Skip to main content

ಈ ತಂತ್ರಜ್ಞಾನ ಕನ್ನಡಿಗ ಇಂಗ್ಲೀಷ್ ಮಾತನ್ನು ಆಡುವದನ್ನು ಜಾಸ್ತಿ ಮಾಡಬಲ್ಲುದು!

ಬರೆದಿದ್ದುJune 27, 2013
noಅನಿಸಿಕೆ

ಈ ಲೇಖನದ ಹಿಂದಿನ ಭಾಗ ಅಮೇರಿಕ, ಆಸ್ಟ್ರೇಲಿಯಾದ ಮೂಲ ಭಾಷೆ ಇಂಗ್ಲೀಷ್ ಅಲ್ಲ!!

ಹಿಂದಿನ ಭಾಗದಲ್ಲಿ ವಸಾಹತುಶಾಹಿ ಆಡಳಿತ ಅಮೇರಿಕ, ಆಸ್ಟ್ರೇಲಿಯ, ಆಫ್ರಿಕಾ ಹಾಗೂ ಭಾರತ ಹೀಗೆ ಹಲವು ದೇಶಗಳಲ್ಲಿ ಇಂಗ್ಲೀಷ್ ಅಲ್ಲಿನ ಲೋಕಲ್ ಭಾಷೆ ಮೀರಿ ಬೆಳೆಯಿತು ಅನ್ನುವದನ್ನು ನೋಡಿದೆವು. ಯುರೋಪಿಯನ್ನರು ಅಮೇರಿಕ ಹಾಗೂ ಆಸ್ಟ್ರೇಲಿಯಕ್ಕೆ ಭೇಟಿ ಕೊಟ್ಟಾಗ ಅಲ್ಲಿನ ಹೆಚ್ಚಿನ ಜನ ಅನಾಗರಿಕರು, ಬುಡಕಟ್ಟು ಜನಾಂಗದವರು ಆಗಿದ್ದರು. ಸರಿಯಾದ ಶಿಕ್ಷಣ ವ್ಯವಸ್ಥೆ ಇರಲಿಲ್ಲ. ಅವರಿಗೆ ಬೇಗನೆ ಹತ್ತಿಕ್ಕಿ ಅವರ ಭಾಷೆಗಳನ್ನು ಕಿತ್ತು ಹಾಕುವಂತಹ ಶಿಕ್ಷಣ ವ್ಯವಸ್ಥೆ ಜಾರಿಗೆ ತಂದು ನಿಮ್ಮನ್ನು ನಾಗರೀಕರಾನ್ನಾಗಿ ಮಾಡುತ್ತೇವೆ ಎಂಬ ನೆಪದಲ್ಲಿ ಇಂಗ್ಲೀಷ್ ಬೆಳೆಸಲು ಸಾಧ್ಯವಾಯ್ತು.  ಆದರೆ ಬ್ರಿಟಿಷರು ಭಾರತಕ್ಕೆ ಬಂದಾಗ ಇಲ್ಲಿನ ಪರಿಸ್ಥಿತಿ ಬೇರೆ ಇತ್ತು. ಇಲ್ಲಿ ಗುರುಕುಲ, ಮದರಸಾ ಮೂಲಕ ರಾಜರು, ಮುಘಲರು ಶಿಕ್ಷಣ ವ್ಯವಸ್ಥೆಯನ್ನು ಹುಟ್ಟುಹಾಕಿದ್ದರು.

ಬ್ರಿಟಿಶರು ಮೊದಲು ಮಾಡಿದ ಕೆಲಸ ಏನೆಂದರೆ ಈ ಶಿಕ್ಷಣ ವ್ಯವಸ್ಥೆಯನ್ನು ಕಿತ್ತುಹಾಕಿ ಅವರ ಮಕಾಲೆ ಇಂಗ್ಲೀಷ್ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದ್ದು. ಉನ್ನತ ಶಿಕ್ಷಣ ಸಂಪೂರ್ಣವಾಗಿ ಇಂಗ್ಲೀಷ್ ಅಲ್ಲೇ ಪರಿಚಯಿಸಿದ್ದು. ಭಾರತೀಯ ಭಾಷೆಗಳಿಗೆ ಇನ್ನಷ್ಟು ಹೊಡೆತ ಕೊಟ್ಟಿದ್ದು ತಂತ್ರಜ್ಞಾನ, ಖಾಸಗಿ ಶಿಕ್ಷಣ ಹಾಗೂ ಜಾಗತೀಕರಣ.

