Skip to main content

ಸುಮ್ಮನಿರಲಿಬಿಡಿ ಮನಸ್ಸು...

ಬರೆದಿದ್ದುAugust 15, 2012
7ಅನಿಸಿಕೆಗಳು

ಯಾಕೆ ಹೀಗಾಗ್ತಾ ಇದೆ? ಗೊತ್ತಿಲ್ಲ; ಯಾವ ಭಾವನೆ ಮನಸನ್ನು ಕುಟುಕುತ್ತಾ ಇದೆ? ಗೊತ್ತಿಲ್ಲ; ಕಣ್ಣಲ್ಲದೇಕೆ ಬೇಡವೆಂದರೂ 


ಜಿನುಗುವ ಕಣ್ಣೀರು? ಅರ್ಥವಾಗ್ತಾ ಇಲ್ಲ; ಮನಕ್ಕೀಗ ಯಾರ ಸಾಂತ್ವನದ ಅಗತ್ಯವಿದೆ? ಯಾರ ಎದೆಗೊರಗಲು ಭಾರವಾದ


ತಲೆ ನಿರೀಕ್ಷಿಸುತ್ತಿದೆ? ಜೋರಾಗಿ ಅತ್ತರೆ ಒಮ್ಮೆ ಸಮಾಧಾನ ಆಗಬಹುದೇ? ಧ್ಯಾನ, ಯೋಗ, ನಿದ್ರೆ, ಹಾಡು, ಓದು


ಯಾವುದಾದರೂ ಸಹಾಯವಾದೀತೇ?? ಎಲ್ಲಾ ಪ್ರಶ್ನೆಗಳಿಗೂ ಒಂದೇ ಉತ್ತರ,  "ಗೊತ್ತಿಲ್ಲ"!!!!  ಏನಾಗ್ತಾ ಇದೆ, ಏನು


ಬೇಕಿದೆ, ಯಾಕೆ ಹೀಗೆ ಎಂಬುದ್ಯಾವುದೂ ತಿಳಿಯಲಾರದಂತಾಗಿ, ಅಸಹನೀಯತೆ ಆವರಿಸಿ ತಲೆ ಚಿಟಚಿಟನೆ 


ಸಿಡಿಯಲಾರಂಭಿಸುವ ಅದೊಂದು ಘಳಿಗೆ ಹೆಚ್ಚಾಗಿ ಎಲ್ಲರ ಜೀವನದಲ್ಲೂ ಒಮ್ಮೆಯಾದರೂ ಬಂದೇ ತೀರುತ್ತದೆ.  


ಅಂತಹ ಆ ಕ್ಷಣವನ್ನು ಅದ್ಯಾವ ರೀತಿಯಲ್ಲಿ ಸ್ವಾಗತಿಸಬೇಕೋ, ಅನುಭವಿಸಬೇಕೋ, ಕಳೆದುಬಿಡಬೇಕೋ


ಗೊತ್ತಾಗೋದೇ ಇಲ್ಲ.  ಯಾವುದರಲ್ಲೂ ಮನಸಿಲ್ಲ, ಏನೂ ಬೇಕಿಲ್ಲ, ಯಾರ ಮಾತೂ, ಸಲಹೆ, ಬುದ್ಧಿವಾದಗಳೂ


ರುಚಿಸುವುದಿಲ್ಲ, ಜೀವನದ ಬಗ್ಗೆ ಧುತ್ತನೆ ಮೂಡುವ ಜಿಗುಪ್ಸೆ, ಯಾರೇ ಕೇಳಿದರೂ ಬಾಯಿ ತನಗರಿವಿಲ್ಲದೇ


ಕೊಡುವ ರೆಡಿಮೇಡ್ ಉತ್ತರ, "ನನ್ಗೆ ಮೂಡ್ ಇಲ್ಲ! ಉದಾಸೀನ (ಬೋರ್) ಆಗ್ತಾ ಇದೆ! ಥೂ ಏನೋ ಬೇಜಾರು..!


ಮನಸ್ಸಿಲ್ಲ! ಇಷ್ಟೇ ಜೀವನ! ಇತ್ಯಾದಿ.  


