Skip to main content

ಎಲ್ಲಿ ಹೋದವು ಅಮ್ಮಾ ನನ್ನ ಗುಬ್ಬಚ್ಚಿಗಳು.....?

ಇಂದ Nagaraj BN
ಬರೆದಿದ್ದುMay 25, 2014
1ಅನಿಸಿಕೆ

ನಾಗರಾಜ್ ಬಿ.ಎನ್. ಬಾಡ-ಕುಮಟ(೯೪೮೧೦೫೨೩೭೮)

ಮುಂಜಾನೆಯ ಹಾಯಾದ ಸುಖ ನಿದ್ದೆ. ಆಗಲೇ ಮೂರುಸಾವಿರ ಮಠದ ಗಂಟೆ ಆರು ಬಾರಿ ಹೊಡೆದುಕೊಂಡಿತ್ತು. ಕಣ್ಣನ್ನು ಉಜ್ಜುತ್ತ ಯಾಕಾದರೂ ಬೆಳಕು ಹರಿಯುತ್ತೋ ಎಂದು ಗೊಣಗುತ್ತಲೇ ಹಾಸಿಗೆಯಿಂದ ಮೇಲೆದ್ದೆ. ಬಾಗಿಲು ತೆರೆದು ಹೊರಗಡೆ ಒಮ್ಮೆ ಕಣ್ಣಾಡಿಸಿದೆ.

ದೂರದ ಬನ್ನಿ ಮರದ ಮೇಲೆ ಎರಡು ಗುಬ್ಬಚ್ಚಿಗಳು ಸ್ವಚ್ಛಂದವಾಗಿ ಹಾರಾಡುತ್ತಿದ್ದವು.

ಪುಟ್ಟ ಗುಬ್ಬಚ್ಚಿಗಳ ಹಾರಾಟ ನೋಡುತ್ತ, ಚಿಂವ ಚಿಂವ ಸದ್ದು ಕೇಳುತ್ತ ಅಲ್ಲಿಯೇ ನಿಂತು ಬಿಟ್ಟೆ. ಅರಿವಿಲ್ಲದೆ ಕಣ್ಣಾಲಿಗಳು ತೇವಗೊಂಡವು.

ಅರೆ ಕ್ಷಣದಲ್ಲಿಯೇ ಮನೆಗೆ ಫೋನಾಯಿಸಿದೆ. ಅಮ್ಮ ಫೋನ್ ರಿಸೀವ್ ಮಾಡಿದ್ದಳು.

`ಅಮ್ಮಾ, ಗುಬ್ಬಚ್ಚಿಗಳು ಮನೆಗೆ ಬರ್ತಾ ಇವೆಯಾ? ಬರ್ಡ್ ಫೀಡರ್(ಸ್ನೇಹಿತ ದಿನು, ತನ್ನ ಜನ್ಮದಿನಕ್ಕೆ ನನಗೆ ನೀಡಿದ ಗಿಫ್ಟ್)ನಲ್ಲಿ ಹಾಕಿಟ್ಟ ಆಹಾರ ತಿನ್ನೋಕೆ ಎಷ್ಟು ಗುಬ್ಬಚ್ಚಿಗಳು ಬರ್ತಾ ಇವೆ?'

ಬೆಳ್ಳಂಬೆಳಿಗ್ಗೆ ಮಗನ ಫೋನ್ ಗೆ ಮತ್ತು ಪ್ರಶ್ನೆಗಳಿಗೆ ಅಮ್ಮ ತುಸು ಆಶ್ಚರ್ಯಕ್ಕೀಡಾದಳು ಅನ್ಸತ್ತೆ.

`ಏನಾಯ್ತೋ ಮಗ.. ಹಾಸಿಗೆಯಿಂದ ಏಳ್ತಾನೆ ಗುಬ್ಬಿ, ಗುಬ್ಬಿ ಅಂತ ಇದ್ದೀಯಾ?'

