Skip to main content

ವೀರಕೇಸರಿ

ಬರೆದಿದ್ದುMay 20, 2015
noಅನಿಸಿಕೆ

ವೀರ ಕೇಸರಿ
xxxxxx
ಕೇಸರಿ ತನ್ನ ಮಗ ಮರಿಕೇಸರಿಯ ಜೊತೆಗೆ ನೀರು ಹುಡುಕುತ್ತಾ ಹೊರಟಿದ್ದ.
ಆತನು ವಾಸವಾಗಿದ್ದ ದಟ್ಟಾರಣ್ಯದಲ್ಲಿ ಎಲ್ಲಿಯು ನೀರು ಇರಲಿಲ್ಲ. ಕುಡಿವ ನೀರಿಗಾಗಿ ಮೈಲುದ್ದ ಹುಡುಕಾಡಬೇಕಿತ್ತು. ಜೊತೆಗೆ ತನ್ನ ಮಗ ಕರುಳ ಕುಡಿ ವಂಶೋದ್ಧಾರಕ ಮರಿಕೇಸರಿಯ ರಕ್ಷಣೆಯ ಭಾರವೂ ಆತನ ಹೆಗಲೇರಿತ್ತು. ತಿಂಗಳ ಹಿಂದಷ್ಟೇ ತನ್ನ ತಾಯನ್ನು ಕಳೆದುಕೊಂಡ ತಬ್ಬಲಿ ಮಗು ಆತ. ಬೇಟೆಯಾಡಲೆಂದು ಗುಹೆಯಿಂದ ಹೊರ ಹೋಗಿದ್ದ ಸಿಂಹಿಣಿ ಇಂದಿನ ತನಕ ಬಂದಿಲ್ಲ. ಅವಳು ಏನಾದಳೆಂಬ ಸುದ್ಧಿಯೇ ಇಲ್ಲ. ಬದುಕಿದ್ದರೆ ಈ ಮುದ್ದು ಕಂದನ ಮರೆತು ಇರುತ್ತಿದ್ದಳೇ? ಖಂಡಿತಾ ಬದುಕಿಲ್ಲ ಅವಳು. ಹಾಗೊಂದು ಸಂಶಯ ಕೇಸರಿಯ ಮನದ ಮೂಲೆಯಲ್ಲಿ ಇದೆ.
ಹಕ್ಕಿಗಳ ಕಲರವ ಇಲ್ಲ. ತಂಗಾಳಿಯ ಸ್ಪರ್ಶವಿಲ್ಲ. ಕಾಡಿನಲ್ಲಿದ್ದ ದೈತ್ಯ ರೂಪದ ಮರಗಳು ದಿನಕ್ಕೊಂದರಂತೆ ಮಾಯವಾಗುತ್ತಿದೆ, ಮರಗಳು ಧರೆಗುರುಳುವ ಭಾರೀ ಶಬ್ಧಕ್ಕೆ ಹೆದರಿದ ಪಕ್ಷಿ ಸಂಕುಲ ಆ ಕಾಡನ್ನೇ ತೊರೆಯುತ್ತಿವೆ.
ಕೇಸರಿಗೂ ಈ ಶಬ್ಧ ಆಗಾಗ ಕೇಳಿಸುತ್ತದೆ. ಆದರೆ ಆತನೀಗ ಅಸಹಾಯಕ. ನಿತ್ರಾಣಿ. ಕಾಡಿನ ರಾಜನೆಂಬ ಬಿರುದನಿತ್ತ ಜನ ಕಾಡಲ್ಲಿ ಬಾಳಲು ಬಿಡಲಾರರು. ಅವರ ಕಣ್ಣಿಗೆ ಬಿದ್ದರೆ ಬಲೆಯಲ್ಲಿ ಕೆಡವಿ ಸರ್ಕಸ್ ಕಂಪೆನಿಗೋ ವನ್ಯಧಾಮಕ್ಕೋ ರವಾನಿಸಿ ಬಿಡ್ತಾರೆ.
''ಅಪ್ಪಾ ನಮ್ಮ ಕಾಡಲ್ಲೇಕೆ ನೀರಿಲ್ಲ?''
"ಕಾಡಲ್ಲಿ ಮರ ಇಲ್ಲ ಕಂದಾ, ಮರ ಇಲ್ಲದೆ ಮಳೆ ಇಲ್ಲ. ಹರಿದು ಹೋಗುವ ನೀರಿಗೆ ಬರಗಾಲ ಬಂತು"
"ಮರಗಳೆಲ್ಲ ಏನಾಯಿತಪ್ಪಾ?"
"ಮನುಷ್ಯರು ಕಡಿದು ಒಯ್ದರು"
"ಮನುಷ್ಯರಿಗೆ ಮರ ಯಾಕಪ್ಪಾ?"
"ಅವರನ್ನು ಸುಡೋದಕ್ಕೆ. ನೀನು ಸುಮ್ಮನೆ ಬಾ"
