Skip to main content

ಕನ್ನಡ / ಇಂಗ್ಲೀಷ್ ಮೊಂಡು ವಾದ ನಿಲ್ಲಿಸೋಣವೆ?

ಬರೆದಿದ್ದುFebruary 1, 2015
2ಅನಿಸಿಕೆಗಳು

ಕಾಲಚಕ್ರವೇ ಒಂದು ಅಚ್ಚರಿ. ಇಲ್ಲಿ ಬದಲಾವಣೆ ನಿರಂತರ. ನಿನ್ನೆ ಹೊಸತು ಇಂದು ಹಳತು. ಇಂದಿನ ಹಳತು ನಾಳೆ ಇಲ್ಲವೇ ಇಲ್ಲ. ಇಲ್ಲಿ ಉಳಿಯುವದು ಕಾಲಕ್ಕೆ ತಕ್ಕಂತೆ ಬದಲಾಗುವ ಸಂಗತಿಗಳು ಮಾತ್ರ.

ಹೊಸತು ಹಳೆಯದನ್ನು ಸ್ಥಾನಪಲ್ಲಟ ಮಾಡುವಾಗ ಹಳೆಯದನ್ನು ಸಮರ್ಥಿಸಿ ಹೊಸತನ್ನು ವಿರೋಧಿಸಿ ವಾದ ವಿವಾದ ನಡೆಯುತ್ತದೆ. ಕಾಲಕ್ರಮೇಣ ಹೊಸತು ಹಳೆಯದನ್ನು ಹಿಂದಕ್ಕೆ ಹಾಕಿದಾಗ ಈ ವಾದ ವಿವಾದಗಳೆಲ್ಲ ತಣ್ಣಗಾಗಿ ಗೂಡು ಸೇರುತ್ತವೆ. ಇದು  ಸಹಜ.

ಉದಾಹರಣೆಗೆ ಮಿಕ್ಸರ್ / ಗ್ರೈಂಡರ್ ಮೊದಲು ಬಂದಾಗ ಒರಳು ಕಲ್ಲಲ್ಲಿ ಮಾಡಿದ ದೋಸೆ/ಚಟ್ನಿ/ಸಾರಿನ ರುಚಿ, ಕಡೆಕೋಲಲ್ಲಿ ಮಾಡಿದ ಮಜ್ಜಿಗೆ ರುಚಿ ಇದರಲ್ಲಿ ಎಲ್ಲಿದೆ? ಎಂಬ ಮಾತಿತ್ತು. ಆದರೆ ಅರ್ಧ ಗಂಟೆ ಅದರ ಮುಂದೆ ಕೂತು ಒದ್ದಾಡುವದಕ್ಕಿಂತ ನಾಲ್ಕೈದು ನಿಮಿಷದಲ್ಲಿ ಕೆಲಸ ಆಗುವ ಈ ಯಂತ್ರಗಳೇ ಉತ್ತಮ ಅನ್ನುವದು ಮನವರಿಕೆ ಆದಾಗ ಕ್ರಮೇಣ ಎಲ್ಲ ತಣ್ಣಗಾಯ್ತು. ಇದೇ ರೀತಿ ಹಂಡೆ/ಗೀಸರ್, ಒಲೆ /ಗ್ಯಾಸ್, ಲುಂಗಿ/ಪ್ಯಾಂಟು, ಬ್ಲ್ಯಾಕ್ ಅಂಡ್ ವೈಟ್ ಟಿವಿ / ಕಲರ್ ಟಿವಿ, ಗ್ಯಾಸ್ ಒಲೆ / ಮೈಕ್ರೋ ವೇವ್ ಒಲೆ, ನಾಟಕ/ಸಿನಿಮಾ ಮತ್ತು ಟಿವಿ ಹೀಗೆ ಹತ್ತು ಹಲವು ವಿಷಯಗಳ ಪರ ವಿರೋದ ವಾದಗಳ ಮಂಡನೆ ಆಗಿದೆ. ಕೊನೆಗೆ ಚರ್ಚೆ ಆಸಕ್ತಿ ಕಳೆದುಕೊಂಡು ಹೊಸತನ್ನು ಜನ ಅಪ್ಪಿಕೊಂಡು ಹಳೆಯದಕ್ಕೆ ತಿಲಾಂಜಲಿ ಇಟ್ಟಿದ್ದಾರೆ.

ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡ/ಇಂಗ್ಲೀಷ್ ಬಗ್ಗೆ ಇಂತಹ ಒಣ ವಾದ ಮಾಡುವ ವೇದಿಕೆ ಆಗುತ್ತಿದೆಯೇ? ಕನ್ನಡದಲ್ಲಿನ ಹೊಸತನ್ನು ಎತ್ತಿ ಹಿಡಿಯುವದನ್ನು ಬಿಟ್ಟು ಹಳೆಯದನ್ನೇ ಶ್ರೇಷ್ಟ, ಕನ್ನಡ ಮೇಲು ಎನ್ನುವ ವಾದ ಮಾಡುತ್ತ ಕಾಲಕಳೆಯುತ್ತಿದ್ದೇವೆಯೆ?

