
ವ್ಯಾಘ್ರ ಕಣಿವೆಯ ನಿಗೂಢ ರಹಸ್ಯ : ಪತ್ತೆದಾರಿ ಕಥೆ - ಭಾಗ ೧
ಮುನ್ನುಡಿಃ ಈ ಕಥಾ ಸರಣಿಯನ್ನು ಬರೆಯಬೇಕು ಎನ್ನುವದು ಹಲವಾರು ತಿಂಗಳ ಹಿಂದೆಯೇ ನನ್ನ ಮನಸ್ಸಿನಲ್ಲಿತ್ತು. ಆದರೆ ವಿಸ್ಮಯ ನಗರಿಯ ಆಧುನೀಕರಣದ ಭರದಲ್ಲಿ ಸಮಯ ಸಿಗಲಿಲ್ಲ. ಅದಕ್ಕೆ ಈಗ ತಕ್ಕ ಸಮಯ ಬಂದಿದೆ.
ನನ್ನ ಹಿಂದಿನ ಕಥಾ ಸರಣಿ ಕಗ್ಗಂಟು ನೀವು ಓದಿರಬಹುದು. ಇಲ್ಲವಾದರೆ ಅದರ ಲಿಂಕುಗಳು ಕೆಳಗಿವೆ.
ಇದರ ಮೊದಲ ಭಾಗ ಕಗ್ಗಂಟು - ಪತ್ತೇದಾರಿ ಕಥೆ - ಭಾಗ 1
ಇದರ ಎರಡನೇಯ ಭಾಗ ಕಗ್ಗಂಟು - ಪತ್ತೇದಾರಿ ಕಥೆ - ಭಾಗ 2
ಇದರ ಮೂರನೆಯ ಭಾಗ ಕಗ್ಗಂಟು ಪತ್ತೇದಾರಿ ಕಥೆ - ಭಾಗ 3
ಇದರ ನಾಲ್ಕನೆಯ ಭಾಗ ಕಗ್ಗಂಟು ಪತ್ತೇದಾರಿ ಕಥೆ - ಭಾಗ 4
ಇದರ ಕೊನೆಯ ಭಾಗ ಕಗ್ಗಂಟು ಪತ್ತೆದಾರಿ ಕಥೆ - ಭಾಗ 5
ಬೆಂಗಳೂರಿನಲ್ಲಿ ಆರಂಭವಾಗಿ ಮಲೆನಾಡಿನ ಕಾಡಿನಲ್ಲಿ ಅಂತ್ಯವಾಗುವ ಈ ಪತ್ತೆದಾರಿ ಕಥೆ ನಿಮ್ಮನ್ನು ಮನೋರಂಜಿಸಬಹುದು ಅನ್ನುವದು ನನ್ನ ಆಶಯ.
ಖಾಸಗಿ ಪತ್ತೆದಾರ ವಿಕ್ರಂ ಶನಿವಾರ ಬೆಳಿಗ್ಗೆ ಆಫೀಸಲ್ಲಿ ಕುಳಿತು ಕಂಪ್ಯೂಟರ್ ಅಲ್ಲಿ ಯಾವುದೋ ಕೇಸಿನ ಬಗ್ಗೆ ಏನನ್ನೋ ಬರೆಯುತ್ತಿದ್ದ. ಇನ್ನೂ ಆತನ ಸಹಚರ ಬಸವರಾಜು ಬಂದಿರಲಿಲ್ಲ. ಯಾರೋ ಬಾಗಿಲು ತಟ್ಟಿದಂತಾಯ್ತು. "ಯಾರು? ಒಳಗೆ ಬನ್ನಿ" ಎಂದು ಕರೆದ ವಿಕ್ರಂ.
ಒಳಗೆ ಸುಮಾರು ೨೭-೨೮ ವರ್ಷದ ಸ್ಪುರದ್ರೂಪಿ ತರುಣ ಬಂದ. ದುಃಖದಿಂದ ಬಾಡಿತ್ತು.
"ನೀವು ಪತ್ತೆದಾರ ವಿಕ್ರಂ ಅಲ್ವಾ?" ಎಂದು ಕೇಳಿದ. ಹೌದು ಎಂದು ತಲೆ ಅಲ್ಲಾಡಿಸಿದ ವಿಕ್ರಂ ಅವನಿಗೆ ಕುಳಿತುಕೊೞುವಂತೆ ಸೂಚಿಸಿ ತನ್ನ ಲ್ಯಾಪ್ ಟಾಪ್ ಅಲ್ಲಿ ಫೈಲ್ ಎಲ್ಲಾ ಉಳಿಸಿ ಬಂದ್ ಮಾಡಿದ. "ಹೇಳಿ ಏನು ವಿಷಯ?"
