ಅಸಹಾಯಕ
ಮಾನವ ಜೀವಿ ಅಸಹಾಯಕ ಜೀವಿ. ಚಳಿಯಿಂದ ರಕ್ಷಣೆಗೆ ರೋಮಗಳಿಲ್ಲ. ಹಾರಲು ರೆಕ್ಕೆ ಇಲ್ಲ. ದಪ್ಪ ಚರ್ಮ, ಕೋರೆ ಹಲ್ಲು ಕಾಲಲ್ಲಿ ಗೊರಸು ಇದ್ಯಾವುದೂ ಈ ಜೀವಿಗೆ ಇಲ್ಲ. ಇಂತಹ ಒಂದು ಪಾಪದ ಬೆತ್ತಲೆ ಸಾಧು ಪ್ರಾಣಿ ಇಲ್ಲಿ ಚಳಿ ಗಾಳಿ ಮಳೆ ಸಹಿಸಿಕೊಂಡು ಬದುಕಿ ಉಳಿದೀತಾದರೂ ಹೇಗೆ?
ದೈತ್ಯ ಜೀವಿಗಳೊಂದಿಗೆ ಪೈಪೋಟಿಯ ಜೀವನ ಈ ಪ್ರಾಣಿಗೆ ಸಾಧ್ಯವೇ?
ಅಯ್ಯೋ ಪಾಪ! ಈ ರೀತಿ ಯೋಚಿಸಿದ ಪರಮಾತ್ಮ ಅ ಪ್ರಾಣಿಗೆ 'ಜ್ಞಾನ' ಎಂಬ ಸಂಪತ್ತನ್ನು ಕರುಣಿಸಿ ಆಶೀರ್ವದಿಸಿದ!
ಆದರೆ ಪಾಪಿ ಮಾನವ ಕರುಣಾಮಯಿ ಭಗವಂತನ ಮೇಲೆ ಕಿಂಚಿತ್ತೂ ಕೃತಜ್ಞತೆ ತೋರದೆ ತಾನೇ ದೇವರಾಗಿ ಈ ಭೂಮಿಯ ಮೇಲೆ ದಬ್ಬಾಳಿಕೆ ನಡೆಸತೊಡಗಿದ. ಕಾಡು ಜಲ ಜೀವಜಂತು ಎಲ್ಲವನ್ನು ತನ್ನಿಚ್ಚೆಯಂತೆ ಬಳಸಿಕೊಂಡ. ಹುಲಿ ಸಿಂಹದಂತಹ ಕ್ರೂರ ಆನೆಯಂತಹ ಗಂಭೀರ ಪ್ರಾಣಿಗಳನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡು ಅವುಗಳಿಂದ ಉಚಿತ ಸೇವೆ ಮಾಡಿಸಿಕೊಂಡ. ಕಾಮದಿಂದುಕ್ಕಿ ರಾಶಿ ಸಂತಾನವ ಕಕ್ಕಿ ಪ್ರಕೃತಿಯನ್ನು ಮುಕ್ಕಿ ವಿಷದ ಹೊಗೆ ಕಕ್ಕಿ ಆದನಿವನೊಂದು ಕಪ್ಪು ಚುಕ್ಕಿ.
ಆದರೆ! ಪ್ರಕೃತಿಯ ಮುಂದೆ ಮಾನವ ಈಗಲೂ ಹಸುಗೂಸು. ದೇವರಿಗೆ ಕೋಪ ಬಂತೋ ! ಇಲ್ಲಿ ಕಾದಿದೆ ಸರ್ವನಾಶ!! ಭೂಮೇಲ್ಪದರದ ಆಗು ಹೋಗುಗಳ ಅರಿತಾನು ಮಾನವ, ಚಂಡಮಾರುತದ ಬಿರುಗಾಳಿಯ ಮಳೆಯ ಮುನ್ಸೂಚನೆ ಪಡೆದಾನು. ಭೂಗರ್ಭದೊಳಗಿನ ಶಿಲಾರಸಗಳ ಚಲನೆಯ ಗತಿ ಮಾನವನ ಅಲ್ಪಜ್ಞಾನಕ್ಕಿನ್ನೂ ಎಟುಕಿಲ್ಲ. ಊಹಿಸಬಲ್ಲನಾದರೂ ನಿಖರತೆ ಸಾಧಿಸಲಾಗಲಿಲ್ಲ
ಬದುಕಬೇಕೆಂಬ ಆಸೆ ಇದ್ದರೆ ತನ್ನ ದುರ್ಗುಣ ದುರಾಸೆಗಳನ್ನು ತ್ಯಜಿಸಿ ಪ್ರಕೃತಿ ಮಾತೆಯ ಮುದ್ದು ಕಂದಮ್ಮಗಳೊಂದಿಗೆ ಸ್ನೇಹ, ಸಹಬಾಳ್ವೆ ಮಾನವನಿಗೆ ಅನಿವಾರ್ಯ!
ಸಾಲುಗಳು
- 388 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