ಕನ್ನಡ ಇಂಗ್ಲೀಷ್ ಬಗ್ಗೆ ನಾನು ಕೇಳಿದ ಹಲವು ವಾದಗಳು ಅವುಗಳ ಬಗ್ಗೆ ನನ್ನ ಅನಿಸಿಕೆಗಳನ್ನು ಕೆಳಗೆ ಬರೆದಿದ್ದೇನೆ. ಓದಿ.

ವಾದಃ- ಕನ್ನಡ ಕಲಿಯುವದು ಸುಲಭ, ಇಂಗ್ಲೀಷ್ ಕಷ್ಟ

ನಂಬಿದರೆ ನಂಬಿ ಬಿಟ್ಟರೆ ಬಿಡಿ ವಾಸ್ತವಿಕವಾಗಿ ಇಂಗ್ಲೀಷ್ ಲಿಪಿ ಹಾಗೂ ಭಾಷೆ ಕನ್ನಡಕ್ಕಿಂತ ಸುಲಭ. ಕನ್ನಡದ್ದು ಕ್ಲಿಷ್ಟವಾದ ಲಿಪಿ. ಅದನ್ನು ಕಲಿಯಲು ಶ್ರಮ ಬೇಕು. ಕನ್ನಡದಲ್ಲಿ ವೈಜ್ನಾನಿಕ, ವೈಧ್ಯಕೀಯ ವಿಷಯಗಳನ್ನು ವ್ಯಕ್ತಪಡಿಸಲು ಪದ ಭಂಡಾರದ ಕೊರತೆ ಪೂರ್ತಿಯಾಗಿ ಇನ್ನೂ ನೀಗಿಲ್ಲ.

ವಾದಃ-ಕನ್ನಡ ಪ್ರೀತಿಯ ಭಾಷೆ, ಇಂಗ್ಲೀಷ್ ಬರಿ ವ್ಯಾಪಾರಿ ಭಾಷೆ.

ಕನ್ನಡದಲ್ಲಿಎಷ್ಟು ಭಾವನಾತ್ಮವಾದ ಬರಹಗಳಿವೆಯೋ, ಹಾಗೆ ಇಂಗ್ಲೀಷ್ ಅಲ್ಲಿಯೂ ಸಹ ಬರಹಗಳಿವೆ. ಇಂಗ್ಲೀಷ್ ಕನ್ನಡದಷ್ಟೇ ಸಮರ್ಥವಾದ ಭಾವನಾತ್ಮಕ ಭಾಷೆ. ಇತ್ತೀಚೆಗೆ ಫೇಸ್ ಬುಕ್, ವಾಟ್ಸ್ ಅಪ್ ಮೊದಲಾದ ಬಳಕೆ ಯುವಕ, ಯುವತಿಯರಲ್ಲಿ ಜಾಸ್ತಿ ಆಗಿ ಇಂಗ್ಲೀಷ್ ಅನ್ನು ಸ್ನೇಹಿತರ ಜೊತೆ ಭಾವನೆಯ ವ್ಯಕ್ತ ಪಡಿಸಲು ಹೆಚ್ಚು ಬಳಸಲಾಗುತ್ತಿದೆ.

ವಾದಃ-ಇಂಗ್ಲೀಷ್ ಮಾಧ್ಯಮದಲ್ಲಿಓದುವವರಿಗೆ ಅತ್ತ ಕನ್ನಡವೂ ಬರದು ಇಂಗ್ಲೀಷ್ ಸಹ ಬರದು.

ಕ್ಷಮಿಸಿ ಕಳಪೆ ಶಾಲೆಗಳಲ್ಲಿ ಮಕ್ಕಳ ಕಲಿಕೆಯಲ್ಲಿ ಈ ರೀತಿ ಆಗಿರಬಹುದು. ಆದರೆ ಉತ್ತಮ ಶಾಲೆಗಳಲ್ಲಿ ಮಕ್ಕಳ ಇಂಗ್ಲೀಷ್ ಜ್ನಾನ ಚೆನ್ನಾಗಿಯೇ ಇರುತ್ತದೆ. ಇದು ಪ್ರತಿ ಮಗುವಿನ ಕಲಿಕಾ ಸಾಮರ್ಥ್ಯದ ಮೇಲೂ ಅವಲಂಭಿಸಿದೆ. ಕಲಿಕಾ ಸಾಮರ್ಥ್ಯ ಚೆನ್ನಾಗಿರುವ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಕಲಿತರೂ ಇಂಗ್ಲೀಷ್ ಚೆನ್ನಾಗಿಯೇ ಕಲಿಯುತ್ತಾರೆ.

