Skip to main content

ದೇವರ ಹೆಸರಲ್ಲಿ ಕುರಿ-ಕೋಳಿಗಳ ಮಾರಣ ಹೋಮ... ಇದಕ್ಕೆ ಕಡಿವಾಣ ಎಂದು...?

ಇಂದ Nagaraj BN
ಬರೆದಿದ್ದುApril 4, 2014
noಅನಿಸಿಕೆ

(ಉತ್ತರ ಕನ್ನಡ ಜಿಲ್ಲೆಯೆ ಕುಮಟಾ ತಾಲೂಕಿನ ಅಘನಾಶಿನಿ ವಲಯದ ಬಾಡ ಗ್ರಾಮದಲ್ಲಿ ಪ್ರತಿ ವರ್ಷ ಜಾತ್ರಾ ಮಹೋತ್ಸವದಂದು ದೇವರ ಹೆಸರಲ್ಲಿ ಜರುಗುವ ಕುರಿ-ಕೋಳಿಗಳ ಮಾರಣ ಹೋಮದ ಕುರಿತು ಒಂದು ಚಚರ್ೆ... ಇದು ಕೇವಲ ಒಂದು ನಿದರ್ಶನ ಮಾತ್ರ. ಎಷ್ಟೋ ಜಾತ್ರೆಗಳಲ್ಲಿ, ಬಂಡಿ ಹಬ್ಬದ ಸಂದರ್ಭದಲ್ಲಿ, ದೇವರ ಹೆಸರಿನ ಮೇಲೆ ಇಂಥಹ ಬಲಿಗಳು ನಿರಂತರವಾಗಿ ನಡೆಯುತ್ತಲೇ ಬರುತ್ತಿವೆ. ಪ್ರಶ್ನಿಸಿದರೆ ಪೂರ್ವಜರು ಮಾಡಿದ್ದು... ಪರಂಪರಾಗತವಾಗಿ ಬಂದಿದ್ದು... ಧಾರ್ಮಿಕ ಭಾವನೆ... ಎಂಬಿತ್ಯಾದಿಯಾಗಿ ಉತ್ತರಿಸುತ್ತಾರೆ)