`ಯಾಕಿಲ್ಲಮ್ಮಾ, ಇಲ್ಲಿ ಎರಡು ಗುಬ್ಬಚ್ಚಿಗಳು ಚಿಂವ ಚಿಂವ ಎನ್ನುತ್ತ ಓಡಾಡ್ತಾ ಇವೆ. ಅಲ್ಲಿಯೂ ಹೀಗೆ ಆಟ ಆಡ್ತಾ ಇವೆಯಾ ಅಂತ ಫೋನ್ ಮಾಡಿದೆ'

'ಈಗ ಎಲ್ಲೋ ಆ ಪುಟ್ಟ ಗುಬ್ಬಚ್ಚಿಗಳು? ಏಳೆಂಟು ವರ್ಷಗಳೇ ಕಳೆದು ಹೋದವು. ಹುಡುಕುತ್ತಾ ಹೋದರೂ ಒಂದು ಗುಬ್ಬಿ ಸಹ ಕಾಣಲ್ಲ'

`ಅಮ್ಮಾ, ನಾನು ಕನ್ನಡ ಶಾಲೆಗೆ ಹೋಗುವಾಗ ಎಷ್ಟೊಂದು ಗುಬ್ಬಚ್ಚಿಗಳು ಮನೆಗೆ ಬರ್ತಾ ಇದ್ದವು ಅಲ್ವಾ? ಮನೆ ಒಳಗಡೆಯ ಫೋಟೋದ ಹಿಂದೆ, ಹಂಚಿನ ಕೆಳಗೆ ಗೂಡು ಕಟ್ಟಿ, ಮೊಟ್ಟೆ ಇಟ್ಟು, ಮರಿ ಮಾಡಿ ಸಂಸಾರ ನಡೆಸ್ತಾ ಇದ್ದವು. ಈಗ ಅವೆಲ್ಲ ಎಲ್ಲಿ ಅಮ್ಮಾ...?'

ಅಮ್ಮ ಮೌನಕ್ಕೆ ಶರಣಗಾಗಿದ್ದಳು.... ನನ್ನ ಮಾತು ಮುಂದುವರಿದಿತ್ತು.

`ಕೈ-ಕಾಲಿಗೆ ಎಡತಾಕುತ್ತ, ಚಿಂವ ಚಿಂವ ಎಂದು ಹಾರಾಡುತ್ತ ಮನೆಯ ವಾರಸುದಾರರ ಹಾಗೆ ಕಾರುಬಾರು ನಡೆಸ್ತಾ ಇರ್ತಿದ್ದರು ಅಲ್ವಾ ಅಮ್ಮ? ನೀನು ಅಕ್ಕಿ ಆರಿಸುವಾಗ ನಿನ್ನ ಪಕ್ಕದಲ್ಲಿಯೇ ಅವರು ಕುಣಿದು ಕುಪ್ಪಳಿಸಿ, ಒಂದೊಂದೆ ಕಾಳನ್ನು ಹೆಕ್ಕಿ ತಿನ್ತಾ ಇದ್ದರು. ಅಪರಿಚಿತರೇನಾದರೂ ಬಂದಾಗ ಪುರ್ರ ಎಂದು ಹಾರಿ ಹೋಗ್ತಾ ಇದ್ದರು. ನಾನು ಶಾಲೆಗೆ ಹೋದ ಸಮಯ ಆ ಗುಬ್ಬಚ್ಚಿಗಳೇ ಅಲ್ವಾ ಅಮ್ಮಾ, ನಿನ್ನ ಜೊತೆಯಾಗಿರ್ತಿದ್ದವರು? ಎಲ್ಲಿ ಹೋದವು ಅಮ್ಮಾ ಆ ನನ್ನ ಮುದ್ದು ಗುಬ್ಬಚ್ಚಿಗಳು.....?'