ವಾದಃ-ಮಾತೃಭಾಷೆಯಲ್ಲಿ ಕಲಿತ ಮಕ್ಕಳು ಚೆನ್ನಾಗಿ ಗ್ರಹಿಸುತ್ತಾರೆ.

ನನ್ನ ಪ್ರಕಾರ ಇದೂ ಸಹ ಆಯಾ ಮಗುವಿನ ಕಲಿಕಾ ಸಾಮರ್ಥ್ಯ ಹಾಗೂ ಪಟ್ಟ ಶ್ರಮದ ಮೇಲೆ ಅವಲಂಬಿಸಿದೆ ಹೊರತು ಭಾಷೆಯ ಮೇಲಲ್ಲ.

ವಾದಃ-ಸರಕಾರ ಕನ್ನಡವನ್ನು ನಿರ್ಲಕ್ಷಿಸಿದೆ.

ಒಂದು ಭಾಷೆಯ ರಕ್ಷಣೆ ಕೇವಲ ಸರಕಾರದ ಕೆಲಸವಲ್ಲ. ಜನರ ಕೆಲಸ ಕೂಡಾ. ಕೇವಲ ಸರಕಾರವನ್ನು ಹಳಿಯುತ್ತಾ ಇದ್ದರೆ ಏನು ಪ್ರಯೋಜನ? ಅದಕ್ಕೆ ಬದಲಾಗಿ ಕನ್ನಡ ಭಾಷೆಗೆ ಉಪಯೋಗಕರ ಯೋಜನೆಗಳನ್ನು ಆರಂಭಿಸಬಾರದು?

ವಾದಃ-ಕನ್ನಡಕ್ಕೆ ಸಾವಿರ ವರುಷ ಇತಿಹಾಸ ಇದೆ. ಅದು ಸಂಸ್ಕೃತ ಮೊದಲಾದ ಭಾಷೆಗಳನ್ನು ಯಶಸ್ವಿಯಾಗಿ ಎದುರಿಸಿ ಬದುಕಿದೆ. ಕನ್ನಡಕ್ಕೆ ಅಪಾಯ ಏನಿಲ್ಲ.

ಸಂಸ್ಕೃತ ವಿದ್ವಾಂಸರು ಅಲ್ಲದೇ ಜನ ಸಾಮಾನ್ಯರು ದಿನ ಬಳಕೆಗೆ ಬಳಸುವ ಭಾಷೆ ಯಾವ ಕಾಲದಲ್ಲಿಯಾದರೂ ಆಗಿತ್ತಾ? ಗೊತ್ತಿಲ್ಲ. ಆದರೆ ಕನ್ನಡ / ಸಂಸ್ಕೃತ ದ ನಡುವೆ ತಿಕ್ಕಾಟ ನಡೆದಿದ್ದರೂ ಅದು ಆಡು ಮಾತು, ಕಾದಂಬರಿ, ಗದ್ಯ, ಕವನ ಹೀಗೆ ಹಲವು ರಂಗಗಳಲ್ಲಿ ಆಗಿರಬಹುದು. ಆಗ ಕೇವಲ ಆಧ್ಯಾತ್ಮ, ನಾಟಕ, ಕೃಷಿ, ಕಾದಂಬರಿ, ಸಾಹಿತ್ಯ ಮೊದಲಾದ ವಿಷಯಗಳ ಬಗ್ಗೆ ಜನರಿಗೆ ಓದು ಅವಶ್ಯಕತೆ ಇತ್ತು. ಆದರೆ ಈಗ ಇಂಗ್ಲೀಷ್ ಲಿಪಿ ಎಲ್ಲ ಕಡೆ ಅತಿ ಅವಶ್ಯಕವಾಗಿದೆ. ಬ್ಯಾಂಕ್, ಇನ್ಶ್ಯೂರನ್ಸ್, ಜಾಹೀರಾತು, ದಿನಬಳಕೆ ವಸ್ತುಗಳು, ಮೊಬೈಲು, ಕಂಪ್ಯೂಟರ್, ಟಿವಿ, ವೈಧ್ಯಕೀಯ, ಬಿಲ್ಲುಗಳು, ಬೋರ್ಡುಗಳು, ಕೋರ್ಟು, ಕಚೇರಿ ಎಲ್ಲ ಕಡೆ ಇಂಗ್ಲೀಷ್ ಲಿಪಿ ಅನಿವಾರ್ಯ. ಅಲ್ಲಿ ಕನ್ನಡ ಸರಿಯಾಗಿ ಬೆಳೆಸಲು ನಾವು ವಿಫಲವಾಗಿದ್ದೇವೆ. ಕನ್ನಡ ಲಿಪಿ ಇಷ್ಟು ಕಡೆ ತನ್ನ ಸ್ಥಾನ ಪಡೆಯಲು ವಿಫಲವಾಗಿದ್ದರೂ ಅವೆಲ್ಲವನ್ನು ಕಡೆಗಣಿಸಿ ಕೆಲವೇ ಕೆಲವು ವಿಚಾರಗಳಿಗೆ ಕನ್ನಡ ಹೋರಾಟ ಮೀಸಲಟ್ಟಿರುವದು, ಕನ್ನಡಕ್ಕೆ ಹಿಂದಿಯಿಂದ ಅಪಾಯ ಅನ್ನುತ್ತಿರುವದು ದೊಡ್ಡ ಜೋಕ್ ಹೊರತು ಇನ್ನೇನಲ್ಲ.