ಹೀಗೆ ಮಾತಾಡುತ್ತಾ ಮೈಮರೆತಿದ್ದ ಅದೇ ಕ್ಷಣದಲ್ಲಿ ಆಕಾಶದಿಂದ ಅತ್ಯಂತ ವೇಗವಾಗಿ ಬಂದ ಬಲೆಯೊಂದು ಅವರೀರ್ವರನ್ನೂ ಬಂಧಿಸಿತ್ತು.
ಬಂಧನವಾಯ್ತೆಂದು ದಿಟಗೊಂಡಾಗ ಕೇಸರಿಯು ಕಾಡೆಲ್ಲಾ ನಡುಗುವಂತೆ ಘರ್ಜಿಸಿದ. ಅದು ಅಸಹಾಯಕತೆಯ ಕೂಗು. ನೋವು ತುಂಬಿದ ಕೂಗು. ಆಗಲೇ ಮರೆಯಿಂದ ಬಂದರು ಹತ್ತಿಪ್ಪತ್ತು ಜನ ಬಂಟರು. ಎಂಟೆದೆಯ ಬಂಟರು. ಗಂಟು ಗಂಟಿನ ನೂಲಿನೊಳಗೆ ಬಂಧಿಸಿ ಕದ್ದೊಯ್ಯುವ ನೆಂಟರು.
"ಓಹೋ ಒಂದು ಚಿಕ್ಕ ಮರಿ!"
"ಅದಕ್ಕೇ ಕಣೋ ಡಿಮ್ಯಾಂಡೂ. ಅದನ್ನು ಹೇಳಿದ ಬೆಲೆ ಕೊಟ್ಟು ಕೊಂಡುಕೊಳ್ಳುವರು "
ಎರಡು ಪ್ರತ್ಯೇಕ ಟೆಂಪೋಗಳಲ್ಲಿ ಅಪ್ಪ ಮಗನನ್ನು ಬೇರ್ಪಡಿಸಿ ಒಯ್ಯತೊಡಗಿದರು ಕಿರಾತಕರು. ರಾತ್ರಿ ಇಡೀ ಕೇಳದ ಪಟ್ಟಣ ನೋಡದ ಊರೆಲ್ಲ ನೋಡುತ್ತಾ ಕೇಸರಿಯು ಸಮುದ್ರ ದಂಡೆ ತಲುಪಿದ್ದ. ಬಾಯಾರಿ ಬಸವಳಿದ ಕಂದನ ಅಗಲಿಕೆಯ ಕೊನೆಕ್ಷಣದ ಕೂಗು! ಸಹಾಯ ಮಾಡಪ್ಪಾ ನನ್ನನ್ನು ರಕ್ಷಿಸು ಎಂಬ ಆಕ್ರಂದನ!
ಕೇಸರಿಯ ಹೃದಯ ಭಾರವಾಗಿತ್ತು. ಹಡಗು ಸಮುದ್ರ ಮಧ್ಯೆ ನೀರನ್ನು ಸೀಳುತ್ತಾ ಸಾಗುತ್ತಿತ್ತು. ಕೇಸರಿಯನ್ನು ಬಂಧಿಸಿದ್ದ ಗೂಡು ಹಡಗಿನ ಬಂಧನದಿಂದ ಮುಕ್ತವಾಗಿತ್ತು.
ಪತ್ನಿಯ ಅಗಲಿಕೆ! ಈಗ ಮುದ್ದು ಕಂದನ ಅಗಲಿಕೆ!! ದುಃಖ ಕೋಪ ರೋಷ ಆವೇಷವೆಲ್ಲ ತುಂಬಿ ಕೇಸರಿಯ ಮೈಗೆ ದೈತ್ಯ ಚೇತನ ತುಂಬಿತ್ತು. ಏನಾದರಾಗಲಿ ಇವರ ಕೈಗೆ ಸಿಗಲಾರೆ ಎಂಬ ಕೆಟ್ಟ ಹಠದಿಂದ ಹಿಂಗಾಲುಗಳಲ್ಲಿ ಇಡೀ ಮೈಯ ಶಕ್ತಿ ಕ್ರೋಢೀಕರಿಸಿ ಒಮ್ಮಿಂದೊಮ್ಮೆಲೆ ಅತ್ಯಂತ ವೇಗವಾಗಿ ಮೇಲೆ ನೆಗೆದ. ಈ ನೆಗೆತದ ರಭಸಕ್ಕೆ ಗೂಡಿನ ಮೇಲ್ಭಾಗದ ಗೋಡೆಯು ನಡು ನೆತ್ತಿಗೆ ಬಡಿದಿತ್ತು.
ತಲೆ ಒಡೆದು ಮೆದುಳು ಕೆಳ ಚೆಲ್ಲಿತ್ತು. ಶಬ್ಧವೇನೆಂದು ನೋಡಲು ಬಂದ ನರಕಾಸುರರಿಗೆ ವೀರ ಕೇಸರಿಯ ಶವವು ನಗುತ್ತಿರುವಂತೆ ತೋರುತ್ತಿತ್ತು.