ಏಪ್ರಿಲ್ 15ರಂದು ಅಘನಾಶಿನಿ ವಲಯದ ಗ್ರಾಮ ದೇವತೆಯಾದ ಶ್ರೀ ಕಾಂಚಿಕಾ ಪರಮೇಶ್ವರಿಯ ರಥೋತ್ಸವ. ರಥೋತ್ಸವದ ಮಾರನೆ ದಿನ(ಎಪ್ರಿಲ್ 16ರಂದು) ದೇವಸ್ಥಾನದ ಕೆಳ ಭಾಗದಲ್ಲಿರುವ ಹೊಸಬದೇವರ ಗುಡಿಯಲ್ಲಿ ಕುರಿ-ಕೋಳಿಗಳ ಮಾರಣ ಹೋಮ!
ಕನಿಷ್ಠ ಮುನ್ನೂರರಿಂದ ಐದು ನೂರು ಕೋಳಿಗಳ ರುಂಡವನ್ನು ಇಲ್ಲಿ ಚೆಂಡಾಡಲಾಗುತ್ತದೆ. ತಿನ್ನುವ ಚಪಲಕ್ಕಾಗಿ ದೇವರ ಹೆಸರನ್ನು ಬಳಸಿ, ಮೂಕ ಪಕ್ಷಿಗಳ ಪ್ರಾಣ ಹರಣ ಗೈಯ್ಯುತ್ತಾರೆ! ಇದು ಸರಿಯೇ?
ಈ ಹೊಸಬದೇವರ ಪ್ರಾಂಗಣದಲ್ಲಿ ಕೋಳಿ-ಕುರಿಗಳ ರಕ್ತದ ಓಕುಳಿಯೇ ಹರಿದಾಡುತ್ತದೆ. ಒಂದಿನಿತು ಮಾನವೀಯತೆಯಿಲ್ಲದೆ ಕೋಳಿಗಳ ಕತ್ತನ್ನು ಬಿಗಿಯಾಗಿ ಹಿಡಿದು, ಕಚ.. ಕಚನೆ ಕೊಯ್ದು ಬೀಸಾಡುತ್ತಾರೆ. ಅವುಗಳ ರುಂಡ-ಮುಂಡ ಬೇರಾಗಿ ವಿಲ ವಿಲನೆ ಒದ್ದಾಡುವ ದೃಶ್ಯ ನಿಜಕ್ಕೂ ಕರುಣಾಜನಕ ಹಾಗೂ ಅಷ್ಟೇ ಭೀಭತ್ಸ! ಅದನ್ನೇ ನೋಡುತ್ತ ಅಮಿತಾನಂದ ಪಡುವ ಮನಸ್ಸುಗಳು ಸಹ ಅಲ್ಲಿ ನೆರೆದಿರುತ್ತವೆ. ಕೋಳಿಯ ಕತ್ತು ಕೊಯ್ಯುತ್ತಿದ್ದಂತೆ ಹೋ... ಹೋ... ಎಂದು ಕೇಕೆ ಹಾಕುತ್ತ ಸಂಭ್ರಮಿಸುತ್ತಾರೆ. ಸಂದರ್ಭದಲ್ಲಿ ಹೊಸಬದೇವ ಇವೆಲ್ಲವನ್ನು ನೋಡುತ್ತ ಮೂಕನಾಗಿ ಕುಳಿತಿರುತ್ತಾನೆ. ಪಾಪ, ಆತ ಕಲ್ಲಿನ ರೂಪದ ದೇವರು... ಮನಷ್ಯ ಮಾಡುವ ಹೀನ ಕೃತ್ಯಕ್ಕೆ ಹೇಗೆ ಕಡಿವಾಣ ಹಾಕಬಲ್ಲ...? ಹೇಗೆ ವಿರೋಧಿಸಬಲ್ಲ..!?
ಕೋಲಿ-ಕುರಿ ಬಲಿಯನ್ನು ನೀಡಲು ಬಂದ ಜನರ ಮೈ, ಮನ ಹಾಗೂ ವಸ್ತ್ರವೆಲ್ಲ ರಕ್ತದ ಮಡುವಿನಲ್ಲಿ ತೇಲುತ್ತಿರುತ್ತವೆ. ದೇವಸ್ಥಾನದ ಪ್ರಾಂಗಣದಲ್ಲೆಲ್ಲ ರಕ್ತದ ಹೆಜ್ಜೆಗಳು ಮೂಡಿರುತ್ತವೆ. ಅದು ರಣರಂಗವೋ ಅಥವಾ ಅಧ್ಯಾತ್ಮ ಸ್ಥಳವೋ ಎಂದು ತಿಳಿಯದಾಗುತ್ತದೆ.