ಒಂದು ಭಾಷೆ ಎಷ್ಟು ವರ್ಷದಿಂದ ಇತ್ತು ಎನ್ನುವದು ಅದರ ಭವಿಷ್ಯದ ದಿಕ್ಸೂಚಿ ಆದೀತೇ? ಕಳೆದ ಹಲವು ದಶಕಗಳಲ್ಲಿ ಕನ್ನಡ ಹೊಸತಾಗಿ ಆರಂಭವಾದ ಯಾವುದೇ ರಂಗದಲ್ಲಿ ಸರಿಯಾಗಿ ನೆಲೆಯೂರಲು ವಿಫಲವಾಗಿದೆ. ಅಲ್ಲೆಲ್ಲ ನಾವು ಇಂಗ್ಲೀಷ್ ಹೆಚ್ಚಾಗಿ ಬಳಸುತ್ತಿದ್ದೇವೆ. ಅವುಗಳನ್ನು ಸಹ ನಾವು ಪರಿಗಣಿಸಬೇಕು.

ವಾದಃ-ಇಂದು ಕನ್ನಡಿಗ ಹಣದ ಹಿಂದೆ ಬಿದ್ದಿದ್ದಾನೆ. ಕನ್ನಡವನ್ನು ಕಡೆಗಣಿಸಿದ್ದಾನೆ. ಕನ್ನಡ ಅಭಿಮಾನವಿಲ್ಲ.

ಈ ತರಹ ವಾದ ಮಾಡುವವರು ಈಗಾಗಲೇ ಜೀವನದಲ್ಲಿ ಸುಬಧ್ರ ಸ್ಥಾನದಲ್ಲಿರುವವರು. ಆರಾಮವಾಗಿ ನಿವೃತ್ತಿ ವೇತನ, ಇತರ ಮೂಲಗಳಿಂದ ಹಣ ಸಂಪಾದಿಸುತ್ತಿರುವವರು.

ಎಲ್ಲರ ಬಳಿ ಸರಕಾರಿ ಕೆಲಸ, ಕುಳಿತು ತಿನ್ನುವಷ್ಟು ಹಣ ಇಲ್ಲ ಸ್ವಾಮಿ. ಇಂದು ಮನೆ ಕಟ್ಟಲು, ಸಂಸಾರ ನಡೆಸಲು, ಆರೋಗ್ಯದ ಖರ್ಚಿಗೆ ಹೆಚ್ಚಿನ ಕನ್ನಡಿಗರು ದುಡಿಯಲೇ ಬೇಕು. ಅದಕ್ಕೆ ಕನ್ನಡೀಗನಿಗೆ ಅನ್ನಕೊಡುವ ಇಂಗ್ಲೀಷ್ ಕನ್ನಡಕ್ಕಿಂತ ಮುಖ್ಯವಾಗಿರುವದು. ಕನ್ನಡ ಅನ್ನ ಕೊಡುವ ಭಾಷೆ ಆಗುವದೊಂದೆ ಇದಕ್ಕೆ ಪರಿಹಾರ. ಇಂದಿನ ಬ್ಯುಸಿ ಲೈಫ್ ಅಲ್ಲಿ ಕನ್ನಡಕ್ಕೆ ಹೆಚ್ಚಿನ ಸಮಯ ವ್ಯಯಿಸಲು ನಗರದಲ್ಲಿರುವ ಎಲ್ಲರಿಗೂ ಸಾಧ್ಯವಾಗದು. ಜನರ ಅಗತ್ಯಗಳನ್ನು ಕನ್ನಡದಲ್ಲಿಯೇ ಪೂರೈಸುವ ಕಡೆಗೆ ನಾವು ವಿಚಾರ ಮಾಡಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಉತ್ತಮ ಶಿಕ್ಷಣಕ್ಕಾಗಿ ಇಂಗ್ಲೀಷ್ ಮಿಡಿಯಂ ಮೊರೆ ಹೋಗುತ್ತದ್ದಾರೆ. ಕನ್ನಡದಲ್ಲಿ ಶಿಕ್ಷಣ ಮಟ್ಟ, ಜ್ನಾನದ ಮಟ್ಟ ಹೆಚ್ಚಿಸುವದೊಂದೆ ಇದಕ್ಕೆ ಪರಿಹಾರ. ಈ ನಿಟ್ಟಿನಲ್ಲಿ ನಾವು ಚರ್ಚೆ ನಡೆಸಬೇಕು.