ಇಂದು ಕನ್ನಡ ಲಿಪಿ ಇಂಗ್ಲೀಷ್ ಗಿಂತ ಕಡಿಮೆ ಬಳಕೆ ಕರ್ನಾಟಕದಲ್ಲಿ ಆಗುತ್ತಿದ್ದರೆ ಅದಕ್ಕೆ ಮುಖ್ಯ ಕಾರಣ ತಂತ್ರಜ್ಞಾನ. ಇಂದು ಕೋಟ್ಯಂತರ ಕನ್ನಡಿಗರು ಬಳಸುವ ಹಲವು ತಂತ್ರಜ್ಞಾನ ಇಂಗ್ಲೀಷ್ ಅಲ್ಲಿ ಮಾತ್ರ ಇದೆ. ಪ್ರತಿದಿನ ಕನ್ನಡಿಗ ಅದನ್ನು ಬಳಸಲೇ ಬೇಕು. ಕನ್ನಡದ ಬಳಕೆ ಸಾಹಿತ್ಯ, ದಿನಪತ್ರಿಕೆ, ಟಿವಿ ಹಾಗೂ ಮ್ಯಾಗಜೀನ್ ಗೆ ಮಾತ್ರ ಸಿಮೀತವಾಗಿದೆ.

ಈಗಾಗಲೇ ಇಂಗ್ಲೀಷ್ ಲಿಪಿಯನ್ನು ಮನೆ ಮನೆಗೆ ಪರಿಚಯಿಸಿದ ಖಾಸಗಿ ಶಿಕ್ಷಣ, ಎಟಿಎಂ, ಮೊಬೈಲು, ಡಿಟಿಎಚ್ ಮೆನು, ಸ್ಮಾರ್ಟ್ ಫೋನು, ಅಂತರ್ಜಾಲಗಳ ನಂತರ ಇಂಗ್ಲೀಷ್ ಮಾತನ್ನು ಕರ್ನಾಟಕದ/ ಭಾರತದ  ಮನೆ ಮನೆಗೆ ಪರಿಚಯಿಸಲು ಒಂದು ತಂತ್ರಜ್ಞಾನ ಬರುತ್ತಿದೆ. ಏನದು? ಕನ್ನಡ ಅಲ್ಲಿಯೂ ಹೀಗೆ ಬೇರೂರಲು ವಿಫಲವಾಗಿ ವಿನಾಶದ ಕಡೆಗೆ ಸಾಗಲಿದೆಯೇ? ಇದು ಬಿಲಿಯನ್ ಡಾಲರ್ ಪ್ರಶ್ನೆ.

ಆ ತಂತ್ರಜ್ಞಾನದ ಹೆಸರೇ ವಾಯ್ಸ್ ಕಮಾಂಡ್ ಡಿವೈಸಸ್ (voice command device). ಏನಿದು? ಈ ಸಾಧನಗಳಿಗೆ ಮಾತಲ್ಲೇ ಆಜ್ಞೆಯನ್ನು ನೀಡಬಹುದು! ಇಂಗ್ಲೀಷ್, ಫ್ರೆಂಚ್, ಚೈನೀಸ್ ಹೀಗೆ ಮೊದಲಾದ ಭಾಷೆಗಳಲ್ಲಿ ಈ ಸಾಧನಗಳು ಬರಲಿವೆ.  ಆದರೆ ಕನ್ನಡದಲ್ಲಿ? ಉಹುಂ ಆ ಸಾಧ್ಯತೆ ತುಂಬಾ ಕಡಿಮೆ.ಬರದು ಎಂದರೂ ತಪ್ಪಿಲ್ಲ. ಈಗಾಗಲೇ ಮಾರುಕಟ್ಟೆಯಲ್ಲಿ ಈ ಸಾಧನಗಳು ಬರಲು ಆರಂಭವಾಗಿದೆ. ಕೆಲವು ಇನ್ನೂ ಪರೀಕ್ಷಾ ಹಂತದಲ್ಲಿವೆ. ಆ ಸಾಧನಗಳ ಉದಾಹರಣೆ ಮುಂದಿದೆ.