ಪೂರ್ವಜರ ಅನಿವಾರ್ಯ ನಂಬಿಕೆಯೇ, ಇಂದಿನ ಸಮಾಜದ ಮೌಢ್ಯ ಆಚರಣೆಗೆ ಕಾರಣವಾಗಿದೆ! ಹತ್ತಾರು ರೋಗ ರುಜಿನಿಗಳಿಗೆ ತುತ್ತಾಗುತ್ತಿದ್ದ ಅಂದಿನ ಪೂರ್ವಜರು, ಸಮರ್ಪಕ ಔಷಧೋಪಚಾರಗಳಿಲ್ಲದೆ ಪ್ರಾಣವನ್ನೇ ತೆತ್ತುತ್ತಿದ್ದರು. ಈಗಿನಂತೆ ವೈಜ್ಞಾನಿಕ ತಳಹದಿಯ ಮೇಲೆ ಸಂಶೋಧಿತವಾದ ಔಷಧಗಳು ಅಂದು ಇರಲಿಲ್ಲ! ಅವರಿಗೆ ನಂಬಿಕೆಯೇ ಅವರ ರೋಗವನ್ನು ಗುಣಪಡಿಸಬೇಕಿತ್ತು. ಅವರ ಪ್ರಾರ್ಥನೆ, ಹರಕೆಯೇ ಅವರು ಮತ್ತೆ ಉಸಿರಾಡುವಂತೆ ಮಾಡಬೇಕಿತ್ತು. ಇದಕ್ಕೆ ಪರ್ಯಾಯವಾಗಿ ಅವರು ಕಂಡುಕೊಂಡ ಮಾರ್ಗ ಗ್ರಾಮ ದೇವತೆಗೆ 'ಪಕ್ಷಿ ಬಲಿ ಬಲಿ....!'
ಪ್ರಾಣಿ-ಪಕ್ಷಿಯ ಜೀವವನ್ನು ದೇವಿಗೆ ಅರ್ಪಿಸಿದರೆ, ಹಾಸಿಗೆ ಮೇಲೆ ರೋಗದಿಂದ ನರಳುತ್ತಿರುವ ವ್ಯಕ್ತಿ ಬದುಕುಳಿಯಬಹುದು ಎಂಬ ಮುಗ್ದ ಭಾವ ಅವರದಾಗಿತ್ತು. ಇದರಿಂದಾಗಿ ರೋಗಕ್ಕೆ ತುತ್ತಾದ ವ್ಯಕ್ತಿಯ ಹೆಸರಲ್ಲಿ ಕುಟುಂಬದ ಸದಸ್ಯರು, ದೇವಿಯ ಹೆಸರಲ್ಲಿ ಕೋಳಿಯನ್ನು ಹರಕೆ ಬಿಡುತ್ತಿದ್ದರು. ಯಾವುದೋ ಕಾರಣದಿಂದ ಅಥವಾ ವ್ಯಕ್ತಿಯ ದೇಹದಲ್ಲಿನ ರೋಗ ನಿರೋಧಕ ಶಕ್ತಿಯಿಂದ, ರೋಗಕ್ಕೆ ತುತ್ತಾದ ವ್ಯಕ್ತಿಯು ಬದುಕುಳಿಯುತ್ತಿದ್ದ. ದೇವಿಗೆ ಹರಕೆ ಹೊತ್ತ ಕಾರಣದಿಂದಲೇ ವ್ಯಕ್ತಿ ಬದುಕುಳಿದ್ದಾನೆ ಎಂದು ಭಾವಿಸುತ್ತಿದ್ದರು. ಇದರಿಂದ ಅವನ ಹೆಸರಲ್ಲಿ ಬಿಟ್ಟ ಕೋಳಿಯನ್ನು ಸಾಕಿ ಸಲುಹಿ ಜಾತ್ರಾ ಸಮಯದಲ್ಲಿ ದೇವಿಗೆ ಬಲಿಯ ರೂಪದಲ್ಲಿ ಅರ್ಪಿಸುತ್ತಿದ್ದರು. ಪೂರ್ವಜರ ಈ ಅನಿವಾರ್ಯ ಮುಗ್ಧ ಆಚರಣೆಯೇ ಇಂದು ಹೆಮ್ಮರವಾಗಿ ಬೆಳೆದು ಬಿಟ್ಟಿದೆ....!
ಪ್ರಪಂಚ ಈಗ ಊಹಿಸಲಾರದಷ್ಟು ಬದಲಾಗಿದೆ. ವೈಜ್ಞಾನಿಕ ಮನೋಭಾವನೆಗಳು ಮನೆ-ಮನಗಳಲ್ಲಿ ಬೇರೂರುತ್ತಿವೆ. ಪ್ರತಿಯೊಬ್ಬ ವ್ಯಕ್ತಿಯೂ ಕೂಡಾ ತಾರ್ಕಿಕ ಚಿಂತನೆ ಮಾಡಬಲ್ಲಷ್ಟು ಪ್ರಬುದ್ಧನಾಗಿದ್ದಾನೆ. ಹೀಗಿದ್ದಾಗಲೂ ಕೂಡಾ ದೇವರ ಹೆಸರಲ್ಲಿ ಯಾಕೆ 'ಮೂಕ ಪ್ರಾಣಿ-ಪಕ್ಷಿಗಳ ಬಲಿ' ನಡೆಯಬೇಕು....!?