ಅಮ್ಮನಿಗೆ ಮಾತೇ ಹೊರಡುತ್ತಿರಲಿಲ್ಲ. ಏನು ಹೇಳಬೇಕೆಂದು ತೋಚದೆ ಹಾಂ... ಹಾಂ... ಎನ್ನುತ್ತಿದ್ದಳು. ಕೊನೆಗೂ ಅಮ್ಮ ತುಟಿ ಬಿಚ್ಚಿದಳು...

'ಮಗ, ಅದೇ ಮೊಬೈಲ್ ಟವರ್ಗಳಿಂದ ಗುಬ್ಬಿ ಸಂತತಿ ನಾಶವಾಗಿದೆಯಂತೆ. ಕೆಲವು ಗುಬ್ಬಚ್ಚಿಗಳು ಬೇರಡೆ ವಲಸೆ ಹೋಗಿವೆಯಂತೆ. ರಾಸಾಯನಿಕ ಮಿಶ್ರಿತ ಆಹಾರದಿಂದಾಗಿ ಅದಕ್ಕೆ ಬೇಕಾದ ಸಾವಯವ ಆಹಾರ ಕೂಡಾ ಸರಿಯಾಗಿ ಸಿಗ್ತಾ ಇಲ್ವಂತೆ. ಏನ್ಮಾಡೋದು.. ಆಧುನಿಕ ತಂತ್ರಜ್ಞಾನ ಬೆಳೆದಂತೆ ಪ್ರಕೃತಿಯ ಸಮತೋಲನ ಕೂಡಾ ಏರುಪೇರಾಗುತ್ತಿದೆ. ಅದು ನೇರವಾಗಿ ನಮ್ಮ ಗುಬ್ಬಚ್ಚಿಯ ಸಂತತಿಗೆ ಮಾರಕವಾಗ್ತಿರೋದು ವಿಪಯರ್ಾಸ. ಪಾಪ, ವಲಸೆ ಹೋಗಿರುವ ಗುಬ್ಬಚ್ಚಿಗಳಾದರೂ ಬೆಚ್ಚಗಿರಲಿ'

ಈಗ ಮಾತನಾಡುವ ಸರದಿ ಅಮ್ಮನದಾಗಿತ್ತು. ನಾನು ಅವಳ ಮಾತಿಗೆ ಕಿವಿಯಷ್ಟೇ ಆಗಿದ್ದೆ.

'ಅಂದ ಹಾಗೆ, ಬರ್ಡ್ ಫೀಡರ್ ಅಂದ್ಯಲ್ಲ. ನೀ ತೂಗು ಹಾಕಿದ ಜಾಗದಲ್ಲಿ ಇಷ್ಟು ದಿನ ಆದ್ರೂ ಒಂದು ಗುಬ್ಬಚ್ಚಿನೂ ಬಂದಿಲ್ಲ. ಹಕ್ಕಿಯೂ ಬಂದಿಲ್ಲ. ಅದಕ್ಕಾಗಿ ಆ ಜಾಗವನ್ನು ಬದಲಿಸಿ ಬೇರೆಡೆ ಇಟ್ಟಿದ್ದೇನೆ. ನೋಡೋಣ, ಅಲ್ಲಿಯಾದರೂ ಬರ್ತವೋ ಇಲ್ವೋ ಎಂದು. ನೀ ಬೇಜಾರು ಮಾಡ್ಕೋ ಬೇಡ. ಹೂಂ ನಾ?'

ಅಮ್ಮ ಮಾತನಾಡುತ್ತ ಮಾತನಾಡುತ್ತ ಗದ್ಗದಿತಳಾದಳು. ಉಮ್ಮಳಿಸಿ ಬರುವ ದುಃಖವನ್ನು ತಡೆದು ನನ್ನನ್ನು ಸಂತೈಸುವ ಸಾಹಸಕ್ಕಿಳಿದಿದ್ದಳು. ಇತ್ತ ನನ್ನ ಕೆನ್ನೆಯ ಮೇಲಿಂದ ಕಂಬನಿಗಳು ನಿಧಾನವಾಗಿ ಉರುಳುತ್ತಿದ್ದವು. ಎಷ್ಟಾದರೂ ಕರಳು-ಬಳ್ಳಿಯ ಸಂಬಂಧ ಅಲ್ವಾ...?