"ನಾನು ಅನಿರುದ್ಧ ಅಂತಾ. ನಾನು ಕುಬೇರ ಬ್ಯಾಂಕ್ ಅಲ್ಲಿ ಕ್ಲರ್ಕ್ ಆಗಿದೀನಿ. ನನ್ನ ಹೆಂಡತಿ ನಿಷಾ, ಷಣ್ಮುಖ ಸಾಫ್ಟವೇರ್ ಲಿಮಿಟಡ್ ಅಲ್ಲಿ ಕೆಲ್ಸ ಮಾಡ್ತಾ ಇದಾಳೆ."
"ಲಾಲ್ ಭಾಗ್ ಹತ್ರ ಆಫೀಸ್ ಇದೆಯಲ್ಲಾ ಅದೇ ತಾನೇ?" ಎಂದು ಪ್ರಶ್ನಿಸಿದ ವಿಕ್ರಂ. ಅನಿರುದ್ಧ ಹೌದು ಎಂಬಂತೆ ತಲೆ ಆಡಿಸಿದ.
ವಿಕ್ರಂ ಕೇಳಿದ "ಈಗ ಸಮಸ್ಯೆ ಏನು?"
ಅನಿರುದ್ಧ ಮಾತನ್ನು ಮುಂದುವರಿಸಿದ "ಕಳೆದ ಹಲವು ತಿಂಗಳಿಂದ ನನ್ನ ಪತ್ನಿಯ ನಡವಳಿಕೆಯಲ್ಲಿ ಬದಲಾವಣೆ ಇತ್ತು. ನಾನು ಕಡೆಗಣಿಸಿದೆ. ಆದರೆ ಕಳೆದ ಮೂರು ದಿನದಿಂದ ಕಾಣಿಸುತ್ತಿಲ್ಲ. ದಯಮಾಡಿ ಅವಳನ್ನು ಹುಡುಕಿಕೊಡಿ."
"ತವರು ಮನೆಯಲ್ಲಿ ವಿಚಾರಿಸಿದ್ರಾ? ಆಫೀಸಲ್ಲಿ ಕೇಳಿದ್ರಾ? ಪೋಲಿಸ್ ಕಂಪ್ಲೇಂಟ್ ಕೊಟ್ರಾ?" ಕೇಳಿದ ವಿಕ್ರಂ.
"ಹುಂ ಅತ್ತೆ, ಮಾವನ್ನ ಕೇಳಿದೆ, ಆಫೀಸಲ್ಲಿ ಕಲೀಗ್ಸ್ ಹತ್ರಾನೂ ಕೇಳಿದೆ. ಯಾರಿಗೂ ಗೊತ್ತಿಲ್ಲ." ಎಂದ ಅನಿರುದ್ಧ್.
"ನಿಮಗೆ ಯಾರಾದ್ರು ಕಿಡ್ನಾಪ್ ಮಾಡಿರುವ ಸಂಶಯ ಇದೆಯಾ?" ಪ್ರಶ್ನಿಸಿದ ವಿಕ್ರಂ.
"ಇಲ್ಲಾ ಸಾರ್.ಕಿಡ್ನಾಪ್ ಮಾಡೋಕೆ ನಾವೇನು ತುಂಬಾ ಹಣವಂತರಲ್ಲವಲ್ಲ!"
ವಿಕ್ರಂ ಮನದಲ್ಲೇ ವಿಚಾರ ಮಾಡುತ್ತಿದ್ದ. ಈ ಅನಿರುದ್ಧನಿಗೆ ಏನು ಹೇಳಿ ಸಾಗ ಹಾಕುವದು ಎಂತಾ. ಯಾಕೆಂದರೆ ಪತ್ತೆದಾರ ವಿಕ್ರಂ ಸಾಮಾನ್ಯವಾಗಿ ಗಂಡ ಹೆಂಡತಿ ನಡುವಿನ ಜಗಳದ ಬಗ್ಗೆ ಅಥವಾ ಸಂಬಂಧದ ಬಗ್ಗೆ ಪತ್ತೆದಾರಿಕೆ ಕೇಸ್ ತೆಗೆದು ಕೊೞುತ್ತಿರಲಿಲ್ಲ. ಇದರ ಬಗ್ಗೆ ಬಸವರಾಜುಗೆ ಕೂಡಾ ಸ್ವಲ್ಪ ಅಸಮಾಧಾನ ಇತ್ತು.
