ದಳಿಯ ಕಿಟಕಿ, ಅದರಾಚೆಗಿನ ತೋಟ...
ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ ಅಂತಾ ಪಲ್ಲವಿಯವರ ಸುಮಧುರ ಕಂಠದಿಂದ ಡಾ.ಎನ್.ಎಸ್.ಲಕ್ಷ್ಮೀನಾರಾಯಣಭಟ್ಟರ ಹಾಡು ಕೇಳ್ತಾ ಇದ್ದಂತೆ ಮನಸ್ಸು ಧುತ್ತೆಂದು ಏನೂ ಯೋಚನೆಗಳೇ ಬಾರದ ನಿಶ್ಯಬ್ದದ ಲೋಕಕ್ಕೆ ಜಾರಿಬಿಡುತ್ತದೆ. ಅದೇಕೋ ಕೆಲ ಭಾವಗೀತೆಗಳು, ಮನಸ್ಸನ್ನೇ ಅದ್ದಿ ತೆಗೆದಂತೆ ಅವನ್ನು ಹಾಡಿದ ರೀತಿ, ಆ ರಾಗ, ಆ ಸಾಹಿತ್ಯ ನಮ್ಮನ್ನು ಹಿಡಿದಿಟ್ಟುಬಿಡುತ್ತವೆ.
ಜಿಟಿಜಿಟಿ ಸುರಿಯುವ ಮಳೆಯನ್ನ, ಆ ಮಳೆಯಲ್ಲಿ ನೆಂದು ತೊಪ್ಪೆಯಾಗಿ ಮುದ್ದಾಗಿ ಕಾಣುವ ಅಡಿಕೆ, ತೆಂಗಿನ ತೋಟ ನೋಡುತ್ತಾ, ಕೈಯಲ್ಲಿ ಅಮ್ಮ ಮಾಡಿಕೊಟ್ಟ ಫಿಲ್ಟರ್ ಕಾಫಿ ಗುಟುಕರಿಸ್ತಾ ಇದ್ದರೆ, ಆ ಕ್ಷಣಕ್ಕೆ ಸ್ವರ್ಗ ಅಂದರೆ ಇದೇನಾ ಅಂತನಿಸಿಬಿಡುತ್ತದೆ. ಆ ಘಳಿಗೆಗೆ ಈ ಮೊಬೈಲ್, ಮೆಸೇಜ್, ಕಂಪ್ಯೂಟರ್, ಉಸಿರುಕಟ್ಟಿ ಓಡುತ್ತಿರುವ ಬೆಂಗಳೂರ ಜೀವನ ಶೈಲಿ, ಅದೆಲ್ಲವೂ ಮರೆತೇ ಹೋಗಿ ಅದೊಂದು ದಿವ್ಯ ಮೌನ ಆವರಿಸಿಬಿಡುತ್ತದೆ. ಬಹುಷಃ ನನ್ನ ಅತ್ಯಂತ ಮೆಚ್ಚಿನ ಕ್ಷಣಗಳಲ್ಲಿ ಇದೂ ಕೂಡ ಒಂದು. ಈ ಬಾರಿ ಅಜ್ಜಿ ಮನೆಗೆ ಹೋದಾಗ ಆಗಸಕ್ಕೆ ಶಾಶ್ವತವಾದ ತೂತು ಬಿದ್ದಿದೆಯೇನೋ ಅಂತ ಭ್ರಮೆ ಹುಟ್ಟಿಸುವಷ್ಟು ಮಳೆ. ನನ್ನಿಷ್ಟದ, ಚಾವಡಿಯ ದೊಡ್ಡದಾದ ದಳಿ ಹಾಕಿದ ಕಿಟಕಿಯ ಬುಡದಲ್ಲೇ ಇರುವ ಮೆತ್ತನೆಯ ಸೋಫಾದ ಮೇಲೆ ಮಲಗಿ ಕಿಟಕಿಯಿಂದ ಕಾಣುತ್ತಿದ್ದ ಉದ್ದನೆಯ ಅಡಿಕೆ ಮರದಿಂದ ಹನಿಹನಿಯಾಗಿ ಉದುರುತ್ತಿದ್ದ ಮಳೆ ಹನಿಯನ್ನೇ ನೋಡುತ್ತಿದ್ದೆ.
ಅದ್ಯಾಕೋ ಗೊತ್ತಿಲ್ಲ. ಪ್ರಕೃತಿಯನ್ನು ಎಷ್ಟು ಬಾರಿ ನೋಡಿದರೂ ಪ್ರತೀ ಸಲವೂ ಹೊಸತರಂತೆ ಕಾಣುತ್ತದೆ. ನನ್ಗಂತೂ ನಾನಿನ್ನೂ ಚಿಕ್ಕ ಮಗುವೇನೋ ಅನಿಸುವುದೇ ಇಂತಹ ಕ್ಷಣದಲ್ಲಿ. ಆದರೆ ಈ ಸಲ ಮನಸ್ಸಲ್ಲದೇನೋ ಸೂತಕದ ಛಾಯೆ ಆವರಿಸಿತ್ತು. ಸಂಜೆಯಷ್ಟರಲ್ಲೇ ಬಂದ ಕಂಟ್ರಾಕ್ಟರ್ ಹೊಸ ಮನೆಯ ನೀಲನಕ್ಷೆಯನ್ನ ದುಪ್ಪಟ್ಟು ಉತ್ಸಾಹದಲ್ಲಿ ತೋರಿಸ್ತಾ ಇದ್ರೆ, ನನ್ಗಂತೂ ಆತನನ್ನು ಹಿಡಿದು ಚಚ್ಹಿಬಿಡಲೇ ಅನಿಸ್ತಿತ್ತು. ಆದರೆ ಪಾಪ ಅವರದೇನು ತಪ್ಪು, ಮನೆ ವಿಪರೀತ ಎನಿಸುವಷ್ಟು ಹಳೆಯದಾಗಿದೆ, ಬಿದ್ದು ಹೋಗುವಂತಾಗಿರುವ ಹಳೇ ಮನೆಯನ್ನು ಕೆಡವಿ ಅದೇ ಜಾಗದಲ್ಲಿ ನವೀನ ಮಾದರಿಯ ಮನೆ ಕಟ್ಟಿಸುವ ನಿರ್ಧಾರ ಎಲ್ಲರದಾಗಿತ್ತು.
