Skip to main content

ಕನ್ನಡ ಮಾತಾಡಲು ನಾಚಿಕೆಯೇಕೆ??

ಬರೆದಿದ್ದುOctober 2, 2013
3ಅನಿಸಿಕೆಗಳು

ಕನ್ನಡಾಭಿಮಾನ ಪುನಃ ತೋರಿಸುವ ಸಮಯ ಇನ್ನೇನು ಕೇವಲ ಒಂದು ತಿಂಗಳ ಅಂತರದಲ್ಲಿದೆ. ಅದೇಕೋ ಗೊತ್ತಿಲ್ಲ, ಬೆಂಗಳೂರಿನಲ್ಲಿ ಕನ್ನಡ ಮಾತನಾಡಲು ಅಳುಕುವ ಕನ್ನಡಿಗರು, ನವೆಂಬರ್ ಒಂದರಂದು ಭಯಂಕರ ಕನ್ನಡಾಭಿಮಾನಿಗಳಾಗಿಬಿಡ್ತಾರೆ!!! ನಾನು ಬೆಂಗಳೂರಿಗೆ ಒಂದು ಸಂದರ್ಶನಕ್ಕಾಗಿ ಪ್ರಪ್ರಥಮವಾಗಿ ಹೋಗಿದ್ದ ಸಮಯ.

ತಮಾಷೆ ಅಂದ್ರೆ, ಅಲ್ಲಿ ತಮಿಳು, ತೆಲುಗು, ಹಿಂದಿ, ಮರಾಠಿ ಎಲ್ಲಾ ಭಾಷೆಗಳೂ ಕೇಳ್ತಾ ಇದ್ದವು. ಮಂಗಳೂರಿನ ಹತ್ತಿರದ ಊರಿನವರಾದ ನಾನು ಮತ್ತು ನನ್ನ ಗೆಳತಿ ಇವೆಲ್ಲದರ ನಡುವೆ ಯಾರಾದರೂ ಕನ್ನಡದವರು ಸಿಕ್ತಾರಾ ಅಂತ ಗಮನಿಸ್ತಾ ಇದ್ದೆವು. ಸುಮಾರು ೧ ಗಂಟೆಯ ಬಳಿಕ ಯಾರೆಲ್ಲಾ ಆಂಗ್ಲ ಭಾಷೆಯಲ್ಲಿ ಮಾತನಾಡ್ತಾ ಇದ್ದಾರೋ ಅವರೇ ಕನ್ನಡದವರು ಎಂಬ ತಾರ್ಕಿಕ ತೀರ್ಮಾನಕ್ಕೆ ಬಂದೆವು ಕಾರಣ, ಅವರ ಮಾತಿನ ನಡುವೆ ಅಲ್ಲೊಂದು ಇಲ್ಲೊಂದು ಕೇಳಿಬರುತ್ತಿದ್ದ "ಇಲ್ಲ ಕಣೋ, ಸೀ ಮ್ಯಾನ್ ವಾಟ್ ಐ ಮೀನ್ ಟು ಸೇ..."