ಎಲ್ಲವೂ ಭಗವಂತನ ಸೃಷ್ಠಿ ಎಂದ ಮೇಲೆ, ಪ್ರಾಣಿ-ಪಕ್ಷಿಗಳು ಕೂಡಾ ಆತನ ಮಕ್ಕಳೇ ಅಲ್ಲವೇ? ತಾನು ಹುಟ್ಟಿಸಿದ ಮಗುವನ್ನೆ ತನಗೆ ಬಲಿ ಬೇಕು ಎಂದು ಆ ದೇವರು ಕೇಳುತ್ತಾನೆಯೇ? ಹಾಗೆ ಬಲಿ ಕೇಳುವ ದೈವವನ್ನು, ದೇವರೆನ್ನಬಹುದೇ...? ಇಂದು ದೇವರ ಹೆಸರಲ್ಲಿ ಬಲಿ ನೀಡುವ ಅನೇಕರಿಗೆ ಇವೆಲ್ಲ ತಿಳಿದಿಲ್ಲ ಎಂದಲ್ಲ. ತಿಳಿದಿದ್ದರೂ ಕೂಡಾ 'ಹಿಂದಿನಿಂದ ನಡೆದುಕೊಂಡು ಬಂದ ಪದ್ಧತಿ' ಎನ್ನುತ್ತಾರೆ. ಇದು ದೇವರ ಮೇಲಿರುವ ಭಯವನ್ನು ಸೂಚಿಸುತ್ತಿದೆಯೇ ಹೊರತು, ನಿಜ ಭಕ್ತಿಯನ್ನಲ್ಲ.. ನಿಜವಾದ ಭಕ್ತಿ ಬಲಿ ಕೊಡುವುದರಲ್ಲಿ ಇಲ್ಲ. ಇನ್ನೊಂದು ಪ್ರಾಣವನ್ನು ಉಳಿಸುವುದರಲ್ಲಿ ಇದೆ! ಇನ್ನೊಂದು ಜೀವಕ್ಕೆ ಕೊಡುವ ಗೌರವದಲ್ಲಿ ದೇವರಿದ್ದಾನೆ. ಭಕ್ತಿ ಇದೆ!
ಸ್ನೇಹಿತರೆ.... ಹಿತೈಷಿಗಳೇ.... ಬಂಧುಗಳೇ.... ನಿಮ್ಮ ಬಾಯಿ ಚಪಲಕ್ಕಾಗಿ ದಯವಿಟ್ಟು ದೇವರ ಹೆಸರಲ್ಲಿ ನಮ್ಮ ಮುದ್ದು, ಮುಗ್ಧ ಪ್ರಾಣಿ-ಪಕ್ಷಿ(ಕೋಳಿ)ಗಳನ್ನು ಬಲಿ ನೀಡಬೇಡಿ. ದೇವರು ಎಂದೂ ತನ್ನ ಮಕ್ಕಳ ರಕ್ತವನ್ನು ಕೇಳುವುದಿಲ್ಲ. ಸ್ವಲ್ಪ ತಾಕರ್ಿಕವಾಗಿ ಚಿಂತನೆ ಮಾಡಿ. ಅವುಗಳಿಗೂ ನಮ್ಮಷ್ಟೇ ಸ್ವತಂತ್ರವಾಗಿ ಬದುಕುವ ಹಕ್ಕು ಇದೆ. ಹಾಗೆ ಸರಕಾರ ದೇವರ ಹೆಸರಲ್ಲಿ ಪ್ರಾಣಿ ಪಕ್ಷಿಗಳ ಬಲಿಯನ್ನು ನಿಷೇಧಿಸಿದೆ. ಧಾರ್ಮಿಕತೆಯ ಹೆಸರಲ್ಲಿ ಕೊಲೆಗಡುಕರಾಗಿ ಅಧಾರ್ಮಿಕತೆಯ ನಡುವಳಿಕೆ ತರವಲ್ಲ.

ಲೇಖಕರು

Nagaraj BN

ಕದವಿರದ ಕನಸು... ನಿದ್ದೆಗೆಡೆಸುವ ನಗ್ನ ಸತ್ಯಗಳು!

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.