ಇನ್ನೇನು ವಿಕ್ರಂ ಮಾತನಾಡುವದರಲ್ಲಿದ್ದ ಅಷ್ಟರಲ್ಲಿ ಆತನ ಮೊಬೈಲ್ ರಿಂಗ್ ಆಗ ತೊಡಗಿತು. ವಿಕ್ರಂ ಮೊಬೈಲ್ ಕಡೆಗೆ ನೋಡಿದ. ಅದು ಬಸವರಾಜು ಕಾಲ್ ಆಗಿತ್ತು.
ಅನಿರುದ್ಧಗೆ ಸ್ವಲ್ಪ ನಿಲ್ಲುವಂತೆ ಹೇಳಿ ಕಾನ್ಪರನ್ಸ್ ರೂಂ ಕಡೆಗೆ ಹೊರಟ ವಿಕ್ರಂ. ರೂಂ ಗೆ ಹೋಗಿ ಬಾಗಿಲು ಹಾಕಿಕೊಂಡು ಕಾಲ್ ಅಟೆಂಡ್ ಮಾಡಿದ.
ಬಸವರಾಜುಃ "ನಮಸ್ಕಾರ್ರಿ ಸರ, ಇವತ್ತು ಆಫೀಸಿಗೆ ಬರಲ್ಲಾರಿ. ಮದುವೆ ಮನಿ ನೋಡಾಕ ಬಂದೀನಿ. ಏನಾದ್ರೂ ಕೆಲಸ ಐತೇನ್ರಿ?"
ವಿಕ್ರಂ : "ಆಯ್ತ್ರಿ. ಇಲ್ರಿ ಯಾರೋ ಒಬ್ಬ ಅನಿರುದ್ಧ ಅಂತಾ ಬಂದಿದ್ದಾನೆ. ಆದ್ರೆ ಅದೇನೋ ಗಂಡ ಹೆಂಡತಿ ಸಮಸ್ಯೆ. ಹೆಂಡತಿ ಮೂರು ದಿನದಿಂದ ಕಾಣಿಸುತ್ತಿಲ್ವಂತೆ. ಅವನನ್ನು ಹಾಗೇ ಕಳಿಸ್ತಾ ಇದೀನಿ"
ಬಃ "ಕಳಿಸಿ ಆಯ್ತೇನ್ರಿ?"
ವಿಃ "ಇಲ್ರಿ ಅದಕ್ಕೆ ಮೊದಲು ನಿಮ್ಮ ಕಾಲ್ ಬಂತು. ಕಾನ್ಫರೆನ್ಸ್ ರೂಂ ಗೆ ಬಂದು ಮಾತಾಡ್ತಾ ಇದೀನಿ"
ಬಃ "ಹೌದೆನ್ರಿ? ತಡೀರಿ ಮತ್ತ. ಒಂದ್ಮಾತು ಹೇಳ್ಲೇನ್ರಿ?"
ವಿಃ "ಹೇಳ್ರಿ"
ಬಃ "ಸರ ಕಳೆದ ಎರಡು ತಿಂಗಳಿಂದ ನೀವು ನಂಗ ಪೂರ್ತಿ ಸಂಬಳ ಕೊಟ್ಟಿಲ್ಲಾರಿ. ಆದ್ರ ಬಂದ ಈ ತರಾ ಕೇಸ್ ಎಲ್ಲಾ ಬೇಡ ಅಂತಾ ಕಳ್ಸ್ತಾ ಇದೀರಾ. ಇದುವರೆಗೆ ಒಬ್ಬರ ಕೈ ಹಿಡಿದು ಕೇಳಿದವನಲ್ಲಾರಿ ನಾನು. ಅಂತಾ ರಾಜರ ವಂಶಾರಿ ನಮ್ದು. ಆದ್ರ ನಮ್ಮ ಮನೆ ಯಜಮಾನ್ರ ಕೈ ಅಲ್ಲ ಕಾಲು ಹಿಡ್ಕಂಡು ಕೇಳಿನ್ರಿ. ಯಪ್ಪಾ ಸಂಬಳ ಪೂರ್ತಿ ಬರ್ತಾ ಇಲ್ಲಾ. ಬಂದ್ಮೇಲೆ ಬಡ್ಡಿ ಸೇರಿಸಿ ಕೊಡ್ತಿನಿ ಅಂತಾ. ಈ ತಿಂಗಳು ನಾನು ಬಾಡಿಗೆ ಕೊಟ್ಟಿಲ್ಲಾಂದ್ರ ಕುಂಡಿ ಮ್ಯಾಗ ಒದ್ದು ಹೊರಗೆ ಹಾಕ್ತಾರ."