 


ಇದೇನು ಮನೋರೋಗವೇ? ಡಿಪ್ರೆಶನ್ ನ ಒಂದು ಹಂತವೇ? ಅದೇನೇ ಹೆಸರನ್ನು ಮನೋವೈದ್ಯರು, 


ವಿಶ್ಲೇಷಕರು, ಹಿರಿಯರು ಇದಕ್ಕೆ ನೀಡಿದರೂ, ಈ ಸ್ಥಿತಿ ಮಾತ್ರ ಎಲ್ಲರಿಗೂ ಒಂದಲ್ಲ ಒಂದು ಹಂತದಲ್ಲಿ ಕಾಟ


ಕೊಟ್ಟೇ ತೀರುತ್ತದೆ.  ಹಾಗಂತ ಇದೇನೂ ಶಾಶ್ವತವಲ್ಲ.  ಕೆಲವರಿಗೆ ಕೆಲ ಕ್ಷಣ, ಮತ್ತೂ ಕೆಲವರಿಗೆ ಕೆಲ 


ದಿನಗಳ ಕಾಲ ಅಕ್ಷರಶಃ ಮೈಕೈ ಪರಚಿಕೊಳ್ಳುವಂತೆ ಮಾಡಿ ಹೊರಟುಹೋಗುವ ಈ ಮನೋಸ್ಥಿತಿ, ಹೆಚ್ಚು ಕಾಲ


ಉಳಿದುಬಿಟ್ಟಲ್ಲಿ, "ಮಾನಸಿಕ ಅಸ್ವಸ್ಥತೆ" ಎಂಬ ಹಣೆಪಟ್ಟಿ ಅಂಟಿಸಿಬಿಡುತ್ತದೆ.  ಪ್ರೀತಿಯ ವೈಫಲ್ಯ, ಮೇಲಿಂದ


ಮೇಲೆ ಬಂದೆರಗುವ ಸೋಲುಗಳು, ನೋವುಗಳು, ಪ್ರೀತಿಪಾತ್ರರ ಅಗಲಿಕೆ, ರೋಗ ರುಜಿನಗಳು, ಹತಾಶೆ,


ನಿರಾಸೆ, ಪುರುಸೊತ್ತೇ ಇಲ್ಲದ ನಗರದ ಜೀವನ ಇತ್ಯಾದಿಗಳನ್ನೂ ಒಳಗೊಂಡಂತೆ ಕೆಲವೊಮ್ಮೆ ಏನೂ ಕಾರಣಗಳೇ


ಇಲ್ಲದೆಯೂ ನಾವೀ ಸ್ಥಿತಿಯನ್ನು ಎದುರಿಸಬೇಕಾಗುತ್ತದೆ.  


 


ನಿರೀಕ್ಷೆಗಳು ನೋಯಿಸುತ್ತವೆ, ಆದ್ದರಿಂದ ಯಾರಿಂದಲೂ ಏನನ್ನೂ ನಿರೀಕ್ಷಿಸಬೇಡಿ, ದೇವರ ಮೇಲೆ ಭಾರ ಹಾಕಿ