ನಂತರ ದೂರದಲ್ಲಿರುವ ನನ್ನ ಆತ್ಮ ಬಂಧುವಿಗೆ ಫೋನಾಯಿಸಿ, ನಡೆದ ಎಲ್ಲ ವಿಷಯವನ್ನು ಹೇಳಿದೆ. ನನಗೆ ಗುಬ್ಬಚ್ಚಿ ಬೇಕು ಎಂದು ಗೋಗರೆದೆ. ಮಾತಿನ ಮಧ್ಯೆ ಅವಳು 'ಗುಬ್ಬಚ್ಚಿ ಪಾರ್ಕ್' ಮಾಡುವ ಯೋಜನೆ ಹರಿಯ ಬಿಟ್ಟಳು.

ಗುಬ್ಬಚ್ಚಿ ಪಾರ್ಕ್ ಯೋಜನೆ ನನಸಾಗಿದ್ದು, ಗುಬ್ಬಚ್ಚಿಗಳ ಜೊತೆ ಒಡನಾಡುತ್ತಿದ್ದದ್ದು, ಅವುಗಳ ಚಿಂವ ಚಿಂವ ಕಲರವ..... ಎಲ್ಲವನ್ನು ಕಲ್ಪಿಸಿಕೊಳ್ಳುತ್ತ ಕ್ಷಣಕಾಲ ಕಣ್ಮುಚ್ಚಿದೆ.

ಕಲ್ಪನಾ ಲೋಕದಲ್ಲಿ ಗುಬ್ಬಚ್ಚಿಗಾಗಿ ಬದುಕಿದ ಸಾರ್ಥಕತೆಯ ಭಾವ ನನ್ನಲ್ಲಿ ಮೇಳೈಸಿತು. ಆದರೇ.... ಅದು ನಿಜ ಬದುಕಲ್ಲಿ ಎಂದೋ...? 

ಲೇಖಕರು

Nagaraj BN

ಕದವಿರದ ಕನಸು... ನಿದ್ದೆಗೆಡೆಸುವ ನಗ್ನ ಸತ್ಯಗಳು!