ವಿಃ "ಸಾರಿ ಬಸವರಾಜು ನಾನೂ ಎನ್ಮಾಡಲಿ ಹೊಸ ಕೊಲೆ ಕೇಸೇ ಬರ್ತಾ ಇಲ್ಲ. ಎಲ್ಲಾ ಈ ತರದವೇ ಬರ್ತಾ ಇದೆ"
ಬಃ "ಈಗಿನ ಕಾಲದಾಗ ಒಬ್ಬ ಕೊಲಿ ಆದ್ರ ಹೋಗವನು ಹೋಗ್ಯಾನ. ಬೇಕಿದ್ರ ಪೋಲಿಸ್ರು ಹುಡ್ಕ್ತಾರ ಅಂತಾ ಬಿಡ್ತಾರ. ಪ್ರೈವೇಟ್ ಡಿಟೆಕ್ಟಿವ್ ಗೆ ಸಾವಿರಾರು ರೊಕ್ಕ ಕೊಟ್ಟು ಯಾಕ ಹುಡುಕಿಸ್ತಾರ? ಈಗ ಹ್ಯಾಂಗಿದ್ರೂ ಒಬ್ಬ ಬಂದ್ಯಾನ. ಅವನ್ನ ಬಿಡಬ್ಯಾಡ್ರಿ. ಅವನ ಹೆಂಡ್ತಿ ಯಾರ ಜೊತೆ ಓಡಿ ಹೋಗ್ಯಾಳ. ಎಲ್ಲಿ ಹೋಗ್ಯಾಳ. ಹೆಂಗ ಓಡಿ ಹೋಗ್ಯಾಳ ಪತ್ತೆ ಮಾಡಿ ಕೊಡೋಣಂತ."
ವಿಃ "ಆಯ್ತು ಹಾಗೇ ಮಾಡೋಣ"
ಬಃ "ಆಗಲ್ಲಂದ್ರ ಹೇಳ್ರಿ. ಅಪ್ಪ ಊರಲ್ಲಿ ಬಾರೋ ಮಗನ... ಮೂಲಂಗಿ ಬೆಳೆಯೋಣು ಅಂತಾ ಕರೀತಾ ಇದಾರ. ಅಲ್ಲಿಗ ಹೋಗಿ ಆರಾಮಾಗಿರ್ತಿನಿ. ನಾನು ನನ್ನ ಕೈನಾಗ ಮೊಬೈಲ್ ಹಿಡ್ಕಂಡಿದೀನಿ. ಅಂದ್ಕೋ ಬ್ಯಾಡ್ರಿ. ನಿಮ್ಮ ಕಾಲು ಅಂದ್ಕಳಿ. ಅವಂಗ ವಾಪಸ್ ಕಳಿಸಬ್ಯಾಡಿ."
ವಿಃ (ನಗುತ್ತ) "ಇಲ್ಲಾ ಕಣ್ರಿ, ವಾಪಸ್ ಕಳ್ಸೊಲ್ಲ. ಮದುವೆ ಅಟೆಂಡ್ ಮಾಡಿ ಮದ್ಯಾಹ್ನ ಫ್ರೀ ಇದ್ರೆ ಆಫೀಸ್ ಕಡೆ ಬನ್ನಿ. ಕೇಸ್ ತನಿಖೆ ಶುರು ಮಾಡೋಣ. ಹಾಗೆ ಮದುವೆ ಮನಿ ಇಂದ ಸ್ವೀಟ್ ಎಲ್ಲಾ ಪಾರ್ಸೆಲ್ ಕಟ್ಸ್ಕೊಂಡು ಬನ್ನಿ." ಎಂದು ತಮಾಶೆ ಮಾಡಿದ.
ಬಃ "ನಾನು ಮದುವೆಗೆ ಬಂದಿಲ್ರಿ ಸರ. ಗಣೇಶ್ ಅವರ ಮದುವೆ ಮನಿ ಅಂತಾ ಸಿನಿಮಾ ಹಾಕ್ಯಾರ. ಹೋಗೋಣು ಅಂತಾ ಮಕ್ಕಳು ಹಠ ಮಾಡಿದ್ವು. ಅದ್ಕಾ ಆ ಸಿನಿಮಾ ನೋಡೋಕ ಬಂದೀನಿ. ನೀವು ನಿಜವಾದ ಮದುವೆ ಮನಿ ಅಂದ್ಕಂಡ್ರೇನು?"
ವಿಕ್ರಂ ಗೆ ಪೆಚ್ಚಾಯ್ತು, ತಡವರಿಸುತ್ತಾ "ಇಲ್ಲಾರಿ ಸುಮ್ನೆ ತಮಾಷೆ ಮಾಡಿದೆ. ನಂತರ ಬನ್ನಿ" ಎಂದ.
