ಮಾಡಿದರು. ಜನ ಇಕ್ಕಟ್ಟಿಗೆ ಸಿಲುಕಿದರು. ಯಾರನ್ನು
ಆರಿಸಲಿ ಯಾರನ್ನು ಬಿಡಲಿ ಅನ್ನುವ ಸಮಸ್ಯೆ.
ಆದರೆ ಕೊರಗಪ್ಪನವರು, ಯಾರಿಗೂ ತಿಳಿಯದ ಹಾಗೆ ನುಂಗಪ್ಪನವರ ಜೊತೆ ಸ್ನೇಹದಿಂದಲೇ
ಇದ್ದರು. ರಾಜಕೀಯ ಎಂಬುದೊಂದು ಚದುರಂಗದಾಟ. ಇಲ್ಲಿ ಪ್ರತಿಯೊಂದು ನಡೆಯೂ
ಸೋಲು-ಗೆಲುವಿನ ಉಯ್ಯಾಲೆ. ಓಟಿಗೆ ಹದಿನೈದು ದಿನಗಳಿರುವಾಗ ಕೊರಗಪ್ಪನವರು ರಾತ್ರಿ
ಹನ್ನೆರಡು ಗಂಟೆಗೆ ನುಂಗಪ್ಪನವರ ಬಂಗಲೆಗೆ ಗುಟ್ಟಾಗಿ ತೆರಳಿ ಗುಟ್ಟಾಗಿ ವಾಪಸಾದರು.
ಮರುದಿನ ಮನಮೋಹನನ ಜೊತೆಗೆ ಹೂ ಶಾಲುಗಳಿಂದ ಸನ್ಮಾನಿತರಾಗಿದ್ದ ಕೆಲ ತರುಣರು
ಕ್ಯಾನ್ವಾಸಿಂಗ್ ಗೆ ಹೊರಟರು.
ನುಂಗಪ್ಪನವರ ಜೀಪ್ ನಲ್ಲಿ!
Continue

ಲೇಖಕರು

JAYARAM NAVAGRAMA

ಮ್ಯಾಂವ್sss

ನಾನು ಮೂಡಬಿದ್ರಿ ಸಮೀಪದ ಪುಚ್ಚಮೊಗರಿನಲ್ಲಿ 1966 ರಿಂದ 1968 ಈ ಇಸವಿಯ ಮಧ್ಯೆ ಜನಿಸಿರುವ ಬಗ್ಗೆ ದಟ್ಟ ವದಂತಿ ಇದೆ!
ನನ್ನ ತಂದೆ ಮತ್ತು ತಾಯಿ ಇಬ್ಬರೂ ಬಿಲ್ಲವರು.
ನನಗೆ ಈಗ ಸುಮಾರು 48 ವರ್ಷ ಆಗಿರಬಹುದು.
ಒಂದನೇ ತರಗತಿಯಿಂದ 7ನೇ ತರಗತಿ ತನಕ ನಮ್ಮ ಪುಚ್ಚಮೊಗರು ಗ್ರಾಮದ ನಿತ್ಯಾನಂದ ಎಯ್ಡೆಡ್ ಎಲಿಮೆಂಟರಿ ಶಾಲೆ
8 ಮತ್ತು 9ನೇ ತರಗತಿಯನ್ನು ಸರಕಾರಿ ಪ್ರೌಢಶಾಲೆ ಕೊನ್ನೆಪದವು. ಇಲ್ಲಿ ಕಲಿತೆನು.
ನಾನು ಎಂಟನೇ ತರಗತಿಯಲ್ಲಿರುವಾಗ ಶ್ರೀಮತಿ ಇಂದಿರಾ ಗಾಂಧಿಯವರ ಕೊಲೆ ಆಯಿತು. ಆಗ ಚಿತ್ರದುರ್ಗದ ಸುಜಾತ ಟೀಚರ್ ಬಾಯ್ತುಂಬಾ ಅತ್ತಿದ್ದರು.
ಹತ್ತು ವರುಷಗಳ ಕೆಳಗೆ ನನ್ನ ಊರನ್ನು ತ್ಯಜಿಸಿ
ಸತಿಸುತರ ಪ್ರೀತ್ಯರ್ಥಂ ನವಗ್ರಾಮಾಗಮನ ಮಾಡಿ
ನಾಯಿಯಂತೆ ವರ್ಕ್ ಮಾಡುತ್ತಾ ಜಾಯಿಂಟ್ ಪೆಯಿನ್ ಬ್ಯಾಕ್ ಪೆಯಿನ್ ಸ್ಕಿನ್ ಪ್ರಾಬ್ಲೆಮ್ ಇತ್ಯಾದಿ ಪ್ರಶಸ್ತಿ ಪಡೆಯುತ್ತಾ
ಫೇಸ್ಬುಕ್ ವಿಸ್ಮಯನಗರಿ ಗಳಲ್ಲಿ ಮಿಂಚುತ್ತಾ ಅಥವಾ ಹಾಗೆಂದು ಭ್ರಮಿಸುತ್ತಾ!
ಶ್ರೀಯುತ ಮೋಧೀಜಿಯವರ ಆಡಳಿತ ವೈಖರಿ ಏನೆಂದು ಅರಿಯಲಾರದೆ ಅರ್ಥೈಸಲಾರದೆ ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಟ್ಟುಕೊಂಡು ...
ತುಂಬಾ ದಿನದಿಂದ ಆಲೋಚಿಸುತ್ತಾ ಇರುವ ಕನ್ನಡದ ಕಂದ ನಾನು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.