ಮಾತಲ್ಲೇ ಕಂಟ್ರೋಲ್ ಮಾಡಬಹುದಾದ ಟಿವಿ - ಈ ಟಿವಿಗೆ ರಿಮೋಟ್ ಬಳಸಬೇಕಾಗಿಲ್ಲ. ಇಂಗ್ಲೀಷ್ ಅಲ್ಲಿ ಹೇಳಿದರೆ ಆಯ್ತು. ತಮ್ಮ ಆಜ್ಞೆಯನ್ನು ಪಾಲಿಸುತ್ತವೆ. ಕೈ ಸನ್ನೆ ಮೂಲಕ ಕೂಡಾ ನಿರ್ವಹಿಸಬಹುದು.

ಮಾತನ್ನು ಕೇಳುವ ಕಾರು - ನಿಮ್ಮ ಕಾರು ಇಂಗ್ಲೀಷ್ ಮಾತನ್ನು ಕೇಳಲಿದೆ. ನೀವು ಹೋಗುವ ಜಾಗ ಹೇಳಿದರೆ ದಾರಿ ತೋರಿಸಲಿದೆ. ಈ ಸಾಧನ ಈಗಾಗಲೇ ಮುಂದುವರಿದ ದೇಶಗಳಲ್ಲಿ ಬಳಸಲಾಗುತ್ತಿದೆ.

ಗೂಗಲ್ ಗ್ಲಾಸ್, ಆಪಲ್ ವಾಚ್, ಸ್ಯಾಮಸಂಗ್ ವಾಚ್ ಇನ್ನೂ ಹಲವು ಸಾಧನಗಳು ತಯಾರಿಕಾ ಹಂತದಲ್ಲಿದ್ದು ಇಂಗ್ಲೀಷ್ ಕಮಾಂಡ್ ಅನ್ನು ಪಾಲಿಸಲಿವೆ. ಇವು ಜನಪ್ರಿಯವಾದರೆ ವಾಶಿಂಗ್ ಮಶೀನ್, ಸ್ಮಾರ್ಟ್ ಫೋನ್ ಹೀಗೆ ಹಲವು ಸಾಧನಗಳಲ್ಲೂ ಮಾತಿನ ಸೌಲಭ್ಯ ಬರಬಹುದು. (ಈಗಾಗಲೇ ಐಓಎಸ್ ಅಲ್ಲಿ ಸಿರಿ ಹಾಗೂ ಅಂಡ್ರಾಯಿಡ್ ಅಲ್ಲಿ ಗೂಗಲ್ ನೌ ಇದೆ. ಅವುಗಳು ಪ್ರತಿ ವರ್ಶನ್ ಅಲ್ಲಿ ಇನ್ನೂ ಉತ್ತಮವಾಗುತ್ತಿವೆ) ಕನ್ನಡಿಗ ಇಂಗ್ಲೀಷ್ ಹೆಚ್ಚು ಮಾತನಾಡಲು ಈ ತಂತ್ರಜ್ಞಾನಗಳು ಸಹಾಯಕಾರಿಯಾಗಲಿವೆ. 

