Skip to main content

ಮೌನವೇ ಆಭರಣ

ಬರೆದಿದ್ದುJune 16, 2014
noಅನಿಸಿಕೆ

ಯಾರು ಮೌನವಾಗಿರುತ್ತಾರೊ ಅವರನ್ನು 'ಮುನಿ' ಎನ್ನುತ್ತಾರೆ. ವಿಶೇಷವಾಗಿ ಮೌನದಲ್ಲಿ ಇರುವವರು ಮುನೀಶ್ವರರು, ಮುನಿಗಳು. ರಮಣ ಮಹರ್ಷಿಗಳು ತಮ್ಮ ಜೀವನ ಪೂರ್ತಿ ಮೌನದಲ್ಲಿದ್ದರಲ್ಲವೆ? ಯಾವಾಗಲೋ ಅಪರೂಪಕ್ಕೆ ಮಾತನಾಡುತ್ತಿದ್ದರು. ಅವಶ್ಯಕತೆ ಇದ್ದರೆ ಮಾತನಾಡಬೇಕು, ಹಾಡು ಹಾಡಬಹುದು. ಅವಶ್ಯಕತೆ ಇಲ್ಲದಿದ್ದರೆ ಬಾಯಿಂದ ಶಬ್ದ ಬರಬಾರದು. ಮೌನದಿಂದ ಇರುವುದನ್ನು ಅಭ್ಯಾಸ ಮಾಡಬೇಕು.
ಬಾಯಿಯಲ್ಲಿ ಮೌನ, ಮನಸ್ಸಿನಲ್ಲಿ ಶೂನ್ಯ... ಅದರ ಹೆಸರೇ ಧ್ಯಾನ. ಬಾಯಿ ಮೂಕವಾದರೆ ಮುನಿ. ಮನಸ್ಸು ಮೂಕವಾದರೆ ಯೋಗ. ಒಂದು ವೇಳೆ ಮಾತನಾಡಿದರೆ ಅರಿವಿನಿಂದ ಅದು ಕೂಡಿರಬೇಕು. ಅವಶ್ಯಕತೆ ಇದೆಯಾ, ಇಲ್ಲವಾ, ಪ್ರಸ್ತುತವಾ, ಅಪ್ರಸ್ತುತವಾ ಎಂದು ಯೋಚಿಸಿ ತೂಗಿ ಅಳೆದು ಮಾತನಾಡಬೇಕು. ಸತ್ಯ ತಿಳಿದರೆ ಮಾತನಾಡಬೇಕು. ಸತ್ಯ ತಿಳಿಯದಿದ್ದರೆ ಮಾತನಾಡಬಾರದು. ಮಾತಿನಲ್ಲಿ ಅರಿವು ಮತ್ತು ಸತ್ಯ ಇರಬೇಕು, ಅದರ ಹೆಸರೇ ಜ್ಞಾನ. ಆ ಜ್ಞಾನ ನಮಗೆ ಧ್ಯಾನದಿಂದ ಬರುತ್ತದೆ. ಧ್ಯಾನದಿಂದ ಜ್ಞಾನ, ಜ್ಞಾನದಿಂದ ಮುಕ್ತಿ.
ತಪ್ಪು ಮಾಡಿದರೆ ಶಿಕ್ಷೆ ಆಗುತ್ತದೆ. ಏನೇ ಮಾಡಲಿ, ಅದರಲ್ಲಿ ನ್ಯಾಯ ಇರಬೇಕು, ಮಾಡುವುದರಲ್ಲಿ ವಿನಯ ಇರಬೇಕು. ಮಾಡುವ ಕರ್ಮಗಳಲ್ಲಿ ವಿನಯ ಇರಬೇಕು, ನ್ಯಾಯದಿಂದ ಇರಬೇಕು. ಧರ್ಮದಲ್ಲಿ ಇರಬೇಕು. ಎಲ್ಲರ ಜೊತೆ ವಿನಯದಿಂದ ಮಾತನಾಡಬೇಕು. ಆತ್ಮದಲ್ಲಿ ಶಾಂತಿಯೂ, ಆತ್ಮದಲ್ಲಿ ಅಭಯವು. ಹೆಂಡತಿ ಸತ್ತರೆ ಆತ್ಮದಲ್ಲಿ ಅಶಾಂತಿ ಇರಬಾರದು. ಗಂಡ ಸತ್ತರೂ ಅಶಾಂತಿಯಿಂದ ಇರಬಾರದು. ಅಗಲೇ ಹುಟ್ಟಿದ ಮಗು ಸತ್ತರೂ ಅಶಾಂತಿಯಿಂದ ಇರಬಾರದು. ಎಲ್ಲಿ ಅಶಾಂತಿ ಇಲ್ಲವೊ, ಎಲ್ಲಿ ಶಾಂತಿಯು ಗೂಡುಕಟ್ಟಿಕೊಂಡಿದೆಯೊ ಅದರ ಹೆಸರೇ ಮೋಕ್ಷವು.