ಬಃ "ನೀವು ತಮಾಷಿ ಮಾಡಿಲ್ಲಾಂತ ಗೊತ್ರಿ ಸರ. ಸರಿ ನಂತ್ರ ಬರ್ತಿನಿ. ಸಿಗೋಣು" ಎಂದು ಮೊಬೈಲ್ ಕಾಲ್ ಕಟ್ ಮಾಡಿದ ಬಸವರಾಜು.
ಈಗ ಏನು ಮಾಡುವದು ಎಂದು ಮನಸ್ಸಲ್ಲೆ ಅಂದು ಕೊೞುತ್ತಾ ವಿಕ್ರಂ ಕಾನ್ಪರೆನ್ಸ್ ರೂಂನಿಂದ ಹೊರಕ್ಕೆ ಬಂದ. ಅನಿರುದ್ಧ ಕಡೆ ನೋಡಿ ಪ್ರಯತ್ನಪೂರ್ವಕವಾಗಿ ಮುಗುಳ್ನಗೆ ಬೀರಿದ.
ಬಹುಶಃ ವಿಕ್ರಂಗೆ ಈ ಕೇಸ್ ತೆಗೆದು ಕೊೞಲಿರುವ ತಿರುವುಗಳ ಬಗ್ಗೆ ಅರಿವಿದ್ದರೆ ಈ ಕೇಸ್ ಖುಷಿಯಿಂದ ತೆಗೆದು ಕೊೞುತ್ತಿದ್ದ. ಆದರೆ ಈಗ ಬಸವಾರಾಜು ಒತ್ತಾಯ ಮಾತ್ರ ಕಾರಣವಾಗಿತ್ತು.
ನಿಷಾ ಎಲ್ಲಿಗೆ ಹೋದಳು? ಯಾಕೆ ಹೋದಳು? ಏನೀ ರಹಸ್ಯ? ಮುಂದಿನ ಭಾಗಕ್ಕಾಗಿ ಕಾದು ನೋಡಿ.
[ಮುಂದುವರೆಯುವದು]
ಸಾಲುಗಳು
- Add new comment
- 6529 views
ಅನಿಸಿಕೆಗಳು
ರಾಜೇಶ್ ಅವ್ರೆ ಹೇಗಿದ್ದೀರ?
ರಾಜೇಶ್ ಅವ್ರೆ ಹೇಗಿದ್ದೀರ?
ಏನ್ ವಿಶೇಷ?
ನಿಮ್ಮ ಕಗ್ಗಂಟು ಓದಲು ಸಮಯ ಸಿಕ್ಕಿರಲಿಲ್ಲ-ಈಗ ಎಲ್ಲ ಲಿಂಕ್ ಸಿಕ್ಕ ಕಾರಣ ಓದಿ ಪ್ರತಿಕ್ರಿಯಿಸುವೆ.
ನಿಮ್ಮ ಈ ವ್ಯಾಘ್ರ ಕಣಿವೆ--ಬರಹ ಬರುವಿಕೆಗಾಗಿ ಕಾಯ್ತಿದ್ದೆ..ಆ ಬಗ್ಗೆ ನೀವ್ ಬಹು ಹಿಂದ್ಯೇ ಹೇಳಿದ್ದಿರಲ್ಲ ಅದ್ಕೆ..
ಈಗ ಮೊದಲ ಭಾಗ ಬಂದು ಓದಿ ಮುಂದಿನ ಭಾಗಕ್ಕೆ ಕಾತುರದಿಂದ ಕಾಯ್ತಿರ್ವೆ.
ನಿಗೂಢ ರಹಸ್ಯ ಕಾದಂಬರಿ ಓದಿದ್ದು ಹಾಗೆಯೇ ಅರಣ್ಯ-ನಾರಾ ಭಕ್ಷಕ ಹುಲಿ ಕುರಿತ ಜಿಮ್ ಕಾರ್ಬೆಟ್ ಅವರ ಆಂಗ್ಲ ಬರಹದ ಕನ್ನಡ ಕಾದಂಬರಿ ಓದಿ ಮತ್ತು ಹಲವು ಸಿನೆಮಾಗಳನ್ನು ನೋಡಿ ನಿಮ್ಮ ಈ ಶೀರ್ಷಿಕೆ ಓದಿ ಕುತೂಹಲ ನೂರ್ಮಡಿ ಆಗಿದೆ..
ನೀವ್ ಒಳ್ಳೆಯ ಬರಹಗಾರರು ಹೌದು ಮಾರ್ರೆ...
ಶುಭವಾಗಲಿ..
\।/