ಈ ತಂತ್ರಜ್ಞಾನ ಕೇವಲ ಆಜ್ಞೆ ನೀಡಲು ಮಾತ್ರ ಅಲ್ಲ ಹಲವು ಕಾರ್ಯಗಳಿಗೆ ಬಳಸಲಾಗುತ್ತಿದೆ. ಉದಾಹರಣೆಗೆ ಯಾವುದೇ ಮಾಹಿತಿಯ ಬಗ್ಗೆ ಸ್ಮಾರ್ಟ್ ಫೋನಿಗೆ ಕೇಳಿದರೆ ಆಯ್ತು ಅದಕ್ಕೆ ಸ್ಮಾರ್ಟ್ ಫೋನು ಉತ್ತರ ನೀಡುತ್ತದೆ. ಇದಕ್ಕೆ ನೀವು ಇಂಗ್ಲೀಷ್ ಅಲ್ಲಿ ವಾಕ್ಯ ರಚಿಸಿ ಮಾತನಾಡಬೇಕು ಅಷ್ಟೇ. ಇವು ಇಂಗ್ಲೀಷ್ ಜೊತೆಗೆ ಫ್ರೆಂಚ್, ಜರ್ಮನಿ, ಜಪಾನೀಸ್, ಇಟಾಲಿಯನ್, ಸ್ಪಾನಿಷ್, ಚೈನೀಸ್, ಕೋರಿಯನ್ ಭಾಷೆ ಸಪೋರ್ಟ್ ಮಾಡುತ್ತಿವೆ. ಭಾರತೀಯ ಭಾಷೆಗಳು? ಹೆಚ್ಚಿನ ಬಹುರಾಷ್ಟ್ರೀಯ ಕಂಪನಿಗಳು ಹಿಂದಿ ಬಿಟ್ಟರೆ ಬೇರೆ ಭಾಷೆ ಕಡೆಗೆ ತಲೆ ಕೆಡಿಸಿಕೊೞುವದಿಲ್ಲ. ಯಾಕೆಂದರೆ ಹೇಗಿದ್ದ್ರೂ ಇಂಗ್ಲೀಷ್ ಬರುತ್ತೆ ಅನ್ನುವ ಮನೋಭಾವ.

ಈಗ ಲಭ್ಯವಿರುವ ಮುಖ್ಯ ಪರ್ಸನಲ್ ಡಿಜಿಟಲ್ ಅಸಿಸ್ಟಂಟ್ ಗಳು ಹೀಗಿವೆ

ಇವು ಜನಪ್ರಿಯವಾಗದು ಅಂತೀರಾ? ಹಿಂದೆ ಟಿವಿಗೆ ಮೊದಲು ರಿಮೋಟ್  ಬಂದಾಗ ಸೋಮಾರಿಗಳು ಮಾತ್ರ ಅದನ್ನು ಬಳಸುತ್ತಾರೆ ನಮಗ್ಯಾಕೆ? ಯಾರು ಅದಕ್ಕೆ ದುಡ್ಡು ಕೊಟ್ಟು ತೆಗೆದು ಕೊೞುತ್ತಾರೆ ಎಂದೆಲ್ಲಾ ಅಭಿಪ್ರಾಯ ವ್ಯಕ್ತವಾಗುತ್ತಿತ್ತು. ಇಂದು ರಿಮೋಟ್ ಬಳಸದೆ ಟಿವಿ ಉಪಯೋಗಿಸುವವರೇ ಕಡಿಮೆ.