ಕೊನೆಗೂ ನನ್ನ ಪ್ರೀತಿಯ ದಳಿಯ ದೊಡ್ಡ ಕಿಟಕಿ ಇನ್ನಿಲ್ಲವಾಗುತ್ತದೆ ಅನ್ನೋ ವಾಸ್ತವ ನನ್ನ ಚುಚ್ಚುತ್ತಿತ್ತು. ಕೊನೆಗೂ ತಡೆಯಲಾರದೆ "ಈ ಚಾವಡಿ, ತೋಟಕ್ಕೆ ಮುಖ ಮಾಡಿದ ದೊಡ್ಡ ಕಿಟಕಿಯನ್ನ ಹೀಗೇ ಉಳಿಸಿ ಕೊಂಡರೆ ಚೆಂದವಿತ್ತು.." ಎಂದೆ. ಆದರೆ ವಾಸ್ತು, ನವೀನ ಶೈಲಿ ಎಂದು ಬಹಳ ಚರ್ಚೆ ಅದಾಗಲೇ ನಡೆದು ನಿರ್ಧಾರಗಳನ್ನ ತೆಗೆದುಕೊಂಡಾಗಿತ್ತು. ಕೊನೆಗೆ ನನ್ನ ಬೇಸರ ನೋಡಲಾರದೆ, ನಿನಗೆ ಇಷ್ಟವಾದ ದೊಡ್ಡದೊಂದು ಉಯ್ಯಾಲೆಯನ್ನ ಚಾವಡಿಯಲ್ಲಿ ಹಾಕಿಸುವ ಅಂತ ಅಜ್ಜಿ ಹೇಳಿದಾಗ ಮನಸ್ಸಿಗೆ ಕೊಂಚ ಸಮಾಧಾನವಾದರೂ, ನನ್ನ ನೆಚ್ಚಿನ ಕಿಟಕಿಯ ಸ್ಥಾನವನ್ನ ಅದು ತುಂಬಲಾರದೆನಿಸಿತು. ಅದೇನೇ ಇರಲಿ, ಪುನಃ ಅಜ್ಜಿ ಮನೆಗೆ ಹೋಗುವ ವೇಳೆಗೆ ಅಲ್ಲಿ ಹೊಸ ಮನೆ, ಹೊಸ ಕನಸುಗಳಿಗೆ, ಯೋಚನೆಗಳಿಗೆ ಜನ್ಮ ನೀಡಲು ತಯ್ಯಾರಾಗಿರುತ್ತದೆ ಅಂತ ಅನಿಸಿದ್ದೇ ತಡ, ಹಳೇ ಮನೆಯ ಪ್ರತೀ ಕೋಣೆ, ಕಿಟಕಿ, ಕಿಟಕಿಯಿಂದ ಕಾಣುವ ಸುಂದರ ತೋಟ ಎಲ್ಲದರ ಛಾಯಾಚಿತ್ರಗಳನ್ನ ಕ್ಲಿಕ್ಕಿಸಿದೆ. ನಾನಿಷ್ಟೆಲ್ಲಾ ಬರೆಯುವ ಹೊತ್ತಿಗೆ ಹೊಸಮನೆಯ ಕಾರ್ಯ ಆರಂಭವಾಗಿರುತ್ತದೆ.
ನನ್ನ ಹಲವು ಕನಸುಗಳಿಗೆ, ಬೆಚ್ಚನೆಯ ನೆನಪುಗಳಿಗೆ, ಕಾರಣವೇ ಇಲ್ಲದೆ ಜಾರಿದ ಕಣ್ಣೀರಿಗೆ, ಸಮ್ಮೋಹನಕ್ಕೊಳಗಾದಂತೆ ಆವರಿಸುತ್ತಿದ್ದ ಸುಖ ನಿದ್ರೆಗೆ, ಕಾದಂಬರಿಯನ್ನೋದುತ್ತಾ ನನ್ನೊಡನೇ ಅಂಟಿದಂತೆ ಕುಳಿತು ನಿದ್ರೆ ತೂಗುತ್ತಿದ್ದ ಬೆಕ್ಕಿನಮರಿಯ ಖುರ್ರ್ ಖುರ್ರ್ ಎಂಬ ಖುಷಿಯ ಸದ್ದನ್ನಾಲಿಸುತ್ತಾ ನನ್ನ ಖಾಸಗಿ ಕ್ಷಣಗಳನ್ನ ಪೂರ್ತಿಯಾಗಿ ಅನುಭವಿಸುತ್ತಿದ್ದ ನನ್ನ ಏಕಾಂತಕ್ಕೆ ಸಾಕ್ಷಿಯಾಗಿದ್ದ ನನ್ನ ಪ್ರೀತಿಯ ಸ್ಥಳ ಕೇವಲ ನೆನಪಾಗಿ ಉಳಿದುಬಿಡುತ್ತದೆ...
ಸಾಲುಗಳು
- 500 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