Skip to main content

ಪಲಾಯನವಾದ ಪರಿಹಾರವಲ್ಲ!

ಬರೆದಿದ್ದುSeptember 13, 2013
1ಅನಿಸಿಕೆ

ಅದ್ಯಾಕೆ ಕೆಲವರು ಜೀವನದಲ್ಲೆದುರಾಗುವ ಸಮಸ್ಯೆಗಳಿಂದ ತೀರಾ ಎನಿಸುವಷ್ಟು ಜರ್ಜರಿತರಾಗುತ್ತಾರೆ? ಜೀವನ ಕೇಳುವ ಪ್ರಶ್ನೆಗಳಿಗೆ ತಿಳಿದಷ್ಟು ಉತ್ತರಿಸುವುದನ್ನು ಬಿಟ್ಟು ಜೀವನದಿಂದಲೇ ನಿರ್ಗಮಿಸುವತ್ತ ಮನಸು ಮಾಡುತ್ತಾರೆ? ಮತ್ತೂ ಕೆಲವರು ಸಮಸ್ಯೆಗಳಿಂದ ಸುಧಾರಿಸಿಕೊಂಡು ಹೊರಬೀಳುವಷ್ಟರಲ್ಲೇ ತಮ್ಮತನವನ್ನು ಕಳೆದುಕೊಂಡಿರುತ್ತಾರೆ; ಇನ್ಯಾರಿಗೋ ಮಾರಿಕೊಂಡಿರುತ್ತಾರೆ; ಒಟ್ಟಾರೆಯಾಗಿ ಅಂತಃಸ್ಸತ್ವವನ್ನೇ ಬರಿದಾಗಿಸಿಕೊಂಡಿರುತ್ತಾರೆ.

ಜೀವನವೆಂದರೆ ಅನುಭವಗಳ ಮೂಟೆ, ಸೋಲು-ಗೆಲುವು, ನೋವು-ನಲಿವು, ನಗು-ಅಳುವಿನ ಸಮ್ಮಿಶ್ರಣ. ನಮ್ಮನ್ನ ನಾವೇ ಹೊಸ ಪ್ರಯೋಗಗಳಿಗೆ, ತತ್ವಗಳಿಗೆ ತೆರೆದುಕೊಳದ ಹೊರತು ಜೀವನದ ಪ್ರತೀ ಕ್ಷಣವನ್ನೂ, ಇಡಿಯಾಗಿ ಅನುಭವಿಸಲಸಾಧ್ಯ, ನಿಜ... ಹಾಗಂತ ಮಾಡಿದ ಪ್ರಯೋಗಗಳಲ್ಲಿ ಸೋತಾಗ, ನಂಬಿದ ತತ್ವಗಳು, ಆಯ್ದುಕೊಂಡ ದಾರಿ ತಪ್ಪು ಎನಿಸಿದಾಗ, ಅಥವಾ ಇತರರನ್ನು ನೋಯಿಸದೆ ಬದುಕುತ್ತಿಲ್ಲ ಅಂತ ಅರಿವಾದಾಗ ಅದ್ಯಾಕೆ ಅಷ್ಟೊಂದು ಕೀಳರಿಮೆ ಅನುಭವಿಸುತ್ತೇವೆ? ಜೀವನದ ಕೊನೇ ಹಂತದಲ್ಲಿದ್ದೇವೆ, ಜೀವನ ಮುಗಿದೇ ಹೋಯ್ತು, ಸೋತು ಸುಣ್ಣವಾಗಿದ್ದೇವೆ, ಇನ್ನೇನೂ ಉಳಿದಿಲ್ಲ ಬದುಕಲ್ಲಿ ಅಂದುಕೊಂಡು ಹತಾಶೆಯಲ್ಲಿ ಮುಳುಗೇಳುತ್ತೇವೆ? ಜೀವನದ ಪ್ರತೀ ನಿಮಿಷವೂ ನಮಗೆ ಹೊಸತಾಗಿ ಬದುಕುವ ಅವಕಾಶ ನೀಡುತ್ತದೆ; ಯಾವುದೇ ಘಳಿಗೆಯಲ್ಲಿ ಬೇಕಾದರೂ ಸರಿದಾರಿಯಲ್ಲಿ ಬದುಕಲು ಆರಂಭಿಸಿಬಿಡಬಹುದು; ಮಾಡಿದ ತಪ್ಪನ್ನು ತಿದ್ದಿಕೊಂಡು ಸರಿದಾರಿಯಲ್ಲಿ ನಡೆಯಲು ಜೀವನವೆಂಬ ಗುರು ಹಲವಾರು ಬಾರಿ ಅವಕಾಶಗಳನ್ನೊದಗಿಸುತ್ತಲೇ ಇರುತ್ತದೆ.