ವಾದಃ- ಕನ್ನಡಿಗರೆಲ್ಲಾ ಸೇರಿ ಕನ್ನಡ ಉಳಿಸಬೇಕು.

ಕನ್ನಡಕ್ಕೆ ಬೆಳೆಯಲು ಹಲವು ಅವಕಾಶಗಳಿವೆ. ಕನ್ನಡ ೮೦ ಪ್ರತಿಶತಕ್ಕೂ ರಂಗದಲ್ಲಿ ಬೆಳವಣಿಗೆಯನ್ನೇ ಹೊಂದಿಲ್ಲ. ವಸ್ತು ಸ್ಥಿತಿ ಹಾಗಿರುವಾಗ ಬರಿ ಉಳಿಸುವ ಮಾತಿಗಿಂತ ಕನ್ನಡವನ್ನು ಆ ರಂಗಗಳಲ್ಲೂ ಬೆಳೆಸುವ ಮಾತನಾಡೋಣ. ಒಂದು ಮಾತನ್ನು ನೆನಪಿಡೋಣ. ಅದೆಷ್ಟೇ ಪ್ರಯತ್ನ ಪಟ್ಟರೂ ಕರ್ನಾಟಕದಲ್ಲಿ ಕನ್ನಡ ಅಥವಾ ಇಂಗ್ಲೀಷ್ ಒಂದೇ ಸಾರ್ವಭೌಮ ಭಾಷೆ ಆಗಿರಲಿದೆ. ಒಂದೆರಡು ಕಡೆ ಕನ್ನಡ ಬಳಸಿ ಉಳಿದಕಡೆ ಇಂಗ್ಲೀಷ್ ಬಳಸಿ ಅನ್ನುವ ವಾದ ಕೆಲವು ಪೀಳಿಗೆ ಅನುಸರಿಸಬಹುದು. ಆದರೆ ಆನಂತರ ಕೇವಲ ಮನೆಯ ಮಟ್ಟಿಗೆ ಮಾತ್ರ ಆ ಭಾಷೆ ಉಳಿದು ಹೋಗುವ ಅಪಾಯವಿದೆ. ದಕ್ಷಿಣ ಆಫ್ರಿಕ, ಅಮೇರಿಕ ಹಾಗೂ ಆಸ್ಟ್ರೇಲಿಯಾ ದ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ.

ವಾದಃ- ಕನ್ನಡಿಗರು ಸಾಹಿತ್ಯದಿಂದ ದೂರ ಆಗಿದ್ದಾರೆ.

ಇಂದು ಗಂಭೀರ ಹಾಗೂ ಕಠಿಣ ಸಾಹಿತ್ಯ ಜನ ಹೆಚ್ಚು ಓದರು. ಅವರ ಬಳಿ ಅಷ್ಟು ಸಮಯ ಆಗಲಿ, ತಾಳ್ಮೆ ಆಗಲಿ ಇಲ್ಲ. ಟಿವಿ, ಸಿನಿಮಾ, ಕಂಪ್ಯೂಟರ್ ಹಾಗೂ ಮೊಬೈಲುಗಳು ಅವರ ಸಮಯ ಅತಿಕ್ರಮಿಸಿವೆ. ಬರಿ  ಹಳಿಯುತ್ತಾ ಕೂರುವ ಬದಲು ಯುವ ಜನತೆಗೆ ಇಷ್ಟವಾಗುವ ರೀತಿಯಲ್ಲಿ ಯಾಕೆ ಬರಹ ಗಾರರು ಬರೆಯಬಾರದು?

ವಾದಃ- ಅವರು ೧೯೪೦ ಅಲ್ಲಿ ಹೀಗೆ ಅಂದಿದ್ದರು, ನಾವು ಅವರನ್ನು ಅನುಸರಿಸಬೇಕು.

ಹಿಂದೆ ಯಾರೋ ಹೇಳಿದ ಮಾತನ್ನು ಈಗಿನ ಕಾಲಮಾನದ ಬಗ್ಗೆ ವಿಚಾರ ಮಾಡದೇ ಅನುಸರಿಸುವದು ಮೂರ್ಖತನ. ಸ್ವಾಮಿ ನಮ್ಮ ತಲೆ ಉಪಯೋಗಿಸೋಣ. ಹೊಸತಾಗಿ ವಿಚಾರ ಮಾಡೋಣ.