ಜೀವನವನ್ನೆದುರಿಸಿ, ಧ್ಯಾನ ಮಾಡಿ ಸಮಾಧಾನ ಸಿಗುತ್ತೆ, ಇತ್ಯಾದಿ ಅದೆಷ್ಟೋ ಸಲಹೆಗಳು ಕೇಳುವಾಗ ಸರಿ


ಎನಿಸಿದರೂ, ಅವನ್ನೆಲ್ಲಾ ಮಾಡಿ ನೋಡಲೂ ಬಿಡದಂತೆ ಈ ಮನೋಜಾಡ್ಯತೆ ಅಮರಿಕೊಳ್ಳುತ್ತದೆ.  ಇಡೀ ದಿನ 


ಏನೂ ಕೆಲಸ ಮಾಡದೇನೇ ಸುಮ್ಮನೇ ಮಲಗಿಯೋ, ಟಿ.ವಿ. ಚಾನಲ್ಗಳನ್ನು ಬದಲಿಸುತ್ತಲೋ ಅಥವಾ ಮೌನವಾಗಿ


ಏನೋ ಆಲೋಚಿಸುತ್ತಾ ಕಳೆದು ಬಿಡುವವರನ್ನು ಸೋಂಬೇರಿ, ಕೆಲಸಕ್ಕೆ ಬಾರದವ ಎಂದೆಲ್ಲಾ ಕರೆದರೂ,


ಅವರು ನಿಜವಾಗ್ಯೂ ಸೋಂಬೇರಿಗಳಾಗಿರುವುದಿಲ್ಲ, ಯಾಕೆಂದ್ರೆ ಬಹಳಕಾಲ ಅಥವಾ ಜೀವನವಿಡೀ ಅವರು ಹಾಗೆ


ಸಮಯ ವ್ಯರ್ಥ ಮಾಡಿರುವುದಿಲ್ಲ/ಮಾಡುವುದಿಲ್ಲ.  ಹಾಗಾದ್ರೆ ಈ ಜಡತೆಯಿಂದ ಹೊರಬರುವುದಾದರೂ ಹೇಗೆ


ಅಂತೀರಾ?? ಕೆಲವೊಮ್ಮೆ ಸಣ್ಣ-ಪುಟ್ಟ ವಿಷಯಗಳೂ ಕೂಡ ಮನಸ್ಸು ಚೇತರಿಸಿಕೊಳ್ಳಲು ಸಹಾಯ ಮಾಡುತ್ತವೆ.


ನೀರವ ಕತ್ತಲಲ್ಲಿ ಕುಳಿತು ಮನಃಪೂರ್ತಿ ಅತ್ತು ಮುಗಿಸಿದ ಮೇಲೆ ಕೆಲವರಿಗೆ ಹಿತವೆನಿಸಬಹುದು.  ಇನ್ನೂ 


ಕೆಲವರಿಗೆ ಸ್ವಲ್ಪ ಸಮಯ ಆಪ್ತರೆನಿಸಿದವರೊಡನೆ ಕಳೆದರೂ ಹಗುರವೆನಿಸಬಹುದು.  ಬಿಸಿ ಅಥವಾ ತಣ್ಣೀರ ಸ್ನಾನ, 


ದೇವಸ್ಥಾನಕ್ಕೆ ಒಂದು ಪುಟ್ಟ ಭೇಟಿ, ಮನಸಿಗೆ ಆಪ್ತವಾದ ಗಜಲ್ಗಳೋ ಅಥವಾ ಭಾವಗೀತೆಗಳೋ ಮನಸಿನ


ಜಡತೆಯನ್ನು ಹೋಗಲಾಡಿಸಬಲ್ಲವು.  ಮನಸಿಗೆ ಅನಿಸಿದ್ದನ್ನೆಲ್ಲಾ ಬರೆಯುವ ಮೂಲಕವೋ ಅಥವಾ ಸಂಗೀತಗಾರರಾದರೆ


ತಮಗಿಷ್ಟವಾದ ಹಾಡುಗಳನ್ನು ಹಾಡಿಕೊಳ್ಳುವುದರ ಮೂಲಕವೋ ಗಮನವನ್ನು ಬೇರೆಡೆಗೆ ಹರಿಸಬಹುದು.  ದೀರ್ಘ


ಉಸಿರಾಟ ಕೂಡ ಸಹಾಯಕಾರಿ.  ನಗು, ಮಕ್ಕಳೊಡನೆ ಬೆರೆಯುವುದು, ಮುದ್ದಿನ ಸಾಕುಪ್ರಾಣಿಗಳೊಡನೆ ಅಥವಾ


ಪ್ರಕೃತಿಯ ಮಧ್ಯೆ ಕೊಂಚ ಸಮಯ ಕಳೆಯುವುದೂ ಕೂಡ ಪರಿಣಾಮಕಾರಿ.


 


ಆದರೂ ಮನಸಿನ್ನೂ ಸರಿಯಾಗಿಲ್ಲ ಅನಿಸ್ತಾ ಇದ್ಯಾ?? ಹಾಗಾದ್ರೆ, ಸುಮ್ಮನೇ ಇದ್ದುಬಿಡಿ.. ಕಾರಣವಿಲ್ಲದೇ ಜಡತ್ವ 