ಆದರೂ ಸೋಲುತ್ತೇವೆ, ನಕಾರಾತ್ಮಕ ಚಿಂತನೆಯಲ್ಲೇ ಬೇಯುತ್ತೇವೆ, ಮನದ ದುಗುಡವನ್ನು, ಕೀಳರಿಮೆ, ನೋವುಗಳನ್ನು ಆಪ್ತರೊಡನೆ ತೆರೆದಿಡಲೂ ಅಂಜುತ್ತೇವೆ, ಪಲಾಯನವಾದದತ್ತ ಮನ ವಾಲತೊಡಗುತ್ತದೆ. ಇಲ್ಲೇ ಎಡವುತ್ತಿರುವುದು ನಾವು. ಅದೊಂದು ಉತ್ತಮ ಆರಂಭವನ್ನು, ಸಂತೋಷವಾದ ಜೀವನವನ್ನು, ಸಣ್ಣ ಧೈರ್ಯ, ಆತ್ಮವಿಶ್ವಾಸವನ್ನು ಮೈಗೂಡಿಸಿಕೊಂಡಿದ್ದೇ ಆದಲ್ಲಿ ಖಂಡಿತಾ ನಮ್ಮಲ್ಲೊಂದು ಬದಲಾವಣೆ ಸಾಧ್ಯ. "ಅಯ್ಯೋ.. It takes time, ಈವತ್ತಿಂದ ನಾಳೆಗೆ ಮ್ಯಾಜಿಕ್ ಆಗಿ ಹೋಗ್ತದಾ, ಸುಮ್ನೆ ಇರಿ, ಈ ಕ್ಷಣದ ನೋವನ್ನ ಅನುಭವಿಸಿಯೇ ತೀರಬೇಕು" ಅಂತಾ ಗೋಳಾಡುವವರಿಗೇನೂ ನಮ್ಮಲ್ಲಿ ಕಮ್ಮಿ ಇಲ್ಲ. ಎಲ್ಲಾ ಸರಿ, ಒಂದು ನಿಮಿಷ ಯೋಚಿಸಿ, ಹೋದ ವರ್ಷ ಈ ನಿಮ್ಮ ಮನಸ್ಥಿತಿ ಹೀಗೇ ಇತ್ತೇ???? ಇಲ್ಲವಲ್ಲ? ಅದೆಷ್ಟೋ ಬದಲಾವಣೆಗಳಾಗಿವೆ, ಒಳಿತೋ ಕೆಡುಕೋ ಹಲವು ಅನುಭವಗಳಾಗಿವೆ. ಇಡೀ ವರ್ಷ ಕೊರಗುತ್ತಲೋ, ಶಪಿಸುತ್ತಲೋ, ಎಡವುತ್ತಲೋ ಕಳೆದುಬಿಟ್ಟಿದ್ದೀರಿ. ಹಾಗೇ, "ಈ ಕ್ಷಣ, ನೋವು, ಸೋಲು, ಹತಾಶೆ ಕೂಡ ಕಳೆದು ಹೋಗುತ್ತದೆ. ಅದಕ್ಕೆ ತಾಳ್ಮೆಯಿಂದ ಕಾಯಬೇಕು. ನಮಗೆ ನಾವು ಸಮಯ ನೀಡಬೇಕು. ಕಾಲ ಎಲ್ಲದಕ್ಕೂ ಸರಿಯಾದ ಪರಿಹಾರವನ್ನು ಒದಗಿಸುತ್ತದೆ.