ಎಂಬ ಕನ್ನಡ ಪದಗಳು. ನಾನಂತೂ ಬೆಪ್ಪಾಗಿ ಅವರತ್ತಲೇ ನೋಡುತ್ತಿದ್ದೆ. ಸರಿ, ಕೊನೆಗೂ ಕೆಲಸ ಸಿಕ್ಕಿತ್ತು. ನನ್ನ ಗೆಳತಿ, ಬೇಗ ಈ ಕಂಗ್ಲೀಷ್ಮಯ ವಾತಾವರಣದಲ್ಲಿ ಕನ್ನಡ ಬಾವುಟ ಹಾರಿಸು ಅಂತ ಹಾರೈಸಿದ್ದಳು. ಅವರವರ ಮಾತೃ ಭಾಷೆಯಲ್ಲಿ ಮಾತನಾಡುವ ಅವಕಾಶವಿರುವೆಡೆಯಲ್ಲಿ ಕನ್ನಡಿಗರು ಮಾತ್ರ ಅದ್ಯಾಕೆ ಕನ್ನಡದಲ್ಲಿ ವ್ಯವಹರಿಸಲು ಮುಜುಗರ ಪಡುತ್ತಾರೋ ನನಗಂತೂ ಗೊತ್ತಿಲ್ಲ. ಮೊದಮೊದಲು ನಾನೂ ಕೂಡ ಬಹಳಷ್ಟು ಅವಮಾನಗಳನ್ನೆದುರಿಸಬೇಕಾಯಿತು. ನಿಮ್ಮ ಮಂಗಳೂರು ಕನ್ನಡ ಕೇಳ್ತಾ ಇದ್ರೆ ಪ್ರಜಾವಾಣಿ ದಿನಪತ್ರಿಕೆ ಓದಿದ ಹಾಗಾಗ್ತದಲ್ರೀ ಅಂತ ಅಣಕಾಡುತ್ತಿದ್ದ ವ್ಯಕ್ತಿಗಳೂ ಕೊನೆಕೊನೆಯಲ್ಲಿ ತಮಗೇ ಅರಿವಿಲ್ಲದಂತೆ ಕನ್ನಡದಲ್ಲೇ ವ್ಯವಹರಿಸತೊಡಗಿದರು.

ಇದು ಕೇವಲ ನನ್ನ ಅನುಭವ ಮಾತ್ರವಲ್ಲ. ಬಹುಷಃ ಮಹಾನಗರಕ್ಕೆ ಕಾಲಿಟ್ಟ ಪ್ರತಿಯೊರ್ವ ಕನ್ನಡಿಗನ ಗೋಳೂ ಇದೇ ಆಗಿರಬಹುದು. ಕನ್ನಡದವರೇ ಆಗಿದ್ರೂ ಇಂಗ್ಲೀಷ್ ಭಾಷೆಯಲ್ಲಿ ಮಾತನಾಡಿಸುತ್ತಿದ್ದವರೆಲ್ಲರನ್ನೂ ಮುಲಾಜಿಲ್ಲದೆ ಅಯ್ಯೋ ಇಲ್ಲೇ ಹುಟ್ಟಿ ಬೆಳೆದಿದ್ದರೂ ನಿಮ್ಗೆ ಕನ್ನಡ ಗೊತ್ತಿಲ್ವ??? ಅಂತ ಕೇಳಿಬಿಡುತ್ತಿದ್ದೆ. ಪರಊರಿನಿಂದ, ಪರರಾಜ್ಯದಿಂದ ಬಂದ ನನ್ನ ಸಹೋದ್ಯೋಗಿಗಳಲ್ಲಿ ಕೆಲವರಿಗೆ ಕನ್ನಡ ಕಲಿಸಿದ್ದೇನೆ ಎಂಬ ಖುಷಿಯೊಂದಿಗೆ, ಬೆಂಗಳೂರನ್ನು, ಇಲ್ಲಿನ ಜನ, ಸಂಸ್ಕೃತಿ, ಆಹಾರ ಪದ್ಧತಿಗಳನ್ನು ಹೀಯಾಳಿಸಿದವರ ಗ್ರಹಚಾರ ಕೂಡ ಬಿಡಿಸಿದ್ದೇನೆ ಅನ್ನೋ ಸಮಾಧಾನ ಇದೆ.

