Skip to main content

ನಿನ್ನ ಮಂದಹಾಸ

ಬರೆದಿದ್ದುJuly 4, 2014
3ಅನಿಸಿಕೆಗಳು

ಮರುಗಿ ನರಳಿದ ಮನದೊಳಗೆ
ಮಿಡಿವ ನಿನ್ನ ನೆನಪಿನ ಮಧುರ ವೀಣೆ
ಸುಮ ಸಂಜೆಯ ಇನಿದನಿಯ ಮಿಡಿತ ರಾಗಕೆ
ಎದೆ ಬಡಿತದ ತಾಳಮೇಳಗಳ  ಮದ್ದಳೆ


ರಾಗ ನಿರಾಗಗಳ ಪರಿವೆಯಿಲ್ಲದೆ
ಎಲ್ಲ ದಿಕ್ಕುಗಳಲ್ಲಿ ದಾಂಗುಡಿ
ಬಗೆದಷ್ಟೂ ಆಳ, ಮೊಗೆದಷ್ಟೂ ದಾಹ,
ಅರಿತಷ್ಟೂ ನಿಗೂಘಡವಾಗಿಹ
ಬದುಕಲ್ಲಿ ಪತ್ತೆದಾರಿಕೆಯ ಹಂಗೇಕೆ

ಸತ್ತ ಸತ್ಯಗಳು ಪ್ರೇಮ ಪ್ರಲಾಪದ
ಮಧುರ ಆಲಾಪಾನೆಗಳು
ಬದುಕುಳಿದ ಸುಳ್ಳುಗಳು ಸತ್ಯದ
ಸಮಾಧಿಯೊಳಗಿನ ಕದಲಿಕೆಗಳು

ಜಗಕೆ ನಿತ್ಯ ಮಿಥ್ಯದಿ ಮುಖ ಮಜ್ಜನ
ಸತ್ಯಕೆ ಜಗವ ಬಡಿದೆಬ್ಬಿಸಿ ಅಭ್ಯಂಜಿಸುವ ತವಕ
ಸ್ವಾರ್ಥ ಜಂಗುಳಿಯೊಳಗೆ ನೀ ನಿಸ್ವಾರ್ಥದ ಪ್ರತೀಕ
ಆದರೂ ನಿನ್ನ ಕಾಣುವ ಬಾವ
ನನಗೆ ಮಾತ್ರ ಅನಂತದ ಸ್ವಾರ್ಥ

ಮನದ ಕುಲುಮೆಯೊಳಗೆ ಕುಡಿಯೊಡೆವ
ನಿರಂತರ ಮೌನದ ಲಹರಿಗಳಿಗೆ ಎಲ್ಲ ಗೊಡವೆಗಳು ಗೌಣ
ತಮದ ತೊಡರುಕಾಲಿಗೆ ಎಡವಿಬಿದ್ದಾಗ ಆಸರೆಯಾಗಿದ್ದು
ನಿನ್ನ ನಿರ್ಮಲ ಸಾಂತ್ವಾನದ ಊರುಗೋಲು

ಹೇಳಲಾಗಾದ ಮಾತುಗಳಿಗೆ ಧನಿಯಾದೆ
ಕೇಳಲಾಗದ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರವಾದೆ
ಕೊರಗುವ ಎದೆಯೊಳಗೆ ಏರುವ ಮಿಡಿತ
ಸದಾ ನಿನ್ನ ಹಿತವಾದ ಮಾತ ಕೇಳುವ ತುಡಿತ

ಎಷ್ಟು ಚಂದ .......
ದುಗುಡವ ತದುಕುವ ನಿನ್ನ ನಗು
ಮುಂಗುರುಳೊಳಗೆ ಇಣುಕಿ ಕೊಲ್ಲುವ
ನಿನ್ನ ಬಟ್ಟಲು ಕಂಗಳ ನೋಟ
ನನ್ನ ಸೃತಿಯಲ್ಲಿ ಮಿತಿಯಿಲ್ಲದ ಅಚ್ಚ ಹಸುರಿನ ಅಚ್ಚು.....
ಮಂದಾನಿಲದ ನಿನ್ನ ಮಂದಹಾಸ ನೆನೆದಾಗಲೆಲ್ಲ
ಮನ ಬ್ರಹ್ಮಕಮಲ........

ಲೇಖಕರು

ಉಮಾಶಂಕರ ಬಿ.ಎಸ್

ಕಾಡುವ ಮನದ ಕನವರಿಕೆಗಳು.....

ಪೂರ್ತಿ ಕಪ್ಪಗೆ, ಸರಾಸರಿ ಎತ್ತರ, ನೋಡಿದ ಕೂಡಲೆ ಕಾಣುವ ಬಿಳಿ ಹಲ್ಲು, ನೀಟಾಗಿ ಬಾಚಿದ ಕೂದಲು, ವಟಗುಟ್ಟುವ ಕಪ್ಪೆ ಹಾಗೆ ಮಾತನಾಡುವವರು ಯಾರಾದರು ಎದುರು ಬಂದರೆ ಅದು ಖಂಡಿತ ನಾನೇ ಆಗಿರುತ್ತೇನೆ

ಅನಿಸಿಕೆಗಳು

ಬಾಲ ಚಂದ್ರ ಶುಕ್ರ, 07/04/2014 - 20:04

ಇಷ್ಟವಾದ ಒಂದಷ್ಟು ಸಾಲುಗಳು.........