ಯಾವುದಕ್ಕೂ ಕಾಯದೆ, ಕ್ಷಣಿಕ ಕೋಪ, ಬೇಸರದ ಮನಸ್ಥಿತಿಯನ್ನು ನಿಭಾಯಿಸಲಾರದೆ ಸಂಬಂಧಗಳಲ್ಲಿ ಬಿರುಕು ಮೂಡಿಸಿಕೊಂಡುಬಿಡಬೇಡಿ.ಒಡೆದ ಮನಸ್ಸು ಕನ್ನಡಿಯಂತೆ ಎಂದಿಗೂ ಒಂದಾಗಲಾರದು.. ಆದರೂ ಮೊದಲಿನಂತಹ ಸಂಬಂಧಗಳು, ಭಾವನೆಗಳು ಉಳಿಯದಿರಬಹುದು. ಇತ್ತೀಚೆಗೊಂದು ಪುಟ್ಟ ಕಥೆ ಓದಿದೆ. ಗುರುವೊಬ್ಬ ತನ್ನ ಶಿಷ್ಯಂದಿರೊಡನೆ ಸಂಚರಿಸುತ್ತಿದ್ದ. ಮಾರ್ಗ ಮಧ್ಯೆ ಆಯಾಸ ಪರಿಹಾರಕ್ಕೆಂದು ಕುಳಿತಾಗ, ತನ್ನ ಶಿಷ್ಯನೊಬ್ಬನಿಗೆನೀರು ತಂದುಕೊಡುವಂತೆ ಕೇಳಿಕೊಂಡ. ಸರಿ, ಶಿಷ್ಯ ಸಮೀಪದಲ್ಲೇ ಇದ್ದ ಸರೋವರದತ್ತ ನಡೆದ. ಆದರೆ, ಸರೋವರದ ನೀರು ಯಾವುದೋ ಕಾರಣದಿಂದಾಗಿ ಕಲುಕಿಹೋಗಿತ್ತು. ಏನು ಮಾಡುವುದೋ ತಿಳಿಯದ ಶಿಷ್ಯ ಅಲ್ಲೇ ದಡದಲ್ಲಿ ಕುಳಿತು ಯೋಚಿಸತೊಡಗಿದ.

ಸುಮ್ಮನೇ ಕಾಯುತ್ತಾ ಕೂತಂತೆ ಆತನ ಅಸಹನೀಯತೆ ಹೆಚ್ಚತೊಡಗಿತು. ಕೋಪದಿಂದ ನೀರಿಗೆ ಒಂದೊಂದೇ ಕಲ್ಲನ್ನೆಸೆಯುತ್ತಾ ಅದರಲ್ಲೇಳುವ ತರಂಗಗಳನ್ನೇ ದಿಟ್ಟಿಸುತ್ತಾ ಕುಳಿತ. ಕೆಲ ನಿಮಿಷಗಳ ಕಾಲ ಕಾದರೂ ನೀರು ಕುಡಿಯಲು ಯೋಗ್ಯವಾಗದ್ದರಿಂದ ಪುನಃ ಗುರುವಿನೆಡೆಗೆ ತೆರಳಿ ವಿಷಯ ತಿಳಿಸಿದ. ನಸುನಕ್ಕ ಗುರು, ಸ್ವಲ್ಪ ಸಮಯ ಕಳೆದ ಬಳಿಕ ಪುನಃ ಅದೇ ಜಾಗಕ್ಕೆ ತೆರಳಿ ನೀರು ತರುವಂತೆ ಹೇಳಿದ. ಸರೋವರದತ್ತ ಶಿಷ್ಯ ತೆರಳಿದಾಗ ನೀರು ತಿಳಿಯಾಗಿತ್ತು. ಸಂತೋಷದಿಂದ ನೀರನ್ನು ಗುರುವಿಗೆ ತಂದಿತ್ತ. ಬಳಿಕ ಆತನನ್ನ ಕುರಿತು ಗುರು ಹೇಳಿದ್ದಿಷ್ಟು - "ಸುಮ್ಮನೇ ಕುಳಿತು ಕಾಯುವ ತಾಳ್ಮೆ ನಿನ್ನಲ್ಲಿದ್ದಿದ್ದರೆ ಆಗಲೇ ತಿಳಿ ನೀರು ದೊರೆಯುತ್ತಿತ್ತು. ಮೊದಲೇ ಕಲುಕಿ ಹೋಗಿದ್ದ ನೀರಿಗೆ, ನಿನ್ನ ಅಸಹನೆ, ಕೋಪದಿಂದಾಗಿ ಕಲ್ಗಳನ್ನೆಸೆಯುತ್ತಾ ಅದು ತಿಳಿಯಾಗಲೆಂದು ಕಾದೆ. ಪ್ರಯೋಜನ? ಶೂನ್ಯ.. ಅಂತೆಯೇ ಮನುಷ್ಯ ಕೂಡ.