ಹೊದ್ದುಕೊಳ್ಳುವ ಮನಸ್ಸು ಕಾರಣವಿಲ್ಲದೇ ಅದರಿಂದ ಹೊರಬರಲೂಬಹುದು ಅಲ್ವೇ? ಆದ್ರೆ, ದಯವಿಟ್ಟು


 "ಛೇ ಸುಮ್ನೆ ಸಮಯ ವ್ಯರ್ಥ ಮಾಡಿದ್ನಲ್ಲ"   ಅಂತಲೋ ಅಥವಾ "ಏನೇನು ಕೆಲಸ ಮಾಡಬಗಹುದಾಗಿತ್ತು, 


ಏನಾಗಿತ್ತು ಈ ದರಿದ್ರ ಮನಸಿಗೆ.."  ಅಂತಲೋ ಕೊರಗಬೇಡಿ, ಬೈದುಕೊಳ್ಳಬೇಡಿ.  ಪ್ರತೀ ಕ್ಷಣವೂ ಚಿಂತಿಸುವ,


ನಿಮಗೆ ಕೆಲಸ ಮಾಡಲು ನೆರವಾಗುವ, ಭಾವನೆಗಳ ಸಂಘರ್ಷವನ್ನು ಸಹಿಸಿಕೊಳ್ಳುವ, ನಿಮ್ಮನ್ನು 


ಪ್ರತಿಬಿಂಬಿಸುವ ನಿಮ್ಮ "ಮನಸ್ಸು" ಅದಕ್ಕೆ ಬೇಕಾದಂತೆ ಒಂದೆರಡು ಘಂಟೆ ಅಥವಾ ಒಂದೆರಡು ದಿನಗಳನ್ನು


ಕಳೆದರೆ, ನೀವು ಕಳೆದುಕೊಳ್ಳುವಂಥಾದ್ದೇನೂ ಇಲ್ಲ.  ಸುಸ್ತಾದ ಮನಸ್ಸಿಗೂ, ಮೌನ, ವಿಶ್ರಾಂತಿ ಬೇಕು ಅಲ್ವೇ???


ಅದನ್ನ ನೀವು ಧ್ಯಾನ, ನಿದ್ರೆ ಮುಂತಾದವುಗಳ ಮೂಲಕ ನೀಡಿದರೂ, ಅದು ನಿಮ್ಮ ಯೋಚನಾ ಧಾಟಿ, 


ಪರಿಹಾರ ಮಾರ್ಗ.  ಮನಸಿಗೇನು ಬೇಕೋ ಅದನ್ನು ಅದು ಬೇಕಾದಾಗ ಈ  ರೀತಿಯಾಗ್ಯೂ ಪಡೆದುಕೊಳ್ಳುತ್ತೆ.


ನಮ್ಮೊಳಗಿನ ಮನಸಿನದು ಬೇರೆಯದೇ ಪ್ರಪಂಚ, ಅದರ ಕೆಲಸ ಮತ್ತು ವಿಶ್ರಾಂತಿಯ ಧಾಟಿಯೇ ಬೇರೆ!!! 


ಸುಮ್ಮನಾದ, ಸೋಂಬೇರಿ ಶುಂಠಿಯಂತಾಡುವ ಮನವನ್ನೊಮ್ಮೆ ಒಪ್ಪಿಕೊಂಡು, ಸುಮ್ಮನಿದ್ದು ನೋಡಿ.  


ನಂತರದ ಚೇತರಿಕೆ ನಿಮ್ಮೊಳಗೊಂದು ಹೊಸತನವನ್ನು ಮೂಡಿಸಿರುತ್ತದೆ!! "ಆಗೋದೆಲ್ಲಾ ಒಳ್ಳೇದಕ್ಕೆ"


ಅಂತ ಮುಗುಳ್ನಗುತ್ತದೆ ನಿಮ್ಮ ಮುದ್ದು ಮನಸ್ಸು. 


 

ಲೇಖಕರು

Jyothi Subrahmanya

ನೆನಪಿನ ನವಿಲುಗರಿ

ಭಾವನಾ ಜೀವಿ, ಚಿಕ್ಕ ಪುಟ್ಟ ಕನಸು ಕಾಣೋದು ಅಂದ್ರೆ ಇಷ್ಟ. ಮಳೆ, ಇಬ್ಬನಿ, ಹಸಿರು, ಆಕಾಶ, ನಕ್ಷತ್ರ, ರಾತ್ರಿ, ಇವೆಲ್ಲಾ ತುಂಬಾ ಇಷ್ಟ. ನನ್ನ ಬಗ್ಗೆ ಇನ್ನು ಜಾಸ್ತಿ ತಿಳ್ಕೊಳ್ಳೋಕೆ ನನ್ನ ಸ್ನೇಹಿತರಾಗಿ. ನಿಮಗೇ ತಿಳಿಯುತ್ತೆ. ;)