ಅಲ್ರೀ, ಅವರ್ಯಾರೋ ನಮ್ಮೂರನ್ನ, ನಮ್ಮ ಸಂಸ್ಕೃತಿಯನ್ನ ಬಾಯಿಗೆ ಬಂದ ಹಾಗೆ ಅನ್ತಾ ಇದ್ರೆ, ಅದ್ಯಾಕೆ ನಮ್ಮ ಜನ ಬೇರೆಯವರ ವಿಷ್ಯ ನಮಗ್ಯಾಕಪ್ಪ ಅಂತ ಬಾಯಿ ಮುಚ್ಚಿ ಕೂತುಬಿಡ್ತಾರೋ ನನ್ಗಂತೂ ಅರ್ಥ ಆಗುದಿಲ್ಲ. ಆರೋಗ್ಯಯುತ ವಿಮರ್ಶೆ, ಹೊಸ ಊರಿಗೆ ಬಂದು, ಹೊಂದಿಕೊಳಲಾಗದ ಹತಾಶೆಯಿಂದ ಹೊರಬಂದ ಮಾತಾದ್ರೆ ನಾನು ಜಗಳಕ್ಕೆ ಹೋಗುದಿಲ್ಲ. ಆದ್ರೆ ತೀರಾ ಅನಿಸೋವಷ್ಟು, "ಛೀ ಅದೇನು ಅಂತ ಮೂರು ಹೊತ್ತೂ ಅನ್ನ ಅನ್ನ ಅಂತ ಬಾಯಿ ಬಿಡ್ತಾರೋ ಇಲ್ಲಿಯ ಜನ, ಸಿಕ್ಕ ಸಿಕ್ಕ ಕಲ್ಲನ್ನೆಲ್ಲಾ ಗುಡಿ ಕಟ್ಟಿ ಪೂಜೆ ಮಾಡ್ತಾರೆ ಹುಚ್ಚು ಜನ, ಆ ಪುನೀತ್ ಮೂತಿ ನೋಡೇ ಅವ್ನು ಒಬ್ಬ ಹೀರೋ ನಾ ಇವ್ರಿಗೆ, ಈ ಬೆಂಗಳೂರಲ್ಲಿ ಅದೆಂಥಾ ದರಿದ್ರ ನೀರು, ಗಾಳಿನೂ ಕೊಳಕು, ನಮ್ಮೂರಲ್ಲಂತೂ ಒಂದು ದಿನಾನೂ ತಿಗಣೆ ನೋಡಿಲ್ಲ ಇಲ್ಲಿ ಬಂದ ಮೇಲೆ ಅದೇನೇನು ನೋಡಿ ಸಾಯ್ಬೇಕೋ..." ಎಂಬೆಲ್ಲಾ ಮಾತುಗಳಿಗೂ ನನ್ನ ಬತ್ತಳಿಕೆಯಲ್ಲಿ ಸರಿಯಾದ ಉತ್ತರ ಇತ್ತು.

ಅಷ್ಟು ಕಷ್ಟ ಆದ್ರೆ, ವಾಪಾಸ್ ನಿಮ್ಮೂರಿಗೆ ಹೋಗಿ, ಅಲ್ಲೇ ಎಲ್ಲಾದ್ರೂ ಕೆಲ್ಸ ಮಾಡಿ, ನಿಮ್ಮನ್ಯಾರೂ ಅಕ್ಷತೆ ಕೊಟ್ಟು ಕರೆದಿರಲಿಲ್ಲವಲ್ಲ ಅಂದ ಮೇಲೇನೇ ಅವರ ಬಾಯಿಗೆ ಬೀಗ ಬೀಳ್ತಾ ಇದ್ದದ್ದು. ನಾವು ಕರ್ನಾಟಕದ ಜನ ಅದ್ಯಾವುದೇ ರಾಜ್ಯಕ್ಕೆ ಹೋದ್ರೂ ಅಲ್ಲಿನ ಸಂಸ್ಕೃತಿಯನ್ನ ಗೌರವಿಸಿ, ಅಲ್ಲಿನ ಭಾಷೆ ಕಲಿತು, ಅಲ್ಲಿಗೆ ಹೊಂದಿಕೊಂಡು ಬದುಕಲು ಕಲಿಯುತ್ತೇವೆಯೇ ವಿನಹ ಅಲ್ಲಿನವರನ್ನ ಹೀಯಾಳಿಸಿಕೊಂಡು, ಅವರ ಭಾಷೆಯನ್ನ ಅವಮಾನಿಸುತ್ತಾ ಬದುಕುವುದಿಲ್ಲ. ಇದು ನಮ್ಮ ಸಂಸ್ಕಾರ, ನಾವು ಬೆಳೆದು ಬಂದ ರೀತಿ, ಸರಿ. ಆದರೆ ಅದರ ಜೊತೆಜೊತೆಗೆ ನಮ್ಮಲ್ಲೇ ತಳವೂರಿ, ಕನ್ನಡ, ಕರ್ನಾಟಕವನ್ನ ಹೀಯಾಳಿಸುತ್ತಾ ಬದುಕುತ್ತಿರುವ ಜನರಲ್ಲಿರುವ ದುರಭಿಪ್ರಾಯವನ್ನು ಹೋಗಲಾಡಿಸುವುದೂ ಕನ್ನಡಿಗರ ಕೆಲಸವಲ್ಲವೇ?? ಅದೂ ಕೂಡ ಕನ್ನಡಾಭಿಮಾನದ ಪರಿಧಿಗೇ ಬರುವುದಿಲ್ಲವೇ?? ನಮ್ಮ ಸಂಸ್ಕೃತಿಯನ್ನ, ಭಾಷೆಯನ್ನ ನಾವೇ ಗೌರವಿಸದಿದ್ರೆ, ಪ್ರೀತಿಸದಿದ್ರೆ, ಹೊರರಾಜ್ಯದವರು ಪ್ರೀತಿಸುತ್ತಾರೆಯೇ? ಗೌರವಿಸುತ್ತಾರೆಯೇ???