ಒಂದು ಹಾವು ಬಂದಿದೆ ಎಂದುಕೊಳ್ಳೋಣ ಆಗ ನಾವು ಹೆದರಿದರೆ ನಮಗಿನ್ನೂ ಮೋಕ್ಷಸ್ಥಿತಿ ಬಂದಿಲ್ಲವೆಂದೇ ಅರ್ಥ. ಅದೇ ಧ್ಯಾನಿ ಎದುರಿಗೆ ಹಾವು ಬಂದರೆ ಧೈರ್ಯದಿಂದ ''ಓ... ಹಾವೂ... ಹಾವೂ... ನನ್ನನ್ನು ಸಾಯಿಸಲು ಬಂದಿರುವೆಯಾ... ಸರಿ... ಬಾ... ನನ್ನನ್ನು ಸಾಯಿಸು,'' ಎನ್ನಬೇಕು.
''ನನ್ನನ್ನು ನೀನು ಸಾಯಿಸಿದರೂ ನಾನು ಸೂಕ್ಷ್ಮ ಶರೀರಯಾನ ಮಾಡಿ ಸ್ವರ್ಗಕ್ಕೆ ಹೋಗುತ್ತೇನೆ. ಬೇಕಾದರೆ ಸಾಯಿಸು, ನನ್ನ ನುಂಗು.'' ಎಂದು ಹೇಳುವುದು ಅಷ್ಟು ಸುಲಭವಲ್ಲ. ಅಭ್ಯಾಸವೇ ಎಲ್ಲಕ್ಕೂ ತಕ್ಕ ಉತ್ತರ. ಧ್ಯಾನ ಮಾಡಿದರೆ ಆತ್ಮದಲ್ಲಿ ಶಾಂತಿ ಸಿಗುತ್ತದೆ. ಅಭಯ ಸಿಗುತ್ತದೆ. ಆದ್ದರಿಂದ, ಆತ್ಮಕ್ಕೆ ಸಾವಿಲ್ಲ ಎನ್ನುವ ಸತ್ಯವನ್ನು ಅರಿತು ಧೈರ್ಯದಿಂದ ಇರುತ್ತೇವೆ. ಅದನ್ನೇ ಮೋಕ್ಷ ಎಂದು ಹೇಳುತ್ತಾರೆ. ಎಲ್ಲೋ ಹೋಗಿ ನದಿಗಳಲ್ಲಿ, ಸಮುದ್ರಗಳಲ್ಲಿ ಮಿಂದರೆ ಮೋಕ್ಷ ಸಿಗುವುದಿಲ್ಲ. ಈ ಸಂಸಾರಸಾಗರದಲ್ಲಿ ಶಾಂತಿಯಿಂದ, ಪ್ರಶಾಂತಿಯಿಂದ, ಅಭಯದಿಂದ, ನಿಶ್ಚಿಂತೆಯಿಂದ ಇರಲಾದಾಗ ಮಾತ್ರವೇ ಮೋಕ್ಷ ಪ್ರಾಪ್ತಿ ಆಗುತ್ತದೆ. ಚಾವಣಿ ಕಳಚಿ ಮೇಲೆ ಬಿದ್ದರೂ, ಅಂದರೆ, ಕಷ್ಟಗಳು ಒಂದರ ಮೇಲೊಂದು ಬಂದರೂ ಪ್ರಶಾಂತತೆಯಿಂದ ಇದ್ದರೆ, ಹಾವು ಬಂದು ನಮ್ಮನ್ನು ನುಂಗುತ್ತಿದ್ದರೂ ಪ್ರಶಾಂತತೆಯಿಂದ ಇದ್ದರೆ ಅದೇ ಮೋಕ್ಷ. ಹಾಗೆ ಇರಲಾಗುವವರೆಗೂ ನಾವು ಜನ್ಮತೆಗೆದುಕೊಳ್ಳುತ್ತಲೇ ಇರಬೇಕು. ಕೇಳುತ್ತಾ ಕೇಳುತ್ತಾ ರಾಗ ಸುಶ್ರಾವ್ಯಗೊಳ್ಳುತ್ತದೆ. ತಿನ್ನುತ್ತಾ ತಿನ್ನುತ್ತಾ ಬೇವು ಸಿಹಿ ಆಗುವುದು. ಹಾಗೆಯೇ, ಧ್ಯಾನಾಭ್ಯಾಸ ಮಾಡುತ್ತಾ, ಮಾಡುತ್ತಾ ನಮ್ಮ ಆತ್ಮದಲ್ಲಿ ಶಾಂತಿ ತುಂಬಿಕೊಂಡು ನಮ್ಮಲ್ಲಿ ಅಭಯ ಎನ್ನುವುದು ಬರುತ್ತದೆ. ಕಟ್ಟಕಡೆಯ ಜನ್ಮದಲ್ಲಿ ನಮಗೆ ಆ ಪ್ರಶಾಂತತೆ ಬರುತ್ತದೆ.

ಲೇಖಕರು

ರವಿಶಾಂತ್

ಎನಗಿಂತ ಕಿರಿಯರಿಲ್ಲ ಜಗದೋಳು.
ನವ ನವೀನ ಕೌತುಕ ವಿಷಯಗಳ ತಿಳಿಯುವ ಹಂಬಲ ಮನದೋಳು.
ನನ್ನ ಬಗ್ಗೆ ನಾನೆ ಹೇಳಿಕೊಳ್ಳುವುದಕ್ಕಿಂತ, ನೀವೇ ಹೇಳುವುದು ಉತ್ತಮ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.