ಹಾಗೆ ಬರೆಯೋಣವೆಂದರೆ, ಇಡೀ ಕವನವನ್ನು ಮತ್ತೆ ಬರೆಯಬೇಕಾಗುತ್ತದೆLaughing

ದಿನ ಕಳೆದ ಹಾಗೆ ಪ್ರಬುದ್ದರಾಗುತ್ತಿದ್ದೀರ ಎನ್ನೋಣವೇ ಅಥವಾ ಕಾಲೇಜು ಹುಡುಗರ  ಹಸಿ ಹಸಿ ಪ್ರೇಮ ಪತ್ರದ ಧಾಟಿ(?!)...  ಅಬ್ಬಾ ಬೆರಗಾದೆ..

  ಈ ವಯಸ್ಸಿನಲ್ಲೂ.......

ಏನಂಥಾ ಮಹಾ ವಯಸ್ಸಾಗಿದೆ ನಮಗೆ ಅಂತೀರಾMoney mouth

ಈ ಕವಿತೆಯ ಹಿಂದಿರುವ ಕಥೆ ಏನೆಂದು ಕೇಳಬಹುದೆ? ಕ್ಷಮಿಸಿ, ಓದಬಹುದೆ?

ನಿರೀಕ್ಷೆಯಲ್ಲಿ.....

ಸಸ್ನೇಹ

ಚಂದ್ರು.

 

 

 

ಉಮಾಶಂಕರ ಬಿ.ಎಸ್ ಶುಕ್ರ, 07/04/2014 - 20:59

ಪ್ರಿಯ, ಬಾಲಣ್ಣ.

ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದಗಳು.. :) 

ಕವನದ ಹಿಂದೆ ಕಥೆಯೇನು ಇಲ್ಲ ಬಿಡಿ....

ಹಾಗೆ ಅನಿಸಿದ್ದನ್ನ ಗೀಚಿದೆ ಅಷ್ಟೇ ..

ಇತಿ ನಿಮ್ಮವ

ಉಮಾಶಂಕರ

ಕೆಎಲ್ಕೆ ಧ, 07/16/2014 - 12:13

ಅರೆರೇ.......ಇದೇನಿದು ಆಶ್ಚರ್ಯ...!! ಭೂಗತರಾಗಿದ್ದವರು, ಕ್ರಾಪು, ಲುಕ್ಕು ಎಲ್ಲಾ ಬದಲಾಯಿಸಿಕೊಂಡು ಯಾವ್ದೋ ಸಾಪ್ಟ್-ವೇರ್ ಕಂಪನಿ ಸಿ,ಇ.ಒ ತರ ಫೋಸು ಕೊಡುತ್ತಾ ಸಡನ್ ಆಗಿ ಪ್ರತ್ಯಕ್ಶ ಆಗಿರೋದು ನಮಗೆ ಭಾರೀ ಖುಷಿ ಕೊಟ್ಟಿದೆ. ರುಚಿಯೇ ಇಲ್ಲದ ಪಾಯಸ ಒತ್ತಾಯಪೂರ್ವಕವಾಗಿ ತಿನ್ನುತ್ತಿರುವಾಗ ನಡುವೆ ಗೋಡಂಬಿ ತುಂಡೊಂದು ಸಿಕ್ಕಿದಂತಾ ಅನುಭವ. ಗುಡ್. ಭಾರೀ ಪದ್ಯದೊಂದಿಗೇ ಮರು ಪ್ರವೇಶವಾಗಿದೆ. ಯಾವುದೇ ಫೇಮಸ್ ಕವಿಯ ಪ್ರಬುದ್ಧ ಕವಿತೆಗೆ ಹೋಲಿಸಿ ನೋಡಿದರೂ, ಕಡಿಮೆಯೇನಿಲ್ಲ ಅನ್ನಿಸುವಂತಾ ಕವನ. ಈ ನಿಮ್ಮ ಕವನ, ಪೆನ್ನಿನ ಶಾಯಿಯನ್ನೆಲ್ಲಾ ಹೆಪ್ಪುಗಟ್ಟಿಸಿಕೊಂಡು ಕುಳಿತಿರುವ ಬಾಲಚಂದ್ರರಿಗೂ ಸ್ಪೂರ್ತಿಯಾಗಲಿ, ಹಾಗೂ ತಮ್ಮಿಂದ ಇನ್ನಷ್ಟು ಗೋಡಂಬಿ ತಿನ್ನಿಸುವ ಪುಣ್ಯಕಾರ್ಯವಾಗಲಿ ಎಂಬ ಹಾರೈಕೆ ಹಾಗೂ ಬೇಡಿಕೆ..!!

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.