ಅನಿಸಿಕೆಗಳು

Vikram.K.B ಶುಕ್ರ, 08/17/2012 - 12:21

ಚೋಲೋ ಅದ ನಿಮ್ಮ ಈ ಕಥನ

Jyothi Subrahmanya ಶುಕ್ರ, 08/17/2012 - 12:57

ಧನ್ಯವಾದಗಳು ವಿಕ್ರಮ್

Jyothi Subrahmanya ಶುಕ್ರ, 08/17/2012 - 12:58

ಧನ್ಯವಾದಗಳು ವಿಕ್ರಮ್...

N. Rao (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 08/31/2012 - 15:58

ಓದುತ್ತಾ  ಓದುತ್ತಾ  ಏನು ಓದಿದನು ಎಂಬುದನ್ನೇ ಮರೆಯುತ್ತಾ ಹೋದೆ. ಮನಸ್ಸು ಸಾಕು ಸಾಕು ಎಂದರು ಬಿಡದೆ ಓದುತ್ತಾ ಹೋದೆ. ಒಂದುಕಡೆ ಪ್ರಶ್ನೆಯನ್ನು ಕೇಳಿ ಮತ್ತೊಂದು ಕಡೆ ಉತ್ತರವನ್ನು ಹೇಳುತ್ತಾ ಹೋದ ರೀತಿ ಇಷ್ಟ ವಾಯಿತು. ಮನಸ್ಸಿಗೆ ಸ್ವಲ್ಪ ಸುಮ್ಮನಿರು ಎಂದು ಹೇಳಿ ಇದನ್ನು ಬರೆದೆ. 

Jyothi Subrahmanya ಭಾನು, 09/02/2012 - 11:51

ಧನ್ಯವಾದಗಳು ರಾವ್ ಅವರೇ..ಓದುತ್ತಾ ಓದುತ್ತಾ ಏನು ಓದಿದಿರೆಂಬುದನ್ನೇ ಮರೆತಿರೆಂದರೆ

ಲೇಖನ ಬಹಳ ದೀರ್ಘವಾಗಿದ್ದಿದ್ದರಿಂದಲೋ ಅಥವಾ ಸಾಕು ಸಾಕು ಎಂದು ನಿಮ್ಮ ಮನಸ್ಸು

ಎಚ್ಚರಿಸಿದ ಬಳಿಕವೂ ಹಠದಿಂದ ಪೂರ್ತಿ ಓದಿ ಮುಗಿಸಿದುದರಿಂದಲೋ??? 

Dhananjay ಶನಿ, 11/10/2012 - 06:29

ಒಟ್ಟಾರೆ, ಮನಸ್ಸನ್ನ ಪ್ರೀತಿಸುವ ರೀತಿಯನ್ನ ತಿಳಿಸಿಕೊಟ್ಟಿದ್ದೀರ.............


ತನಗರಿವಿಲ್ಲದೇ ತನ್ನೊಳಗೆ,  ತನ್ನನೇ, ತಾ ಹುಡುಕಲು ಹೊರಟ ಮನಸ್ಸಿನ ಸ್ಥಿತಿಯನ್ನ ವರ್ಣಿಸಿದ್ದೀರ......

 

ನಿಜ ಅದಕೊಂದು ಕ್ಷಣಬೇಕು, ಆ ಕ್ಷಣದಲ್ಲಿ ಅದಕೆ ಅದರೊಂದಿಗೆ ಸುಮ್ಮನೆ ಜೊತೆಗಿರುವ ನಮ್ಮತನ ಬೇಕು...........

 

ಚನ್ನಾಗಿ ಬರೆದಿದ್ದೀರಿ..... ಧನ್ಯವಾದಗಳು ನಿಮ್ಮ ಈ ಲೇಖನಕ್ಕೆ.....................  LaughingWink

Jyothi Subrahmanya ಶನಿ, 01/12/2013 - 12:18

ಧನ್ಯವಾದಗಳು ಧನಂಜಯ್ ನಿಮ್ಮ ಅನಿಸಿಕೆಗೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.