ಮನಸ್ಸು, ಪರಿಸ್ಥಿತಿ ಸರಿಯಿಲ್ಲದಿರುವಾಗ ತಾಳ್ಮೆಯಿಂದ ಯೋಚಿಸುವುದನ್ನು ಬಿಟ್ಟು, ರೇಗಾಡುತ್ತಾ, ಇನ್ನೊಬ್ಬರನ್ನು ದೂಷಿಸುತ್ತಾ, ವಿಧಿಯನ್ನು ಶಪಿಸುತ್ತಾ ತನ್ನ ಕಂಗೆಟ್ಟ ಮನಸ್ಸನ್ನ ಇನ್ನೂ ಹದಗೆಡಿಸಿಕೊಂಡು ನರಳುತ್ತಾನೆ. ಅದರ ಬದಲಾಗಿ ವಿವೇಚನೆಯಿಂದ, ಮನಸ್ಸನ್ನು ತನ್ನ ನಿಯಂತ್ರಣಕ್ಕೆ ತಂದುಕೊಂಡಲ್ಲಿ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ನಿಚ್ಚಳವಾಗಿ ಕಾಣುತ್ತದೆ." ಇನ್ನಾದರೂ ಸಮಸ್ಯೆಗಳಿಂದ ದೂರ ಓಡುವ ಬದಲಾಗಿ, ಅವುಗಳನ್ನೆದುರಿಸುವತ್ತ ಮನಸ್ಸು ಮಾಡೋಣವೇ????  :)

ಲೇಖಕರು

Jyothi Subrahmanya

ನೆನಪಿನ ನವಿಲುಗರಿ

ಭಾವನಾ ಜೀವಿ, ಚಿಕ್ಕ ಪುಟ್ಟ ಕನಸು ಕಾಣೋದು ಅಂದ್ರೆ ಇಷ್ಟ. ಮಳೆ, ಇಬ್ಬನಿ, ಹಸಿರು, ಆಕಾಶ, ನಕ್ಷತ್ರ, ರಾತ್ರಿ, ಇವೆಲ್ಲಾ ತುಂಬಾ ಇಷ್ಟ. ನನ್ನ ಬಗ್ಗೆ ಇನ್ನು ಜಾಸ್ತಿ ತಿಳ್ಕೊಳ್ಳೋಕೆ ನನ್ನ ಸ್ನೇಹಿತರಾಗಿ. ನಿಮಗೇ ತಿಳಿಯುತ್ತೆ. ;)

ಅನಿಸಿಕೆಗಳು

Pattar ಶನಿ, 09/21/2013 - 14:03

ಏಕೆ ಎನ್ನುವ ಪ್ರಶ್ನೆಗೆ ಈ ಭಾವನೆಗಳ ಲೋಕದಲ್ಲಿ ಉತ್ತರವೇ ಇಲ್ಲ ಜ್ಯೋತಿಯವರೆ..............! ಉತ್ತರ ಇದ್ದರೂ ಕೂಡಾ.......ಅದು ನಕಾರಾತ್ಮಕವಾಗಿಯೇ ವಿಜೃ೦ಭಿಸುತ್ತದೆ...Smile

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.