ಇಂತಹ ಹಲವು ವಾದಗಳನ್ನು ನೀವು ಸಭೆ, ಸನ್ಮಾನ, ಸಮಾರಂಭಗಳಲ್ಲಿ ಹಾಗೂ ಸಮ್ಮೇಳನಗಳಲ್ಲಿ ನೀವು ಕೇಳಿರಬಹುದು. ಇವೆಲ್ಲ ಕೇವಲ ಏನನ್ನೋ ಹೇಳಬೇಕು ಅನ್ನುವದಕ್ಕಾಗಿ ಮಾಡುವ ವಾದಗಳು. ಇಂತಹ ವಾದಗಳಿಂದ, ಕನ್ನಡಕ್ಕೆ ಏನಾದರೂ ಪ್ರಯೋಜನ ಇದೆಯಾ?

ಇಂದು ಕನ್ನಡ ಸಾಹಿತ್ಯ ಸಮ್ಮೇಳನ ಕೂಡಾ  ಜಾತ್ರೆ ಸ್ವರೂಪ ಪಡೆದುಕೊಂಡಿದೆ. ಊಟ, ಸನ್ಮಾನ, ಭಾಷಣ, ಮೊಂಡು ವಾದಕ್ಕೆ ಸೀಮಿತವಾಗಿದೆ. ಕನ್ನಡ ಸಾಹಿತ್ಯ ಸಮ್ಮೇಳನ ೮೦ ವರ್ಷಗಳ ಹಿಂದೆ ಆರಂಭವಾದಾಗ ಟಿವಿ, ಕಂಪ್ಯೂಟರ್, ಇಂಟರ್ನೆಟ್, ಸಮರ್ಪಕ ಸಾರಿಗೆ ವ್ಯವಸ್ಥೆ ಇರಲಿಲ್ಲ. ಈಗ ನಿಜಕ್ಕೂ ಕನ್ನಡದ ಕಳಕಳಿ ಇದ್ದರೆ ನಾವು ಈ ಹೊಸ ಮಾಧ್ಯಮಗಳಲ್ಲಿ ಯಾವ ಚರ್ಚೆ ಸಮ್ಮೇಳನದಲ್ಲಿ ಮಾಡಬೇಕಿತ್ತೋ ಅದನ್ನು ಮಾಡಬಹುದಾಗಿದೆ. ಈ ಮೂಲಕ ಕೋಟಿಗಟ್ಟಲೆ ಹಣ ಅನವಶ್ಯಕ ಪೋಲಾಗುವದನ್ನು ತಡೆದು ಅದನ್ನು ನಿಜವಾದ ಕನ್ನಡ ಬೆಳವಣಿಗೆಗೆ ಬಳಸಬಹುದಾಗಿದೆ.ಬೆಳಿಗ್ಗೆಯೇ ಊಟಕ್ಕೆ ಕ್ಯೂ ನಿಂತಿರುವ ಆ ಜನ ಸಂದಣಿಯ ನಡುವೆ ಗಂಭೀರ ಚರ್ಚೆ ಮಾಡುತ್ತೇನೆ ಅನ್ನುವದು ಹಾಸ್ಯಾಸ್ಪದ.

ಅಲ್ಲಿ ತೆಗೆದುಕೊಂಡ ನಿರ್ಣಯಗಳಿಗೆ ಮೂರು ಕಾಸಿನ ಪ್ರಯೋಜನ ಇಲ್ಲ. ಯಾಕೆಂದರೆ ಅದನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನ ಸಾಲದು.

ನನ್ನ ಸಲಹೆಗಳು ಹೀಗಿವೆ

  1. ನವ ಯುವ ಬರಹಗಾರರಿಗೆ ಪ್ರಾಮುಖ್ಯತೆ ಸಿಗಲಿ.
  2. ಯಾವಾಗಲೂ ಚರ್ಚೆ ಹೊಸ ಬರಹಗಳ ಮೇಲೆ ಇರಲಿ. ೧೯೪೦ಯಲ್ಲಿ ನಟಿಸಿದ ನಟನಿಗೆ ಹೇಗೆ ೨೦೧೫ರಲ್ಲಿ ಫಿಲಂಫೇರ್ ಪ್ರಶಸ್ತಿ ಸಿಗದೋ ಹಾಗೆಯೇ ಹಳೆಯ ಬರಹಗಳ ಬದಲು ಹೊಸ ಬರಹಗಳ ಮೇಲೆ ಚರ್ಚೆ, ಸನ್ಮಾನ ನಡೆಯಲಿ.
  3. ಹೊಸ ತಂತ್ರಜ್ನಾನಗಳ ಬಳಕೆ ಆಗಲಿ.
  4. ಸರಕಾರ ಹಳಿಯುವ ಬದಲು ಕನ್ನಡ ಸಮ್ಮೇಳನ ೫ ವರ್ಷ ಕ್ಕೊಮ್ಮೆ ಮಾಡಿ ಉಳಿಯುವ ಹಣದಿಂದ ಉತ್ತಮ ಮಾದರಿ ಕನ್ನಡ ಶಾಲೆ ಯಾಕೆ ಆರಂಭಿಸಬಾರದು?
  5. ಎಲ್ಲ ಲೇಖಕರಿಗೂ ಸರಿಯಾದ ಪ್ರಾಮುಖ್ಯತೆ ಸಿಗಲಿ.