ಅನಿಸಿಕೆಗಳು

Nanjunda Raju Raju ಧ, 06/11/2014 - 18:39

ಮಾನ್ಯ ನಾಗರಾಜ್ ರವರೇ, ಗುಬ್ಬಚ್ಚಿಗಳು ಸುಮಾರು ೧೦-೧೫ ವರುಷಗಳಲ್ಲಿ ಮನೆಯಲ್ಲಿ ಅಥವಾ ಹೊರಗೆ ಗೂಡು ಕಟ್ಟಿಕೊಂಡು ಸೂರ್ಯೋದಯಕ್ಕೆ ಮುನ್ನ ಒಳಗೆ ಬಂದು ಚೀವ್ ಚೀವ್ ಎನ್ನುತ್ತಾ ಮಲಗಿದ್ದವರೆನ್ನೆಲ್ಲ ಎಬ್ಬಿಸುತ್ತಿದ್ದವು. ಅವುಗಳ ಆಟ ನೋಡುತ್ತ ಅವುಗಳಿಗೆ ಸ್ವಲ್ಪ ಅಳಿದುಳಿದ ಕಾಳುಗಳನ್ನು  ಹಾಕಿದರೆ ಸಂತೋಷವಾಗಿ ಕುಪ್ಪಳಿಸುತ್ತಾ ತಾವೂ ತಿಂದು ತನ್ನ ಮರಿಗಳಿಗೆ ತೆಗೆದುಕೊಂಡು ಹೋಗುತ್ತಿದ್ದವು. ಆದರೆ ಈಗ ಅವುಗಳು ನೋಡಲೊಂದು ಸಿಗುವುದಿಲ್ಲ. ನಾವೆಲ್ಲಾ ಬಹಳ ಹಿಂದೆ ನೋಡಿದ ನೆನಪಷ್ಟೆ. ಆದರೆ ಈಗಿನ ಮಕ್ಕಳಿಗೆ ಚಿತ್ರದಲ್ಲಿ ತೋರಿಸಬೇಕಷ್ಟೆ! ಅವುಗಳು ನಗರವನ್ನು ತೊರೆಯಲು ಕಾರಣ ಏನೆಂಬುದು ನಮಗೆ ತಿಳಿಯದು. ಅದೇ ಕೆಲವು ಪ್ರಾಣಿಪ್ರಿಯರು ಹೇಳುತ್ತಾರೆ. ನಗರದಲ್ಲೆಲ್ಲಾ ಎಲ್ಲೆಂದರಲ್ಲಿ ಮೊಬೈಲ್ ಟವರ್ ಗಳು ಬಂದ ಕಾರಣ ಗುಬ್ಬಚ್ಚಿಗಳು ನಗರ ತೊರೆದವೆಂದು ಹೇಳುತ್ತಾರೆ. ಅವುಗಳು ಅಷ್ಟು ಸೂಕ್ಷ್ಮ ಜೀವಿಗಳೇ ಎನಿಸುತ್ತದೆ. ಅದೇ ಬೆರಳೆಣಿಕೆಯಲ್ಲಿದ್ದ ಕಾಗೆಗಳು, ಗೊರವಂಕಗಳು, ಹೆಚ್ಚಾಗಿವೆ. ಅದೇ ಪಾರಿವಾಳಗಳು ಒಂದೂ ಬರುತ್ತಿರಲಿಲ್ಲ. ಸಾಕಿದರೆ ಮಾತ್ರ ಕಾಣುತ್ತಿದ್ದವೂ ನಗರದೆಲ್ಲೆಡೆ ಮನೆ ಮನೆಯ ಮೇಲೆ ಕಾಣುತ್ತಿವೆ. ಇದೊಂದು ರೀತಿಯ ಪ್ರಕೃತಿಯ ವಿಕೋಪವೋ ಅಥವಾ ಬದಲಾವಣೆಯೋ ಎನ್ನಬೇಕೋ ತಿಳಿಯದಾಗಿದೆ. ಇದರೊಂದಿಗೆ ನಮ್ಮ ಸರಕಾರ ಗುಬ್ಬಚ್ಚಿಗಳನ್ನು ಸಾಕುವಂತಿಲ್ಲ. ಕಾನೂನು ನಿಷೇಧ ಹೇರಿರುವುದಾಗಿ ತಿಳಿದಿರುತ್ತದೆ. ಹಾಗಾದರೆ ಅವುಗಳ ಸಂತತಿ ಹೆಚ್ಚುವುದಾದರೂ ಹೇಗೆ? ಇದಕ್ಕೆ ಬದಲಾಗಿ ಪಕ್ಷಿ ಪ್ರಿಯರು ಮನೆ ಮನೆಯಲ್ಲಿ ಸೂಕ್ತ ಗೂಡಿನಲ್ಲಿಟ್ಟು ಒಂದು ಗಂಡು ಒಂದು ಹೆಣ್ಣು ಎರಡು ಪಕ್ಷಿಗಳನ್ನು ಸಾಕಿದರೆ, ಅವುಗಳ ಸಂತತಿ ಹೆಚ್ಚಲು ಅವಕಾಶವಾಗುವುದಿಲ್ಲವೆ. ಇದಕ್ಕೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳು, ಸರಕಾರ ಪರಿಶೀಲಿಸಿದರೆ. ನಶಿಸುವ ಪಕ್ಷಿಗಳ ಸಂತತಿ ಉಳಿಯುತ್ತದೆ. ಇಲ್ಲವಾದರೆ ಗಿಳಿಗಳಂತೆ ಇವುಗಳ ಸಂತತಿಯೂ ನಾಶವಾಗುತ್ತದೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.