ಇಂತಹ ಮಾತಿನ ಸೌಲಭ್ಯ ಇಂಗ್ಲೀಷ್ ಅಲ್ಲಿ ಜನಪ್ರಿಯವಾದರೆ ಕನ್ನಡದಲ್ಲಿ ಸೂಕ್ತವಾದ ಸೌಲಭ್ಯ ನೀಡಲು ನಾವು ಸಜ್ಜಾಗಿದ್ದೇವೆಯೇ? ಇಲ್ಲ. ಇಂದು ಇಂಗ್ಲೀಷ್ ಅಲ್ಲಿ ಪ್ರತಿ ವರ್ಷ ವಾಯ್ಸ್ ಕಮಾಂಡ್ ತಂತ್ರಜ್ಞಾನ ಸಂಶೋಧನೆಗೆ ಹಲವು ಸಾವಿರ ಕೋಟಿ ಖರ್ಚು ಮಾಡುತ್ತಾರೆ. ದಶಕಗಳಿಂದ ಈ ತಂತ್ರಜ್ಞಾನ ಬೆಳವಣಿಗೆ ಮಾಡುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ರಾತ್ರೋ ರಾತ್ರಿ ಕೆಲವೇ ಲಕ್ಷ ಬಂಡವಾಳ ಕೂಡಾ ಕ್ರೋಢಿಕರಿಸಲಾಗದ ಕನ್ನಡದಲ್ಲಿ ಈ ತಂತ್ರಜ್ಞಾನ ಬರಲು ಸಾಧ್ಯವಿದೆಯೇ? ನಾವಿನ್ನು ದಶಕಗಳ ಕಾಲ ಸಂಶೋಧನೆ ಮಾಡಿ ಕನ್ನಡದಲ್ಲಿ ಅಭಿವೃದ್ಧಿಪಡಿಸುವದರಲ್ಲಿ ಇಂಗ್ಲೀಷ್ ಗೆ ಜನ ಒಗ್ಗಿ ಹೋಗಿರುತ್ತಾರೆ. ಆಗ ಕನ್ನಡದಲ್ಲಿ ಬಂದರೂ ಜನ ಬಳಸುವದಿಲ್ಲ. ಕನ್ನಡ ಫಾಂಟುಗಳು, ಮೊಬೈಲು, ತಂತ್ರಾಂಶಗಳು, ಅಂತರ್ಜಾಲ ತಾಣಗಳು, ಕಾರ್ಟೂನುಗಳು, ಮೊಬೈಲು ಅಪ್ಲಿಕೇಶನ್ ಗಳು, ಏಟಿಎಂ, ವಿಡಿಯೊ ಗೇಮ್ಸ್, ಕಂಪ್ಯೂಟರ್ ಗಳು ಹೀಗೆ ಹಲವು ರಂಗದಲ್ಲಿ ಕನ್ನಡದ ಟ್ರೆಂಡ್ ಗಮನಿಸಿದಾಗ ಕನ್ನಡ ಈ ಹೋರಾಟದಲ್ಲಿ ಸೋಲುವದು ಖಚಿತ.

ಹೀಗೇನಾದರು ಆದರೆ ಆ ಸೋಲು ಕನ್ನಡ ಭಾಷೆಯ ಸೋಲಾಗುತ್ತದೆ. ಕನ್ನಡತನದ ಸೋಲಾಗುತ್ತದೆ. ಮುಂದೆಂದೂ ಮತ್ತೆ ಪುನರುಜ್ಜೀವನಗೊಳಿಸಲಾಗದ ಸ್ಥಿತಿಗೆ ಕನ್ನಡ ತಲುಪುತ್ತದೆ. ಈ ಲೇಖನ ಕನ್ನಡಕ್ಕೆ ಕೆಲವು ದಶಕಗಳಲ್ಲಿ ಎದುರಾಗಲಿರುವ ಸಮಸ್ಯೆಯ ಬಗ್ಗೆ ವಿಶ್ಲೇಷಣೆ ಮೂಲಕ ಕಾಣುವ ಪ್ರಯತ್ನ ಮಾಡಲಾಗಿದೆ. ಈ ಸಮಸ್ಯೆ ಎದುರಾದರೆ ಅದಕ್ಕೆ ಪರಿಹಾರ ಏನು? ಕನ್ನಡಿಗ ಕನ್ನಡ ಮಾತನ್ನು ಕಡಿಮೆ ಮಾಡುವದನ್ನು ನೋಡುತ್ತಾ ಇರೋಣವೇ? ನಿಮ್ಮ ಅನಿಸಿಕೆ ತಿಳಿಸಿ.

ಮುಂದಿನ ಭಾಗಃ ಕರ್ನಾಟಕದಲ್ಲಿ ಗಣನೀಯ ಪ್ರಮಾಣದ ಜನರ ಮಾತೃಭಾಷೆ ಕನ್ನಡ ಅಲ್ಲ! 

ಲೇಖನದ ಬಗೆ

ಲೇಖಕರು

ರಾಜೇಶ ಹೆಗಡೆ

ಕಂಡದ್ದು ಕಂಡ ಹಾಗೆ

ಸಾಫ್ಟವೇರ್ ಇಂಜನಿಯರ್. ಕನ್ನಡದಲ್ಲಿ ಸಾಫ್ಟವೇರ್ ತಯಾರಿಸುವದು ನನ್ನ ಹವ್ಯಾಸ. ಆಗಾಗ ಲೇಖನ ಬರೀತಿನಿ ಆದ್ರೆ ಅದರಲ್ಲಿ ಪಳಗಿದವನಲ್ಲ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.