 

ನಿಮ್ಮ ಅನಿಸಿಕೆ ತಿಳಿಸಿ.

ಲೇಖಕರು

ರಾಜೇಶ ಹೆಗಡೆ

ಕಂಡದ್ದು ಕಂಡ ಹಾಗೆ

ಸಾಫ್ಟವೇರ್ ಇಂಜನಿಯರ್. ಕನ್ನಡದಲ್ಲಿ ಸಾಫ್ಟವೇರ್ ತಯಾರಿಸುವದು ನನ್ನ ಹವ್ಯಾಸ. ಆಗಾಗ ಲೇಖನ ಬರೀತಿನಿ ಆದ್ರೆ ಅದರಲ್ಲಿ ಪಳಗಿದವನಲ್ಲ.

ಅನಿಸಿಕೆಗಳು

Lalitharaju ಶುಕ್ರ, 02/27/2015 - 16:03

ಮಾನ್ಯರೇ, ಒೞೆಯ ಮನಮುಟ್ಟುವ ಲೇಖನ. ಕನ್ನಡಿಗರು ಇದನ್ನು ಓದಬೇಕು. ಕನ್ನಡಿಗನಿಗೆ ಮಾತೃ ಭಾಷೆ ಅತ್ಯಾವಶ್ಯಕವಾಗಿ ಬೇಕೇ ಬೇಕು. ಬದುಕಲು ಇಂಗ್ಲೀಷ್ ಬೇಕೇ ಬೇಕು. ಮೊಂಡು ವಾದ ಮಾಡುತ್ತಾ ಕುಳಿತರೆ, ಕನ್ನಡ ಉಳಿಯುವುದಿಲ್ಲ. ರಾಜ್ಯದಲ್ಲಿ ಕನ್ನಡ ಅಭಿಮಾನ ಎನ್ನುವುದಕ್ಕಿಂತ ಕನ್ನಡ ಅನಿವಾರ್ಯವಾಗಬೇಕು. ಯಾವ ಭಾಷೆಯಲ್ಲಿ ಮಾತನಾಡಿದರೆ ನಡೆಯುತ್ತದೆ. ಯಾವ ಭಾಷೆಯಲ್ಲಿ ಬರೆದರೂ ನಡೆಯುತ್ತದೆ ಎನ್ನುವುದು ಸರಿಯಲ್ಲ. ಬೇರೆ ರಾಜ್ಯಗಳಲ್ಲಿ ಹಾಗೂ ಬೇರೆ ದೇಶಗಳಲ್ಲಿ ಈ ಪರಿಸ್ಠಿತಿ ಇಲ್ಲ. ಹಿಂದಿನಂತೆ, ಮೊದಲು ಕನ್ನಡದಲ್ಲಿ ವಿದ್ಯಾಭ್ಯಾಸ ನಡೆಯಲಿ, ನಂತರ ಇಂಗ್ಲೀಷ್ ಕಲಿಯುವ ಭಾಷೆಯಾಗಿರಲಿ. ಮೊದಲೆಲ್ಲಾ ಎಸ್.ಎಸ್.ಎಲ್.ಸಿ ವರೆಗೆ ಕನ್ನಡ ಮಾಧ್ಯಮದಲ್ಲಿ ಓದಿ ನಂತರ, ಆಂಗ್ಲ ಭಾಷೆಯಲ್ಲಿ ಪದವಿ, ವೈದ್ಯಕೀಯ, ಇಂಜಿನೀಯರ್, ವಿಜ್ನಾನಿಗಳಾಗಿದ್ದಾರೆ. ಇನ್ನೊಂದು ವಿಶೇಷ ಎಂದರೆ ನಮ್ಮ ರಾಜ್ಯದಲ್ಲಿ ನಮ್ಮ ಭಾಷೆಗಾಗಿ ಹೋರಾಡುವ ಅನಿವಾರ್ಯತೆ ಬಂದಿದೆ.