ಇನ್ನೇನು ನವೆಂಬರ್ ಒಂದು ಹತ್ತಿರದಲ್ಲಿದೆ. ಅದೊಂದು ದಿನ, ಅದೊಂದು ವಾರ ಅಥವಾ ಹೆಚ್ಚೆಂದ್ರೆ ಅದೊಂದು ತಿಂಗಳು ಕನ್ನಡಾಭಿಮಾನ ಉಕ್ಕುಕ್ಕಿ ಹರಿದು ಕೊನೆಗೆ ಹಿಂದಿನಂತೆಯೇ ಸ್ಥಬ್ಧವಾಗಿಬಿಡುವಲ್ಲಿಗೆ ಕನ್ನಡಿಗರ ರಾಜ್ಯೋತ್ಸವದ ಸಂಭ್ರಮಾಚರಣೆ ಮುಗಿದೇಬಿಡುತ್ತದೆ. ಮಾತೃಭಾಷೆಯಲ್ಲಿ ಮಾತಾಡಿ ಅಂತ ಹೇಳಿಬಿಟ್ರೆ ಸಾಕು ಹೀಯಾಳಿಸುವ ಜನ, ಇತ್ತೀಚೆಗೆ ಸೀನಿದ್ರೂ , ಎಡವಿ ಬಿದ್ರೂ, ಕೈಗೆ ಚೂರು ಗಾಯ ಮಾಡಿಕೊಂಡ್ರೂ ಒಹ್ ಮಮ್ಮಾ, ಐ ಕಾಂಟ್ ಬೇರ್ ದಿಸ್ ಪೈನ್.. ಅನ್ನೋ ಸ್ಥಿತಿಗೆ ಬಂದುಬಿಟ್ಟಿದ್ದಾರೆ. ಹೀಗೇ ಮುಂದುವರೆದ್ರೆ ಮುಂದೊಮ್ಮೆ ಕನ್ನಡ ನಶಿಸಿ ಹೋದ ಭಾಷೆ ಎಂಬ ಪಟ್ಟಿಗೆ ಸೇರಿದ್ರೂ ಅಚ್ಚರಿಯಿಲ್ಲ. ಹಾಗಂತ ನಾವು ಪರರಾಜ್ಯದವರೊಡನೆ ಸ್ಪರ್ಧೆಗೆ, ಜಗಳಕ್ಕೆ ಇಳಿಯುವ ಅಗತ್ಯವೂ ಇಲ್ಲ. ಮೊದಲು ಜೀವನದಲ್ಲಿ ಕನ್ನಡ ಅಳವಡಿಸಿಕೊಂಡು, ತೀರಾ ಅನಿವಾರ್ಯ ಆಗದ ಹೊರತು ಇಂಗ್ಲೀಷ್ ಬಳಸದೇ ಇದ್ದರಾಯ್ತು. ಎಲ್ಲಾ ಭಾಷೆಗಳನ್ನೂ ಕಲಿಯಿರಿ ಆದರೆ ಮೊದಲ ಆದ್ಯತೆ ಮಾತ್ರ ಕನ್ನಡಕ್ಕಿರಲಿ. ಕನ್ನಡಾಭಿಮಾನ ಮನದಲ್ಲಿರಲಿ, ಕೃತಿಯಲ್ಲಿರಲಿ.. ಆಡಂಬರದ ಆಚರಣೆಯಲ್ಲಲ್ಲ..