ಲೇಖಕರು

JAYARAM NAVAGRAMA

ಮ್ಯಾಂವ್sss

ನಾನು ಮೂಡಬಿದ್ರಿ ಸಮೀಪದ ಪುಚ್ಚಮೊಗರಿನಲ್ಲಿ 1966 ರಿಂದ 1968 ಈ ಇಸವಿಯ ಮಧ್ಯೆ ಜನಿಸಿರುವ ಬಗ್ಗೆ ದಟ್ಟ ವದಂತಿ ಇದೆ!
ನನ್ನ ತಂದೆ ಮತ್ತು ತಾಯಿ ಇಬ್ಬರೂ ಬಿಲ್ಲವರು.
ನನಗೆ ಈಗ ಸುಮಾರು 48 ವರ್ಷ ಆಗಿರಬಹುದು.
ಒಂದನೇ ತರಗತಿಯಿಂದ 7ನೇ ತರಗತಿ ತನಕ ನಮ್ಮ ಪುಚ್ಚಮೊಗರು ಗ್ರಾಮದ ನಿತ್ಯಾನಂದ ಎಯ್ಡೆಡ್ ಎಲಿಮೆಂಟರಿ ಶಾಲೆ
8 ಮತ್ತು 9ನೇ ತರಗತಿಯನ್ನು ಸರಕಾರಿ ಪ್ರೌಢಶಾಲೆ ಕೊನ್ನೆಪದವು. ಇಲ್ಲಿ ಕಲಿತೆನು.
ನಾನು ಎಂಟನೇ ತರಗತಿಯಲ್ಲಿರುವಾಗ ಶ್ರೀಮತಿ ಇಂದಿರಾ ಗಾಂಧಿಯವರ ಕೊಲೆ ಆಯಿತು. ಆಗ ಚಿತ್ರದುರ್ಗದ ಸುಜಾತ ಟೀಚರ್ ಬಾಯ್ತುಂಬಾ ಅತ್ತಿದ್ದರು.
ಹತ್ತು ವರುಷಗಳ ಕೆಳಗೆ ನನ್ನ ಊರನ್ನು ತ್ಯಜಿಸಿ
ಸತಿಸುತರ ಪ್ರೀತ್ಯರ್ಥಂ ನವಗ್ರಾಮಾಗಮನ ಮಾಡಿ
ನಾಯಿಯಂತೆ ವರ್ಕ್ ಮಾಡುತ್ತಾ ಜಾಯಿಂಟ್ ಪೆಯಿನ್ ಬ್ಯಾಕ್ ಪೆಯಿನ್ ಸ್ಕಿನ್ ಪ್ರಾಬ್ಲೆಮ್ ಇತ್ಯಾದಿ ಪ್ರಶಸ್ತಿ ಪಡೆಯುತ್ತಾ
ಫೇಸ್ಬುಕ್ ವಿಸ್ಮಯನಗರಿ ಗಳಲ್ಲಿ ಮಿಂಚುತ್ತಾ ಅಥವಾ ಹಾಗೆಂದು ಭ್ರಮಿಸುತ್ತಾ!
ಶ್ರೀಯುತ ಮೋಧೀಜಿಯವರ ಆಡಳಿತ ವೈಖರಿ ಏನೆಂದು ಅರಿಯಲಾರದೆ ಅರ್ಥೈಸಲಾರದೆ ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಟ್ಟುಕೊಂಡು ...
ತುಂಬಾ ದಿನದಿಂದ ಆಲೋಚಿಸುತ್ತಾ ಇರುವ ಕನ್ನಡದ ಕಂದ ನಾನು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.