ರಾಜೇಶ ಹೆಗಡೆ ಧ, 03/04/2015 - 05:40

ನಿಮ್ಮ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು ಲಲಿತಾರಾಜು ಅವರೇ,

ಇಂದು ನಮ್ಮ ಹೋರಾಟದಲ್ಲಿ ಸಮಸ್ಯೆ ಇರುವದು ನಾವು ಕನ್ನಡ ಬಳಕೆ ಕಡಿಮೆ ಇರುವಲ್ಲಿ ಬಳಕೆ ಹೆಚ್ಚಿಸಲು ಹೋರಾಟ ನಡೆಸುತ್ತಿಲ್ಲ. ಅದಕ್ಕೆ ಬದಲಾಗಿ ಶಾಸ್ತ್ರೀಯ ಭಾಷೆ, ಕಲಿಕಾ ಮಾಧ್ಯಮ ಇತ್ಯಾದಿ ಗಳ ಬಗ್ಗೆ ಹೋರಾಟ ನಡೆಸುತ್ತಿದ್ದೇವೆ. ಇತ್ತೀಚೆಗೆ ಹೈಕೋರ್ಟ್ ಹಾಗೂ ಸುಪ್ರಿಂ ಕೋರ್ಟ್ ಆದೇಶದ ಪ್ರಕಾರ ಇಂಗ್ಲೀಷ್ ಮಾಧ್ಯಮ ಸರಕಾರ ಕೊಡಲೇ ಬೇಕು. ಯಾವ ಹೋರಾಟ ಅದನ್ನು ತಡೆಯಲು ಸಾಧ್ಯವಿಲ್ಲ.

ಅದಕ್ಕೆ ಬದಲಾಗಿ ನಾವು ಕನ್ನಡವನ್ನು ಅನ್ನಕೊಡುವ ಭಾಷೆಯಾಗಿ ಹಾಗೂ ಜನಬಳಕೆ ಹೆಚ್ಚು ಮಾಡುವ ಕಡೆ ಗಮನ ಕೊಡಬೇಕು. ರಾಜ್ಯಾದ್ಯಂತ ನಡೆಯುತ್ತಿರುವ ವ್ಯರ್ಥ ಕನ್ನಡ ಸಮ್ಮೇಳನ, ಸನ್ಮಾನ ನಿಲ್ಲಿಸಿ ಆ ಹಣವನ್ನು ಕನ್ನಡದ ಬೆಳವಣಿಗೆಗೆ ಬಳಸಬೇಕು.

ಅಮೇರಿಕದಲ್ಲೂ ವಲಸೆ ಬಂದವರ ಭಾಷೆಯಲ್ಲೂ ಸಹ ಶಿಕ್ಷಣ ಕೊಡಬೇಕು ಎಂಬ ವಾದ ನಡೆದು ಕೊನೆಗೆ ವಿಫಲರಾಗಿ ಕೈ ಬಿಟ್ಟ ವರದಿ ಇದೆ. ಆಮೇಲೆ ಇಂಗ್ಲೀಷ್ ಮಾತ್ರ ಸಾರ್ವಭೌಮ ಭಾಷೆ ಆಗಿದೆ.

http://www.workings.com/LIA_BE.htm

ಅಮೇರಿಕದ ಮೂಲ ಭಾಷೆ ಇಂಗ್ಲೀಷ್ ಅಲ್ಲ. ಅಲ್ಲಿನ ಮೂಲ ಭಾಷೆಗಳೆಲ್ಲ ಈಗ ನಶಿಸುತ್ತಿದೆ. ಅಲ್ಲಿ ಬೇಗ ನಶಿಸಲು ಮುಖ್ಯ ಕಾರಣ ಮೂಲ ನಿವಾಸಿಗಳಿಗಿಂತ ವಲಸೆ ಬಂದವರು ಜಾಸ್ತಿ ಇರುವದು. ನಮ್ಮಲ್ಲಿನ ಹೆಚ್ಚಿನ ಜನಸಂಖ್ಯೆ ಕನ್ನಡವನ್ನು ಮೌಕಿಕ ವಾಗಿ ಕೆಲವು ಶತಮಾನಗಳವರೆಗೆ ಹಿಡಿದಿಡಬಹುದು. ಆದರೆ ಹಲವು ಪೀಳಿಗೆ ನಂತರ ಸ್ಥಿತಿ ಹೀಗೆ ಮುಂದುವರಿದರೆ ಇಂಗ್ಲೀಷ್ ಕರ್ನಾಟಕದ ಲಿಪಿ ಹಾಗೂ ಪ್ರಮುಖ ಭಾಷೆ ಆಗಲಿದೆ. ಇದು ಭಾರತಾದ್ಯಂತ ನಡೆಯುವ ಕ್ರಾಂತಿ ಕೂಡಾ ಆಗಿರಬಹುದು.

http://en.wikipedia.org/wiki/Indigenous_languages_of_the_Americas

 

 

 

 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.