ಲೇಖಕರು

Jyothi Subrahmanya

ನೆನಪಿನ ನವಿಲುಗರಿ

ಭಾವನಾ ಜೀವಿ, ಚಿಕ್ಕ ಪುಟ್ಟ ಕನಸು ಕಾಣೋದು ಅಂದ್ರೆ ಇಷ್ಟ. ಮಳೆ, ಇಬ್ಬನಿ, ಹಸಿರು, ಆಕಾಶ, ನಕ್ಷತ್ರ, ರಾತ್ರಿ, ಇವೆಲ್ಲಾ ತುಂಬಾ ಇಷ್ಟ. ನನ್ನ ಬಗ್ಗೆ ಇನ್ನು ಜಾಸ್ತಿ ತಿಳ್ಕೊಳ್ಳೋಕೆ ನನ್ನ ಸ್ನೇಹಿತರಾಗಿ. ನಿಮಗೇ ತಿಳಿಯುತ್ತೆ. ;)

ಅನಿಸಿಕೆಗಳು

ನವೀನ್ ಚ೦ದ್ರ ಶನಿ, 10/12/2013 - 07:54

ಬೆಂಗಳೂರಿನಲ್ಲಿ ಕನ್ನಡ ಮಾತಾಡುವರನ್ನು ಹುಡುಕುವುದೇ ಕಷ್ಟವಾಗಿದೆ, ನವಂಬರ್ ನಲ್ಲಿ ಅಷ್ಟೆ ಕನ್ನಡಪ್ರೇಮವನ್ನು ಕಾಣುತ್ತೇವೆ.

 ಎಲ್ಲಿಯವರೆಗೆ ನಮ್ಮ ಭಾಷೆಯ ಮೇಲೆ ಭಾವಾನಾತ್ಮಕವಾದ ಆಭಿಮಾನ ಕನ್ನಡಿಗರಲ್ಲಿ ಬರುವುದಿಲ್ಲವೋ ಅಲ್ಲಿಯವರೆಗೆ ಬೇರೆ ಭಾಷೆಯ ಮೇಲಿನ 

ಪ್ರೀತಿ ಮುಂದುವರೆದು ಕನ್ನಡಭಾಷೆ ಮಿಶ್ರಭಾಷೆಯಾಗಿಬಿಡುತ್ತದೆ. ಉತ್ತಮ ಲೇಖನ ಚೆನ್ನಾಗಿದೆ ಜ್ಯೋತಿಯವರೆ,,,

venkatb83 ಧ, 10/23/2013 - 19:50

ನಿಮ್ಮ ಕಳಕಳಿ ಮೆಚ್ಗೆ ಆಯ್ತು .. 

ಈ ಸಮಸ್ಯೆ ನಮ್ಮಲ್ಲಿ ಮಾತ್ರ ಇದೆ ಅನ್ಸುತ್ತೆ .. ..

ನಾವ್ ಇರುವ ಕಡೆ ಎಲ್ಲಾ ಕನ್ನಡ ಪಸರಿಸುವುದು ನಮ್ಮ ಅಭ್ಯಾಸ..

ಅದು ಮುಂದುವರೆಯಲಿದೆ...

 

ಆದ್ರು ಜಾರಿ ಬಿದ್ರೆ  ಬಾಯಲ್ಲಿ ಬರುವುದು ' ಅಮ್ಮಾ' ಎಂಬುವ ಕನ್ನಡ ನುಡಿ ಮಾತ್ರ ...!!

 

ಶುಭವಾಗಲಿ..

 

\।/

 

Jyothi Subrahmanya ಭಾನು, 10/27/2013 - 15:29

ಧನ್ಯವಾದಗಳು ನವೀನ್ ಮತ್ತು ವೆಂಕಟ್ ನಿಮ್ಮ ಅನಿಸಿಕೆಗಳಿಗೆ... ಪ್ರೋತ್ಸಾಹ ಹೀಗೇ ಇರಲಿ.. 

 

ಜ್ಯೋತಿ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.